ಕನಕಧಾರಾ ಸ್ತೋತ್ರ
ಕನಕಧಾರಾ ಸ್ತೋತ್ರದ ವಿಶೇಷ - ಹಿನ್ನೆಲೆ
ಶ್ರೀ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಅದ್ವೈತಕೇಸರಿ ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ವಿರಚಿತವಾದ ಕನಕಧಾರಾ ಸ್ತೋತ್ರವನ್ನು ನಿತ್ಯವೂ ಪಠಿಸುವುದರಿಂದ ನಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುವುದರ ಜೊತೆಗೆ ಪ್ರಾಪಂಚಿಕ, ಪಾರಮಾರ್ಥಿಕ ಎರಡೂ ಸಾಧನೆಗಳು ಪೂರ್ಣಗೊಳ್ಳುತ್ತವೆ. ನಮಗೆ ಧನ - ಕನಕ, ಸಿರಿ - ಸಂಪತ್ತು, ಐಶ್ವರ್ಯ, ಯಶಸ್ನು, ಸೌಭಾಗ್ಯ, ವಿಜಯಗಳನ್ನು ದಯಪಾಲಿಸುವ ಮಹಾ ಕಾಮಧೇನು " ಕನಕಧಾರಾ ಸ್ತೋತ್ರ "
ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ, ಭಕ್ತರ ಹೃದಯದಲ್ಲಿ ಶ್ರದ್ಧಾ ಸ್ವರೂಪಳಾಗಿ, ಮೋಕ್ಷೇಚ್ಛುಗಳ ಆಂತರ್ಯದಲ್ಲಿ ಮುಕ್ತಿಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾ ಕಟಾಕ್ಷ ಶ್ರೀ ಶಂಕರಾಚಾರ್ಯರ ಕೃಪಾಶೀರ್ವಾದದಿಂದ ಚಿನ್ನದ ಮಳೆಯನ್ನೇ ಕರೆದ ಮಹಾಸ್ತೋತ್ರವೇ " ಕನಕಧಾರಾ ಸ್ತೋತ್ರ ". ಅದರ ಹಿನ್ನೆಲೆ ಹೀಗೆದೆ.
ಪರಮಹಂಸ ಪರಿವ್ರಾಜಕ ಶ್ರೀ ಶಂಕರಭಗವತ್ಪಾದರು ಸನ್ಯಾಸಿಗಳಾದ್ದರಿಂದ ಮಧುಕರ ( ಭಿಕ್ಷೆ ) ವೃತ್ತಿಯನ್ನು ಅನುಸರಿಸುತ್ತಿದ್ದರು. ತಮ್ಮ ದಿಗ್ವಿಜಯ ಸಂಚಾರ ಕಾಲದಲ್ಲಿ ಒಮ್ಮೆ ಕೇರಳದ ಕುಗ್ರಾಮವೋಂದಕ್ಕೆ ಬರುತ್ತಾರೆ. ತಮ್ಮ ಶಿಷ್ಯರೊಡಗೂಡಿ
ದೈವಭಕ್ತನಾದ ಒಬ್ಬ ಬಡ ಬ್ರಾಹ್ಮಣನ ಮನೆಯ ಮುಂದೆನಿಂತು, "ಭವತಿ ಭಿಕ್ಷಾಂದೇಹಿ " ಎಂದು ಭಿಕ್ಷೇಯನ್ನು ಬೇಡುತ್ತಾರೆ. ಆ ಬ್ರಾಹ್ಮಣನಾದರೋ ಕಡು ಬಡವ. ಮನೆ ಮಂದಿಗೆ ಊಟಕ್ಕಿಲ್ಲದ ಪರಿಸ್ಥಿತಿ. ಮನೆಗೆ ಭಿಕ್ಷೆಗೆ ಬಂದಿರುವವರು ಮಹಾ ಮಹಿಮರಾದ ಶಂಕರಾಚಾರ್ಯರು. ಬ್ರಾಹ್ಮಣ ತನ್ನ ಹೆಂಡತಿಗೆ ಏನಾದರೂ ಭಿಕ್ಷೆ ಇದ್ದರೆ ಯತಿಗಳಿಗೆ ನೀಡಲು ಹೇಳುತ್ತಾನೆ. ಆ ಸಾದ್ವಿಮಣಿಯೂ ಮಹಾ ದೈವ ಭಕ್ತೆ. ಕೊಡಲು ಮನೆಯಲ್ಲಿ ಏನೂ ಇಲ್ಲ. ಮನೆಗೆ ಬಂದ ಅತಿಥಿ ರೂಪದ ದೇವರನ್ನು ಬರಿಗೈಯಲ್ಲಿ ಕಳುಹಿಸುವುದು ಮಹಾಪಾಪವೆಂದರಿತು, ಮನೆಯಲ್ಲಿ ಹುಡುಕಿದಾಗ, ಒಂದು ಜಲಡಿಯಲ್ಲಿ ಇಟ್ಟಿದ್ದ ಒಣಗಿದ ನೆಲ್ಲಿಕಾಯಿಯೊಂದು ದೊರಕುತ್ತದೆ. ಆ ದಿನ ಆ ಒಣ ನೆಲ್ಲಿ ಕಾಯಿಯ ಪಾನಕ ಮಾಡಿ ಮನೆಯವರ ಹಸಿವು ನೀಗಿಸುವುದೆಮದು ಇಟ್ಟಿದ್ದುದು. ಅದನ್ನೇ ಯತಿಗಳಿಗೆ ನೀಡುವುದೆಂದು ನಿರ್ಧರಿಸುತ್ತಾಳೆ.
