ಹರಕೆ ಸಲ್ಲಿಸುವದು

    ನಾವು ನಮ್ಮ ಕಷ್ಟನಿವಾರಣೆಗಾಗಿ ಅಥವಾ ಇಷ್ಟಪ್ರಾಪ್ತಿಗಾಗಿ ಭಗವಂತನನ್ನು ಬೇಡಿಕೊಂಡು ಹರಕೆ ಸಲ್ಲಿಸುವದು ರೂಢಿಯಲ್ಲಿದೆ. ಉದಾಹರಣೆಗೆ 1) ಮಕ್ಕಳಿಲ್ಲದವರು ಸುಬ್ರಹ್ಮಣ್ಯಸ್ವಾಮಿಗೆ ಹರಕೆಮಾಡಿಕೊಂಡು ಆ ಕ್ಷೇತ್ರಕ್ಕೆ ಹೋಗಿ ನಾಗರಪ್ರತಿಷ್ಠೆ ಮಾಡಿ ಮಕ್ಕಳನ್ನು ಪಡೆಯುತ್ತಾರೆ. (2) ಹೆಣ್ಣು ಮಕ್ಕಳಿಗೆ ಮದುವೆಯಾಗಲೆಂದು ವೆಂಕಟರಮಣನಿಗೆ ಹರಕೆಹೊತ್ತು ಕಲ್ಯಾಣೋತ್ಸವಸೇವೆಮಾಡಿಸಿ ತಮ್ಮ ಕೋರಿಕೆಯನ್ನು ನೆರವೇರಿಸಿಕೊಳ್ಳುತ್ತಾರೆ. (3) ಕೆಲವು ಸಾಂಸಾರಿಕ ಕಷ್ಟ ನಿವಾರಣೆಗಾಗಿ ರಾಮಾಯಣ ಸುಂದರಕಾಂಡ ಪಾರಾಯಣಮಾಡಿ ಕೃತಾರ್ಥರಾದವರಿದ್ದಾರೆ.

    ಇತ್ತೀಚೆಗೆ ವಿಚಾರವಾದಿಗಳೆನಿಸಿಕೊಂಡ ಕೆಲವರು ಹರಕೆಮಾಡಿಕೊಳ್ಳುವದು ದೇವರಿಗೆ ಲಂಚಕೊಟ್ಟು ಕೆಲಸವನ್ನು ಸಾಧಿಸಿಕೊಳ್ಳುವ ಕ್ರಮವೆಂದು ತೆಗಳುವದೂ ಉಂಟು. ಒಂದು ರೀತಿಯಲ್ಲಿ ಇದು ಸರಿ. ಏಕೆಂದರೆ ಫಲಾಪೇಕ್ಷೆಯಿಂದ ಭಗವಂತನನ್ನು ಬಳಿಸಾರುವವರನ್ನು 'ಕೃಪಾಣ'ರೆಂದು ಗೀತೆಯಲ್ಲಿಯೇ ಕರೆದಿದೆ ಆದ್ದರಿಂದ ವಿಚಾರವಾದಿಗಳು ತಾವೇ ಗಟ್ಟಿಗರೆಂದೇನೂ ಹೆಮ್ಮೆಪಡಬೇಕಾಗಿಲ್ಲ ಅವರ ವಾದವು ಈಗಾಗಲೆ ಶಾಸ್ತ್ರದಲ್ಲೇ ಪ್ರಸ್ತಾಪಿಸಲ್ಪಟ್ಟಿದೆ. ಹೀಗೆ ಹೇಳುವವರು ಶ್ರದ್ಧೆಯುಳ್ಳವರ ಮನಸ್ಸನ್ನು ಕೆಡಿಸಬಲ್ಲರೇ ಹೊರತು ಮತ್ತೇನೂ ಉಪಕಾರ ಮಾಡಲಾರರು.

    ಆದರೆ ಶಾಸ್ತ್ರವು ಫಲಾಪೇಕ್ಷಿಗಳನ್ನು ಹೀಗೆಯೇ ಕೈಬಿಡುವದಿಲ್ಲ. ಫಲವನ್ನು ಬಯಸಿ ದೇವರನ್ನು ಬಳಿಸಾರುವದಕ್ಕಿಂತಲೂ ಎಲ್ಲಾ ಕರ್ಮಗಳಿಗೂ ಫಲಗಳಿಗೂ ಭಗವಂತನೇ ಒಡೆಯನೆಂದು ನಂಬಿ ಅವನನ್ನೇ ಪ್ರೀತಿಸಿ ಅವನಲ್ಲಿಯೇ ನಮ್ಮ ಕರ್ಮಗಳನ್ನು ಸಮರ್ಪಿಸಿದಲ್ಲಿ ಆ ಭಗವಂತನು ಅಂಥ ಭಕ್ತರಿಗೆ ಒಲಿದು ಇಷ್ಟಪ್ರಾಪ್ತಿ ಅನಿಷ್ಟಪರಿಹಾರಗಳನ್ನುಂಟುಮಾಡುವನೆಂದು ತಿಳಿಸಿ ಭಕ್ತಜನರ ಶ್ರದ್ಧೆಯನ್ನು ಬೆಳೆಯಿಸುತ್ತದೆ. ಹೇಗೆ ಭೂಮಿಯಲ್ಲಿ ಒಂದು ಕಾಳು ಧಾನ್ಯವನ್ನು ಬಿತ್ತಿದರೆ ನೂರು ಕಾಳಾಗುವದೋ ಹಾಗೆಯೇ ಭಗವಂತನಿಗೆ ಒಪ್ಪಿಸುವ 'ಹರಕೆ'ಗಳು ಅಕ್ಷಯವಾಗುವವು. ಇವು ಮಾನವನಿಗೆ ಸ್ವಾರ್ಥಬುದ್ಧಿಯನ್ನು ಕಡಿಮೆಮಾಡಿಕೊಳ್ಳಲು ಸಹ ಸಹಾಯವಾಗುತ್ತವೆ. ಹರಕೆಗಳ ಹಿನ್ನೆಲೆಯಲ್ಲಿ 'ಪಾಪಭಯ'ವೂ ಇರುತ್ತದೆಯಾಗಿ ಪಾಪಪರಿಹಾರಕ್ಕಾಗಿ ಇದು ಉಪಾಯವೂ ಆಗಲಿದೆ ಆದ್ದರಿಂದ 'ಲಂಚ'ಕ್ಕೂ 'ಹರಕೆ'ಗೂ ಕತ್ತಲೆ-ಬೆಳಕುಗಳಷ್ಟು ವೈಲಕ್ಷಣ್ಯವಿರುತ್ತದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