ದೇವಿಮಹಾತ್ಮ್ಯ - ಎರಡನೆಯ ಅಧ್ಯಾಯ - ಮಹಿಷಾಸುರ ಸೈನ್ಯವಧೆ

ಧ್ಯಾನಮ್ ||
ಅಕ್ಷಸ್ರಕ್ಪರಶುಂ ಗದೇಷುಕುಲಿಶಂ ಪದ್ಮಂ ಧನುಷ್ಕಂಡಿಕಾಂ
ದಂಡಂ ಶಕ್ತಿಮಸಿಂ ಚ ಚರ್ಮಜಲಜಂ ಘಂಟಾಂ ಸುರಾಭಾಜನಮ್ |
ಶೂಲಂ ಪಾಶಸುದರ್ಶನೇ ಚ ದಧತೀಂ ಹಸ್ತೈಃ ಪ್ರಸನ್ನಾನನಾಂ
ಸೇವೇ ಸೈರಿಭಮರ್ದಿನೀಮಿಹ ಮಹಾಲಕ್ಷ್ಮೀಂ ಸರೋಜಸ್ಥಿತಾಮ್ ||1||

ಅಕ್ಷರಮಾಲೆ (ಜಪಸರ), ಕೊಡಲಿ, ಗದೆ, ಬಾಣ, ವಜ್ರಾಯುಧ, ಪದ್ಮ, ಬಿಲ್ಲು, ಕಮಂಡಲು, ಕೋಲು, ಶಕ್ತ್ಯಾಯುಧ, ಕತ್ತಿ, ಗುರಾಣಿ, ಶಂಭ, ಘಂಟೆ, ಸುರಾಪಾತ್ರೆ, ತ್ರಿಶೂಲ, ಹಗ್ಗ, ಸುದರ್ಶನಚಕ್ರ - ಇವುಗಳನ್ನು ಕೈಗಳಿಂದ ಹಿಡಿದಿರುವ, ಪ್ರಸನ್ನಮುಖಿಯಾದ, ಕಮಲನಿವಾಸಿನಿಯೂ ಸೈರಭ (ನೆಂಬ ರಾಕ್ಷಸನನ್ನು) ಸಂಹಾರಮಾಡುತ್ತಿರುವವಳೂ ಆದ ಶ್ರೀ ಮಹಾಲಕ್ಷ್ಮಿಯನ್ನು ಭಜಿಸುವೆನು.

ಓಂ ಹ್ರೀಂ ಋಷಿರುವಾಚ -
ದೇವಾಸುರಮಭೂದ್ಯುದ್ಧಂ ಪೂರ್ಣಮಬ್ದಶತಂ ಪುರಾ |
ಮಹಿಷೇಸುರಾಣಾಮಧಿಪೇ ದೇವಾನಾಂ ಚ ಪುರಂದರೇ ||2||
ತತ್ರಾಸುರೈರ್ಮಹಾವೀರ್ಯೈರ್ದೇವಸೈನ್ಯಂ ಪರಾಜಿತಮ್ |
ಜಿತ್ವಾಚ ಸಕಲಾನ್ ದೇವಾನಿಂದ್ರೋಭೂನ್ಮಹಿಷಾಸುರಃ ||3||

ಋಷಿಯಿಂತೆಂದನು : ಹಿಂದೆ ಒಂದು ನೂರು ವರ್ಷಗಳ ಕಾಲ ದೇವತೆಗಳಿಗೂ ರಾಕ್ಷಸರಿಗೂ ಯುದ್ಧವಾಯಿತು. ಆಗ ಮಹಿಷನು ರಾಕ್ಷಸರಿಗೊಡೆಯನೂ ಇಂದ್ರನು ದೇವತೆಗಳಿಗೊಡೆಯನೂ ಆಗಿದ್ದರು ಆಗ್ಗೆ ಮಹಾಬಲಶಾಲಿಗಳಾದ ರಾಕ್ಷಸರಿಂದ ದೇವತೆಗಳ ಸೈನ್ಯವು ಸೋಲಿಸಲ್ಪಟ್ಟಿತು ಮಹಿಷಾಸುರನು ಸಕಲದೇವತೆಗಳನ್ನೂ ಗೆದ್ದು (ತಾನೇ) ಇಂದ್ರನಾದನು.

ತತಃ ಪರಾಜಿತಾ ದೇವಾಃ ಪದ್ಮಯೋನಿಂ ಪ್ರಜಾಪತಿಮ್ |
ಪುರಸ್ಕೃತ್ಯ ಗತಾಸ್ತತ್ರ ಯತ್ರೇಶಗರುಡಧ್ವಜೌ  ||4||
ಯಥಾವೃತ್ತಂ ತಯೋಸ್ತದ್ವನ್ಮಹಿಷಾಸುರಚೇಷ್ಟಿತಮ್ |
ತ್ರಿದಶಾಃ ಕಥಯಾಮಾಸುರ್ದೇವಾಭಿಭವವಿಸ್ತರಮ್ ||5||

ಅನಂತರ ಸೋತುಹೋದ ದೇವತೆಗಳು ಪದ್ಮದಿಂದ ಉತ್ಪನ್ನನಾದ ಬ್ರಹ್ಮನನ್ನು ಮುಂದಿರಿಸಿಕೊಂಡು ಶ್ರೀಮಹಾದೇವನೂ ಮಹಾವಿಷ್ಣುವೂ ಇದ್ದಂಥ ಸ್ಥಳಕ್ಕೆ ಹೋದರು ಅವರಿಬ್ಬರೆದುರಿಗೆ ದೇವತೆಗಳು ನಡೆದಂತೆ ಮಹಿಷಾಸುರನ ದುಷ್ಕೃತ್ಯಗಳನ್ನೂ ದೇವತೆಗಳಿಗಾದ ಸೋಲನ್ನೂ ವಿವರವಾಗಿ ಹೇಳಿದರು.

ಸೂರ್ಯೇಂದ್ರಾಗ್ನ್ಯನಿಲೇಂದೂನಾಂ ಯಮಸ್ಯ ವರುಣಸ್ಯ ಚ |
ಅನ್ಯೇಷಾಂ ಚಾಧಿಕಾರಾನ್ ಸ ಸ್ವಯಮೇವಾಧಿತಿಷ್ಠತಿ ||6||
ಸ್ವರ್ಗಾನ್ನಿರಾಕೃತಾಃ ಸರ್ವೇ ತೇನ ದೇವಗಣಾ ಭುವಿ |
ವಿಚರಂತಿ ಯಥಾ ಮರ್ತ್ಯಾ ಮಹಿಷೇಣ ದುರಾತ್ಮನಾ ||7||
ಏತದ್ವಃ ಕಥಿತಂ ಸರ್ವಮಮರಾರಿವಿಚೇಷ್ಟಿತಮ್ |
ಶರಣಂ ಚಃ ಪ್ರಪನ್ನಾಃ ಸ್ಮೋ ವಧಸ್ತಸ್ಯ ವಿಚಿಂತ್ಯತಾಮ್ ||8||

'ಸೂರ್ಯ, ಇಂದ್ರ, ಅಗ್ನಿ, ವಾಯು, ಚಂದ್ರ, ಯಮ, ವರುಣ - ಇನ್ನೂ ಉಳಿದ ದೇವತೆಗಳೆಲ್ಲರ ಅಧಿಕಾರವನ್ನೂ ಅವನು ತಾನೇ (ಕಸಿದು) ನಡೆಯಿಸುತ್ತಿದ್ದಾನೆ ದುರಾತ್ಮನಾದ ಆ ಮಹಿಷನು ದೇವತೆಗಳನ್ನೆಲ್ಲ ಸ್ವರ್ಗದಿಂದ ಓಡಿಸಿಬಿಟ್ಟಿದ್ದಾನೆ (ಸ್ಥಾನಭ್ರಷ್ಟರಾದ) ಅವರು ಸಾಮಾನ್ಯ ಮನುಷ್ಯರಂತೆ ಸಂಚರಿಸುತ್ತಿದ್ದಾರೆ ದೇವ ಶತ್ರುವಾದ ಆತನ ಕಾರ್ಯಗಳೆಲ್ಲವನ್ನೂ ಪೂರ್ತಿಯಾಗಿ ನಿಮ್ಮಗಳ ಮುಂದೆ ಹೇಳಿದ್ದೇವೆ ನಾವೆಲ್ಲರೂ ನಿಮಗೆ ಶರಣಾಗತರಾಗಿರುತ್ತೇವೆ ಅವನ ವಧೋಪಾಯವನ್ನು ದಯವಿಟ್ಟು ಆಲೋಚಿಸಬೇಕು - (ಎಂದರು).

