ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತಾ ಸದಾಚಾರಸ್ಮೃತಿಃ

ವೈಷ್ಣವರ ಕರ್ಮಾಚರಣೆಯ ವಿಧಿವಿಧಾನಗಳನ್ನು ಶ್ರುತಿಸ್ಮೃತಿಗಳ ಅನುಸಾರವಾಗಿ ಶಿಷ್ಯರಿಗೆ ಬೋಧಿಸಿ ಉದ್ಧರಿಸಲಿಕ್ಕಾಗಿ ಶ್ರೀಮಧ್ವಾಚಾರ್ಯರು ರಚಿಸಿರುವ ಸುಮಾರು 39 ಶ್ಲೋಕಗಳ ಅತ್ಯಂತ ಮಹತ್ವವಾದ ಚಿಕ್ಕ ಗ್ರಂಥವೇ ಸದಾಚಾರಸ್ಮೃತಿ.
ಮೊದಲಿಗೆ ಅಚ್ಯುತನ ಸ್ಮರಣೆಯೊಂದಿಗೆ ಶ್ರೀಮದಾಚಾರ್ಯರು ಈ ಕೃತಿಯನ್ನು ಪ್ರಾರಂಭಿಸುತ್ತಿದ್ದಾರೆ.
ಯಸ್ಮಿನ್ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮ ಚೇತಸಾ |
ನಿರಾಶೀರ್ನಿಮಮೋ ಯಾತಿ ಪರಂ ಜಯತಿ ಸೋsಚ್ಯುತಃ || 1 ||
    ಚತುರ್ವಿಧ ನಾಶರಹಿತನಾದ ಅಚ್ಯುತನು ಸವೋತ್ಕೃಷ್ಣನು. ಪರಮಾತ್ಮನ ಬಗ್ಗೆ ಈ ರೀತಿಯ ಜ್ಞಾನವನ್ನು ಹೊಂದಿದ ಸಾಧಕನು ಮಮಕಾರ ಮತ್ತು ಅಹಂಕಾರಗಳನ್ನು ತ್ಯಜಿಸಿ, ಯಾವುದೇ ಐಹಿಕ ಆಸೆ ಆಕಾಂಕ್ಷೆಗಳನ್ನು ಹೊಂದದೆ ತಾನು ಮಾಡುವ ಎಲ್ಲ ಕರ್ಮಗಳೂ ಸ್ವತಂತ್ರನಾದ ಪರಮಾತ್ಮನಿಂದಲೇ ಆಗುತ್ತಿವೆ, ತಾನು ಕೇವಲ ಉಪಕರಣ ಎಂದು ಭಾವಿಸಿ, ಎಲ್ಲ ಕರ್ಮಗಳನ್ನೂ ಪರಮಾತ್ಮನಿಗೆ ಭಕ್ತಿಯಿಂದ ಸಮರ್ಪಿಸಬೇಕು. ಹೀಗೆ ಮಾಡುವುದೇ ಗೀತೋಕ್ತ ನಿಷ್ಕಾಮ ಕರ್ಮ. ಇದರಿಂದ ಅಪರೋಕ್ಷಜ್ಞಾನ ದ್ವಾರಾ ಪರಮಾತ್ಮನ ಪರಮಪ್ರಸಾದವಾದ ವೋಕ್ಷಪ್ರಾಪ್ತಿ ಎಂಬ ಪ್ರಮೇಯವನ್ನು ಶ್ರೀಮದಾಚಾರ್ಯರು ಈ ಮಂಗಲ ಶ್ಲೋಕದಲ್ಲಿ ತಿಳಿಸಿದ್ದಾರೆ.

ಸ್ಮೃತ್ವಾ ವಿಷ್ಣುಂ ಸಮುತ್ಥಾಯ ಕೃತಶೌಚೋ ಯಥಾವಿಧಿ |
ಧೌತದಂತಃ ಸಮಾಚಮ್ಯ ಸ್ನಾನಂ ಕುರ್ಯಾದ್ವಿಧಾನತಃ || 2 ||
    ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿಯೇ ಹಾಸಿಗೆಯಿಂದ ಮೇಲಕ್ಕೇಳಬೇಕು. ಸೂರ್ಯೋದಯಕ್ಕಿಂತ ಮೊದಲಿನ ಎರಡು ತಾಸುಗಳ ಸಮಯವೆ ಬ್ರಾಹ್ಮೀ ಮುಹೂರ್ತ. ಇದು ದೇವತೆಗಳ ಕಾಲ. ಎಚ್ಚರವಾಗುತ್ತಿದ್ದಂತಯೇ ಶ್ರೀಹರಿಯನ್ನು ಸ್ಮರಿಸುತ್ತಲೇ ಏಳಬೇಕು. ಎದ್ದು ಕುಳಿತು, ಗಜೇಂದ್ರ ಮೋಕ್ಷ, ದಧಿವಾಮನ ಸ್ತೋತ್ರ ಮೊದಲಾದವನ್ನು ಭಕ್ತಿಪೂರ್ವಕವಾಗಿ ಪಠಿಸಬೇಕು. ಅನಂತರ ಶೌಚವಿಧಿ. ತಲೆಗೆ ವಸ್ತ್ರ ಸುತ್ತಿಕೊಂಡು ಶಾಸ್ತ್ರನಿಷಿದ್ಧವಾದ ಸ್ಥಳಗಳನ್ನು ಹೊರತುಪಡಿಸಿ ಅದಕ್ಕಾಗಿಯೇ ನಿಗದಿತ ಸ್ಥಳದಲ್ಲಿ ಮಲಮೂತ್ರ ವಿಸರ್ಜಿಸಬೇಕು. ಮೃತ್ತಿಕಾ ಶೌಚ ಮತ್ತಿತರ ಶಾಸ್ತ್ರೋಕ್ತ ವಿಧಾನದಿಂದ ದೇಹವನ್ನು ಪರಿಶುದ್ಧಗೊಳಿಸಿಕೊಂಡು, ವಿಧ್ಯುಕ್ತವಾಗಿ ಹಲ್ಲುಗಳನ್ನು ಉಜ್ಜಿಕೊಂಡು ದುರ್ಗಂಧ ಹೋಗುವವರೆಗೂ ಬಾಯಿಯನ್ನು ಶುದ್ಧವಾದ ನೀರಿನಿಂದ ಪರಿಶುದ್ಧಗೊಳಿಸಿ ಆಚಮನ ಮಾಡಬೇಕು. ಅನಂತರ ಶ್ರುತಿಸ್ಮೃತಿಗಳಲ್ಲಿ ಹೇಲಿರುವ ಪ್ರಕಾರ ವಿಧಿವತ್ತಾಗಿ ಸ್ನಾನ ಮಾಡಬೇಕು.

