ಶ್ರೀ ರಾಮಾನುಜರಿಗೆ ಸ್ಫೂರ್ತಿ ನೀಡಿದ ಋಷಿಗಳು
1. ನಾರದ :
ಭಗವಂತನಾದ ನಾರಾಯಣನನ್ನು ಕುರಿತು ತಪಸ್ಸುಮಾಡಿದ ಶ್ರೇಷ್ಠ ಭಕ್ತ. ವೇದ, ಪುರಾಣ, ಇತಿಹಾಸ, ವ್ಯಾಕರಣ, ನೀತಿ, ಸಂಗೀತ, ಶಾಸ್ತ್ರಗಳನ್ನೆಲ್ಲಾ ಅರಿತ ಮಹಾಜ್ಞಾನಿ. ಜನತೆಯ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವನ್ನು ನೀಡುವ ಮಹಾವ್ಯಕ್ತಿ.
ಬ್ರಹ್ಮನ ಮಾನಸಪುತ್ರರೆನಿಸಿದ ಇವರು ತಮ್ಮ ವೀಣೆಯೊಂದಿಗೆ ಭಗವಂತನ ಗುಣಗಾನಮಾಡುತ್ತ ಸುತ್ತಾಡುವಂಥವರು. ಅನೇಕರಿಗೆ ಉಪದೇಶ ನೀಡಿ, ಅವರು ಭಗವದ್ಭಕ್ತರಾಗುವಂತೆ ಮಾಡಿದ್ದಾರೆ. ಪಾರ್ವತಿ, ಪ್ರಹ್ಲಾದ, ಧ್ರುವ, ವಾಲ್ಮೀಕಿ, ವ್ಯಾಸ, ನಿಂಬಾರ್ಕ ಇವರೆಲ್ಲ ಉದ್ಧಾರವಾಗಿ ತಮ್ಮ ಗುರಿಯನ್ನು ಸಾಧಿಸಿದುದು ನಾರದರ ಉಪದೇಶದಿಂದಲೇ.
ಭೋಗ ವಿಲಾಸಗಳಲ್ಲಿ ನಿರತರಾದ ದೇವತೆಗಳಿಗೆ ಇಂದ್ರಿಯಗಳ ದಮನ ಮಾಡಲು, ಲೋಭಿತನಕ್ಕೆ ಹೆಸರಾಂತ ಮಾನವರಿಗೆ ದಾನಮಾಡಲು, ಕ್ರೂರತನಕ್ಕೆ ಪ್ರಸಿದ್ದಿಯಾದ ದಾನವರಿಗೆ ದಯೆ ತೋರಿಸಲು ಉಪದೇಶಿಸಿ, ಪರಮಾತ್ಮನ ಉಪದೇಶವಾದ 'ದದದ' ಮಂತ್ರಕ್ಕೆ ಹೊಸ ಅರ್ಥವನ್ನು ಕಲ್ಪಿಸಿ ಲೋಕವನ್ನು ಉದ್ಧರಿಸಲೆತ್ನಿಸಿದ್ದಾರೆ. ಇವರು ಬರೆದ "ನಾರದೀಯ ಭಕ್ತಿ ಸೂತ್ರಗಳು", ಭಕ್ತಿಯ ವಿವರಗಳನ್ನು ತಿಳಿಸುವ ಅಪೂರ್ವ ಗ್ರಂಥವಾಗಿದೆ.
ಇವರ ಸಲಹೆಯಂತೆ ರಚಿಸಲ್ಪಟ್ಟ ವಾಲ್ಮೀಕಿಯ ರಾಮಾಯಣದಲ್ಲಿ ಬರುವ ಶ್ರೀರಾಮ, ವ್ಯಾಸರ ಭಾಗವತದಲ್ಲಿ ಬರುವ ಶ್ರೀಕೃಷ್ಣ ಇಬ್ಬರ ಚರಿತ್ರೆಯು ಭಾರತೀಯ ಆಧ್ಯಾತ್ಮಿಕ ಜೀವನಕ್ಕೆ ಮಾರ್ಗದರ್ಶಕವಾಗಿದೆ. ವಿಷ್ಣುಭಕ್ತಿಯ ಎರಡು ಶಾಖೆಗಳಾದ ರಾಮಭಕ್ತಿ ಮತ್ತು ಕೃಷ್ಣಭಕ್ತಿಯ ಮೇಲೆ ಸೃಷ್ಟಿ ಆಗಿರುವ ಹಾಗೂ ಆಗುತ್ತಿರುವ ಸಾಹಿತ್ಯವು ಭಾರತೀಯ ಸಾಹಿತ್ಯದಲ್ಲಿ ಅರ್ಧಕ್ಕಿಂತ ಹೆಚ್ಚಾಗಿದೆ ಎಂದರೆ ಆಶ್ಚರ್ಯವಾಗದಿರದು.
