ದೇವಿಮಹಾತ್ಮ್ಯ - ಮೂರನೆಯ ಅಧ್ಯಾಯ

ಧ್ಯಾನಮ್ -
ಉದ್ಯದ್ಬಾನುಸಹಸ್ರಕಾಂತಿಮರುಣಕ್ಷೌಮಾಂ ಶಿರೋಮಾಲಿಕಾಂ
ರಕ್ತಾಲಿಪ್ತ ಪಯೋಧರಾಂ ಜಪವಟೀಂ ವಿದ್ಯಾಮಭೀತಿಂ ವರಮ್ |
ಹಸ್ತಾಬ್ಜೈರ್ದಧತೀಂ ತ್ರಿನೇತ್ರ ವಿಲಸದ್ವಕ್ತ್ರಾರವಿಂದಶ್ರಿಯಂ
ದೇವೀಂ ಬದ್ಧಹಿಮಾಂಶುರತ್ನಮಕುಟಾಂ ವಂದೇರವಿಂದಸ್ಥಿತಾಮ್ ||

1. ಉದಯಿಸುತ್ತಿರುವ ಸಾವರಿ ಸೂರ್ಯರ ಕಾಂತಿಗೆ ಸಮಾನವಾದ ಕೆಂಪುರೇಷ್ಮೆಯ ವಸ್ತ್ರವನ್ನುಟ್ಟಿರುವ, (ರಾಕ್ಷಸರ) ಶಿರಸ್ಸುಗಳನ್ನೇ ಮಾಲೆಯಾಗಿ ಧರಿಸಿದ್ದರಿಂದ ಕೆಂಪಾದ ಸ್ತನಗಳುಳ್ಳವಳಾದ, ಜಪಮಾಲೆ, ವಿದ್ಯಾಮುದ್ರೆ, ಅಭಯಮುದ್ರೆ, ವರದಾನಮುದ್ರೆಗಳನ್ನು ಕಮಲದಂತಿರುವ ಕೈಗಳಿಂದ ಧರಿಸಿರುವ, ಮೂರುಕಣ್ಣುಗಳಿಂದ ಅಲಂಕೃತವಾದ ಮುಖಾರವಿಂದದ ಕಾಂತಿಯುಳ್ಳ, ಚಂದ್ರನೊಡಗೂಡಿದ ರತ್ನಕಿರೀಟಧಾರಣೆಯಾದ ಕಮಲದಲ್ಲಿ ಕುಳಿತಿರುವಳಾದ ದೇವಿಯನ್ನು ನಮಸ್ಕರಿಸುತ್ತೇನೆ.

ಓಂ ಋಷಿರುವಾಚ -
ನಿಹನ್ಯಮಾನಂ ತತ್ಸೈನ್ಯಮವಲೋಕ್ಯ ಮಹಾಸುರಃ |
ಸೇನಾನೀಶ್ಚಿಕ್ಷುರಃ ಕೋಪಾದ್ ಯಯೌ ಯೋದ್ಧುಮಥಾಂಬಿಕಾಮ್ ||1||
ಸ ದೇವೀಂ ಶರವರ್ಣೇಣ ವವರ್ಷ ಸಮರೇಸುರಃ
ಯಥಾ ಮೇರುಗಿರೇಃ ಶೃಂಗಂ ತೋಯವರ್ಷೇಣ ತೋಯದಃ ||2||
    ಋಷಿಯಿಂತೆಂದನು : ಮಹಾಸುರನೂ ಸೇನಾಪತಿಯೂ ಆದ ಚಿಕ್ಷುರನು ಕೊಲ್ಲಲ್ಪಡುತ್ತಿರುವ ಆ ಸೈನ್ಯವನ್ನು ನೋಡಿ ಕೋಪದಿಂದ ದೇವಿಯೊಡನೆ ಯುದ್ಧಮಾಡಲು ಹೊರಟನು ಆ ಯುದ್ಧದಲ್ಲಿ ಬಾಣಗಳ ಮಳೆಯಿಂದ ಅವನು ಹೇಗೆ ದೊಡ್ಡ ಮೇಘವು ಧಾರಾಕಾರವಾದ ಮಳೆಯಿಂದ ಮೇರುಗಿರಿಯನ್ನು ತೋಯಿಸುವುದೋ ಹಾಗೆ-ಮಳೆಗರೆದನು.

