ವಾಚಕ್ನವೀಗಾರ್ಗಿ


    ಶಕ್ತಿ ಸ್ವರೂಪಿಣಿಯಾದ ಸ್ತ್ರೀಯನ್ನು ಮಾತೆಯೆಂದು ಮಮತೆಯಿಂದ ಗೌರವಿಸಿದೆ ನಮ್ಮ ದೇಶ. "ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ" ಎಂದು ಮನುವು ಸ್ತ್ರೀಯರಿಗೆ ಸಲ್ಲುವ ಪೂಜೆ ದೇವತೆಗಳ ಸಂತೃಪ್ತಿಗಾಗಿ ಎಂದು ಹೇಳಿದ್ದಾನೆ. "ಮಾತೃವತ್ ಪರ ದಾರಾಣಿ" ಎಂದೂ "ನಮಾತುಃ ಪರದೈವತಂ" ಎಂದು ಸ್ಮೃತಿಯ ನಿರ್ದೇಶ.
    ವೇದಾಂತ, ಧರ್ಮಶಾಸ್ತ್ರ, ಸಾಹಿತ್ಯಗಳಲ್ಲಿ ತಮ್ಮ ವೈದುಷ್ಯದಿಂದಲೂ ಪ್ರತಿಭೆಯಿಂದಲೂ ಪ್ರಸಿದ್ಧರಾಗಿ, ಭೋಜರಾಜ-ವಿಕ್ರಮಾರ್ಕನ ಹೆಂಡತಿ ಶೀಲವತಿ; ಪ್ರಖ್ಯಾತ ಸಂತ ತುಳಸಿದಾಸರಿಗೆ ಗುರುವಾಗಿ ಪರಿಣಮಿಸಿದ ಅವರ ಹೆಂಡತಿ ಮಮತಾ; ಮಹಾ ಕವಿ ಮಯೂರ ಭಟ್ಟನ ಮಗಳಾದ ಮಹಾವೈಯಾಕರಣಿ ಯೆಂದೆನಿಸಿದ ಮತ್ತು ತನ್ನ ಗಂಡನ 'ಆನಂದ ಲತಿಕಾ' ಎಂಬ ಚಂಪೂ ಗ್ರಂಥದ ರಚನೆಯಲ್ಲಿ ಪಾಲ್ಗೊಂಡ ವೈಜಯಂತೀ; ಜಯಚಂದ್ರ ರಾಜನ ಮಗಳು ಪೃಥ್ವೀರಾಜನ ಹೆಂಡತಿಯೂ ಆಗಿದ್ದು ಧರ್ಮಶಾಸ್ತ್ರ ವಿಶಾರದೆಯಾಗಿದ್ದ ಸಂಯುಕ್ತೆ; ಶಿವರಾಮ ದೀಕ್ಷಿತರ ಮಗಳು ಕವಯಿತ್ರಿ ಪ್ರಿಯಂವದೆ; ಇಂದ್ರೇಶ್ವರ ಚೂಡಾಮಣಿಯ ಮಗಳು ವ್ಯಾಕರಣ ವಿಶಾರದೆ ಮಾನಿನೀ; ಮಧ್ವಾಚಾರ್ಯರ ತಂಗಿ ಕಲ್ಯಾಣೀ ದೇವಿ; ಶಂಕರ ವೇದಾಂತದಲ್ಲಿ ಧ್ರವತಾರೆಯಾದ ಭಾವತೀಕಾರ ವಾಚಸ್ಪತಿಮಿಶ್ರನ ಹೆಂಡತಿ ಭಾಮತಿ; ಇಂತಹ ಸ್ತ್ರೀ ಜನಾಂಗದ ವನಿತೆಯರು ನಮ್ಮ ಹಿಂದೂ ಧರ್ಮ, ಸಂಸ್ಕೃತಿಯನ್ನು ಬೆಳಗಿ ತೊಳಗ ಬಲ್ಲ ಪ್ರಚಂಡ ಶಕ್ತಿವುಳ್ಳವರು. ವೇದ ವಿದ್ಯೆಯನ್ನು ಕರತಲಾಮಲಕವಾಗಿ ಕೊಂಡಿದ್ದ ಮೈತ್ರೇಯಿ, ಬ್ರಹ್ಮಜ್ಞಾನಿ ವಾಚಕ್ನವೀಗಾರ್ಗಿ, ಘೋಷಾ, ಲೋಪಾಮುದ್ರೆ, ಮೈತ್ರೇಯಿ, ಅಪಾರ ಮನ್ನಣೆ ಪಡೆದಿದ್ದ ಸ್ತ್ರೀ ರತ್ನಗಳು. ವಾಚಕ್ನವೀಗಾರ್ಗಿ ಯನ್ನು ಕುರಿತು ನೋಡೋಣ....