ಇತ್ಥಂ ನಿಶಮ್ಯ ದೇವಾನಾಂ ವಚಾಂಸಿ ಮಧುಸೂಧನಃ |
ಚಕಾರ ಕೋಪಃ ಶಂಭುಶ್ಚಭ್ರುಕುಟೀಕುಟಿಲಾನನೌ ||9||
ತತೋತಿಕೋಪಪೂರ್ಣಸ್ಯ ಚಕ್ರಿಣೋ ವದನಾತ್ ತತಃ |
ನಿಶ್ಚಕ್ರಾಮ ಮಹತ್ತೇಜೋ ಬ್ರಹ್ಮಣಃ ಶಂಕರಸ್ಯ ಚ ||10||
ಅನ್ಯೇಷಾಂ ಚೈವ ದೇವಾನಾಂ ಶಕ್ರಾದೀನಾಂ ಶರೀರತಃ |
ನಿರ್ಗತಂ ಸಮಹತ್ತೇಜಃ ತಚ್ಚೈಕ್ಯಂ ಸಮಗಚ್ಛತ ||11||

ಮಹಾವಿಷ್ಣುವು ದೇವತೆಗಳ ಮಾತನ್ನು ಹೀಗೆ ಕೇಳಿದವನಾಗಿ ಕೋಪಗೊಂಡನು. ಈಶ್ವರನೂ ಸಿಟ್ಟಾದನು. ಹುಬ್ಬುಗಳನ್ನು ಗಂಟಿಕ್ಕಿದವರಾದರು ಅನಂತರ ಬಹಳವಾಗಿ ಕೋಪಗೊಂಡ ವಿಷ್ಣುವಿನ ಮುಖದಿಂದಲೂ ಬ್ರಹ್ಮ, ಈಶ್ವರ ಮುಖಗಳಿಂದಲೂ ಮತ್ತು ಉಳಿದ ಇಂದ್ರನೇ ಮುಂತಾದ ದೇವತೆಗಳ ಶರೀರಗಳಿಂದಲೂ ಮಹತ್ತಾದ ತೇಜಸ್ಸು ಹೊರಬಿದ್ದಿತು ಹಾಗೂ ಅದೆಲ್ಲವೂ ಒಂದಾಯಿತು.

ಅತೀವ ತೇಜಸಃ ಕೂಟಂ ಜ್ವಲಂತಮಿವ ಪರ್ವತಮ್ |
ದದೃಶುಸ್ತೇ ಸುರಾಸ್ತತ್ರ ಜ್ವಾಲಾವ್ಯಾಪ್ತದಿಗಂತರಮ್ ||12||
ಅತುಲಂ ತತ್ರ ತತ್ತೇಜಃ ಸರ್ವದೇವಶರೀರಜಮ್ |
ಏಕಸ್ಥಂ ತದಭೂನ್ನಾರೀ ವ್ಯಾಪ್ತಲೋಕತ್ರಯಂ ತ್ವಿಷಾ
ಯದಭೂತ್ ಶಾಂಭವಂ ತೇಜಃ ತೇನಾಜಾಯತ ತನ್ಮುಖಮ್ ||13||

ಉರಿಯುತ್ತಿರುವ ಪರ್ವತದಂತಿರುವ ಹೆಚ್ಚಿನ ಆ ತೇಜೋ ರಾಶಿಯು ತನ್ನ ಜ್ಞಾಲೆಗಳಿಂದ ದಿಕ್ಕಿನ ಕೊನೆಗಳನ್ನು ವ್ಯಾಪಿಸಿಕೊಂಡದ್ದನ್ನು ಅಲ್ಲಿ ದೇವತೆಗಳು ಕಂಡರು. ಎಲ್ಲಾ ದೇವತೆಗಳ ಶರೀರದಿಂದ ಹೊರಬಿದ್ದ ಅಪರಿಮಿತವಾದ ಆ ಬೆಳಕು ಒಂದಾಗಿ ಆಗ ಒಬ್ಬ ಸ್ತ್ರೀಯಾಯಿತು ಆಕೆಯು ತನ್ನ ಕಾಂತಿಯಿಂದ ಮೂರು ಲೋಕಗಳನ್ನೂ ವ್ಯಾಪಿಸಿಕೊಂಡಳು ಈಶ್ವರನ ತೇಜಸ್ಸೇನಿತ್ತೋ ಅದರಿಂದ ಆಕೆ ಮುಖವು ಸೃಷ್ಟಿಯಾಯಿತು.

ಯಾಮ್ಯೇನ ಚಾಭವನ್ ಕೇಶಾ ಬಾಹವೋ ವಿಷ್ಣು ತೇಜಸಾ |
ಸೌಮ್ಯೇನ ಸ್ತನಯೋರ್ಯುಗ್ಮಂ ಮಧ್ಯಂ ಚೈಂದ್ರೇಣ ಚಾಭವತ್ ||14||
ವಾರುಣೇನ ಚ ಜಂಘೋರೂ ನಿತಂಬಸ್ತೇಜಸಾ ಭುವಃ |
ಬ್ರಹ್ಮಣಸ್ತೇಜಸಾ ಪಾದೌ ತದಂಗುಲ್ಯೋರ್ಕತೇಜಸಾ ||15||
ವಸೂನಾಂ ಚ ಕರಾಂಗುಲ್ಯಃ ಕೌಬೇರೇಣ ಚ ನಾಸಿಕಾ |
ತಸ್ಯಾಸ್ತು ದಂತಾಃ ಸಂಭೂತಾಃ ಪ್ರಾಜಾಪತ್ಯೇನ ತೇಜಸಾ ||16||
ನಯನತ್ರಿತಯಂ ಜಜ್ಞೇ ತಥಾ ಪಾವಕತೇಜಸಾ |
ಭ್ರುವೌ ಚ ಸಂಧ್ಯಯೋಸ್ತೇಜಃ ಶ್ರವಣಾವನಿಲಸ್ಯ ಚ
ಅನ್ಯೇಷಾಂ ಚೈವ ದೇವಾನಾಂ ಸಂಭವಸ್ತೇಜಸಾಂ ಶಿವಾ ||17||