ತಸ್ಯ ಚ್ಛಿತ್ವಾ ತತೋ ದೇವೀ ಲೀಲಯೈವ ಶರೋತ್ಕರಾನ್ |
ಜಘಾನ ತುರಗಾನ್ ಬಾಣೈರ್ಯಂತಾಂ ಚೈವ ವಾಜಿನಾಮ್ ||3||
ಚಿಚ್ಛೇದ ಚ ಧನುಃ ಸದ್ಯೋ ಧ್ವಜಂ ಚಾತಿಮುಚ್ಛ್ರಿತಮ್ |
ವಿವ್ಯಾಧ ಚೈವ ಗಾತ್ರೇಷು ಛಿನ್ನಧನ್ವಾನಮಾಶುಗೈಃ ||4||
    ಅನಂತರ ದೇವಿಯು ಲೀಲಾಮಾತ್ರದಿಂದ ಆತನ ಬಾಣಗಳನ್ನು ತುಂಡುಮಾಡಿ ತನ್ನ ಬಾಣಗಳಿಂದ ಅವನ (ರಥದ) ಕುದುರೆಗಳನ್ನೂ ಅವುಗಳನ್ನು ನಡೆಯಿಸುತ್ತಿದ್ದ ಸಾರಥಿಯನ್ನೂ ಹೊಡೆದಳು. ಅತಿ ಎತ್ತರದಲ್ಲಿದ್ದ ಧ್ವಜವನ್ನೂ ಅವನ ಕೈಯಲ್ಲಿದ್ದ ಬಿಲ್ಲನ್ನೂ ಕತ್ತರಿಸಿದಳು ಹೀಗೆ ಕತ್ತರಿಸಲ್ಪಟ್ಟಬಿಲ್ಲುಳ್ಳ ಆತನನ್ನು ವೇಗವಾದ ಬಾಣಗಳಿಂದ (ದೇಹದಲ್ಲೆಲ್ಲ ನಾಟಿಕೊಳ್ಳುವಂತೆ) ಹೊಡೆದಳು.

ಸ ಛಿನ್ನಧನ್ವಾವಿರಥೋ ಹತಾಶ್ವೋ ಹತಸಾರಥಿಃ |
ಅಭ್ಯಧಾವತ ತಾಂ ದೇವೀಂ ಖಡ್ಗ ಚರ್ಮಧರೋಸುರಃ ||5||
ಸಿಂಹಮಾಹತ್ಯ ಖಡ್ಗೇನ ತೀಕ್ಷ್ಣ ಧಾರೇಣ ಮೂರ್ಧನಿ |
ಆಜಘಾನ ಭುಜೇ ಸವ್ಯೇ ದೇವಿಮಪ್ಯತಿವೇಗವಾನ್ ||6||
    ಕುದುರೆ, ಸಾರಥಿ, ಬಿಲ್ಲು - ಎಲ್ಲವನ್ನೂ ಕಳೆದುಕೊಂಡ ಆತನು ಕತ್ತಿ-ಗುರಾಣಿಗಳನ್ನು ಹಿಡಿದು ದೇವಿಯಮೇಲೆ ಮುನ್ನುಗ್ಗಿ ಬಂದನು ಮತ್ತು ಹರಿತವಾದ ಅಲುಗಿನ ಕತ್ತಿಯಿಂದ ಸಿಂಹದ ತಲೆಯಮೇಲೆ ಹೊಡೆದು ಅತಿ ವೇಗಶಾಲಿಯಾದ ಆತನು ದೇವಿಯ ಎಡಭುಜಕ್ಕೂ ಹೊಡೆದನು.

ತಸ್ಯಾಃ ಖಡ್ಗೋ ಭುಜಂ ಪ್ರಾಪ್ಯ ಪಫಾಲ ನೃಪನಂದನ |
ತತೋ ಜಗ್ರಾಹ ಶೂಲಂ ಸ ಕೋಪಾದರುಣಲೋಚನಃ ||7||
ಚಿಕ್ಷೇಪ ಚ ತತಸ್ತತ್ತು ಭದ್ರಕಾಲ್ಯಾಂ ಮಹಾಸುರಃ |
ಜಾಜ್ವಲ್ಯಮಾನಂ ತೇಜೋಭೀ ರವಿಬಿಂಬಮಿವಾಂಬರಾತ್ ||8||
ದೃಷ್ಟ್ವಾತದಾಪತತ್ ಶೂಲಂ ದೇವೀ ಶೂಲಮಮುಂಚತ |
ತಚ್ಛೂಲಂ ಶತಧಾ ತೇನ ನೀತಂ ಸ ಚ ಮಹಾಸುರಃ ||9||
    ಎಲೈ ರಾಜಪುತ್ರನೆ, ಆ ಕತ್ತಿಯು ದೇವಿಯ ಭಜವನ್ನು ಮುಟ್ಟಿ ಬಿದ್ದುಹೋಯಿತು. ಅನಂತರ ಕೋಪದಿಂದ ಕೆಂಪಾದ ಕಣ್ಣುಳ್ಳ ಆತನು ಶೂಲವನ್ನು ಹಿಡಿದನು ಅನಂತರ ಆ ಮಹಾಸುರನು ಆಕಾಶದಲ್ಲಿನ ತೇಜೋಮಯವಾದ ಸೂರ್ಯಬಿಂಬದಂತೆ ಬೆಳಗುತ್ತಿರುವ ಅದನ್ನು ಭದ್ರಕಾಳಿಯ ಮೇಲೆ ಎಸೆದನು ಮೇಲೆ ಬೀಳುತ್ತಿರುವ ಆ ಶೂಲವನ್ನು ದೇವಿಯು ಕಂಡವಳಾಗಿ ತನ್ನ ಶೂಲವನ್ನು ಪ್ರಯೋಗಿಸಿದಳು ಅದು ರಾಕ್ಷಸನ ಶೂಲವನ್ನು ನೂರಾಗಿ ತುಂಡು ಮಾಡಿದ್ದರ ಜೊತೆಗೆ ಅವನನ್ನೂ ನೂರು ಪಾಲಾಗಿ ಸೀಳಿಬಿಟ್ಟಿತು.