ಉದ್ಧೃತೇತಿ ಮೃದಾssಲಿಪ್ಯ ದ್ವಿಷಟಷ್ಟಷಡಕ್ಷರೈಃ |
ತ್ರಿರ್ನಿಮಜ್ಯಾಪ್ಯ ಸೂಕ್ತೇನ ಪ್ರೋಕ್ಷಯಿತ್ವಾ ಪುನಸ್ತಥಾ || 3 ||
ಮೃದಾಲಿಪ್ಯ ನಿಮಜ್ಯ ತ್ರಿಃ ತ್ರಿರ್ಜಪೇದಘಮರ್ಷಣಮ್ |
ಸ್ರಷ್ಟಾರಂ ಸರ್ವಲೋಕಾನಾ ಸ್ಮೃತ್ವಾ ನಾರಾಯಣಂ ಪರಮ್ || 4 ||
ಯತಶ್ವಾಸೋ ನಿಮಜ್ಯಾಪ್ಸು ಪ್ರಣವೇನೋತ್ಥಿತಸ್ತತಃ |
ಸಿಂಚಯೇತ್ ಪುರುಷಸೂಕ್ತೇನ ಸ್ವದೇಹಸ್ಥಂ ಹರಿಂ ಸ್ಮರನ್ || 5 ||
ಉದ್ಧೃತಾಸಿ ವರಾಹೇಣ ಕೃಷ್ಣೇನ ಶತಬಾಹುನಾ | ಮೃತ್ತಿಕೇ ಹರ ಮೇ ಪಾಪಂ ಯನ್ಮಯಾ ದುಷ್ಕೃತಂ ಕೃತಮ್ ||
    ಈ ಮಂತ್ರದಿಂದ ತುಲಸೀ ಮೂಲದ ಮೃತ್ತಿಕೆ ಅಥವಾ ಶುದ್ಧವಾದ ಮಣ್ಣನ್ನು ಶರೀರಕ್ಕೆ ಲೇಪಿಸಿಕೊಳ್ಳಬೇಕು. ಅನಂತರ ವಾಸುದೇವ ದ್ವಾದಶಾಕ್ಷರ, ನಾರಾಯಣ ಅಷ್ಟಾಕ್ಷರ ಮತ್ತು ವಿಷ್ಣು ಷಡಕ್ಷರ ಮಂತ್ರಗಳನ್ನು ಪಠಿಸುತ್ತ ಪ್ರತ್ಯೇಕವಾಗಿ ಮೂರು ಸಲ ನೀರಿನಲ್ಲಿ ಮುಳುಗು ಹಾಕಬೇಕು. ಮತ್ತೆ ಆಚಮನ ಮಾಡಿ, ಆಪೋಹಿಷ್ಠಾ ಎಂಬ ಸೂಕ್ತದಿಂದ ದೇಹಕ್ಕೆ ನೀರಿನಿಂದ ಪ್ರೋಕ್ಷಣೆ ಮಾಡಿಕೊಳ್ಳಬೇಕು. ಪುನಃ ಮೊದಲಿನಂತೆ ಮೃತ್ತಿಕೆಯನ್ನು ಲೇಪಿಸಿಕೊಂಡು, ಶ್ವಾಸ ನಿರೋಧಿಸಿ ನೀರಿನಲ್ಲಿ ಮುಳುಗಿ ಅಘಮರ್ಷಣ ಸೂಕ್ತಪ್ರತಿಪಾದ್ಯನಾದ ಸರ್ವಲೋಕಸ್ರಷ್ಟಾರನಾದ ನರ್ವೋತ್ಕೃಷ್ಠನಾದ ನಾರಾಯಣನನ್ನು ಸ್ಮರಣೆ ಮಾಡುತ್ತ, ಮೂರು ಸಲ ಅಘಮರ್ಷಣ ಸೂಕ್ತವನ್ನು ಜಪಿಸಬೇಕು. ಅನಂತರ ಪ್ರಣವ ಮಂತ್ರವನ್ನು ಉಚ್ಚರಿಸತ್ತ ನೀರಿನಿಂದ ಮೇಲೆದ್ದು, ಸ್ವ ದೇಹಸ್ಥನಾದ ಶ್ರೀಹರಿಯನ್ನು ಸ್ಮರಣೆಮಾಡುತ್ತ ಪುರುಷಸೂಕ್ತದಿಂದ ದೇಹಕ್ಕೆ ಪ್ರೋಕ್ಷಣೆ ಮಾಡಿಕೊಳ್ಳಬೇಕು. ಅನಂತರ ಶಾಲಿಗ್ರಾಮತೀರ್ಥವನ್ನು ಮೂರು ಸಲ ಪ್ರಾಶನಮಾಡಿ, ನೀರಿನಲ್ಲಿ ನಿಂತು ಸ್ನಾನಾಂಗ ತರ್ಪಣಾದಿಗಳನ್ನು ಕೊಡಬೇಕು. (3,4,5)

ವಸಿತ್ವಾ ವಾಸ ಆಚಮ್ಯ ಪ್ರೋಕ್ಷ್ಯಾssಚಮ್ಯ ಚ ಮಂತ್ರತಃ |
ಗಾಯತ್ರ್ಯಾ ಚಾಂಜಲಿಂ ದತ್ವಾ ಧ್ಯಾತ್ವಾ ಸೂರ್ಯಗತಂ ಹರಿಮ್ || 6 ||
ಮಂತ್ರತಃ ಪರಿವೃತ್ಯಾಥ ಸಮಾಚಮ್ಯ ಸುರಾದಿಕಾನ್ |
ತರ್ಪಯಿತ್ವಾ ನಿಪೀಡ್ಯಾಥ ವಾಸೋ ವಿಸ್ತೀರ್ಯ ಚಾಂಜಸಾ || 7 ||
    ಸ್ನಾನಾನಂತರ ಶುಭ್ರವಾದ ಮಡಿ ವಸ್ತ್ರವನ್ನು ಧರಿಸಿ, ಆಚಮನ ಮಾಡಿ ಗೋಪಿಚಂದನದಿಂದ ನಾಮ ಮುದ್ರೆಗಳನ್ನು ವಿಧಿಪೂರ್ವಕವಾಗಿ ಮಂತ್ರಗಳನ್ನು ಉಚ್ಚರಿಸುತ್ತ ದೇಹದ ನಿರ್ದಿಷ್ಟ ಸ್ಥಾನಗಳಲ್ಲಿ ಧರಿಸಿಕೊಳ್ಳಬೇಕು. ಅನಂತರ ಆಚಮನ ಪ್ರಾಣಾಯಾಮ ಮತ್ತು ಸಂಕಲ್ಪಗಳನ್ನು ಮಾಡಿ ಪ್ರಾತಃ ಸಂಧ್ಯಾವಂದನೆಯನ್ನು ಪ್ರಾರಂಭಿಸಬೇಕು. ಸಂಧ್ಯಾಂಗವಾಗಿ ಸೂರ್ಯಮಂಡಲದ ಮಧ್ಯದಲ್ಲಿರುವ ಶ್ರೀಹರಿಯನ್ನು ಧ್ಯಾನಪೂರ್ವಕವಾಗಿ ಸ್ಮರಿಸಿ, ಗಾಯತ್ರೀಮಂತ್ರದಿಂದ ಮೂರು ಸಲ ಅರ್ಘ್ಯ ಕೋಡಬೇಕು. ಕಾಲಾತೀತವಾಗಿದ್ದರೆ ಪ್ರಾಯಶ್ಚಿತ್ತವಾಗಿ ಮತ್ತೊಂದು ಅರ್ಘ್ಯವನ್ನು ಕೊಟ್ಟು, ಕೈಯಲ್ಲಿ ನೀರು ಹಿಡಿದು ಅಸಾವಾದಿತ್ಯೋ ಬ್ರಹ್ಮ ಎಂಬ ಮಂತ್ರದಿಂದ ನಿಂತಲ್ಲೇ ಒಂದು ಸುತ್ತು ಬರಬೇಕು. ಅನಂತರ ಯೋಗ್ಯ ಆಸನದಲ್ಲಿ ಕುಳಿತು ಬ್ರಹ್ಮದಿ ದೇವತೆಗಳ ಅಂತರ್ಯಾಮಿಯಾದ ಕೇಶವಾದಿ ಭಗದ್ರೂಪಗಳಿಗೆ ತರ್ಪಣ ಕೊಡಬೇಕು. ಈ ಮೊದಲು ಧರಿಸಿ ಬಿಟ್ಟಿದ್ದ ಒದ್ದೆಯಾದ ವಸ್ತ್ರವನ್ನು ಚೆನ್ನಾಗಿ ಹಿಂಡಿ ಒಣಹಾಕಬೇಕು ಅಥವಾ ಪಕ್ಕದಲ್ಲಿ ಮಡಿಸಿ ಇಟ್ಟುಕೊಳ್ಳಬೇಕು. ( 6,7)