ಹಾಗೆಯೇ ಯಮನ (ಶಕ್ತಿ) ತೇಜಸ್ಸುಗಳಿಂದ ಆಕೆಯ ಕೂದಲುಗಳೂ, ವಿಷ್ಣುವಿನ ತೇಜಸ್ಸಿನಿಂದ ತೋಳುಗಳೂ, ಚಂದ್ರನ ತೇಜಸ್ಸಿನಿಂದ ಎರಡು ಸ್ತನಗಳೂ, ಇಂದ್ರನ ತೇಜಸ್ಸಿನಿಂದ ಮಧ್ಯಭಾಗವೂ, ವರುಣನ ತೇಜಸ್ಸಿನಿಂದ ತೊಡೆ-ಮಂಡಿಗಳೂ, ಭೂದೇವಿಯ ತೇಜಸ್ಸಿನಿಂದ ಆಸನಭಾಗವೂ, ಬ್ರಹ್ಮತೇಜಸ್ಸಿನಿಂದ ಪಾದಗಳೂ, ಸೂರ್ಯತೇಜಸ್ಸಿನಿಂದ ಕಾಲುಬೆರಳುಗಳೂ, ವಸುದೇವತೆಗಳ ತೇಜಸ್ಸಿನಿಂದ ಕೈಬೆರಳುಗಳೂ, ಕುಬೇರನ ತೇಜಸ್ಸಿನಿಂದ ಮೂಗೂ, ಪ್ರಜಾಪತಿಯ ತೇಜಸ್ಸಿನಿಂದ ಆಕೆಯ ಹಲ್ಲುಗಳೂ, ಅಗ್ನಿಯ ತೇಜಸ್ಸಿನಿಮದ ಮೂರು ಕಣ್ಣುಗಳು, ಸಂಧ್ಯಾದೇವತೆಗಳ ತೇಜಸ್ಸಿನಿಂದ ಎರಡು ಹುಬ್ಬುಗಳೂ, ವಾಯುದೇವತೆಯ ತೇಜಸ್ಸಿನಿಂದ ಕಿವಿಗಳೂ-ಉಂಟಾದವು. ಹೀಗೆಯೇ ಬೇರೆಬೇರೆಯ ದೇವತೆಗಳ ತೇಜಸ್ಸುಗಳ (ಸಮಷ್ಟಿಯ) ಸೃಷ್ಟಿಯೇ ದೇವಿಯಾಗಿದ್ದಳು.

ತತಃ ಸಮಸ್ತದೇವಾನಾಂ ತೇಜೋರಾಶಿಸಮುದ್ಭವಾಮ್ |
ತಾಂ ವಿಲೋಕ್ಯ ಮುದಂ ಪ್ರಾಪುರಮರಾ ಮಹಿಷಾರ್ದಿತಾಃ ||18||
ಶೂಲಂ ಶೂಲಾದ್ ವಿನಿಷ್ಕ್ರಷ್ಯ ದದೌ ತಸ್ಯೈ ಪಿನಾಕಧೃಕ್ |
ಚಕ್ರಂ ಚ ದತ್ತವಾನ್ ಕೃಷ್ಣಃ ಸಮುತ್ಪಾದ್ಯ ಸ್ವಚಕ್ರತಃ ||19||
ಶಂಖಂ ಚ ವರುಣಃ ಶಕ್ತಿಂ ದದೌ ತಸ್ಯೈ ಹುತಾಶನಃ |
ಮಾರುತೋ ದತ್ತವಾನ್ ಚಾಪಂ ಬಾಣಪೂರ್ಣೇ ತಥೇಷುಧೀ ||20||


ಅನಂತರ ಎಲ್ಲಾ ದೇವತೆಗಳ ತೇಜಸ್ಸಮೂಹದಿಂದ ಹುಟ್ಟಿ ಬಂದ ಆಕೆಯನ್ನು ಕಂಡು ಮಹಿಷಾಸುರನಿಂದ ಪೀಡಿಸಲ್ಪಟ್ಟಿದ್ದ ದೇವತೆಗಳು ಆನಂದಗೊಂಡರು ಪಿನಾಕಪಾಣಿಯಾದ ಶಿವನು ತನ್ನ ತ್ರಿಸೂಲದಿಂದ ಮತ್ತೊಂದು ತ್ರಿಶೂಲವನ್ನು ನಿರ್ಮಿಸಿ ಆಕೆಗೆ ಕೊಟ್ಟನು ವಿಷ್ಣುವೂ ಹಾಗೆಯೇ ತನ್ನ ಚಕ್ರದಿಂದ ಬೇರೊಂದು ಚಕ್ರವನ್ನು ಸಿದ್ಧಗೊಳಿಸಿಕೊಟ್ಟನು ವರುಣನು ಶಂಭವನ್ನೂ ಅಗ್ನಿದೇವನು ಶಕ್ತ್ಯಾಯುಧವನ್ನೂ ಮಾರುತನು (ವಾಯುವು) ಬಿಲ್ಲನ್ನೂ ಮತ್ತು ಬಾಣಗಳಿಂದ ತುಂಬಿದ ಎರಡು ಬತ್ತಳಿಕೆಗಳನ್ನೂ ನೀಡಿದರು.

ವಜ್ರಮಿಂದ್ರಂ ಸಮುತ್ಪಾದ್ಯ ಕುಲಿಶಾದಮರಾಧಿಪಃ |
ದದೌ ತಸ್ಯೈ ಸಹಸ್ರಾಕ್ಷೋ ಘಂಟಾಮೈರಾವತಾದ್ ಗಜಾತ್ ||21||
ಕಾಲದಂಡಾದ್ಯಮೋ ದಂಡಂ ಪಾಶಂ ಚಾಂಬುಪತಿರ್ದದೌ |
ಪ್ರಜಾಪತಿಶ್ಚಾಕ್ಷಮಾಲಾಂ ದದೌ ಬ್ರಹ್ಮಾ ಕಮಂಡಲುಮ್ ||22||
ಸಮಸ್ತರೋಮಕೋಪೇಷು ನಿಜರಶ್ಮೀನ್ ದಿವಾಕರಃ |
ಕಾಲಶ್ಚದತ್ತವಾನ್ ಖಡ್ಗಂ ತಸ್ಯಾಶ್ಚರ್ಮ ಚ ನಿರ್ಮಲಮ್ ||23||
ಕ್ಷೀರೋದಶ್ಚಾಮಲಂ ಹಾರಂ ಅಜರೇ ಚ ತಥಾಂಬರೇ |
ಚೂಡಾಮಣಿಂ ತಥಾ ದಿವ್ಯಂ ಕುಂಡಲೇ ಕಟಕಾನಿ ಚ ||24||

    ಇಂದ್ರನು ತನ್ನ ವಜ್ರಾಯುಧದಿಂದ ಮತ್ತೊಂದು ವಜ್ರಾಯುಧವನ್ನು ತಯಾರಿಸಿಕೊಟ್ಟನು ಮತ್ತು ದೇವೇಂದ್ರನು ತನ್ನ ಐರಾವತವೆಂಬ ಆನೆಯಿಂದ ಘಂಟೆಯನ್ನು ತೆಗೆದುಕೊಟ್ಟನು ಯಮನು ತನ್ನ ಕಾಲದಂಡದಿಂದ (ಮತ್ತೊಂದು) ದಂಡವನ್ನೂ ವರುಣನು ಪಾಶವನ್ನೂ (ಸೃಷ್ಟಿಸಿ) ಕೊಟ್ಟರು ಪ್ರಜಾಪತಿಯು ಜಪಸರವನ್ನೂ ಬ್ರಹ್ಮದೇವನು ಕಮಂಡಲವನ್ನೂ ಕೊಟ್ಟರು. ಸೂರ್ಯನು ಆ ದೇವಿಯ ಎಲ್ಲಾ ಮೈಗೂದಲುಗಳಲ್ಲಿಯೂ ತನ್ನ ಕಾಂತಿಯನ್ನು ಇಟ್ಟನು. ಕಾಲ (ಮೃತ್ಯುವು) ಕತ್ತಿಯನ್ನೂ ನಿರ್ಮಲವಾದ ಚರ್ಮ (ವೆಂಬ ಸಾಮಗ್ರಿಯನ್ನೂ) ನೀಡಿದನು. ಕ್ಷೀರಸಮುದ್ರರಾಜನು ಶುದ್ದವಾದ (ರತ್ನಗಳ) ಹಾರವನ್ನೂ ನಾಶವಿಲ್ಲದ ಎರಡು ವಸ್ತ್ರಗಳನ್ನೂ (ಹರಳಿನಲ್ಲಿಧರಿಸುವ) ಚೂಡಾಮಣಿಯೆಂಬ ಒಡವೆಯನ್ನೂ ಎರಡು ಬೆಂಡೋಲೆಗಳನ್ನೂ ಕೈಬಳೆಗಳನ್ನೂ ನೀಡಿದನು.

