ಏಕಾಕ್ಷರ ಶ್ಲೋಕ

ಇಂದು ಬೆಳಗ್ಗೆ ನನ್ನ ಮುಖಪುಟದಲ್ಲಿ ಹಾಕಿದ ಸ್ಟೇಟಸ್ (ಅಮಂತ್ರಂ ಅಕ್ಷರಂ - ಮಂತ್ರವಾಗದ ಅಕ್ಷರವಿಲ್ಲ)ನ್ನು ನೋಡಿ ಚಿಕ್ಕಮಂಗಳೂರಿನ ಹಿರಿಯರೊಬ್ಬರು ಫೋನ್ ಮಾಡಿ ಅವರ ತಾತ ಅವರಿಗೆ ಹೇಳಿದ ಒಂದು ಕತೆಯನ್ನು(ನಿಜವಾಗಿ ನೆಡೆದ) ಹೇಳಿದರು ಅದನ್ನು ಯತಾವತ್ತಾಗಿ ನೀಡಲು ಪ್ರಯತ್ನಿಸಿದ್ದೇನೆ.

    ಪಂಡಿತ ತ್ರಿಣೇತ್ರಶಾಸ್ತ್ರಿಗಳವರು ಕಪಿಲಾನದಿಯಲ್ಲಿ ಸ್ನಾನವನ್ನು ಮಾಡಿ ಶ್ರೀಕಂಠೇಶ್ವರನ ದರ್ಶನವನ್ನು ಮಾಡಿಕೊಂಡದ್ದಾಯಿತು. ಊರಲ್ಲಿ ಯಾವಯಾವ ಘನಪಂಡಿತರು ಇದ್ದಾರೆಂದು ವಿಚಾರಿಸಿಕೊಂಡರು. ನಂಜನಗೂಡಿಗೆ ಬಂದಮೇಲೆ ಅದ್ವೈತಸಭೆಯವರೊಂದಿಗೆ ಮಾತನಾಡದೆ ಹೋದರೆ ತಮ್ಮ ಘನತೆಗೆ ಕುಂದು ಬಂದೀತು ಎಂದುಕೊಂಡು ಈ ದಿವಸಕ್ಕೆ ಇಲ್ಲಿಯೇ ಇರಬೇಕೆಂದು ನಿರ್ಣಯಿಸಿಕೊಂಡರು.

    ಇಷ್ಟರಲ್ಲಿ ಊರಿನಲ್ಲಿ ಒಬ್ಬ ದೊಡ್ಡ ಸಂನ್ಯಾಸಿಗಳು ಬಂದಿದ್ದಾರೆಂದು ಅವರೂ ಸಂಸ್ಕೃತದಲ್ಲಿ ಒಳ್ಳೆಯ ವಿದ್ವಾಂಸರೆಂದೂ ಶಿಷ್ಯರುಗಳಿಗೆ ಭಾಷ್ಯಪಾಠವನ್ನು ಹೇಳುತ್ತಿರುವರೆಂದೂ ತಿಳಿಯಬಂತು. ಸರಿ ಹಾಗಾದರೆ, ಅಲ್ಲಿಗೆ ಈಗಲೇ ಹೋಗಬೇಕು ಎಂದು ತಮ್ಮ ಜರತಾರಿಶಾಲನ್ನು ತೆಗೆದು ಸರಿಯಾಗಿ ನೀವಿ ಹೊದ್ದು ಕೊಂಡು ಒಂದು ತೆಂಗಿನಕಾಯನ್ನು ತೆಗೆದುಕೊಂಡು ಹೊರಟರು.

    ಶ್ರೀಮದದ್ವೈತಾನಂದಸರಸ್ವತಿಗಳವರು ಎರಡು ಮೂರು ಜನ ಸಂನ್ಯಾಸಿ ಶಿಷ್ಯರೊಡನೆ ಯಾವದೋ ವೇದಾಂತಕಾಲಕ್ಷೇಪವನ್ನು ಮಾಡುತ್ತಿದ್ದಾರೆ. ಒಬ್ಬ ಭವ್ಯಮೂರ್ತಿಯ ಪಂಡಿತರು ದಿಡೀರನೆ ಕದವನ್ನು ಹಾರಹೊಡೆದುಕೊಂಡು ಒಳಕ್ಕೆ ನುಗ್ಗಿ "ವೇದಾನ್ತವಿಜ್ಞಾನ" ಎಂಬ ಮಂತ್ರವನ್ನು ಹೇಳಿ ಕಾಯನ್ನು ಉರಳುಬಿಟ್ಟು ನಮಸ್ಕಾರಮಾಡಿದರು. ಕೂಡಲೇ ಯಾರಿಗೂ ಮಾತನಾಡುವುದಕ್ಕೆ ಅವಕಾಶವನ್ನು ಕೊಡದೆ.