ತನ್ನ ಗುಡಿಸಲು ಮುಂದೆ ಭಿಕ್ಷೆಗಾಗಿ ಕಾಯುತ್ತಿರುವ ಶಂಕರರಿಗೆ ನಮಸ್ಕರಿಸಿ, " ಸ್ವಾಮಿ ನಾವು ಕಡುಬಡವರು, ಮಹಾತ್ಮರಾದ ತಮ್ಮನ್ನು ಉಪಚರಿಸಲು ಮನೆಯಲ್ಲಿ ಏನು ಇಲ್ಲ. ಇದ್ದ ಒಂದು ನೆಲ್ಲಿಕಾಯಿಯನ್ನೇ ತಮಗೆ ಭಕ್ತಿಯಿಂದ ಅರ್ಪಿಸುತ್ತಿದ್ದೇನೆ, ದಯಮಾಡಿ ಸ್ವೀಕರಿಸಿ ಅನುಗ್ರಹಿಸಬೇಕು " ಎಂದು ಕಾಲಿಗೆ ಬೀಳುತ್ತಾಳೆ. ಸಾಕ್ಷಾತ್ ಶಿವನ ಅವತಾರವಾಗಿದ್ದ, ಸರ್ವಜ್ಞರಾದ ಶಂಕರರು, ಆ ಬಡ ಹೆಂಗಸಿನ ತ್ಯಾಗ ಬುದ್ಧಿಯನ್ನೂ, ಭಕ್ತಿಯನ್ನೂ ಮನಗಂಡು ಆ ಕುಟುಂಬದ ಬಡತನವನ್ನು ಹೋಗಲಾಡಿಸಬೇಕೆಂದು ಸಂಕಲ್ಪಮಾಡಿ, ಆಕ್ಷಣವೇ ಜಗನ್ಮಾತೆ ಮಹಾಲಕ್ಷ್ಮಿಯನ್ನು ಕುರಿತು ಸ್ತೋತ್ರವೊಂದನ್ನು ರಚಿಸುತ್ತಾರೆ. ಹಾಗೂ ಮಹಾಲಕ್ಷ್ಮಿಯಲ್ಲಿ ಈ ಬಡ ಕುಟುಂಬವನ್ನು ಉದ್ಧಾರ ಮಾಡಬೇಕೆಂದು ಪ್ರಾರ್ಥಿಸುತ್ತಾರೆ. ಮಹಾಲಕ್ಷ್ಮಿಯ ದಿವ್ಯಾನುಗ್ರಹದಿಂದ ಆ ಬ್ರಾಹ್ಮಣನ ಮನೆಯ ಮುಂದೆ ಬಂಗಾರದ ನೆಲ್ಲಿಕಾಯಿಗಳ ಮಳೆಯೇ ಆಯಿತು. ಆ ಮಹಾಮಹಿಮ ಸ್ತೋತ್ರವೇ " ಕನದಧಾರ ಸ್ತೋತ್ರ ". ಇದನ್ನು 'ಕನಕವೃಷ್ಟಿಸ್ತೋತ್ರ' ವೆಂದೂ ಕರೆಯುವುದುಂಟು. ಶಂಕರಭಗವತ್ಪಾದರ ಪವಾಡ, ಅನುಗ್ರಹಗಳಿಂದ ಬ್ರಾಹ್ಮಣನ ಕುಟುಂಬದವರೆಲ್ಲರೂ ಆನಂದ ತುಂಬಿರಲಾಗುತ್ತಾರೆ. ಶಂಕರರ ಶಿಷ್ಯವೃಂದ ದಿಗ್ಮೂಢವಾಗುತ್ತದೆ. ಬಡ ದಂಪತಿಗಳ ಕಣ್ಣಲ್ಲಿ ಆನಂದಾಶ್ರುಗಳು ದಾರಾಕಾರವಾಗಿ ಹರಿಯುತ್ತದೆ. ಶಂಕರರ ದಿವ್ಯ ಪಾದಗಳಿಗೆರಗಿ ತಮ್ಮನ್ನು ಉದ್ಧಾರ ಮಾಡಿದ್ದಕ್ಕಾಗಿ ಅನಂತ ಭಗವದ್ಭಕ್ತಿ, ಶ್ರದ್ಧೆ, ಶರಣಾಗತಿ, ಆತ್ಮಸಮರ್ಪಣೆಗಳ ಫಲವೇ ಆಗಿದೆ. ಯಾರು ಸರ್ವಶಕ್ತನಾದ ಪರಮಾತ್ಮನಲ್ಲಿ ಶ್ರವಣ, ಕೀರ್ತನ, ಸ್ಮರಣ, ಪದಸೇವನ, ಅರ್ಚನ, ವಂದನ, ದಾಸ್ಯ, ಸುಖ, ಆತ್ಮನಿವೇದನೆ ಗಳೆಂಬ ನವವಿಧ ಭಕ್ತಿಗಳಿಂದ ಪ್ರಾರ್ಥಿಸುತ್ತಾರೋ ಅವರು ಎಂದೂ ನಾಶವಾಗುವುದಿಲ್ಲ ಎಂದು ಸಾರಿ ತಮ್ಮ ವಿಜಯ ಯಾತ್ರೆಯನ್ನು ಮುಂದುವರೆಸುತ್ತಾರೆ.