2. ವಾಲ್ಮೀಕಿ :
ರಾಮ ತ್ವನ್ನಾಮ ಮಹಿಮಾ ವರ್ಣ್ಯತೇಕೇನವಾಕಧಂ |
ಯತ್ಪ್ರಭಾವಾದಹಂರಾಮ ಮಹರ್ಷಿತ್ವಮವಾಪ್ತವಾನ್ ||
ಎಂಬಂತೆ ಭಗವಂತನ ನಾಮಸ್ಮರಣೆಯೊಂದರಿಂದಲೇ ವಾಪಿಯು ಧರ್ಮಾತ್ಮ, ದಡ್ಡನು ವಿದ್ವಾಂಸ, ಮೂಗನು ವಾಚಾಳಿ, ದರಿದ್ರನು ಧನಿಕ, ಆಗಬಲ್ಲನು ಎಂಬುದಕ್ಕೆ ಇವರು ಉತ್ತಮ ಉದಾಹರಣೆಯಾಗಿದ್ದಾರೆ. ಬ್ರಾಹ್ಮಣನಾಗಿದ್ದರೂ ದುಷ್ಟಸಂಗದಿಂದ ಕಳವು, ಕೊಲೆ, ಲೂಟಿಗಳನ್ನು ಮಾಡುವ ಕೆಳದರ್ಜೆಯ ಸ್ಥಿತಿಯಲ್ಲಿದ್ದ ಇವರು, ನಾರದರ ಉಪದೇಶವನ್ನನುಸರಿಸಿ, ರಾಮನಾಮದ ಬಲ-ಮಹಿಮೆಗಳಿಂದ ಉನ್ನತಿ ಹೊಂದಿ ಬ್ರಹ್ಮರ್ಷಿಯಾದರು. ಭವಸಾಗರವನ್ನು ದಾಟಲು ರಾಮನಾಮವೆಂಬ ನಾವೆಗಿಂತ ಉತ್ತಮ, ಸರಳ, ಆದ ಸಾಧನ ಬೇರೊಂದಿಲ್ಲ ಎಂದು ತೋರಿಸಿ ಕೊಟ್ಟರು.
ಭಾರತದ ಪ್ರಾಚೀನ ಇತಿಹಾಸದಲ್ಲಿ ಶ್ರೇಷ್ಠ ನಾಯಕನಾಗಿ ಉನ್ನತ ಸ್ಥಾನವನ್ನು ಪಡೆದುಕೊಂಡಿರುವ ಶ್ರೀ ರಾಮಚಂದ್ರ ಪ್ರಭುವಿನ ಜೀವನದ ವಿಚಾರವಾಗಿ, ಬಹು ದೊಡ್ಡ ಜವಾಬ್ದಾರಿಯ ಕೆಲಸವನ್ನು ಕೈಕೊಂಡು, ಪ್ರಪಂಚದ ಕಲ್ಯಾಣಕ್ಕಾಗಿ, ಸುಂದರ ಹಾಗೂ ಅಪೂರ್ವ ಆದ ರಾಮಾಯಣವನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಇದರ ಮೂಲಕ ಭಾರತದ ಕಾವ್ಯ ಸಾಹಿತ್ಯದ ಬೀಜವನ್ನು ನೆಟ್ಟ ಆದಿಕವಿ ಎನಿಸಿಕೊಂಡರು. ಇವರು ಬರೆದ ರಾಮಾಯಣವು ಆ ಕಾಲದ ಭಾರತದ ಸಾಮಾಜಿಕ ಸ್ಥಿತಿಗತಿಗಳ ಮೇಲೆ ತುಂಬಾ ಬೆಳಕು ಚಲ್ಲುವ ವಿಷಯಗಳ ಗಣಿಯಾಗಿದೆ. ವಾಲ್ಮೀಕಿ ರಾಮಾಯಣವು ಎಲ್ಲ ಭರತೀಯ ಭಾಷೆಗಳಲ್ಲೂ ಅನುವಾದಿಸಲ್ಪಟ್ಟಿದೆ.
ಅಗಸನ ಮಾತಿನಿಂದ ಬೇಸಗೊಂಡು ಶ್ರೀರಾಮನು ಗರ್ಭಿಣಿಯಾಗಿದ್ದ ಸೀತಾ ಮಾತೆಯನ್ನು ಕಾಡಿಗೆ ಕಳುಹಿಸಿದಾಗ, ಆಕೆಯನ್ನು ತಮ್ಮ ಆಶ್ರಮದಲ್ಲಿ ಇಟ್ಟುಕೊಂಡು ರಕ್ಷಿಸಿದವರು ಇವರೇ. ಸೀತೆಯ ಗರ್ಭದಲ್ಲಿ ಜನಿಸಿದ ಲವಕುಶರಿಗೆ ಉತ್ತಮ ವಿದ್ಯಾಭ್ಯಾಸವನ್ನು ಮಾಡಿಸಿ, ಅವರ ತಂದೆಯಾದ ಹಾಗೂ ಲೋಕೈಕ ವೀರನಾದ ಶ್ರೀರಾಮನ ವಿರುದ್ಧ ಹೊರಾಡಿ ಗೆಲ್ಲುವಂತೆಯೂ, ತಮ್ಮ ಗಾನದಿಂದ ಶ್ರೀರಾಮನನ್ನು ಆಕರ್ಷಿಸುವಂತೆಯೂ ತಯಾರಿಕೆ ಕೊಟ್ಟಿದ್ದರು. ತಮ್ಮ ಈ ಎಲ್ಲ ಕೆಲಸಗಳಿಂದ
ವಾಲ್ಮೀಕೇರ್ಮುನಿಸಿಂಹಸ್ಯ ಕವಿತಾವನಚಾರಿಣಃ |
ಶೃಣ್ವನ್ ರಾಮಕಥಾನಾದಂ ಕೇನಯಾಂತಿ ಪರಾಂಗತಿಂ ||
ಎಂದು ಎಲ್ಲರಿಂದ ಹೊಗಳಿಸಿಕೊಂಡರು.