ಅರ್ಕಮಂಡಲಗಂ ವಿಷ್ಣುಂ ಧ್ಯಾತ್ವೈವ ತ್ರಿಪದೀಂ ಜಪೇತ್ |
ಸಹಸ್ರಪರಮಾಂ ದೇವೀಂ ಶತಮಧ್ಯಾಂ ದಶಾವರಾಮ್ || 8 ||
ಆಸೂರ್ಯದರ್ಶನಾತ್ತಿಷ್ಠೇತ್ತತಸ್ತೂಪವಿಶೇತ ವಾ |
ಪೂರ್ವಾಂ ಸಂಧ್ಯಾಂ ಸನಕ್ಷತ್ರಾಂ ಉತ್ತರಾಂ ಸದಿವಾಕರಾಮ್ |
ಉತ್ತರಾಮುಪವಿಶ್ಯೈವ ವಾಗ್ಯತಃ ಸರ್ವದಾ ಜಪೇತ್ || 9 ||
    ಆನಂತರ ಸೂರ್ಯಮಂಡಲ ಮಧ್ಯದಲ್ಲಿರುವ ಗಾಯತ್ರೀ ಮಂತ್ರ ಪ್ರತಿಪಾದ್ಯ ಗಾಯತ್ರೀನಾಮಕ ಶ್ರೀಮನ್ನಾರಾಯಣನನ್ನು ಧ್ಯೇಯಃ ಸದಾ ಸವಿತೃಮಂಡಲ ಮಧ್ಯವರ್ತೀ ಎಂಬ ಮಂತ್ರದಿಂದ ಧ್ಯಾನಿಸಿ, ತ್ರಿಪದೀ ಗಾಯತ್ರೀ ಮಂತ್ರವನ್ನು ಜಪಿಸಬೇಕು. 'ಸಹಸ್ರಪರಮಾಂ ದೇವೀಂ ಶತಮಧ್ಯಾಂ ದಶಾವರಾಂ' ಎಂದು ಶ್ರೀಮದಾಚಾರ್ಯರು ಅಪ್ಪಣೆ ಕೊಡಿಸಿರುವಂತೆ, ಸಹಸ್ರ ಸಂಖ್ಯೆಯಲ್ಲಾದರೆ ಉತ್ತಮ, ನೂರು ಮಧ್ಯಮ ಅಥವಾ ಕನಿಷ್ಠವೆಂದರೆ ಹತ್ತು ಸಲವಾದರೂ ಜಪಿಸಬೇಕು. ಸೂರ್ಯನ ದರ್ಶನ ಅಂದರೆ ಸೂರ್ಯೋದಯ ಆಗುವವರೆಗೂ ನಿಂತುಕೊಂಡೇ ಜಪಿಸಬೇಕು. ಅನಂತರ ಕುಳಿತುಕೊಂಡು ಜಪ ಮಾಡಬಹುದು. 'ಪೂರ್ವಾಂ ಸಂಧ್ಯಾಂ ಸನಕ್ಷತ್ರಾಂ ಉತ್ತರಾಂ ಸದಿವಾಕರಾಂ' ಎಂಬ ಉಕ್ತಿಯಂತೆ ಪ್ರಾತಃ ಸಂಧ್ಯೆಯನ್ನು ಇನ್ನೂ ನಕ್ಷತ್ರಗಳು ಕಾಣಿಸುತ್ತಿರುವಾಗಲೇ ಅಂದರೇ ಸೂರ್ಯೋದಯಕ್ಕೆ ಮುಂಚಿತವಾಗಿಯೇ ಮಾಡಬೇಕು. ಸಂಧ್ಯಾವಂದನೆ ಮಾಡುವ ಸಮಯದಲ್ಲಿ ಲೋಕವಾರ್ತೆ ಆಡಬಾರದು. ಮೌನವನ್ನು ಪಾಲಿಸಬೇಕು. ( 8, 9)

ಧ್ಯೇಯಃ ಸದಾ ಸವಿತೃಮಂಡಲಮದ್ಯವರ್ತೀ
ನಾರಾಯಣಃ ಸರಸಿಜಾಸನಸನ್ನಿವಿಷ್ಟಃ |
ಕೇಯೂರವಾನ್ ಮಕರಕುಂಡಲವಾನ್ ಕಿರೀಟೀ
ಹಾರೀ ಹಿರಣ್ಮಯವಪುರ್ಧೃತಶಂಖಚಕ್ರಃ || 10 ||
    ಸೂರ್ಯಮಂಡಲದ ಮಧ್ಯದಲ್ಲಿರುವ ನಾರಾಯಣನನ್ನು ಸದಾ ಧ್ಯಾನ ಮಾಡಬೇಕು. ಕೇಯೂರ, ಮಕರಕುಂಡಲ, ಹಾರ ಕೀರೀಟಾದಿಗಳನ್ನು ಧರಿಸಿರುವ, ಬಂಗಾರದಂತೆ ಹೊಂಬಣ್ಣದ ಮೈಕಾಂತಿಯಿಂದ ಶೋಭಿಸುತ್ತ ಪದ್ಮಾಸನದಲ್ಲಿ ಕುಳಿತಿರುವ ರೂಪದಲ್ಲಿ ಆ ನಾರಾಯಣ ಮೂರ್ತಿಯನ್ನು ಧ್ಯಾನ ಮಾಡಬೇಕು.

ಗಾಯತ್ರ್ಯಾಸ್ತ್ರಿಗುಣಂ ವಿಷ್ಣುಂ ಧ್ಯಾಯನ್ನಷ್ಟಾಕ್ಷರಂ ಜಪೇತ್ |
ಪ್ರಣಮ್ಯ ದೇವಾನ್ವಿಪ್ರಾಂಶ್ಚ ಗುರೂಂಶ್ಚ ಹರಿಪಾರ್ಷದಾನ್ || 11 ||
ಏವಂ ಸರ್ವೋತ್ತಮಂ ವಿಷ್ಣುಂ ಧ್ಯಾಯನ್ನೇವಾರ್ಚಯೇದ್ಧರಿಮ್ |
ಧ್ಯಾನಪ್ರವಚನಾಭ್ಯಾಂ ಚ ಯಥಾಯೋಗ್ಯಮುಪಾಸನಮ್ || 12 ||
    ಗಾಯತ್ರೀಜಪ ಮುಗಿದಮೇಲೆ, "ಉದ್ಯದ್ ಭಾಸ್ವತ್ ಸಮಾಭಾಸಃ" ಎಂಬ ಧ್ಯಾನಶ್ಲೋಕದಿಂದ ಶ್ರೀಮನ್ನಾರಾಯಣನನ್ನು ಧ್ಯಾನಿಸಿ, ಗಾಯತ್ರೀ ಜಪಸಂಖ್ಯೆಯ ಮೂರು ಪಟ್ಟು ನಾರಾಯಣಾಷ್ಟಾಕ್ಷರ ಮಂತ್ರವನ್ನು ಜಪಿಸಬೇಕು. ಆಗ ಮಾತ್ರ ಗಾಯತ್ರೀಜಪವು ಸಂಪೂರ್ಣ ಫಲದಾಯಕ.
ಅನಂತರ ಬ್ರಹ್ಮಾದಿದೇವತೆಗಳು, ದಿಗ್ದೇವತೆಗಳು, ಗುರು ಹಿರಿಯರು ಮತ್ತು ತಂದೆತಾಯಿಗಳಿಗೆ ನಮಸ್ಕರಿಸಿ, ವಿಧಿಪೂರ್ವಕ ಉಪಸ್ಥಾನವನ್ನು ಆಚರಿಸಿ, ಯಸ್ಯಸ್ಮೃತ್ಯಾಚ ಎಂಬ ಮಂತ್ರದಿಂದ ಶ್ರೀಹರಿಗೆ ಸಮರ್ಪಿಸಬೇಕು. ಸರ್ವೋತ್ತಮನಾದ ನಾರಾಯಣನನ್ನು ಸರ್ವತ್ರ ಸ್ಮರಿಸುತ್ತ ಶ್ರದ್ಧಾಭಕ್ತಿಗಳಿಂದ ಪೂಜಿಸಿ, ಧ್ಯಾನ ಪ್ರವಚನಾದಿಗಳಿಂದ ಶಕ್ತ್ಯಾನುಸಾರ ಶ್ರೀಹರಿಯ ಉಪಾಸನೆ ಮಾಡಬೇಕು. (11,12)

