ಅರವಿಂದಾಶ್ರಮದ ಶ್ರೀಮಾತಾ "ಮಿರಾ"


    ಭಾರತವು ಪುಣ್ಯಭೂಮಿ, ಭಾರತದಲ್ಲಿಯಷ್ಟು ಸಂತರು ದೈವೀಪುರುಷರು ಜಗತ್ತಿನ ಇನ್ಯಾವ ದೇಶದಲ್ಲಿಯೂ ಹುಟ್ಟಿಲ್ಲ. ಭಾರತದ ಅಸಂಖ್ಯ ಸಂತರಲ್ಲಿ ಒಬ್ಬ ಸಂತರ ಜೀವನವನ್ನರಿತು ಅದರಲ್ಲಿ ಅವರ ಒಂದು ತತ್ತ್ವವನ್ನಾದರೂ ನಮ್ಮ ಬಾಳಿನಲ್ಲಿ ಅಳವಡಿಸಿಕೊಂಡಾಗ, ನಮ್ಮ ಜೀವನವು ದಿವ್ಯವಾಗುತ್ತದೆ. ಈ ದೇಶದ ಭೌತಿಕ ಮತ್ತು ದೈವೀ ಸಂಪತ್ತಿಗೆ ಮರಳಾಗದ ವಿದೇಶಿಯನೇ ಇಲ್ಲ. ಪಠಾಣರೂ ಪರ್ಷಿಯನ್ನರೂ ಅರಬರೂ ಈ ದೇಶದ ಸಂಪತ್ತನ್ನು ದೋಚಿಕೊಂಡು ಹೋಗಲು ಬಂದಿದ್ದರೆ, ಹ್ಯೂಯನ್ ತ್ಸಾಂಗರಂತಹ ಚೀನ ಯಾತ್ರಿಕರು ಬುದ್ಧನ ಸಂದೇಶವನ್ನು ತಮ್ಮ ನಾಡಿಗೆ ಕೊಂಡೊಯ್ಯಲು ಈ ನಾಡಿಗೆ ಬಂದರು. ಆ ಕಾಲದಿಂದ ಈ ಕಾಲದವರೆಗೆ, ಯಾತ್ರಿಕರಾಗಿ ವಿದೇಶಿಯರು ಇಲ್ಲಿಗೆ ಬರುತ್ತಲೇ ಇದ್ದಾರೆ. ಅಲೆಕ್ಷಾಂಡರ್ ಈ ದೇಶವನ್ನು ಗೆದ್ದು ಕೊಳ್ಳಲು ಬಂದು ಆದರೆ ಅವನು ಭಾರತದ ಆತ್ಮಶಕ್ತಿಗೆ ತಲೆಬಾಗಿ ಹೋದ ಅಲ್ಲಿಗೇ ಅವನ ದಂಡಯಾತ್ರೆ ರಾಕ್ಷಸೀ ಆಕಾಂಕ್ಷೆಯ ಸಮಾಪ್ತಿಯಾಯಿತು.
    19ನೇ ಶತಮಾನವು ಭಾರತದ ಇತಿಹಾಸದಲ್ಲಿ ಒಂದು ಪರ್ವಕಾಲ, ಪಾಶ್ಚಾತ್ಯ ವಿಧ್ಯೆ ನಾಗರಿ ಕತೆಯನ್ನು ಕಲಿತ ಭಾರತೀಯ ಯುವಕರು ಭಾರತೀಯ ವೇದಾಂತ ತತ್ತ್ವಗಳನ್ನು ಸಂಶಯ ದೃಷ್ಟಿಯಿಂದ ನೋಡಿದರು ಅದರಿಂದ ಇಡೀ ಭಾರತವೇ ತನ್ನ ಪುರಾತನ ಸಂಸ್ಕೃತಿ ವೇದಾಂತಗಳಿಗೆ ತಿಲಾಂಜಲಿಯನ್ನು ಕೊಟ್ಟು, ಒಂದು ಕ್ರಿಶ್ಚಿಯನ್ ದೇಶವಾಗುವ ಸಂದರ್ಭವಿದ್ದಿತು, ಆ ಸಮಯದಲ್ಲಿ ಜನ್ಮವೆತ್ತಿದ ಶ್ರೀ ರಾಮಕೃಷ್ಣರು, ವಿವೇಕಾನಂದ, ದಯಾನಂದ ಸರಸ್ವತಿ, ಶ್ರೀರಾಮ ತೀರ್ಥ, ರಮಣರು 'ಭಾರತದ ವೇದಾಂತವು ಸುಳ್ಳಿನ ಕಂತೆಯಲ್ಲ, ಅದು ಯಾವುದೇ ಪ್ರಯೋಗಿಕ ಪರೀಕ್ಷೆಯಲ್ಲಿ ಅಜೇಯವಾಗಿ ನಿಲ್ಲುವ ಜೀವಂತ ತತ್ತ್ವ ಪ್ರಣಾಳಿಕೆಯಾಗಿದೆ' ಎಂದು ಉದ್ಘೋಷಿಸಿದರು, ಹತ್ತೊಂಬತ್ತನೇ ಶತಮಾನದ ಈ ದೈವೀ ಪುರುಷರ ಸಾಲಿನಲ್ಲಿ ನಂತರದ ತಲೆಮಾರಿನವರಾದ ಶ್ರೀ ಅರವಿಂದರು ತಮ್ಮದೇ ಆದ ವಿಶಿಷ್ಟ ಕಾಂತಿಯಿಂದ ಎದ್ದು ಕಾಣುತ್ತಾರೆ.
