ಶ್ರೀ ರಾಘವೇಂದ್ರತೀರ್ಥಕೃತ ಶ್ರೀರಾಮಚಾರಿತ್ರ್ಯ ಮಂಜರೀ
ಶ್ರೀಮಾನ್ ಪೂರ್ವಂ ಪ್ರಜಾತೋ ದಶರಥನೃಪತೇ ರಾಮನಾಮಾsಥ ನೀತೋ |
ವಿಶ್ವಾಮಿತ್ರೇಣ ಮಂತ್ರಾಹೃದನುಜಸಹಿತಸ್ತಾಟಕಾಘಾತುಕೋsಸ್ತ್ರಮ್ |
ಬ್ರಹ್ಮಾದ್ಯಂ ಪ್ರಾಪ್ಯ ಹತ್ವಾ ನಿಶಿಚರನಿಕರಂ ಯಜ್ಞಪಾಲೋ ವಿಮೋಚ್ಯಾ -
ಹಲ್ಯಾಮ್ ಶಾಪಂ ಚ ಭಂಕ್ತ್ವಾಶಿವಧನುರುಪಯನ್ ಜಾನಕೀಂನಃ ಪ್ರಸೀದೇತ್ | 1 |
ಶ್ರೀಮನ್ನಾರಾಯಣನು ದಶರಥ-ಕೌಸಲ್ಯ ರಾಜದಂಪತಿಗಳ ಪುತ್ರನಾಗಿ "ರಾಮ"ನೆಂಬ ಹೆಸರಿನಿಮದವತರಿಸಿ, ವಿಶ್ವಾಮಿತ್ರರೊಂದಿಗೆ ಯಜ್ಞ ರಕ್ಷಣೆಗಾಗಿ ಸಿದ್ಧಾಶ್ರಮವನ್ನು ಕುರಿತು ಹೊರಟು ತಾಟಕೀ ಎಂಬ ರಾಕ್ಷಸಿಯನ್ನು ಸಂಹರಿಸಿ, ವರ ಪಡೆದ ನಿಶಾಚರರಾದ ಸುಬಾಹು ಮೊದಲಾದ ರಾಕ್ಷಸರ ಸಮೂಹವನ್ನೇ ನಿಗ್ರಹಿಸಿ ಯಜ್ಞವನ್ನು ರಕ್ಷಿಸಿ ಗೌತಮರ ಪತ್ನಿಯಾದ ಅಹಲ್ಯೆಯ ಶಾಪ ವಿಮೋಚನೆ ಮಾಡಿ, ಶಿವಧನಸ್ನು ಮುರಿದು ಜನಕರಾಜನ ಪುತ್ರಿಯಾದ ಜಾನಕಿಯನ್ನು ವಿವಾಹವಾದ ಶ್ರೀಮನ್ನಾರಾಯಣನು ನಮಗೆ ಪ್ರಸನ್ನನಾಗಲಿ.
ಆಯನ್ ರಾಮಸ್ಸಭಾರ್ಯೋsಧ್ವನಿ ನಿಜಸಹಜೈರ್ಭಾರ್ಗವೇಷ್ವಾಸರೋಪಾತ್
ತದ್ಗಂ ಹತ್ವಾ ಸುರಾರಿಂ ಪುರಗ ಉತ ನುತಸ್ತಾಪಸೈರ್ಭೋಪಪೃಷ್ಟ್ಯೈಃ |
ಕಲ್ಯಾಣಾನಂತಧರ್ಮೋsಗುಣಲವಹರಿತಃ ಪ್ರಾಣಿನಾಮಂತರಾತ್ಮೇ -
ತ್ಯಾದ್ಯುಕ್ತಶ್ಚಾಭಿಷೇಕೇ ಪುರಜನಮಹಿತೋ ಮಹ್ಯತಾಂ ಮೇ ವಚೋಭಿಃ || 2 ||
ಪತ್ನೀ ಸಮೇತನಾಗಿ, ಲಕ್ಷ್ಮಣಾದಿಗಳೊಡನೆ, ರಾಮಚಂದ್ರದೇವರು, ಅಯೋಧ್ಯೆಯನ್ನು ಕುರಿತು ಹೊರಡುವಾಗ ಮಾಗಮಧ್ಯದಲ್ಲಿ ತನ್ನದೇ ರೂಪವಾದ ಭಾರ್ಗವರಾಮ (ಪರಶುರಾಮ)ನನ್ನು ಸಂಧಿಸಿ ಅವನು ನೀಡಿದ ಧನಸ್ಸಿನಿಂದ ಪರಶುರಾಮನಲ್ಲಿ ಅಡಗಿದ್ದ ಅತುಲನೆಂಬ ದೈತ್ಯನನ್ನು ಸಂಹರಿಸಿದ, ರಾಮಚಂದ್ರನಿಗೆ ಅಯೋಧ್ಯೆಯಲ್ಲಿ ಪಟ್ಟಾಭಿಷೇಕಕ್ಕೆ ಅಣಿಯಾಗಿರಲು, ಎಲ್ಲರಿಂದಲೂ ಹೊಗಳಿಸಿಕೊಂಡ ಸ್ತುತ್ಯನಾದ ಶ್ರೀ ರಾಮಚಂದ್ರನು ನನ್ನ ವಾಕ್ಯಗಳಿಂದ ಪೂಜಿತನಾಗಲಿ.