ಆಸ್ತಿಕ ಮಹಾಶರರೂ, ಸದ್ಭಕ್ತರೂ ಈ ಮಹಿಮಾನ್ವಿತ "ಕನಕಧಾರಾ ಸ್ತೋತ್ರ"ವನ್ನು ನಿತ್ಯ ಪಠಿಸಿ ಕೃತಕೃತ್ಯರಾಗಲಿ.
ಅಂಗಂ ಹರೇ ಪುಲಕಭೂಷಣಮಾಶ್ರಯಂತೀ ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲವಿಭೂತಿರಪಾಂಗಲೀಲಾ ಮಾಂಗಲ್ಯದಾಸ್ತು ಮಮ ಮಂಗಳದೇವತಾಯಾ || 1 ||
ತಮಾಲವೆಂಬ ಮರದ ಆಭರಣಪ್ರಾಯವಾದ ಮೊಗ್ಗನ್ನು ಆಶ್ರಯಿಸಿರುವ ಹೆಣ್ಣುದುಂಬಿಯಂತೆ - ಶ್ರೀ ಮಹಾವಿಷ್ಣುವಿನ ರೋಮಾಂಚಗೊಂಡ ಶರೀರವನ್ನು ಅವಲಂಬಿಸಿರುವ, ಮಂಗಳದೇವತೆಯಾದ ( ಮಹಾಲಕ್ಷ್ಮಿಯ ), ಸಮಸ್ತ ಐಶ್ವರ್ಯಗಳನ್ನೂ ಅಡಗಿಸಿಕೊಂಡಿರುವ ಕುಡಿಗಣ್ಣಿನ ನೋಟಗಳೆಂಬ ಲೀಲೆಯು ನನಗೆ ಮಂಗಳವನ್ನೀಯಲಿ.
ಮುಗ್ಧಾಮುಹುರ್ವಿದಧತೀ ವದನೇ ಮುರಾರೇ |
ಪ್ರೇಮತ್ರಪಾಪ್ರಣೀಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರಸಂಭವಾಯಾಃ || 2 ||
ಶ್ರೀ ಮಹಾವಿಷ್ಣುವಿನ ಮುಖದ ಕಡೆಗೆ ಪ್ರೇಮಪೂರ್ವಕವಾದ ನಾಚಿಕೆಯಿಂದ ನೋಟವನ್ನು ಬೀರುತ್ತಾ ಹಾಗೂ ಹಿಂದೆಗೆಯುತ್ತಾ ಮುಗ್ದವಾದ ರೀತಿಯಿಂದ ಚಲಿಸುತ್ತಿರುವ ಎರಡು ದೊಡ್ಡನೈದಿಲೆಗಳಂತೆ ಇರುವ - ಹಾಗೂ ಹೂಮಾಲೆಯನ್ನು ನೋಡುತ್ತಿರುವ ದುಂಬಿಯಂತೆ ಇರುವ ಸಾಗರಕನ್ನಿಕೆಯಾದ ಲಕ್ಷ್ಮಿಯ ಕಟಾಕ್ಷಗಳು ನನಗೆ ಐಶ್ವರ್ಯವನ್ನುಂಟು ಮಾಡಲಿ
ಅಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದಂ -
ಆನಂದಕಂದಮನಿಮೇಷಮನಂಗತಂತ್ರಮ್ |
ಅಕೇಕರಸ್ಥಿತಕನೀನಿಕಪಕ್ಷ್ಮನೇತ್ರಮ್
ಭೂತ್ಯೈಭವೇನ್ಮಮ ಭುಜಂಗಶಯಾಂಗನಾಯಾಃ || 3 ||
ಸ್ವಲ್ಪವೇ ಮುಚ್ಚಿದ ಕಣ್ಣುಳ್ಳ ಹಾಗೂ ಆನಂದಭರಿತನೂ ರೆಪ್ಪೆಯಾಡಿಸದವನೂ ಮನ್ಮಥಾವಿಷ್ಟನೂ ಆದ ಮುಕುಂದ - ವಿಷ್ಣುನನ್ನು ಅರಿತವಳಾದ ನಾಗಶಯನನ ಮಡದಿಯಾದ ಲಕ್ಷ್ಮಿಯ ಕುಡಿಗಣ್ಣಿನ ನೋಟವನ್ನು ಅವಲಂಬಿಸಿರುವ ರೆಪ್ಪೆಗಳುಳ್ಳ ನೇತ್ರವು ನನ್ನ ಐಶ್ವರ್ಯ ಸಂವೃದ್ಧಿಗೆ ಕಾರಣವಾಗಲಿ.
ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀ ಚ ಹರಿನೀಲಮಣೀ ವಿಭಾತಿ |
ಕಾಮಪ್ರದಾ ಭವತೋಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಲಯಾಯಾಃ || 4 ||
ಮಧುಸೂದನನಾದ ವಿಷ್ಣುವಿನ ತೋಳುಗಳ ನಡುವೆ ಹಾಯ್ದ ಕೌಸ್ತುಭ ರತ್ನವನ್ನು ಆಶ್ರಯಿಸಿರುವ ಹಸಿರುಮಿಶ್ರವಾದ ಎರಡು ನೀಲಮಣಿಗಳುಳ್ಳ ಯಾವ ಹಾರವು ಹೋಳೆಯುತ್ತಿದೆಯೋ, ಮತ್ತು ಭಗವಂತನ ಹಾಗೂ ಕಮಲವಾಸಿನಿಯಾದ ದೇವಿಯ ಕುಡಿಗಣ್ಣುಗಳ ನೋಟಗಳ ಸಾಲು ( ಭಕ್ತರಿಗೆ ) ಇಷ್ಟಾರ್ಥಪ್ರದವಾಗಿ ಶೋಭಿಸುತ್ತಿರುವುದೋ - ಅದು ಸಹ ನನಗೆ ಕಲ್ಯಾಣವನ್ನುಂಟು ಮಾಡಲಿ.
ಕಾಲಾಂಬುದಾಲಿಲಲಿತೋರಸಿ ಕೈಟಭಾರೇ-
ರ್ಧಾರಾಧರಸ್ಫುರತಿ ಯಾ ತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿ
ಭದ್ರಾಣಿ ಮೇ ದಿಶತು ಭಾರ್ಗವನಂದನಾಯಾಃ || 5 ||
ಕೈಟಭಶತೃವಾದ ( ವಿಷ್ಣುವಿನ ) ಕಾಲಮೇಘದಂತೆ ಕಾಂತಿಯುಳ್ಳ ಸುಂದರವಾದ ಎದೆಯಲ್ಲಿ ಮಿಂಚಿನಬಳ್ಳಿಯಂತೆ ಹೊಳೆಯುತ್ತಿರುವ ಖಡ್ಗವಿದೆಯೋ, ಅದರೋಡನೆಯೇ ಎದೆಯಲ್ಲಿ ನೆಲೆಸಿರುವ ಸಮಸ್ತ ಜಗತ್ತಿಗೂ ತಾಯಿಯಾದ ಮಹಾಶ್ರೇಷ್ಠವಾದ ಭಾರ್ಗವಪುತ್ರಿಯ ದಿವ್ಯರೂಪವು ನನಗೆ ಮಂಗಳವನ್ನುಂಟು ಮಾಡಲಿ.
ಪ್ರಾಪ್ತಂ ಪದಂ ಪ್ತಥಮತಃ ಖಲು ಯತ್ಪ್ರಭಾವಾತ್
ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂದರಮೀಕ್ಷಣಾರ್ಥಂ
ಮಂದಾಲಸಾಕ್ಷಿ ಮಕರಾಕರಕನ್ಯಕಾಯಾಃ || 6 ||
ಯಾವ ದೇವಿಯ ಅನುಗ್ರಹ ದೃಷ್ಟಿಯಿಂದ ಮಧುಸೂದನನಲ್ಲಿ ಸ್ಥಾನವು ಮೊದಲ ಬಾರಿಗೆ ಮಂಗಳಕರವಾಗಿ ಮನ್ಮಥನಿಗೆ ದೊರಕಿತೋ ( ಆ ದೇವಿಯ ), ಸಮುದ್ರರಾಜನ ಕನ್ಯೆಯಾದ ಲಕ್ಷ್ಮಿಯ ಕಟಾಕ್ಷವು ಅಲ್ಪವಾಗಿಯಾದರೂ ಮೆಲ್ಲ ಮೆಲ್ಲನೆ ನನ್ನ ಮೇಲೆ ಹರಿಯುವಂತಾಗಲಿ.