3. ಪರಾಶರ :-
ತತ್ತ್ವೇನಯಶ್ಚಿದಚಿದೀಶ್ವರ ತತ್ಸ್ವಭಾವ
ಭೋಗಾಪವರ್ಗ ತದುವಾಯ ಗತೀರುದಾರಃ ||
ಸಂದರ್ಶಯನ್ನಿರಮಮಿತ ಪುರಾಣರತ್ನಂ
ತಸ್ಮೈ ನಮೋ ಮುನಿವರಾಯ ಪರಾಶರಾಯ ||
ಇವರು ಪರಮ ಭಾಗವತರಲ್ಲಿ ಒಬ್ಬರು. ವಿಶ್ವಾಮಿತ್ರರು ಮೆಚ್ಚಿಕೊಂಡ ಹಾಗೂ ಶ್ರೀರಾಮನ ಕುಲಗುರುವಾದ ವಸಿಷ್ಠ ಬ್ರಹ್ಮರ್ಷಿಗಳು ಇವರ ತಾತ, ಪ್ರಸೂತಿ ಇವರ ಅಜ್ಜಿ. ತಂದೆಯಾದ ಶಕ್ತಿಯು ಅತಿ ಬುದ್ಧವಂತ. ತಾಯಿ ಅದೃಶ್ಯಂತಿಯು ರೂಪ ಗುಣ ಸಂಪನ್ನೆ. ಕೋಪಿಷ್ಠರಾದ ಶಕ್ತಿಯ ಶಾಪಕ್ಕೆ ಗುರಿಯಾದ ರಾಜನೊಬ್ಬನು ರಾಕ್ಷಸನಾಗಿ ಶಕ್ತಿಯನ್ನು ಭಕ್ಷಿಸಿಬಿಟ್ಟನು. ತಂದೆ ಸತ್ತ ಮೇಲೆ ಜನಿಸಿ, ಕವಿದಿದ್ದ ನಿರಾಸೆಯನ್ನು ಹೋಗಲಾಡಿಸಿ, ಆಶಾಭಾವನೆಯನ್ನುಂಟುಮಾಡಿದ ಈ ಮಗುವಿಗೆ, ತಾತ ವಸಿಷ್ಠರು ಪರಾಶರ ಎಂದು ಹೆಸರಿಟ್ಟರು.
ತಾತನಿಂದಲೇ ಎಲ್ಲ ವಿದ್ಯೆಯನ್ನೂ ಕಲಿತು ಅತಿ ದೊಡ್ಡ ವಿದ್ವಾಂಸ ಹಾಗೂ ಬ್ರಹ್ಮಜ್ಞಾನಿ ಎನಿಸಿದರು. ತಂದೆಯ ಉದಾಹರಣೆಯಿಂದ ಋಷಿಗಳಾದವರಿಗೆ ಕೋಪ, ಮತ್ಸರಗಳಿರಬಾರದೆಂಬ ಅನುಭವ ಬಂದಿತು. ಹಿಮಾಲಯದಲ್ಲಿ ಆಶ್ರಮವನ್ನು ನಿರ್ಮಿಸಿಕೊಂಡು ಅಲ್ಲಿ ನೂರಾರು ಶಿಷ್ಯರಿಗೆ ಕಲಿಸುತ್ತಿದ್ದರು. ಆಸೇತು ಹಿಮಾಚಲ ಪರ್ಯಂತ ಪಾದಯಾತ್ರೆ ಮಾಡಿಬಂದರು.
ಮೇಲುಕೋಟೆಯಲ್ಲಿ ಕೆಲಕಾಲ ಇದ್ದಾಗ ತಮ್ಮ ಪ್ರಿಯ ಶಿಷ್ಯನಾದ ಮೈತ್ರೇಯಿಯ ಪ್ರಶ್ನೆಗಳಿಗೆಲ್ಲ ವಿವರವಾದ ಉತ್ತರಗಳನ್ನು ನೀಡಿದರು. ಪರಾಶರ-ಮೈತ್ರೇಯಿಗಳಲ್ಲಿ ನಡೆದ ಪ್ರಶ್ನೋತ್ತರವೇ ವಿಷ್ಣುಪುರಾಣವೆಂದು ಖ್ಯಾತಿ ಪಡೆದ ಕೃತಿಯಾಯಿತು ಇದು ಎಲ್ಲ ಪುರಾಣಗಳ ವಿಷಯಗಳ ತಾತ್ಪರ್ಯವನ್ನು ಹೊಂದಿದೆ ಎಂದು ಬಲ್ಲವರು ಹೇಳುತ್ತಾರೆ.
"ಸಕಲ ಭೂತಗಳ ಉತ್ಪತ್ತಿ, ಸಮರಸವರ್ತನೆ, ವ್ಯವಸ್ಥಿತ ಪರಿವರ್ತನೆ, ವೃದ್ಧಿ, ಕ್ಷಯ ಮುಂತಾದ ವಾಸ್ತವಿಕ ಜಗತ್ತಿನ ವ್ಯವಸ್ಥೆಗೆಲ್ಲ ವಿಷ್ಣುವೇ ಮೂಲ. ಈ ಜಗತ್ತಿನ ವ್ಯವಸ್ಥೆಯಲ್ಲಿ ಪ್ರಾಕೃತಿಕ, ನೈತಿಕ ನಿಯಮಗಳಿಗಿಂತ ಪ್ರೇಮ ಅಥವಾ ಕರುಣಾನಿಯಮವೇ ಶ್ರೇಷ್ಠವಾದುದು ಭಗವಂತನ ಅನೇಕ ಅವತಾರಗಳಲ್ಲಿ ಶ್ರೀಕೃಷ್ಣವತಾರವೇ ಮಾನವ ರೂಪದಲ್ಲಿ ಪರಮಾತ್ಮನ ಪರಿಪೂರ್ಣವಾದ ಸ್ವಭಾವದ ಅವಿಷ್ಕರಣವನ್ನು ಸೂಚಿಸುತ್ತದೆ.