ಧರ್ಮೇಣೇಜ್ಯಾಸಾಧನಾನಿ ಸಾಧಯಿತ್ವಾ ವಿಧಾನತಃ |
ಸ್ನಾತ್ವಾ ಸಂಪೂಜಯೇದ್ವಿಷ್ಣುಂ ವೇದತಂತ್ರೋಕ್ತಮಾರ್ಗತಃ |
ವೈಶ್ವದೇವಂ ಬಲಿಂ ಚೈವ ಕುರ್ಯಾನ್ನಿತ್ಯಂ ತದರ್ಪಣಮ್ || 13 ||
ಇಷ್ಟಂ ದತ್ತಂ ಹುತಂ ಜಪ್ತಂ ಪೂರ್ತಂ ಯಚ್ಚಾತ್ಮನಃ ಪ್ರಿಯಂ |
ದಾರಾನ್ಸುತಾನ್ ಪ್ರಿಯಾನ್ಪ್ರಾಣಾನ್ ಪರಸ್ಮೈ ಸನ್ನಿವೇದಯೇತ್ || 14 ||
    ದೇವರ ಪೂಜೆಯನ್ನು ಬಹಳ ಶುದ್ಧವಾದ ಪದಾರ್ಥಗಳಿಂದ ಮಾಡಬೇಕಾದ್ದು ಅವಶ್ಯಕ. ಧರ್ಮೇಣೇಜ್ಯಾ ಸಾಧನಾನಿ ಸಾಧಯಿತ್ವಾ ವಿಧಾನತಃ ಎಂಬಿತ್ಯಾದಿ ಎರಡು ಶ್ಲೋಕಗಳಿಂದ ಶ್ರೀಮದಾಚಾರ್ಯರು ಇದೇ ವಿಷಯವನ್ನೇ ಇಲ್ಲಿ ಸ್ಪಷ್ಟಪಡಿಸುತ್ತಾರೆ. ದೇವರ ಪೂಜೆಗೆ ಬೇಕಾದ ಹೂವು, ಹಣ್ಣು, ಧನಧಾನ್ಯಾದಿ ಅಗತ್ಯ ಪದಾರ್ಥಗಳನ್ನು ಧರ್ಮಕ್ಕೆ ಅವಿರುದ್ಧವಾಗಿ ಶಾಸ್ತ್ರೋಕ್ತ ರೀತಿಯಲ್ಲಿ ಸಂಪಾದಿಸಿ, ಮಧ್ಯಾಹ್ನದ ಸ್ನಾನ ಸಂಧ್ಯಾದಿಗಳನ್ನು ವಿಧಿಪೂರ್ವಕವಾಗಿ ಮಾಡಿ, ವೇದ, ಪಂಚರಾತ್ರ ಮತ್ತು ತಂತ್ರಸಾರೋಕ್ತ ವಿಧಾನದಿಂದ ಪುರುಷಸೂಕ್ತಾದಿಗಳನ್ನು ಪಠಿಸುತ್ತ ಶ್ರದ್ಧಾ ಭಕ್ತಿಗಳಿಂದ ವಿಷ್ಣುವನ್ನು ಷೋಡಶೋಪಚಾರಗಳಿಂದ ಪೂಜಿಸಬೇಕು. ಪ್ರತಿನಿತ್ಯವೂ ದೇವಪೂಜಾನಂತರ ವೈಶ್ವದೇವ ಬಲಿಹರಣಾದಿಗಳನ್ನು ಮಾಡಿ ಶ್ರೀಹರಿಗೆ ಸಮರ್ಪಿಸಬೇಕು. ತಾನು ಮಾಡಿದ ದಾನ, ಜಪ, ಯಜ್ಞಯಾಗಾದಿಗಳು, ಕೆರೆಕಟ್ಟೆಗಳ ನಿರ್ಮಾಣ ಹಾಗೂ ತನಗೆ ಪ್ರಿಯಾವಾದ ಸಂಪತ್ತು ಭೋಜ್ಯಪದಾರ್ಥಗಳು, ಹೆಂಡತಿ, ಮಕ್ಕಳು, ಆತ್ಮೀಯರು, ಪ್ರಾಣ, ದೇಹ, ಮನಸ್ಸು ಮತ್ತು ಎಲ್ಲ ಇಂದ್ರಿಯಗಳಿಂದ ನಡೆಯುವ ಎಲ್ಲ ಕಾರ್ಯಗಳನ್ನೂ "ಸ್ವಾಮಿ ಇವೆಲ್ಲವೂ ನಿನ್ನ ಅಧೀನ, ನಿನ್ನಿಂದಲೇ ಇವುಗಳು ನನಗೆ ಪ್ರಿಯವೆನಿಸಿವೆ, ನಾನು ನಿನ್ನ ದಾಸ" ಎಂಬ ನಮ್ರತಾ ಭಾವದಿಂದ ಶ್ರೀಹರಿಗೆ ಭಕ್ತಿಯಿಂದ ಸಮರ್ಪಿಸಿ ನಮಸ್ಕರಿಸಬೇಕು.

ಭುಕ್ತಶೇಷಂ ಭಗವತೋ ಭೃತ್ಯಾತಿಥಿಪುರಸ್ಸರಃ |
ಭುಂಜೀತ ಹೃದ್ಗತಂ ವಿಷ್ಣುಂ ಸ್ಮರಂಸ್ತದ್ಗತಮಾನಸಃ |
ಆಚಮ್ಯ ಮೂಲಮಂತ್ರೇಣ ಕೋಷ್ಠಂ ಸ್ವಮಭಿಮಂತ್ರಯೇತ್ || 15 ||
    ಭಗವತ್ಪೂಜಾನಂತರದಲ್ಲಿ ತೀರ್ಥಪ್ರಾಶನಮಾಡಿ, ಗಂಧಾಕ್ಷತೆ ಅಂಗಾರ ಶೇಷಗಳನ್ನು ವಿಧಿಪೂರ್ವಕ ಧರಿಸಿಕೊಂಡು ಬ್ರಾಹ್ಮಣರು, ಅತಿಥಿಗಳು ಹಾಗೂ ಭೃತ್ಯರಿಂದ ಕೂಡಿಕೊಂಡು, ಹೃದ್ಗತನಾದ ಪರಮಾತ್ಮನನ್ನು ಸ್ಮರಿಸುತ್ತ ಅವನಲ್ಲೇ ಮನಸ್ಸನ್ನು ಧಾರಣಮಾಡಿ, "ಸ್ವಾಮಿ ಇದು ನಿನ್ನ ಪ್ರಸಾದ" ಎಂದು ಹೇಳುತ್ತ, ಗೋವಿಂದ ನಾಮಸ್ಮರಣೆಯೊಂದಿಗೆ ನೈವೇದ್ಯಶೇಷವನ್ನು ಭುಂಜಿಸಬೇಕು. ಅನಂತರ ಕೈತೊಳೆದು ಕೊಂಡು ಆಚಮನಮಾಡಿ ಮೂಲ ಮಂತ್ರದಿಂದ ಉದರವನ್ನು ಅಭಿಮಂತ್ರಿಸಿ ಕೊಳ್ಳಬೇಕು. (15)

ವೇದಶಾಸ್ತ್ರವಿನೋದೇನ ಪ್ರೀಣಯನ್ ಪುರುಷೋತ್ರಮಂ |
ಅಹಃಶೇಷಂ ನಯೇತ್ಸಂಧ್ಯಾಮುಪಾಸೀತಾಥ ಪೂರ್ವವತ್ || 16 ||
    ಊಟವಾದಮೇಲೆ ಸಾಯಂಕಾಲದ ಸಂಧ್ಯಾಸಮಯದವರೆಗೆ ವೇದಾದಿ ಶಾಸ್ತ್ರಗಳ ಅಧ್ಯಯನ ಅಧ್ಯಾಪನಗಳಿಂದ ಪುರುಷೋತ್ತಮನನ್ನು ಸಂತೋಷ ಪಡಿಸಬೇಕು. ಸಾಯಂಕಾಲದ ಹೊತ್ತಿಗೆ ಇನ್ನೂ ಸೂರ್ಯ ಇರುವಾಗಲೇ ಸಾಯಂಸಂಧ್ಯಾವನ್ನು ಹಿಂದೆ ಹೇಳಿರುವಂತೆ ವಿಧಿಪೂರ್ವಕ ಆಚರಿಸಬೇಕು. (16)

ಯಾಮಾತ್ ಪರತ ಏವಾಥ ಸ್ವಪೇದ್ ಧ್ಯಾಯನ್ ಜನಾರ್ದನಂ |
ಅಂತರಾಲೇ ತತೋ ಬುಧ್ವಾ ಸ್ಮರೇತ ಬಹುಶೋ ಹರಿಮ್ || 17 ||
    ರಾತ್ರಿಯ ವೊದಲ ಯಾಮವನ್ನು (ಸೂರ್ಯಾಸ್ತದಿಂದ ಮೂರು ಗಂಟೆಗಳ ಸಮಯ) ಪಾಠ ಪ್ರವಚನ ಕೀರ್ತನಾದಿಗಳಿಂದ ಯೋಗ್ಯವಾದ ರೀತಿಯಲ್ಲಿ ಕಳೆದು, ಅನಂತರ ಶ್ರೀಹರಿಯ ಕಾರುಣ್ಯವನ್ನು ಸ್ಮರಿಸುತ್ತ ಮಲಗಬೇಕು. ನಿದ್ರಾಕಾಲದಲ್ಲಿ ಮಧ್ಯೆ ಎಚ್ಚರವಾದಾಗಲೆಲ್ಲ ಶ್ರೀಹರಿಯನ್ನು ಸ್ಮರಿಸುತ್ತಿರಬೇಕು (17)

ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುಧ್ಯಾssತ್ಮನಾ ವಾsನುಸೃತಃ ಸ್ವಭಾವಂ |
ಕರೋತಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯೇತ್ತತ್ || 18 ||
    ಇದುವರೆಗೆ ವಿವರಿಸಿರುವಂತೆ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ದೇಹ ಮನಸ್ಸು ವಾಗಿಂದ್ರಿಯ ಮೊದಲಾದವುಗಳಿಂದ ತನ್ನಿಂದ ಹರಿಸ್ಮರಣ ಪೂರ್ವಕವಾಗಿ ಮಾಡಲ್ಪಟ್ಟ ಎಲ್ಲ ಕರ್ಮಗಳನ್ನು ತನ್ನ ಯೋಗ್ಯತೆ ಹಾಗೂ ಸ್ವಭಾವಕ್ಕನುಗುಣವಾಗಿ "ಶ್ರೀಹರಿಯು ನನ್ನಲ್ಲಿ ಅಂತರ್ಯಾಮಿಯಾಗಿ ನೆಲೆಸಿ ನನ್ನಿಂದ ಮಾಡಿಸಿದ್ದಾನೆ" ಎಂಬ ಕೃತಜ್ಞತಾಭಾವದಿಂದ ಭಕ್ತಿಪೂರ್ವಕವಾಗಿ ಶ್ರೀಹರಿಗೆ ಸಮರ್ಪಿಸಬೇಕು. (18)

ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ |
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋsಕ್ಷರ ಉಚ್ಯತೇ || 19 ||
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ |
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ || 20 ||
ಯಸ್ಮಾತ್ಕ್ಷರಮತೀತೋsಹಮಕ್ಷರಾದಪಿ ಚೋತ್ತಮಃ |
ಅತೋsಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ || 21 ||
ಯೋ ಮಾಮೇವಮಸಂಮೂಢೋ ಜಾನಾತಿ ಪುರುಷೋತ್ತಮಃ |
ಸ ಸರ್ವವಿದ್ ಭಜತಿ ಮಾಂ ಸರ್ವಭಾವೇನ ಭಾರತ || 22 ||
ಇತಿ ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾsನಘ |
ಏತದ್ಬುಧ್ವಾ ಬುದ್ಧಿಮಾನ್ ಸ್ಯಾತ್ಕೃತಕೃತ್ಯಶ್ಚ ಭಾರತ || 23 ||
    ಈ ಪ್ರಮಾಣ ವಾಕ್ಯಗಳ ಭಾವವನ್ನು ಕೆಳಗಿನಂತೆ ಸಂಗ್ರಹಿಸಿ ಹೇಳಬಹುದು. ಪರಮಾತ್ಮನಿಂದ ನಿರ್ಮಿತವಾದ ಈ ಜಗತ್ತಿನಲ್ಲಿ ಕ್ಷರ ಮತ್ತು ಅಕ್ಷರ ಎಂಬ ಎರಡು ರೀತಿಯ ಚೇತನ ಪದಾರ್ಥಗಳಿವೆ. ಸದಾ ನಿರ್ವಿಕಾರಳಾದ ಹಾಗೂ ನಾಶ ರಹಿತ ಶರೀರವುಳ್ಳ ಮಹಾಲಕ್ಷ್ಮಿ ಒಬ್ಬಳೇ ಅಕ್ಷರ ಚೇತನ. ಬ್ರಹ್ಮಾದಿ ಸಕಲರೂ ನಾಶವಾಗುವ ಶರೀರವನ್ನು ಹೊಂದಿರುವುದರಿಂದ ಕ್ಷರ ಚೇತನರು ಎನಿಸಿಕೊಳ್ಳುತ್ತಾರೆ. ಇವೆರಡು ರೀತಿಯ ಚೇತನ ಪದಾರ್ಥಗಳಿಗಿಂತ ಭಿನ್ನವಾದ ಹಾಗೂ ಇವರಿಗಿಂತ ಉತ್ತಮನಾದ ಪರಮ ಚೇತನ ಪುರುಷನೇ ಪರಮಾತ್ಮ. ಅವನು ಮೂರು ಲೋಕಗಳಲ್ಲೂ ವ್ಯಾಪಿಸಿದ್ದು ಅವುಗಳನ್ನು ಧಾರಣ ಪೋಷಣ ಮಾಡುತ್ತಾನೆ. ಇದು ಅವನ ಅಂಚಿತ್ಯಾದ್ಭುತ ಐಶ್ವರ್ಯದ ದ್ಯೋತಕ. ಸರ್ವೋತ್ತಮನಾದ ಪರಮಾತ್ಮನನ್ನು ಯಾವಾತನು ಸರಿಯಾಗಿ ತಿಳಿಯುತ್ತಾನೋ ಅವನೇ ಸರ್ವಜ್ಞ. ಅಂಥವನು ಮಾತ್ರ ಎಲ್ಲ ರೀತಿಯಿಂದಲೂ ಎಲ್ಲ ಕಾಲದಲ್ಲಿಯೂ ಯಥಾರ್ಥವಾದ ಜ್ಞಾನದಿಂದ ಶ್ರೀಹರಿಯ ಉಪಾಸನೆಯನ್ನು ಸರಿಯಾಗಿ ಮಾಡಬಲ್ಲನು. ಅತ್ಯಂತ ರಹಸ್ಯವಾದ ಈ ಪ್ರಮೇಯವನ್ನು ಅರಿತವನು ಶ್ರೀಹರಿಯ ಅನುಗ್ರಹದಿಂದ ಅಪರೋಕ್ಷಜ್ಞಾನಗಳಿಸಿ ಕೊನೆಯಲ್ಲಿ ಸಂಪೂರ್ಣವಾದ ಸ್ವರೂಪಸುಖವನ್ನು ಅಂದರೆ ಮೋಕ್ಷವನ್ನು ಪಡೆಯುತ್ತಾನೆ. ( 19 -23 )

ರುದ್ರಂ ಸಮಾಶ್ರಿತಾ ದೇವಾ ರುದ್ರೋ ಬ್ರಹ್ಮಾಣಮಾಶ್ರಿತಃ |
ಬ್ರಹ್ಮಾ ಮಾಮಾಶ್ರಿತೋ ನಿತ್ಯಂ ನಾಹಂ ಕಂಚಿದುಪಾಶ್ರಿತಃ || 24 ||
    ಹರಿ ಸರ್ವೋತ್ತಮತ್ವವನ್ನು ತಾರತಮ್ಯಜ್ಞಾನದೊಂದಿಗೆ ತಿಳಿವುದು ಅತ್ಯವಶ್ಯಕ ಇಂದ್ರಾದಿ ದೇವತೆಗಳು ರುದ್ರದೇವರನ್ನು ಸರ್ವಥಾ ಆಶ್ರಯಿಸಿದ್ದಾರೆ. ದೇವಾರ್ಷಾದಿಗಳು ಇಂದ್ರಾದಿ ದೇವತೆಗಳನ್ನು ಆಶ್ರಯಿಸಿ ವರ್ತಿಸುತ್ತಾರೆ ಎಂಬುದಾಗಿ ಗ್ರಂಥಾಂತರದಲ್ಲಿ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ರುದ್ರದೇವರು ಚತುರ್ಮುಖ ಬ್ರಹ್ಮನನ್ನು ಆಶ್ರಯಿಸಿದ್ದರೆ, ಬ್ರಹ್ಮದೇವರು ಮಹಾಲಕ್ಷ್ಮಿಯನ್ನು ಆಶ್ರಯಿಸಿದ್ದಾರೆ. ಲಕ್ಷ್ಮೀದೇವಿಯು ಸದಾ ಪರಮಾತ್ಮನನ್ನು ಆಶ್ರಯಿಸುರುವಳು. ಆದರೆ ಪರಮಾತ್ಮನು ಯಾರನ್ನೂ ಆಶ್ರಯಿಸಿಲ್ಲ. ಈ ರೀತಿಯಲ್ಲಿ ಶ್ರೀಹರಿಯ ಸವೋತ್ಕೃಷ್ಠತೆಯನ್ನು ಅರಿಯುವುದೇ ಯಥಾರ್ಥವಾದ ಜ್ಞಾನ. (24)