ವಿಶ್ವಾಮರೇಂದ್ರಪದವಿಭ್ರಮದಾನದಕ್ಷ ಮಾನಂದಹೇತುರಧಿಕಂ ಮಧವಿದ್ವಿಷೋಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧ ಮಿಂದೀವರೋದರಸಹೋದರಮಿಂದಿರಾಯಾಃ || 7 ||
ಸಮಸ್ತದೇವತಾಶ್ರೇಷ್ಠರ ಪದವಿಗಳೆಂಬ ಸೌಭಾಗ್ಯವನ್ನು ಕೊಡುವದರಲ್ಲಿ ಸಮರ್ಥವಾದ, ಮತ್ತು ಮಧುಸೂದನನಿಗೂ ಹೆಚ್ಚಿನ ಆನಂದಕಾರಣವಾದ, ಕಮಲದ ಗರ್ಭದಂತೆ ಮೃದುವಾದ ಇಂದಿರಾದೇವಿಯ ಕಣ್ಣಿನ ನೋಟದ ಅರ್ಧ ಭಾಗದಲ್ಲಿ ಒಂದಿಷ್ಟಾದರೂ ನನ್ನಲ್ಲಿ ನೆಲೆಗೊಳ್ಳಲಿ.
ಇಷ್ಟಾವಿಶಿಷ್ಟಮತಯೋಪಿನರಾಯಯಾ ದ್ರಾಗ್ ದೃಷ್ಟಾಸ್ತ್ರಿವಿಷ್ಟಪದಂ ಸುಲಭಂ ಲಭಂತೇ |
ದೃಷ್ಟಿಃ ಪ್ರಹೃಷ್ಟಕಮಲೋದರದೀಪ್ತಿರೀಷ್ಟಾಂ ಪುಷ್ಟಿಂ ಕೃಪೀಷ್ಟಮಮ ಪುಷ್ಕರವಿಷ್ಟರಾಯಾಃ || 8 ||
ವಿಶೇಷವಾದ ಪಾಂಡಿತ್ಯವುಳ್ಳ (ದೇವಿಗೆ) ಪ್ರಿಯರಾದ ಮನಷ್ಯರಾರೂ ಒಮ್ಮೆ ದೇವಿಯ ದೃಷ್ಟಿಗೆ ಪಾತ್ರರಾದದ್ದೇ ಆದರೆ ಸುಲಭವಾಗಿ ಸ್ವರ್ಗಪದವಿಯನ್ನು ಹೊಂದುವರು. ಅರಳಿದ ಕಮಲದ ಒಳಭಾಗದಂತೆ ಕಾಂತಿಯುಳ್ಳ, ಕಮಲಾಸನೆಯಾದ ದೇವಿಯ ಅಂಥ ದೃಷ್ಟಿಯ ನನಗೆ ಪುಷ್ಟಿಯನ್ನುಂಟುಮಾಡಲಿ.
ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾ ಮಸ್ಮಿನ್ನ ಕಿಂಚನ ವಿಹಂಗಶಿಶೌ ವಿಷಣ್ಣೇ |
ದುಷ್ಕರ್ಮಘರ್ಮಮಪನೀಯ ಚಿರಾಯ ದೂರಾನ್ನಾರಾಯಣಪ್ರಣಯಿನೀನಯನಾಂಬುವಾಹಃ || 9 ||
ನಾರಾಯಣನ ಪ್ರಿಯೆಯಾದ ದೇವಿಯ ಕಟಾಕ್ಷಪ್ರವಾಹವು ಕೆಟ್ಟ ಕರ್ಮಗಳೆಂಬ ಬಿಸಿಲನ್ನು ನಿತ್ಯವಾಗಿ ದೂರವಾಗಿ ತೊಡೆದುಹಾಕಿ ವಿಷಾದದಿಂದ ಕೂಡಿರುವ ದರಿದ್ರವೆಂಬ ಪಕ್ಷಿಯ ಮರಿಯಾದ (ನನ್ನಲ್ಲಿ ) ದಯೆಯಿಟ್ಟು ಕೃಪೆಯಿಂದ ಗಾಳಿಯಿಂದ ಪ್ರೇರಿಸಲ್ಪಟ್ಟ ಐಶ್ವರ್ಯವೆಂಬ ಮಳೆಯ ಧಾರೆಯುನ್ನುಂಟುಮಾಡಲಿ.
