ಆಚಾರ್ಯತ್ರಯರ ಸಂದೇಶಗಳು

    ದಕ್ಷಿಣದೇಶದಲ್ಲಿ ಸುಪ್ರಸಿದ್ಧರಾಗಿರುವ ವೇದಾಂತಾರ್ಚಾರುಗಳಲ್ಲಿ ಶ್ರೀಮಧ್ವಾಚಾರ್ಯರು, ಶ್ರೀರಾಮಾನುಜಾಚಾರ್ಯರು, ಶ್ರೀಶಂಕರಾಚಾರ್ಯರು - ಈ ಮೂವರ ಸಂದೇಶಗಳು ಈಗಲೂ ಜಿಜ್ಞಾಸುಗಳಿಗೆ ಹಿತವೂ ಪಥ್ಯವೂ ಆಗಿರುತ್ತವೆ. ಈ ಮೂವರ ಸಂದೇಶಗಳನ್ನು ಗುಣೋಪಸಂಹಾರನ್ಯಾಯದಿಂದ ಮನನಮಾಡಿ ಐಕ್ಯತೆಯನ್ನು ಕಾಪಾಡಿಕೊಳ್ಳುವ ಕಾಲವು ಇದಾಗಿರುತ್ತದೆ. ಆದ್ದರಿಂದ ಈ ಆಚಾರ್ಯವರ್ಯರುಗಳ ಉಪದೇಶಗಳನ್ನು ಸಂಕ್ಷಿಪ್ತವಾಗಿ ಮನನಮಾಡಿ ಸಮನ್ವಯವನ್ನು ಸಾಧಿಸಿಕೊಳ್ಳೊಣ.

    ಶ್ರೀಮಧ್ವಾಚಾರ್ಯರು ಶ್ರೀಹರಿಯೇ ಸರ್ವೋತ್ತಮನೂ ಜಗತ್‌ಪ್ರಭುವೂ ಆಗಿದ್ದು ಜೀವರುಗಳೆಲ್ಲರೂ ಅವನ ಅನುಚರರೆಂದೂ ಹರಿಭಕ್ತಿಯಿಂದಲೇ ಜೀವರು ಉದ್ಧಾರವಾಗಬೇಕೆಂದೂ ಬೋಧಿಸಿದ್ದಾರೆ. ಈ ಉಪದೇಶವು ಈಗಿನ ಜನಸಾಮಾನ್ಯರಿಗೆ ಮನನೀಯವಾಗಿದೆ. ಸಂಸ್ಕೃತಭಾಷೆಯಲ್ಲಿರುವ ಶಾಸ್ತ್ರಗ್ರಂಥಗಳನ್ನು ವ್ಯಾಸಂಗ ಮಾಡಿ ವೇದೋಕ್ತವಾದ ಕರ್ಮೋಪಾಸನೆಗಳನ್ನು ಕೈಗೊಂಡು ಪರಮಪುರುಷಾರ್ಥವನ್ನು ಪಡೆಯುವಂಥ ಸಾಧಕರು ಈಗ ತೀರ ವಿರಳರಾಗಿರುತ್ತಾರೆ. ಕಲಿಪ್ರಭಾವದಿಂದ ಈಗ ಯಾವ ವೈದಿಕಯಜ್ಞ, ದಾನ, ತಪಾದಿಗಳಾಗಲಿ, ಕರ್ಮಸಂನ್ಯಾಸ ಪೂರ್ವಕವಾದ ಧ್ಯಾನ, ಮನನ, ವಿಚಾರ, ಅನುಸಂಧಾನಾದಿಗಳಾಗಲಿ ಯೋಗ್ಯ ರೀತಿಯಲ್ಲಿ ನಡೆಯಲು ಅವಕಾಶವಿಲ್ಲ. ಜನರ ಅಂತಃಕರಣ, ಜೀವನಕ್ರಮ, ಸಂಪಾದನೆ ಎಲ್ಲವೂ ಕಲುಷಿತವಾಗಿವೆ. ಆದ್ದರಿಂದ ಶ್ರೀಹರಿಯ ನಾಮಕೀರ್ತನೆ, ಸ್ಮರಣೆ ಭಕ್ತಿ - ಇವುಗಳೇ ಸುಲಭಸಾಧ್ಯವಾಗಿವೆ ಮತ್ತು ಸಾಧಕರಿಗೆ ಮನಸ್ಸನ್ನು ಏಕಾಗ್ರಗೊಳಿಸಲು ಆಲಂಬನವೂ ಅಗತ್ಯವಾಗಿದ್ದು ಮೂರ್ತಿಪೂಜಾದಿಗಳು ಅವಶ್ಯವಾಗಿವೆ. ಈ ಪರಂಪರೆಯನ್ನು ಬೆಳೆಯಿಸಿ ಸಾಧಕರನ್ನು ಉದ್ದಾರಮಾಡುವ ಕಾರ್ಯದಲ್ಲಿ ಶ್ರೀಮಧ್ವಾಚಾರ್ಯರ ಉಪದೇಶಗಳೂ ಅನುಷ್ಠಾನಗಳೂ ಜನರಿಗೆ ಆದರ್ಶವಾಗಿವೆ - ಎಂಬ ವಿಷಯದಲ್ಲಿ ಅಭಿಪ್ರಾಯಭೇದವಿರಲಾರದು.