"ಏಕ, ಅನಂತ, ನಿರ್ವಿಕಾರ, ಪೂರ್ಣ, ಸರ್ವವ್ಯಾಪಿ, ಸರ್ವಾತೀತ, ಪರಮಾತ್ಮ ಆದ ವಿಷ್ಣುವೇ ಹಿರಣ್ಯಗರ್ಭ, ಹರಿ, ಶಂಕರ, ವಾಸುದೇವ, ಅಚ್ಯುತ, ಪುರೊಷೋತ್ತಮ, ನಾರಾಯಣ, ಬ್ರಹ್ಮನ್, ಶಿವ ಮುಂತಾದ ಎಲ್ಲಾ ಗುಣಧಾಮಗಳಾದ ನಾಮಾವಳಿಯಲ್ಲಿಯೂ ವರಿಕೀರ್ತಿತನಾಗಿದ್ದಾನೆ. ಆದುದರಿಂದ ಪ್ರತ್ಯೇಕತೆ, ಪಂಥಗಳ ಅಂಥ ಅಭಿಮಾನ, ಸಂಕೀರ್ಣಮನೋಭಾವ, ಇವುಗಳೆಲ್ಲ ಬುದ್ಧಿಮಾಂದ್ಯದ ಫಲ." ಇದು ಸಂಭಾಷಣೆಯ ರೂಪದಲ್ಲಿರುವ ವಿಷ್ಣು ಪುರಾಣದ ಸಾರಾಂಶ. ಇದಕ್ಕೆ ವೈದಿಕ ಸಾಹಿತ್ಯದಲ್ಲಿ ತುಂಬಾ ಹಿರಿಮೆ ಇದ್ದು ವೇದಾಂತದ ಪ್ರಮಾಣ ಗಂಥವಾಗಿದೆ. ಪರಾಶರಗೀತೆ ಇವರ ಇನ್ನೊಂದು ಕೃತಿ.
ಇವರು ಇಳಿವಯಸ್ಸಿನಲ್ಲಿ ವಿವಾಹವಾದ ಸತ್ಯವತಿಗೆ ಹುಟ್ಟಿದ ಮಗುವೇ ಪ್ರಸಿದ್ಧರಾದ ವ್ಯಾಸರು. ಪರಾಶರರ ಹೆಸರನ್ನು ಶಾಶ್ವತವಾಗಿ ಉಳಿಸಬೇಕೆಂಬ ಯಾಮುನರ ಇಚ್ಛೆಯನ್ನು ಪೂರೈಸಲು, ರಾಮಾನುಜರು ಕೂರೇಶರ ಹಿರಿಯ ಮಗನಿಗೆ ಪರಾಶರಭಟ್ಟ ಎಂದು ಹೆಸರಿಟ್ಟರು.
4.ವ್ಯಾಸ :-
ವ್ಯಾಸ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಂ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಂ ||
ಅಚತುರ್ವದನೋ ಬ್ರಹ್ಮದ್ವಿಬಾಹುರಪರೋಹರಿಃ |
ಅಫಾಲಲೋಚನಶ್ಯಂಭುಃ ಭಗವಾನ್ ಬಾದರಾಯಣಃ ||
ದೀರ್ಘ ಕಾಲ ತಪಸ್ಸುಮಾಡಿ, ಅಪಾರ ಜ್ಞಾನವನ್ನು ಸಂಪಾದಿಸಿ, ನಂತರ ಲೋಕ ಕಲ್ಯಾಣದ ಸಲುವಾಗಿ ಭಾರತೀಯ ಸಾಹಿತ್ಯ ಭಂಡಾರವನ್ನು ತುಂಬಿದರು. ವೇದದ ಮಂತ್ರಗಳೆಲ್ಲವನ್ನೂ ಸೇರಿಸಿ, ಅವುಗಳನ್ನು ಋಕ್, ಯಜುರ್, ಸಾಮ, ಅಥರ್ವ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಟ್ಟು ವೇದವ್ಯಾಸ ಎನಿಸಿಕೊಂಡರು.
ಬಹಳ ಕಠಿಣವಾಗಿದ್ದು, ಸಾಮಾನ್ಯ ಜನರಿಗೆ ಅರ್ಥವಾಗದಿದ್ದ, ವೇದಮಂತ್ರಗಳ ಸರಿಯಾದ ಅರ್ಥವನ್ನು ತಿಳಿದುಕೊಳ್ಳಲು ಅನುಕೂಲಿಸುವಂತೆ ಬ್ರಹ್ಮಸೂತ್ರ ಅಥವಾ ವೇದಾಂತಸೂತ್ರಗಳನ್ನು ರಚಿಸಿಕೊಟ್ಟರು. ಇದು ಆಚಾರ್ಯತ್ರಯರಿಗೂ ಪ್ರಮಾಣ ಗ್ರಂಥವಾಗಿದ್ದು, ಇದರ ಮೇಲೆ ಮೂವರೂ ಭಾಷ್ಯ ರಚಿಸಿದ್ದಾರೆ.
ಅಷ್ಟಾದಶ ಪುರಾಣಗಳನ್ನೂ, ಮಹಾಭಾರತವನ್ನೂ ಕಥಾರೂಪದಲ್ಲಿ ಬರೆದು, ಸಾಮಾನ್ಯ ಜನರಲ್ಲಿ ವೈದಿಕ ಧರ್ಮವು ಪ್ರಚಾರವಾಗಲು ಅಗಾಧ ನೆರವು ನೀಡಿದ್ದಾರೆ. ಇದರ ಮೂಲಕ ಜನರಲ್ಲಿ ಹೆಚ್ಚು ತಿಳುವಳಿಕೆ ಬರುವಂತೆ ಮಾಡಿ ಅಮೋಘವಾದ ಉಪಕಾರವೆಸಗಿದ್ದಾರೆ.