ಗೀರ್ದೇವತೇತಿ ಗರುಡಧ್ವಜಸುಂದರೀತಿ ಶಾಕಂಭರೀತಿ ಶಶಿಶೇಖರವಲ್ಲಭೇತಿ |
ಸೃಷ್ಟಿಸ್ಥಿತಿಪ್ರಲಯಕೇಲಿಷು ಸಂಸ್ಥಿತಾಯೈ ತಸ್ಮೈ ನಮಸ್ತ್ರಿಭುವನೈಕಗುರೋಸ್ತರುಣ್ಯೈ || 10 ||
ವಾಗ್ಧೇವಿಯೆಂದೂ ಗರುಡಧ್ವಜನಾದ ವಿಷ್ಣುವಿನ ಪ್ರಿಯಳೆಂದೂ ಶಾಖಂಬರಿಯೆಂದೂ ಚಂದ್ರಶೇಖರನಾದ ಶಿವನ ಪತ್ನಿಯೆಂದೂ ಆಯಾ ಕಾಲಕ್ಕೆ ಎಂದರೆ ಸೃಷ್ಟಿ-ಸ್ಥಿತಿ-ಸಂಹಾರ ಲೀಲೆಗಳಲ್ಲಿ ತೋರಿಕೊಂಡಿರುವವಳಾದ, ಮೂರು ಲೋಕಕ್ಕೂ ಗುರುವಾದ ಶ್ರೀ ಮನ್ನಾರಾಯಣನ ಮಡದಿಯಾದ ಅಕೆಗೆ ವಂದನೆಗಳು.
ಶ್ರುತ್ಯೈಸಮೋಸ್ತು ಶುಭಕರ್ಮಫಲಪ್ರಸೂತ್ಯೈ ರತ್ಯೈ ನಮೋಸ್ತು ರಮಣೀಯಗುಣಾಶ್ರಯಾಯೈ |
ಶಕ್ತ್ಯೈ ನಮೋಸ್ತು ಶತಪತ್ರನಿಕೇತನಾಯೈ ಪುಷ್ಪೈ ನಮೋಸ್ತು ಪುರುಷೋತ್ತಮವಲ್ಲಭಾಯೈ || 11 ||
ಶುಭಕರ್ಮಗಳ ಫಲವನ್ನು ಉಂಟುಮಾಡುವ ಶ್ರುತಿರೂಪಳಾದ ದೇವಿಗೆ ನಮಸ್ಕಾರವು. ರಮಣೀಯವಾದ ಗುಣಗಳಿಗೆ ಆಶ್ರಯಳಾದ ರತತಿಗೆ ನಮಸ್ಕಾರಗಳು. ಕಮಲನಿವಾಸಿನಿಯಾದ ಶಕ್ತಿರೂಪಳಾದ ಲಕ್ಷ್ಮಿಗೆ ನಮಸ್ಕಾರಗಳು. ಪುರುಷೋತ್ತಮನ ಪತ್ನಿಯಾದ ಪುಷ್ಪಿದೇವಿಗೆ ನಮಸ್ಕಾರಗಳು.
ನಮೋಸ್ತು ನಾಲಿಕನಿಭಾನನಾಯೈ ನಮೋಸ್ತು ದಿಗ್ಧೋದಧಿಜನ್ಮಭೂಮ್ಯೈ |
ನಮೋಸ್ತು ಸೋಮಾಮೃತಸೋದರಾಯೈ ನಮೋಸ್ತು ನಾರಾಯಣವಲ್ಲಭಾಯೈ || 12 ||
ಕಮಲದಂತೆ ಸುಂದರವಾದ ಮುಖವುಳ್ಳ ದೇವಿಗೆ ನಮಸ್ಕಾರ. ಕ್ಷೀರಸಮುದ್ರವನ್ನು ಜನ್ಮಸ್ಥಾನವಾಗಿ ಹೊಂದಿರುವವಳಿಗೆ ನಮಸ್ಕಾರ. ಸಮುದ್ರಮಂಥನ ಕಾಲದಲ್ಲಿಯೇ ( ಲಕ್ಷ್ಮಿಯೊಡನೆ ) ಹುಟ್ಟಿದ ಚಂದ್ರ ಹಾಗೂ ಅಮೃತಗಳಿಗೆ ಸೋದರಿಯಾದವಳಿಗೆ ನಮಸ್ಕಾರ ನಾರಾಯಣನ ವಲ್ಲಭೆಗೆ ವಂದನೆಗಳು.
ನಮೋಸ್ತು ಹೇಮಾಂಭುಜಪೀಠಕಾಯೈ ನಮೋಸ್ತು ಭೂಮಂಡಲನಾಯಿಕಾಯೈ |
ನಮೋಸ್ತು ದೇವಾದಿದಯಾಪರಾಯೈ ನಮೋಸ್ತು ಶಾರ್ಙ್ಗೌಯುಧವಲ್ಲಭಾಯೈ || 13 ||
ಸುವರ್ಣಕಮಲಪೀಠವಾಸಿನಿಯಾದ, ಭೂಮಂಡಲಕ್ಕೆಲ್ಲ ಒಡೆಯಳಾದ, ದೇವಾದಿ ಸಮಸ್ತ ಜೀವಿಗಳಲ್ಲಿಯೂ ದಯೆಯುಳ್ಳ ಮತ್ತು ಶಾರ್ಙ್ಗವೆಂಬ ಬಿಲ್ಲನ್ನು ಧರಿಸಿರುವ ವಿಷ್ಣುವಿನ ಪತ್ನಿಯಾದ ದೇವಿಗೆ ನಮಸ್ಕಾರಗಳು.