    "ಮಹಾಸ್ವಾಮಿಗಳಲ್ಲಿ ಒಂದು ವಿಜ್ಞಾಪನಾ ಈ ಅಲ್ಪಜ್ಞನು ಒಂದು ಏಕಾಕ್ರಶ್ಲೋಕವನ್ನು ಬರೆದು ಪಾದಾರವಿಂದದಲ್ಲಿ ಅರ್ಪಿಸುವದಕ್ಕೆ ಬಂದಿರುತ್ತಾನೆ; ಪರಾಮರ್ಶಿಸೋಣಾಗಬೇಕು!" ಎಂದು ಗಂಭೀರಧ್ವನಿಯಿಂದ ಓದಿದರು:

    "ಪಾಪೀ ಪೂಪಿ ಪುಪೂ ಪೇಪೈ ಪೃಪೋ ಪೌಪಃ ಪಪಾ ಪಪೀ |
     ಪೌಪೋ ಪಂಪಃ ಪಪಾ ಪೀಪೂ ಪೇಪುಪೈ ಪಾಪಪಂ ಪಪಃ ||"

    ಸ್ವಾಮಿಗಳವರ ಶಿಷ್ಯರಲ್ಲೊಬ್ಬರು ಗಿರ್ರನೆ ತಿರುಗಿ "ಅಯ್ಯ, ಈ ಶ್ಲೋಕಕ್ಕೆ ಅರ್ಥವೇನು?" ಎಂದರು.

    ಗುರುಗಳು ತಮ್ಮ ಆಸನದಲ್ಲಿ ಹಾಗೇ ಅಲುಗಾಡದೆ ಕುಳಿತಿದ್ದರು. ಅವರ ಮುಖದಲ್ಲಿ ಯಾವ ಹೊಸ ಭಾವವೂ ಸೂಚಿಸಲಿಲ್ಲ ಅವರ ಶಾಂತಿಯಿಂದ ತಾವು ಮೊದಲು ಆಡುತ್ತಿದ್ದ ಮಾತನ್ನೇ ಮುಂದುವರಿಸಿ ಇಂತೆಂದರು :

    "ಪಂಡಿತರು ತಮ್ಮ ಶ್ಲೋಕಕ್ಕೆ ಸಾವಕಾಶವಾಗಿ ತಾತ್ಪರ್ಯವನ್ನು ಇಡಲಿ. ಅಲ್ಲಿಯವರೆಗೆ ಪ್ರಕೃತವಿಚಾರವನ್ನು ಮುಂದುವರಿಸೋಣ. ನಾನು ಹೇಳುತ್ತಿದ್ದಂತೆ ಓಂ ಎಂಬುದೊಂದೇ ಅಕ್ಷರವು; ಅದೊಂದೇ ಎಲ್ಲವೂ ಆಗಿರುತ್ತದೆ. ಅ ಅಕ್ಷರವು ವಾಚಕವೊ, ವಾಚ್ಯವೊ? ಎರಡೂ ಅಲ್ಲ ಅದರಲ್ಲಿಯೇ ಹುರುಳಿಲ್ಲದ ಮಿಕ್ಕ ಎಲ್ಲಾ ಮಾತುಗಳೂ ಅರ್ಥಗಳೂ ಕಲ್ಫಿತವಾಗಿ ತೋರುತ್ತವೆ. ಯಾರು ಈ ಮಾತು ಅರ್ಥಗಳ ಗದ್ದಲದಲ್ಲಿ ಸೇರಿಕೊಂಡು ಹೊಡೆದಾಡುತ್ತಾರೋ ಅವರಿಗೆ ತಿರುಳಾದ ಏಕಾಕ್ಷರವು ದಕ್ಕದೆಹೋಗುತ್ತದೆ. ಯಾರು ಇವೆಲ್ಲವೂ ಮಾಯೆಯ ವಿಲಾಸವೆಂಬುದನ್ನು ಕಂಡುಕೊಳ್ಳುವರೋ ಅವರಿಗೆ ಮಾತಲ್ಲದೆ, ಅರ್ಥವಲ್ಲದೆ ಎರಡಕ್ಕೂ ರೂಪಗೊಟ್ಟಿರುವ ಆ ಅಕ್ಷರವು ಅವರ ಹೃದಯದಲ್ಲಿಯೇ ಮಿಂಚುವದು ಅದರ ಇರವಿನಲ್ಲಿ ಅದರ ಹೊಳಪಿನಲ್ಲಿ ಈ ಮಾತುಗಳೂ ಅರ್ಥಗಳೂ ಸೇರಿ ಎಂದೆಂದಿಗೂ ಮರೆಯಾಗಿಬಿಡುವವು!"

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