ಅರ್ಧಚಂದ್ರಂ ತಥಾ ಶುಭ್ರಂ ಕೇಯೂರಾನ್ ಸರ್ವಬಾಹುಷು |
ನೂಪುರೌ ವಿಮಲೌ ತದ್ವತ್ ಗ್ರೈವೇಯಕಮನುತ್ತಮಮ್
ಅಂಗುಲೀಯಕರತ್ನಾನಿ ಸಮಸ್ತಾಷ್ವಂಗುಲೀಷು ಚ ||25||

    (ಅದೇ ಸಮುದ್ರರಾಜನು) ಅರ್ಧಚಂದ್ರಾಕಾರದ ಶುಭ್ರವಾದ (ಹಣೆಬೊಟ್ಟನ್ನೂ) ಎಲ್ಲಾ ತೋಳುಗಳಿಗೂ ತೋಳುಬಳೆಗಳನ್ನೂ (ಭುಜಕೀರ್ತಿಗಳನ್ನೂ) ವಿಮಲವಾದ ಎರಡು ಕಾಲುಗೆಜ್ಜೆಗಳನ್ನೂ ಹಾಗೆಯೇ ಅಮೂಲ್ಯವಾದ ಕಂಠಾಭರಣವನ್ನೂ ಎಲ್ಲಾ ಬೆರಳುಗಳಿಗೂ ರತ್ನದ ಉಂಗುರಗಳನ್ನೂ ಕೊಟ್ಟನು.

ವಿಶ್ವಕರ್ಮಾ ದದೌ ತಸ್ಯೈ ಪರಶುಂ ಚಾತಿನಿರ್ಮಲಮ್ |
ಅಸ್ತ್ರಾಣ್ಯನೇಕರೂಪಾಣಿ ತಥಾಭೇದ್ಯಂ ಚ ದಂಶನಮ್ ||26||
ಅಮ್ಲಾನಪಂಕಜಾಂ ಮಾಲಾಂ ಶಿರಸ್ಯುರಸಿ ಚಾಪರಾಮ್ |
ಅದದತ್ ಜಲಧಿಸ್ತಸ್ಯೈ ಪಂಕಜಂ ಚಾತಿಶೋಭನಮ್ ||27||
ಹಿಮವಾನ್ ವಾಹನಂ ಸಿಂಹಂ ರತ್ನಾನಿ ವಿವಿಧಾನಿ ಚ |
ದದಾವಶೂನ್ಯಂ ಸುರಯಾ ಪಾನಪಾತ್ರಂ ಧನಾಧಿಪಃ ||28||

    ವಿಶ್ವಕರ್ಮನೆಂಬ (ದೇವಶಿಲ್ಪಿಯು) ಆಕೆಗೆ ಅತಿನಿರ್ಮಲವಾದ ಕೊಡಲಿಯನ್ನೂ ಹಾಗೂ ಅನೇಕರೀತಿಯಾದ ಅಸ್ತ್ರಾಯುಧಗಳನ್ನೂ ಭೇದಿಸಲು ಬಾರದ ಕವಚವನ್ನೂ ಕೊಟ್ಟನು. ಸಮುದ್ರರಾಜನು ಆಕೆಗೆ ಬಾಡದೆ ಇರುವ ಕಮಲದ ಹೂವುಗಳುಳ್ಳ ಎರಡು ಮಾಲೆಗಳನ್ನು ತುರುಬಿನಲ್ಲಿ ಮುಡಿಯಲು ಹಾಗೂ ವಕ್ಷಸ್ಥಲದಲ್ಲಿ ಧರಿಸಲು ತಕ್ಕಂಥವುಗಳನ್ನು ಕೊಟ್ಟನು ಮತ್ತು ಅತಿಮುದ್ದಾದ ಒಂದು ತಾವರೆಯನ್ನೂ ನೀಡಿದನು (ಗಿರಿರಾಜನಾದ) ಹಿಮವಂತನು ವಾಹನವಾಗಿ ಆಕೆಗೆ ಒಂದು ಸಿಂಹವನ್ನೂ (ಅಲಂಕಾರಕ್ಕಾಗಿ) ವಿವಿಧ ರತ್ನಗಳನ್ನೂ ನೀಡಿದನು ಕುಬೇರನು ಸುರೆ(ಮದ್ಯ)ಯು ಎಂದಿಗೂ ಖಾಲಿಯಾಗದ ಒಂದು ಕುಡಿಯುವ ಪಾತ್ರೆಯನ್ನು ಕೊಟ್ಟನು.

ಶೇಷಶ್ಚಸರ್ವನಾಗೇಸೋ ಮಹಾಮಣಿವಿಭೂಷಿತಮ್ |
ನಾಗಹಾರಂ ದದೌ ತಸ್ಯೈ ಧತ್ತೇ ಯಃ ಪೃಥಿವೀಮಿಮಾಮ್ ||29||
ಅನ್ಯೈರಪಿ ಸುರೈರ್ದೇವೀ ಭೂಷಣೈರಾಯುಧೈಸ್ತಥಾ |
ಸಂಮಾನಿತಾ ನನಾದೋಚ್ಚೈಃ ಸಾಟ್ಟಹಾಸಂ ಮುಹುಮುಹುಃ ||30||

    ಎಲ್ಲಾ ನಾಗಗಳಿಗೂ ಒಡೆಯನಾದ ಹಾಗೂ ಈ ಭೂಮಿಯನ್ನು (ತನ್ನ ಹೆಡೆಗಳಿಂದ) ಧರಿಸಿರುವ ಆದಿಶೇಷನು ಮಹಾಮಣಿಗಳಿಂದ ಅಲಂಕೃತವಾದ ನಾಗರತ್ನಗಳ ಹಾರವೊಂದನ್ನು ಆಕೆಗೆ ಕೊಟ್ಟನು. ಹೀಗೆ ದೇವಿಯು ಬೇರೆಬೇರೆಯ ದೇವತೆಗಳಿಂದಲೂ (ನಾನಾವಿಧವಾದ) ಒಡವೆಗಳು, ಆಯುಧಗಳಿಂದ ಗೌರವಿಸಲ್ಪಟ್ಟವಳಾಗಿ ಮತ್ತೆಮತ್ತೆ ಅಟ್ಟಹಾಸದಿಂದ ಗಟ್ಟಿಯಾಗಿ ನಾದಮಾಡಿದಳು.

ತಸ್ಯಾ ನಾದೇನ ಘೋರೇಣ ಕೃತ್ಸ್ನಮಾಪೂರಿತಂ ನಭಃ |
ಅಮಾಯತಾತಿಮಹತಾ ಪ್ರತಶಬ್ದೋ ಮಹಾನಭೂತ್ ||31||
ಚಕ್ಷುಭುಃ ಸಕಲಾ ಲೋಕಾಃ ಸಮುದ್ರಾಶ್ಚ ಚಕಂಪಿರೇ |
ಚಚಾಲ ವಸುಧಾ ಚೇಲುಃ ಸಕಲಾಶ್ಚಮಹೀಧರಾಃ ||32||
ಜಯೇತಿ ದೇವಾಶ್ಚಮುದಾ ತಾಮೂಚುಃ ಸಿಂಹವಾಹಿನೀಮ್ |
ತುಷ್ಟುವುರ್ಮುನಯಶ್ಚೈನಾಂ ಭಕ್ತಿನಮ್ರಾತ್ಮಮೂರ್ತಯಃ ||33||

    ಆಕೆಯ ಭಯಂಕರವಾದ ಆ ನಾದದಿಂದ ಇಡಿಯ ಆಕಾಶವೆಲ್ಲವೂ ತುಂಬಿಹೋಯಿತು. ಅತಿ ಹೆಚ್ಚಿನ ರೀತಿಯಿಂದ ಶಬ್ದವಾಯಿತು ಅದರಿಂದ ಪ್ರತಿಧ್ವನಿಯೂ ದೊಡ್ಡದಾಗಿ ಉಂಟಾಯಿತು ಇದರಿಂದ ಎಲ್ಲಾ ಲೋಕಗಳೂ ಗಾಬರಿಗೊಂಡವು. ಸಮುದ್ರಗಳು ಅಳ್ಳಾಡಿಹೋದವು ಭೂಮಿಯು ನಡುಗಿಬಿಟ್ಟಳು ಪರ್ವತಗಳೆಲ್ಲವೂ ಚಲಿಸಿಬಿಟ್ಟವು ಆಗ ದೇವತೆಗಳು ಸಿಂಹವಾಹಿನಿಯಾದ ಆಕೆಯನ್ನು ಕುರಿತು ಸಂತೋಷದಿಂದ ಜಯಕಾರಮಾಡಿದರು ಭಕ್ತಿಯಿಂದ ಬಗ್ಗಿದ ಶರೀರವುಳ್ಳ ಮುನಿಗಳು ಸ್ತೋತ್ರಮಾಡಿದರು.

