ಶ್ರೀ ವೈಷ್ಣವ 108 ದಿವ್ಯದೇಶಗಳ ದಿವ್ಯದಂಪತಿಗಳು
'ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ' ಎಂದು ದಾಸವರೇಣ್ಯರಾದ ಪುರಂದರ ದಾಸರು ಅಪ್ಪಣೆ ಕೊಟ್ಟಿದ್ದಾರೆ. ಅನೇಕ ಜನುಮಗಳ ನಂತರ ಲಭಿಸಿದ ಈ ಮಾನವ ಜನ್ಮ ಆದ್ದರಿಂದಲೇ ಈ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು. ಜನ್ಮಸಾರ್ಥಕ್ಯವನ್ನು ಪಡೆಯುವುದು ಹೇಗೆಂದು ತಿಳಿದುಕೊಳ್ಳುವುದು ಮಾನವನ ಪ್ರಥಮ ಕರ್ತವ್ಯ. ಭಗವಂತನು ಸರ್ವಾಂತರ್ಯಾಮಿ. ಅವನು ಅನುಗ್ರಹಿಸಿದ ಈ ಜನ್ಮದಲ್ಲಿ ಅವನನ್ನು ಸ್ತುತಿಸಿ, ಧ್ಯಾನಿಸಿ, ಅವನ ನಾಮ ಜಪಮಾಡಿ, ಅವನು ಅರ್ಚಾರೂಪಿಯಾಗಿ ನಿಂತಿರುವ ದೇವಾಲಯಗಳನ್ನು ಸಂದರ್ಶಿಸಿ ಅವನ ಮೂರ್ತಿಗಳಲ್ಲಿ ದರ್ಶನವನ್ನು ಸಾಕ್ಷಾತ್ಕರಿಸಿಕೊಂಡು ಐಹಿಕ ಆಮುಷ್ಮಿಕ ಫಲಗಳನ್ನು ಪಡೆದು ಆ ದೇವನಲ್ಲಿಯೇ ಸೇರಿದರೆ ಮಾತ್ರ ಜನ್ಮ ಸಾರ್ಥಕವಾಗುವುದು. ನಮ್ಮ ಭರತಖಂಡವು ಪುಣ್ಯಭೂಮಿ, ಭಾರತ ಮಾತೆಯು ಪಾವನಿ, ಆ ತಾಯಿಯು ಉದ್ದಗಲಕ್ಕು ವ್ಯಾಪಿಸಿರುವ ನದಿಗಳ, ಗಿರಿಪರ್ವತಗಳ, ನದೀಸಂಗಮಗಳಲ್ಲಿ ಕಾಣಿಸಿಗುವ ದೇವಾಲಯಗಳಲ್ಲಿ ಭಗವಂತನು ಆರ್ಚಾರೂಪಿಯಾಗಿ ನಿಂತು ದರ್ಶನಕ್ಕಾಗಿ ಬರುವ ಭಕ್ತವೃಂದಕ್ಕೆ ವರಗಳನ್ನು ದಯಪಾಲಿಸಿ ಇಷ್ಟಾರ್ಥ ಪ್ರಾಪ್ತಿಯನ್ನು ಅನಿಷ್ಠಾರ್ಥ ನಿವಾರಣೆಯನ್ನೂ ಉಂಟುಮಾಡುತ್ತಿದ್ದಾನೆ. ಆದ್ದರಿಂದ ಮಾನವರೆಲ್ಲರೂ ತೀರ್ಥಯಾತ್ರೆ ಮಾಡಿ ತೀರ್ಥಕ್ಷೇತ್ರಗಳನ್ನೂ ಪುಣ್ಯಸ್ಥಳಗಳನ್ನು ಸಂದರ್ಶಿಸಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಜನ್ಮಸಾರ್ಥಕ ಪಡಿಸಿಕೊಳ್ಳ...