    ಭಾರತೀಯರಾಗಿದ್ದರೂ ಇದರ ಸಂಸ್ಕೃತಿ ನಾಗರೀಕತೆಗಳಿಗೆ ತೀರ ಅಪರಚಿತರಾಗಿದ್ದು, ಪಾಶ್ಚಾತ್ಯ ಸಂಸ್ಕೃತಿ ವಿದ್ಯೆಗಳನ್ನು ಅರಗಿಸಿಕೊಂಡಿದ್ದ ಶ್ರೀ ಅರವಿಂದರು ಭಾರತದ ವೇದ ಕಾಲದ ಋಷಿಯಂತೆ ಪರಿವರ್ತಿತರಾಗಿ ಒಬ್ಬ ಮಹಾನ್ ಯೋಗಿಯಾಗಿ, ದಾರ್ಶನಿಕರಾಗಿ ಶಂಕರ, ರಾಮಾನುಜರಂತೆ ಗೀತೆ ಉಪನಿಷತ್ತುಗಳಿಗೆ ವ್ಯಾಖ್ಯಾನಕಾರರಾಗಿ ಭಾರತಕ್ಕೇ ಅಲ್ಲ, ಇಡೀ ಜಗತ್ತಿಗೆ ಹೊಸದಿಕ್ಕು ಮಾರ್ಗಗಳನ್ನು ತೋರಿಸಿದ ಅವತಾರಪುರುಷರಾದರು. ಇದು ಜಗತ್ತಿನ ಇತಿಹಾಸದಲ್ಲಿ 20ನೇ ಶತಮಾನದಲ್ಲಿ ನಡೆದ ಒಂದು ದಿವ್ಯ ಪವಾಡ.
    ವಿವೇಕಾನಂದರಿಗೆ ಸಿಸ್ಟರ್ ನಿವೇದಿತಾ ಎಂಬ ಪಾಶ್ಚತ್ಯ ಮಹಿಳೆಯು ಮುಖ್ಯ ಶಿಷ್ಯಳಾಗಿದ್ದಂತೆ ಪಂಡಿಚೇರಿಯ ಶ್ರೀಮಾತೆ ಶ್ರೀ ಅರವಿಂದರ ಪಟ್ಟ ಶಿಷ್ಯಳಾಗಿ, ಅರವಿಂದ ಯುಗದ ಹರಿಕಾರಳೂ, ಅಧ್ವರ್ಯರೂ ಆದರು. ಅರವಿಂದ ದರ್ಶನವನ್ನು ಕಾರ್ಯರೂಪಿಯಾಗಿ ಮಾಡಿದ ಶ್ರೇಯಸ್ಸು ಮಾತೆಗೆ ಸಲ್ಲುತ್ತದೆ. ಶ್ರೀರಾಮಕೃಷ್ಣರ ತಪಸ್ಸಾಧನೆಯ ಸಂದೇಶವನ್ನು ವಿವೇಕಾನಂದರು ಜಗತ್ತಿನ ಮೂಲೆ ಮೂಲೆಗೆ ಹರಡುವಂತೆ ಶ್ರೀಮಾತೆ ಅರವಿಂದ ತತ್ತ್ವಗಳ ವಾಹಕಳೂ, ಮುಖ್ಯವಾಣಿಯೂ ಆದಳು. ಒಂದೆಡೆ " I donot exist without him, he can not manifest without me" ಎಂದು ಶ್ರೀಮಾತೆಯು ಹೇಳಿರುವುದು ಅರ್ಥಗರ್ಭಿತವಾಗಿದೆ. ಆಕೆಯು ಫ್ರಾನ್ಸ್ ನಲ್ಲಿ ಜನಿಸಿದ ವಿದೇಶಿ ಮಹಿಳೆಯಾಗಿದ್ದರೂ, ತನ್ನ ಕಾರ್ಯರಂಗವು ಭಾರತದಲ್ಲಿದೆ ಎಂಬುದನ್ನು ಅರಿತುಕೊಂಡು ಕೆಲಸಮಾಡಿದಳು. ಆಕೆಯ ಭವ್ಯ ಕಲ್ಪನೆ, ಕಾರ್ಯ ಮತ್ತು ದೃಷ್ಟಿಗಳು ಯಾವುದೇ ದೇಶ ಕಾಲ ಧರ್ಮಕ್ಕೆ ಸೀಮಿತವಾದುವಲ್ಲ.