ದೃಷ್ಟ್ವಾಸಮಸ್ತಂ ಸಂಕ್ಷುಬ್ಧಂ ತ್ರೈಲೋಕ್ಯಮಮರಾರಯಃ
ಸಂನದ್ಧಾಖಿಲಸೈನ್ಯಾಸ್ತೇ ಸಮುತ್ತಸ್ಥುರುದಾಯುಧಾಃ ||34||
ಆಃ ಕಿಮೇತದಿತಿ ಕ್ರೋಧಾದಾಭಾಷ್ಯ ಮಹಿಷಾಸುರಃ |
ಅಭ್ಯಧಾವತ ತಂ ಶಬ್ದಮಶೇಷೈರಸುರೈರ್ವೃತಃ ||35||

    ಮೂರು ಲೋಕಗಳೆಲ್ಲವೂ ಬಹಳವಾಗಿ ಗಲಿಬಿಲಿಯಾದದ್ದನ್ನು ಕಂಡು ದೇವಶತ್ರುಗಳಾದ (ರಾಕ್ಷಸರು) ಎಲ್ಲಾ ಸೈನ್ಯವನ್ನೂ ಸಜ್ಜುಗೊಳಿಸಿಕೊಂಡು ಆಯುಧಗಳನ್ನು ಎತ್ತಿ (ಹಿಡಿದವರಾಗಿ) ಮೇಲೆದ್ದರು ಮಹಿಷಾಸುರನಾದರೋ, ಆಹಾ! ಇದೇನು? ಎಂದು ಕೋಪದಿಂದ ಘರ್ಜಿಸಿದವನಾಗಿ ಎಲ್ಲಾ ರಾಕ್ಷಸರೊಡಗೂಡಿ ಆ ಶಬ್ದವು ಬಂದಲ್ಲಿಗೆ ಎದುರಾಗಿ ಓಡಿಬಂದನು.

ಸ ದದರ್ಶ ತತೋ ದೇವೀಂ ವ್ಯಾಪ್ತಲೋಕತ್ರಯಾಂ ತ್ವಿಷಾ |
ಪಾದಾಕ್ರಾಂತ್ಯಾ ನತಭುವಂ ಕಿರೀಟೋಲ್ಲಿಖಿತಾಂಬರಾಮ್ ||36||
ಕ್ಷೋಭಿತಾಶೇಷಪಾತಾಲಾಂ ಧನುಃಜ್ಯಾನಿಃಸ್ವನೇನ ತಾಮ್ |
ದಿಶೋ ಭುಜಸಹಸ್ರೇಣ ಸಮಂತಾದ್ ವ್ಯಾಪ್ಯ ಸಂಸ್ಥಿತಾಮ್ ||37||
    ಆತನು ಅನಂತರ ಮೂರು ಲೋಕಗಳನ್ನೂ ತನ್ನ ಕಾಂತಿಯಿಂದ ವ್ಯಾಪಿಸಿಕೊಂಡಿದ್ದ ಹಾಗೂ ಹೆಜ್ಜೆಯನ್ನಿಟ್ಟಾಗ ಬಗ್ಗಿ ನಮಸ್ಕರಿಸುವ ಭೂದೇವೀಸಹಿತಳೂ ಆಕಾಶವನ್ನೆಲ್ಲ ಕಿರೀಟದಲ್ಲಿ (ಅಡಗಿಸಿಕೊಂಡು) ಎದ್ದು ಹೊಳೆಯುತ್ತಿರುವವಳೂ ಆದ ದೇವಿಯನ್ನು ಕಂಡನು ಆಕೆಯು ತನ್ನ ಧನುಸ್ಸಿನ ಟಂಕಾರಧ್ವನಿಯಿಂದ ಇಡಿಯ ಪಾತಾಳಲೋಕವನ್ನೆಲ್ಲ ಕ್ಷೋಭಗೊಳ್ಳುವಂತೆ ಮಾಡಿದವಳಾಗಿಯೂ ಸಾವಿರ ಭುಜಗಳಿಂದ ಎಲ್ಲೆಲ್ಲೂ ವ್ಯಾಪಿಸಿಕೊಂಡು ನೆಲೆಸಿದವಳಾಗಿಯೂ ಕಂಡುಬಂದಳು.

ತತಃ ಪ್ರವವೃತೇ ಯುದ್ಭಂ ತಯಾ ದೇವ್ಯಾ ಸುರದ್ವಿಷಾಮ್ |
ಶಸ್ತ್ರಾಸ್ತ್ರೈರ್ಬಹುಧಾ ಮುಕ್ತೈರಾದೀಪಿತದಿಗಂತರಮ್ ||38||
ಮಹಿಷಾಸುರಸೇನಾನೀಶ್ಚಿಕ್ಷುರಾಖ್ಯೋ ಮಹಾಸುರಃ |
ಯುಯುಧೇ ಚಾಮರೈಶ್ಚಾನ್ಯೈಶ್ಚತುರಂಗಬಲಾನ್ವಿತಃ ||39||
ರಥಾನಾಮಯುತೈಃ ಷಡ್ಭಿಃ ಉದಗ್ರಾಖ್ಯೋ ಮಹಾಸುರಃ |
ಆಯುಧ್ಯತಾಯುತಾನಾಂ ಚ ಸಹಸ್ರೇಣ ಮಹಾಹನುಃ ||40||

    ಅನಂತರ ಆ ದೇವಿಯೊಡನೆ ರಾಕ್ಷಸರಿಗೆ ಯುದ್ಧವು ಸಂಘಟಿಸಿತು ಬಹಳವಾದ ಶಸ್ತ್ರಾಸ್ತ್ರಗಳ ಉಪಯೋಗದಿಂದ ದಿಕ್ಕುಗಳೆಲ್ಲವೂ ಹೊಳೆಯುವಂತೆ ಅದು ನಡೆಯಿತು. ಮಹಿಷಾಸುರನ ಸೇನಾಪತಿಯಾದ ಚಿಕ್ಷುರ ಎಂಬ ಮಹಾರಾಕ್ಷಸನೂ ಮತ್ತೊಬ್ಬ (ಸೇನಾಧಿಪತಿಯಾದ) ಚಾಮರನೆಂಬುವನೂ ಚತುರಂಗಸೈನ್ಯದಿಂದಲೂ ಅರವತ್ತುಸಾವಿರ ಸಂಖ್ಯೆಯ ರಥಗಳಿಂದಲೂ ಕೂಡಿದವರಾಗಿಯೂ ಹಾಗೆಯೇ ಭಯಂಕರವಾದ ಕೋರೆದಾಡೆಗಳುಳ್ಳ ಉದಗ್ರನೆಂಬವನು ಕೋಟಿ(ರಥ)ಗಳಿಂದಲೂ ಕುಡಿದವನಾಗಿಯೂ ಯುದ್ಧಮಾಡಿದರು.

