ದೇವೀ ಮಹಾತ್ಮ್ಯ

ಶರಣಾಗತದೀನಾರ್ತಪರಿತ್ರಾಣಪರಾಯಣೇ |
ಸರ್ವಸ್ಯಾರ್ತಿಹರೇ ದೇವಿ ನಾರಾಯಣೀ ನಮೋಸ್ತುತೇ ||

    ಭಗವಾನ್ ವೇದವ್ಯಾಸಮಹರ್ಷಿಗಳು ವೇದಗಳ ಉಪಬೃಂಹಣಕ್ಕಾಗಿ ಹದಿನೆಂಟು ಮಹಾಪುರಾಣಗಳನ್ನೂ ಮಹಾಭಾರತವೆಂಬ ಇತಿಹಾಸವನ್ನೂ ಬರೆದು ಉಪಕಾರಮಾಡಿರುತ್ತಾರೆ. ವೇದಗಳಲ್ಲಿಯೂ ಧರ್ಮಾರ್ಥಕಾಮಮೋಕ್ಷಗಳೆಂಬ ಪುರುಷಾರ್ಥವಿಚಾರಗಳು ಉಪದೇಶಿಸಲ್ಪಟ್ಟಿವೆಯಾದರೂ ವಿಶೇಷವಾಗಿ ಕರ್ಮ ರಹಸ್ಯಗಳನ್ನೂ ದೇವತೆಗಳನ್ನೂ ಆಯಾ ದೇವತೆಗಳನ್ನು ಕುರಿತು ಐಹಿಕಾಮುಷ್ಮಿಕ ಫಲಪ್ರಾಪ್ತಿಗಾಗಿ ಮಾಡಬೇಕಾದ ಯಜ್ಞಯಾಗಾದಿಗಳನ್ನೂ ಅವುಗಳ ಅಂಗೋಪಾಂಗಗಳನ್ನೂ ದೇವತಾಸ್ತುತಿಗಳನ್ನೂ ಹೆಚ್ಚಾಗಿ ವಿವರಿಸಿರುತ್ತದೆ. ವೇದಗಳಲ್ಲಿರುವ ವೈದಿಕಭಾಷೆಯೂ ಸ್ವರವರ್ಣಪದೋಚ್ಛಾರಣಾದಿಗಳೂ ಅಸಾಧಾರಣವಾಗಿದ್ದು ಜನಸಾಮಾನ್ಯರು ಅವುಗಳನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗುವಂತಿಲ್ಲ ಆದ್ದರಿಂದ ಸುಲಭವಾದ ಲೌಕಿಕಸಂಸ್ಕೃತಭಾಷೆಯಲ್ಲಿ ಕಥೆ, ಉಪಾಖ್ಯಾನಗಳಿಂದ ಕೂಡಿದ ಧರ್ಮಾದಿ ಪುರುಷಾರ್ಥವಿಚಾರಗಳನ್ನು ಪುರಾಣಗಳಲ್ಲಿ ಸರ್ವರ ಅನುಕೂಲಕ್ಕಾಗಿ ವಿವರಿಸಿ ಬರೆದಿರುತ್ತದೆ ಇಂಥ ಪುರಾಣಗಳಲ್ಲಿ ಹದಿನೆಂಟು ಮಹಾ ಪುರಾಣಗಳು ಒಟ್ಟು ನಾಲ್ಕು ಲಕ್ಷ ಸಂಖ್ಯೆಯ ಗ್ರಂಥಗಳಿಂದ ಕೂಡಿದ್ದು ಈಗಲೂ ಭಾರತದೇಶದ ಜ್ಞಾನಸಂಸ್ಕೃತಿಯಲ್ಲಿ ಮುಖ್ಯಪಾತ್ರವನ್ನು ವಹಿಸಿವೆ. ಹದಿನೆಂಟು ಮಹಾಪುರಾಣಗಳಲ್ಲಿ 'ಮ'ಕಾರದಿಂದ ಪ್ರಾರಂಭವಾಗುವ ಹೆಸರುಳ್ಳ ಎರಡು ಪುರಾಣಗಳಲ್ಲಿ, ಒಂಭತ್ತುಸಹಸ್ರ ಗ್ರಂಥಸಂಖ್ಯೆಯ ಮಾರ್ಕಂಡೇಯಪುರಾಣವು ಮೊದಲನೆಯದಾಗಿದೆ. ಇದರಲ್ಲಿಯೇ 'ದುರ್ಗಾಸಪ್ತಶತೀ' ಎಂಬ ದೇವೀ ಮಹಾತ್ಮ್ಯಭಾಗವು ಅಂತರ್ಗತವಾಗಿದೆ. ಆದ್ದರಿಂದ ಮಾರ್ಕಂಡೇಯಪುರಾಣವನ್ನು ಸ್ವಲ್ಪಮಟ್ಟಿಗೆ ಈಗ ಪರಿಚಯಮಾಡಿಕೊಳ್ಳುವದು ಅಗತ್ಯವಾಗಿದೆ.

    ಮಾರ್ಕಂಡೇಯಪುರಾಣದಲ್ಲಿ ಒಳವಿಭಾಗಗಳು ಕಂಡುಬರುವದಿಲ್ಲ ಇದರಲ್ಲಿ ಒಟ್ಟು 134 ಅಧ್ಯಾಯಗಳಿವೆ, 78ನೆಯ ಅಧ್ಯಾಯದಿಂದ 91ನೆಯ ಅಧ್ಯಾಯದವರೆಗಿನ ಹದಿಮೂರು ಅಧ್ಯಾಯಗಳು 'ದುರ್ಗಾಸಪ್ತಶತೀ' ಎಂದು ಪ್ರಸಿದ್ಧವಾಗಿದೆ. ಈ ಭಾಗದಲ್ಲಿ ಹೆಸರಿಗೆ ತಕ್ಕಂತೆ ಏಳುನೂರು ಶ್ಲೋಕಗಳಿವೆ ಭಗವದ್ಗೀತೆಯಲ್ಲಿಯೂ ಏಳುನೂರು ಪದ್ಯಗಳಿವೆಯಾದ್ದರಿಂದ ವೈಷ್ಣವರು ಭಗವದ್ಗೀತೆಗೆ ಕೊಟ್ಟಿರುವ ಸ್ಥಾನವನ್ನೇ ಶಾಕ್ತರು ದುರ್ಗಾಸಪ್ತಶತಿಗೆ ಕೊಟ್ಟಿರುತ್ತಾರೆ ಹಾಗೆಯೇ ಇಲ್ಲಿಯೂ ಹನ್ನೊಂದನೆಯ ಅಧ್ಯಾಯವು ದೇವಿಯ ಸ್ತೋತ್ರ ರೂಪವಾಗಿದ್ದು ಗೀತೆಯ 11ನೆಯ ಅಧ್ಯಾಯವನ್ನೇ ಹೋಲುತ್ತಿದೆ ಗೀತೆಯು ಭಗವಂತನಿಂದ ಅರ್ಜುನನಿಗೆ ಉಪದೇಶಿಸಲ್ಪಟ್ಟಂತೆಯೇ ಇದು ಮಾರ್ಕಂಡೇಯ ಮಹರ್ಷಿಗಳಿಂದ ಕ್ರೌಷ್ಟುಕಿ - ಎಂಬ ಋಷಿಗೆ ಉಪದೇಶಿಸಲ್ಪಟ್ಟಿದೆ ಆದ್ದರಿಂದಲೇ ಈ ಮಹಾತ್ಮ್ಯಗ್ರಂಥದಲ್ಲಿ ಮಾರ್ಕಂಡೇಯ ಉವಾಚ ಅಥವಾ ಋಷಿರುವಾಚ ಎಂಬ ವಾಕ್ಯವು ನಡುನಡುವೆ ಬರುತ್ತದೆ ಹೀಗೆ ಮಾರ್ಕಂಡೇಯಮಹರ್ಷಿಗಳು ಉಪದೇಶಿಸಿದ್ದನ್ನೇ ನಾಲ್ಕು ಪಕ್ಷಿಗಳು ವ್ಯಾಸ ಶಿಷ್ಯನಾದ ಜೈಮಿನಿಗೆ ಉಪದೇಶಿಸಿದವೆಂದು ಪುರಾಣವು ಪ್ರಾರಂಭದ ಅಧ್ಯಾಯಗಳಲ್ಲಿ ತಿಳಿಸಿದೆ ಆ ಕಥೆಯನ್ನು ಈಗ ಕೇಳೋಣ.

    ಒಮ್ಮೆ ವ್ಯಾಸಶಿಷ್ಯನಾದ ಜೈಮಿನಿಯು ತನಗೆ ಮಹಾಭಾರತ ಇತಿಹಾಸದಲ್ಲಿ ಕಂಡುಬಂದ ಕೆಲವು ಸಂಶಯಗಳನ್ನು ಪರಿಹರಿಸಿಕೊಳ್ಳಲು ಮಾರ್ಕಂಡೇಯ ಋಷಿಗಳಲ್ಲಿಗೆ ಬಂದನು ಮುನಿಗಳನ್ನು ಕಂಡು ನಮಸ್ಕರಿಸಿ ತನ್ನ ಪ್ರಶ್ನೆಗಳನ್ನು ಮುಂದಿಡಲಾಗಿ ಅವರು "ಈಗ ಕರ್ಮಾನುಷ್ಠಾನಕಾಲವಾಗಿದೆ ನನಗೆ ಉತ್ತರವನ್ನು ಹೇಳಲು ಬಿಡುವು ಇಲ್ಲ; ಆದರೆ ಯಾರು ಉತ್ತರವನ್ನು ಹೇಳಬಲ್ಲರೋ ಅಂಥವರನ್ನು ತಿಳಿಸುತ್ತೇನೆ; ನೀನು ವಿಂಧ್ಯಾರಣ್ಯಮಧ್ಯದಲ್ಲಿರುವ ದ್ರೋಣಪುತ್ರರಾದ (ಶಾಪದಿಂದ ಈಗ ಪಕ್ಷಿಗಳಾಗಿ ಹುಟ್ಟಿರುವ) ಪಿಂಗಾಕ್ಷ, ವಿಬೋಧ, ಸುಪುತ್ರ, ಸುಮುಖ- ಎಂಬ ಹೆಸರಿನ ನಾಲ್ಕು ಹಕ್ಕಿಗಳನ್ನು ಕೇಳು ಅವರು ನಿನ್ನ ಸಂಶಯಗಳನ್ನೆಲ್ಲ ಪರಿಹರಿಸುವರು" ಎಂದರು ಆಗ ಜೈಮಿನಿಯು ಕುತೂಹಲಾವಿಷ್ಟನಾಗಿ 'ಪೂಜ್ಯರೆ, ಆಗಬಹುದು; ಅವರುಗಳು ಯಾರು? ಅವರಿಗೆ ಶಾಪವೇಕೆ ಬಂತು? ಎಲ್ಲ ವಿವರಗಳನ್ನೂ ತಿಳಿಸಬೇಕೆಂದು ಬೇಡಿಕೊಂಡನು ಆಗ ಮಾರ್ಕಂಡೆಯರು ಹೀಗೆಂದರು :

    ಒಮ್ಮೆ ದೇವೇಂದ್ರನು ಕೆಲವು ಅಪ್ಸರೆಯರೊಡಗೂಡಿ ನಂದನವನದಲ್ಲಿ ವಿಹರಿಸುತ್ತಿದ್ದಾಗ ನಾರದರು ಅಲ್ಲಿಗೆ ಬಂದರು ಆಗ ದೇವೇಂದ್ರನು ಅವರಿಗೆ ಆಸನವನ್ನು ಕೊಟ್ಟು ಗೌರವಿಸಿ ಅಪ್ಸರೆಯರು ನೃತ್ಯಮಾಡುವಂತೆ ಅಪ್ಪಣೆ ಮಾಡಬೇಕೆಂದು ನಾರದರಲ್ಲಿ ಕೇಳಿಕೊಂಡನು ಅವರಾದರೋ, 'ನೃತ್ಯವನ್ನು ಎಲ್ಲರೂ ಮಾಡಿಯಾರು; ಆದರೆ ಯಾರು ಶ್ರೇಷ್ಠರೋ ಅವರು ಮಾತ್ರ ಮಾಡಲಿ' ಎಂದರು ಆಗ ಪ್ರತಿಯೊಬ್ಬ ಆಪ್ಸರೆಯರೂ ಇಂದ್ರನ ಬಳಿಸಾರಿ ನಾನು, ತಾನು-ಶ್ರೇಷ್ಠಳೆಂದು ಹೇಳಿಕೊಳ್ಳಲಾರಂಭಿಸಿದರು. ಈ ಸಮಸ್ಯೆಯನ್ನು ಪರಿಹರಿಸಲು ನಾರದರು 'ಯಾವ ಅಪ್ಸರೆಯು ದುರ್ವಾಸರ ತಪೋಭಂಗವನ್ನು ಮಾಡಬಲ್ಲಳೋ ಅವಳೇ ಶ್ರೇಷ್ಠಳು' ಎಂದು ಘೋಷಿಸಿದರು. ಆಗ ಯಾರೂ ಈ ಕೆಲಸಕ್ಕೆ ಮುಂದಾಗಲಿಲ್ಲ 'ವಪು' ಎಂಬವಳು ಮಾತ್ರ ಈ ಕೆಲಸವನ್ನು ಸಾಧಿಸುವದಾಗಿ ಹಟತೊಟ್ಟು ದೂರ್ವಾಸರಿದ್ದಲ್ಲಿಗೆ ಬಂದು ತನ್ನ ಶೃಂಗಾರಚೇಷ್ಟೆಗಳನ್ನಾರಂಭಿಸಿದಳು ದೂರ್ವಾಸರು ಕುಪತರಾಗಿ ಆಕೆಗೆ ಹಕ್ಕಿಯ ಜನ್ಮವುಂಟಾಗುವಂತೆಯೂ ಆ ಜನ್ಮದಲ್ಲಿ ನಾಲ್ಕು ಮಕ್ಕಳಾದ ನಂತರ ಬಿಡುಗಡೆಯಾಗಿ ಮತ್ತೆ ಸ್ವರ್ಗವನ್ನು ಸೇರುವಂತೆಯೂ ಶಪಿಸಿಬಿಟ್ಟರು.

    ಅದೇ ಸಮಯದಲ್ಲಿ ಅರಿಷ್ಟನೇಮಿ - ಎಂಬ ಪಕ್ಷಿಶ್ರೇಷ್ಠನ ವಂಶದಲ್ಲಿ ಜನಿಸಿದ ಪ್ರಲೋಲುಪ-ಎಂಬವನಿಗೆ ಕಂಕ, ಕಂಧರ - ಎಂಬ ಇಬ್ಬರು ಮಕ್ಕಳಿದ್ದರು ಒಮ್ಮೆ ಕಂಕನು ಕೈಲಾಸದ ತಪ್ಪಲಿನಲ್ಲಿ ಮೇನಕೆಯ ಮಗಳಾದ ಒಬ್ಬ ಹೆಂಗಸಿನೊಡನೆ ವಿಹರಿಸುತ್ತಿದ್ದ ವಿದ್ಯುದ್ರೂಪನೆಂಬ ಕುಬೇರನ ಸೇವಕನೊಬ್ಬನನ್ನು ಕಂಡನು ಅವನು 'ತಾನು ಸ್ತ್ರೀಯೊಡನೆ ವಿಹಾರಮಾಡುವ ಜಾಗಕ್ಕೆ ನೀನೇಕೆ ಬಂದೆ'? ಎಂದು ಕಂಕನ್ನು ಆಕ್ಷೇಪಿಸಿದನು. 'ಬೆಟ್ಟದ ಪ್ರದೇಶವು ಎಲ್ಲರಿಗೂ ