ರಾಮಕೃಷ್ಣಪರಮಹಂಸರು

    ಇಂದು (10-3-2016) ಶ್ರೀರಾಮಕೃಷ್ಣ ಪರಮಹಂಸರ ಜನ್ಮದಿನ. ಅವರ ಸುಪ್ರಸಿದ್ಧಶಿಷ್ಯರಾದ ವಿವೇಕಾನಂದಸ್ವಾಮಿಗಳ ಮೂಲಕ ಅವರ ಕೀರ್ತಿಯು ನಾಗರಿಕಭೂಮಂಡಲದಲ್ಲೆಲ್ಲ ಹರಡಿರುತ್ತದೆ. ಅವರ ಜೀವನಚರಿತ್ರೆಯನ್ನು ಮಾಕ್ಸಮುಲ್ಲರ್ ಮುಂತಾದ ಪಾಶ್ಚಾತ್ತ್ಯವಿದ್ವಾಂಸರೂ ಕೊಂಡಾಡಿ ತಮ್ಮ ಮೆಚ್ಚುಗೆಯನ್ನು ತೋರಿಸಿರುತ್ತಾರೆ. ನವನಾಗರಿಕತೆಯಲ್ಲಿ ಮುಳುಗಿತೇಲುತ್ತಿರುವ ಈಗಿನ ಜನರು ಅವರ ಸ್ಮರಣೆಯಿಂದ ತಿಳಿದುಕೊಳ್ಳಬೇಕಾದದ್ದು ಏನಾದರೂ ಇದೆಯೆ?

    ಶ್ರೀರಾಮಕೃಷ್ಣರಿಗೆ ಈಗಿನ ಅರ್ಥದಲ್ಲಿ ಅಂಥ ಹೆಚ್ಚಿನ ವಿದ್ಯಾಬ್ಯಾಸವೇನೂ ಆಗಿರಲಿಲ್ಲ. ರಾಮಾಯಣ ಮಹಾಭಾರತಗಳ ಶ್ರವಣವೇ ಅವರಿಗೆ ಧೈರ್ಯ, ಸ್ಥೈರ್ಯ, ಭಕ್ತಿ - ಮುಂತಾದ ಸದ್ಗುಣಗಳನ್ನು ತಂದುಕೊಟ್ಟವಂತೆ. ನಮ್ಮ ಬಾಲಕರಿಗೆ ರಾಮ, ಸೀತೆ, ಕೃಷ್ಣ, ಅರ್ಜುನ - ಮುಂತಾದ ಹೆಸರುಗಳು ಮರೆತು ಹೋಗದಂತೆ ರಾಮಾಯಣಮಹಾಭಾರತಗಳ ಕಥೆಗಳ ಸಂಗ್ರಹವನ್ನೂ ಅವುಗಳಲ್ಲಿ ಪ್ರತಿಪಾದಿಸಿರುವ ಸುಭಾಷಿತಗಳನ್ನೂ ಜ್ಞಾನಭಕ್ತಿವೈರಾಗ್ಯಾದಿಭೋಧಕವಚನಗಳನ್ನೂ ಸಂಗ್ರಹಿಸಿ ಬೋಧಿಸುವ ಗ್ರಂಥಗಳನ್ನು ಬರೆದು ಚಿಕ್ಕವರ ಕೈಯಲ್ಲಿಟ್ಟರೆ ನಮ್ಮ ದೇಶದ ಸಂಸ್ಖೃತಿಯ ಬೀಜವನ್ನು ಅವರ ಹೃದಯದಲ್ಲಿ ನೆಟ್ಟಂತೆ ಆಗಲಾರದೆ?

