ಶೃಂಗೇರಿ ಶಾರದಾಪೀಠ ಮತ್ತು ಮೈಸೂರು ಸಂಸ್ಥಾನದ ನಂಟು (ಸಂಗ್ರಹ)


    ಕ್ರಿ.ಶ.೧೩೩೬ರಲ್ಲಿ ವಿಜಯನಗರವೆಂಬ ಮಹಾ ಸಾಮ್ರಾಜ್ಯದ ಉದಯವು ಶೃಂಗೇರಿ ಶಾರದಾ ಪೀಠ ಮತ್ತು ಕರ್ನಾಟಕದ ಇತಿಹಾಸದಲ್ಲಿ ಮಹತ್ವಪೂರ್ಣವಾದ ಸುವರ್ಣಾಧ್ಯಾಯವನ್ನು ತೆರೆಯಿತು. ಶೃಂಗೇರಿ ಜಗದ್ಗುರು ಪರಂಪರೆಯ ೧೦ನೇ ಗುರುಗಳಾಗಿದ್ದ ಶ್ರೀ ವಿದ್ಯಾತೀರ್ಥರು ಅವರ ಶಿಷ್ಯರಾದ ಶ್ರೀ ಭಾರತೀ ತೀರ್ಥರು ಮತ್ತು ವಿದ್ಯಾರಣ್ಯರು ವಿಜಯನಗರದ ಸಂಸ್ಥಾಪಕ ದೊರೆಗಳಾದ ಹರಿಹರ ಬುಕ್ಕರಾಯರಿಗೆ ನೀಡಿದ ಮಾರ್ಗದರ್ಶನ ಮತ್ತು ಅಂತಃಸ್ಫೂರ್ತಿಯ ಶೃಂಗೇರಿ ಶಾರದಾಪೀಠಕ್ಕೆ ರಾಜಾಶ್ರಯ ದೊರಕುವಂತೆ ಮಾಡಿತು.
    ವಿಜಯನಗರದ ಅರಸರ ನಂತರ ಕೆಳದಿ ಸಂಸ್ಥಾನದ ಅರಸರಲ್ಲಿ ಸದಾಶಿವನಾಯಕನಿಂದ ಹಿಡಿದು ಮುಮ್ಮಡಿ ಸೋಮಶೇಖರನ ಆಳ್ವಿಕೆಯವರೆಗೂ ಶೃಂಗೇರಿ ಶಾರದಾ ಪೀಠಕ್ಕೆ ರಾಜಾಶ್ರಯವನ್ನು ಕೊಟ್ಟು, ಮಠಕ್ಕೆ ಹೇರಳವಾಗಿ ಭೂಮಿ, ವಸ್ತು, ಒಡವೆಗಳನ್ನು ದಾನ ಮಾಡಿ ಜಗದ್ಗುರುಗಳೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡಿದ್ದರೆಂದು ‘ಗುರುವಂಶಕಾವ್ಯ’, ‘ಕೆಳದಿ ನೃಪವಿಜಯಂ’, ‘ಶಿವತತ್ತ್ವ ರತ್ನಾಕರ’ ಮುಂತಾದ ಗ್ರಂಥಗಳಿಂದ ತಿಳಿಯಬಹುದಾಗಿದೆ.
    ಶೃಂಗೇರಿ ಶಾರದಾಪೀಠ ಮತ್ತು ಮೈಸೂರು ಸಂಸ್ಥಾನ: ವಿಜಯನಗರದ ಪತನಾನಂತರ ವಿಜಯನಗರದ ಪರಂಪರೆಯನ್ನು ಉತ್ತರಾಧಿಕಾರದ ರೂಪದಲ್ಲಿ ಮುನ್ನಡೆಸಿಕೊಂಡು ಬಂದ ಮೈಸೂರು ಒಡೆಯರು ಶೃಂಗೇರಿ ಮಠದೊಂದಿಗೆ ಬಹುಶಃ ಇನ್ನಾವ ರಾಜಮನೆತನಗಳೂ ಇರಿಸಿಕೊಂಡಿರದಷ್ಟು ಅನ್ಯೋನ್ಯವಾಗಿ ಇಟ್ಟುಕೊಂಡಿದ ಬಾಂಧವ್ಯಕ್ಕೆ ರಾಜ ಮಹಾರಾಜರ ಪತ್ರಗಳು, ಪಲ್ಲಕ್ಕಿ, ಸಿಂಹಾಸನ, ಆಭರಣಗಳು, ಪೂಜಾ ಸಾಮಗ್ರಿಗಳು, ಶೃಂಗೇರಿ ಶಾರದಾ ಪೀಠದಲ್ಲಿ ಮತ್ತು ಮೈಸೂರು ಅರಮನೆಯಲ್ಲಿ ಇಂದಿಗೂ ಆಚರಿಸಲ್ಪಡುತ್ತಿರುವ ಹಲವಾರು ಸಂಪ್ರದಾಯಗಳು ಪ್ರತ್ಯಕ್ಷ ಪ್ರಮಾಣಗಳಾಗಿದೆ.