ಪಮಚಾಶದ್ಬಿಶ್ಚ ನಿಯುತೈರಸಿಲೋಮಾ ಮಹಾಸುರಃ |
ಅಯುತಾನಾಂ ಶತೈಷ್ಷಡ್ಭಿಃ ಬಾಷ್ಕಲೋ ಯುಯುಧೇ ರಣೇ ||41||
ಗಜವಾಜಿಸಹಸ್ವೌಘೈರನೇಕೈಃ ಪರಿವಾರಿತಃ |
ವೃತೋ ರಥಾನಾಂ ಕೋಟ್ಯಾ ಚ ಯುದ್ಧೇ ತಸ್ಮಿನ್ನಯುಧ್ಯತ ||42||

    ಐವತ್ತುಲಕ್ಷ ರಥಗಳಿಂದ ಕೂಡಿದ ಮಹಾಸುರನಾದ ಅಸಿಲೋಮನೆಂಬುವನೂ ಅರವತ್ತು ಲಕ್ಷಸೈನ್ಯದೊಡನೆ ಬಾಷ್ಕಲನೆಂಬುವನೂ ಆ ಯುದ್ಧದಲ್ಲಿ ಕಾದಾಡಿದರು ಅದೇ ಬಾಷ್ಕಲನು ಸಾವಿರಾರು ಆನೆ ಕುದುರೆಗಳ ಪರಿವಾರದಿಂದಲೂ ಕೋಟಿ ಸಂಖ್ಯೆಯ ರಥಗಳಿಂದಲೂ ಕೂಡಿಕೊಂಡು ಯುದ್ಧ ಮಾಡಿದನು.

ಬಿಡಾಲಾಖ್ಯೋಯುತಾನಾಂ ಚ ಪಮಚಾಶದ್ಬಿರಥಾಯುತೈ |
ಯುಯುಧೇ ಸಂಯುಗೇ ತತ್ರ ರಥಾನಾಂ ಪರಿವಾರಿತಃ ||43||
ಅನ್ಯೇ ಚ ತತ್ರಾಯುತಶೋ ರಥನಾಗಹಯೈರ್ವೃತಾಃ |
ಯುಯುಧುಃ ಸಂಯುಗೇ ದೇವ್ಯಾ ಸಹ ತತ್ರ ಮಹಾಸುರಾಃ ||44||
ಕೋಟಿಕೋಟಿ ಸಹಸ್ತೈಸ್ತು ರಥಾನಾಂ ದಂತಿನಾಂ ತಥಾ |
ಹಯಾನಾಂ ಚ ವೃತೋ ಯುದ್ಧೇ ತತ್ರಾಭೂನ್ಮಹಿಷಾಸುರಃ ||45||
ತೋಮರೈರ್ಭಿಂದಿಪಾಲೈಶ್ಚ ಶಕ್ತಿಭಿರ್ಮುಸಲೈಸ್ತಥಾ |
ಯುಯುಧುಃ ಸಂಯುಗೇ ದೇವ್ಯಾ ಖಡ್ಗೈಃ ಪರಶುಪಟ್ಟಿಶೈಃ ||46||

    ಬಿಡಾಲನೆಂಬುವನು ಐದು ಲಕ್ಷ ರಥಗಳಿಂದ ಸುತ್ತುವರೆಯಲ್ಪಟ್ಟವನಾಗಿ ಯುದ್ಧದಲ್ಲಿ ಕಾದಾಡಿದನು ಇನ್ನೂ ಕೆಲವರು ಮಹಾರಾಕ್ಷಸರು ಹತ್ತುಸಾವಿರಗಟ್ಟಲೆ ರಥಗಳು, ಆನೆಗಳು, ಕುದುರೆಗಳಿಂದ ಪರಿವಾರಿತರಾಗಿ ಯುದ್ಧದಲ್ಲಿ ಪಾಲ್ಗೊಂಡಿದ್ದರು, ತೊಮರ, ಭಿಂದಿಪಾಲ, ಶಕ್ತಿ, ಮುಸಲಗಳೆಂಬ ಹಾಗೂ ಕತ್ತಿ, ಕೊಡಲಿ, ಪಟ್ಟಿಶಗಳೆಂಬ ವಿವಿಧವಾದ (ಆಯುಧಗಳಿಂದ ರಾಕ್ಷಸರುಗಳು) ದೇವಿಯೊಡನೆ ಯುದ್ಧಮಾಡಿದರು.

ಕೇಚಿಚ್ಚ ಚಿಕ್ಷಿಪುಃ ಶಕ್ತೀಃ ಕೇಚಿತ್ ಪಾಶಾಂಸ್ತಥಾಪರೇ |
ದೇವೀಂ ಖಡ್ಗಪ್ರಹಾರೈಸ್ತು ತೇ ತಾಂ ಹಂತುಂ ಪ್ರಚಕ್ರಮುಃ ||47||
ಸಾಪಿ ದೇವೀ ತತಸ್ತಾನಿ ಶಸ್ತ್ರಾಣ್ಯಸ್ತ್ರಾಣಿ ಚಂಡಿಕಾ |
ಲೀಲಯೈವ ಪ್ರಚಿಚ್ಛೇದ ನಿಜಶಸ್ತ್ರಾಸ್ತ್ರವರ್ಷಿಣೀ ||48||
ಅನಾಯಸ್ತಾನನಾ ದೇವೀ ಸ್ತೂಯಮಾನಾ ಸುರರ್ಷಿಭಿಃ |
ಮುಮೋಚಾಸುರದೇಹೇಷು ಶಸ್ತ್ರಾಣ್ಯಸ್ತ್ರಾಣಿ ಚೇಶ್ವರೀ ||49

    ಕೆಲವರು ಶಕ್ತ್ಯಾಯುಧಗಳನ್ನೂ ಕೆಲವರು ಪಾಶಗಳನ್ನೂ ಮತ್ತೆ ಕೆಲವರು ಕತ್ತಿಯ ಹೊಡೆತಗಳನ್ನೂ ದೇವಿಯ ಮೇಲೆ ಪ್ರಯೋಗಿಸಿದರು ಅವರೆಲ್ಲರೂ ದೇವಿಯನ್ನು ಕೊಲ್ಲಲು ಮುನ್ನುಗ್ಗಿದರು ಅನಂತರ ಆ ಚಂಡಿಕಾ ದೇವಿಯಾದರೊ ಆ ಶಸ್ತ್ರಾಸ್ತ್ರಗಳೆಲ್ಲವನ್ನೂ ಲೀಲಾಮಾತ್ರದಿಂದ ಕತ್ತರಿಸಿ ಹಾಕಿದಳು ದೇವರ್ಷಿಗಳಿಂದ ಸ್ತೋತ್ರಮಾಡಲ್ಪಡುತ್ತಿರುವ ಈಶ್ವರಿಯಾದ ದೇವಿಯು ಆಯಾಸವಿಲ್ಲದ ಮುಖದಿಂದ ಕುಡಿಯೇ ರಾಕ್ಷಸರ ಶರೀರಗಳ ಮೇಲೆ ಶಸ್ತ್ರಾಸ್ತ್ರಗಳನ್ನು ಮಳೆಗರೆದಳು.

