ರಾಮರಕ್ಷಾ ಸ್ತೋತ್ರದ ಕಾವ್ಯಸೌಂದರ್ಯ

ಸಾಂಪ್ರದಾಯಕ ರಕ್ಷಾಸ್ತೋತ್ರಗಳಲ್ಲಿ ‘ರಾಮರಕ್ಷಾ ಸ್ತೋತ್ರ’ವು ಅನೇಕ ಭಕ್ತರು ಪಠಿಸುತ್ತಿರುವ ಮಹತ್ವದ ಸ್ತೋತ್ರವಾಗಿದೆ. ಬುಧಕೌಶಿಕ ಋಷಿಗಳು ಈ ಸ್ತೋತ್ರದ ದೃಷ್ಟಾರರು. (ತನ್ನ ಕನಸಿನಲ್ಲಿ ಭಗವಾನ್ ಶಂಕರನು ತನಗೆ ಈ ಸ್ತೋತ್ರವನ್ನು ನೀಡಿದನು ಎಂದು ಬುಧಕೌಶಿಕ ಋಷಿಗಳು ಹೇಳಿದ್ದಾರೆ.) ಅವರ ಈ ರಚನೆಯಲ್ಲಿಯ ಮುಖ್ಯ ಭಾಗವನ್ನು, ಸಾಹಿತ್ಯದ ದೃಷ್ಟಿಯಿಂದ ಗಮನಿಸೋಣ. ಆ ಭಾಗ ಹೀಗಿದೆ:

ಶಿರೋಮೇ ರಾಘವಃ ಪಾತು ಭಾಲಂ ದಶರಥಾತ್ಮಜಃ
ಕೌಸಲ್ಯೇಯೋ ದೃಶೌ ಪಾತು ವಿಶ್ವಾಮಿತ್ರಪ್ರಿಯ: ಶ್ರುತಿ:
ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ
ಜಿಹ್ವಾ ವಿದ್ಯಾನಿಧಿಃ ಪಾತು ಕಂಠಂ ಭರತವಂದಿತಃ
ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶಕಾರ್ಮುಕ:
ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್
ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ
ಸುಗ್ರೀವೇಶಃ ಕಟೀ ಪಾತು ಸಕ್ಥಿನೀ ಹನುಮತ್ಪ್ರಭುಃ
ಉರೂ ರಘೂತ್ತಮಃ ಪಾತು ರಕ್ಷಃಕುಲವಿನಾಶಕೃತ್
ಜಾನುನೀ ಸೇತುಕೃತ್ಪಾತು ಜಂಘೇ ದಶಮುಖಾಂತಕ:
ಪಾದೌ ವಿಭೀಷಣಶ್ರೀದಃ ಪಾತು ರಾಮೋsಖಿಲಂ ವಪು:
          
ಈ ಸ್ತೋತ್ರದಲ್ಲಿ ತನ್ನ ಶರೀರದ ವಿವಿಧ ಬಾಗಗಳನ್ನು ಶ್ರೀ ರಾಮಚಂದ್ರನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ. ಮೊದಲಿಗೆ ಪ್ರಾರಂಭವಾಗುವದು ಶಿರಸ್ಸು, ತನ್ನಂತರ ಹಣೆ, ಕಣ್ಣುಗಳು, ಕಿವಿಗಳು. ಇದೇ ರೀತಿಯಾಗಿ ಪಾದಗಳವರೆಗೆ ಈ ಪ್ರಾರ್ಥನೆ ಸಾಗಿದೆ. ಅನೇಕ ಸಂಸ್ಕೃತ ಶ್ಲೋಕಗಳಲ್ಲಿ ಈ ತರಹದ ‘ಮುಡಿಯಿಂದ ಅಡಿಯವರೆಗೆ’ ಅಥವಾ ‘ಅಡಿಯಿಂದ ಮುಡಿಯವರೆಗಿನ’ ಕ್ರಮಬದ್ಧ ವರ್ಣನೆ ಇದ್ದೇ ಇರುತ್ತದೆ. ಬುಧಕೌಶಿಕ ಋಷಿಗಳೂ ಸಹ ಅದನ್ನೇ ಮಾಡಿದ್ದಾರೆ.                                                                    
ಈ ಪ್ರಾರ್ಥನಾಶ್ಲೋಕದ ಹೆಚ್ಚುಗಾರಿಕೆಯಿರುವದು ರಾಮಚಂದ್ರನನ್ನು ಬಣ್ಣಿಸುವ ವಿಶೇಷಣಗಳಲ್ಲಿ.  ಮೇಲಿನ ಶ್ಲೋಕದ ಸಾಲುಗಳನ್ನು ಒಂದೊಂದಾಗಿ ಪರಿಶೀಲಿಸೋಣ:

ಶಿರೋಮೇ ರಾಘವಃ ಪಾತು
(=ರಾಘವನು ನನ್ನ ಶಿರಸ್ಸನ್ನು ರಕ್ಷಿಸಲಿ.)
ರಘು ಎನ್ನುವ ರಾಜನು ರಾಮಚಂದ್ರನ ವಂಶದ ಮೂಲಪುರುಷರಲ್ಲಿ ಹೆಸರಾದವನು. ರಘುವಿನ ನಂತರದವರೆಲ್ಲರೂ ರಾಘವರು. ಆದುದರಿಂದ ರಾಮಚಂದ್ರನನ್ನು ‘ರಾಘವ’ ಎನ್ನಲಾಗಿದೆ.
ಈ ರೀತಿಯಾಗಿ ರಘುವಂಶದ ಮೂಲಪುರುಷನನ್ನು ಇಲ್ಲಿ ಮೊದಲು ಸ್ಮರಿಸಲಾಗಿದೆ. ಆ ಮೂಲಕ ರಾಮಚಂದ್ರನ identityಯನ್ನು ಗುರುತಿಸಲಾಗಿದೆ.