ನಮೋಸ್ತು ದೇವ್ಯೈ ಭೃಗುನಂದನಾಯೈ ನಮೋಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋಸ್ತು ಲಕ್ಷ್ಮೈ ಕಮಲಾಲಯಾಯೈ ನಮೋಸ್ತು ದಾಮೋದರವಲ್ಲಭಾಯೈ || 14 ||
ಭೃಗುಪುತ್ರಿಯಾದ ದೇವಿಗೆ, ವಿಷ್ಣವಿನ ಹೃದಯವಾಸಿನಿಯಾದವಳಿಗೆ, ಕಮಲವಾಸಿನಿಯಾದ ಲಕ್ಷ್ಮಿಗೆ, ದಾಮೋದರನ ಪತ್ನಿಯಾದ ಮಹಾದೇವಿಗೆ ವಂದನೆಗಳು.
ನಮೋಸ್ತು ಕಾಂತ್ಯೈ ಕಮಲೇಕ್ಷಣಾಯೈ ನಮೋಸ್ತು ಭೂತ್ಯೈ ಭವನಪ್ರಸೂತ್ಯೈ |
ನಮೋಸ್ತು ದೇವಾದಿಭಿರರ್ಚಿತಾಯೈ ನಮೋಸ್ತು ನಂದಾತ್ಮಜವಲ್ಲಭಾಯೈ || 15 ||
ಕಮಲದಂತೆ ಕಂಗಳುಳ್ಳ ಪ್ರಕಾಶಮಾನಳಾದವಳಿಗೂ, ಜಗತ್ತನ್ನು ಹಡೆದಿರುವ ಮಹಿಮಾವಂತಳಿಗೂ ದೇವತೆಗಳೇ ಮೊದಲಾದವರಿಂದ ಪೂಜಿಸಲ್ಪಟ್ಟವಳಿಗೂ ನಂದಗೋಪನ ಮಜಗಳಾದ ದುರ್ಗೆಗೆ ಪ್ರಿಯಳಾಗಿಯೂ ಇರುವ ಮಹಾಲಕ್ಷ್ಮಿಗೆ ನಮಸ್ಕಾರಗಳು.
ಸಂಪತ್ಕರಾಣಿ ಸಕಲೇಂದ್ರಿಯ ನಂದನಾನಿ ಸಾಮ್ರಾಜ್ಯದಾನವಿಭವಾನಿ ಸರೋರುಹಾಣಿ |
ತ್ವದ್ವಂದನಾನಿ ದುರಿತಾಹರಣೋದ್ಯತಾನಿ ಮೂಮೇವ ಮಾತರನಿಶಂ ಕಲಯಂತು ಮಾನ್ಯೇ || 16 ||
ಸಂಪತ್ತುಗಳನ್ನು ನೀಡುವ, ಎಲ್ಲಾ ಇಂದ್ರಿಯಗಳಿಗೂ ಆನಂದವನ್ನುಂಟುಮಾಡುವ, ಸಾಮ್ರಾಜ್ಯ ಪದವಿಯನ್ನು ದಯಪಾಲಿಸುವ ನಿನ್ನ ಪಾದಕಮಲಗಳನ್ನು ನಮಸ್ಕರಿಸುವಿಕೆಯು ಸಕಲ ಪಾಪಗಳನ್ನೂ ಕಳೆಯುವುದರಲ್ಲಿ ಮುಂದಾಗಿರುವವು. ಎಲೌ ತಯೆ, ಮಾನನೀಯಳೆ, ಆ ವಂದನೆಗಳು ಯಾವಾಗಲೂ ನನಗೆ ಸಂಭವಿಸುತ್ತಿರಲಿ.
ಯತ್ಕಟಾಕ್ಷಸಮುಪಾಸನಾವಿಧಿಃ ಸೇವಕಸ್ಯ ಸಕಲಾರ್ಥಸಂಪದಃ |
ಸಂತನೋತಿ ವಚನಾಂಗಮಾನಸೈಸ್ತ್ವಾಂ ಮುರಾರಿಹೃದಯೇಶ್ವರೀಂ ಭಜೇ || 17 ||
ಯಾವ ದೇವಿಯ ಕುಡಿಗಣ್ಣಿನ ನೋಟದ ಚಿಂತನೆಯು ಸೇವಕನಾದ ಭಕ್ತನಿಗೆ ಸಮಸ್ತ ಇಷ್ಟಾರ್ಥಗಳನ್ನೂ ಕೊಡುವುದೋ ಅಂಥ, ಮರಾರಿಯಾದ ನಾರಾಯಣನ ಹೃದಯೇಶ್ವರಿಯಾದ ನಿನ್ನನ್ನು ಕಾಯೇನ-ಮನಸಾ-ವಾಚಾ ( ತ್ರಿಕರಣಗಳಿಂದಲೂ) ಭಜಿಸುವೆನು.