    ಬ್ರಹ್ಮಜ್ಞಾನಿ ಗಾರ್ಗಿ, ವೇದ ನಾದಿನಿ. ಜನಕ ಮಹಾರಾಜನ ಬಹುದಕ್ಷಿಣ ಯಾಗದಲ್ಲಿ ಭಗವಾನ್ ಯಾಜ್ಞವಲ್ಕ್ಯರ ದಿಟ್ಟತನವನ್ನು ಮೆಚ್ಚಿಕೊಂಡು ಅವರೊಡನೆ ಆಧ್ಯಾತ್ಮ ವಿಷಯಗಳ ಕಠಿಣ ತಮವಾದ ವಾದವನ್ನು ನಡೆಯಿಸಿ "ಇವರೇ ನಿಜವಾದ ಸರ್ವೋತ್ತಮ ಹಾಗೂ ನಿಷ್ಠಾವಂತ ಬ್ರಹ್ಮಜ್ಞಾನಿಗಳು" ಎಂದು ಅಂತಿಮ ನಿರ್ಣಯವನ್ನಿತ್ತವಳು.
    'ಗಾರ್ಗಿ' ಇವಳನ್ನು ವಾಚಕ್ನವೀಗಾರ್ಗಿ ಎಂದು ಕರೆಯುವರು. ಗರ್ಗ ವಂಶದ ವಚಕ್ನು ಮಹರ್ಷಿಯ ಮಗಳಾದುದರಿಂದ ಈ ಬ್ರಹ್ಮವಾದಿನಿಗೆ "ವಾಚಕ್ನವೀ ಗಾರ್ಗಿ" ಎಂದು ಹೆಸರು ಬಂದಿದೆ ಜನಕ ರಾಜರ್ಷಿಯ ವಿದ್ವತ್ಸಭೆಯನ್ನು ಅಲಂಕರಿಸಿದ್ದಳು ಈ ಸ್ತ್ರೀರತ್ನ. ಬೃಹದಾರಣ್ಯಕೋಪನಿಷತ್ತಿನಲ್ಲಿ ನಡೆದ ಶಾಸ್ತ್ರರ್ಥ ವಾದ ವಿವರವಾಗಿ ಈ ರೀತಿ ಇದೆ.
    ಒಮ್ಮೆ ಮಿಥಿಲೆಯ ನೃಪತಿಯಾದ ಜನಕನಿಗೆ, "ಪ್ರಪಂಚದಲ್ಲಿ ಶ್ರೇಷ್ಠ ಬ್ರಹ್ಮಜ್ಞಾನಿಯಾರು?" ಎಂಬುದನ್ನು ಅರಿಯಬೇಕೆಂಬ ಆಸೆಯುಂಟಾಗುತ್ತದೆ. ವಿದ್ವದ್ವರೇಣ್ಯರನ್ನು ಕಲೆಹಾಕುವ ಸಲುವಾಗಿ, ಬಹುದಕ್ಷಿಣಾ ಯಾಗವೊಂದನ್ನು ಅನುಷ್ಠಿಸುವುದಾಗಿ ಷೋಷಿಸುತ್ತಾನೆ. ಈ ಪವಿತ್ರವಾದ ಯಾಗಾಂತ್ಯದಲ್ಲಿ ಶ್ರೇಷ್ಠ ಬ್ರಹ್ಮಜ್ಞನೆಂದು ವಿದ್ವತ್ಸಭೆಯಲ್ಲಿ ನಿರ್ಣಿತರಾಗುವ ವ್ಯಕ್ತಿಗೆ ತಾನು ಸಹಸ್ರ ಗೋವುಗಳನ್ನು, ಸುವರ್ಣ ಅಭರಣಗಳೊಂದಿಗೆ ದಕ್ಷಿಣೆಯಾಗಿ ಕೊಡುವುದಾಗಿ ತಿಳಿಸಿ ವಿದ್ವತ್ಸಭೆಯನ್ನು ಸೇರಿಸುತ್ತಾನೆ.