ಯೇ ಮೇ ಮತಮಿದಂ ನಿತ್ಯಮನುತಿಷ್ಠಂತಿ ಮಾನವಾಃ |
ಶ್ರದ್ಧಾವಂತೋsನಸೂಯಂತೋ ಮುಚ್ಯಂತೇ ತೇsಪಿ ಕರ್ಮಭಿಃ || 25 ||
ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ ಮೇ ಮಂತಂ |
ಸರ್ವಜ್ಞಾನವಿಮೂಢಾಂಸ್ತಾನ್ ವಿದ್ಧಿ ನಷ್ಟಾನಚೇತಸಃ || 26 ||
    ಶ್ರೀಮದ್ಭಗವದ್ಗೀತೆ ಭಾಗವತಾದಿ ಗ್ರಂಥಗಳಲ್ಲಿ ಸ್ವಯಂ ಪರಮಾತ್ಮನೇ ಉಪದೇಶಿಸಿರುವ ತಾರತಮ್ಯಪೂರ್ವಕ ಸರ್ವೋತ್ತಮತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅವನು ಹೇಳಿರುವಂತೆ ಶ್ರದ್ಧಾಭಕ್ತಿಗಳಿಂದ ಮತ್ತು ಅಸೂಯಾದಿ ದೋಷಗಳಿಂದ ರಹಿತರಾಗಿ ನಿಷ್ಕಾಮನೆಯಿಂದ ಯಾರು ಕರ್ಮ ಮಾಡುತ್ತಾರೋ ಅಂಥವರು ಕರ್ಮಬಂಧನದಿಂದ ಬಿಡಿಗಡೆ ಹೊಂದಿ ಮುಕ್ತರಾಗುತ್ತಾರೆ. ಅದಕ್ಕೆ ವಿಪರೀತವಾಗಿ, ಅಸೂಯಾದಿ ದೋಷವಂತರಾಗಿ ಶ್ರೀಹರಿಯ ಉಪದೇಶದಿಂದ ವಿಮುಖರಾಗಿ, ತಮಗೆ ತೋಚಿದ್ದೇ ಸರಿ ಎಂಬ ಭಾವನೆಯಿಂದ ಕರ್ಮಗಳನ್ನು ಆಚರಿಸುವವರು ಜ್ಞಾನಭ್ರಷ್ಟರಾಗಿ ವಿಥ್ಯಾಜ್ಞಾನ ಹೊಂದಿದವರಾಗಿ ನರಕಾದಿ ಅನರ್ಥಗಳಿಗೆ ಗುರಿಯಾಗುತ್ತಾರೆ ( 25, 26)
    ಶ್ರೀಮದ್ಭಗವದ್ಗೀತಾದಿಗಳಲ್ಲಿ ಇಷ್ಟೆಲ್ಲ ಹೇಳಿದ್ದರೂ ಅನೇಕರು ಮಿಧ್ಯಾಜ್ಙಾನವನ್ನೇ ಬೆಳೆಸಿಕೊಂಡು ಹರಿಯ ದ್ವೇಷದಲ್ಲಿಯೇ ಚಿತ್ತವಿಟ್ಟು ಸರ್ವಾತ್ಮನಾ ಹಾಳಾಗುವುದೇಕೆ ಎಂದರೆ ಅದಕ್ಕೆ ಉತ್ತರವೇ ಕೆಳಗಿನ ಪ್ರಮಾಣ ವಾಕ್ಯಗಳು -

ದ್ವೌ ಭೂತಸರ್ಗೌ ಲೋಕೆಸ್ಮನ್ ದೈವ ಆಸುರ ಏವ ಚ |
ವಿಷ್ಣುಭಕ್ತಿಪರೋ ದೈವಃ ವಿಪರೀತಸ್ತಥಾಸುರಃ || 27 ||
    ಲೋಕದಲ್ಲ ಮುಕ್ತಿಯೋಗ್ಯರಾದ ದೈವೀಗುಣವುಳ್ಳವರು ಮತ್ತು ಮುಕ್ತಿಗೆ ಅಯೋಗ್ಯರಾದ ಅಸುರರು ಎಂಬುದಾಗಿ ಎರಡು ರೀತಿಯ ಜೀವರಿದ್ದಾರೆ. ಸ್ವಭಾವತಃ ವಿಷ್ಣುಭಕ್ತಿಯನ್ನು ಹೊಂದಿರುವವರೇ ದೈವ ಶಬ್ಧವಾಚ್ಯರು. ಅಸುರರು ಸ್ವಭಾವತಃ ವಿಷ್ಣುದೇಷಿಗಳಾಗಿರುತ್ತಾರೆ. ವಿಷ್ಣುಭಕ್ತರು ಸದಾ ಯಥಾರ್ಥ ಜ್ಞಾನವನ್ನೂ ವಿಷ್ಣುದ್ವೇಷಿಗಳು ಸದಾ ಮಿಥ್ಯಾಜ್ಞಾನವನ್ನು ಹೊಂದಿರುತ್ತಾರೆ (27)

ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವ್ಯೋ ನ ಜಾತುಚಿತ್ |
ಸರ್ವೇ ವಿಧಿನಿಷೇಧಾಸ್ಸ್ಯುಃ ಏತಯೋರೇವ ಕಿಂಕರಾಃ || 28 ||
    ಸದಾಕಾಲವೂ ವಿಷ್ಣುವನ್ನು ಸ್ಮರಿಸಲೇಬೇಕು. ಯಾವ ಕ್ಷಣದಲ್ಲೂ ವಿಸ್ಮರಣೆ ಕೂಡದು. ಶಾಸ್ತ್ರಗಳಲ್ಲಿ ಹೇಳಿರುವ ಎಲ್ಲ ವಿಧಿಗಳೂ ವಿಷ್ಣುಸ್ಮರಣೆಗೆ ಪೂರಕವಾಗಿದ್ದರೆ, ನಿಷೇದವೆಲ್ಲವೂ ವಿಷ್ಣುವಿನಲ್ಲಿ ವಿಸ್ಮರಣೆ ಹುಟ್ಟಿಸುತ್ತವೆ. ಹರಿಸ್ಮರಣೆಗೆ ಸಹಾಯಕವಾಗುವ ಕಾರ್ಯಗಳೇ ವಿಹಿತ ಮತ್ತು ಫಲಪ್ರದ. ಆದ್ದರಿಂದ ಸಾಧಕರು ಸದಾ ಶಾಸ್ತ್ರವಿಧಿಗೆ ಅನುಸಾರವಾಗಿಯೇ ಕರ್ಮಗಳನ್ನು ಮಾಡತಕ್ಕದ್ದು ಮತ್ತು ಶಾಸ್ತ್ರವು ನಿಷೇಧಿಸಿರುವ ಕಾರ್ಯಗಳನ್ನು ಸರ್ವಥಾ ತ್ಯಜಿಸತಕ್ಕದ್ದು ಎಂಬ ವಿಷಯವನ್ನು ಶ್ರೀಮದಾಚಾರ್ಯರು ಇಲ್ಲಿ ಸ್ಪಷ್ಟಪಡಿಸಿದ್ದಾರೆ. (28)

ಧರ್ವೋ ಭವತ್ಯಧರ್ವೋsಪಿ ಕೃತೋ ಭಕೈಸ್ತವಾಚ್ಯತ |
ಪಾಪಂ ಭವತಿ ಧರ್ಮೋsಪಿ ಯೋ ನ ಭಕೈಃ ಕೃತೋ ಹರೇ || 29 ||
    ಹರಿಭಕ್ತಿಪೂರ್ವಕವಾಗಿಯೇ ಕರ್ಮವನ್ನು ಮಾಡಬೇಕು. ಶ್ರೀಹರಿಯಲ್ಲಿ ಸ್ವಲ್ಪವೂ ಭಕ್ತಿಯಿಲ್ಲದೆ ನಾವು ಎಷ್ಟೇ ವಿಹಿತಕರ್ಮಗಳನ್ನು ಮಾಡಿದರೂ ಅವೆಲ್ಲವೂ ನಿಷ್ಫಲ. ಮೇಲ್ನೋಟಕ್ಕೆ ಅಧರ್ಮವೆಂದು ತೋರುವ ಕರ್ಮ ಹರಿಭಕರಿಂದ ಆಚರಿಸಲ್ಪಟ್ಟಾಗ ಅದು ಧರ್ಮಕಾರ್ಯವೆಂದೇ ಪರಿಗಣಿತವಾಗುತ್ತದೆ. ಆದರೆ ಹರಿದ್ವೇಷಿಗಳು ಮಾಡಿದ ಧರ್ಮಕಾರ್ಯಗಳೂ ಪಾಪಕರ್ಮಗಳೆಂದು ಪರಿಗಣಿಸಲ್ಪಡುತ್ತವೆ. ಆದ್ದರಿಂದ ನಾವು ಮಾಡುವ ಕರ್ಮಗಳಿಗೆ ಹಿನ್ನೆಲೆಯಾಗಿ ಹರಿಭಕ್ತಿಯು ಇರಲೇಬೇಕು. ( 29 )
    ಮುಮುಕ್ಷುಗಳು ಹರಿಭಕ್ತ್ಯಾದಿಗಳಿಂದ ಕೂಡಿದವರಾಗಿಯೇ ವಿಹಿತ ಕರ್ಮಗಳನ್ನು ಆಚರಿಸಬೇಕು ಎಂಬುದಕ್ಕೆ ಪ್ರಮಾಣವಾಗಿ ಮನ್ಮನಾಭವ ಇತ್ಯಾದಿ ಭಗವದ್ಗೀತೆಯಲ್ಲಿ ಬಂದಿರುವ ಕೃಷ್ಣನ ವಾಕ್ಯವನ್ನೇ ಶ್ರೀಮದಾಚಾರ್ಯರು ಇಲ್ಲಿ ಉದಾಹರಿಸುತ್ತಾರೆ -