ಸೋಪಿ ಕ್ರುದ್ಧೋ ಧುತಸಟೋ ದೇವ್ಯಾ ವಾಹನಕೇಸರೀ |
ಚಚಾರಾಸುರಸೈನ್ಯೇಷು ವನೇಷ್ವಿವ ಹುತಾಶನಃ ||50||
ನಿಃಶ್ವಾಸಾನ್ ಮುಮುಚೇ ಯಾಂಶ್ಚ ಯುಧ್ಯಮಾನಾ ರಣೇಂಬಿಕಾ |
ತ ಏವ ಸದ್ಯಃ ಸಂಭೂತಾಃ ಗಣಾಃ ಶತಸಹಸ್ರಶಃ ||51||
ಯುಯುಧುಸ್ತೇ ಪರಶುಭಿರ್ಭಿಂದಿಪಾಲಾಸಿಪಟ್ಟಿಶೈಃ |
ನಾಶಯನ್ತೋಸುರಗಣಾನ್ ದೇವೀಶಕ್ತ್ಯುಪಬೃಂಹಿತಾಃ ||52||
ಅವಾದಯಂತ ಪಟಹಾನ್ ಗಣಾಃ ಶಂಖಾಂಸ್ತಥಾಪರೇ |
ಮೃದಂಗಾಂಶ್ಚ ತಥೈವಾನ್ಯೇ ತಸ್ಮಿನ್ ಯುದ್ಧಮಹೋತ್ಸವೇ ||53||

    ದೇವಿಯ ವಾಹನಶ್ರೇಷ್ಠವಾದ ಸಿಂಹವು ಕೂಡ ಕೋಪಗೊಂಡು ತನ್ನ ಕೇಸರವನ್ನು ಕೊಡವಿಕೊಂಡು ಕಾಡಿನಲ್ಲಿ ಬೆಂಕಿಯಂತೆ ರಾಕ್ಷಸರ ಸೈನ್ಯದಲ್ಲೆಲ್ಲ ಸಂಚರಿಸುತ್ತಿತ್ತು ದೇವಿಯು ಯುದ್ಧಮಾಡುತ್ತಾ ರಣಾಂಗಣದಲ್ಲಿ ಬಿಡುತ್ತಿದ್ದ ನಿಟ್ಟುಸಿರುಗಳು ಕೂಡಲೆ ಸಹಸ್ರಾರು ಗಣದೇವತೆಗಳಾಗಿ ಹೊರತೋರಿಕೊಂಡರು ಆ ದೇವಿಯರು ಪರಶು ಭಿಂದಿಪಾಲ ಕತ್ತಿ, ಪಟ್ಟಿಶ ಮುಂತಾದ ಆಯುಧಗಳಿಂದ ರಾಕ್ಷಸರೊಡನೆ ಯುದ್ಧಮಾಡುತ್ತಿದ್ದರು ಹಾಗೂ ದೇವಿಯ ಶಕ್ತಿಯಿಂದ ಮೈಗೂಡಿದವರಾಗಿ ಅಸುರರನ್ನು ನಾಶಗೊಳಿಸುತ್ತಾ ಪಟಹ, ಶಂಖ, ಮೃದಂಗ ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಆ ಯುದ್ಧ ಸಮಾರಂಭದಲ್ಲಿ ಭಾಗವಹಿಸಿದ್ದರು.

ತತೋ ದೇವಿ ತ್ರಿಶೂಲೇನ ಗದಯಾ ಶಕ್ತಿವೃಷ್ಟಿಭಿಃ |
ಖಡ್ಗಾದಿಭಿಶ್ಚಶತತೋ ನಿಜಘಾನ ಮಹಾಸುರಾನ್ ||54||
ಪಾತಯಾಮಾಸ ಚೈವಾನ್ಯಾನ್ ಘಂಟಾಸ್ವನವಿಮೋಹಿತಾನ್ |
ಅಸುರಾನ್ ಭುವಿ ಪಾಶೇನ ಬದ್ಧ್ವಾ ಚಾನ್ಯಾನಕರ್ಷಯತ್ ||55||

    ಅನಂತರ ದೇವಿಯು ತ್ರಿಶೂಲ, ಗದೆ, ಶಕ್ತಿ ಮುಂತಾದ ಹಾಗೂ ಕತ್ತಿಯೇ ಮೊದಲಾದ ಆಯುಧಗಳ (ಹೊಡೆತಗಳ) ಮಳೆಯಿಂದ ಮಹಾರಾಕ್ಷಸರುಗಳನ್ನು ಕೊಲ್ಲುತ್ತಿದ್ದಳು ಘಂಟಾನಾದದಿಂದ ಮೂರ್ಛಿತರಾದ ಕೆಲವರನ್ನು ಕೆಡವಿದಳು ಮತ್ತೆ ಕೆಲವರನ್ನು ಹಗ್ಗದಿಂದ ಕಟ್ಟಿನೆಲದಮೇಲೆ ಎಳೆದಾಡಿದಳು.

ಕೇಚಿದ್ ದ್ವಿಧಾ ಕೃತಾಸ್ತೇಕ್ಷ್ಣೈಃ ಖಡ್ಗ ಪಾತೈಸ್ತಥಾಪರೇ |
ವಿಪೋಥಿತಾ ನಿಪಾತೇನ ಗದಯಾ ಭುವಿ ಶೇರತೇ ||56||
ವೇಮುಶ್ಚ ಕೇಚಿತ್ ರುಧಿರಂ ಮುಸಲೇನ ಭೃಶಂ ಹತಾಃ |
ಕೇಚಿನ್ನಿಪತಿತಾ ಭೂಮೌ ಭಿನ್ನಾಃ ಶೂಲೇನ ವಕ್ಷಸಿ ||57||
ನಿರಂತರಾಃ ಶರೌಘೇಣ ಕೃತಾಃ ಕೇಚಿದ್ರಣಾಜಿರೇ |
ಸ್ಯೇನಾನುಕಾರಿಣಃ ಪ್ರಾಣಾನ್ ಮುಮಚುಸ್ತ್ರಿದಶಾರ್ದನಾಃ ||58||
   
    ಕೆಲವರು ಹರಿತವಾದ ಆಯುಧಗಳಿಂದ ಎರಡಾಗಿ ಸೀಳಲ್ಪಟ್ಟರು ಮತ್ತೆ ಕೆಲವರು ಕತ್ತಿಯ ಏಟುಗಳಿಂದ ಬಿದ್ದುಹೋದರು. ಗದೆಯಿಂದ ಚಚ್ಚಲ್ಪಟ್ಟ ಕೆಲವರು ನೆಲದಮೇಲೆ ಮಲಗಿದರು ಮುಸಲ (ಒನಕೆ)ಯಿಂದ ಬಹಳವಾಗಿ ಹೊಡೆಯಲ್ಪಟ್ಟ ಕೆಲವರು ರಕ್ತವನ್ನು ಕಾರಿದರು ಮತ್ತೆ ಕೆಲವರು ಎದೆಯಲ್ಲಿ ಶೂಲದಿಂದ ತಿವಿಯಲ್ಪಟ್ಟವರಾಗಿ ನೆಲದಮೇಲೆ ಬಿದ್ದರು ಕೆಲವರು ಯುದ್ಧದಲ್ಲಿ ಬಾಣಗಳ ಸುರಿಮಳೆಯಿಂದ (ಉಸಿರಾಡಲೂ ಜಾಗವಿಲ್ಲದಂತೆ) ಮಾಡಲ್ಪಟ್ಟರು ಹೀಗೆ ದೇವಶತ್ರುಗಳಾದ ರಾಕ್ಷಸರು ಗಿಡಗಗಳು ಹಾರುವಂತೆ ತಮ್ಮ ಪ್ರಾಣಪಕ್ಷಿಗಳನ್ನು ಶರೀರದಿಂದ ಮೇಲುಗಡೆಗೆ ಹಾರಿಸಿಕೊಂಡು (ಮೃತರಾದರು)

ಕೇಷಾಂಚಿದ್ಬಾಹವಶ್ಛಿನ್ನಾಶ್ಚಿನ್ನಗ್ರೀವಾಸ್ತಥಾಪರೇ |
ಶಿರಾಂಸಿ ಪೇತುರನೈಷಾಮನ್ಯೇ ಮಧ್ಯೇ ವಿದಾರಿತಾಃ ||59||
ವಿಚ್ಛಿನ್ನಜಂಘಾಸ್ತ್ವರೇ ಪೇತುರುರ್ವ್ಯಾಂ ಮಹಾಸುರಾಃ |
ಏಕಬಾಹ್ವಕ್ಷಿಚರಣಾಃ ಕೇಚಿದ್ದೇವ್ಯಾ ದ್ವಿಧಾ ಕೃತಾಃ ||60||
   
    ಕೆಲವರ ತೋಳುಗಳೂ (ಆ ಯುದ್ಧದಲ್ಲಿ) ಕತ್ತರಿಸಲ್ಪಟ್ಟವು ಕೆಲವರಿಗೆ ಕುತ್ತಿಗೆಯು ತುಂಡಾಯಿತು ಮತ್ತೆ ಕೆಲವರ ತಲೆಗಳೇ ಬಿದ್ದುಹೋದವು ಇನ್ನು ಕೆಲವರು ನಡುಭಾಗದಲ್ಲಿ ಸೀಳಲ್ಪಟ್ಟರು ಕೆಲವು ಭಾರಿಯ ರಾಕ್ಷಸರು ತೊಡೆಗಳನ್ನು ಮುರಿದುಕೊಂಡು ಭೂಮಿಯಲ್ಲಿ ಬಿದ್ದರು ಕೆಲವರು ಒಂಟಿತೋಳು, ಕಣ್ಣು, ಕಾಲುಗಳುಳ್ಳವರಾಗಿ ಮಾಡಲ್ಪಟ್ಟರು ಕೆಲವರು ದೇವಿಯಿಂದ ಎರಡು ಹೋಳಾಗಿ ಮಾಡಲ್ಪಟ್ಟರು.

ಛಿನ್ನೇಪಿ ಚಾನ್ಯೇ ಶಿರಸಿ ಪತಿತಾಃ ಪುನರುತ್ಥಿತಾಃ |
ಕಬಂಧಾ ಯುಯುಧುರ್ದೇವ್ಯಾ ಗೃಹೀತಪರಮಾಯುಧಾಃ ||61||
ನನೃತುಶ್ಚಾಪರೇ ತತ್ರ ಯುದ್ಧೇ ತೂರ್ಯಲಯಾಶ್ರಿತಾಃ |
ಕಬಂಧಾಶ್ಚಿನ್ನಶಿರಸಃ ಖಡ್ಗಕ್ತ್ಯೃಷ್ಟಿಪಾಣಯಃ |
ತಿಷ್ಠತಿಷ್ಠೇತಿ ಭಾಷಂತೋ ದೇವೀಮನ್ಯೇ ಮಹಾಸುರಾಃ ||62||

    ಬೇರೆಯ ಕೆಲವರು ತಲೆಯು ತುಂಡಾಗಿ ಹೋಗಿದ್ದರೂ ಬಿದ್ದವರು ಮೇಲೆದ್ದರು (ಅವರ) ಮುಂಡಗಳು ಒಳ್ಳೆಯ ಆಯುಧಗಳನ್ನು ಹಿಡಿದು ದೇವಿಯೊಡನೆ ಯುದ್ಧಮಾಡಿದವು ಮತ್ತೆ ಕೆಲವು ಆ ಯುದ್ಧದಲ್ಲಿ ವಾದ್ಯಗಳ ಧ್ವನಿಗೆ ಅನುಗುಣವಾಗಿ ಲಯಕ್ಕೆ ತಕ್ಕಂತೆ ಕುಣಿದಾಡಿದವು ಮತ್ತೆ ಕೆಲವು ಕಬಂಧಗಳು ರುಂಡವನ್ನು ಕಳೆದುಕೊಂಡವುಗಳಾಗಿದ್ದರೂ ಖಡ್ಗ-ಶಕ್ತಿ-ಮುಂತಾದ ಆಯುಧಗಳನ್ನು ಹಿಡಿದವುಗಳಾಗಿ ದೇವಿಯನ್ನು ನಿಲ್ಲು ನಿಲ್ಲು ಎಂದು ಕೂಗುತ್ತಿದ್ದವು.

ಪಾತಿತೈ ರಥನಾಗಾಶ್ವೈರಸುರೈಶ್ಚವಸುಂಧರಾ |
ಅಗಮ್ಯಾ ಸಾಭವತ್ ತತ್ರ ಯತ್ರಾಭೂತ್ ಸ ಮಹಾರಣಃ ||63||
ಶೋಣೀತೌಘಾ ಮಹಾನದ್ಯಃ ಸದ್ಯಸ್ತತ್ರ ಪ್ರಸುಸ್ರುವುಃ |
ಮಧ್ಯೇ ಚಾಸುರಸೈನ್ಯಸ್ಯ ವಾರಣಾಸುರವಾಜಿನಾಮ್ ||64||

    ಎಲ್ಲಿ ಆ ಮಹಾಯುದ್ಧವು ನಡೆಯಿತೋ ಅಲ್ಲಿ ಭೂಮಿಯು ರಥ, ಆನೆ, ಕುದುರೆಗಳ (ಶವಗಳಿಂದ ತುಂಬಿಹೋಗಿ) ಹೋಗುವದಕ್ಕೆ ಅಸಾಧ್ಯವಾಗಿತ್ತು ರಕ್ತಪ್ರವಾಹ ತುಂಬಿದ ಮಹಾನದಿಗಳು ಆ ಆನೆಕುದುರೆರಾಕ್ಷಸರ ಸೈನ್ಯದ ನಡುವೆ ತತ್ಕಾಲಕ್ಕೆ ಅಲ್ಲಿ ಹರಿದವು.

ಕ್ಷಣೇನ ತನ್ಮಹಾಸೈನ್ಯಮಸುರಾಣಾಂ ತಥಾಂಬಿಕಾ |
ನೀನ್ಯೇ ಕ್ಷಯಂ ಯಥಾ ವಹ್ನಿಸ್ತೃಣದಾರು ಮಹಾಚಯಮ್ ||65||
ಸ ಚ ಸಿಂಹೋ ಮಹಾನಾದಮುತ್ಪಜನ್ ಧೃತಕೇಸರಃ |
ಶರೀರೇಭ್ಯೋಮರಾರೀಣಾಂ ಅಸೂನಿವ ವಿಚಿನ್ವತಿ ||66||
ದೇವ್ಯಾ ಗಣೈಶ್ಚತೈಸ್ತತ್ರ ಕೃತಂ ಯುದ್ಧಂ ಮಹಾಸುರೈಃ |
ಯಥೈಷಾಂ ತುತುಷುರ್ದೇವಾಃ ಪುಷ್ಪವೃಷ್ಟಿಮುಚೋ ದಿವಿ ||67||

    ಅಂಬಿಕೆಯು ಕ್ಷಣಮಾತ್ರದಲ್ಲಿ ಆ ಅಸುರರ ಮಹಾಸೈನ್ಯವನ್ನು-ಬೆಂಕಿಯು ಹುಲ್ಲುಕಟ್ಟಿಗೆಗಳ ದೊಡ್ಡರಾಶಿಯನ್ನು ಹೇಗೋ ಹಾಗೆ, ನಾಶಮಾಡಿ ಬಿಟ್ಟಳು. ಆ ಸಿಂಹವು ಕೂಡ ತನ್ನ ಮೀಸೆಗಳನ್ನು ಕೊಡವುತ್ತಾ ರಾಕ್ಷಸರ ಶರೀರಗಳ್ಲಲ್ಲಿ ಪ್ರಾಣಗಳಿವೆಯೆ, ಎಂಬುದನ್ನು ಹುಡುಕುತ್ತಿದೆಯೊ? ಎಂಬಂತೆ ಸುತ್ತಾಡುತ್ತಾ ಮಹಾಘರ್ಜನೆಯನ್ನು ಮಾಡಿತು. ದೇವಿಯೊಡನೆ ಹೀಗೆ ಆ ಮಹಾರಾಕ್ಷಸರ ಗಣಗಳು ಅಲ್ಲಿ ಕಾದಾಡಿದರು (ಇದನ್ನು ಕಂಡ) ದೇವತೆಗಳು ಆಕಾಶದಿಂದ ಹೂಮಳೆಗರೆದವರಾದರು; ಮತ್ತು ಸಂತುಷ್ಟರಾದರು.

ಇತಿ ಶ್ರೀ ಮಾರ್ಕಂಡೇಯಪುರಾಣೇ ದೇವೀಮಹಾತ್ಮ್ಯೇ ದ್ವಿತೀಯೋಧ್ಯಾಯಃ

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