ಹತೇ ತಸ್ಮಿನ್ ಮಹಾವೀರ್ಯೇ ಮಹಿಷಸ್ಯ ಚಮೂಪತೌ |
ಅಜಗಾಮ ಗಜಾರೂಢಶ್ಚಾಮರಃ ತ್ರಿದಶಾರ್ದನಃ ||10||
ಸೋಪಿ ಶಕ್ತಿಂ ಮುಮೋಚಾಥ ದೇವ್ಯಾಸ್ತಾಮಂಬಿಕಾ ದ್ರುತಮ್ |
ಹುಂಕಾರಾಭಿಹತಾಂ ಭೂಮೌ ಪಾತಯಾಮಾಸ ನಿಷ್ಟ್ರಭಾಮ್ ||11||
ಭಗ್ನಾಂ ಶಕ್ತಿಂ ನಿಪತಿತಾಂ ದೃಷ್ಟ್ವಾ ಕ್ರೋಧಸಮನ್ವಿತಃ |
ಚಿಕ್ಷೇಪ ಚಾಮರಃ ಶೂಲಂ ಬಾಣೈಸ್ತದಪಿ ಸಾಚ್ಛಿನತ್ ||12||
    ಮಹಾಬಲಶಾಲಿಯಾದ ಮಹಿಷಾಸುರನ ಸೈನ್ಯಾಧಿಪತಿಯಾದ ಆತನು ನಾಶವಾಗಲಾಗಿ, ದೇವತೆಗಳನ್ನು ಹಿಂಸಿಸುವ ಚಾಮರನೆಂಬ (ರಾಕ್ಷಸನು) ಆನೆಯನ್ನೇರಿದವನಾಗಿ ಬಂದನು. ಅವನು ಕೂಡ ದೇವಿಯ ಕಡೆಗೆ ಶಕ್ತ್ಯಾ ಯುಧವನ್ನು ಬಿಟ್ಟನು ಅಂಬಿಕೆಯು ಬೇಗನೆ ಹುಂಕಾರದಿಂದ ಅದನ್ನು ಕಾಂತಿಹೀನವಾಗಿ ಮಾಡಿದವಳಾಗಿ ನೆಲದಲ್ಲಿ ಕೆಡವಿಬಿಟ್ಟಳು ಮುರಿದು ಬಿದ್ದುಹೋದ ಶಕ್ತಿಯನ್ನು ಕಂಡು ಕೋಪಗೊಂಡ ಚಾಮರನು ಶೂಲವನ್ನು ಎಸೆದಳು ಆಕೆಯು ಅದನ್ನು ಬಾಣಗಳಿಂದ ತುಂಡರಿಸಿದಳು.

ತತಃ ಸಿಂಹಃ ಸಮುತ್ಪತಸಯ ಗಜಕುಂಭಾಂತರೇ ಸ್ಥಿತಃ |
ಬಾಹುಯುದ್ಧೇನ ಯುಯುಧೇ ತೇನೋಚ್ಚೈಸ್ತ್ರಿದಶಾರಿಣಾ ||13||
ಯುಧ್ಯಮಾನೌ ತತಸ್ತೌತು ತಸ್ಮಾನ್ನಾಗಾನ್ಮಹೀಂ ಗತೌ |
ಯುಯುಧಾತೇತಿಸಂರಬ್ಧೌ ಪ್ರಹಾರೈರತಿದಾರುಣೈಃ ||14||
ತತೋ ವೇಗಾತ್ ಖಮುತ್ಪತ್ಯ ನಿಪತ್ಯ ಚ ಮೃಗಾರಿಣಾ |
ಕರಪ್ರಹಾರೇಣ ಶಿರಃ ಚಾಮರಸ್ಯ ಪೃಥಕ್ಕೃತಮ್ ||15||
    ಅನಂತರ ಸಿಂಹವು ನೆಗೆದು (ಆ ರಾಕ್ಷಸನು ಏರಿದ್ದ) ಆನೆಯ ಕುಂಭಸ್ಥಲವನ್ನು ಏರಿಬಿಟ್ಟತು ದೇವಿಯು ಆ ಅಮರಾರಿಯಾದ ಅವನೊಡನೆ ಬಾಹುಗಳಿಂದ ಯುದ್ಧವನ್ನಾರಂಭಿಸಿದಳು ಹೀಗೆ ಯುದ್ಧವನ್ನು ಮಾಡುತ್ತಾ ಅವರಿಬ್ಬರೂ ಅನಂತರ ನೆಲದಮೇಲೆಕ್ಕೆ ಬಂದರು ಅತಿಬಲದರ್ಪಿತರಾಗಿ ಇಬ್ಬರೂ ಹೆಚ್ಚು ಭಯಂಕರವಾದ ಹೊಡೆತಗಳಿಂದ ಕಾದಾಡಿದರು ಅನಂತರ (ದೇವಿಯು) ಬೇಗನೆ ಸಿಂಹದೊಡನೆ ಆಕಾಶಕ್ಕೆ ನೆಗೆದವಳಾಗಿ ಕೈ (ಗುದ್ದಿನ) ಏಟಿನಿಂದ ಚಾಮರನ ತಲೆಯನ್ನು (ಶರೀರದಿಂದ) ಬೇರೆಯಾಗಿ ಮಾಡಿಬಿಟ್ಟಳು.