ಕೈಕೇಯಿಪ್ರೀತಿಹೇತೋಃ ಸಸಹಜನೃಪಜೋ ವಲ್ಕಲೀ ಯಾನರಣ್ಯಂ
ಗಂಗಾತಾರೀ ಗುಹಾರ್ಚ್ಯಃ ಕೃತರುಚಿರಜಟೋ ಗೀಷ್ಪತೇ ಪುತ್ರಮಾನ್ಯಃ |
ತೀರ್ತ್ವಾ ಕೃಷ್ಣಾಂ ಪ್ರಯಾತೋsವತು ನಿಜಮಮಲಂ ಚಿತ್ರಕೂಟಂ ಪ್ರಪನ್ನಂ
ಸ್ವಾಂಬಾಭಿರ್ಭಾತರಂ ತಂ ಶ್ರುತಜನಕಗತಿಃ ಸಾಂತ್ವಯನ್ ವ್ಯುಪ್ತತೀರ್ಥಃ || 3 ||
ಮಂಥರೆಯ ಉಪದೇಶದಿಂದ ದುಷ್ಠಬುದ್ಧಿಯಿಂದ ಪ್ರೇರಿತಳಾದ ಕೈಕೇಯಿಯ ಆಶಯದಂತೆ, ಅವಳ ಪ್ರೀತಿಗಾಗಿ ವಲ್ಕಲಧಾರಿಯಾಗಿ, ಲಕ್ಷ್ಮಣ ಸೀತೆಯರೊಡನೆ ರಾಮಚಂದ್ರನು ಅರಣ್ಯಕ್ಕೆ ಪ್ರಯಾಣಿಸಲು, ಗಂಗೆಯನ್ನು ದಾಟಿ, ಗುಹನೆಂಬ ಅಂಬಿಗನಿಂದ ಪೂಜಿಸಲ್ಪಟ್ಟವನಾಗಿ, ಸುಮನೋಹರವಾದ ಜಟಾಧಾರಿಯಾಗಿ, ಬೃಹಸ್ಪತ್ಯಾಚಾರ್ಯರ ಪುತ್ರರಾದ ಭರದ್ವಾಜರಿಂದ ಪೂಜಿಸಲ್ಪಟ್ಟು, ಯಮುನಾ ನದಿಯನ್ನು ದಾಟಿ, ಚಿತ್ರಕೂಟ ಪರ್ವತವನ್ನು ತಲುಪಿ. ಅಲ್ಲಿಗೇ ಬಂದು ರಾಮನನ್ನು ಪುನಃ ಅಯೋಧ್ಯೆಗೆ ಮರಳಲು ಪ್ರಾರ್ಥಿಸಿದ ಸಹೋದರ ಭರತನನ್ನು ಸಾಂತ್ವನಗೊಳಿಸಿ. ತಂದೆಯ ಮರಣವಾರ್ತೆಯನ್ನು ಕೇಳಿ. ತನ್ನ ತಂದೆಗೋಸ್ಕರ ತರ್ಪಣವಿತ್ತಂತಹ ಶ್ರೀರಾಮಚಂದ್ರನು ನಮ್ಮನ್ನು ರಕ್ಷಿಸಲಿ.
ದತ್ವಾಸ್ಮೈ ಪಾದುಕೇ ಸ್ವೇ ಕ್ಷಿತಿಭರಣಕೃತೌ ಪ್ರೇಷ್ಠ ತಂ ಕಾಕನೇತ್ರಂ
ವ್ಯಸ್ಯಾರಾಧ್ಯೋsತ್ರಿನಾಮ್ನಾ ವನಮಥ ಸಮಿತೋ ದಂಡಕಂ ತಾಪಸೇಷ್ಠಮ್ |
ಕುರ್ವನ್ ಹತ್ವಾವಿರಾಧಂ ಖಲಕುಲದಮನಂ ಯಾಚಿತಸ್ತಾಪಸಾಗ್ರೈ -
ಸ್ತೇಷಾಂದತ್ವಾsಭಯಂ ಸ್ವಾನಸಿಧನುರಿಷುಧೀನ್ ಯಾನಸ್ತ್ಯಾತ್ ಸ ಪಾಯಾತ್ || 4 ||
ರಾಮಚಂದ್ರನು ಭರತನಿಗೆ ತನ್ನ ಪಾದುಕೆಗಳನ್ನು ಕೊಟ್ಟು, ಕಾಗೆಯ ಕಣ್ಣಿನಲ್ಲಿರುವ ಕಾಕಾಸುರನನ್ನು ನಿಗ್ರಹಿಸಿ, ಅತ್ರಿನಾಮಕ ಋಷಿಯಿಂದ ಪೂಜಿತನಾಗಿ, ದಂಡಕಾರಣ್ಯವನ್ನು ತಲುಪಿ, ಶರಭಂಗ ಋಷಿಗಳಿಗೆ ಅವರ ಇಷ್ಠವಾದ ಮೃತ್ಯುವನ್ನು ಕರುಣಿಸಿ, ವಿರಾಧನೆಂಬ ಅಸುರನನ್ನು ಸಂಹರಿಸಿ, ದುಷ್ಠರಾದ ರಾವಣಾದಿ ದೈತ್ಯರುಗಳ, ಕುಲಸಮೂಹದ ನಿಗ್ರಹಕ್ಕಾಗಿ ಋಷಿಗಳಿಂದ ಪ್ರಾರ್ಥಿಸಲ್ಪಟ್ಟವನಾಗಿ ಆಶ್ವಾಸನೆಯನ್ನು ನೀಡಿ ಅಗಸ್ತ್ಯ ಮುನಿಗಳಿಂದ ಅಸ್ತ್ರ-ಬತ್ತಳಿಕೆಗಳನ್ನು ಪಡೆದ ರಾಮಚಂದ್ರನು ನಮ್ಮನ್ನು ರಕ್ಷಿಸಲಿ.
ಅಸೀನಃ ಪಂಚವಟ್ಯಾಮಕುರುತ ವಿಕೃತಾಂ ರಾಕ್ಷಸೀಂ ಯೋ ದ್ವಿಸಪ್ತ -
ಕ್ರವ್ಯಾದಾನಮಪ್ಯನೇಕಾನಥ ಖರಮವಧೀದ್ ದೂಷಣಂ ಚ ತ್ರಿಶೀರ್ಷಮ್ |
ಮಾರೀಚಂ ಮಾರ್ಗರೂಪಂ ದಶವದನಹೃತಾಮಾಕೃತಿಂ ಭೂಮಿಜಾಯಾ
ಅನ್ವಿಷ್ಯನ್ನಾರ್ತಗೃಧ್ರಂ ಸ್ವಗತಿಮಥ ನಯನ್ ಮಾಮವೇತ್ ಘ್ನನ್ ಕಬಂಧಮ್ | 5 |
ಪಂಚವಟೀ ತೀರದಲ್ಲಿ ಇರುವಾಗ, ರಾಕ್ಷಸಿಯಾದ ಶೂರ್ಪಣಖಿಯನ್ನು ವಿಕಲಾಂಗಳನ್ನಾಗಿ ಲಕ್ಷ್ಮಣನ ಮುಖಾಂತರ ಮಾಡಿಸಿದ, ಹದಿನಾಲ್ಕು ಸಂಖ್ಯೆಯ ಪ್ರಧಾನ ರಾಕ್ಷಸರುಗಳನ್ನೂ, ಮತ್ತು ಬಹುಸಂಖ್ಯಾಕರಾದ ಉಪರಾಕ್ಷಸರನ್ನೂ "ಖರ" ಮತ್ತು "ದೂಷಣಾ"ನೆಂಬ ರಾಕ್ಷಸರನ್ನೂ, ಸಂಹಾರ ಮಾಡಿ, ಮಾಯಾ ಜಿಂಕೆಯ ರೂಪದಿಂದ ಬಂದ ಮಾರೀಚನನ್ನು ಕೊಂದು, ದಶವದನನಾದ ರಾವಣನು ಸೀತಾಕೃತಿಯನ್ನು ಅಪಹರಿಸಲು, ಅದನ್ನು ಹುಡುಕುವಂತವನಾಗಿ, ಮಾರ್ಗ ಮಧ್ಯದಲ್ಲಿ ಜಟಾಯುವನ್ನು, ಅನುಗ್ರಹಿಸಿ, "ಕಂಬಂಧ"ನೆಂಬ ವಿಶಾಲಬಾಹುವಿನ ರಾಕ್ಷಸನ್ನು ಸಂಹಾರ ಮಾಡಿದ ಶ್ರೀ ರಾಮಚಂದ್ರನು ನಮ್ಮನ್ನು ರಕ್ಷಿಸಲಿ.
ಪಂಪಾತೀರಂ ಸ ಗಚ್ಚನ್ನಿಹ ಕೃತವಸತಿಃ ಭಕ್ತಿತುಷ್ಠಃ ಶಬರ್ಯೈ
ದತ್ವಾ ಮುಕ್ತಿಂ ಪ್ರಕುರ್ವನ್ ಹನುಮತ ಉದಿತಂ ಪ್ರಾಪ್ತಸುಗ್ರೀವಸಖ್ಯಮ್ |
ಸಪ್ತಭಿತ್ವಾsಥ ತಾಲಾನ್ ವಿಧಿವರಬಲಿನೋ ವಾಲಿಭತ್ ಸೂರ್ಯಸೂನುಂ
ಕುರ್ವಾಣೋ ರಾಜ್ಯಪಾಲಂ ಸಮವತ್ ನಿವಸನ್ ಮಾಲ್ಯವತ್ಕಂದರೇsಸೌ || 6 ||
ರಾಮಚಂದ್ರನು ಪಂಪಾತೀರದಲ್ಲಿ ಕೆಲ ಕಾಲ ವಾಸಿಸಿ, ಭಕ್ತಿಯಿಂದ ಸೇವಿಸಿದ ಶಬರಿಗೆ ಅನುಗ್ರಹಿಸಿ, ಅವಳಿಗೆ ಮೋಕ್ಷವನ್ನಿತ್ತು, ಹನುಮಂತನ ಭೇಟಿ ಮಾಡಿ, ಅವನ ಸಖನಾದ ಸುಗ್ರೀವನ ಸ್ನೇಹವನ್ನು ಹೊಂದಿ, ವಾಲಿನಿಗ್ರಹ ಮಾಡಿ, ಬ್ರಹ್ಮದೇವರ ವರಬಲದಿಂದ ಬಲಿಷ್ಠರಾದ ಏಳು ಸಂಖ್ಯಾಕರಾದ ತಾಳಾವೃಕ್ಷಸ್ವರೂಪರಾದ ದೈತ್ಯರನ್ನು ಕೊಂದು, ಸೂರ್ಯಪುತ್ರ ಸುಗ್ರೀವನಿ ಕಿಷ್ಕಿಂದೆಯ ರಾಜನನ್ನಾಗಿ ಮಾಡಿದ ಕೌಸಲ್ಯಾನಂದನ ರಾಮನು ನಮ್ಮನ್ನು ರಕ್ಷಿಸಲಿ.
ನೀತ್ವಾ ಮಾಸಾನ್ ಕಪೀಶಾನಿಹ ದಶ ಹರಿತಃ ಪ್ರೇಷ್ಯ ಸೀತಾಂ ವಿಚಿತ್ಯಾ -
ಯಾತಶ್ರೀಮಧ್ಧನೂಮದ್ಗಿರಮಥ ಸಮನುಶ್ರುತ್ಯ ಗಚ್ಚನ್ ಕಪೀಂದ್ರೈಃ |
ಸುಗ್ರೀವಾದ್ಯೈರಸಂಖ್ಯೈರ್ದಶಮುಖಸಹಜಂ ಮಾನಯನ್ನಬ್ಧಿವಾಚಾ
ದೈತ್ಯಘ್ನಃ ಸೇತುಕಾರೀ ರಿಪುಪುರರುದವೇದ್ವಾನರೈರ್ವಾರಿಘಾತೀ || 7 ||
ಮಾಲ್ಯವತ್ಪರ್ವತದ ಕಂದರದಲ್ಲಿ ಕೆಲತಿಂಗಳುಗಳನ್ನು ಕಳೆದು ಕಪಿಶ್ರೇಷ್ಠರನ್ನು, ಹತ್ತು ದಿಕ್ಕುಗಳಿಗೂ ಕಳುಹಿಸಿ, ಸೀತಾದೇವಿಯನ್ನು ದರ್ಶನ ಮಾಡಿಬಂದ ಹನುಮಂತದೇವರ ವಾಕ್ಯವನ್ನು ಚೆನ್ನಾಗಿ ಲಾಲಿಸಿ, ಸುಗ್ರೀವನೇ ಮೊದಲಾದ ಅಸಂಖ್ಯರಾದ ಕಪಿಶ್ರೇಷ್ಠರಿಂದ ಕೂಡಿ, ದಕ್ಷಿಣದಿಕ್ಕಿಗೆ ದಿಗ್ವಿಜಯ ಮಾಡಿ, ದಶಮುಖ ರಾವಣನ ತಮ್ಮನಾದ ವಿಭೀಷಣನನ್ನು ತನ್ನ ಗುಂಪಿಗೆ ಸೇರಿಸಿ, ಗೌರವಿಸಿ, ಸಮುದ್ರಕ್ಕೆ ಸೇತುವೆಯನ್ನು ಕಟ್ಟಿಸಿ, ಶತ್ರುವಾದ ರಾವಣನ ಪಟ್ಟಣವನ್ನು ತಲುಪಿ, ಕಪಿಗಳಿಂದ ಕೂಡಿದವನಾಗಿ ಶತ್ರುಗಳನ್ನು ನಾಶಮಾಡಿದ ರಾಮಚಂದ್ರನು ನಮ್ಮನ್ನು ಕಾಪಾಡಲಿ.
ಭಗ್ನಂ ಕೃತ್ವಾ ದಶಾಸ್ಯಂ ಗುರುತರವಪುಷಂ ಕುಂಭಕರ್ಣಂ ನಿಹತ್ಯ
ಪ್ರಧ್ವಸ್ತಾಶೇಷನಾಗಂ ಪದಕಮಲನತಂ ತಾಕ್ಷ್ಯನ್ಮಾನಂದ್ಯ ರಾಮಃ |
ಸರ್ವಾನುಜ್ಜೀವಯಂತಂ ಗಿರಿಧರಮನಘಶ್ಚಾಂಜನೇಯಾತ್ ಕಪೀನ್ ಸ್ವಾ
ವಿಜ್ಞಾನಾಸ್ತ್ರೇಣ ರಕ್ಷಣ್ ಸಮವತು ದಮಯನ್ ಲಕ್ಷ್ಮಣಾಚ್ಚಕ್ರಶತ್ರುಮ್ || 8 ||
ನಾಗಾಸ್ತ್ರದಿಂದ ಕಪಿಗಳೆಲ್ಲ ಮೂರ್ಚೆಗೊಳ್ಳಲು, ಬಂದ ಗರುಡನನ್ನು ಸಂತೋಷಪಡಿಸಿ, ಹನುಮಂತದೇವರಿಗೆ ಹೇಳಿ ಗಂಧಮಾದನ ಪರ್ವತವನ್ನು ತರಿಸಿ, ಎಲ್ಲ ಕಪಿಗಳನ್ನೂ ಕಾಪಾಡಿ, ಇಂದ್ರಜಿತುವನ್ನು ಲಕ್ಷ್ಮಣನು ಸಂಹರಿಸಲು, ಮುಂದೆ ರಾವಣನ್ನು, ಕುಂಭಕರ್ಣನನ್ನೂ ನಿಗ್ರಹಿಸಿ ಕೊಂದಂತಹ ಶ್ರೀರಾಮಚಂದ್ರನು ನಮ್ಮನ್ನು ರಕ್ಷಿಸಲಿ.
ಕ್ರವ್ಯಾದಾನ್ ಘ್ನನ್ನಸಂಖ್ಯಾನಪಿ ದಶವದನಂ ಬ್ರಹ್ಮಪೂರ್ವೈಃಸುರೇಶೈಃ
ಪುಷ್ಪೈರಾಕೀರ್ಯಮಾಣೋ ಹುತವಹವಿಮಲಾಮಾಪ್ಯ ಸಿತಾಂ ವಿಧಾಯ |
ರಕ್ಷೋನಾಥಂ ಸ್ವಭಕ್ತಂ ಸ್ವಪುರಮಥ ಗತಃ ಪುಷ್ಪಕಸ್ಥೈಃ ಸಮಸ್ತೈಃ
ಸಾಮ್ರಾಜ್ಯೈಚಾಭಿಷಿಕ್ತೋ ನಿಜಜನಮಖಿಲಂಮಾನಯನ್ ಮೇಪತಿಃಸ್ಯಾತ್ || 9 ||
ಅಪರಿಮಿತರಾದ ರಾಕ್ಷಸರನ್ನು ಸಂಹರಿಸಿ, ರಾವಣನನ್ನೂ ಸಂಹಾರ ಮಾಡಿ, ಚತುರ್ಮುಖನೇ ಮೊದಲಾದ ದೇವಾನುದೇವತೆಗಳಿಂದ ಪುಷ್ಪದಿಂದ ಅಭಿಷೇಕ ಮಾಡಿಸಿಕೊಳ್ಳಲ್ಪಟ್ಟವಾಗಿ, ಅಗ್ನಿಯಲ್ಲಿ ಪ್ರವೇಶಿಸಿ ಪರಿಶುದ್ಧಳಾದ ಸೀತಾದೇವಿಯನ್ನು ಹೊಂದಿ, ತನ್ನ ಭಕ್ತನಾದ ವಿಭೀಷಣನನ್ನು ಲಂಕಾಧಿಪನನ್ನಾಗಿ ಮಾಡಿ, ನಂತರದಲ್ಲಿ ಪುಷ್ಪಕ ವಿಮಾನಾರೂಢನಾಗಿ ಅಯೋಧ್ಯಾಪಟ್ಟಣವನ್ನು ತಲುಪಿ, ರಾಜ್ಯಾಭಿಷೇಕ ಮಾಡಲ್ಪಟ್ಟವನಾದ ಶ್ರೀಮನು ನಮ್ಮೆಲ್ಲರಿಗೂ ಸರ್ವಾಭೀಷ್ಠಪ್ರದನಾಗಲಿ.
ರಕ್ಷನ್ ಕ್ಷೋಣೀಂಸಮೃದ್ಧಾಂ ನುತ ಉತ ಮುನಿಭಿರ್ಮಾನಯನ್ ವಾಯುಸೂನಂ
ಪ್ರೇಷ್ಯಾದಿತ್ಯಾತ್ಮಜಾದೀನ್ ವ್ಯತನುತ ಭರತಂ ಯೌವನಾಜ್ಯೇsನುಮಾನ್ಯ |
ಕಾರ್ಯೇ ಸೌಮಿತ್ರಮಾರ್ತಶ್ವಗದಿಕೃದರಿಘ್ನೋಥ ಶತ್ರುಘ್ನತೋ ಯೋ
ಹತ್ಮಾಸೋ ದುಷ್ತಶೂದ್ರಂ ದ್ವಿಜಸುತಗುಬವೇತ್ ಕುಂಭಜಾನ್ಮಾಲಭಾರೀ || 10 ||
ಸಕಲ ಕಾಮಗಳಿಂದ ಪರಿಪೂರ್ಣವಾದ ಪೃಥ್ವಿಯನ್ನು ರಕ್ಷಿಸಿ ಅಗಸ್ತ್ಯಾದಿ ಮುನಿಗಳಿಂದ ಸ್ತುತ್ಯನಾಗಿ, ವಾಯು ಪುತ್ರನಾದ ಹನುಮಂತನಿಗೆ ಸಹಭೋಗವನ್ನಿತ್ತು, ಭರತನನ್ನು ಯುವ ರಾಜ್ಯಾಭಿಷೇಕ ಮಾಡಿ, ಪ್ರಜೆಗಳ ರಕ್ಷಣಾ ಕಾರ್ಯಕ್ಕೆ ಲಕ್ಷ್ಮಣನನ್ನು, ನಿಯಮಿಸಿದನು. ಶತ್ರುಘ್ನನು ಶತ್ರುವಾದ ಲವಣಾಸುರನನ್ನು ಸಂಹಾರಮಾಡಿದನು. ದುಷ್ಠನಾದ ಶೂದ್ರನನ್ನು ಸಂಹರಿಸಿ ಬ್ರಾಹ್ಮಣನ ಮಗನನ್ನು ರಕ್ಷಣೆ ಮಾಡಿ, ಅಗಸ್ತ್ಯ ಋಷಿಗಳಿಂದ ಭಾರೀ ಮಾಲೆಯನ್ನು ಸ್ವೀಕಾರ ಮಾಡಿದ ರಾಮಚಂದ್ರನು ನಮ್ಮನ್ನು ಕಾಪಾಡಲಿ.
ಯಜ್ಞಂ ತನ್ವನ್ ತ್ರಿಕೋಟೀನ್ ವ್ಯತುದತ ಭರತಾದ್ಯೋsಸುರಾನೀಶವಾಕ್ಯಾದ್
ಯಾಸ್ಯನ್ ಧಾಮಾತ್ರಿಪುತ್ರಂ ಭುಜಿಮಥ ಸ ನಯನ್ ಆತ್ಮಸೂನೂ ಸ್ವರಾಜ್ಯೇ |
ಕೃತ್ವಾ ಶ್ರೀಹ್ರೀಹನೂಮದ್ಧ್ರತ ವಿಮಲಚಲಚ್ಚಾಮರಛತ್ರಶೋಭೀ
ಬ್ರಹ್ಮಾದ್ಯೈಃಸ್ತೂಯಮಾನೋ ನಿಜಪುರವಿಲಸತ್ಪಾದಪದ್ಮೋsವತಾನ್ಮಾನ್ || 11 ||
ರಾಮಚಂದ್ರ ದೇವರು ಅಶ್ವಮೇದ ಯಜ್ಞವನ್ನು ಮಾಡಿ, ಮೂರು ಕೋಟಿಗೂ ಹೆಚ್ಚಾದ ದೈತ್ಯರನ್ನು ಭರತನಿಂದ ಸಂಹಾರ ಮಾಡಿಸಿದನೋ, ರುದ್ರ ದೇವರ ವಚನಾನುಸಾರ ಶ್ವೇತದ್ವೀಪವನ್ನು ಕುರಿತು ಹೋಗಿ, ಅತ್ರಿಋಷಿಗಳ ಮಕ್ಕಳಾದ ದೂರ್ವಾಸರಿಗೆ ಭೋಜನ ಮಾಡಿಸಿ, ತನ್ನ ಮಕ್ಕಳಾದ ಲವ-ಕುಶರನ್ನು ರಾಜ್ಯ ಪರಿಪಾಲನ ಕಾರ್ಯದಲ್ಲಿ ನಿಯಮಿಸಿ, ಲಕ್ಷ್ಮೀ-ಹನುಮಂತ ದೇವರುಗಳಿಂದ ಸೇವಿತನಾಗಿ, ಚತುರ್ಮುಖನೇ ಮೊದಲಾದ ದೇವತೆಗಳಿಂದ ಸ್ತುತ್ಯನಾಗಿ, ಸ್ವಕೀಯವಾದ ಶ್ವೇತದ್ವೀಪದಲ್ಲಿ ಪ್ರಕಾಶಮಾನವಾದ ಪಾದಕಮಲಗಳುಳ್ಳ ಶ್ರೀರಾಮಚಂದ್ರದೇವರು ನಮ್ಮನ್ನು ರಕ್ಷಿಸಲಿ.
|ಇತಿ ಶ್ರೀ ರಾಘವೇಂದ್ರತೀರ್ಥಕೃತ ಶ್ರೀರಾಮಚಾರಿತ್ರ್ಯಮಂಜರೀ ||
Comments
Post a Comment