    ಚಿಕ್ಕಂದಿನಿಂದಲೇ ಅವರು ಸಾಧುಸಂನ್ಯಾಸಿಗಳೊಡನೆಯೂ ಬೈರಾಗಿಗಳೊಡನೆಯೂ ಬೆರೆತು ಮಾಡಿದ ಸಂಭಾಷಣೆಯಿಂದ ಅವರ ದೈವಭಕ್ತಿಯು ಮೊಳೆತು ಚಿಗುರಿತು. ಪ್ರಕೃತಿಸೌಂದರ್ಯವನ್ನು ನೋಡಿ ನಲಿಯುವದು, ಯಕ್ಷಗಾನದಂಥ ಹಳ್ಳಿಯ ನಾಟಕಗಳಲ್ಲಿ ಪಾತ್ರವನ್ನು ವಹಿಸುವದು, ಯಾತ್ರೆಯಲ್ಲಿ ಮಾಡುವ ಭಗವಂತನ ಕೀರ್ತನೆಯಲ್ಲಿ ಭಾಗವನ್ನು ವಹಿಸುವದು - ಇವುಗಳಿಂದ ಅವರಿಗೆ ಅಂತಃಕರಣವು ಅಂತರ್ಮುಖವಾಗಿ ಸರ್ವಕ್ಕೂ ಆತ್ಮನಾದ ಭಗವಂತನ ದರ್ಶನದಿಂದ ಆನಂದವನ್ನು ಪಡೆಯುವದಕ್ಕೆ ದಾರಿಯಾಯಿತು. ವಿಜ್ಞಾನಶಾಸ್ತ್ರದಿಂದ ಬಾಹ್ಯಪ್ರಕೃತಿಯ ರಹಸ್ಯಗಳನ್ನು ಭೇದಿಸುವ ಜಾಣ್ಮೆಯ ಜೊತೆಗೆ ಬಾಹ್ಯಜಗತ್ತಿನ ಸ್ಥಿತಿಪ್ರಲಯಗಳಿಗೆ ಮೂಲನಾಗಿರುವ ಪರಮಾತ್ಮನ ಸ್ಮರಣೆಯಿಂದ ಆನಂದವನ್ನೂ ತಂದುಕೊಳ್ಳುವದಕ್ಕೆ ಈ ಮಹನೀಯರ ಉದಾಹರಣೆಯ ಮೂಲಕ ನಮ್ಮ ಬಾಲಕರಿಗೆ ಅವಕಾಶವನ್ನು ಕಲ್ಪಿಸಿಕೊಟ್ಟರೆ?

    ದಕ್ಷಿಣೇಶ್ವರದ ಕಾಳೀದೇವಾಲಯದಲ್ಲಿ ನಡೆಯುತ್ತಿದ್ದ ನಿತ್ಯಕಟ್ಟಲೆಯ ಪೂಜಾವಿಧಿಯ ದರ್ಶನದಿಂದಲೇ ಅವರಿಗೆ ಭಜನೆ, ತಪಸ್ಸು, ಧ್ಯಾನ - ಮುಂತಾದವುಗಳ ಪ್ರೇಮವು ಬೆಳೆದು ದೇವತಾದರ್ಶನವಾಯಿತಲ್ಲವೆ ವೈಷ್ಣವಪದ್ಧತಿಯ ಸಾಧನದಿಂದ ಅವರಿಗೆ ಭಕ್ತಿಯ ವಿವಿಧಭಾವಗಳ ಪರಿಚಯವಾಯಿತಂತೆ. ಭಕ್ತಿಯಿಂದಲೇ ಭಗವಂತನನ್ನು ಅರಿತು, ಆತನ ದರ್ಶನವನ್ನು ಹೊಂದಿ, ಆತನ ಸಾಯುಜ್ಯವನ್ನೇ ಪಡೆದುಕೊಳ್ಳಬಹುದೆಂಬ ಅಧ್ಯಾತ್ಮರಹಸ್ಯದ ಕಡೆಗೆ ನಮ್ಮ ಜನರ ಮನಸ್ಸನ್ನು ಸೆಳೆಯುವದು ಇವರ ನೆಪದಿಂದ ಯುಕ್ತವಾಗಲಾರದೇನು?

    ಆ ಮಹನೀಯರು ಅದ್ವೈತಸಂಪ್ರದಾಯದ ಸಂನ್ಯಾಸಿಗಳೊಬ್ಬರ ಉಪದೇಶದಿಂದ ನಿರ್ವಿಶೇಷಪರಮಾತ್ಮನ ಸಾಕ್ಷಾತ್ಕಾರವನ್ನು ಹೊಂದಿ ನಿರ್ವಿಕಲ್ಪಕಸಮಾಧಿಯಲ್ಲಿಯೇ ದೀರ್ಘಕಾಲವನ್ನು ಕಳೆಯುವ ಪರಮಲಾಬವನ್ನು ಹೊಂದಿದರಂತೆ. ಹೊಸಹೊಸ ಭೌತಿಕವಿಜ್ಞಾನದ ಶೋಧಗಳನ್ನು ಮಾಡುತ್ತಾ ಚಂದ್ರಲೋಕಕ್ಕೆ ಕೂಡ ಹಾರಿಹೋಗಿಬರುವ ಸಿದ್ಧಿಗಳನ್ನು ಪಡೆಯುವದಕ್ಕೆ ಸಂನದ್ಧವಾಗಿರುವ ಈಗಿನ ಯುಗದಲ್ಲಿ ಸರ್ವಭೂತಗಳೂ ನಮ್ಮ ಆತ್ಮನೆಂಬುವರ ಸಾಕ್ಷಾತ್ಕಾರವನ್ನು ಪಡೆಯಬಲ್ಲ ಒಬ್ಬಿಬ್ಬರು ಮಹಾತ್ಮರು ಭೂಮಂಡಲದಲ್ಲಿ ಅವತರಿಸುವಂತಾದರೆ ಈಗಿನ ಜನಾಂಗಗಳ ಪರಸ್ಪರರಾಗದ್ವೇಷಗಳು ಕಡಿಮೆಯಾಗಿ ಮಾನವಜಾಗಿಯ ವಿನಾಶವೇ ಸುನಿಹಿತವಾಗಿದೆ ಎಂಬ ಭೀತಿಯ ಬಿರುಗಾಳಿಯು ಸ್ವಲ್ಪಮಟ್ಟಿಗಾದರೂ ಶಾಂತವಾಗದೇನು?

    ಓದುಬರಹಲೆಕ್ಕಾಚಾರಗಳಲ್ಲಿ ಅಷ್ಟೇನೂ ನಿಪುಣರಲ್ಲದ ಆ ಮಹಾತ್ಮರ ಬಳಿಗೆ ಕೇಶವಚಂದ್ರಸೇನರು, ಪ್ರಕಾಶಚಂದ್ರಮುಜುಮ್ದಾರ್, ಶಿವನಾಥಶಾಸ್ತ್ರಿ, ವಿಜಯ ಕೃಷ್ಣಗೋಸ್ವಾಮಿ, ದೇವೇಂದ್ರನಾಥಟಾಕೂರ್, ಈಶ್ವರಚಂದ್ರವಿದ್ಯಾಸಾಗರ, ಬಂಕಿಂಚಂದ್ರಚಟರ್ಜಿ, ಮೊದಲಾದ ಮಹಾಮಹಾ ಸುಶಿಕ್ಷಿತರೂ ಬಂದು ಗೌರವಿಸುತ್ತಿದ್ದರೆಂಬುದನ್ನು ಕೇಳಿದರೆ, ಈಗಿನ ಭೌತಿಕವಿದ್ಯೆಯು ನಮಗೆ ಕೊಡಬಹುದಾದ ಉಚ್ಚಸ್ಥಾನಕ್ಕಿಂತಲೂ ಮಹನೀಯವಾದ ಮತ್ತೊಂದು ವಿದ್ಯೆಯೂ ಇದೆಯೆಂದೂ ವಿಶ್ವಶಾಂತಿಗೆ ಆ ವಿದ್ಯೆಯ ನೆರವು ಅತ್ಯವಶ್ಯವೆಂದೂ ನಮ್ಮ ಮನಸ್ಸಿಗೆ ತಟ್ಟುವದಿಲ್ಲವೆ? ಇದು ನಿಜವಾಗಿದ್ದರೆ ಭರತಖಂಡದ ಭಾಗ್ಯನಿಧಿಯಾದ ಆ ವಿದ್ಯೆಯ ಪರಿಚಯಕ್ಕೂ ನಮ್ಮ ಮಕ್ಕಳಿಗೆ ಅವಕಾಶವನ್ನು ಕಲ್ಪಿಸಿಕೊಡುವದು ನಮ್ಮ ಅವಶ್ಯಕರ್ತವ್ಯವೆಂಬುದನ್ನು ಶ್ರೀರಾಮಕೃಷ್ಣಪರಮಹಂಸರ ದಿವ್ಯಚರಿತ್ರೆಯ ಸ್ಮರಣೆಯಿಂದ ಮನದಂದುಕೊಳ್ಳಬಹುದಲ್ಲವೆ?

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