ಭಾಲಂ ದಶರಥಾತ್ಮಜಃ
(=ದಶರಥನ ಪುತ್ರನು ನನ್ನ ಹಣೆಯನ್ನು ರಕ್ಷಿಸಲಿ.)
ನಂತರದ ಸ್ಮರಣೆ ರಾಮಚಂದ್ರನ ಜನಕನಾದ ದಶರಥನದು. ವಂಶವನ್ನು ಹೇಳಿದ ನಂತರ ರಾಮಚಂದ್ರನ ತಂದೆಯ ಹೆಸರನ್ನು ಹೇಳಲಾಗಿದೆ ಆದುದರಿಂದ ಶ್ರೀರಾಮಚಂದ್ರನನ್ನು ಇಲ್ಲಿ ಮೊದಲು ರಾಘವ ಹಾಗು ನಂತರ ದಶರಥಾತ್ಮಜ ಎಂದು ವರ್ಣಿಸಲಾಗಿದೆ.

ಕೌಸಲ್ಯೇಯೋ ದೃಶೌ ಪಾತು
(=ಕೌಸಲ್ಯೆಯ ಕುಮಾರನು ನನ್ನ ಕಣ್ಣುಗಳನ್ನು ರಕ್ಷಿಸಲಿ)
 ತಂದೆಯ ನಂತರ ಬರುವವಳು ತಾಯಿ.
ಉಪನಿಷತ್ತುಗಳಲ್ಲಿ ‘ಮಾತೃದೇವೋ ಭವ’ ಎಂದು ಹೇಳಿದ ಬಳಿಕವೇ ‘ಪಿತೃದೇವೋ ಭವ’ ಹಾಗು ‘ಆಚಾರ್ಯದೇವೋ ಭವ ’ ಎಂದು ಹೇಳಲಾಗಿದೆ. ಆದರೆ ಓರ್ವ ವ್ಯಕ್ತಿಯನ್ನು ಆತನ ವಂಶ ಹಾಗು ತಂದೆಯ ಮೂಲಕವೇ ಗುರುತಿಸಲಾಗುವದರಿಂದ ಇಲ್ಲಿ ರಘು ಹಾಗು ದಶರಥರನ್ನು ಮೊದಲು ಸ್ಮರಿಸಲಾಗಿದೆ. ಆಬಳಿಕ ತಾಯಿಯನ್ನು ಸ್ಮರಿಸಲಾಗಿದೆ.

ವಿಶ್ವಾಮಿತ್ರಪ್ರಿಯ: ಶ್ರುತಿ:
(=ವಿಶ್ವಾಮಿತ್ರನ ಪ್ರಿಯ ಶಿಷ್ಯನು ನನ್ನ ಕಿವಿಗಳನ್ನು ರಕ್ಷಿಸಲಿ.)
‘ಮಾತೃದೇವೋ ಭವ ಹಾಗು ಪಿತೃದೇವೋಭವ’ದ ಬಳಿಕ ‘ಆಚಾರ್ಯದೇವೋಭವ’. ಆದುದರಿಂದ ಈಗ ರಾಮಚಂದ್ರನ ಗುರುವಾದ ವಿಶ್ವಾಮಿತ್ರರನ್ನು ನೆನಸಲಾಗಿದೆ. ಅಲ್ಲದೆ, ಓರ್ವ ವ್ಯಕ್ತಿಯನ್ನು ಆತನ ಗುರುಕುಲದ ಮೂಲಕವೂ ಗುರುತಿಸಲಾಗುತ್ತಿತ್ತು. ಈ ಕಾರಣಗಳಿಗಾಗಿ ಇಲ್ಲಿ ರಾಮಚಂದ್ರನ ಗುರುವಾದ ವಿಶ್ವಾಮಿತ್ರರ ಉಲ್ಲೇಖ ಬಂದಿದೆ.

ಪುರಾಣಕಾಲದಲ್ಲಿ ವಿದ್ಯಾಭ್ಯಾಸವು ಶ್ರುತಿಯ ಮೂಲಕ ಅಂದರೆ ಕೇಳುವದರ ಮೂಲಕವೇ ಆಗುತ್ತಿತ್ತು. ಆದುದರಿಂದಲೇ ವೇದಗಳಿಗೆ ‘ಶ್ರುತಿಗಳು’ ಎನ್ನುತ್ತಾರೆ. ‘ವಿಶ್ವಾಮಿತ್ರರಿಂದ ಶ್ರುತಿಜ್ಞಾನ ಪಡೆದ ಶಿಷ್ಯನು ನನ್ನ ‘ಶ್ರುತಿ’ಗಳನ್ನು ಅಂದರೆ ಕಿವಿಗಳನ್ನು ರಕ್ಷಿಸಲಿ’ ಎಂದು ಪ್ರಾರ್ಥಿಸಲಾಗಿದೆ.

ಘ್ರಾಣಂ ಪಾತು ಮಖತ್ರಾತಾ
(=ಯಜ್ಞರಕ್ಷಕನು ನನ್ನ ನಾಸಿಕವನ್ನು ರಕ್ಷಿಸಲಿ)
ಮಖತ್ರಾತಾ ಅಂದರೆ ಯಜ್ಞರಕ್ಷಕ. ವಿಶ್ವಾಮಿತ್ರನು ತನ್ನ ಪ್ರಿಯಶಿಷ್ಯನನ್ನು ಯಾವ ಕಾರ್ಯಕ್ಕಾಗಿ ಆಯೋಜಿಸಿದ್ದನು ಎನ್ನುವದನ್ನು ಈಗ ತಿಳಿಯಬೇಕಲ್ಲವೆ? ರಾಕ್ಷಸರ ಉಪಟಳದಿಂದ ಯಜ್ಞಗಳನ್ನುರಕ್ಷಿಸುವದೇ ವಿಶ್ವಾಮಿತ್ರನು ರಾಮಚಂದ್ರನಿಗೆ ವಹಿಸಿದ  ಮಹತ್ಕಾರ್ಯವಾಗಿತ್ತು.