    ಎಪಿಗ್ರಾಫಿಯಾ ಕರ್ನಾಟಿಕಾ (ಮೈಸೂರು ವಿಶ್ವವಿದ್ಯಾಲಯದ ೧೯೯೮ರ ಪ್ರಕಟಣೆ) ೧೧ನೇ ಸಂಪುಟದಲ್ಲಿ ಮೈಸೂರು ಮಹಾರಾಜರುಗಳು ಶೃಂಗೇರಿ ಮಠಕ್ಕೆ ದಾನ ಮಾಡಿದ ಪೂಜಾ ಸಾಮಗ್ರಿಗಳು, ಸಿಂಹಾಸನ, ಪಲ್ಲಕ್ಕಿ, ದೇವರ ವಿಗ್ರಹ ಮುಂತಾದ ಕೊಡುಗೆಗಳನ್ನು ಮತ್ತು ಅಲ್ಲಿನ ಶಾಸನಗಳನ್ನು ದಾಖಲಿಸಲಾಗಿದ್ದು, ಮೈಸೂರು ಮಹಾರಾಜರುಗಳು ಶೃಂಗೇರಿ ಮಠದ, ಅಲ್ಲಿನ ಗುರುಗಳ ವಿಚಾರದಲ್ಲಿ ಎಷ್ಟೊಂದು ಆಸಕ್ತಿ ವಹಿಸಿದ್ದರೆಂದು ತಿಳಿಯಲು ಸಹಕಾರಿಯಾಗಿದೆ.
    ಮೈಸೂರಿನ ರಾಜ ವಂಶಸ್ಥರು ವಿಜಯನಗರದ ಶೈಲಿಯಲ್ಲಿ ರಾಜ ದರ್ಬಾರನ್ನು ಪರಂಪರಾನುಗತವಾಗಿ ಇಂದಿನವರೆಗೂ ಆಚರಿಸಿಕೊಂಡು ಬಂದಿರುತ್ತಾರೆ. ಮೈಸೂರಿನ ದರ್ಬಾರಿನ ಶೈಲಿಯಲ್ಲೇ ಶೃಂಗೇರಿಯ ಶರನ್ನವರಾತ್ರಿ ಉತ್ಸವದಲ್ಲಿ ಶೃಂಗೇರಿ ಜಗದ್ಗುರುಗಳವರು ಇಂದಿಗೂ ದರ್ಬಾರನ್ನು ಆಚರಿಸುತ್ತಾರೆ. ಹೀಗೆ ಶೃಂಗೇರಿ ಮತ್ತು ಮೈಸೂರು ಸಂಸ್ಥಾನದ ದರ್ಬಾರ್ ಆಚರಣೆಯು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಸಾರುತ್ತ ಶೃಂಗೇರಿ-ಮೈಸೂರಿನ ಚಾರಿತ್ರಿಕ ಸಂಬಂಧವನ್ನು ಬೆಸೆಯುತ್ತಿದೆ.
   
ಇಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಶಾರದಾಪೀಠ : ಮೈಸೂರು ಮಹಾರಾಜ ಇಮ್ಮಡಿ ಕೃಷ್ಣರಾಜ ಒಡೆಯರು (೧೭೩೪-೬೬) ಶೃಂಗೇರಿ ಜಗದ್ಗುರು ಶ್ರೀ ಸಚ್ಚಿದಾನಂದಭಾರತೀ (೧೭೦೫-೧೭೪೧) ಸ್ವಾಮಿಗಳು ಸಮಕಾಲೀನರಾಗಿದ್ದು ಇವರ ಕಾಲವು ಶೃಂಗೇರಿ ಮಠ ಮತ್ತು ಮೈಸೂರು ಸಂಸ್ಥಾನದ ನಿಕಟ ಸಂಬಂಧದ ಪ್ರಾರಂಭವಾಗಿ ಸುವರ್ಣಾಧ್ಯಾಯವನ್ನು ತೆರೆಯಿತು.
