ಗೋದಾಸ್ತುತಿಃ (ಸಂಗ್ರಹ) - 1

ಶ್ರೀ ವಿಷ್ಣು ಚಿತ್ತಕುಲನಂದನ ಕಲ್ಪವಲ್ಲೀಂ
ಶ್ರೀರಂಗರಾಜಹರಿಚಂದನಯೋಗದೃಶ್ಯಾಮ್ |
ಸಾಕ್ಷತ್ ಕ್ಷಮಾಂ ಕರುಣಯಾ ಕಮಲಾಮಿವಾನ್ಯಾಂ
ಗೋದಾಮನನ್ಯ ಶರಣಃ ಶರಣಂ ಪ್ರಪದ್ಯೇ ||1||

ಶ್ರೀ ವಿಷ್ಣುಚಿತ್ತಕುಲನಂದನಕಲ್ಪವಲ್ಲೀಂ = ಶ್ರೀ ವಿಷ್ಣುಚಿತ್ತರ ಕುಲವೆಂಬ ನಂದನವನದಲ್ಲಿ ಕಲ್ಪಲತೆಯಂತೆ ಅವತರಿಸಿದ,
ಶ್ರೀರಂಗರಾಜಹರಿಚಂದನ ಯೋಗದೃಶ್ಯಾಂ = ಶ್ರೀರಂಗನಾಥನ ದೇಹದಲ್ಲಿ ಲೇಪಿಸಿರುವ ಶ್ರೀಗಂಧದ ಸಂಬಂಧದಿಂದ (ನೋಡಲು) ಬಲು ಸುಂದರಳಾದ, ಸಾಕ್ಷಾತ್ - ನೇರವಾಗಿ,
ಕ್ಷಮಾಂ = (ಅವತರಿಸಿರುವ) ಭೂಮಿತಾಯಿಯೇ ಆದ ('ಕ್ಷಮಾ' ಅಥವಾ 'ತಾಳ್ಮೆ'ಯ ಗುಣವೇ ಮೂರ್ತಿವೆತ್ತಂತಿರುವ)
ಕರುಣಯಾ = (ಪರದುಃಖ ನಿರಾಚಿಕೀರ್ಷಾ - ಇತರರು ದುಃಖದಲ್ಲಿರುವ ಅದರಿಂದ ಅವರನ್ನು ಪಾರು ಮಾಡುವ) ದಯಾಗುಣದಿಂದ,
ಅನ್ಯಾಂ = ಬೇರೊಬ್ಬಳಾದ,
ಕಮಲಾಂ ಇವ = ಮಹಾಲಕ್ಷ್ಮಿಯಂತಿರುವ,
ಗೋದಾಂ = ಗೋದಾದೇವಿಯನ್ನು,
ಅನನ್ಯ ಶರಣಃ = ಅನನ್ಯಗತಿಕನಾದ ನಾನು,
ಶರಣಂ = ರಕ್ಷಕಳನ್ನಾಗಿ,
ಪ್ರಪದ್ಯೇ = ಆಶ್ರಯಿಸಿದ್ದೇನೆ  ||1||

    ದೇವೇಂದ್ರನ ಉಪವನಕ್ಕೆ ನಂದನವನವೆಂದು ಹೆಸರು. ಅಲ್ಲಿ ದೇವತೆಗಳೆಲ್ಲರಿಗೂ ಸಂತೋಷವನ್ನುಂಟುಮಾಡುವ ನಾನಾತರಹವಾದ ಪುಷ್ಪಗಳು ಎಲ್ಲ ಕಾಲಗಳಲ್ಲಿಯೂ ಅರಳಿರುತ್ತವೆ. ಅಂತೆಯೇ ಭಗವಂತನಿಗೂ ಮತ್ತಿತರ ಚೇತನವರ್ಗಕ್ಕೂ ಸಂತೋಷವನ್ನುಂಟುಮಾಡುವ, ಎಂದೂ ಬಾಡದ 'ಅಹಿಂಸಾ ಪ್ರಥಮಂ ಪುಷ್ಪಂ, ಪುಷ್ಪಮಿಂದ್ರಿಯ ನಿಗ್ರಹಃ, ಸರ್ವಭೂತದಯಾ ಪುಷ್ಪಂ ಕ್ಷಾಂತಿಃ ಪುಷ್ಪವಿಶೇಷತಃ | ಶಾಂತಿಃ ಪುಷ್ಪಂ ತಪಃ ಪುಷ್ಪಂ ಧ್ಯಾನಂ ಪುಷ್ಪಂ ತಥೈವ ಚ | ಸತ್ಯಂ ಚಾಷ್ಟವಿಧಂ ಪುಷ್ಟಂ ವಿಷ್ಣೋಃ ಪ್ರಿತಿಕರಂ ಮಹತ್||" - ಎಂದು ಹೇಳಲಾಗುವ ಅತ್ಯುತ್ತಮವಾದ ದಿವ್ಯವಾದ ಪುಷ್ಪಭರಿತವಾಗಿದ್ದುದು ಶ್ರೀ ವಿಷ್ಣುಚಿತ್ತರಕುಲ. ವಿಶೇಷವಾಗಿ ಈ ಕುಲದಲ್ಲಿ ಅರಳಿರುವ ಪುಷ್ಪಗಳು ಭಗವಂತನಿಗೆ ಸಂತೋಷವನ್ನುಂಟುಮಾಡುವುದರಿಂದ (ನದಯತಿ ಇತಿನಂದನಂ) ಈ ಕುಲವು ನಂದನವನದಂತೆ ಇದ್ದಿತು. ಇಂದ್ರನ ನಂದನವನದಲ್ಲಿ ಯಾರು ಏನು ಕೇಳಿದರೂ ಕೊಡುವ "ಕಲ್ಪವೃಕ್ಷ" ಇರುವಂತೆ, ಶ್ರೀ ವಿಷ್ಣುಚಿತ್ತರ ಕುಲವೆಂಬ ನಂದನವನದಲ್ಲಿ ಎಲ್ಲ ಚೇತನವರ್ಗಕ್ಕೂ, ಪರಮಾತ್ಮನಿಗೂ ಕೇಳುವುದೆಲ್ಲವನ್ನೂ ಅನುಗ್ರಹಿಸಿಕೊಡುವವಳಾಗಿ ಗೋದಾದೇವಿಯು ಕಲ್ಪಲತೆಯಂತಿದ್ದಾಳೆ.

