ಶ್ರೀ ಯಾದವಗಿರಿ ಕಲ್ಯಾಣೀತೀರ್ಥ ಮತ್ತು ಸುಚರಿತನೆಂಬ ಬ್ರಾಹ್ಮಣನ ಕಥೆ



ಧಾತ್ರೀಮುದ್ಧೃತ್ಯ ಪೋತ್ರೀ ಶ್ರಮಜಲ ಮಸೃಜಸ್ಸ್ವಸ್ಯ ಸರ್ವಾಂ
ಗಜಾತಂ ಕಲ್ಯಾಣಂ ನಾಮ ತೀರ್ಥಂ ತದಭವದಿಹ ಸಾ ಸರ್ವಪಾಪಾ ಪಹರ್ತ್ರೀ |
ಗಂಗಾ ಸರ್ವೈಶ್ಚ ತೀರ್ಥೈ ಸ್ಸಹ ವಸತಿ ನಿಜಂ ಪಾಪ ಮು
ನ್ಮೋಚಯಂತೀ ಪ್ರತ್ಯಬ್ದಂ ಫಾಲ್ಗುನೇ ಮಾಸ್ಯಪಿಚ ಶತಗುಣಂ ಯತ್ರ
ಪುಣ್ಯಂ ಕೃತಂ ಸ್ಯಾತ್ ||
    ಆದಿವರಾಹಮೂರ್ತಿಯು ಭೂದೇವಿಯನ್ನು ಎತ್ತಿಕೊಂಡು ಬಂದಾಗ ಶ್ರಮದಿಂದ ತನ್ನ ಸರ್ವಾಂಗಗಳಿಂದಲೂ ಸ್ರವಿಸಿದ ಬೆವರು ನೀರು "ಕಲ್ಯಾಣ" ಎಂಬ ತೀರ್ಥವಾಯಿತು ಮತ್ತು ಸ್ನಾನಾದಿಗಳಿಂದ ಎಲ್ಲರ ಪಾಪವನ್ನೂ ಪರಿ ಹರಿಸುವ ಗಂಗಾನದಿಯು ಸಕಲ ತೀರ್ಥಗಳೊಡನೆ ಕೂಡಿ ತನ್ನ ಪಾಪವನ್ನು ಪರಿಹರಿಸಿಕೊಳ್ಳುವುದಕ್ಕೋಸ್ಕರ ಪ್ರತಿವರ್ಷವೂ ಫಾಲ್ಗುಣ ಮಾಸದಲ್ಲಿ ಈ ಕಲ್ಯಾಣ ತೀರ್ಥದಲ್ಲಿ ವಾಸಮಾಡುವಳು ಮತ್ತು ಇದರ ತೀರದಲ್ಲಿ ಮಾಡಿದ ತಪೋ ದಾನಾದಿ ಪುಣ್ಯ ಕಾರ್ಯಗಳು ಇತರ ಕಡೆಗಳಲ್ಲಿ ತಾವು ಕೊಡತಕ್ಕ ಫಲಕ್ಕಿಂತಲೂ ಬಹಳ ಭಾಗ ಅಧಿಕವಾಗಿ ಕೊಡುವುದು.

ತೀರ್ಥ ಕ್ಷೇತ್ರಾದಿ ನಿಷ್ಠ ಸ್ಸುಚರಿತ ಇತಿ ಯಃ ಕಶ್ಚಿ ದಾಸೀದ್ದ್ವಿ
ಜಾಗ್ರ್ಯಃ ಪುತ್ರಾಭ್ಯಾಂ ಭಾರ್ಯಯಾ ಚ ಸ್ವಯಮತಿ ಜರಠೋ ದುರ್ವಿಧಾಗ್ರೇಸರಶ್ಚ |
ಸೋಯಂ ಕಲ್ಯಾಣತೀರ್ಥಂ ಯದುಗಿರಿ ಮಪಿ
ವಾ ಶುಶ್ರುವಾ ನ್ನೈವ ಪೂರ್ವಂ ಗಂಗಾ ಸ್ನಾನಾರ್ಥ ಮಾಗಾ ತ್ಸುರ ಸರಿದಪಿ ತದ್ದೃಷ್ಟಿಮಾರ್ಗಂ ನ ಲೇಭೇ ||
    ಯಾವಾಗಲೂ ತೀರ್ಥ ಕ್ಷೇತ್ರಾದಿ ಯಾತ್ರಾಪರನಾಗಿಯೂ ಮುದುಕನಾಗಿಯೂ ದರಿದ್ರನಾಗಿಯೂ ಇದ್ದ ಸುಚರಿತನೆಂಬ ಒಬ್ಬ ಬ್ರಾಹ್ಮಣನಿದ್ದನು. ಅವನು ಯದುಗಿರಿಯನ್ನೂ ಕಲ್ಯಾಣಿಯನ್ನೂ ನೋಡಿಯೂ ಕೇಳಿಯೂ ಇರಲಿಲ್ಲ ಇಂತಹ ಬ್ರಾಹ್ಮಣನು ಇಬ್ಬರು ಗಂಡುಮಕ್ಕಳೊಡನೆಯೂ ಹೆಂಡತಿಯೊಡನೆಯೂ ಸ್ನಾನಾರ್ಥವಾಗಿ ಗಂಗಾನದಿಗೆ ಹೋದನು. ಆದರೆ ಗಂಗಾನದಿಯು ಇವನ ಕಣ್ಣಿಗೆ ಗೋಚರವಾಗಲಿಲ್ಲ.
   
ನಿರ್ದಿಷ್ಟಾಂ ಸ್ನಾತಪೀತೈಸ್ತವ ಪುರತ ಇಯಂ ಸೇತಿ ಗಂಗಾಂ
ತತೋ ಸೌ ನಾಪಶ್ಯದ್ದುಃಖಿತಸ್ಸನ್ವ್ಯಲಪದತಿತರಾಂ ಕಿಂತು ಕನ್ಯಾಂ ದದರ್ಶ |
ಸ್ನಾತಂ ಕಲ್ಯಾಣತೀರ್ಥೇ ನ ಹಿ ವಿದಿತ ಮಭೂತ್ತಸ್ಯ ನಾ
ಮಪಿ ನೋ ಚೇತ್ ತತ್ರ ತ್ವಂ ಗಚ್ಛ ಶಕ್ತೋ ನ ಹಿ ಯದಿ ಪಠ ವಾ
ನಾಮ ತಸ್ಯ ತ್ರಿವಾರಮ್ ||
ಉಕ್ತಿ ಪ್ರತ್ಯುಕ್ತಿ ಭಂಗ್ಯಾ ನಿಯಮಿತ ಇತಿ ತತ್ತೀರ್ಥನಾಮ ತ್ರಿವಾರಂ
ಪ್ರೋಚ್ಯಾ ಸೌ ಮಜ್ಜತಿ ಸ್ಮ ತ್ರಿಭುವನತಟಿನೀ ವಾರಿಣಿ ಪ್ರಾಪ್ತ ಮೋದಃ |
ಕಲ್ಯಾಣೀತೀರ್ಥಮಧ್ಯಾದುದಪತದಥ ಸ ಬ್ರಾಹ್ಮಣೋ
ವಿಸ್ಮಿತ ಸ್ತೈ ಸ್ತತ್ರತ್ಯೈಃ ಪೃಷ್ಟ ಏಷ ಪ್ರಕಟಿತ ಚರಿತ ಸ್ತತ್ರ ವಾಸಂ ಸ್ರಚಕ್ರೆ ||
    ಗಂಗಾನದಿಯಲ್ಲಿ ಸ್ನಾನ ಪಾನಾದಿಗಳನ್ನು ಮಾಡುತಿದ್ದವರು "ಇಗೋ ಇದೇ ಗಂಗಾನದಿ" ಎಂದು ಹೇಳಿದಾಗ್ಯೂ ಈ ಸುಚರಿತನು ಗಂಗೆಯನ್ನು ಕಾಣದೆ ಇದ್ದುದರಿಂದ ಬಹಳ ದುಃಖದಿಂದ ಅತ್ತನು. ಆಗ ಒಬ್ಬ ಕನ್ಯಕೆಯು ಬಂದು "ಎಲೈ ಬ್ರಾಹ್ಮಣನೇ! ಕಲ್ಯಾಣೀತೀರ್ಥದಲ್ಲಿ ಸ್ನಾನಮಾಡಿದೆಯಾ?" ಎಂದು ಕೇಳಿದಳು ಅದಕ್ಕೆ ಬ್ರಾಹ್ಮಣನು "ಅದರ ಹೆಸರನ್ನೆ ಕೇಳಲಿಲ್ಲ" ಎಂದನು ಕನ್ಯಕೆಯು "ಆದರೆ ಅಲ್ಲಿಗೆ ಹೋಗಿ ಸ್ನಾನಮಾಡಿ ಬಾ" ಎಂದಳು. ಬ್ರಾಹ್ಮಣನು, "ನನಗೆ ಶಕ್ತಿಯೂ ಇಲ್ಲ, ಅಲ್ಲಿಗೆ ಹೋಗಿ ಪುನಃ ಇಲ್ಲಿಗೆ ಬರುವುದಕ್ಕೆ ಏನು ಭರವಸೆ" ಎಂದನು. ಕನ್ಯಕೆಯು ಆದರೆ "ಕಲ್ಯಾಣಿ" ಎಂದು ಮೂರಾವರ್ತಿ ನೀವು ನಾಲ್ಕು ಮಂದಿಯೂ ಹೇಳಿ ಈ ಗಂಗಾನದಿಯಲ್ಲಿ ಸ್ನಾನ ಮಾಡಿರಿ" ಎಂದಳು. ಹೀಗೆ ಕನ್ಯಾರೂಪಿಣಿಯಾದ ಗಂಗಾ ನದಿಯ ಸಂಭಾಷಣವಾದಮೇಲೆ ಗಂಗಾನದಿಯನ್ನು ಕಂಡು ಹೃಷ್ಟನಾಗಿ "ಕಲ್ಯಾಣಿ" ಎಂದು ಮೂರಾವರ್ತಿ ಹೇಳಿಕೊಂಡು ಸಕುಟುಂಬನಾಗಿ ಆ ಗಂಗಾನದಿಯಲ್ಲಿ ಮುಳಿಗಿದನು. ಎದ್ದು ನೋಡಿದರೆ ಕಲ್ಯಾಣಿಯಾಗಿತ್ತು, ಅಲ್ಲಿದ್ದವರೆಲ್ಲರೂ ಕಲ್ಯಾಣಿಯಿಂದೆದ್ದು ಬರುವ ಈ ನಾಲ್ಕು ಜನಗಳನ್ನೂ ನೋಡಿ ಆಶ್ಚರ್ಯಪಟ್ಟು ಕೇಳಿದ್ದಕ್ಕೆ ಆ ಸುಚರಿತನು ತನ್ನ ವೃತ್ತಾಂತವೆಲ್ಲವನ್ನೂ ಹೇಳಿ, "ಇದು ಯಾವ ಸ್ಥಲ? ಯಾವ ತೀರ್ಥ?" ಎಂದು ಕೇಳಲು ಅಲ್ಲಿದ್ದವರು, "ಇದು ಯಾದವಗಿರಿ, ಇದು ಕಲ್ಯಾಣತೀರ್ಥ" ಎಂದು ಹೇಳಲು ಆ ಮಹಿಮೆಗೆ ಅತ್ಯಾಶ್ಚರ್ಯಪಟ್ಟು ಅಲ್ಲಿಯೇ ನಿತ್ಯವಾಸ ಮಾಡಿಕೊಂಡಿದ್ದನು.

ತಾರ್ತೀಯಿಕಾ ಸ್ಸುತೋ ಭೂ ದಿಹ ಸತ ಇತರ ಸ್ತಸ್ಯ ನಾರಾಯಣಾ
ಖ್ಯ ಸ್ತಂ ಹಿತ್ವಾ ರಿಕ್ತಭವಾ ನ್ನರಪತಿ ಮಗಮ ತ್ಪ್ರೇರಿತಶ್ಚ ಸ್ವಪ ತ್ನ್ಯಾ |
ಇಚ್ಛಾಭಾವೇಪಿ ಮಾಸಾ ನ್ನ ಗರವಸತಿಜಂ ದುಃಖ ಮಾಸಾದ್ಯ
ಕಾಂಶ್ಚಿತ್ಕೃಚ್ಛ್ರಾದ್ದೃಷ್ಟ್ವಾ ಚ ಭೂಪಂ ಧನ ಮಲಭತ ಚಾ
ತ್ಯಲ್ಪಮೇವಾತಿಯತ್ನಾತ್ ||
    ಈ ಯಾದವಗಿರಿಯಲ್ಲಿ ಈ ಸುಚರಿತನು ವಾಸಮಾಡುತ್ತಿರುವಾಗ ಮೂರನೇ ಗಂಡುಮಗುವು ಒಂದು ಹುಟ್ಟಿತು. ಅದಕ್ಕೆ ನಾರಾಯಣನೆಂದು ಹೆಸರಿಟ್ಟನು ಏಳೆಂಟು ವರ್ಷಗಳಲ್ಲಿ ದುರ್ಭಿಕ್ಷ ಉಂಟಾಗಿ ದಾರಿದ್ರ್ಯದಿಂದ ಅತ್ಯಂತ ಪೀಡಿತನಾಗಿ ಖೇದಪಡುತ್ತಿರುವಾಗ ಇವನ ಹೆಂಡತಿಯು ಬಲತ್ಕಾರ ಮಾಡಿದ್ದರಿಂದ ತನ್ನ ಹೆಂಡತಿಯನ್ನೂ ಮೂರನೇ ಮಗ ನಾರಾಯಣನನ್ನೂ ಇಲ್ಲಿ ಬಿಟ್ಟು ಇಬ್ಬರು ಗಂಡುಮಕ್ಕಳನ್ನೂ ಕರೆದುಕೊಮಡು ದ್ರವಿಡದೇಶದ ಒಬ್ಬ ದೊರೆಯ ಸಮೀಪಕ್ಕೆ ಹೋಗಿ, ಮನಸ್ಸಿಲ್ಲದಿದ್ದರೂ ನಾಲ್ಕಾರು ತಿಂಗಳು ನಗರವಾಸ ದುಃಖವನ್ನು ಅನುಭವಿಸುತ್ತಾ ಕೊನೆಗೆ ಮಹಾಪ್ರಯತ್ನಗಳನ್ನು ಮಾಡಿ ರಾಜ ದರ್ಶನದಿಂದ ಸ್ವಲ್ಪವೇ ಧನವನ್ನು ಹೊಂದಿ ಹಿಂದಿರುಗಿ ಬರುತ್ತಿದ್ದನು.

ಏತಾವತ್ಯೇವಕಾಲೆ ಯದುಗಿರಿನಿಲಯ ಸ್ತಸ್ಯ ಬಾಲೋ ಯಯಾಚೇ
ಕ್ಷುಕ್ಷಾಮೋನ್ನಂ ಸ್ವಮಾತು ಸ್ಸವಿಧಮುಪಗತೋ ದೇಹಿ ಮಾತ ರ್ಮಮೇತಿ   |
ಸಾದಾತ್ಪಾತ್ರಸ್ಥ ಮನ್ನಂ ಸ ತು ನಹಿ ಬುಭುಜೇ ನೇತಿ
ತದ್ದೇವಶೇಷಂ ಕಿಂ ತ್ವಗ್ರೆ ನ್ಯಸ್ಯ ಭಕ್ತ್ಯಾ ವದದಸಕೃದಿದಂ ಭುಂ ಕ್ಷ್ವ ನಾರಾಯಣೇತಿ ||
    ಇಷ್ಟರಲ್ಲಿಯೇ ಯಾದವಗಿರಿಯಲ್ಲಿದ್ದ ಇವನ ಮೂರನೇ ಮಗ ನಾರಾಯಣನೆಂಬ ಹುಡುಗನು ಹಸಿವಿನಿಂದ ಬಾಧಿತನಾಗಿ ತನ್ನ ತಾಯಿಯನ್ನು ಅನ್ನವನ್ನು ಯಾಚಿಸಲು ಅವಳು ಒಂದು ಪಾತ್ರದಲ್ಲಿ ಅನ್ನವನ್ನು ಹಾಕಿಕೊಡಲು ಅದು ಭಗವನ್ನಿವೇದಿತವಾದುದಲ್ಲವೆಂದು ಹೇಳಿ ತಿನ್ನದೆ ಶ್ರೀನಾರಾಯಣಸ್ವಾಮಿಯವರ ಮುಂದಿಟ್ಟು ಅತ್ಯಂತ ಭಕ್ತಿಯಿಂದ "ದೇವರೇ ಇದನ್ನು ಊಟಮಾಡು" ಎಂದು ಪದೇ ಪದೇ ಹೇಳುತ್ತಾ ಹೊರಗೆ ನಿಂತಿದ್ದನು.

ಲಕ್ಷ್ಮ್ಯಾ ನಾರಾಯಣೋ ಪಿ ಸ್ವಯ ಮಧ ಬುಭುಜೆ ಪಾತ್ರಗಂ
ಸರ್ವ ಮನ್ನಂ ಹೃಷ್ಟೋ ಬಾಲೋ ಯಯಾಚೇ ಪುನರಪಿ
ಜನನೀಂ ಸಾ ಕ್ರುಧಾ ತರ್ಜಯನ್ತೀ |
ಮನ್ವಾನಾ ತ ದ್ಬಿಡಾಲೈರಪಹೃತಮವದ
ದ್ಭುಂಕ್ಷ್ವ ಭಿಕ್ಷಾಮಟ್ಟಿತ್ವೇ ತ್ಯೇಕಂ ಪಾತ್ರಂ ದದೌ ತತ್ಸಮುದಿತಮ
ನಸ್ಯಾದಾಯ ಗೇಹಾನ್ಯಾವಾಪ ||
    ಶ್ರೀಮನ್ನಾರಾಯಣನು ಲಕ್ಷ್ಮೀದೇವಿಯ ಸಂಗಡ ಆ ಪಾತ್ರದಲ್ಲಿದ್ದ ಅನ್ನವೆಲ್ಲವನ್ನೂ ಅಂಗೀಕರಿಸಿದ್ದರಿಂದ ಬರೀಪಾತ್ರವನ್ನು ನೋಡಿ ಆ ಹುಡುಗನು ಬಹಳ ಸಂತೋಷದಿಂದ ತಾಯಿಯ ಸಮೀಪಕ್ಕೆ ಹೋಗಿ "ಅಮ್ಮಾ ನೀನು ಕೊಟ್ಟ ಅನ್ನವನ್ನು ದೇವರು ಊಟಮಾಡಿಬಿಟ್ಟರು. ನನಗೆ ಬಹಳ ಹಸಿವು ಅನ್ನವನ್ನು ಕೊಡು" ಎಂದು ಕೇಳಿದನು, ಅದಕ್ಕೆ ಅವಳು "ಆರ್ಚಾರೂಪಿಯಾದ ದೇವರು ಅನ್ನವನ್ನು ತಿನ್ನುವುದಂದರೇನು? ಎಲ್ಲೋ ಬೆಕ್ಕು ತಿಂದಿರುವುದು ಈ ದುರ್ಭಿಕ್ಷದಲ್ಲಿ ಹೀಗೆ ಮಾಡಿದರೆ ಅನ್ನವನ್ನು ಎಲ್ಲಿಂದ ತರುವುದು ನೀನು ಭಿಕ್ಷೆ ಮಾಡಿ ತಂದು ತಿನ್ನು" ಎಂದು ಹೇಳಿ ಒಂದು ಪಾತ್ರವನ್ನು ಕೈಯಲ್ಲಿ ಕೊಟ್ಟಳು, ಆಗ ಅವನು ಅದನ್ನು ತೆಗೆದುಕೊಂಡು ಅಲ್ಲಿದ್ದ ಮನೆಗಳಿಗೆ ಭಿಕ್ಷಕ್ಕಾಗಿ ಹೋದನು.

ಭಿಕ್ಷಾಯೈ ಯದ್ಯದೇಷ ಪ್ರವಿಶತಿ ಚ ಗೃಹಂ ತತ್ತ ದೇತ್ಯಾ ಶು
ಲಕ್ಷ್ಮೀ ರ್ದರ್ವ್ಯಾ ಭಿಕ್ಷಾಂ ದದೌ ತತ್ಸುಚರಿತತನುಭೂಹಸ್ತಗಂ ಪಾತ್ರ ಮಾಸೀತ್ |
ಪೂರ್ಣಂ ರತ್ನೈ ಸ್ಸಚಾ ಗಾ ದ್ಗೃಹ ಮಥ ಜನನೀ
ಭಾಜನಂ ಸಪ್ತವಾರಂ ಪ್ರಾಯಚ್ಛತ್ತೈಃ ಪುಪೂರೇ ತದಪಿ ಸಮಭವ
ಚ್ಚಾಷ್ಟಮೇ ಪೂರ್ಣಮನ್ನೈಃ ||
    ಆಗ ಇವನು ಭಿಕ್ಷೆಗಾಗಿ ಯಾವ ಯಾವ ಮನೆಗೆ ಹೋದನೋ ಆಯಾಯ ಮನೆಗಳಿಗೆ ಲಕ್ಷ್ಮೀದೇವಿಯು ಬಂದು ಸೌಟಿನಿಂದ ಅನ್ನದ ಭಿಕ್ಷೆಯನ್ನಿತ್ತಳು. ಅದೆಲ್ಲವೂ ಮನೆಗೆ ಹೋಗುವಾಗ ರತ್ನಗಳಾದುವು, ಅದನ್ನು ನೋಡಿ ತಾಯಿಯು ಆಸೆಯಿಂದ ಪುನಃ ಕಳುಹಿಸಿದಳೂ, ಹೀಗೆ ಏಳಾವರ್ತಿ ಭಿಕ್ಷೆಗೆ ಕಳುಹಿಸಿದಳು, ಲೋಕಮಾತೆಯು ಏಳಾವರ್ತಿಯೂ ರತ್ನಭಿಕ್ಷೆಯನ್ನು ಕೊಟ್ಟಳು, ಎಂಟನೇ ಆವರ್ತಿ ಹೋದಾಗ ಅನ್ನದಭಿಕ್ಷೆಯೇ ಆಗಿತ್ತು ಆಗ ಇಬ್ಬರೂ ಅದನ್ನು ಊಟಮಾಡಿ ತೃಪ್ತರಾದರು (ಏಳಾವರ್ತಿ ಬಂದ ರತ್ನಭಿಕ್ಷೆಯಿಂದ ತೃಪ್ತಿಯಾಗಲಿಲ್ಲ) ಅದುವರಿಗೂ ನಿಶ್ಚಿಂತರಾಗಿ ಮಲಗುತ್ತಿದ್ದವರು ಅಂದು ಮೊದಲು ಸ್ವಲ್ಪವೂ ನಿದ್ರೆಯಿಲ್ಲದೆ ಕಾದುಕೊಂಡಿದ್ದರು.

ತಾವದ್ದ್ವಾಭ್ಯಾಂ ಸುತಾಭ್ಯಾಂ ಸಹ ಸ ಸುಚರಿತಶ್ಚೋರಮುಷ್ಟಸ್ವರಿಕ್ಥೋ
ದಂಡಾಘಾತಾರ್ದಿತಾಂಗೋ ನಿಜಮತಿಮಥ ತಾಂ ಕುತ್ಸಯನ್ನಾಜಗಾಮ |
ದೃಷ್ಟ್ವಾರತ್ನೌ ಘಪೂರ್ಣಂ ಗೃಹಮಥ ಚರಿತಂ ತತ್ಸುತಸ್ಯಾಪಿ ಶೃಣ್ವ
ನ್ಮೋದಾನ್ನರಾಯಣಂ ತದ್ಭಜನರತಜನಾಂಸ್ತೈಸ್ಸಿಷೇವೇ ಧನೈಸ್ಸಃ ||
    ಅಷ್ಟರೊಳಗೆ ರಾಜಾಸ್ಥಾನದಿಂದ ಯತ್ಕಿಂಚಿದ್ದ್ರವ್ಯವನ್ನು ಯಾಚನೆ ಮಾಡಿತಂದ ಆ ಸುಚರಿತನು ತನ್ನಿಬ್ಬರು ಮಕ್ಕಳೊಡನೆ ಮಾರ್ಗದಲ್ಲಿ ಬರುತ್ತಿರುವಾಗ ಕಳ್ಳರು ಇವರನ್ನು ಹೊಡೆದು ಇವರ ಕೈಯಲ್ಲಿದ್ದುದನ್ನೆಲ್ಲಾ ಅಪಹರಿಸಿ ಕೊಂಡು ಹೋದರು. ಆಗ ಸುಚರಿತನು "ದಿವ್ಯ ಕ್ಷೇತ್ರದಲ್ಲಿ ಪುರುಷೋತ್ತಮನಿಂದ ಬರುವ ಪರಮ ಪುರುಷಾರ್ಥವನ್ನು ಬಿಟ್ಟು ನರಾಧಮನಿಂದ ಅನರ್ಥವನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ನರಕವಾಸವನ್ನು ಮಾಡಿದ ನನ್ನಂತಹ ಪಾತಕಿಗೆ ಈ ಶಿಕ್ಷೆಯು ಸಾಲದು" ಎಂದು ಅಂದುಕೊಂಡು ಬಂದು ನೋಡಿದಾಗ ಮನೆಯೆಲ್ಲಾ ರತ್ನಪೂರ್ಣವಾಗಿದ್ದುದನ್ನು ನೋಡಿ, ತನ್ನ ಮಗನಾದ ನಾರಾಯಣನ ವೃತ್ತಾಂತವನ್ನು ಕೇಳಿ, ನಿರ್ಹೇತುಕವಾದ ಭಗವತ್ಕಟಾಕ್ಷಕ್ಕೆ ಅತ್ಯಾಶ್ಚರ್ಯಪಟ್ಟು ಆ ದ್ರವ್ಯಗಳಿಂದ ಭಗವದ್ಭಾಗವತಾರಾಧನವನ್ನು ವಿಶೇಷವಾಗಿ ನಡಿಸುತ್ತಾ ಇದ್ದನು.

ಶ್ರುತ್ವಾ ದೃಷ್ಟ್ವಾ ಚ ಕೇಚಿತ್ಸುಚರಿತಚರಿತಂ ತದ್ಧನಂ ಹರ್ತುಕಾಮಾ
ವೇಷೇಣಾಗತ್ಯ ತಸ್ಥುಃ ಕತಿಚನ ದಿವಸಾಂಸ್ತದ್ಗೃಹೇ ವೈಷ್ಣವಾನಾಮ್|
ತೇ ಪಿ ಪ್ರಾಪ್ಯಾತಿಶುದ್ಧಾಂ ಧಿಯಮನುಸರಣಾತ್ತಸ್ಯ ಮುಕ್ತಿಂ ಚ ಜಗ್ಮುಃ
ಯದ್ಯೇವಂ ಚೋರಮುಕ್ತಿಸ್ಸುಚರಿತಸುಗತಿಃ ಕಿಂಪುನರ್ನ್ಯಾಯಸಿದ್ಧಾ ||
    ಹೀಗೆ ನಿತ್ಯವೂ ಅನೇಕ ಜನ ಸಂತರ್ಪಣೆ ಮಾಡುತ್ತಿರುವ ಈ ಸುಚರಿತನು ಔದಾರ್ಯದಿಗಳನ್ನು ಕೇಳಿಯೂ ಬಂದು ನೋಡಿಯೂ ಇರುವ ಕೆಲವು ಕಳ್ಳರು ವೈಷ್ಣವ ವೇಷವನ್ನು ಹಾಕಿಕೊಂಡು ಕಲ್ಯಾಣೀ ತೀರ್ಥದಲ್ಲಿ ನಿತ್ಯಸ್ನಾನಮಾಡುತ್ತಾ ದ್ವಾದಶೋರ್ಧ್ವಪುಂಡ್ರ ತುಲಸೀನಳಿನಾಕ್ಷ ಮಾಲಿಕಾದಿ ಧಾರಣಮಾಡಿ ಶ್ರೀನಾರಾಯಣಸ್ವಾಮಿಯವರನ್ನು ನಿತ್ಯಸೇವೆ ಮಾಡುತ್ತಾ ಸುಚರಿತನ ಮನೆಯಲ್ಲಿ ಶ್ರೀಪಾದತೀರ್ಥ ಪ್ರಸಾದ ಸ್ವೀಕಾರಗಳನ್ನು ಮಾಡುತ್ತಾ ಕದಿಯುವುದಕ್ಕೆ ಸಮಯನಿರೀಕ್ಷಣೆ ಮಾಡುವಷ್ಟರೊಳಗಾಗಿ ಇವರು ಮಾಡಿದ ಈ ಸತ್ಕಾರ್ಯಗಳಿಂದಲೂ ಆ ಸುಚರಿತನ ಸಹವಾಸದಿಂದಲೂ, ಅವರ ಮನಸ್ಸು ಶುದ್ಧ ಸತ್ವಗುಣಮಯವಾಗಿ ಪಶ್ಚಾತ್ತಾಪಹುಟ್ಟಿ, ಸುಚರಿತನ ಪಾದಗಳಿಗೆರಗಿ "ನಿಮ್ಮ ಧನವನ್ನು ಅಪಹರಿಸುವುದಕ್ಕಾಗಿ ಬಂದು ಮಹಾ ಪಾಪಿಗಳಿಗೆರಗಿ "ನಿಮ್ಮ ಧನವನ್ನು ಅಪಹರಿಸುವುದಕ್ಕಾಗಿ ಬಂದ ಮಹಾಪಾಪಿಗಳಾದ ನಮಗೆ ತಕ್ಕ ಪ್ರಾಯಶ್ಚಿತ್ತವನ್ನು ಅಪ್ಪಣೆಕೊಡಿಸಿ ಕಾಪಾಡಬೇಕು" ಎಂದು ಪ್ರಾರ್ಥಿಸಿದಾಗ ಆ ಸುಚರಿತನು "ಧನಂ ಮದೀಯಂ ತವ ಪಾದಪಂಕಜಂ" ಎಂಬಂತೆ "ನಾರಾಯಣಪಾದಾರವಿಂದ ರೂಪವಾದ ನನ್ನ ಧನವು ಯಾರಿಗೂ ಕದಿಯಲು ಸಾಧ್ಯವಲ್ಲ" ಎಂದು ಮೊದಲಾಗಿ ಜ್ಞಾನೋಪದೇಶ ಮಾಡಿ ಅವರಿಗೆಲ್ಲಾ ಮೋಕ್ಷೈಶ್ಚರ್ಯವನ್ನು ಕೊಡಿಸಿದನು. ಹೀಗೆ ಕಳ್ಳರಿಗೇನೇ ಮೋಕ್ಷ ಬಂದಾಗ ಆ ಸುಚರಿತನಿಗೆ ಮೋಕ್ಷ ಬಂತೆಂಬ ವಿಚಾರವನ್ನು ಹೇಳಬೇಕಾದುದೇ ಇಲ್ಲ.....

(ಮುಂದುವರೆಯುವುದು.....)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