ಉದಗ್ರಶ್ಚರಣೇ ದೇವ್ಯಾ ಶಿಲಾವೃಕ್ಷಾಭಿರ್ಹತಃ |
ದಂತಮುಷ್ಟಿತಲೈಶ್ಚೈವ ಕರಾಲಶ್ಚನಿಪಾತಿತಃ ||16||
ದೇವೀ ಕ್ರುದ್ಧಾಗದಾಪಾತೈಶ್ಚೂರ್ಣಯಾಮಾಸ ಚೋದ್ಧತಮ್ |
ಬಾಷ್ಕಲಂ ಭಿಂದಿಪಾಲೇನ ಬಾಣೈಸ್ತಾಮ್ರಂ ತಥಾಂಧಕಮ್ ||17||
ಉಗ್ರಾಸ್ಯಮುಗ್ರವೀರ್ಯಂ ಚ ತಥೈವ ಚ ಮಹಾಹನುಮ್ |
ತ್ರಿನೇತ್ರಾ ಚ ತ್ರಿಶೂಲೇನ ಜಘಾನ ಪರಮೇಶ್ವರೀ ||18||
ಬಿಡಾಲಸ್ಯಾಸಿನಾ ಕಾಯಾತ್ ಪಾತಯಾಮಾಸ ವೈ ಶಿರಃ |
ದುರ್ಧರಂ ದುರ್ಮುಖಂ ಚೋಭೌ ಶರೈರ್ನಿನೈ ಯಮಕ್ಷಯಮ್ ||19||
    ಉದಗ್ರನೆಂಬವನು ಯುದ್ಧದಲ್ಲಿ ದೇವಿಯಿಂದ ಕಲ್ಲು-ಮರ-ಮುಂತಾದವುಗಳ ಪ್ರಹಾರದಿಂದ ನಾಶಹೊಂದಿದನು ಕರಾಲನು ಗುದ್ಧುಗಳಿಂದಲೂ ಹಲ್ಲುಗಳಿಂದ ಕಚ್ಚುವದರಿಂದಲೂ ಸತ್ತನು ಉದ್ಧತನೆಂಬವನನ್ನು ದೇವಿಯು ಸಿಟ್ಟಿನಿಂದ ಗದೆಯ ಹೊಡೆತದಿಂದ ಪುಡಿಮಾಡಿಬಿಟ್ಟಳು ಹಾಗೆಯೇ ಬಾಷ್ಕಲನೆಂಬವನ್ನು ಭಿಂದಿಪಾಲನೆಂಬ ಆಯುಧದಿಂದಲೂ ತಾಮ್ರ, ಅಂಧಕನೆಂಬವನ್ನು ಬಾಣಗಳಿಂದಲೂ ಉಗ್ರಾಸ್ಯ, ಉಗ್ರವೀರ್ಯ, ಮಹಾಹನು ಎಂಬ ರಾಕ್ಷಸರನ್ನು ಮುಕ್ಕಣ್ಣೆಯಾದ ಪರಮೇಶ್ವರಿಯು ತ್ರಿಶೂಲದಿಂದಲೂ ಕೊಂದುಹಾಕಿದಳು ಬಿಡಾಲನೆಂಬವನ ತಲೆಯನ್ನು ಕತ್ತಿಯಿಂದ ಕತ್ತರಿಸಿ ಶರೀರದಿಂದ ಕೆಡವಿಬಿಟ್ಟಳು ದುರ್ಧರ-ದುರ್ಮುಖರಿಬ್ಬರನ್ನೂ ಬಾಣಗಳಿಂದ ಯಮಪುರಿಗೆ ಕಳುಹಿಸಿಬಿಟ್ಟಳು.