ಮುಖಂ ಸೌಮಿತ್ರಿವತ್ಸಲಃ
(=ಮುಖವನ್ನು ಸುಮಿತ್ರೆಯ ಮಗನಾದ ಲಕ್ಷ್ಮಣನು ರಕ್ಷಿಸಲಿ.)
ಈ ಕಾರ್ಯದಲ್ಲಿ ಶ್ರೀರಾಮಚಂದ್ರನಿಗೆ ನೆರವಾಗಿ ನಿಂತವನು ಸುಮಿತ್ರೆಯ ಮಗನಾದ ಲಕ್ಷ್ಮಣ. ಲಕ್ಷ್ಮಣನು ರಾಮಚಂದ್ರನ ಮೊದಲನೆಯ ತಮ್ಮ ಹಾಗು ಸತತ ಸಹಚರ.
ಲಕ್ಷ್ಮಣನನ್ನು ‘ಸೌಮಿತ್ರಿವತ್ಸಲಃ’ ಎಂದು ಕರೆಯುವ ಮೂಲಕ ರಾಮಚಂದ್ರನಿಗೆ ಎರಡನೆಯ ತಾಯಿಯಾದ ಸುಮಿತ್ರೆಯನ್ನೂ ಸಹ ಇಲ್ಲಿ ನೆನಸಲಾಗಿದೆ.

ಜಿಹ್ವಾ ವಿದ್ಯಾನಿಧಿಃ ಪಾತು
(=ನಾಲಿಗೆಯನ್ನು ವಿದ್ಯೆಗಳ ನಿಧಿಯಾದವನು ರಕ್ಷಿಸಲಿ)
ವಿಶ್ವಾಮಿತ್ರನು ತನ್ನ ಪ್ರಿಯಶಿಷ್ಯ ರಾಮಚಂದ್ರನಿಗೆ ಶಸ್ತ್ರವಿದ್ಯೆಯನ್ನಲ್ಲದೇ ಶಾಸ್ತ್ರವಿದ್ಯೆಯನ್ನೂ ಧಾರೆ ಎರೆದಿದ್ದನು. ಶಸ್ತ್ರಗಳು ಹಸ್ತದಲ್ಲಿದ್ದರೆ, ಶಾಸ್ತ್ರವಿದ್ಯೆಯು ನಾಲಿಗೆಯ ಮೇಲೆ ಇರುತ್ತದೆ. ಏಕೆಂದರೆ ನಾಲಿಗೆಯು ವಿದ್ಯಾಧಿದೇವತೆಯಾದ ಸರಸ್ವತಿಯ ಆವಾಸಸ್ಥಾನವಾಗಿದೆ. ಆದುದರಿಂದ ನಾಲಿಗೆಯನ್ನು ರಕ್ಷಿಸಬೇಕಾದವನು ವಿದ್ಯಾನಿಧಿಯಾದ ಶ್ರೀರಾಮಚಂದ್ರನು.

ಕಂಠಂ ಭರತವಂದಿತಃ
(=ಭರತನಿಂದ ವಂದಿತನಾದವನು ಕಂಠವನ್ನು ರಕ್ಷಿಸಲಿ.)
ಸೋದರವತ್ಸಲನಾದ ರಾಮಚಂದ್ರನಿಗೆ ಭರತನೂ ಸಹ ಪ್ರಿಯನಾದ ತಮ್ಮನೇ. ಈ ಭರತನು ರಾಮಚಂದ್ರನಿಗೆ ಸಿಂಹಾಸನವನ್ನು ಮರಳಿ ಒಪ್ಪಿಸಲು ಬಂದು ಅವನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತವನು. ಆದುದರಿಂದ ರಾಮಚಂದ್ರನು ಭರತವಂದಿತನು. ಇಲ್ಲಿ ಇರುವ ಇನ್ನೊಂದು ವಿಶೇಷವೆಂದರೆ ಕೌಸಲ್ಯೆ ಹಾಗು ಸುಮಿತ್ರೆಯರನ್ನು ನೆನಸಿದ ಮೇಲೆ, ಕೈಕೇಯಿಯನ್ನೂ ಸಹ ನೆನಸುವದು ಕ್ರಮಪ್ರಾಪ್ತವಾಗಿದೆ. ಅಲ್ಲದೆ ಶ್ರೀರಾಮಚಂದ್ರನಿಗೆ ತನ್ನ ಮೂವರೂ ತಾಯಂದಿರ ಮೇಲೆ ಸಮಾನವಾದ ಗೌರವವು ಇದ್ದಿತೆನ್ನುವದನ್ನು ಇದು ಸೂಚಿಸುತ್ತದೆ.

ಮನುಷ್ಯಶರೀರದಲ್ಲಿ ಮೂರು ಭಾಗಗಳನ್ನು ಮಾಡಬಹುದು. ಮೊದಲನೆಯ ಭಾಗ ಮುಖ. ಎರಡನೆಯ ಭಾಗವು ಮುಖದಿಂದ ಟೊಂಕದವರೆಗಿನ ಭಾಗ. ಮೂರನೆಯದು ಟೊಂಕದಿಂದ ಪಾದಗಳವರೆಗಿನ ಭಾಗ. ಮುಖಭಾಗದ ರಕ್ಷಣಾಸ್ತೋತ್ರದ ನಂತರ, ಇನ್ನು ಎರಡನೆಯ ಶರೀರಭಾಗ ಪ್ರಾರಂಭವಾಗುತ್ತದೆ.