    ಶ್ರೀರಾಮಾನುಜಾಚಾರ್ಯರು ಹರಿಭಕ್ತಿಯನ್ನೇ ಮುಖ್ಯವಾಗಿ ಉಪದೇಶಿಸಿದ್ದಾರಾದರೂ ಸಮಾಜದಲ್ಲಿ ಮೇಲು ಕೀಳು ಭಾವನೆಗಳ ನಿಮಿತ್ತ ಉಂಟಾಗಿದ್ದ ಜಾತಿಭೇದವನ್ನು ಭಕ್ತರ ಗುಂಪಿನಲ್ಲಿ ತೆರಬಾರದೆಂಬ ವಿಶಾಲವಾದ ದೃಷ್ಟಿಯನ್ನು ಹೊಂದಿ ಸರ್ವರಿಗೂ ಅಂತರ್ಯಾಮಿಯೂ ಪ್ರೇರಕನೂ ಪ್ರಭುವೂ ಆಗಿರುವ ಶ್ರೀಮನ್ನಾರಾಯಣನನ್ನು ಧ್ಯಾನಾರ್ಚನ ಪ್ರಣಾಮಾದಿಗಳಿಂದ ಆರಾಧಿಸುವದು ಪರಮ ಪುರುಷಾರ್ಥಕ್ಕೆ ಸಾಧನವೆಂದು ಭೋಧಿಸಿದರು. ಅವರು ಭಗವತ್‌ಪ್ರಾಪ್ತಿಗೆ ಪ್ರಪತ್ತಿ ಅಥವಾ ಶರಣಾಗತಿಯು ಮುಖ್ಯಸಾದನವೆಂಬುದನ್ನು ತಿಳಿಸಿಕೊಟ್ಟು ಸಕಲಜೀವರಾಶಿಗಳಲ್ಲಿಯೂ ಅಂತರ್ಯಾಮಿಯಾಗಿರುವ ಆ ನಾರಾಯಣನು ತನ್ನ ವಿಶಿಷ್ಠವಾದ ಗುಣನಾಮರೂಪ-ವಿಭೂತಿಬಲಶಕ್ತಿ-ಐಶ್ವರ್ಯಗಳಿಂದ ಕೂಡಿ ಅಪ್ರಾಕೃತಶರೀರವುಳ್ಳವನಾಗಿದ್ದು ತನ್ನ ಪರಮಧಾಮದಲ್ಲಿದ್ದುಕೊಂಡಿರುವನೆಂದೂ ಅವನನ್ನು ಆರಾಧಿಸಿ ಮುಕ್ತಿಯನ್ನು ಪಡೆಯಬೇಕೆಂದೂ ತಿಳಿಸಿದರು. ಗ್ರಂಥರಚನೆಗಿಂತ ಹೆಚ್ಚಾಗಿ ಸಮಾಜ ಸೇವೆಯನ್ನು ಕೈಗೊಂಡು ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸಿದರು ಕರುಣೆಯೇ ಇವರ ಜೀವನಾದರ್ಶವಾಗಿತ್ತು. ಇಂಥ ಮಹನೀಯರ ಆದರ್ಶವು ಎಲ್ಲರಿಗೂ ಈಗಲೂ ಮೇಲುಪಂಕ್ತಿಯಾಗಿದೆ.