    ವಿದ್ವಾಂಸರು ನೆರೆದ ಆ ಸಭೆಯಲ್ಲಿ ಜನಕ ಮಹಾರಾಜನು "ಎಲೆ! ಶ್ರೇಷ್ಠ ವಿದ್ವಾಸರೇ! ನಿಮ್ಮಲ್ಲಿ ಯಾರು ಬ್ರಹ್ಮಜ್ಞಾನಿಗಳೋ ಅವರು ಈ ಗೋವುಗಳನ್ನು ಕೊಂಡೊಯ್ಯಬಹುದು" ಎಂದು ಸಾರಿ ಹೇಳಿದನು. ಯಾರಿಗೂ ಧೈರ್ಯ ಬರಲಿಲ್ಲ ಆಗ ಯಾಜ್ಞವಲ್ಕ್ಯರು "ಸೋಮಶ್ರವ ಈ ಗೋವುಗಳನ್ನು ಸಾಗಿಸು" ಎಂದು ತಮ್ಮ ಶಿಷ್ಯನಿಗೆ ಆದೇಶನಿತ್ತರು. "ಏನು ನೀವು ಉತ್ಕೃಷ್ಟ ಬ್ರಹ್ಮನಿಷ್ಠರೇ" ಎಂದು ವಿದ್ವಾಸರೆಲ್ಲ ಗುಡುಗ ಹತ್ತಿದರು.
    "ನನಗೆ ಗೋವುಗಳ ಅವಶ್ಯಕತೆಯಿತ್ತು. ಆದುದರಿಂದ ಅವುಗಳನ್ನು ಪರಿಗ್ರಹಿಸಿದ್ದೇನೆ. ಬ್ರಹ್ಮ ನಿಷ್ಠರು ಯರಾದರೂ ಈ ಸಭೆಯಲ್ಲಿದ್ದರೆ ಅವರಿಗೆ ನನ್ನ ಪ್ರಣಾ" ಎಂದು ಕುಳಿತರು ಯಾಜ್ಞವಲ್ಕ್ಯರು.
    ವಾದ ವಿವಾದವು ಆರಂಭವಾಯಿತು. ಬ್ರಹ್ಮ ನಿಷ್ಠಾಭಿಮಾನಿಗಳಾದ ಆಶ್ವಲ, ಋತಭ, ಅರ್ಧ ಭಾಗ, ಭುಜ್ಯು,, ಉಷಸ್ತ, ಕಹೋಲ, ಉದ್ದಾಲಕ ಮೊದಲಾದವರು ಹಲವಾರು ಪ್ರಶ್ನೆಗಳನ್ನು ಕೇಳಿದರು, ಭಗವಾನ್ ಯಾಜ್ಞವಲ್ಕ್ಯರು ಎಲ್ಲರಿಗೂ ಸೂಕ್ತವಾದ ಉತ್ತರವನ್ನಿತ್ತರು.
    ಕೊನೆಯಲ್ಲಿ ಬ್ರಹ್ಮವಾದಿನಿಯಾದ ವಾಚಕ್ನವೀಗಾರ್ಗಿಯು ಎದ್ದು ನಿಂತಳು. "ಪೂಜ್ಯವಿಪ್ರರೇ ನಾನು ಪ್ರಕೃತ ಇವರೊಂದಿಗೆ ಎರಡು ಪ್ರಶ್ನೆಮಾಡುತ್ತೇನೆ, ಆ ಪ್ರಶ್ನೆಗಳಿಗೆ ಇವರಿಂದ ಉಚಿತವಾದ ಉತ್ತರ ಬಂದಲ್ಲಿ ಇವರನ್ನು ಯಾರೂ ಗೆಲ್ಲಲ್ಲು ಸಾಧ್ಯವಿಲ್ಲವೆಂಬುದು ಧೃಡವಾಗುತ್ತದೆ' ಎಂದು ಹೇಳಿದಳು.