ಮನ್ಮ ನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ನಿತ್ಯಂ ಭವೇಚ್ಚ ಮನ್ನಿಷ್ಠೋ ಬುಭೂಷುಃ ಪುರುಷಸ್ತತಃ || 30 ||
    ಸದಾಚಾರಸ್ಮೃತಿ ಎಂಬ ಈ ಗ್ರಂಥದಲ್ಲಿ ಶ್ರೀಮದಾಚಾರ್ಯರು ಇಲ್ಲೀವರೆಗೂ ಉಪದೇಶಿಸಿರುವ ಸದಾಚಾರದ ವಿಷಯದಲ್ಲಿ ಅಧಿಕಾರಿಗಳು ಯಾರು ಎಂಬುದನ್ನು ಮುಂದಿನ ಮೂರು ಶ್ಲೋಕಗಳಲ್ಲಿ ಸ್ಪಷ್ಟಪಡಿಸುತ್ತಾರೆ -

ಏಷ ನಿತ್ಯಃ ಸದಾಚಾರೋ ಗೃಹಿಣೋ ವನಿನಸ್ತಥಾ |
ವೈಶ್ವದೇವಂ ಬಲಿಂ ದಂತಧಾವನಂ ಚಾಪ್ಯೃತೇ ವಟೋಃ || 31 ||
ಏವಮೇವ ಯತೇಃ ಸ್ವೀಯವಿತ್ತೇನ ತು ವಿನಾ ಸದಾ |
ಮೂಲಮಂತ್ರೈಃ ಸದಾ ಸ್ನಾನಂ ವಿಷ್ಣೋರೇವ ಚ ತರ್ಪಣಂ || 32 ||
ವಿಶೇಷೋ ನಿಷ್ಕ್ರಿಯಯತೇರಜಲಾಂಜಲಿತಾ ತಥಾ |
ತರ್ಪಣಂ ತು ಹರೇರೇವ ಯತೇರನ್ಯಸ್ಯ ಚೋದಿತಮ್ |
ಸಮಿದ್ಧೋವೋ ವಟೋಶ್ಚೈವ ಸ್ಮೃತ್ವಾ ವಿಷ್ಣುಂ ಹುತಾಶನೇ || 33 ||
    ಗೃಹಸ್ಥರಿಗೆ ಹಾಗೂ ವಾನಪ್ರಸ್ಥರು ನಿತ್ಯದಲ್ಲೂ ಇಲ್ಲಿ ಹೇಳಿರುವಂತೆ ನಡೆಯುವುದೇ ಸದಾಚಾರವು. ಆದರೆ ವಟುಗಳಿಗೆ ವೈಶ್ವದೇವ, ಬಲಿಹರಣ ಹಾಗೂ ದಂತಧಾವನಗಳು ನಿಷಿದ್ಧ. ಇಲ್ಲಿ ಹೇಳಿರುವ ಸದಾಚಾರಗಳೇ ಯತಿಗಳಿಗೂ ಅನ್ವಯಿಸುತ್ತವೆ. ಆದರೆ ಸಂನ್ಯಾಸಿಗಳಿಗೆ ದ್ರವ್ಯಾದಿಗಳ ಸ್ವತಃ ಸಂಪಾದನೆ ನಿಷಿದ್ಧವಾದ್ದರಿಂದ ಶ್ರೀಹರಿಯ ಸೇವೆಗಾಗಿ ದ್ರವ್ಯಸಂಪಾದನೆಯಲ್ಲಿ ತೊಡಗದೆ ಕೇವಲ ಆಯಾಚಿತ ವೃತ್ತಿಯಿಂದ ತತ್ಕಾಲದಲ್ಲಿ ಲಭಿಸುವ ವಿಹಿತ ದ್ವವ್ಯಗಳಿಂದ ಪೂಜಾದಿಗಳನ್ನು ಮಾಡಬೇಕು.ಯಾವಾಗಲೂ ಮೂಲಮಂತ್ರಗಳಿಂದ ಸ್ನಾನವನ್ನು ಮಾಡಬೇಕು. ವಿಷ್ಣುವಿಗೆ ಮಾತ್ರ ತರ್ಪಣವನ್ನು ಕೊಡಬೇಕು. ಇದು ಪರಮಹಂಸ ಸಂನ್ಯಾಸಿಗಳಿಗೆ ಅನ್ವಯಿಸುತ್ತದೆ. ನಿಷ್ಕ್ರಿಯ ಯತಿಗಳು ಬ್ರಹ್ಮಯಜ್ಞ ಮತ್ತು ತದಂಗ ತರ್ಪಣಗಳನ್ನು ಕೊಡುವಂತಿಲ್ಲ. ಅಗ್ನಿಯಲ್ಲಿ ವಿಷ್ಣುವನ್ನು ಸ್ಮರಿಸುತ್ತ ಮಾಡುವ ಸಮಿದ್ಧೋಮ ಅಥವಾ ಅಗ್ನಿಕಾರ್ಯವು ಬ್ರಹ್ಮಚಾರಿಗಳಿಗೆ ವಿಶೇಷ. ( 31-33 )

ಸರ್ವವರ್ಣಾಶ್ರಮೈರ್ವಿಷ್ಣುರೇಕ ಏವೇಜ್ಯತೇ ಸದಾ |
ರಮಾಬ್ರಹ್ಮಾದಯಸ್ತಸ್ಯ ಪರಿವಾರತಯೈವ ತು || 34 ||
    ಎಲ್ಲ ವರ್ಣದವರೂ ಮತ್ತು ಆಶ್ರಮದವರೂ ಯಾವಾಗಲೂ ವಿಷ್ಣುವೊಬ್ಬನನ್ನೇ ಸರ್ವೋತ್ಕೃಷ್ಟ ದೇವತೆಯೆಂದೂ, ರಮಾಬ್ರಹ್ಮಾದಿ ಎಲ್ಲ ದೇವತೆಗಳನ್ನೂ ವಿಷ್ಣುವಿನ ಪರಿವಾರಕ್ಕೆ ಸೇರಿದ ಅಸ್ವತಂತ್ರ ದೇವತೆಗಳೆಂದೂ ಪೂಜಿಸಬೇಕು. (34)
    ಎಲ್ಲರೂ ಸದಾ ವಿಷ್ಣುಸ್ಮರಣಪೂರ್ವಕವಾಗಿಯೇ ಕರ್ಮಗಳನ್ನು ಮಾಡತಕ್ಕದ್ದು ಎಂಬ ಪ್ರಮೇಯಕ್ಕೆ ಸಹಕಾರಿಯಾದ ವಿಷ್ಣುವಿನ ಗುಣ ವಿಶೇಷಗಳನ್ನು ತಿಳಿಸುವ ಶ್ರುತಿ ಸ್ಮೃತಿ ವಾಕ್ಯಗಳನ್ನು ನೀಡುತ್ತ ಶ್ರೀಮದಾಚಾರ್ಯರು ಈ ಗ್ರಂಥಕ್ಕೆ ಈ ಗ್ರಂಥಕ್ಕೆ ಉಪಸಂಹಾರ ಮಾಡುತ್ತಾರೆ-