    ಶ್ರೀರಂಗನಾಥನು ತನ್ನ ದಿವ್ಯದೇಹದಲ್ಲಿ ಶ್ರೀಗಂಧವನ್ನು ಲೇಪನ ಮಾಡಿಕೊಂಡಿದ್ದಾನೆ ಅವನ ದೇಹಾಲಿಂಗನದಿಂದ ಅವನ ವಕ್ಷಸ್ಥಲದಲ್ಲಿನ ಶ್ರೀಗಂಧವು ಗೋದಾದೇವಿಯ ದೇಹಕ್ಕೆ ಅಂಟಿಕೊಂಡು, ಮೊದಲೇ ಸೌಂದರ್ಯದಿಂದ ಕೂಡಿದ್ದರೂ, ಈಗ ಇನ್ನೂ ಅಧಿಕವಾದ ಸೊಬಗಿನಿಂದ ಗೋದೆಯು ಬಹಳ ಸುಂದರವಾಗಿ ಕಾಣುತ್ತಿದ್ದಾಳೆ.

    ಕ್ಷಮಾಗುಣವೇ ಮೂರ್ತಿವೆತ್ತಂತಿರುವುದರಿಂದಲೂ ಮತ್ತು ಸಾಕ್ಷಾತ್ ಭೂದೇವಿ (ಕ್ಷಮಾ)ಯ ಅವತಾರವೇ ಆಗಿದ್ದ ಗೋದಾದೇವಿಯು, ಸಂಸಾರ ಸಾಗರದಲ್ಲಿ ನಾನಾತರಹವಾದ ಜನ್ಮಮರಣ ಚಕ್ರದಲ್ಲಿ ಸಿಲುಕಿ ತೋಳಲುತ್ತಿರುವ ಚೇತನರನ್ನು ಕಂಡು, ಅವರನ್ನು ಆ ದುಃಖದಿಂದ ಪಾರುಮಾಡಬೇಕೆಂಬ ದಯಾಗುಣದಿಂದ ಅವರಿಗೆ ತನ್ನ ಪದ್ಯಮಾಲಿಕೆಗಳ ಮೂಲಕ, ಸಂಸಾರದಿಂದ ಮುಕ್ತಿ ಪಡೆಯಲು ಮಾಡಲೇಬೇಕಾದ 'ಶರಣಾಗತಿ' - ಎಂಬ ಉಪಾಯಾನುಷ್ಠಾನ ಕ್ರಮವನ್ನು ಬೋಧಿಸಿ, ಚೇತನೋದ್ಧಾರ ಮಾಡಿದುದನ್ನು ನೋಡಿದರೆ, ಈಕೆಯೂ ದಯಾಗುಣವೇ ಮೂರ್ತಿವೆತ್ತಂತಿರುವ ಮತ್ತೊಬ್ಬಳಾದ ಮಹಾ ಲಕ್ಷ್ಮೀದೇವಿಯೋ ಎಂದು ತೋರುವ, ಗೋದಾದೇವಿಯನ್ನೇ ಪರಮಾತ್ಮನನ್ನು ಸೇರಲು, ಭಕ್ತಿಯೋಗಾದಿಗಳನ್ನು ಮಾಡಲು ಅಶಕ್ತನಾದ, ಅನನ್ಯಗತಿಕನಾದ ನಾನು, ರಕ್ಷಕಳನ್ನಾಗಿ ಆಶ್ರಯಿಸಿದ್ದೇನೆ. ||1||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