ಏವಂ ಸಂಕ್ಷೀಯಮಾಣೇ ತು ಸ್ವಸೈನ್ಯೇ ಮಹಿಷಾಸುರಃ |
ಮಾಹಿಷೇಣ ಸ್ವರೂಪೇಣ ತ್ರಾಸಯಾಮಾಸ ತಾನ್ ಗಣಾನ್ ||20||
ಕಾಂಶ್ಚಿತ್ತುಂಡಪ್ರಹಾರೇಣ ಖುರಕ್ಷೇಪೈಸ್ತಥಾ ಪರಾನ್ |
ಲಾಂಗೂಲತಾಡಿತಾಂಶ್ಚಾನ್ಯಾನ್ ಶೃಂಗಾಭ್ಯಾಂ ಚ ವಿದಾರಿತಾನ್ ||21||
ವೇಗೇನ ಕಾಂಶ್ಚಿದಪರಾನ್ ನಾದೇನ ಭ್ರಮಣೇನ ಚ |
ನಿಃಶ್ವಾಸಪವನೇನಾನ್ಯಾನ್ ಪಾತಯಾಮಾಸ ಭೂತಲೇ ||22||
    ಈ ರೀತಿಯಾಗಿ ತನ್ನ ಸೈನ್ಯವು ಕ್ಷೀಣವಾಗುತ್ತಿರಲಾಗಿ ಮಹಿಷಾಸುರನು ಕೋಣನ ರೂಪದಿಂದ ಬಂದು ಆ (ದೇವತಾ)ಗಣಗಳನ್ನೆಲ್ಲ ಹೆದರಿಸಲಾರಂಭಿಸಿದನು ಕೆಲವರನ್ನು (ತನ್ನ)ಕೋರೆಹಲ್ಲುಗಳ ಏಟಿನಿಂದಲೂ ಕೆಲವರನ್ನು ಕಾಲು ಗೊರಸುಗಳ ಹೊಡೆತಗಳಿಂದಲೂ ಇನ್ನೂ ಉಳಿದವರನ್ನು ಬಾಲದ ಹೊಡೆತ, ಕೋಡುಗಳ ತಿವಿಯುವಿಕೆಗಳಿಂದಲೂ ಘಾಸಿಮಾಡಿದನು ತನ್ನ (ಸಂಚಾರ) ವೇಗದಿಂದ ಕೆಲವರನ್ನೂ ಧ್ವನಿಯಿಂದಲೂ, ಸುತ್ತಾಡುವದರಿಂದಲೂ ನಿಟ್ಟುಸಿರಿನ ಗಾಳಿಯಿಂದಲೂ ಇನ್ನೂ ಉಳಿದವರನ್ನೂ ನೆಲದಮೇಲೆ ಕೆಡವಿಬಿಟ್ಟನು.

ನಿಪಾತ್ಯ ಪ್ರಮಥಾನೀಕಮಭ್ಯಧಾವತ ಸೋಸುರಃ |
ಸಿಂಹಂ ಹಂತುಂ ಮಹಾದೇವ್ಯಾಃ ಕೋಪಂ ಚಕ್ರೇ ತತೋಮ್ಬಿಕಾ ||23||
ಸೋಪಿ ಕೋಪಾನ್ಮಹಾವೀರ್ಯಃ ಖುರಕ್ಷುಣ್ಣಮಹೀತಲಃ |
ಶೃಂಗಾಭ್ಯಾಂ ಪರ್ವತಾನುಚ್ಚಾನ್ ಚಿಕ್ಷೇಪ ಚ ನನಾದ ಚ ||24||
ವೇಗಭ್ರಮಣವಿಕ್ಷುಣ್ಣಾ ಮಹೀ ತಸ್ಯ ವ್ಯಶೀರ್ಯತ |
ಲಾಂಗೂಲೇನಾಹತಶ್ಚಾಭ್ಧಿಃ ಪ್ಲಾವಯಾಮಾಸ ಸರ್ವತಃ ||25||
    ಹೀಗೆ ಪ್ರಮಥಗಣಗಳನ್ನೆಲ್ಲ ಕೆಡವಿ ಆ ರಾಕ್ಷಸನು ಮಹಾದೇವಿಯ ವಾಹನವಾದ ಸಿಂಹವನ್ನು ಕೊಲ್ಲುವದಕ್ಕಾಗಿ ಮುನ್ನುಗ್ಗಿದನು ಅನಂತರ ದೇವಿಯೂ ಕೋಪಾವಿಷ್ಟಳಾದಳು ಸಿಟ್ಟಿಗೆದ್ದು ಮಹಾಬಲಶಾಲಿಯಾದ ಆ ಮಹಿಷನೂ ತನ್ನ ಕಾಲಿನ ಗೊರಸುಗಳಿಂದ ಭೂಮಿಯನ್ನು ಕೆರೆದು ಹಳ್ಳಮಾಡುತ್ತಾ ಎರಡು ಕೋಡುಗಳಿಂದ ಎತ್ತರವಾದ ಪರ್ವತಗಳನ್ನೆತ್ತಿ ಬಿಸಾಡುತ್ತಾ ಕೂಗಿಕೊಂಡನು ಅವನ ರಭಸದ ನಡುಗೆಯಿಂದ ಅಳ್ಳಾಡಿದ ಭೂಮಿಯು ಸೀಳಿಹೋಯಿತು ಬಾಲದ ಹೊಡೆತದಿಂದ ಉಕ್ಕಿದ ಸಮುದ್ರವು ಎಲ್ಲೆಲ್ಲೂ ನುಗ್ಗಿ ತೇಲಿಸಿಬಿಟ್ಟಿತು.