ವ್ಯಾಸರು ಬರೆದಿರುವ ಮಹಾಭಾರತದ ಭಾಷೆಯು ಗಂಭೀರ, ಸರಳ, ಪ್ರಭಾವಶಾಲಿ ಆಗಿದ್ದು, ಅದು ಹಿಂದೂ ಸಂಸ್ಕೃತಿಯ ವಿಶ್ವಕೋಶವೆನಿಸಿಕೊಂಡಿದೆ. ಇದರ ಭಾಗವಾದ ಭಗವದ್ಗೀತೆಯ ಅತ್ಯಂತ ಶ್ರೇಷ್ಠವಾದ ಗೌರವವನ್ನು ಪಡೆದಿರುವ, ಜ್ಞಾನಸಂಗ್ರಹವೆನಿಸಿದ, ಉಪನಿಷತ್ತುಗಳ ಸಾರ. ಇದೂ ಆಚಾರ್ಯತ್ರಯರಿಗೆ ಪ್ರಮಾಣಗ್ರಂಥವಾಗಿದ್ದು, ಇದರ ಮೇಲೂ ಭಾಷ್ಯ ಬರೆದಿದ್ದಾರೆ. ಗೀತೆಯು ಲೋಕಜೀವನದ ವಿಷಯದಲ್ಲಿ ಗೌರವ ಬುದ್ಧಿಯನ್ನೂ, ಕರ್ತವ್ಯಾಚರಣೆಯಲ್ಲಿ ಉತ್ಸಾಹವನ್ನೂ, ಆಪತ್ಕಾಲದಲ್ಲಿ ಧೈರ್ಯವನ್ನೂ, ಸಂಶಯಗ್ರಸ್ತರಾದಾಗ ಮನಸ್ಸಿಗೆ ನೆಮ್ಮದಿಯನ್ನೂ ನೀಡುತ್ತದೆ. ಪ್ರಪಂಚದ ನಾನಾ ಭಾಷೆಗಳಲ್ಲಿ ಗೀತೆಯು ಅನುವಾದಿಸಲ್ಪಟ್ಟು ಜನಪ್ರಿಯ ಗ್ರಂಥವಾಗಿದೆ.
ಇಷ್ಟೆಲ್ಲ ಸಾಹಿತ್ಯ ಸೃಷ್ಟಿಮಾಡಿಯೂ ಮನಸ್ಸಿಗೆ ಶಾಂತಿ, ತೃಪ್ತಿ ಸಿಗದಿದ್ದಾಗ, ವ್ಯಾಸರು ನಾರದರ ಸಲಹೆಯಂತೆ ಭಾಗವತದ ಮೂಲಕ ಶ್ರೀಕೃಷ್ಣನ ಚರಿತ್ರೆಯನ್ನು ಬರೆದು, ಅದರಲ್ಲಿ ಹಿಂದೂಧರ್ಮದ ಸಾರವನ್ನೆಲ್ಲ ಅಡಗಿಸಿದ್ದಾರೆ.
ಮಗನ ಭಾಗವತದ ಆಧ್ಯಾತ್ಮಿಕ ದೃಷ್ಟಿಯೂ ತಂದೆಯ ವಿಷ್ಣು ಪುರಾಣದಂತಯೇ ಇದೆ.
"ಈ ವಿಶ್ವ ವ್ಯವಸ್ಥೆಯಲ್ಲಿ ವ್ಯಕ್ತವಾಗುವ ಓರಣೆ, ಹೊಂದಿಕೆ ಹಾಗೂ ವೈವಿಧ್ಯಗಳಲ್ಲಿ ಭಗವಂತನ ಅಚಿಂತ್ಯಾದ್ಭುತವಾದ ಜ್ಞಾನಕ್ರಿಯಾದಿ ಶಕ್ತಿಗಳು ಎಲ್ಲರಿಗೂ ತೋರುತ್ತವೆ. ಆತನ ಪ್ರೇಮ, ಕಾರಣ್ಯ, ಸೌಂದರ್ಯ, ಮಾಧುರ್ಯಾ ಮುಂತಾದ ಶ್ರೇಷ್ಠತರ ಕಲ್ಯಾಣ ಗುಣಗಳೂ, ಆತನಿಂದಲೇ ಸೃಷ್ಟಿಸಲ್ಪಟ್ಟಿರುವ ಜೀವಾತ್ಮರುಗಳಲ್ಲಿ ಉಚ್ಚ ಶ್ರೇಣಿಗೆ ಸೇರಿದವರಿಗೆ ಮಾತ್ರ ಗೋಚರವಾಗುತ್ತವೆ. ಆದರೆ ಆತನ ಅತ್ಯಂತ ಶ್ರೇಷ್ಠ ಕಲ್ಯಾಣ ಗುಣದ ಭೋಗಯೋಗ ದೊರಕುವುದು ಅತ್ಯಂತ ಶ್ರೇಷ್ಠ ಭಕ್ತರಿಗೆ ಮಾತ್ರ.
"ಈ ಸಮಸ್ತ ವಿಶ್ವವೂ ಸತ್ಯಜ್ಞಾನ, ಶಿವಸುಂದರ, ಸ್ವತಂತ್ರ, ಆದ ಪರಮಾತ್ಮನ ಅಪ್ರೇರಿತ, ಲೀಲಾತ್ಮಕ ಸ್ವಾಭಿವ್ಯಂಜನೆಯೇ ಆಗಿದೆ. ಮಾನವ ಸಮಾಜದಲ್ಲಿ ಕಾಣಬರುವ ಅಜ್ಞಾನ, ಅಸಮಗ್ರಜ್ಞಾನ, ದುಷ್ಟವೆನಿಸುವ ಪ್ರವೃತ್ತಿಗಳು, ದ್ವೇಷ, ಸ್ಪರ್ಧೆ, ಹೋರಾಟ ಇವೆಲ್ಲವೂ ಪರಮಾತ್ಮನ ಲೀಲೆಯ ಅಭಿವ್ಯಂಜನೆಗಳು ಆದುದರಿಂದ ಈ ವಾಸ್ತವ ಸ್ಥಿತಿಯನ್ನು ಕುರಿತು ಜುಗುಪ್ಸೆ ಪಡಬಾಡದು, ಅದರಿಂದ ತಪ್ಪಿಸಿಕೊಂಡು ಹಾರಿಹೋಗಲು ಬಯಸಬಾರದು. ಪರಮಾತ್ಮನ ಅಖಂಡ ಸ್ವರೂಪದಲ್ಲಿ ತನ್ನನ್ನು ಲೀನವನ್ನಾಗಿ ಮಾಡುವ ಮುಕ್ತಿಗೂ ಕಾತರಿಸಬಾರದು.
"ಪ್ರಪಂಚದಲ್ಲಿ ಅಂದರೆ ತನ್ನಲ್ಲಿ, ಲೋಕದ ಸ್ತ್ರೀ ಪುರುಷರಲ್ಲಿ, ಜೀವಿ-ವಸ್ತುಗಳಲ್ಲಿ, ಶಕ್ತಿಗಳಲ್ಲಿ ಎಲ್ಲೆಲ್ಲೂ ನರಮಾತ್ಮನ ಇರುವುದರಿಂದ ಅವನ ಈ ಲೀಲಾ ಚೇಷ್ಟಿತಗಳನ್ನು ಪ್ರೇಮಭಾವದಿಂದ ಕಂಡು ಆಲಂಗಿಸಿಕೊಂಡು, ಅಸಹ್ಯವಾದುದನ್ನು ಕಂಡು ದೂರ ಹೋಗದೆ ಸೇವೆ ಮಾಡಬೇಕು. ಹೀಗೆ ವಿವಿಧ ಪ್ರಕಾರದ ಜೀವಿಗಳೆಲ್ಲ ಪರಮ ಪುರುಷನಾದ ನಾರಾಯಣನ ಅವತಾರಗಳಾದ ಕಾರಣ ಸೃಷ್ಟಿಯ ಎಲ್ಲ ಪ್ರಕಾರಗಳಲ್ಲೂ ಅವನ ಇರುವಿಕೆಯನ್ನು ಕಂಡು ಗೌರವಿಸಬೇಕು.
"ಅವತಾರಗಳಲ್ಲೆಲ್ಲ ಪೂರ್ಣ, ಶ್ರೇಷ್ಠತಮ, ಪರಬ್ರಹ್ಮ ಸ್ವರೂಪ ಆದುದು ಶ್ರೀಕೃಷ್ಣ. ಆ ಭಗವಂತನೊಡನೆ ಪರಮೈಕಾಂತ ಭಕ್ತಿಯೇ ಮನುಷ್ಯ ಜೀವಿತದ ಪರಮ ಪುರುಷಾರ್ಥ. ಶರೀರದ ಸರ್ವಾಂಗಗಳೂ, ಸರ್ವೇಂದ್ರಿಯಗಳೂ, ಈ ದೈವೀ ಪ್ರಣಯದಿಂದ ಸೇಚನಗೊಂಡು, ಆತನ ಸೌಂದರ್ಯ ಮತ್ತು ಆನಂದಾನುಭೂತಿಗಳಿಂದ ಜೀವವು ತುಂಬಿ ತುಳುಕಾಡಬೇಕು." ಇದು ಭಾಗವತದ ಸಾರ.
ಇವೆಲ್ಲದರ ಫಲವಾಗಿ ವ್ಯಾಸರು ಭಗವಾನ್ ಬಾದರಾಯಣ ಎನಿಸಿಕೊಂಡುದಲ್ಲದೆ, ವ್ಯಾಸಯ ವಿಷ್ಣು ರೂಪಾಯ, ವ್ಯಾಸರೂಪಾಯ ವಿಷ್ಣವೇ" ಎಂದು ಹೊಗಳಿಸಿಕೊಂಡರು. ಇವರ ಶಿಷ್ಯರಾದ ಬೋಧಾಯನ ಋಷಿಗಳೇ ವಿಶಿಷ್ಠಾದ್ವೈತದ ಮೊದಲ ಪ್ರತಿವಾದಕರು.
5. ಶಂಕರ :-
ಶ್ರುತಿಸ್ಮೃತಿ ಪುರಾಣಾನಾಮಾಲಯಂ ಕರುಣಾಲಯಂ |
ನಮಮಿ ಭಗವತ್ಪಾದಂ ಶಂಕರಂ ಲೋಕ ಶಂಕರಂ ||
ತಾಯಿ ಆರ್ಯಾಂಬ, ತಂದೆ ಶಿವಗುರು ಇಬ್ಬರೂ ಸಂಪ್ರದಾಯಸ್ಥ ನಂಬೂದ್ರಿ ಬ್ರಾಹ್ಮಣರು. ಶ್ರೀಮಂತರಾದರೂ ಸರಳ ಜೀವಿಗಳು, ಸಜ್ಜನರು, ಶಿವಭಕ್ತರು, ವಿದ್ಯಾಸಂಪನ್ನರು. ವೃಷಾಚಲೇಶ್ವರನ ಅನುಗ್ರಹದಿಂದ ಹುಟ್ಟಿದ ಮಗುವಿಗೆ ಶಂಕರನೆಂಬ ಹೆಸರನ್ನು ಇಟ್ಟರು.
ಮಲಬಾರ್ ನ ಚೂರ್ಣಾ ಅಥವಾ ಆಳ್ವಾಯಿ ನದಿಯ ದಡದಲ್ಲಿರುವ ಕಾಲಟಿ ಎಂಬ ಹಳ್ಳಿ ಶಂಕರರ ಜನ್ಮಸ್ಥಳ. ಎಂಟನೆಯ ವರ್ಷದ ವೇಳೆಗೆ ವೇದಗಳಲ್ಲಿ ಪೂರ್ಣ ಜ್ಞಾನವಿದ್ದಿತು. ತಾಯಿಗಾಗಿ ಮಾಡಿದ ಇವರ ಪ್ರಾರ್ಥನೆಯಂತೆ ಚೂರ್ಣಾ ನದಿಯು ಇವರ ಮನೆಯ ಪಕ್ಕದಲ್ಲಿ ಹರಿಯಿತು. ತಂದೆ ಸತ್ತನಂತರ ತಾಯಿಯ ಅಪ್ಪಣೆ ಪಡೆದು ಸಂನ್ಯಾಸಿಯಾದರು.
ಆಚಾರ್ಯ ಗೌಡಪಾದರ ಶಿಷ್ಯರಾದ ಗೋವಿಂದ ಭಗವತ್ಪಾದ ಯತಿಗಳ ಶಿಷ್ಯರಾಗಿ ನರ್ಮದಾ ನದಿಯ ದಡದಲ್ಲಿ ವಿದ್ಯಾಭ್ಯಾಸ ಮಾಡಿದರು. ಗುರುಗಳ ಸಲಹೆಯಂತೆ ತಪಸ್ಸು, ಸಾಧನೆಯಲ್ಲಿ ಮಗ್ನರಾಗಿ 12ನೇ ವರ್ಷದ ವೇಳೆಗೆ ಯೋಗಿಯಾಗಿ ಸಿದ್ಧಿಪಡೆದರು. ಕಾಶಿಗೆ ಹೋಗಿ ಅನ್ನಪೂರ್ಣೇಯಲ್ಲಿ ಜ್ಞಾನ ವೈರಾಗ್ಯಗಳ ಭಿಕ್ಷೆಯನ್ನು ಬೇಡಿದರು. ಅಲ್ಲಿ ಪ್ರಬೋಧಪೂರ್ಣ ವೇದಾಂತ ಪ್ರವಚನ ಹಾಗೂ ಭಕ್ತಿ ರಸಪ್ರಧಾನಗೀತೆಗಳಿಂದ ಜನರ ಮನವನ್ನು ಸೂರೆಗೊಂಡರು. ಪ್ರಸಿದ್ಧ ಜೈನ, ಬೌದ್ಧ ಪಂಡಿತರನ್ನು ಸೋಲಿಸಿ, ಮೃತಪ್ರಾಯವಾಗಿದ್ದ ಹಿಂದೂಧರ್ಮವನ್ನು ಪುನರುಜ್ಜೀವನಗೊಳಿಸಿದರು.
ಮಲೆಯಾಳಿ, ಪ್ರಾಕೃತ, ಮಾಗಧಿ, ಸಂಸ್ಕೃತ ಭಾಷೆಗಳಲ್ಲಿ ಪಾರಂಗತರಾಗಿ ಗ್ರಂಥರಚನೆಮಾಡಲು ಆರಂಭಿಸಿದರು. ವ್ರಸ್ಥಾನತ್ರಯಗಳ ಭಾಷ್ಯ, ವಿವೇಕ ಚೂಡಮಣೀ, ಉಪದೇಶ ಸಾಹಸ್ರಿ, ಆತ್ಮಬೋಧ ಇವರ ಶ್ರೇಷ್ಠ ಕೃತಿಗಲೂ.
ಉಪನಿಷತ್ತುಗಳು ಪ್ರತಿಪಾದಿಸುವ ಅತಿ ಪ್ರಾಚೀನವಾದ ಅದ್ವೈತ ಸಿದ್ಧಾಂತ ಮತ್ತು ಸ್ಮಾರ್ತ ಪಂಥವನ್ನು ಸ್ಥಾಪಿಸಿದರು. ಸತ್ಯವನ್ನು ಅರಿತು ಭಗವಂತನ ನಾಮ ಸ್ಮರಣೆ ಹಾಗೂ ಸತ್ಪುರುಷರ ಸಹವಾಸದಲ್ಲಿ ಕಾಲ ಕಳೆದ ಮಾನವರು ಯಾವ ಜಾತಿ, ಮತ, ಪಂಥ, ಲಿಂಗಗಳಿಗೆ ಸೇರಿದ್ದರೂ ಮೋಕ್ಷಕ್ಕೆ ಅರ್ಹರು. ಮನುಷ್ಯರಲ್ಲಿ ಮೇಲು ಕೀಳು ಇರಬಾರದು ಪರಮಾತ್ಮನನ್ನು ಎಲ್ಲರಲ್ಲಿಯೂ, ಎಲ್ಲೆಲ್ಲಿಯೂ ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ಪ್ರಪಂಚವೆಲ್ಲ ತಮ್ಮದು ಎಲ್ಲರೂ ಸೋದರ ಸೋದರಿಯರು ಎಂಬುದು ಶಂಕರರ ಜ್ಞಾನಮಾರ್ಗದ ಸಾರ.