    ಆಕೆಯ ಹೆಸರು ಮಿರಾ, ಹುಟ್ಟಿದ್ದು ಪ್ರಾನ್ಸಿನಲ್ಲಿ ಒಬ್ಬ ಬ್ಯಾಂಕರನ ಮಗಳಾಗಿ, ಜನನವಾಗಿದ್ದು 21-2-1878ರಲ್ಲಿ ಪೂರ್ವಜರು ಈಜಿಪ್ಟಿಗೆ ಸೇರಿದ ಒಂದು ಪುರಾತನ ಮನೆತನದವರು. ಆಕೆಗೆ ಬಾಲಕಿಯಾಗಿದ್ದಾಗಲೇ ಆನೇಕ ಯೋಗಿಕ ಅನುಭವ ಮತ್ತು ದರ್ಶನಗಳಾಗುತ್ತಿದ್ದವು. ಉದ್ದವಾದ ಚಿನ್ನದ ನಿಲುವಂಗಿಯನ್ನು ತೊಟ್ಟುಕೊಂಡು ಗಗನದೆತ್ತರ ಬೆಳೆದು ನಿಂತಂತೆಯೂ ಪ್ರಪಂಚದ ದುಃಖಿತರೂ ಅರ್ತರೂ ಅವಳೆಡೆಗೆ ಬಂದು ಅವಳ ಆಶ್ರಮವನ್ನು ಪಡೆದಂತೆಯೂ ಅನುಭವವಾಗುತ್ತಿತ್ತು. ತನ್ನ ಬಾಳು ದೀನರ ಆರ್ತರ ಕಣ್ಣೀರನ್ನು ತೊಡೆದುಹಾಕುವುದಕ್ಕಾಗಿಯೇ ದೇವರಿಂದ ಸ್ಪಷ್ಟವಾಗಿದೆ ಎಂದು ಬಾಲ್ಯದಲ್ಲಿಯೇ ಮನವರಿಕೆ ಮಾಡಿಕೊಂಡಿದ್ದಳು. ಪ್ರಾಯಕ್ಕೆ ಬಂದಾಗ ಆಧ್ಯಾತ್ಮಿಕ ಸಾಧಕರ ಗುಂಪನ್ನು ಸಂಘಟಿಸಿದಳು. ಅನೇಕ ಬಾರಿ ಅಕೆಯು ಧ್ಯಾನಸ್ಥಳಾಗಿ ಕುಳಿತಿದ್ದಾಗ ಆಕೆಗೆ ತೀರ ಅಪರಚಿತನಾದ ಒಬ್ಬ ಗುರುವಿನ ದರ್ಶನವಾಗುತ್ತಿತ್ತು. ಅರವಿಂದರನ್ನು ಮೊತ್ತ ಮೊದಲು ಪಾಂಡಿಚೇರಿಯಲ್ಲಿ ಆಕೆ ಸಂಧಿಸಿದಾಗ, ತನ್ನ ದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಹನೀಯನೇ ಈತ, ಈತನೇ ನನ್ನ ಗುರು ಎಂಬುದು ಆಕೆಗೆ ದೃಢವಾಯಿತು.
    1914ರಲ್ಲಿ ತನ್ನ ಪತಿ ಪಾಲ್ ರಿಚರ್ಡ್ ಸನ್ ರೊಂದಿಗೆ ಆಕೆ, ಫ್ರೆಂಚ್ ವಸಾಹತುವಾದ ಪಾಂಡಿಚೇರಿಗೆ ಬಂದಳೂ, ದಿನಾಂಕ 29-3-1914ರಂದು ಆಕೆಗೆ ಮಾತ್ರ ಮೊದಲು ಶ್ರೀ ಅರವಿಂದ ದರ್ಶನವಾಯಿತು. ಮರುದಿನ ತಮ್ಮ ಆಧ್ಯಾತ್ಮಿಕ ದಿನಚರಿಯಲ್ಲಿ ಹೀಗೆ ಬರೆದಳು. 'ಈ ಜಗತ್ತಿನಲ್ಲಿ ಅಜ್ಞಾನದ ಅಂಧಕಾರದಲ್ಲಿ ಮುಳುಗಿದ ಸಾವಿರಾರು ಜನ ಇದ್ದರೂ ಪರವಾಗಿಲ್ಲ. ನಾವು ನಿನ್ನೆ ಕಂಡ ವ್ಯಕ್ತಿ (ಅರವಿಂದರು) ಈ ಭೂಮಿಯಲ್ಲಿ ಇದ್ದಾರೆ. ಅವರ ಅಸ್ತಿತ್ವವು ಜಗತ್ತಿನ ಕತ್ತಲೆಯನ್ನು ಹೊಡೆದೋಡಿಸಿ ಬೆಳಕನ್ನು ತರಬಲ್ಲದೆಂಬುದಕ್ಕೆ ಸಾಕ್ಷಿಯಾಗಿದೆ. ಅವರ ಸಾನ್ನಿಧ್ಯದಿಂದಾಗಿ ದೈವೀರಾಜ್ಯವು ಈ ಭೂಮಿಯಲ್ಲಿ ಸ್ಥಾಪಿತವಾಗಿದೆ."
    ಸ್ವಾತಂತ್ರ್ಯವನ್ನು ಪಡೆಯಲು ಬಂದೂಕನ್ನು ಹಿಡಿಯುವುದು ತಪ್ಪಲ್ಲ ಎಂಬ ಭಾವನೆಯಿಂದ ಅಪಾಯಕಾರಿಯಾದ ಕ್ರಾಂತಿಯಲ್ಲಿ ತೊಡಗಿದ್ದ ಅರವಿಂದರು ಕ್ರಮೇಣ ಭಾರತದ ಅಂತರಿಕ ಶಕ್ತಿಯ ಬಗ್ಗೆ ಗಮನ ಹರಿಸಿದರು. ತಪಸ್ಸು, ಧ್ಯಾನ ಉತ್ಕಟ ಅಭೀಷ್ಟೆಗಳಿಂದ ಆಧ್ಯಾತ್ಮಿಕ ಶಕ್ತಿಯನ್ನು ವರ್ಧಿಸಿಕೊಂಡು, ಭಾರತದ ಸ್ವಾತಂತ್ರ್ಯವನ್ನು ಪಡೆಯಬಹುದೆಂಬ ಅಭಿಪ್ರಾಯಕ್ಕೆ ಬಂದರು. ಆದರೂ ಆಂಗ್ಲ ಆಳರಸರು ಅವರನ್ನು ಸಂಶಯದ ದೃಷ್ಟಿಯಿಂದಲೇ ಗಮನಿಸುತ್ತಿದ್ದರು. ಅದರಿಂದ ಅರವಿಂದರು ಬ್ರಿಟಿಷರ ಕಣ್ಣು ತಪ್ಪಿಸಲು ಅಂದು ಫ್ರೆಂಚ್ ವಸಾಹತುವಾಗಿದ್ದ ಪಾಂಡಿಚೇರಿಯನ್ನು ಅರಿಸಿಕೊಂಡರು. ಅಲ್ಲಿಯ ಒಂದು ಮನೆಯಲ್ಲಿದ್ದುಕೊಂಡು, ಯೋಗದಲ್ಲಿ ನಿರತರಾಗಿದ್ದರು. ಅವರ ಜೊತೆಗೆ ಅವರ ಕೆಲವು ಅನುಯಾಯಿಗಳೂ ಇದ್ದರು, ಆಗ ಅವರ ಆರ್ಥಿಕ ಸ್ಥಿತಿಯು ಅಷ್ಟೇನೂ ಚೆನ್ನಾಗಿರಲಿಲ್ಲ, ಅವರ ಊಟ ತಿಂಡಿಗಳಲ್ಲಿಯೂ ಕಾರ್ಪನ್ಯವಿದ್ದಿತು, ಆಗ ಮದಾಂ ಮಿರಾ ಅರವಿಂದರಿಗೆ ಸಹಾಯ ಮಾಡಲು ಉದ್ಯುಕ್ತರಾದರು. ಅವರ ಉಟೋಪಚಾರ, ವಸತಿಗಳ ವ್ಯವಸ್ಥೆ ಮಾಡಿದಳು. "ಆರ್ಯ"ಎಂಬ ಪತ್ರಿಕೆಯನ್ನು ಇಂಗ್ಲೀಷಿನಲ್ಲಿ ಮತ್ತು ಫ್ರೆಂಚ್ ಭಾಷೆಯಲ್ಲಿ ಹೊರಡಿಸಲು ಏರ್ಪಾಟು ಮಾಡಿದಳು. ಸೃಷ್ಟಿಯಲ್ಲಿ ಪರಮಾತ್ಮನು ಅವಿಷ್ಕಾರಗೊಳ್ಳುವ ದರ್ಶನದ ಬಗ್ಗೆ ಈ ಪತ್ರಿಕೆಯಲ್ಲಿ ಅರವಿಂದರ ಲೇಖನಗಳು ಮೇಲಿಂದ ಮೇಲೆ ಬಂದವು.
    1915ರಲ್ಲಿ ಪ್ರಥಮ ಜಾಗತಿಕ ಯುದ್ಧದ ಕಾರಣದಿಂದಾಗಿ ಮದಾಂ ಮಿರಾ ಪ್ರಾನ್ಸಿನಗೆ ತೆರಳಿದರು. ಈ ಅವಧಿಯಲ್ಲಿಯೂ, ಅವರ ಆಧ್ಯಾತ್ಮಕ ಸಾಧನೆ ಎಡೆಬಿಡದೆ ಸಾಗುತ್ತಲೇ ಇತ್ತು. ಮಾರನೆಯ ವರ್ಷ ಜಪಾನಿಗೆ ಭೇಟಿಕೊಟ್ಟರು. ಆಕೆ ಟೋಕಿಯೋ ನಗರ ಬೀದಿಯಲ್ಲಿ ಸಂಚರಿಸುತ್ತಿದ್ದಾಗ ಎಲ್ಲರಲ್ಲಿಯೂ ಪರಮಾತ್ಮನ ಸಾನ್ನಿಧ್ಯವಿದೆ ಎಂಬುದರ ಅರಿವು ಉಂಟಾಗಿ ದೈವೀ ಸಾಕ್ಷಾತ್ಕಾರವಾಯಿತು. ಕಿಮೋನೋ ಧರಿಸಿದ ಓರ್ವ ಜಪಾನಿ ಸುಂದರ ಯುವತಿಯಲ್ಲಿಯೂ ನಾನು ಪರಮಾತ್ಮನನ್ನು ಕಂಡೆ ಎಂದು ಅಂದಿನ ದಿನಚರಿಯಲ್ಲಿ ಬರೆದಿದ್ದಾರೆ.
    ತಾನು ಅರವಿಂದರ ಶಿಷ್ಯಳಾಗಿ, ಸಹಚರಿಯಾಗಿ ಮಹತ್ತರವಾದ ಕಾರ್ಯ ಮಾಡಬೇಕಾಗಿದೆ ಎಂದು ಈ ಮೊದಲೇ ಅರಿತಿದ್ದ ಮದಾಂಮಿರಾ ರಿಚರ್ಡ್ ಪಾಂಡಿಚೆರಿಗೆ 1920ರ ಏಪ್ರಿಲ್ 24ರಂದು ಬಂದರು. ತನ್ನ ಎಲ್ಲ ಭೌತಿಕ ಸಂಬಂಧವನ್ನು ಕಳಚಿಕೊಂಡು ಶ್ರೀ ಅರವಿಂದರ ಪದತಲದಲ್ಲಿ ತನ್ನನ್ನು ಅರ್ಪಿಸಿಕೊಂಡರು. ಕ್ರಮೇಶ ದೇಶ ವಿದೇಶಗಳಿಂದ ಅನೇಕರು ಅರವಿಂದರ ದರ್ಶನದಿಂದ ಆಕರ್ಷಿತರಾಗಿ ಅವರ ಬಳಿಗೆ ಬಂದರು. ಈ ಸಾಧಕರು ಸಾಧನೆಯಲ್ಲಿ ತೊಡಗಲು ಅದಕ್ಕಾಗಿ ಮಾರ್ಗದರ್ಶನ ಮಾಡುವ ಮತ್ತು ಅವರಿಗೆಲ್ಲಾ ಭೋಜನ ವ್ಯವಸ್ಥೆ ಮಾಡುವ ಹೊಣೆ ಆಕೆಯ ಮೇಲೆ ಬಿದ್ದಿತು. ಅರವಿಂದರು ಗಭೀರತರ ಸಾಧನೆಯಲ್ಲಿ ಮಗ್ನರಾದಂತೆ ಆಶ್ರಮದ ಸಕಲ ಕಾರ್ಯಗಳ ವ್ಯವಸ್ಥೆಯನ್ನು ತಾವೇ ನೋಡಿಕೊಂಡರು. ಅದಕ್ಕೆ ಅಗತ್ಯವಾದ ಹಣ ಅರವಿಂದರ ಬಳಿಯೂಗಲಿ, ಆಕೆಯಲ್ಲಾಗಲೀ ಇರಲಿಲ್ಲ ಆಕೆಯಲ್ಲಿದ್ದ ಧೈರ್ಯ, ಗುರುವಿನಲ್ಲಿದ್ದ ಭಕ್ತಿ ಆದರ್ಶದಲ್ಲಿ ದೃಢ ಶ್ರದ್ಧೆ ಇವೇ ಆಕೆಯನ್ನು ಮಹತ್ಕಾರ್ಯಕ್ಕೆ ಪ್ರೇರೇಪಿಸಿದವು. ದಾರುಣವಾದ ಆರ್ಥಿಕ ಮುಗ್ಗಟ್ಟಿಗೆ ಕುಗ್ಗದೆ, ಆಶ್ರಮವನ್ನು ರೂಪಿಸಿ ಸಾಧಕರ ಬಾಹ್ಯ ಮತ್ತು ಆಂತರಿಕ ಸಾಧನೆಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಎಲ್ಲ ಶಕ್ತಿಯನ್ನುಪಯೋಗಿಸಿದರು. ಅವರ ದಕ್ಷತೆ ಸಮರ್ಪಣಾಭಾವ ಕರ್ತೃತ್ವ ಶಕ್ತಿಯನ್ನು ನೋಡಿ ಎಲ್ಲರು ಬೆರಗಾಗುವಂತಾಯಿತು.
    ಮದಾಂ ಮಿರಾ ಇನ್ನು ಮುಂದೆ, ಆಶ್ರಮದ ತಾಯಿಯಾದರು. ಅಂದಿನಿಂದ ಅವರನ್ನು ಮಾತೆ(ಮದರ್) ಎಂದು ಕರೆಯುವುದು ರೂಢಿಗೆ ಬಂತು ಆಶ್ರಮವಾಸಿಗಳಿಗೆ ಮಾತ್ರವಲ್ಲ, ದೇಶ ವಿದೇಶದ ಆಧ್ಯಾತ್ಮಿಕ ಪಿಪಾಸುಗಳಿಗೆಲ್ಲ ಆಕೆಯು ಶ್ರೀಮಾತೆಯಾದಳು. ಲೌಕಿಕ ದೃಷ್ಟಿಯಿಂದ ಬಾಹ್ಯ ಜೀವನದಿಂದ ನಿವೃತ್ತನಾಗಿದ್ದೇನೆ, ಇನ್ನು ಮುಂದೆ ಮಾತೆಯೇ ನನ್ನ ಸಂದೇಶವನ್ನು ಬಿತ್ತರಿಸುವಳೂ. ಸಾಧಕರು ಮಾರ್ಗದರ್ಶನಕ್ಕೆ ಆಕೆಯ ಬಳಿಗೆ ಹೋಗಬೇಕೆಂದು ಅರವಿಂದರು ಘೋಷಿಸಿದರು.