    ಶ್ರೀಶಂಕರಾಚಾರ್ಯರು ಚಿಕ್ಕವಯಸ್ಸಿನಲ್ಲೇ ವೇದ ಶಾಸ್ತ್ರಗಳನ್ನೆಲ್ಲಾ ಕಲಿತು ವೇದದ ಮತ್ತೊಂದು ಮುಖ್ಯ ಭಾಗವಾದ ಜ್ಞಾನಕಾಂಡವನ್ನು ಎತ್ತಿಹಿಡಿದು ಜ್ಞಾನದಿಂದಲೇ ಮುಕ್ತಿ - ಎಂಬ ಸಿದ್ಧಾಂತವನ್ನು ಊರ್ಜಿತಗೊಳಿಸಿದರು. ಈ ಜ್ಞಾನವು ಸಾರ್ವತ್ರಿಕಪೂರ್ಣಾನುಭವದ ತಳಹದಿಯುಳ್ಳದ್ದಾಗಿದ್ದು ಎಲ್ಲಾ ದೇಶದ ಎಲ್ಲಾ ಕಾಲದ ಎಲ್ಲಾ ಜನರಿಗೂ ಅನ್ವಯಿಸುವಂಥದ್ದಾಗಿದ್ದು ವರ್ಣಾಶ್ರಮ-ಜಾತಿಲಿಂಗಾದಿ ಭೇದಗಳನ್ನು ಮೀರಿದ್ದಾಗಿದೆ ಎಂದು ಶ್ರುತಿಯುಕ್ತ್ಯನುಭವಗಳ ಸಮನ್ವಯದಿಂದ ಪ್ರತಿಪಾದಿಸಿದರು ಇಂಥ ಜ್ಞಾನ ಸಂಪಾದನೆಗೆ ಎಲ್ಲರಿಗೂ ಅಧಿಕಾರವಿದೆಯೆಂದೂ ವಿವೇಕ-ವೈರಾಗ್ಯ-ಶಮದಮಾದಿಗಳು, ಮುಮುಕ್ಷುತ್ವ ಇವು ಅತ್ಯಗತ್ಯವಾಗಿ ಬೇಕಾದ ಅರ್ಹತೆಗಳೆಂದೂ ತಿಳಿಸಿದರು. ಈ ಜ್ಞಾನವು ಸಂನ್ಯಾಸಸಹಿತವಾದದ್ದೇ ಆದರೆ ಚಿನ್ನಕ್ಕೆ ಸುವಾಸನೆಯಿದ್ದಂತೆ ಎಂದು ತಿಳಿಸಿದರು. ಜ್ಞಾನಿಯು ಸರ್ವಕರ್ಮಾತೀತನಾದರೂ ಲೋಕಸಂಗ್ರಹಕ್ಕಾಗಿ ತಾನು ಕೂಡ ಕರ್ಮವನ್ನು ಕೈಗೊಂಡು ಉಳಿದವರಿಗೆ ಆದರ್ಶನಾಗುತ್ತಾನೆಂದು ತಿಳಿಸಿದರು. ಉತ್ತಮಾಧಿಕಾರಿಗಳಿಗೆ ಮಾತ್ರ ದಕ್ಕುವಂಥ ಈ ಜ್ಞಾನವು ಎಟುಕಲಾರದವರಿಗೆ ಅವರವರ ಸ್ವಧರ್ಮಾಚರಣೆಯೇ ಶ್ರೇಷ್ಠವೆಂದೂ ಅದನ್ನು ಕೂಡ ನಿಷ್ಕಾಮರಾಗಿ ಆಚರಿಸಿದರೆ ಮುಂದೆ ಬ್ರಹ್ಮಜ್ಞಾನಕ್ಕೆ ತಕ್ಕವರಾಗುವರೆಂದೂ ತಿಳಿಸಿದರು. ತಮ್ಮ ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲಿ ಭರತಖಂಡದಲ್ಲೆಲ್ಲ ಸಂಚರಿಸಿ ಕರ್ಮ-ಜ್ಞಾನಗಳ ಮರ್ಮವನ್ನು ಬೋಧಿಸಿ ವೈದಿಕಸಂಸ್ಖೃತಿಯನ್ನು ಪುನರುಜ್ಜೀವನಗೊಳಿಸಿ ಜಗದ್ಗುರುಗಳಾಗಿ ವಿರಾಜಮಾನರಾದರು.

    ಭಾರತಾಂಬೆಯ ಸುಪುತ್ರರಾದ ಈ ಆಚಾರ್ಯತ್ರಯರ ಮಾರ್ಗದರ್ಶನದಲ್ಲಿ ನಾವು ಜೀವನವನ್ನು ಇಹಪರಗಳೆರಡಕ್ಕೂ ಹೊಂದಿಕೊಂಡು ಶಾಂತಿಸುಖಗಳಿಂದ ಬಾಳುತ್ತಾ ಬದುಕನ್ನು ಸಾರ್ಥಕಪಡಿಸಿಕೊಳ್ಳೊಣ. ಈ ಉದ್ದೇಶದ ಸಾಧನೆಗೆ ಪೂರಕವಾಗಿ ಈಗ ಪೀಠಾಧಿಪತಿಗಳಾಗಿರುವ ಉಪದೇಶಗಳನ್ನೂ ನೀಡುತ್ತಾ ಪರಸ್ಪರ ಸಂಮಿಳತರಾಗಿ ಧರ್ಮ-ಬೋಧೆ, ವೇದಾಂತಬೋಧೆಗಳನ್ನು ದಯಪಾಲಿಸಿಬ್ರಾಹ್ಮ ತೇಜಸ್ಸನ್ನು ಬೆಳಗಲೆಂದೂ ಆ ಮೂಲಕ ಜಗತ್ಕಲ್ಯಾಣವನ್ನು ಸಾಧಿಸಲೆಂದೂ ಆಶಿಸೋಣ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