ಹರಿದಾಸರು ಕಂಡ ರಾಘವೇಂದ್ರರು
ರಾಘವೇಂದ್ರತೀರ್ಥರ ಜೀವನ ಹಾಗೂ ಅವರ ಹಿಂದಿನ ಅವತಾರಗಳು ಹರಿದಾಸರ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿ ಸೇರಿವೆ ಗುರುಸಾರ್ವಭೌಮರ ಜೀವನ ಪ್ರಕೃತ ಸಮಾಜಕ್ಕೆ ಯಾವ ವಿಧದಲ್ಲಿ ಆದರ್ಶಪ್ರಾಯವಾಗಿದೆ, ಅವರಲ್ಲಿ ಮಾನವನ ಬೇಡಿಕೆ ಯಾವುದಾಗಿರಬೇಕು, ಈ ಎಲ್ಲವನ್ನೂ ಹರಿದಾಸರು ತಮ್ಮ ಕೃತಿಗಳಲ್ಲಿ ಸ್ಪಷ್ಟಪಡಿಸಿರುವರು. ಕೃತಯುಗದಲ್ಲಿ ಭಾಗವತ ಧರ್ಮವನ್ನು ಬಿತ್ತರಿಸಿದ ಪ್ರಹ್ಲಾದರೇ ಪುನಃ ಶ್ರೀಹರಿಯು ಆದೇಶದಂತೆ ಲೋಕದ ಉದ್ದಾರಕ್ಕಾಗಿ, ಧರ್ಮದ ಪುನಃ ಪ್ರತಿಷ್ಠಾಪನೆಗಾಗಿ ಕಲಿಯುಗದಲ್ಲಿ ವ್ಯಾಸ ತೀರ್ಥರಾಗಿಯೂ ನಂತರ ರಾಘವೇಂದ್ರತೀರ್ಥರಾಗಿಯೂ ಅವತರಿಸಿದರುವೆಂಬುದು ಹರಿದಾಸರ ಕೃತಿಗಳಿಂದ ಸ್ಪಷ್ಟವಾಗುವುದು. ಭಾಗವತದ ಸಪ್ತಮ ಸ್ಕಂಧದ ನಾಯಕ ಪ್ರಹ್ಲಾದ, ಬಾಲ್ಯದಲ್ಲಿಯೇ ದೈತ್ಯಬಾಲಕರನ್ನು ಉದ್ಧರಿಸಿದ ಭಾಗವತೋತ್ತಮನು ಇವನು "ಕಾಮಾರೇ ಆಚರೇತ್ಪಾಜ್ಞಃ ಧರ್ಮಾನ್ ಭಾಗವತಾನಿಹ" ಎಂದು ಲೋಕಕ್ಕೆ ಸಂದೇಶ ನೀಡಿದ ವೈರಾಗ್ಯಮೂರ್ತಿ ಪ್ರಹ್ಲಾದ. ಈ ಪ್ರಹ್ಲಾದನ ಎರಡನೇ ಅವತಾರವೆನಿಸಿದ ವ್ಯಾಸತೀರ್ಥರ ಜೀವನವೂ ಸಹ ವೈರಾಗ್ಯಕ್ಕೆ ಕೈಗನ್ನಡಿಯಾಗಿದೆ. ಬಾಲ್ಯದಲ್ಲಿಯೇ ಸನ್ಯಾಸಶ್ರಮದಲ್ಲಿ ಕಾಲಿಟ್ಟವರಿವರು. ಗುರುಗಳಾದ ಶ್ರೀಪಾದರಾಜರ ಆದೇಶದಂತೆ ಹಾಗೂ ಸಾಳುವ ನರಸಿಂಹನ ಪ್ರಾರ್ಥನೆಯಂತೆ 12 ವರ್ಷಗಳ ಕಾಲ ತಿರುಮಲೆಯಲ್ಲಿದ್ದು ಶ್ರೀನಿವಾಸನ ಪೂಜಾದಿಗಳನ್ನು ಮಾಡಿ, ಪುನಃ ಅರ್ಚಕ ಮನೆತನದವರಿಗ...