ಸ್ಕಂಧೌ ದಿವ್ಯಾಯುಧಃ ಪಾತು
(=ದಿವ್ಯಾಯುಧಗಳನ್ನು ಧರಿಸಿದವನು ಹೆಗಲುಗಳನ್ನು ರಕ್ಷಿಸಲಿ)
ಗುರುಗಳಾದ ವಿಶ್ವಾಮಿತ್ರರಿಂದ ಪ್ರಾಪ್ತವಾದ ದಿವ್ಯ ಆಯುಧಗಳನ್ನು ರಾಮಚಂದ್ರನು ಹೆಗಲ ಮೇಲೆ ಧರಿಸಿರುವದರಿಂದ
ಹೆಗಲುಗಳನ್ನು ರಕ್ಷಿಸುವದು ಅಂಥವನ ಹೊಣೆಯೇ ಆಗಿದೆ.

ಭುಜೌ ಭಗ್ನೇಶಕಾರ್ಮುಕ:
(=ಶಿವಧನುಸ್ಸನ್ನು ಮುರಿದವನು ತೋಳುಗಳನ್ನು ರಕ್ಷಿಸಲಿ.)
ಶಿವಧನುಸ್ಸನ್ನು ಮುರಿದವನು ಭುಜಗಳನ್ನು ರಕ್ಷಿಸಲಿ ಎಂದು ಕೋರುವ ಮೂಲಕ ಅನೇಕ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ. ಮೊದಲನೆಯದು ಶ್ರೀರಾಮಚಂದ್ರನ ಬಾಹುಬಲ ಹಾಗು ರಕ್ಷಣಾಸಾಮರ್ಥ್ಯ. ಎರಡನೆಯದಾಗಿ ಶಿವಧನುಸ್ಸನ್ನು ಎತ್ತುವದೇ ಶ್ರೀರಾಮಚಂದ್ರನ ವಿವಾಹಕ್ಕೆ ಕಾರಣವಾಯಿತು. ಈ ರೀತಿಯಾಗಿ ಸೀತಾದೇವಿಯನ್ನು ನೆನಸಲು ಇಲ್ಲಿ ಪೂರ್ವಪೀಠಿಕೆಯನ್ನು ಹಾಕಲಾಗಿದೆ. ಮುಂದಿನ ಸಾಲಿನಲ್ಲಿ ಸೀತಾದೇವಿಯನ್ನು ನೆನಸಲಾಗಿದೆ.

ಕರೌ ಸೀತಾಪತಿಃ ಪಾತು
(=ಸೀತಾಪತಿಯು ಕರಗಳನ್ನು ರಕ್ಷಿಸಲಿ)
ಸೀತಾದೇವಿಯ ಪಾಣಿಗ್ರಹಣ ಮಾಡಿದವನೇ ನಮ್ಮ ಪಾಣಿಗಳನ್ನು ರಕ್ಷಿಸಬೇಕಲ್ಲವೆ?
ಇಲ್ಲಿಯವರೆಗಿನ ವರ್ಣನೆಯಲ್ಲಿ ರಾಮಚಂದ್ರನ ಆಪ್ತರನ್ನು ನೆನಸಲಾಯಿತು.
ಇನ್ನು ಮುಂದೆ ರಾಮಚಂದ್ರನ ವಿಜಯಯಾತ್ರೆ ಪ್ರಾರಂಭವಾಗುತ್ತದೆ.

ಹೃದಯಂ ಜಾಮದಗ್ನ್ಯಜಿತ್
(=ಪರಶುರಾಮನನ್ನು ಸೋಲಿಸಿದವನು ಹೃದಯಭಾಗವನ್ನು ರಕ್ಷಿಸಲಿ.)
ರಾಮಚಂದ್ರನು ಸೀತೆಯನ್ನು ಮದುವೆಯಾಗಿ ಅಯೋಧ್ಯೆಗೆ ಮರಳುವಾಗ, ದಾರಿಯಲ್ಲಿ ಜಮದಗ್ನಿಯ ಮಗನಾದ ಪರಶುರಾಮನ ಜೊತೆಗೆ ಕಾದಾಡಿ, ಅವನನ್ನು ಸೋಲಿಸುತ್ತಾನೆ. ಆದುದರಿಂದ  ಆ ಘಟನೆಯನ್ನು ‘ಹೃದಯಂ ಜಾಮದಗ್ನ್ಯಜಿತ್’ ಎಂದು ಸ್ಮರಿಸಲಾಗಿದೆ.

ಮಧ್ಯಂ ಪಾತು ಖರಧ್ವಂಸೀ
(=ಖರ ರಾಕ್ಷಸನನ್ನು ಕೊಂದವನು ಮಧ್ಯಭಾಗವನ್ನು ರಕ್ಷಿಸಲಿ)
ವನವಾಸದಲ್ಲಿದ್ದಾಗ ಶ್ರೀರಾಮಚಂದ್ರನು ಶೂರ್ಪನಖಾ ಪ್ರಸಂಗದಿಂದಾಗಿ ಖರ ಎನ್ನುವ ರಾಕ್ಷಸನನ್ನು ಸಂಹರಿಸಿದನು. ಇದು ಸೀತಾಪಹರಣಕ್ಕೆ ಹಾಗು ರಾವಣಸಂಹಾರಕ್ಕೆ ಕಾರಣವಾಯಿತು.