ಕ್ರಿ.ಶ.೧೭೬೦ರಲ್ಲಿ ಶ್ರೀ ಸಚ್ಚಿದಾನಂದಭಾರತೀ ಸ್ವಾಮಿಗಳ ಪಾದಾರ್ಪಣೆಯಿಂದ ರಾಜ್ಯಕ್ಕೆ ಅಗತ್ಯವಾದ ಮಳೆ ಬಂದು ಸರ್ವ ಸಮೃದ್ಧಿ ಹೊಂದುವುದೆಂದು ಮಹಾರಾಜ (೧೭೬೦ರ ತಾಮ್ರಶಾಸನ ಶೃಂಗೇರಿ)ರು ಗುರುಗಳನ್ನು ಮೈಸೂರಿಗೆ ಆಮಂತ್ರಿಸಿ ವೈಭವದ ಸ್ವಾಗತ ನೀಡಿ ಗುರುಕಾಣಿಕೆ ಸಮರ್ಪಿಸಿದ್ದನ್ನು ನಾವು ಸ್ಮರಿಸಬಹುದಾಗಿದೆ. ಮಹಾರಾಜರು ಆ ಸಂದರ್ಭದಲ್ಲಿ ೧೨೦೦ ವರಹಗಳ ಬೆಳವಾಡಿ ಮತ್ತು ಅದಕ್ಕೆ ಸಂಬಂಧಿಸಿದ ಕೊಪ್ಪಲುಗಳನ್ನು ಗುರುಗಳಿಗೆ ದಾನವಾಗಿ ಕೊಟ್ಟರು. (ಎ.ಆರ್.ಎಂ.ಡಿ.-೧೯೨೩, ‘ಶೃಂಗೇರಿ ಧರ್ಮಸಂಸ್ಥಾನ’)
    ಇಮ್ಮಡಿ ಕೃಷ್ಣರಾಜ ಒಡೆಯರು ಶೃಂಗೇರಿ ಮಠಕ್ಕೆ ಆನೆಯೊಂದನ್ನು ದಾನ ಮಾಡಿದರು. ಗುರುಗಳಿಗೆ ಬೆಳ್ಳಿ ಕುಸುರಿಗಳಿಂದ ಅಲಂಕೃತವಾದ ವಸ್ತ್ರವನ್ನು ದಾನ ಮಾಡಿದುದಲ್ಲದೇ ಜಗದ್ಗುರುಗಳನ್ನು ‘ಅಲಂಕೃತ ಶೃಂಗಪುರದ ಸಿಂಹಾಸನದಲ್ಲಿ ಆಸೀನರಾದ ಯೋಗ ಸಾಮ್ರಾಜ್ಯದ ಅಧಿಪತಿ’ಎಂದು ವರ್ಣಿಸಿದ್ದಾರೆ.
    ಶೃಂಗೇರಿ ಮಠದಲ್ಲಿನ ಕ್ರಿ.ಶ.೧೭೩೭ರ ಕಾಲದ ತಾಮ್ರಶಾಸನವು ಮೈಸೂರಿನ ಇಮ್ಮಡಿ ಕೃಷ್ಣರಾಜ ಒಡೆಯರು ಮಠದಲ್ಲಿ ಜರುಗುವ ವ್ಯಾಸಪೂಜೆಗಾಗಿ ಮಾಡಿದ ಭೂದಾನವನ್ನು ತಿಳಿಸುತ್ತದೆ. ಶ್ರೀ ಸಚ್ಚಿದಾನಂದಭಾರತೀ ಸ್ವಾಮಿಗಳನ್ನು ಕುರಿತಾಗಿ ಬರೆಸಿದ ಈ ತಾಮ್ರಶಾಸನದಲ್ಲಿ ‘ಶ್ರೀ ಮದ್ರಾಜಾಧಿರಾಜ ರಾಜಪರಮೇಶ್ವರ ಪ್ರೌಢಪ್ರತಾಪ ಅಪ್ರತಿಮ ವೀರನರಪತಿ ಮಹಿಶೂರ ಇಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್‌ರವರ್ರು ಉಭಯ ಕಾವೇರಿ ಮಧ್ಯ ಶ್ರೀರಂಗ ಪಟ್ಟದಲ್ಲೂ ರತ್ನಸಿಂಹಾಸನಾರೂಢರಾಗಿ ಪೃಥ್ವಿ ಸಂಬ್ರಾಜ್ಯಂಗ್ವೆ ಉರತಿರಲಾಗಿ’ ಎಂದು ಉಲ್ಲೇಖಿಸಲ್ಪಟ್ಟಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಶಾರದಾ ಪೀಠ: ಪೂರ್ಣಯ್ಯನವರ ರಾಜಪ್ರತಿನಿಧಿತ್ವ ಕೊನೆಗೊಂಡ ಮೇಲೆ ಕ್ರಿ.ಶ.೧೮೧೧ರಲ್ಲಿ ಮುಮ್ಮಡಿಕೃಷ್ಣ ರಾಜ ಒಡೆಯರು ರಾಜ್ಯದ ಅಧಿಕಾರ ವಹಿಸಿಕೊಂಡರು. ಅಧಿಕಾರದ ಚುಕ್ಕಾಣಿ ಹಿಡಿದ ಕೂಡಲೇ ತೃತೀಯ ಸಚ್ಚಿದಾನಂದಭಾರತೀ ಸ್ವಾಮಿಗಳನ್ನು ಅರಮನೆಗೆ ಆಮಂತ್ರಿಸಿ ಭವ್ಯಸ್ವಾಗತ ನೀಡಿದರು.