ಧುತಶೃಂಗವಿಭಿನ್ನಾಶ್ಚ ಖಂಡಂ ಯಯುರ್ಘನಾಃ |
ಶ್ವಾಸಾನಿಲಾಸ್ತಾಃ ಶತಶೋ ನಿಪೇತುರ್ನಭಸೋಚಲಾಃ ||26||
ಇತಿ ಕ್ರೋಧಸಮಾಧ್ಮಾತಮಾಪತಂತಂ ಮಹಾಸುರಮ್ |
ದೃಷ್ಟ್ವಾಸಾ ಚಂಡಿಕಾ ಕೋಪಂ ತದ್ವಧಾಯ ತದಾಕರೋತ್ ||27||
    ಅಳ್ಳಾಡಿಸಲ್ಪಟ್ಟ ಅವನ ಕೋಡುಗಳಿಂದ ಸೀಳಿಹೋದ ಮೇಘಗಳು ತುಂಡುತುಂಡಾಗಿಬಿಟ್ಟವು (ಅವನ) ಉಸಿರಿನ ಗಾಳಿಯಿಂದ ಅವು ನೂರಾರು ಚೂರುಗಳಾಗಿ ಆಕಾಶದಿಂದ ಬೆಟ್ಟ(ದಂತೆ) ಉದುರಿದವು. ಹೀಗೆ ಕೋಪದಿಂದ ಉರಿದೆದ್ದು ಮುನ್ನುಗ್ಗಿಬರುತ್ತಿರುವ ಆ ಮಹಾಸುರನನ್ನು ಕಂಡು ಚಂಡಿಕೆಯು ಕೋಪದಿಂದ ಅವನನ್ನು ಕೊಲ್ಲಲು ತೀರ್ಮಾನಿಸಿದಳು.

ಸಾ ಕ್ಷಿಪ್ತ್ವಾತಸ್ಯ ವೈ ಪಾಶಂ ತಂ ಬಬಂಧ ಮಹಾಸುರಮ್ |
ತತ್ಯಾಜ ಮಾಹಿಷಂ ರೂಪಂ ಸೋಪಿ ಬದ್ಧೋ ಮಹಾಮೃಧೇ ||28||
ತತಃ ಸಿಂಹೋಭವತ್ ಸದ್ಯೋ ಯಾವತ್ತ ಸ್ಯಾಂಬಿಕಾ ಶಿರಃ |
ಛಿನತ್ತಿ ತಾವತ್ ಪುರುಷಃ ಖಡ್ಗಪಾಣಿರದೃಶ್ಯತ  ||29||
ತತ ಏವಾಶು ಪುರುಷಾಂ ದೇವೀ ಚಿಚ್ಛೇದ ಸಾಯಕೈಃ |
ತಂ ಖಡ್ಗ ಚರ್ಮಣಾ ಸಾರ್ಧಂ ತತಃ ಸೋಭೂನ್ಮಹಾಗಜಃ ||30||
    ಆಕೆಯು ಅವನ ಮೇಲೆ ಪಾಶವನ್ನೆಸೆದು ಆ ರಾಕ್ಷಸನನ್ನು ಕಟ್ಟಿ ಹಾಕಿದಳು ಯುದ್ಧದಲ್ಲಿ ಹಾಗೆ ಕಟ್ಟಲ್ಪಟ್ಟ ಅವನು ಕೂಡಲೆ ಕೋಣನ ರೂಪವನ್ನು ಬಿಟ್ಟುಸಿಂಹವಾಗಿ ಕಾಣಿಸಿಕೊಂಡನು ಅಂಬಿಕೆಯು ಆ ಸಿಂಹದ ತಲೆಯನ್ನು ಕಡಿಯುವಷ್ಟರಲ್ಲಿಯೇ ಕತ್ತಿಯನ್ನು ಹಿಡಿದ ಒಬ್ಬ ಮನುಷ್ಯನಾಗಿ ತೋರಿಕೊಂಡನು ಆ ಕೂಡಲೆ ದೇವಿಯು ಕತ್ತಿಗುರಾಣಿಗಳಿಂದ ಕೂಡಿದ್ದ ಆ ಪುರುಷನನ್ನು ಬಾಣಗಳಿಂದ ಕತ್ತರಿಸಿದಳು ಅನಂತರ ಅವನು ಒಂದು ದೊಡ್ಡ ಆನೆಯಾಗಿ ಬಂದನು.

