ಅಗ್ನಿಯು ಸರ್ವಭಕ್ಷಕನಾದುದು

    ದೇವತೆಗಳೊಳಗೆ ಪ್ರತ್ಯಕ್ಷದೇವತೆಯು ಅಗ್ನಿಯು, ಬೆಂಕಿಯ ಶಾಖವಿಲ್ಲದೆ ಮನುಷ್ಯನ ಜೀವನವೇ ನಡೆಯುವಂತಿಲ್ಲ ನಮ್ಮ ಶರೀರದೊಳಗೂ ಆತನು ಶಾಖ ರೂಪದಿಂದಲೂ, ಜಠರಾಗ್ನಿಯಾಗಿ ತಿಂದ ಆಹಾರವನ್ನು ಜೀರ್ಣಗೊಳಿಸುವ ರೂಪದಿಂದಲೂ ಯಾವಾಗಲೂ ಇದ್ದುಕೊಂಡಿರುತ್ತಾನೆ ನಾವು ಆಡುತ್ತಿರುವ ಮಾತುಗಳಿಗೂ ಅಗ್ನಿಯೇ ಅನುಗ್ರಾಹಕನು ಇಂಥ ದೇವತೆಯು ಶಾಪಗ್ರಸ್ತನಾದುದು ಹೇಗೆ?

    ಪೂರ್ವಕಾಲದಲ್ಲಿ ಭೃಗುವೆಂಬ ಮಹರ್ಷಿಯಿದ್ದರು ಪುಲೋಮೆ ಧರ್ಮಪತ್ನಿಯು, ಕಾಲಕ್ರಮದಲ್ಲಿ ಪುಲೋಮೆಯು ಭೃಗುವಿನಿಂದ ಗರ್ಭವನ್ನು ಧರಿಸಿದಳು. ಒಂದು ದಿನ ತೀರ್ಥಸ್ನಾನಕ್ಕಾಗಿ ಭೃಗುವು ಹೊರಗೆ ಹೋಗಿದ್ದಾಗ ಆ ಸಮಯವನ್ನು ಸಾಧಿಸಿ ಪೊಲೋಮ ಎಂಬ ಹೆಸರಿನ ಒಬ್ಬ ರಾಕ್ಷಸನು ಆಶ್ರಮಕ್ಕೆ ಬಂದನು ಪುಲೋಮೆಯು ಆತನನ್ನು ಅರ್ಘ್ಯಪಾದ್ಯಕಂದಮೂಲಫಲಗಳಿಂದ 'ಸತ್ಕರಿಸಿ ಕುಳ್ಳಿರಿಸಿದಳು. ಪುಲೋಮನಿಗೆ ಭೃಗುವಿನಮೇಲೆ ಒಂದು ವಿಚಾರದಲ್ಲಿ ದ್ವೇಷವಿತ್ತು, ಅದೇನೆಂದರೆ : ಪುಲೋಮೆಯ ತಂದೆಯು ಆಕೆಯನ್ನು ಭೃಗುವಿಗೆ ಮದುವೆಮಾಡಿಕೊಡುವ ಮುಂಚೆಯೇ ಈ ಪುಲೋಮನು ಅವಳನ್ನು ವರಿಸಿದ್ದನು. ಹೀಗೆ ತನ್ನವಳಾಗಬೇಕಾಗಿದ್ದವಳನ್ನು ಈ ಋಷಿಯು ಸ್ವೀಕರಿಸಿದನಲ್ಲ! ಎಂಬ ಹಗೆತನವು ಆ ರಾಕ್ಷಸನಿಗೆ ಇತ್ತು, ಆದ್ದರಿಂದ ಹೇಗಾದರೂ ಮಾಡಿ ಈಕೆಯನ್ನು ಅಪಹರಿಸಿಕೊಂಡು ಹೋಗಬೇಕೆಂದು ಆತನು ಮನಸ್ಸುಮಾಡಿದನು ಆದರೆ ತನ್ನ ಅಭಿಪ್ರಾಯವನ್ನು ಮತ್ತೊಬ್ಬರಲ್ಲಿ ತಿಳಿಸಿ ಮುಂದುವರಿಯೋಣವೆಂತ ಅಗ್ನಿಹೋತ್ರಶಾಲೆಯಲ್ಲಿದ್ದ ಅಗ್ನಿದೇವನೊಡನೆ ಹೀಗೆಂದು ಕೇಳಿದನು : "ಅಗ್ನಿದೇವ, ಈಕೆಯನ್ನು ಮೊದಲು ನಾನು ವರಣಮಾಡಿದ್ದೆನು ಆದರೆ ಇವಳ ತಂದೆಯು ನನ್ನನ್ನು ಕಡೆಗಣಿಸಿ ಭೃಗುವಿಗೆ ಕೊಟ್ಟಿರುತ್ತಾನೆ; ಇದು ಸರಿಯಲ್ಲ. ಈಗ ಇವಳು ನನ್ನ ಹೆಂಡತಿಯೋ? ಭೃಗುವಿನ ಹೆಂಡತಿಯೊ? ನೀನು ನಿಜವಾಗಿ ಹೇಳು."