    ಸ್ವತಃ ಕವಿಗಳೂ, ಘನ ವಿದ್ವಾಂಸರು ಆಗಿದ್ದ ಮುಮ್ಮಡಿ ಕೃಷ್ಣರಾಜ ಪ್ರಭುಗಳು ತಾವು ರಚಿಸಿದ ಶ್ರೀ ನರಸಿಂಹಭಾರತೀ ಅಷ್ಟೋತ್ತರ ಶತನಾಮಾವಳಿಯಲ್ಲಿ ‘ಪ್ರತಿಜ್ಞಾರ್ಥ ಸಾಧಕಃ’ ಎಂಬ ಅನ್ವರ್ಥ ವಿಶೇಷಣವನ್ನು ಅಲಂಕಾರ ಪ್ರಾಯವಾಗಿ ಹೇಳಿರುವರು. ಇದೇ ರೀತಿ ಶೃಂಗೇರಿ ಮಠಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ ಮಹಾರಾಣಿ ಚಂದ್ರವಿಲಾಸ ಸನ್ನಿಧಾನರವರು ಚಿನ್ನದ ಪಾನ್‌ದಾನ್‌ನ್ನು ಅರ್ಪಿಸಿರುತ್ತಾರೆ.
    ಮೈಸೂರು ಸಂಸ್ಥಾನದ ರಾಜಲಾಂಛನ ಗಂಡಭೇರುಂಡ ಮತ್ತು ಶೃಂಗೇರಿ ಮಠದ ಲಾಂಛನವೂ ಜ್ಞಾನದ ಪ್ರತೀಕವೂ ಆದ ಹಂಸಪಕ್ಷಿಯ ಚಿನ್ಹೆಯನ್ನೊಳಗೊಂಡಿರುವ ಸುಂದರವಾದ ವಜ್ರಖಚಿತ ಸ್ವರ್ಣಕಿರೀಟವು ಶೃಂಗೇರಿಯ ದಸರಾ ದರ್ಬಾರ್ ಸಮಯದಲ್ಲಿ ಅಂದಿನಿಂದ ಇಂದಿನವರೆಗೂ ಇಲ್ಲಿನ ಗುರುಗಳಿಂದ ಧರಿಸಲ್ಪಡುತ್ತಿದ್ದು ಇತಿಹಾಸವನ್ನು ಸಾರುತ್ತಿದೆ.