ಸರಸಿಜನಯನೇ ಸರೋಜಹಸ್ತೇ ಧವಲತಮಾಂಶುಕಗಂಧಮಾಲ್ಯಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ || 18 ||
ಕಮಲದಂತೆ ಕಣ್ಣುಳ್ಳವಳೆ, ಕೈಯಲ್ಲಿ ಕಮಲವನ್ನು ಹಿಡಿದಿರುವವಳೆ, ಅತ್ಯಂತ ಶುಭ್ರವಾದ ವಸ್ತ್ರ, ಗಂಧ, ಹೂಮಾಲೆಗಳಿಂದ ಶೋಭಿಸುತ್ತಿರುವವಳೆ, ಪೂಜ್ಯಳೆ, ಶ್ರೀಹರಿಯ ಪ್ರಿಯಳೆ, ಮನೋಜ್ಞಳೆ, ಮೂರು ಲೋಕಗಳ ಐಶ್ವರ್ಯಗಳ ಐಶ್ವರ್ಯವನ್ನು ಕೊಡುವವಳೆ, ನನಗೆ ಪ್ರಸನ್ನಳಾಗು.
ದಿಗ್ ಹಸ್ತಿಭಿಃ ಕನಕಕುಂಭಮುಖಾವಸೃಷ್ಟ-
ಸ್ವರ್ವಾಹಿನೀವಿಮಲಚಾರುಜಲಾಪ್ಲುತಾಂಗೀಮ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ-
ಲೋಕಾಧಿನಾಥಗೃಹಿಣೀಮಮೃತಾಬ್ಧಿಪುತ್ರೀಮ್ || 19 ||
ದಿಗ್ಗಜಗಳ ( ಸೊಂಡಿಲುಗಳಲ್ಲಿರುವ) ಚಿನ್ನದ ಕಲಶಗಳ ಬಾಯಿಂದ ಸುರಿಯಲ್ಪಟ್ಟ ಆಕಾಶಗಂಗೆಯ ದಿವ್ಯಜಲದಿಂದ ತೋಯಿಸಲ್ಪಟ್ಟ ಶರೀರವುಳ್ಳವಳೂ, ಜಗತ್ತಿಗೇ ತಾಯಿಯೂ, ಸಮಸ್ತ ಲೋಕಗಳ ಒಡೆಯನಾದ ( ವಿಷ್ಣುವಿನ ) ಪತ್ನಿಯೂ, ಅಮೃತಸಮುದ್ರರಜನ ಮಗಳೂ ಆದ ದೇವಿಯನ್ನು ನಾನು ಪ್ರಾತಃಕಾಲದಲ್ಲಿ ವಂದಿಸುವೆನು.
ಕಮಲೇ ಕಮಲಾಕ್ಷವಲ್ಲಭೇ ತ್ವಂ ಕರುಣಾಪೂರತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ || 20 ||
ಎಲೌ ಕಮಲಾದೇವಿಯ, ಕಮಲನಯನನಾದ ವಿಷ್ಣುವಿನ ಪ್ರಿಯಳೆ, ನೀನು ಕರುಣೆಯಿಂದ ತುಂಬಿದ ಚಂಚಲವಾದ ಕುಡಿನೋಡಗಳಿಂದ ನನ್ನನ್ನು ನೋಡುವವಳಾಗು. ದರಿದ್ರದಲ್ಲಿ ಮೊದಲಿಗನೂ ದಯೆತೋರಬೇಕಾದವರ ಗುಂಪಿನಲ್ಲಿ ಅರ್ಹನೂ ಕಪಟವಿಲ್ಲದವನೂ ನಾನಾಗಿರುವೆನಷ್ಟೆ?
ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ ತ್ರಯೀಮಯೀಂ ತ್ರಿಭುವನಮಾತರಂ ರಮಾಮ್ |
ಗುಣಾಧಿಕಾ ಗುರುತರಭಾಗ್ಯಭಾಜಿನೋ ಭವಂತಿ ತೇ ಭುವಿ ಬುಧಭಾವಿತಾಶಯಾಃ || 21 ||
ಯಾರು ಈ ದಿವ್ಯ ಸ್ತುತಿಗಳಿಂದ ವೇದಮಯಳೂ, ಮೂರು ಲೋಕಗಳ ತಾಯಿಯೂ ಆದ ರಮಾದೇವಿಯನ್ನು ಸ್ತೋತ್ರ ಮಾಡುವರೋ ಅವರು ಈ ಭೂಲೋಕದಲ್ಲಿ ಗುಣಸಂಪನ್ನರೂ ಅತ್ಯಧಿಕವಾದ ಐಶ್ವರ್ಯಯುಕ್ತರೂ, ವಿದ್ವಾಂಸರಿಂದ ಗೌರವಿಸಲ್ಪಡುವವರೂ ಆಗಿ ಸುಖಿಸುವರು.
|| ಇತಿ ಶ್ರೀ ಜಗದ್ಗುರು ಆದಿಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರಂ ಸಂಪೂರ್ಣಂ ||
Comments
Post a Comment