    ಆಗ ಅಗ್ನಿದೇವನು 'ಈಕೆಯು ಭೃಗುವಿನ ಪತ್ನಿಯೇ ಹೌದು' ಎಂದನು, ಆದರೆ ರಾಕ್ಷಸನು 'ಅದು ಹೇಗೆ?' ಎಂದು ಕೇಳಿದಾಗ ಅಗ್ನಿಯು "ಅಯ್ಯ, ನೀನೇನೋ ಮೊದಲು ಈಕೆಯನ್ನು ಒಪ್ಪಿಕೊಂಡದ್ದು ಸರಿ, ಆದರೆ ಅಷ್ಟರಿಂದಲೇ ಇವಳು ನಿನ್ನ ಹೆಂಡತಿಯಾಗುವದಿಲ್ಲ. ಇವಳೂ ಮದುವೆಗೆ ಮುಂಚೆ ತನ್ನ ತಂದೆಯ ಅಧೀನಕ್ಕೆ ಒಳಪಟ್ಟವಳು, ಆದ್ದರಿಂದ ತಂದೆಯು ಇವಳನ್ನು ಯಾರಿಗೆ ಕೊಡುತ್ತಾನೋ ಅವನ ಪತ್ನಿಯಾಗುವಳೇ ಹೊರತು ಹಿಂದೆ ಒಪ್ಪಿದ್ದರಿಂದ ಅಲ್ಲ; ಮತ್ತು ನನ್ನನ್ನೇ ಮುಂದಿಟ್ಟುಕೊಂಡು (ಅಗ್ನಿಸಾಕ್ಷಿಯಾಗಿ) ನಡೆದಿರುವ ಈ ಕನ್ಯಾದಾನದಲ್ಲಿ ಈಕೆಯು ಭೃಗುವಿಗೇ ಸೇರಿದವಳೆಂಬುದು ಖಚಿತವಾದ ವಿಷಯ" ಎಂದನು. ಆಗ ರಾಕ್ಷಸನು ಅಗ್ನಿಯ ಮಾತನ್ನು ಲೆಕ್ಕಿಸದೆ ಬಲಾತ್ಕಾರದಿಂದ ಆಕೆಯನ್ನು ಕದ್ದೊಯ್ದನು, ಹಾಗಾದರೂ ಆಕೆಯು ಅವನಿಗೆ ದಕ್ಕಲಿಲ್ಲ ಏಕೆಂದರೆ ಆ ಸಂದರ್ಭದಲ್ಲಿ ಗಾಬರಿಯಿಂದ ಅವಳ ಗರ್ಭದಿಂದ ಜಾರಿದ ಶಿಶುವು ರಾಕ್ಷಸನನ್ನು ನಿಟ್ಟಿಸಿನೋಡಿದಾಗ ಅವನು ಸುಟ್ಟುಬೂದಿಯಾಗಿಬಿಟ್ಟನು.

    ಅನಂತರ ಮಗುವನ್ನೆತ್ತಿಕೊಂಡು ಪುಲೋಮೆಯು ಮತ್ತೆ ಗಂಡನಬಳಿಗೇ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿದಳು. ಭೃಗುವು ಕೋಪದಿಂದ 'ನೀನು ನನ್ನ ಪತ್ನಿಯಾಗಿರುವೆ' ಎಂಬ ವಿಚಾರವು ರಾಕ್ಷಸನಿಗೆ ಹೇಗೆ ತಿಳಿಯಿತು? ನನ್ನ ಪರವಾಗಿ ತೀರ್ಪುಕೊಟ್ಟವರು ಯಾರು'? ಎಂದು ಕೇಳಲು ಆಕೆಯು ನಡುಗುತ್ತಾ ಅಗ್ನಿದೇವನನ್ನು ತೋರಿಸಿದಳು ಕೂಡಲೆ ಭೃಗುವು ಹಿಂದುಮುಂದು ನೋಡದೆ 'ನೀನು ಸರ್ವಭಕ್ಷಕನಾಗು' ಎಂದು ಅಗ್ನಿಗೆ ಶಾಪವನ್ನು ಕೊಟ್ಟೇಬಿಟ್ಟನು.