ಕರೇಣ ಚ ಮಹಾಸಿಂಹಂ ತಂ ಚಕರ್ಷ ಜಗರ್ಜ ಚ |
ಕರ್ಷತಸ್ತು ಕರಂ ದೇವೀ ಖಡ್ಗೇನ ನಿರಕೃಂತತ ||31||
ತತೋ ಮಹಾಸುರೋ ಭೂಯೋ ಮಾಹಿಷಂ ವಪುರಾಸ್ಥಿತಃ |
ತಥೈವ ಕ್ಷೋಭಯಾಮಾಸ ತ್ರೈಲೋಕ್ಯಂ ಸಚರಾಚರಮ್ ||32||
ತತಃ ಕ್ರುದ್ಧಾಜಗನ್ಮಾತಾ ಚಂಡಿಕಾ ಪಾನಮುತ್ತಮಮ್ |
ಪಪೌ ಪುನಃ ಪುನಶ್ಚೈವ ಜಹಾಸಾರುಣಲೋಚನಾ ||33||
    (ಅವನು) ತನ್ನ ಸೊಂಡಿಲಿನಿಂದ (ದೇವಿಯ ವಾಹನವಾದ) ಮಹಾಸಿಂಹವನ್ನು ಎಳೆದನು, ಹಾಗೂ ಘರ್ಜಿಸಿದನು ಹಾಗೆ ಎಳೆಯುತ್ತಿರುವಾಗಲೇ ದೇವಿಯು ಆ ಸೊಂಡಿಲನ್ನು ಕತ್ತಿಯಿಂದ ತುಂಡರಿಸಿದಳು ಅನಂತರ ಆ ಮಹಾಸುರನು ಮತ್ತೆ ಕೋಣನ ಶರೀರವನ್ನು ಧರಿಸಿ ಚರಾಚರಗಳಿಂದ ತುಂಬಿದ ಮೂರುಲೋಕಗಳನ್ನೂ ಆತಂಕಗೊಳಿಸಿದನು ಅನಂತರ ಕುಪಿತಳಾದ ಚಂಡಿಕಾ ದೇವಿಯು ಶ್ರೇಷ್ಠವಾದ ಪಾನವನ್ನು (ಯುದ್ಧದಲ್ಲಿ ಉತ್ಸಾಹವುಂಟಾಗುವದಕ್ಕಾಗಿ) ಮತ್ತೆಮತ್ತೆ ಸ್ವೀಕರಿಸಿದಳು ಅನಂತರ ಕೆಂಪಾದ ಕಣ್ಣುಗಳುಳ್ಳವಳಾಗಿ ಗಟ್ಟಿಯಾಗಿ ನಕ್ಕಳು.

ನನರ್ದ ಚಾಸುರಃ ಸೋಪಿ ಬಲವೀರ್ಯಮದೋದ್ಭತಃ |
ವಿಷಾಣಾಭ್ಯಾಚ ಚಿಕ್ಷೇಪ ಚಂಡಿಕಾಂ ಪ್ರತಿ ಭೂಧರಾನ್ ||34||
ಸಾ ಚ ತಾನ್ ಪ್ರಹಿತಾಂಸ್ತೇನ ಚೂರ್ಣಯಂತೀ ಶರೋತ್ಕರೈಃ |
ಉವಾಚ ತಂ ಮದೋದ್ಧೂತಮುಖರಾಗಾಕುಲಾಕ್ಷರಮ್ ||35||
    ಆ ರಾಕ್ಷಸನೂ ಬಲವೀರ್ಯಮದಗಳಿಂದ ಕೊಬ್ಬಿದವನಾಗಿ ಘರ್ಜನೆಮಾಡುತ್ತಿದ್ದನು ಹಾಗೂ ಚಂಡಿಕೆಯ ಕಡೆಗೆ ತನ್ನ ಎರಡುಕೋಡುಗಳಿಂದ ಬೆಟ್ಟಗಳನ್ನು ಕಿತ್ತು ಎಸೆಯುತ್ತಿದ್ದನು ಅವನಿಂದೆಸೆಯಲ್ಪಟ್ಟ ಅವುಗಳನ್ನು ಆಕೆಯೂ ಬಾಣಗಳ ಸಮೂಹದಿಂದ ಪುಡಿಮಾಡುತ್ತಾ ಮದದಿಂದ ಹೊರಬೀಳುತ್ತಿರುವ ಮುಖದ ಕೆಂಪಿನಿಂದ ತೊದಲುತ್ತಾ (ಕಿರಿಚುತ್ತಿದ್ದ) ಅವನನ್ನು ಕುರಿತು ಹೀಗೆಂದಳು:

ದೇವ್ಯುವಾಚ
ಗರ್ಜ ಗರ್ಜಂ ಕ್ಷಣಂ ಮೂಢ ಮಧು ಯಾವತ್ಪಿಬಾಮ್ಯಹಮ್ |
ಮಯಾ ತ್ವಯಿ ಹತೇತ್ರೈವ ಗರ್ಜಿಷ್ಯನ್ತ್ಯಾಶು ದೇವತಾಃ ||36||
    ದೇವಿಯಿಂತೆಂದಳು: 'ಮೂಢನೆ, ಕ್ಷಣಕಾಲ ನಾನು ಮಧುಪಾನವನ್ನು ಪೂರೈಸುವವರೆಗೂ ಗರ್ಜಿಸುತ್ತಿರು ಇಲ್ಲಿಯೇ ನೀನು ನನ್ನಿಂದ ಕೊಲ್ಲಲ್ಪಟ್ಟಮೇಲೆ ಬೇಗನೇ ದೇವತೆಗಳು (ಸಂತೋಷದಿಂದ) ಗಟ್ಟಿಯಾಗಿ ಕೂಗಾಡಲಿದ್ದಾರೆ!