    'ಗಾರ್ಗಿ ಕೇಳತಕ್ಕದ್ದು ಕೇಳ ತಕ್ಕದ್ದು' ಎಂದು ಎಲ್ಲರೂ ಒಕ್ಕೊರಲಿನಿಂದ ಕೂಗಿ ಕೊಂಡರು. ಆಗ ಗಾರ್ಗಿ ಯಾಜ್ಞವಲ್ಕ್ಯರನ್ನು ಕುರಿತು ಪ್ರಶ್ನಿಸಿದಳು "ಭಗವಾನ್! ಬ್ರಹ್ಮಾಂಡಕ್ಕೆ ಮೇಲೆ ಬ್ರಹ್ಮಾಂಡಕ್ಕೆ ತಳಭಾಗದಲ್ಲಿ ಸ್ವರ್ಗಕ್ಕೂ ಭೂಮಿಗೂ ನಡುವೆ ಇದ್ದು ಭೂತ, ಭವಿಷ್ಯತ್ ವರ್ತಮಾನ ರೂಪವಾದ ಸೂತ್ರಾತ್ಮವಾದ ವಿಶ್ವ ಯಾವುದರಿಂದ ಓತಪ್ರೋತವಾಗಿದೆ?
    ಗಾರ್ಗಿ! ಈ ಜಗದ್ರೂಪ ವ್ಯಾವೃತ ಸೂತ್ರವು ಅಂತರ್ಯಾಮಿ ರೂಪದ ಆಕಾಶದಲ್ಲಿ ಓತಪ್ರೋತವಾಗಿದೆ.
    ಜಗದ್ರೂಪ ಸೂತ್ರಾತ್ಮವು ಯಾವ ಆಕಾಶದಲ್ಲಿ ಓತಪ್ರೋತವಾಗಿದೆಯೋ ಆ ಆಕಾಶ ಎಲ್ಲಿ ಓತ ಪ್ರೋತವಾಗಿದೆ?
    ಯಾಜ್ಞವಲ್ಕ್ಯರು ಈ ಪ್ರಶ್ನೆಗೆ ಉತ್ತರಿಸುತ್ತಾ ಹೀಗೆ ಹೇಳಿದರು "ಆ ಆವ್ಯಾಕೃತವಾದ ಆಕಾಶ ಅವಿನಾಶಿಯಾದ ಅಕ್ಷರ ಬ್ರಹ್ಮನಲ್ಲಿಯೇ ಓತ ಪ್ರೋತವಾಗಿದೆ. ಈ ಅಕ್ಷರಬ್ರಹ್ಮ ದೇಶ-ಕಾಲ-ವಸ್ತು ಇತ್ಯಾದಿ ಪರಿಭೇದಗಳಿಂದ ರಹಿತವಾಗಿ ಸ್ವರ ವ್ಯಾಪಿಯಾಗಿ ಅಪರಿಚ್ಛಿನ್ನವಾಗಿದೆ. ಇದರ ಆಜ್ಞೆಯಿಂದಲೆ ಸೂರ್ಯ ಚಂದ್ರರು ನಿಯಮಿತ ರೂಪದಿಂದ ವ್ಯವಹರಿಸುತ್ತಾರೆ. ಇದನ್ನರಿತು ಜೀವನಯಾತ್ರೆಯನ್ನು ಪೂರ್ಣಗೊಳಿಸುವವನೇ ಬ್ರಹ್ಮವಿದ"
    ಮಹರ್ಷಿಗಳಾದ ಭಗವಾನ್ ಯಾಜ್ಞವಲ್ಕ್ಯರ ಈ ಉತ್ತರದಿಂದ ಸಂತುಷ್ಟಳಾದ ವಾಚಕ್ನವೀ ಗಾರ್ಗಿಯು "ಭಗವಾನ್ ಯಾಜ್ಞವಲ್ಕ್ಯರು ವಂದ್ಯರು ಯಾರು ಅವರನ್ನು ವಾದದಲ್ಲಿ ಸೋಲಿಸಲಾರರು" ಎಂದು ಅಂತಿಮ ನಿರ್ಣಯ ನೀಡಿದಳು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