    ಆಗ ಅಗ್ನಿಯು 'ಬ್ರಹ್ಮನ್, ಏನು ಕೆಲಸಮಾಡಿದಿರಿ? ನಾನು ಕಂಡದ್ದನ್ನು ಹೇಳಿದ್ದೇ ತಪ್ಪಾಯಿತೆ? ಪ್ರತ್ಯಕ್ಷವಾಗಿ ಕಂಡವನನ್ನು 'ಸಾಕ್ಷಿ' ಎನ್ನುತ್ತಾರೆ. ಸಾಕ್ಷಿಯ ಸಾಕ್ಷ್ಯವನ್ನು ಸುಳ್ಳಾಗಿ ನುಡಿದರೆ ಅವನ ಕುಲವೆಲ್ಲ ಏಳು ತಲೆಗಳವರೆಗೂ ನಿರ್ನಾಮವಾಗಿ ಹೋಗುವದೆಂದು ಧರ್ಮಶಾಸ್ತ್ರಗಳಲ್ಲಿದೆ. ಹೀಗಿರುವಲ್ಲಿ ನನ್ನ ತಪ್ಪೇನಿದೆ'? ಎಂದು ಕೇಳಿದನು. ಕಡೆಗೆ ಅಗ್ನಿಯು ಯಾರಿಗೂ ಮುಖವನ್ನೇ ತೋರಿಸದೆ ಅಂತರ್ಧಾನನಾಗಿಬಿಟ್ಟನು. ಇದರಿಂದ ದೇವತೆಗಳೆಲ್ಲರೂ ಯಜ್ಞಯಾಗಾದಿಗಳಿಲ್ಲದೆ ಉಪವಾಸಬೀಳುವಂತಾಯಿತು. ಬ್ರಹ್ಮನವರೆಗೂ ಈ ದೂರು ಒಯ್ಯಲ್ಪಟ್ಟಿತು ಕಡೆಗೆ ಬ್ರಹ್ಮನು ಅಗ್ನಿದೇವನನ್ನು ಕರೆಯಿಸಿ 'ಋಷಿಗಳ ಶಾಪವನ್ನು ಪೂರ್ಣವಾಗಿ ಪರಿಹರಿಸುವದಾಗಲಾರದು; ಆದರೂ ಸಾಕಷ್ಟು ಕಡಿಮೆಮಾಡೋಣ' ಎಂದು ಹೇಳಿ 'ಅಗ್ನಿಯೆ, ನಿನ್ನ ತಳಮುಖವಾದ ಜ್ಞಾಲೆಗಳಿಂದ ಹಾಗೂ ಶವದಮೇಲಿರುವ ಕ್ರವ್ಯಾದವೆಂಬ ಶರೀರದಿಂದ ಮಾತ್ರದಿಂದ ಸರ್ವಭಕ್ಷಕನಾಗಿರು ಉಳಿದ ಸಂದರ್ಭಗಳಲ್ಲಿ ನೀನು ಪವಿತ್ರನು ಎಂದಿನಂತೆ ದೇವತೆಗಳಿಗಾಗಿ ಹವಿಸ್ಸನ್ನು ಸ್ವೀಕರಿಸಬೇಕು' ಎಂದು ವ್ಯವಸ್ಥೆಮಾಡಿದನು. ಎಲ್ಲರಿಗೂ ಸಂತೋಷವಾಯಿತು ತಾಯಿಯ ಉದರದಿಂದ ಜಾರಿಬಿದ್ದ ಶಿಶುವಿಗೆ 'ಚ್ಯವನ'ನೆಂದೇ ಹೆಸರಾಯಿತು.

    ಅಂತೂ ದೇವತೆಯೇ ಆದರೂ ಬಂದದ್ದನ್ನು ಅನುಭವಿಸಲೇಬೇಕೆಂದು ಇದರಿಂದ ಸಿದ್ಧವಾಯಿತು. ಹಾಗಾದರೂ ಅಗ್ನಿಯು ಸತ್ಯಪಕ್ಷಪಾತಿಯಾಗಿದ್ದುದರಿಂದ ತನಗೆ ಬಂದ ಶಾಪವನ್ನು ಕಳೆದುಕೊಂಡು ಪೂಜ್ಯನಾಗಿಯೇ ಉಳಿದನು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