ಋಷಿರುವಾಚ -
ಏವಮುಕ್ತ್ವಾ ಸಮುತ್ಪತ್ಯ ಸಾರೂಢಾ ತಂ ಮಹಾಸುರಮ್ |
ಪಾದೇನಾಕ್ರಮ್ಯ ಕಂಠೇ ಚ ಶೂಲೇನೈನಮತಾಡಯತ್ ||37||
ತತಃ ಸೋಪಿ ಪದಾಕ್ರಾಂತಸ್ತಯಾ ನಿಜಮುಖಾತ್ತತಃ |
ಅರ್ಧನಿಷ್ಕ್ರಾಂತ ಏವಾಸೀದ್ ದೇವ್ಯಾ ವೀರ್ಯೇಣ ಸಂವೃತಃ ||38||
ಅರ್ಧನಿಷ್ಕ್ರಾಂತ ಏವಾಸೌ ಯುಧ್ಯಮಾನೋ ಮಹಾಸುರಃ |
ತಯಾ ಮಹಾಸಿನಾ ದೇವ್ಯಾ ಶಿರಶ್ಚಿತ್ವಾ ನಿಪಾತಿತಃ ||39||
    ಋಷಿಯಿಂತೆಂದನು: ಹೇಗೆಂದು ಹೇಳಿ ಆಕೆಯು ಆ ಮಹಾರಾಕ್ಷಸನನ್ನು ಕಾಲಿನಿಂದ ತುಳಿದುಕೊಂಡು ಶೂಲದಿಂದ ಅವನ ಕುತ್ತಿಗೆಯನ್ನು ಚುಚ್ಚಿದಳು ಆಕೆಯ ಕಾಲಿನ ತುಳಿತಕ್ಕೆ ಸಿಕ್ಕಿಬಿದ್ದ ಅವನು ದೇವಿಯ ಪರಾಕ್ರಮಕ್ಕೆ ತುತ್ತಾಗಿ ತನ್ನ (ಕೋಣನ ರೂಪದ) ಬಾಯಿಯಿಂದ ಅರ್ಧದಷ್ಟು ಹೊರಬಂದವನಾಗಿಯೇ ಆ ಮಹಾರಾಕ್ಷಸನು ಯುದ್ಧಮಾಡುತ್ತಾ ಆ ದೇವಿಯ ಮಹತ್ತಾದ ಖಡ್ಗದ ಏಟಿನಿಂದ ತಲೆಯನ್ನು ಕತ್ತರಿಸಲ್ಪಟ್ಟವನಾಗಿ ಕೆಡವಲ್ಪಟ್ಟನು.

ತತೋ ಹಾಹಾಕೃತಂ ಸರ್ವಂ ದೈತ್ಯಸೈನ್ಯಂ ನನಾಶ ತತ್ |
ಪ್ರರ್ಹಂ ಚ ಪರಂ ಜಗ್ಮುಃ ಸಕಲಾ ದೇವತಾಗಣಾಃ ||40||
ತುಷ್ಟುವುಸ್ತಾಂ ಸುರಾ ದೇವೀಂ ಸಹ ದಿವ್ಯೈರ್ಮಹರ್ಷಿಭಿಃ |
ಜಗುರ್ಗಂಧರ್ವಪತಯೋ ನನೃತುಶ್ಚಾಪ್ಸರೋ ಗಣಾಃ ||41||
    ಅನಂತರ ರಾಕ್ಷಸಸೈನ್ಯವೆಲ್ಲವೂ ಹಾಹಾಕಾರಮಾಡಿತು ಅದು (ದೇವಿಯ ಪರಾಕ್ರಮಕ್ಕೆ ಸಿಕ್ಕಿ) ನಾಶವಾಗಿಹೋಯಿತು ಎಲ್ಲಾ ದೇವತಾ ವೃಂದದವರೂ ಹೆಚ್ಚಿನ ಹರ್ಷವನ್ನು ಹೊಂದಿದರು ದಿವ್ಯರಾದ ಮಹರ್ಷಿಗಳೊಡಗೂಡಿ ಆ ದೇವಿಯನ್ನು ದೇವತೆಗಳೆಲ್ಲರೂ ಸ್ತೋತ್ರಮಾಡಿದರು ಗಂಧರ್ವ ಶ್ರೇಷ್ಠರುಗಳು ಗಾನಮಾಡಿದರು ಅಪ್ಸರಸ್ತ್ರೀಯರುಗಳು ನಾಟ್ಯಮಾಡಿದರು.

ಇತಿ ಶ್ರೀ ಮಾರ್ಕಂಡೇಯಪುರಾಣೇ ದೇವೀಮಹಾತ್ಮ್ಯೇ
ತೃತೀಯೋಧ್ಯಾಯಃ

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