ಚಾಮರಾಜ ಒಡೆಯರು ಮತ್ತು ಶೃಂಗೇರಿ ಮಠ: ೧೮೮೫ನೇ ಪಾರ್ಥಿವ ಸಂವತ್ಸರದಲ್ಲಿ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ರವರು ತಮ್ಮ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್, ಬ್ರಿಟಿಷ್ ರೆಸಿಡೆಂಟ್ ಮಿಸ್ಟರ್ ಗರ್ಲಿಸ್ಟನ್ ಸಾಹೇಬರು ಮೊದಲಾದ ಪರಿವಾರದೊಡನೆ ಶೃಂಗೇರಿಗೆ ದಯಮಾಡಿಸಿದರು. ಆಗ ಶೃಂಗೇರಿ ಪೀಠದಲ್ಲಿ ರಾರಾಜಿಸುತ್ತಿದ್ದ (೩೩ನೇ ಗುರುಗಳು) ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಸ್ವಾಮಿಗಳು ಶೃಂಗೇರಿ ವಿದ್ಯಾರಣ್ಯಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟ ಪವಿತ್ರವಾದ ಕರ್ನಾಟಕ ಸಿಂಹಾಸನಾಧಿಪತ್ಯವನ್ನು ಅನುಭವಿಸುತ್ತಲಿರುವ ಮೈಸೂರು ಮಹಾರಾಜರಿಗೆ ‘ರತ್ನಕಿರೀಟಾಧಿಪತ್ಯ’ವನ್ನೂ ಅನುಭವಿಸುವಂತೆ ಅನುಗ್ರಹಿಸುವುದು ಉಚಿತವೆಂದು ಭಾವಿಸಿ ಶಾರದಾಂಬಾ ಸನ್ನಿಧಿಯಲ್ಲಿ ಬೊಕ್ಕಸದಲ್ಲಿದ್ದ ಅಪೂರ್ವ ಕಿರೀಟವನ್ನು ತರಿಸಿ ಅಮೃತಮಯವಾದ ತಮ್ಮ ಹಸ್ತಗಳಿಂದ ಮಹಾರಾಜರ ಶಿರಸ್ಸಿನಲ್ಲಿ ಧಾರಣ ಮಾಡಿಸಿ, ಪ್ರಸ್ತುತ ಮೈಸೂರು ಅರಮನೆಯಲ್ಲಿರುವ ಹಿಂದೆ ವಿದ್ಯಾರಣ್ಯರಿಂದ ವಿಜಯನಗರದಲ್ಲಿ ಸ್ಥಾಪಿಸಲ್ಪಟ್ಟಿದ್ದ ಪುರಾತನ ಸಿಂಹಾಸನವನ್ನು ಪ್ರಭುಗಳು ಆರೋಹಣ ಮಾಡತಕ್ಕ ಕಾಲದಲ್ಲಿ ಶ್ರೀರಾಮಚಂದ್ರನಂತೆ ಈ ಕಿರೀಟ ಧರಿಸಿ ಅಲಂಕೃತವಾಗಿ ಸಿಂಹಾಸನಾರೂಢರಾಗುವುದು ಅವಶ್ಯಕವೆಂದು, ದಯಮಾಡಿಸಿದ್ದ ಮಹಾರಾಜರಿಗೆ ತಿಳಿಸಿ ಅನುಗ್ರಹಿಸಿದರು. (ಲ.ನ. ಶಾಸ್ತ್ರಿಗಳವರ ಶೃಂಗೇರಿ ಇತಿಹಾಸ ಕುರಿತ ಗ್ರಂಥ.)
ಇಂದಿಗೂ ಮೈಸೂರು ಅರಮನೆಯಲ್ಲಿ ಈ ಕಿರೀಟವು ‘ಶೃಂಗೇರಿ ಕಿರೀಟ’ ಎಂಬ ಹೆಸರಿನಲ್ಲಿ ಪ್ರತಿ ವರ್ಷದ ದಸರಾ ದರ್ಬಾರ್ ಸಮಯದಲ್ಲಿ ಮೈಸೂರು ರಾಜವಂಶಸ್ಥರಿಂದ ಪೂಜಿಸಲ್ಪಡುತ್ತಿದೆ (ಶೃಂಗೇರಿ ಶಾರದಾಪೀಠ ಮತ್ತು ಮೈಸೂರು ಸಂಸ್ಥಾನ ಗ್ರಂಥ, ಪ್ರಶಾಂತ್ ಶೃಂಗೇರಿ)
    ೧೮೯೧ರಲ್ಲಿ ನೃಸಿಂಹಭಾರತಿ ಜಗದ್ಗುರುಗಳು ಚಾಮರಾಜ ಒಡೆಯರ ಅಪೇಕ್ಷೆಯಂತೆ ಮೈಸೂರು ಅರಮನೆ ಸಮೀಪದ ಶ್ರೀ ಚಾಮರಾಜೇಂದ್ರ ಸರಸ್ವತಿ ಪ್ರಸಾದ ಪಾಠಶಾಲೆಯ ಅಭಿವೃದ್ಧಿಗಾಗಿ ಒಂದು ಶುಭಲಗ್ನದಲ್ಲಿ ವೇದೋಕ್ತ ವಿಧಾನದಿಂದ ವಿದ್ಯಾಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜಿಸಿ ಅನುಗ್ರಹಿಸಿದರೆಂದು ನರಸಿಂಹಭಾರತೀ ಜೀವನ ಚರಿತ್ರೆ (ಲೇಖಕರು: ನಂಜನಗೂಡು ಶ್ರೀಕಂಠಶಾಸ್ತ್ರಿ)ಯಿಂದ ತಿಳಿಯಬಹುದಾಗಿದೆ.
    ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಶೃಂಗೇರಿಮಠ: ನಾಲ್ವಡಿ ಕೃಷ್ಣರಾಜ ಒಡೆಯರು ಶೃಂಗೇರಿಯ ೩೩ ಮತ್ತು ೩೪ನೇ ಜಗದ್ಗುರುಗಳ ಸಮಕಾಲೀನರಾಗಿದ್ದರು.
ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಸ್ವಾಮಿಗಳು ಕೇರಳ ರಾಜ್ಯದ ಕಾಲಟಿಯ ಪೂರ್ಣಾನದಿ ತೀರದಲ್ಲಿ ಆದಿಶಂಕರಾಚಾರ್ಯರ ಹುಟ್ಟಿದ ಪುಣ್ಯಸ್ಥಳವನ್ನು ಪತ್ತೆ ಮಾಡಿ ಅಲ್ಲಿ ಶಾರದಾ ಶಂಕರರ ಭವ್ಯ ಮಂದಿರಗಳನ್ನು ನಿರ್ಮಿಸುವ ಕೈಂಕರ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಮತ್ತು ಮೈಸೂರು ಸಂಸ್ಥಾನದ ದಿವಾನರಾದ ವಿ.ಪಿ. ಮಾಧವರಾವ್ ಮತ್ತು ಶೇಷಾದ್ರಿ ಅಯ್ಯರ್‌ರವರ ಪಾತ್ರ ಮಹತ್ತರವಾದುದು.
    ೧೯೧೦ರಂದು ಕೇರಳದ ಕಾಲಟಿಯಲ್ಲಿ ಆದಿಶಂಕರ ಮತ್ತು ಶಾರದಾಂಬಾ ದೇವಾಲಯದ ಕುಂಬಾಭಿಷೇಕವು ಜರುಗಿತು. ಈ ಶುಭಸಂದರ್ಭದಲ್ಲಿ ನರಸಿಂಹಭಾರತೀ ಜಗದ್ಗುರುಗಳು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ‘ಧರ್ಮಮೂಲ’ ಎಂಬ ಬಿರುದನ್ನು ಅನುಗ್ರಹಿಸಿದರೆಂದು ಗುರುಗಳು ಜೀವನಚರಿತ್ರೆಯ ಗ್ರಂಥ (ಲೇಖಕ: ನಂಜನಗೂಡು ಶ್ರೀಕಂಠಶಾಸ್ತ್ರಿ)ದಿಂದ ತಿಳಿದುಬರುತ್ತದೆ.
    ೧೯೧೨ರಲ್ಲಿ ಚಂದ್ರಶೇಖರಭಾರತೀ ಸ್ವಾಮಿಗಳು ಶೃಂಗೇರಿ ಪೀಠದ ೩೪ನೇ ಗುರುಗಳಾಗಿ ಪಟ್ಟಾಭಿಷಕ್ತರಾದರು. ಈ ಗುರುವರ್ಯರು ೧೯೧೬ರಲ್ಲಿ ತಮ್ಮ ಗುರುಗಳಾದ ನರಸಿಂಹಭಾರತೀ ಗುರುಗಳ ಸಮಾಧಿ ಆಲಯದ ಕುಂಬಾಭಿಷೇಕವನ್ನು ಶೃಂಗೇರಿಯಲ್ಲಿ ನೆರವೇರಿಸಿದ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜರು ಹಾಜರಿದ್ದರು.
    ಮಹಾರಾಜರ ಮತ್ತು ಶಿಷ್ಯರ ವಿಶೇಷ ಆಮಂತ್ರಣವನ್ನು ಮನ್ನಿಸಿ ೧೯೨೪ರಲ್ಲಿ ಚಂದ್ರಶೇಖರಭಾರತೀ ಸ್ವಾಮಿಗಳು ಮೈಸೂರಿಗೆ ಭೇಟಿ ಕೊಟ್ಟು ನಾಲ್ವಡಿ ಕೃಷ್ಣರಾಜ ಒಡೆಯರ ಸಹಾಯದಿಂದ ನರಸಿಂಹಭಾರತೀ ಗುರುಗಳ ಹುಟ್ಟಿದ ಸ್ಥಳವಾದ ಈಗಿನ ಅಭಿನವಶಂಕರಾಲಯದಲ್ಲಿ ಭವ್ಯವಾದ ಗುರುಗಳ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿದರು.

ಜಯರಾಮರಾಜೇಂದ್ರ ಒಡೆಯರು ಮತ್ತು ಶೃಂಗೇರಿ ಮಠ: ಮೈಸೂರು ಸಂಸ್ಥಾನದ ಕಟ್ಟಕಡೆಯ ರಾಜರಾದ ಜಯಚಾಮರಾಜೇಂದ್ರ ಒಡೆಯರು ತಮ್ಮ ಪೂರ್ವಿಕರು ಹಾಕಿಕೊಟ್ಟ ಸತ್‌ಸಂಪ್ರದಾಯವನ್ನು ಅನುಸರಿಸಿ ಶೃಂಗೇರಿ ಮಠದ ಮೇಲೆ ಅಪಾರ ಗೌರವಾದರಗಳಿಂದ ನಡೆದು ಕೊಂಡರು. ಶೃಂಗೇರಿಯ ಸಮಕಾಲೀನ ಗುರುಗಳಾಗಿದ್ದ ಅಭಿನವ ವಿದ್ಯಾತೀರ್ಥ ಸ್ವಾಮಿಗಳ ಅಂತರಂಗದ ಶಿಷ್ಯರಾಗಿದ್ದು ಆಗಾಗ ಶ್ರೀಗಳನ್ನು ಮೈಸೂರಿನ ಅರಮನೆಗೆ ಆಮಂತ್ರಿಸಿ ಸತ್ಕರಿಸಿರುವುದು ದಾಖಲೆಗಳಿಂದ ತಿಳಿದುಬರುತ್ತದೆ.
    ೧೯೬೧ರಲ್ಲಿ ದಕ್ಷಿಣ ಭಾರತ ವಿಜಯಯಾತ್ರೆಯನ್ನು ಮುಗಿಸಿ ಬೆಂಗಳೂರಿಗೆ ಚಿತ್ತೈಸಿದ ಚಂದ್ರಶೇಖರ ಭಾರತೀ ಗುರುಗಳನ್ನು ಮಹಾರಾಜರು ಭವ್ಯವಾಗಿ ಆಮಂತ್ರಿಸಿದರು. ೧೯೬೨ರಲ್ಲಿ ಮಹಾರಾಜರ ಆಮಂತ್ರಣದ ಮೇಲೆ ಶ್ರೀಗಳು ಮೈಸೂರಿಗೆ ಯಾತ್ರೆ ಕೈಗೊಂಡಾಗ ಬಂಗಾರದ ಪಲ್ಲಕ್ಕಿಯ ಮೆರವಣಿಗೆಯೊಂದಿಗೆ ವೈಭವೋಪೇತವಾಗಿ ಪೂರ್ಣಕುಂಭ ಸ್ವಾಗತವನ್ನು ಮಹಾರಾಜರು ಗುರುಗಳಿಗೆ ನೀಡಿ ಅರಮನೆಯಲ್ಲಿ ಪಾದಪೂಜೆಯನ್ನು ನರೆವೇರಿಸಿ ಈ ಸಂದರ್ಭದಲ್ಲಿ ‘ಊರ್ಮಿಳಾ’ ಎಂಬ ಮರಿ ಆನೆಯೊಂದನ್ನು ಶೃಂಗೇರಿ ಮಠಕ್ಕೆ ದಾನ ಮಾಡಿದುದನ್ನು ಸ್ಮರಿಸಬಹುದಾಗಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರು: ಜಯಚಾಮರಾಜೇಂದ್ರ ಒಡೆಯರ ಸುಪುತ್ರರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಪ್ರಸ್ತುತ ಶೃಂಗೇರಿ ಪೀಠದಲ್ಲಿ ರಾರಾಜಿಸುತ್ತಿರುವ ಶ್ರೀ ಭಾರತೀತೀರ್ಥ ಸ್ವಾಮಿಗಳೊಂದಿಗೆ ಹೊಂದಿರುವ ಬಾಂಧವ್ಯವು ಸುಮಾರು ಎರಡು ಶತಮಾನಕ್ಕಿಂತಲೂ ಮಿಗಿಲಾದ ಶೃಂಗೇರಿ ಮತ್ತು ಮೈಸೂರಿನ ಚಾರಿತ್ರಿಕ ಸಂಬಂಧವನ್ನು ಬೆಸೆದು, ಪ್ರತ್ಯಕ್ಷ ಪ್ರಮಾಣಕ್ಕೆ ಸಾಕ್ಷೀಕರಿಸುತ್ತದೆ.
    ೨೦೦೨ ಮತ್ತು ೨೦೦೫ರಲ್ಲಿ ಶ್ರೀ ಭಾರತೀತೀರ್ಥ ಸ್ವಾಮಿಗಳವರು ಮೈಸೂರು ಮಹಾರಾಜರ ಆಮಂತ್ರಣದ ಮೇರೆಗೆ ಮೈಸೂರಿಗೆ ಭೇಟಿ ಇತ್ತಾಗ ಅನೂಚಾನವಾಗಿ ನಡೆದು ಬಂದ ಅರಮನೆಯ ಸಂಪ್ರದಾಯದಂತೆ ಮಹಾರಾಜರು ಮತ್ತು ರಾಜಪರಿವಾರವು ಗುರುಗಳನ್ನು ಒಂಟೆ, ಆನೆ, ಅಶ್ವಗಳಿಂದೊಡಗೂಡಿದ ಮೆರವಣಿಗೆಯಲ್ಲಿ, ರಾಜೋಚಿತ ಗೌರವದೊಂದಿಗೆ ಅತ್ಯಂತ ನಾಜೂಕಿನ ಕುಸುರಿ ನೈಪುಣ್ಯತೆಯಿಂದ ಅಲಂಕೃತವಾದ ರಜತ ರಥದಲ್ಲಿ ಸಕಲ ಮರ‍್ಯಾದೆಯಿಂದ ಕುಳ್ಳಿರಿಸಿ ಪೂರ್ಣಕುಂಭ ಸ್ವಾಗತದಿಂದ ಬರಮಾಡಿಕೊಂಡು, ಮಹಾರಾಣಿಯವರೊಡಗೂಡಿ ಗುರುಗಳಿಗೆ ಪಾದಪೂಜೆ ನೆರವೇರಿಸಿ ಹಲವಾರು ಕಾಣಿಕೆಗಳಿಂದ ಸತ್ಕರಿಸಿದರು. ಅದೇ ಪರಂಪರೆಯನ್ನು ಮುದುವರೆಸಿರುವ ಯದುವೀರರು ತಮ್ಮ ಮದುವೆ ಸಮಯದಲ್ಲಿ ಜಗದ್ಗುರುಗಳ ಆಶೀರ್ವಾದ ಪಡೆದಿದ್ದರು. ಪ್ರತಿ ವರ್ಷ ಶೃಂಗೇರಿ ಗುರುಗಳ ವರ್ಧಂತಿ ಮತ್ತು ಶರನ್ನವರಾತ್ರಿಯ ಸಂದರ್ಭದಲ್ಲಿ ಇಂದಿಗೂ ಮೈಸೂರು ಸಂಸ್ಥಾನದಿಂದ ಗುರುಕಾಣಿಕೆ ಸಮರ್ಪಿಸಲ್ಪಡುತ್ತದೆ. ಮೈಸೂರಿನ ದಸರಾ ದರ್ಬಾರ್ ಸಂದರ್ಭದಲ್ಲಿ ಶೃಂಗೇರಿಯ ಮಠದ ಪ್ರಸಾದವನ್ನು ಇಂದಿಗೂ ಮಹಾರಾಜರಿಗೆ ಕೊಡಲಾಗುತ್ತದೆ.
ಶೃಂಗೇರಿ ಮಠದ ಪ್ರಸಾದವನ್ನು ದರ್ಬಾರಿನಲ್ಲಿ ಮಹಾರಾಜರಿಗೆ ಅರ್ಪಿಸುವ ಸಮಯದಲ್ಲಿ ‘ಚಿರಂ ಅಭಿವರ್ಧಿತಂ ಯದು ಸಂತಾನಶ್ರೀ’ ಎಂದು ಹೇಳಲಾಗುತ್ತದೆ.
ಹೀಗೆ ಸುಮಾರು ಎರಡು ಶತಮಾನಕ್ಕಿಂತಲೂ ಮಿಗಿಲಾಗಿ ಶೃಂಗೇರಿ ಶಾರದಾ ಪೀಠಕ್ಕೂ ಮೈಸೂರು ಸಂಸ್ಥಾನಕ್ಕೂ ಇರುವ ಚಾರಿತ್ರಿಕ ಸಂಬಂಧದ ಕೊಂಡಿಯಾಗಿ ಪ್ರಸ್ತುತ ಮೈಸೂರು ರಾಜ ವಂಶಸ್ಥರ ಮತ್ತು ಈಗಿನ ಶೃಂಗೇರಿ ಶ್ರೀಗಳು ಬಾಂದವ್ಯವು ಪರಿಣಮಿಸಿದೆ.

Comments

  1. ಉತ್ತಮವಾಗಿದ

    ReplyDelete
  2. ಚೆನ್ನಾಗಿದೆ

    ReplyDelete
  3. ಚೆನ್ನಾಗಿದೆ

    ReplyDelete
  4. @ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ರವರು ತಮ್ಮ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್,....

    It should have been ಮಹಾರಾಜ ಚಾಮರಾಜೇಂದ್ರ ಒಡೆಯರ್‌ರವರು

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