ಕವಿಂ ಪುರಾಣಮನುಶಾಸಿತಾರಮಣೋರಣೀಯಾಂಸಮನುಸ್ಮರೇಧ್ಯಃ |
ಸರ್ವಸ್ಯ ಧಾತಾರಮಚಿಂತ್ಯರೂಪಂ ಆದಿತ್ಯವರ್ಣಂ ತಮಸಃ ಪರಸ್ತಾತ್ ||
    ಶ್ರೀಹರಿಯು ಸರ್ವಜ್ಞ, ಅನಾದಿ, ಸರ್ವರಿಗೂ ಶಿಕ್ಷಕ, ಎಲ್ಲರ ಪೋಷಣಕರ್ತ, ಅಣುವಿಗಿಂಗ ಅಣುವಾದ್ದರಿಂದ ಮಾತು ಮತ್ತು ಮನಸ್ಸುಗಳಿಗೆ ಅಗೋಚರನೂ, ಉದಯಿಸುತ್ತಿರುವ ಸೂರ್ಯನಂತೆ ಹೊಂಬಣ್ಣವುಳ್ಳವನೂ, ಅಜ್ಞಾನ ಮೃತ್ಯು ಪ್ರಕೃತಿಗಳಿಂದ ಬಂಧ ಮತ್ತು ಬಾಧವಿಲ್ಲವದವನೂ ( ಅಂದರೆ ಇವನ್ನು ಮೀರಿದವನೂ) ಆಗಿರುವ ಶ್ರೀಹರಿಯನ್ನು ಯಾವನು ಸ್ಮರಣೆ ಮಾಡುತ್ತಾನೋ ಅವನೇ ನಿಜವಾದ ವಿಷ್ಣುಭಕ್ತ ಮತ್ತು ಅಂಥಹ ಭಕ್ತನು ಮಾತ್ರ ಮೋಕ್ಷವನ್ನು ಹೊಂದುವನು (35)

ವೇದಾಹಮೇತಂ ಪುರುಷಂಮಹಾಂತಂ ಆದಿತ್ಯವರ್ಣಂ ತಮಸಸ್ತು ಪಾರೇ |
ಸರ್ವಾಣಿರೂಪಾಣಿ ವಿಚಿಂತ್ಯ ಧೀರೋ ನಾಮಾನಿ ಕೃತ್ವಾsಭಿವದನ್ಯದಾಸ್ತೇ ||
    ಬುದ್ಧ್ಯಾದಿಗಳಲ್ಲಿದ್ದು ರಮಿಸುವನಾದ್ದರಿಂದ ಧೀರನೆಂದು ಕರೆಸಿಕೊಳ್ಳುವ, ಸಮಸ್ತವಾದ ಬ್ರಹ್ಮಾಂಡಾದಿ ಚೇತನಾಚೇತನ ವಸ್ತುಗಳನ್ನು ನಿರ್ಮಾಣಮಾಡಿ ವೇದಾದಿಗಳಿಂದ ಅವುಗಳಿಗೆ ನಾಮರೂಪಾದಿಗಳನ್ನು ಕೊಟ್ಟು ವ್ಯವಹರಿಸುವ, ಪ್ರಕೃತ್ಯಾದಿಗಳಿಗಿಂತ ಪೂರ್ವದಲ್ಲೇ ಇದ್ದು ಪ್ರಕೃತ್ಯಾದಿ ದೋಷದೂರನಾದ, ಸೂರ್ಯನಂತೆ ಅಮಿತವಾದ ಪ್ರಕಾಶದಿಂದ ಹೊಳೆಯುವ, ಸರ್ವೋತ್ತಮನೂ, ಷಡ್ಗುಣಪೂರ್ಣನೂ ಆಗಿರುವ ಶ್ರೀಮನ್ನಾರಾಯಣನನ್ನು ನಾನು ಅಪರೋಕ್ಷದಿಂದ ತಿಳಿದಿದ್ದೇನೆ ಎಂಬುದಾಗಿ ಚತುರ್ಮುಖ ಬ್ರಹ್ಮದೇವರು ಈ ಶ್ರುತಿಯ ಮೂಲಕ ಸ್ತುತಿಸಿದ್ದಾರೆ. (36)

ಧಾತಾ ಪುರಸ್ತಾದ್ಯಮುದಾಜಹಾರ ಶಕ್ರಃ ಪ್ರವಿದ್ವಾನ್ ಪ್ರದಿಶಶ್ಚತಸ್ತ್ರಃ |
ತಮೇವಂ ವಿದ್ವಾನಮೃತ ಇಹ ಭವತಿ ನಾನ್ಯಃಪಂಥಾ ಅಯನಾಯ ವಿದ್ಯತೇ ||
    ಚತುರ್ಮುಖ ಬ್ರಹ್ಮ, ಇಂದ್ರ ಮೊದಲಾದವರು ಪೂರ್ವಕಾಲದಿಂದಲೂ ಇದ್ದ ಯಾವ ಪುರುಷನನ್ನು ಸರ್ವೋತ್ತಮನೆಂದು ವ್ಯವಹರಿಸುವರೋ ಅಂಥಹ ಪರಮ ಪುರುಷನಾದ ಶ್ರೀಹರಿಯ ಜ್ಞಾನವನ್ನು ಪಡೆದವನು ಅಪರೋಕ್ಷಜ್ಞಾನ ಹೊಂದಿ ಮುಕ್ತನಾಗುತ್ತಾನೆ. ಅಮೃತತ್ವರೂಪವಾದ ಮುಕ್ತಿ ಗಳಿಸಲು ವಿಷ್ಣುವಿನ ಜ್ಞಾನವನ್ನು ಪಡೆಯುವುದೇ ಉಪಾಯ, ಬೇರೆ ಮಾರ್ಗವಿಲ್ಲ. (37)

ಆನಂದತೀರ್ಥಮುನಿನಾ ವ್ಯಾಸವಾಕ್ಯಸಮುದ್ಧೃತಿಃ |
ಸದಾಚಾರಸ್ಯ ವಿಷಯೇ ಕೃತಾ ಸಂಕ್ಷೇಪತಃ ಶುಭಾ ||38||
ಅಶೇಷಕಲ್ಯಾಣಗುಣನಿತ್ಯಾನುಭವಸತ್ತನುಃ |
ಅಶೇಷದೋಷರಹಿತಃ ಪ್ರೀಯತಾಂ ಪುರುಷೋತ್ತಮಃ ||39||
    ಸಜ್ಜೀವರುಗಳಿಗೆ ಐಹಿಕ ಮತ್ತು ಪಾರತ್ರಿಕ ಶ್ರೇಯಸ್ಸಿಗೆ ಕಾರಣವಾದಂಥ ಸದಾಚಾರವನ್ನು ವೇದವ್ಯಾಸರ ವಾಕ್ಯಗಳನ್ನು ಉದ್ಧರಿಸುವುದರ ಮೂಲಕ ಸಂಕ್ಷೇಪವಾಗಿ ವಿವರಿಸುವ ಸದಾಚಾಸ್ಮೃತಿ ಎಂಬ ಅತ್ಯಂತ ಮಂಗಳಕರವಾದ ಈ ಕೃತಿಯು ಆನಂದಕರವಾದ ಶಾಸ್ತ್ರಗಳನ್ನು ರಚಿಸಿರುವ ಆನಂದತೀರ್ಥರೆಂಬ ಮುನಿಯಿಂದ ರಚಿಸಲ್ಪಟ್ಟಿದೆ. ಸಮಸ್ತವಾದ ಮಂಗಳಕರ ಗುಣಗಳೇ ನಿತ್ಯಾನುಭವವೆಂಬ ಶ್ರೇಷ್ಠವಾದ ದೇಹವುಳ್ಳ ಪಾರತಂತ್ರ್ಯಾದಿ ಸಕಲದೋಷಗಳಿಂದ ದೂರನಾದ ಪುರುಷೋತ್ತಮನು ಸಜ್ಜನರಿಗೆ ಅತ್ಯಂತ ಮಂಗಳಕರವಾದ ಈ ಕೃತಿಯ ಸಮರ್ಪಣೆಯಿಂದ ಪ್ರೀತನಾಗಲಿ. (38,39)

ಇತಿಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತಾ ಸದಾಚಾರಸ್ಮೃತಿಃ ಸಂಪೂರ್ಣಃ

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