ತಾಯಿಂದ ಬಾಲ್ಯದಲ್ಲಿ ಪುರಾಣ, ಪುಣ್ಯಕಥೆಗಳನ್ನು ಕೇಳಿದುದರ ಫಲವಾಗಿ ಶಂಕರರಲ್ಲಿ ಭಕ್ತಿ ಹುಟ್ಟಿತು. ಮನೆಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಸ್ಥಾಪಿಸಿದರು. ತಾಯಿಯ ಆಸೆಯಂತೆ ಆಕೆಗೆ ಕೃಷ್ಣನ ದರ್ಶನವನ್ನು ಮಾಡಿಸಿದರು.
'ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸೀ'
ಎಂದು ಸಾರಿ ಭಕ್ತರಾಗಿ, ಕೃಷ್ಣ, ವಿಷ್ಣು, ಲಕ್ಷ್ಮಿ, ನರಸಿಂಹ, ಶಿವ, ಶಕ್ತಿ, ಕುಮಾರ, ಗಣಪತಿ, ಸೂರ್ಯ ಈ ದೇವತೆಗಳ ಧ್ಯಾನ, ಪೂಜೆ, ಸಂಕೀರ್ತನೆಗಳ ಸಲುವಾಗಿ ನೂರಾರು ಸ್ತೋತ್ರ ಗೀತೆಗಳನ್ನು ರಚಿಸಿ, ಆ ಮೂಲಕ ಪರಮಾತ್ಮನ ಕರುಣೆಗೆ ಅವಶ್ಯವಾದ ಭಕ್ತಿಮಾರ್ಗವನ್ನೂ ಉಪದೇಶಿಸಿದ್ದಾರೆ. 'ಭಜಗೋವಿಂದಂ' ಇವರ ಜನಪ್ರಿಯವಾದ ಕವಿತೆ.
ಸ್ವಾರ್ಥವನ್ನು ಬಿಟ್ಟು ಜೀವಿಗಳ ಕಲ್ಯಾಣವನ್ನು ಸಾದಿಸುವುದೇ ಸಂನ್ಯಾಸಿಗಳ ಧ್ಯೇಯವಾಗಿರಬೇಕೆಂದು ಹೇಳಿ, ಗೃಹಸ್ಥರಾಗದೆ ದುಡಿದ ಈ ಪ್ರಚಂಡ ಪ್ರತಿಭೆಯ ಮಹಾಜ್ಞಾನಿ, ಕೇರಳದವರಾರೂ, ಸೇತುವಿನಿಂದ ಹಿಮಾಚಲದವರೆಗೆ ಪ್ರವಾಸಮಾಡಿ ತಮ್ಮ ದಿವ್ಯ ಸಂದೇಶವನ್ನು ಜನರಿಗೆ ತಲಪಿಸಿದರು.
ಚತುರತೆ ಹಾಗೂ ದಕ್ಷತೆಗಳಿಂದ ಸನಾತನ ಹಿಂದೂಧರ್ಮದ ಸಂಘಟನೆ, ಅನುಷ್ಠಾನ ಮತ್ತು ಪ್ರಸಾರ ಆಗಲೆಂದು ಭಾರತದ ನಾಲ್ಕೂ ಕಡೆಗಳಲ್ಲಿ ಅಂದರೆ ಬದರಿ, ದ್ವಾರಕೆ, ಜಗನ್ನಾಥ, ಶೃಂಗೇರಿಗಳಲ್ಲಿ ಆಮ್ನಾಯ ಮಠಗಳನ್ನು ಸ್ತಾಪಿಸಿದರು. ದೇಶದಲ್ಲಿ ಐಕ್ಯತೆಯನ್ನುಂಟುಮಾಡಿದರು.
ಇವರು ಬದುಕಿದ್ದ 32 ವರ್ಷಗಳ ಅತ್ಯಲ್ಪ ಕಾಲದಲ್ಲಿ ಎಣೆಯಿಲ್ಲದ ಸಾಧನೆಯನ್ನು ಕೈಗೂಡಿಸಿಕೊಂಡು, ನೂರಾರು ವರ್ಷ ಇದ್ದವರು ಮಾಡುವುದಕ್ಕಿಂತಲೂ ಹೆಚ್ಚು ಘನವಾದ ಕೆಲಸವನ್ನು ಮಾಡಿ, ಭಾರತದ ಪ್ರಾಚೀನ ಜ್ಞಾನವನ್ನು ಮನವರಿಗೆ ಮಾಡಿಕೊಡಲು ಜನಿಸಿದ ಅತಿ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರೆನಿಸಿದರು.
ವೇದಾಂತಿ, ವಿದ್ವಾಂಸ, ಕವಿ, ಸಂತ, ಭಕ್ತ, ಧರ್ಮಸುಧಾರಕ, ಸಾಮಾಜಿಕ ಮತ್ತು ನೈತಿಕ ವ್ಯವಸ್ಥಾಪಕ, ಎನಿಸಿಕೊಂಡ ಶಂಕರ ಭಗವತ್ಪಾದರ ಕಾಲದಲ್ಲಿ ಸನಾತನ ಧರ್ಮಕ್ಕೆ ನವಚೇತನ ಹಾಗೂ ಮಾರ್ಗದರ್ಶನ ದೊರಕಿ, ಆ ಕಾಲವು ಭಾರತೀಯ ಆಧ್ಯಾತ್ಮಕ ಚರಿತ್ರೆಯಲ್ಲಿ ಸುವರ್ಣಯುಗವೆನಿಸಿದೆ.
ಈ ಪರಂಪರೆಯಲ್ಲಿ ಬಂದ ಯಾದವ ಪ್ರಕಾಶರು ಮೊದಲು ರಾಮಾನುಜರ ಗುರುಗಳಾಗಿದ್ದು.....
Comments
Post a Comment