ನಾಭಿಂ ಜಾಂಬವದಾಶ್ರಯಃ
(=ಜಾಂಬುವಂತನಿಗೆ ಆಶ್ರಯನಿತ್ತವನು ಹೊಕ್ಕಳುಭಾಗವನ್ನು ರಕ್ಷಿಸಲಿ.)
ರಾಕ್ಷಸಸಂಹಾರದ ಜೊತೆಗೇ, ರಾಮಚಂದ್ರನು ಶರಣಾಗತರಿಗೆ ರಕ್ಷಣೆಯನ್ನೂ ಇತ್ತನು. ಆದುದರಿಂದ ಇಲ್ಲಿ ಜಾಂಬುವಂತನನ್ನು ನೆನಸಲಾಗಿದೆ.

ಸುಗ್ರೀವೇಶಃ ಕಟೀ ಪಾತು
(=ಸುಗ್ರೀವನಿಗೆ ಒಡೆಯನಾದವನು ಟೊಂಕವನ್ನು ರಕ್ಷಿಸಲಿ)
ರಾಮಚಂದ್ರನು ವಾಲಿಯನ್ನು ಸಂಹರಿಸಿದ ಬಳಿಕ ಸುಗ್ರೀವನು ಪಟ್ಟಾಭಿಷಿಕ್ತನಾಗುತ್ತಾನೆ. ರಾಮಚಂದ್ರನು ಸುಗ್ರೀವನನ್ನು ಮಿತ್ರ ಎಂದೇ ಕರೆಯುತ್ತಿದ್ದರೂ ಸಹ, ರಾಮಚಂದ್ರನ ಅನುಗ್ರಹದ ಕಾರಣದಿಂದಾಗಿ ಸುಗ್ರೀವನು ಆತನನ್ನು ತನ್ನ ಒಡೆಯ ಎಂದೇ ಭಾವಿಸಿರುತ್ತಾನೆ.

ಸಕ್ಥಿನೀ ಹನುಮತ್ಪ್ರಭುಃ
(=ಹನುಮಂತನ ಪ್ರಭುವು ಬಸ್ತಿಯನ್ನು ರಕ್ಷಿಸಲಿ.)
ಸುಗ್ರೀವನ ನಂತರ ಅವನ ಅನುಚರನಾದ ಹನುಮಂತನನ್ನು ಇಲ್ಲಿ ಸ್ಮರಿಸಲಾಗಿದೆ.

ಶರೀರದ ಮೂರನೆಯ ಭಾಗದ ರಕ್ಷಣಾಸ್ತೋತ್ರವು ಇನ್ನು ಪ್ರಾರಂಭವಾಗುತ್ತದೆ:
ಉರೂ ರಘೂತ್ತಮಃ ಪಾತು ರಕ್ಷಃಕುಲವಿನಾಶಕೃತ್
(=ರಾಕ್ಷಸಕುಲಸಂಹಾರಕನಾದವನು ಹಾಗು ರಘುವಂಶದಲ್ಲಿ ಶ್ರೇಷ್ಠನಾದವನು ತೊಡೆಗಳನ್ನು ರಕ್ಷಿಸಲಿ.)
ತೊಡೆಗಳು ಧೃತಿಯ ಸಂಕೇತ. ಪುಕ್ಕಲು ಮನುಷ್ಯನನ್ನು ವರ್ಣಿಸಬೇಕಾದರೆ ‘ಅವನ ತೊಡೆಗಳು ನಡುಗಿದವು ಅಥವಾ ಬೆವರಿದವು’ ಎನ್ನುವ ವರ್ಣನೆಯನ್ನು ಮಾಡಲಾಗುತ್ತದೆ ರಾಕ್ಷಸಕುಲವನ್ನೇ ಸಂಹಾರ ಮಾಡುವ ಧೈರ್ಯ ಹಾಗು ಸಾಮರ್ಥ್ಯ ಇರುವದು ರಘುವಂಶದಲ್ಲಿಯೇ ಶ್ರೇಷ್ಠನಾದವನಿಗೆ ಮಾತ್ರ ಸಾಧ್ಯ. ಆದುದರಿಂದ ಅಂತಹ ರಘುಕುಲತಿಲಕನು ನನ್ನ ತೊಡೆಗಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ.

ಜಾನುನೀ ಸೇತುಕೃತ್ಪಾತು
(=ಸಮುದ್ರಕ್ಕೆ ಸೇತುಬಂಧನ ಮಾಡಿದವನು ನನ್ನ ಮೊಣಕಾಲುಗಳನ್ನು ರಕ್ಷಿಸಲಿ)
ಇನ್ನು ಪ್ರಾರಂಭವಾಗುವದು ರಾಮಚಂದ್ರನ ಮಹತ್ವದ ಕಾರ್ಯವಾದ ರಾವಣವಿಜಯ. ಆ ಕಾರ್ಯಕ್ಕಾಗಿ ಆತ ಸಮುದ್ರದ ಮೇಲೆ ಸೇತುಬಂಧನವನ್ನು ಮಾಡಬೇಕು ಹಾಗು ಲಂಕೆಯವರೆಗೆ ಧಾವಿಸಬೇಕು. ಅಂಥವನೇ ಮೊಣಕಾಲುಗಳನ್ನು ರಕ್ಷಿಸಲು ಯೋಗ್ಯನಾದವನು.

ಜಂಘೇ ದಶಮುಖಾಂತಕ:
(=ದಶಮುಖ ರಾವಣನ ಸಂಹಾರ ಮಾಡಿದವನು ನನ್ನ ಮೀನಗಂಡಗಳನ್ನು ರಕ್ಷಿಸಲಿ.)
ರಾವಣಸಂಹಾರವೇನು ಸಾಮಾನ್ಯ ಕಾರ್ಯವೆ? ಇದಕ್ಕೆ ಅಸಾಮಾನ್ಯ ಜಂಘಾಬಲ ಬೇಕು. ಆದುದರಿಂದ ಜಂಘಾಬಲ ಇರುವ ರಾಮಚಂದ್ರನೇ ನಮ್ಮ ಜಂಘೆಗಳನ್ನು ರಕ್ಷಿಸಬೇಕು.

ಪಾದೌ ವಿಭೀಷಣಶ್ರೀದಃ ಪಾತು
 (=ವಿಭೀಶಣನಿಗೆ ವೈಭವವನ್ನು ಕೊಟ್ಟವನು ನನ್ನ ಪಾದಗಳನ್ನು ರಕ್ಷಿಸಲಿ.)
ಶ್ರೀರಾಮಚಂದ್ರನು ಕೇವಲ ದುಷ್ಟಸಂಹಾರವನ್ನಷ್ಟೇ ಮಾಡುವವನಲ್ಲ. ಆತನು ತನ್ನ ಚರಣಭಕ್ತರಿಗೆ ಅನುಗ್ರಹವನ್ನೂ ಮಾಡುವವನು. ಆದುದರಿಂದಲೇ ಶರಣಾಗತ ವಿಭೀಷಣನಿಗೆ ರಾಜ್ಯೈಶ್ವರ್ಯವನ್ನು ಅನುಗ್ರಹಿಸಿದ ರಾಮಚಂದ್ರನು ನಮ್ಮ ಪಾದಗಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ.


ರಾಮೋsಖಿಲಂ ವಪು:
(=ಶ್ರೀರಾಮಚಂದ್ರನು ನನ್ನ ಸಂಪೂರ್ಣ ದೇಹವನ್ನು ರಕ್ಷಿಸಲಿ.)
‘ಮುಡಿಯಿಂದ ಅಡಿಯವರೆಗಿನ ಅಂಗಾಂಗಳನ್ನು ಶ್ರೀರಾಮಚಂದ್ರನು ರಕ್ಷಿಸಲಿ’ ಎನ್ನುವ ಪ್ರಾರ್ಥನೆಯನ್ನು ಈ ರೀತಿ ಕ್ರಮಬದ್ಧವಾಗಿ ಮಾಡಲಾಗಿದೆ. ಜೊತೆಗೇ ರಾಮಚಂದ್ರನ ವಂಶಾವಳಿಯ ಮೂಲದಿಂದ ಪ್ರಾರಂಭಿಸಿ, ತಂದೆ, ತಾಯಿ, ಗುರು ಹಾಗು ಸೋದರರ ಬಗೆಗೆ ಹೇಳಲಾಗಿದೆ. ರಾಮಚಂದ್ರನ ವಿವಾಹವನ್ನು ಉಲ್ಲೇಖಿಸಲಾಗಿದೆ. ತನ್ನಂತರ ರಾಮಚಂದ್ರನ ದುಷ್ಟಸಂಹಾರ ಹಾಗು ಶಿಷ್ಟರಕ್ಷಣೆಯ ವರ್ಣನೆಯನ್ನು ಮಾಡಲಾಗಿದೆ. ಈ ರೀತಿಯಲ್ಲಿ ಈ ಸ್ತೋತ್ರವು ಸಂಕ್ಷಿಪ್ತ ರಾಮಾಯಣವೇ ಆಗಿದೆ. ಆದುದರಿಂದ ಕೊನೆಯಲ್ಲಿ ಶ್ರೀರಾಮಚಂದ್ರನು ‘ನನ್ನ ಸಂಪೂರ್ಣ ಶರೀರವನ್ನು ರಕ್ಷಿಸಲಿ’ ಎನ್ನುವ ಮಂಗಳಪ್ರಾರ್ಥನೆಯನ್ನು ಮಾಡಲಾಗಿದೆ.
...................................................................................................
ರಾಮರಕ್ಷಾ ಸ್ತೋತ್ರದಲ್ಲಿಯ ಮತ್ತೊಂದು ಶ್ಲೋಕ ಹೀಗಿದೆ:
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
ಈ ಶ್ಲೋಕದ ಅರ್ಥ ಹೀಗಿದೆ:
ರಾಮ, ರಾಮಭದ್ರ, ರಾಮಚಂದ್ರ, ರಘುನಾಥ, ನಾಥ, ಸೀತಾಪತಿ ಎನ್ನುವ ಹೆಸರುಗಳಿಂದ ಕರೆಯಲ್ಪಡುತ್ತಿರುವವನಿಗೆ ನಮಸ್ಕಾರವಿರಲಿ.
ಈ ಶ್ಲೋಕಕ್ಕೆ ಸ್ವಾರಸ್ಯಪೂರ್ಣವಾದ ವ್ಯಾಖ್ಯಾನವನ್ನು ಪಂಡಿತರೊಬ್ಬರು ಮಾಡಿದ್ದು, ಅದು ಹೀಗಿದೆ:

ತಂದೆ ದಶರಥನು ಶ್ರೀರಾಮಚಂದ್ರನನ್ನು ‘ರಾಮ!’ ಎಂದು ಸಲಿಗೆಯಿಂದ ಕರೆಯುತ್ತಾನೆ.
ತಾಯಿ ಕೌಸಲ್ಯೆಯು ಪ್ರೀತಿಯಿಂದ ‘ರಾಮಭದ್ರ’ ಎಂದು ಕರೆಯುತ್ತಾಳೆ.
ತಮ್ಮಂದಿರು ಅವನನ್ನು ‘ರಾಮಚಂದ್ರ’ ಎಂದು ಆತ್ಮೀಯತೆಯಿಂದ ಕರೆಯುತ್ತಾರೆ.
ಪುರಜನರು ತಮ್ಮ ರಾಜನನ್ನು ‘ರಘುನಾಥ’ ಎಂದು ಗೌರವಪೂರ್ವಕವಾಗಿ ಕರೆಯುತ್ತಾರೆ.
ಸೀತಾದೇವಿ ತನ್ನ ಪತಿಯನ್ನು ಹೆಸರುಗೊಂಡು ಕರೆಯದೆ, ಕೇವಲ ‘ನಾಥ!’ ಎಂದು ಕರೆಯುತ್ತಾಳೆ.
ಸೀತಾದೇವಿಯ ತವರೂರಿನವರಾದ ಮಿಥಿಲಾಪುರನಿವಾಸಿಗಳಿಗೆ ಈತನು ಕೇವಲ ‘ಸೀತೆಯ ಗಂಡ!’
.............................................................................................................
ಕುತರ್ಕವಾದಿಯೊಬ್ಬರು ‘ಸೀತಾದೇವಿ’ ವನವಾಸದಲ್ಲಿ ಬಸಿರಾಗಲಿಲ್ಲ. ಅವಳು ರಾವಣನ ಸೆರೆಯಲ್ಲಿದ್ದಾಗ ಬಸಿರಾದಳು. ಇದರರ್ಥವೇನೆಂದರೆ ‘ರಾಮನು ನಪುಂಸಕನು’ ಎಂದು ವಾದಿಸಿದ್ದಾರೆ. ಇವರಿಗೆ ವನವಾಸದ ಅರ್ಥವೇ ಗೊತ್ತಿಲ್ಲ. ಭೋಗಜೀವನವನ್ನು ತ್ಯಜಿಸಿ, ಯೋಗಿಯಂತೆ ಬಾಳುವದೇ ನಮ್ಮ ಪುರಾತನರ ಆದರ್ಶವಾಗಿತ್ತು. ರಾಮಾಯಣವೇ ಆಗಲಿ, ಮಹಾಭಾರತವೇ ಆಗಲಿ ವನವಾಸವನ್ನು ಆದರ್ಶವೆಂದೇ ಬಿಂಬಿಸಿದ್ದನ್ನು ಗಮನಿಸಬೇಕು. ರಾಮರಕ್ಷಾ ಸ್ತೋತ್ರದ ಈ ಶ್ಲೋಕವನ್ನು ಗಮನಿಸಿರಿ:
ಫಲಮೂಲಾಶಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ
ಪುತ್ರೌ ದಶರಥಸ್ಯೇತೌ ಭ್ರಾತರೌ ರಾಮಲಕ್ಷ್ಮಣೌ

ರಾಮಲಕ್ಷಣರು ವನವಾಸದಲ್ಲಿ ಹೇಗೆ ಇರುತ್ತಿದ್ದರು ಎನ್ನುವದರ ವರ್ಣನೆ ಇದು:
ಫಲಮೂಲಾಶಿನೌ = ಅವರು ಹಣ್ಣು ಮತ್ತು ಗಡ್ಡೆಗೆಣಸುಗಳನ್ನು ಮಾತ್ರ ಭುಂಜಿಸುತ್ತಿದ್ದರು.
ದಾಂತೌ = ಇಂದ್ರಿಯನಿಗ್ರಹ ಮಾಡಿದವರು.
ತಾಪಸೌ = ತಪಸ್ವಿಗಳು
ಬ್ರಹ್ಮಚಾರಿಣೌ = ಬ್ರಹ್ಮಚಾರಿಗಳು

ಈ ಶ್ಲೋಕವನ್ನು ಮೂಲರಾಮಾಯಣದಲ್ಲಿ ಶೂರ್ಪನಖಿಯು ರಾವಣನ ಎದುರಿಗೆ ಹೇಳಿದಳು ಎಂದು ಕೇಳಿದ್ದೇನೆ. ಬುಧಕೌಶಿಕ ಋಷಿಗಳು ಅಲ್ಲಿಂದ ಎತ್ತಿಕೊಂಡಿರಬಹುದು.
................................................................................................
ಕೊನೆಯದಾಗಿ ರಾಮರಕ್ಷಾ ಸ್ತೋತ್ರದ ಕೊನೆಯ ಶ್ಲೋಕವನ್ನು ನೋಡೋಣ:
ರಾಮೋ ರಾಜಮಣಿಃ ಸದಾ ವಿಜಯತೇ
ರಾಮಂ ರಮೇಶಂ ಭಜೇ
ರಾಮೇಣಾಭಿಹತಾ ನಿಶಾಚರಚಮೂ
ರಾಮಾಯ ತಸ್ಮೈ ನಮಃ
ರಾಮಾನ್ನಾಸ್ತಿ ಪರಾಯಣಂ ಪರತರಮ್
ರಾಮಸ್ಯ ದಾಸೋಸ್ಮ್ಯಹಮ್
ರಾಮೇ ಚಿತ್ತಲಯಃ ಸದಾ ಭವತು
ಮೇ ಭೋ ರಾಮ ಮಾಮುದ್ಧರ.

ಈ ಶ್ಲೋಕದ ಪ್ರತಿಯೊಂದು ಸಾಲು, ಸಂಸ್ಕೃತ ವ್ಯಾಕರಣದ ವಿಭಕ್ತಿಯನ್ನು ಕ್ರಮಬದ್ಧವಾಗಿ ಸೂಚಿಸುತ್ತದೆ.
ರಾಜರಲ್ಲಿ ಶ್ರೇಷ್ಠನಾದ ರಾಮನು ವಿಜಯಿಯಾಗಲಿ.............(ಪ್ರಥಮಾ ವಿಭಕ್ತಿ)
ರಮಾದೇವಿಯ ಪತಿಯಾದ ರಾಮನನ್ನು ಭಜಿಸುತ್ತೇನೆ...........(ದ್ವಿತೀಯಾ ವಿಭಕ್ತಿ)
ಯಾವ ರಾಮನಿಂದ ರಾಕ್ಷಸಸಂಹಾರವಾಯಿತೊ...................(ತೃತೀಯಾ ವಿಭಕ್ತಿ)
ಅಂತಹ ರಾಮನಿಗೆ ನಮಸ್ಕಾರಗಳು.................................(ಚತುರ್ಥೀ ವಿಭಕ್ತಿ)
ರಾಮನಿಗಿಂತ ಹೆಚ್ಚಿನ ಪಾರಾಯಣವಿಲ್ಲ...........................(ಪಂಚಮೀ ವಿಭಕ್ತಿ)
ರಾಮನ ದಾಸನು ನಾನು.............................................(ಷಷ್ಠೀ ವಿಭಕ್ತಿ)
ರಾಮನಲ್ಲಿ ನನ್ನ ಚಿತ್ತವು ಲಯವಾಗಲಿ...........................(ಸಪ್ತಮೀ ವಿಭಕ್ತಿ)
ಹೇ ರಾಮನೆ, ನನ್ನನ್ನು ಉದ್ಧರಿಸು................................(ಸಂಬೋಧನ ವಿಭಕ್ತಿ)
………………………………………………………………………….

ನಾನೃಷಿ: ಕುರುತೇ ಕಾವ್ಯಮ್ ಎನ್ನುವ ಮಾತಿದೆ, ಋಷಿಯಾದವನು ಮಾತ್ರ ಕಾವ್ಯವನ್ನು ರಚಿಸಬಲ್ಲ ಎಂದು.
ಪ್ರಾಚೇತಸ ಎನ್ನುವ ಬೇಡನು ನಾರದ ಮಹರ್ಷಿಗಳ ಉಪದೇಶದಿಂದ ವಾಲ್ಮೀಕಿ ಮಹರ್ಷಿಗಳಾದರು. ಆದರೆ ಅವರ ಅಂತರಂಗದಲ್ಲಿ ತಮ್ಮ ಹಳೆಯ  ಹಿಂಸಾಜೀವನದ ಬಗೆಗಿನ ದುಃಖ ಕುದಿಯುತ್ತಲೇ ಇತ್ತು. ಮತ್ತೊಬ್ಬ ಬೇಡನು ಕ್ರೌಂಚಮಿಥುನಕ್ಕೆ ಬಾಣ ಎಸೆದು ಅವುಗಳಲ್ಲಿ ಒಂದನ್ನು ಕೊಂದಾಗ, ಈ ಶೋಕವು ಶ್ಲೋಕರೂಪದಲ್ಲಿ ಹೊರಬಂದಿತು:
“ಮಾ ನಿಷಾದ ಪ್ರತಿಷ್ಠಾಂ ತ್ವಮಗಮ: ಶಾಶ್ವತೀ: ಸಮಾ:
ಯತ್ಕ್ರೌಂಚಮಿಥುನಾದೇಕಮವಧೀ: ಕಾಮಮೋಹಿತಮ್.”

ತಮ್ಮ ಮನದಲ್ಲಿ ಎಡೆಬಿಡದೆ ಕಾಡುತ್ತಿರುವ ಶೋಕವನ್ನು ಉತ್ಸರ್ಜಿಸುವ ಸಲುವಾಗಿಯೇ ಅವರು ರಾಮಾಯಣವನ್ನು ಬರೆಯಬೇಕಾಯಿತು. ಇದನ್ನೇ ಗೋಪಾಲಕೃಷ್ಣ ಅಡಿಗರು, “ಕ್ರೌಂಚವಧದುದ್ವೇಗದಳಲ ಬತ್ತಲ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು” ಎಂದು ತಮ್ಮ ‘ಭೂಮಿಗೀತೆ’ಯಲ್ಲಿ ವರ್ಣಿಸಿದ್ದಾರೆ. ರಾಮಾಯಣದ ರಚನೆಯ ನಂತರ ವಾಲ್ಮೀಕಿ ಮಹರ್ಷಿಗಳ ಮನಸ್ಸು ಶಾಂತವಾಯಿತು. ಆದುದರಿಂದಲೇ ಬುಧಕೌಶಿಕ ಋಷಿಗಳು ‘ರಾಮರಕ್ಷಾಸ್ತೋತ್ರ’ದಲ್ಲಿ ಹೀಗೆ ಹೇಳಿದ್ದಾರೆ:
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್.
ವಾಲ್ಮೀಕಿ ಎನ್ನುವ ಕೋಗಿಲೆಯು ಕಾವ್ಯ ಎನ್ನುವ ವೃಕ್ಷದ ಶಾಖೆಗಳ ಮೇಲೆ ಕುಳಿತುಕೊಂಡು ‘ರಾಮ,ರಾಮ’ ಎನ್ನುವ ಮಧುರ ಪದವನ್ನು ಕೂಜಿಸುತ್ತಿದೆ. ಆ ವಾಲ್ಮೀಕಿಕೋಕಿಲಕ್ಕೆ ವಂದನೆಗಳು.

ಆಧ್ಯಾತ್ಮಿಕ ಅಮೃತದ ಜೊತೆಗೆ ಕಾವ್ಯಾಮೃತವನ್ನೂ ಹಂಚುತ್ತಿರುವ ವಾಲ್ಮೀಕಿ ಮಹರ್ಷಿಗಳಿಗೆ ಹಾಗು ಬುಧಕೌಶಿಕ ಋಷಿಗಳಿಗೆ ಸಾಷ್ಟಾಂಗ ನಮಸ್ಕಾರಗಳು.

(ಸಂಗ್ರಹ)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