    ಅರವಿಂದರ ಈ ನಿಲುವು ಅನೇಕ ತಪ್ಪು ಭಾವನೆಗಳಿಗೆ ಎಡೆಗೊಟ್ಟಿತು. ಒಬ್ಬ ವಿದೇಶಿ ಮಹಿಳೆಗೆ ಸಕಲ ಜವಾಬ್ದಾರಿಗಳನ್ನು ವಹಿಸಿ ಕೊಡುವುದನ್ನು ಅನೇಕರು ವಿರೋಧಿಸಿ ಪತ್ರ ಬರೆದರು. ಅವರಿಗೆ ಅರವಿಂದರು ಕೊಟ್ಟ ಉತ್ತರವು ಬಹು ಅರ್ಥಪೂರ್ಣವೂ ಸ್ವಾರಸ್ಯಕರವೂ ಆಗಿದೆ. ಆಶ್ರಮವು ಹೊರಡಿಸಿದ್ದ "Arabindo on Mother" ಎಂಬ ಪ್ರಕಟಣೆಯು 400ಪುಟಕ್ಕೂ ಮಿಕ್ಕಿದೆ. 'ಯುಗ ಯುಗಳೀಂದ ನಾವಿಬ್ಬರೂ ಜೋತೆ ಜೊತೆಯಾಗಿ ಕೆಲಸ ಮಾಡಿದ್ದೇವೆ. ನಮ್ಮಿಬ್ಬರ ಪ್ರಜ್ಞೆ ಒಂದೇ ಆಗಿದೆ. ಅನುಯಾಯಿಗಳ ಭೌತಿಕ ಮತ್ತು ಆಂತರಿಕ ಜೀವನ ಸೌಕರ್ಯಕ್ಕಾಗಿ ಆಶ್ರಮವನ್ನು ರೂಪಿಸುವುದು ಅವಶ್ಯಕವಾಗಿತ್ತು. 1926ರಿಂದ ನಾನು ಏಕಾಂತವಾಸದಲ್ಲಿ ತೊಡಗಿದಾಗ ಆಶ್ರಮದ ಇಡಿಯ ಹೊಣೆಯನ್ನು ಅವರಿಗೆ ವಹಿಸಿ ಕೊಡ ಬೇಕಾಯಿತೆಂಬುದನ್ನು ಮೇಲ್ಕಂಡ ಪ್ರಕಟಣೆಯಲ್ಲಿ ಶ್ರೀ ಅರವಿಂದರು ಸ್ಪಷ್ಟಪಡಿಸಿದರು. ಈ ಸಂಬಂಧವಾಗಿ ಅರವಿಂದರು ಸ್ಪಷ್ಟಪಡಿಸಿದರು. ಈ ಸಂಭಂಧವಾಗಿ ಅರವಿಂದರು ವ್ಯಕ್ತಪಡಿಸಿದ ಕೆಲವು ವಿಚಾರಗಳು ಆಧ್ಯಾತ್ಮ ದೃಷ್ಟಿಯಿಂದ ಬಹಳ ಮಹತ್ವದ್ದಾಗಿವೆ.
    ಸಾಧಕನು ತನ್ನ ಅಂತರಾತ್ಮನ ಆದೇಶಕ್ಕನುಗುಣವಾಗಿ ಕರ್ಮ ತತ್ಪರನಾಗಲು ಮಾತೆಯ ಕೃಪೆ ಬೇಕು, ಸಾಧಕನನ್ನು ಭಗವಂತನತ್ತ ಕರೆದೊಯ್ಯುವ ಶಕ್ತಿಯೇ ಪ್ರತಿಮಾರೂಪದಲ್ಲಿ ಜಗನ್ಮಾತೆಯಾಗುವಳು. ಈ ಶಕ್ತಿಯನ್ನು ವೈದಿಕ ಋಷಿಗಳು ಆದಿಶಕ್ತಿ ಎಂದು ಸಾಂಕೇತಿಕವಾಗಿ ಕರೆದಿದದಾರೆ. ಮಾತೃಶಕ್ತಿಯಿಂದಲೇ ಬೆಳಕಿನ ಉದಯ ಮತ್ತು ದಿವ್ಯ ಜೀವನದ ಅವಿರ್ಭಾವವೆಂದು ಅರವಿಂದರು ಹೇಳುತ್ತಾರೆ. ವಿಶ್ವವೆಲ್ಲ ಆಕೆಯ ಸೃಷ್ಟಿ, ಆಕೆಯ ಕೃಪೆ ಇಲ್ಲದಿದ್ದರೆ ಯಾರೂ ಮುಕ್ತರಾಗುವಂತಿಲ್ಲ, ತಮ್ಮ ಪೂರ್ಣ ಯೋಗಕ್ಕೆ ಆಕೆಯ ಮಾಹೇಶ್ವರಿಯಾಗಿ ಜ್ಯೋತಿರ್ಮಯ ಬುದ್ಧಿಯನ್ನು ಕೊಡುತ್ತಾಳೆ. ಮಹಾಕಾಳಿಯಾಗಿ ಮಹಾಶಕ್ತಿಯನ್ನು ನೀಡುತ್ತಾಳೆ. ಮಹಾ ಲಕ್ಷ್ಮಿಯ ರೂಪದಲ್ಲಿ ಪ್ರಸನ್ನವಾದ ಮನಸ್ಸನ್ನೂ ಮಹಾಸರಸ್ವತಿಯಾಗಿ ದಿವ್ಯ ಅಭೀಷ್ಟವನ್ನೂ ಸಮನ್ವಯ ದೃಷ್ಟಿಯನ್ನೂ ನೀಡುತ್ತಾಳೆ. ಆಶ್ರಮದ ಮಾತೆಯನ್ನು ಕೇವಲ ಭೌತಿಕ ದೃಷ್ಟಿಯಿಂದ ನೋಡದೆ, ಆಕೆಯಲ್ಲಿ ಈ ಶಕ್ತಿ ಪ್ರಭೇದಗಳನ್ನು ಸ್ವರೂಪವನ್ನೂ ಕಂಡು ಕೊಳ್ಳ ಬೇಕೆಂದು ಅರವಿಂದರು ಆದೇಶವನ್ನಿತ್ತರು.
    ಸಾಧಕರಿಗೆ ಕೇವಲ ಧ್ಯಾನ ಮತ್ತು ಪ್ರಾರ್ಥನೆಗೆ ಮಾತ್ರ ಆಶ್ರಮದಲ್ಲಿ ವ್ಯವಸ್ಥೆ ಮಾಡಿ ಕೊಟ್ಟರೆ ಸಾಲದು. ಆಶ್ರಮವಾಸಿಗಳಿಗೆ ಒಳ್ಳೆಯ ಆರೋಗ್ಯಕರವಾದ ಶುಚಿಯಾದ ಊಟ ಉಪಾಹಾರಗಳ ವ್ಯವಸ್ಥೆ ಇರಬೇಕು. ಅದಕ್ಕಾಗಿ ಆಶ್ರಮದಲ್ಲಿ ಪಾಕಶಾಲೆ ಭೋಜನಶಾಲೆಗಳನ್ನು ನಿರ್ಮಿಸಬೇಕಾಯಿತು. ಆಶ್ರಮಕ್ಕೆ ಅವಶ್ಯವಾದ ಧ್ಯಾನ್ಯ ತರಕಾರಿ ಹಣ್ಣು ಹಂಪಲುಗಳನ್ನು ಬೆಳೆಸಲಾಯಿತು. ಆತ್ಮಶಕ್ತಿ ಬೆಳೆಸಿಕೊಳ್ಳಲು ಧ್ಯಾನ ಪ್ರಾರ್ಥನೆಗಳು ಹೇಗೆ ಅಗತ್ಯವೋ, ದೇಹದ ಬಲ ಸಂವರ್ಧನೆಗೆ ವ್ಯಾಯಾಮ ಕ್ರೀಡೆಗಳೂ ಬೇಕು. ಆಶ್ರಮದಲ್ಲಿ ಆಟ ಪಾಟಗಳಿಗೆ ಪ್ರತ್ಯೇಕ ಮೈದಾನದ ವ್ಯವಸ್ಥೆಯಾಯಿತು. ಮುದ್ರಣಾಲಯ, ಆಸ್ಪತ್ರೆ, ಗ್ರಂಥಾಲಯ, ಅಧ್ಯಯನ ಕೋಣೆಗಳು ಶೌಚಗೃಹಗಳು ನಿರ್ಮಿತವಾದವು. ಆಧ್ಯಾತ್ಮಿಕ ಸಂಕೇತವನ್ನು ಹೊರಸೂಸುವ ಪುಷ್ಪಗಳನ್ನು ಬೆಳೆಸಲು ವಿಶಾಲವಾದ ಕಂಗೊಳಿಸುವ ಉದ್ಯಾನಗಳನ್ನು ರೂಪಿಸಲಾಯಿತು. ಒಂದು ರೀತಿಯಲ್ಲಿ ಆಶ್ರಮವು ಒಂದು ಪುಟ್ಟನಗರವೇ ಆಯಿತು. ಅರವಿಂದರ ಪೂರ್ಣಯೋಗ ಮತ್ತು ಅತಿ ಮಾನಸದ ಅವತರಣಕ್ಕೆ ತಕ್ಕುದಾದ ರೀತಿಯಲ್ಲಿ ಆಶ್ರಮದ ವ್ಯವಸ್ಥೆಯಾಯಿತು ಯಾವ ಮತೀಯ, ಸಂಪ್ರದಾಯದ ಶೃಂಖಲೆಗಳಿಲ್ಲದಿದ್ದರೂ, ಶಿಸ್ತು ನಿಯಮ ಸಂಯಮಗಳ ಚೌಕಟ್ಟಿನಲ್ಲಿ ಆಶ್ರಮವಿದೆ. ಶ್ರೀ ಮಾತೆಯ ಮಾರ್ಗದರ್ಶನ ಆರೈಕೆ ವಾತ್ಸಲ್ಯಗಳು ನಿರಂತರವಾಗಿ ವಿಪುಲವಾಗಿ ಮಹಾಪೂರವಾಗಿ ಆಶ್ರಮ ವಾಸಿಗಳಿಗೆ ದೊರಕುವಂತಾಯ್ತು. 1947 ಆಗಸ್ಟ್ 15ರಂದು ಭಾರತವು ಪಾರತಂತ್ರ್ಯದ ನೊಗವನ್ನು ಕಳಚಿಕೊಂಡು ಪೂರ್ಣ ಸ್ವಾತಂತ್ರ ಪಡೆಯಿತು. ಆಶ್ಚಯ್ಯವೆಂದರೆ ಅದೇ ದಿವಸ ಅರವಿಂದರ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿತ್ತು. 'ಇದರಲ್ಲಿ ಗಹನವಾದ ಅರ್ಥವಿದೆ' ಎಂದು ಅರವಿಂದರು ನುಡಿದರು. 1950ರ ಡಿಸೆಂಬರ್ 5ನೆಯ ದಿನಾಂಕ ಶ್ರೀ ಅರವಿಂದರು ಮಹಾಸಮಾಧಿಯನ್ನು ಪಡೆದರು. ಅವರ ಪಾರ್ಥಿವ ಶರೀರವನ್ನು ಸಮಾಧಿಯಲ್ಲಿರಿಸುವ ಸಮಯದಲ್ಲಿ "ನಮಗಾಗಿ ದುಡಿದು, ಹೋರಾಡಿ ಯಾತನೆಗಳನ್ನು ಅನುಭವಿಸಿ, ವಿಶ್ಚದ ಉಜ್ವಲ ಭವಿಷ್ಯವನ್ನು ಹಾರೈಸಿದ ನಿಮಗೆ ಭಕ್ತಿಯ ಪ್ರಣಾಮಗಳು" ಎಂದು ಶ್ರೀಮಾತೆ ಶ್ರದ್ಧಾಂಜಲಿಯನ್ನು ಸಮರ್ಪಿಸಿದರು. ಮಾತೆಯವರು ಅರವಿಂದರ ಸಮಾಧಿಯ ನಂತರ ಅವರ ಪೂರ್ಣಯೋಗದ ಸಾಧಕರಿಗೆ ಸಾರಸರ್ವಸ್ವವಾದರೂ ಅಂತರರಾಷ್ಟ್ರೀಯ ದೃಷ್ಟಿಯನ್ನಿಟ್ಟುಕೊಂಡು ಅರವಿಂದರ ಮಹಾನ್ ತತ್ತ್ವಕ್ಕನುಗುಣವಾಗಿ ವಿಕಸಿತವಾಗಿರುವ ಕಮಲದ ಮಾದರಿಯಲ್ಲಿ 'ಅರೋನಿಲ್' ನಗರದ ನಿರ್ಮಾಣವಾಯಿತು. ಜಗತ್ತಿನ ಎಲ್ಲ ದೇಶಗಳ ಮಣ್ಣನ್ನು ತಂದು 'ಅರೋನಿಲ್' ನಗರಕ್ಕೆ ಅಸ್ತಿವಾರ ಹಾಕಲಾಯಿತು 1956ರಲ್ಲಿ ಶ್ರೀ ಅರವಿಂದರ ಅತಿಮಾನಸ ಶಕ್ತಿಯು ಭುವಿಗೆ ಇಳಿದು ಬಂದಿತೆಂದು ಮಾತೆ ಘೋಷಿಸಿದರು. ಮಾತೆಯವರು 95ನೇಯ ವರ್ಷಕ್ಕೆ ಕಾಲಿಡುತ್ತಿದ್ದಂತೆ ಕ್ರಮೇಣ ದೈಹಿಕ ಪ್ರಜ್ಞೆ ಮತ್ತು ಅಚರ ಅವಶ್ಯಕತೆಯನ್ನು ಕಡಿಮೆ ಮಾಡಿ ಕೊಳ್ಳುತ್ತಾ, ಸೂಕ್ಷ್ಮ ಶರೀರ ರಚನೆಯಲ್ಲಿ ತೊಡಗಿದಂತೆ ತೋರಿತು. 1973ರ ನವೆಂಬರ್ 17ನೆಯ ದಿನಾಂಕದಂದು ಶ್ರೀಮಾತೆ ಮಹಾಸಮಾಧಿಯನ್ನು ಹೊಂದಿದರು. ಫ್ರಾನ್ಸ್ ದೇಶ ತಮಗೆ ಜನ್ಮ ಕೊಟ್ಟ ನಾಡಾಗಿದ್ದರೂ, ಅವರು ಭಾರತ ಮಾತೆಯನ್ನು ಆರಾಧ್ಯ ದೇವತೆಯನ್ನಾಗಿ ಮಾಡಿಕೊಂಡರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಮತ್ತು ಪಾಂಡಿಚೆರಿ ಫ್ರೆಂಚ್ ಆಡಳಿತದಿಂದ ಮುಕ್ತವಾದಾಗ ತಮ್ಮ ತೀವ್ರ ಸಂತೋಷವನ್ನು ವ್ಯಕ್ತಪಡಿಸಿದರು. ಇಲ್ಲಿಯ ನೆಲದ ಕಣ ಕಣದಲ್ಲಿರುವ ಆಧ್ಯಾತ್ಮಿಕತೆಯನ್ನು ಅರಗಿಸಿ ಕೊಂಡರು. ಶ್ರೀ ಅರವಿಂದರ ಪೂರ್ಣಯೋಗ ಮತ್ತು ಅತಿಮಾನಸದ ಅವತಾರವನ್ನು ವಿಶ್ವವ್ಯಾಪಿಯನ್ನಾಗಿ ಮಾಡಿದರು. ತಮ್ಮ 95 ವರ್ಷದ ದೀರ್ಘ ಬಾಳಿನಲ್ಲಿ ಸುಮಾರು 80ಕ್ಕೂ ಮಿರಿದ ಹಿಚ್ಚು ವರ್ಷಗಳಕಾಲ ಪರಮಾತ್ಮನ ಅನುಸಂಧಾನದಲ್ಲಿ ತೊಡಗಿದ್ದರು.
    ಕೊನೆಯದಾಗಿ ಶ್ರೀಮಾತೆಯವರು ಮನಕುಲದ ಉದ್ದಾರಕ್ಕಾಗಿ ಹೀಗೆ ಹಾರೈಸಿದ್ದಾರೆ.
    "ಸಕಲ ಮಾನವರ ಹೃದಯಗಳಲ್ಲಿ ಪ್ರಶಾಂತ ಪ್ರಸನ್ನತೆಯು ನೆಲಸಲಿ, ದೃಡವಾದ ಭರವಸೆಯು ಅವರ ಮನಗಳನ್ನು ಬಲಪಡಿಸಲಿ, ಎಲ್ಲರಲ್ಲಿಯೂ ದೈವೀ ಚೇತನವು ಸಂಜೀವಿನೀ ಶಕ್ತಿಯ ಪ್ರವಾಹವಾಗಿ ಪ್ರವಹಿಸಲಿ"

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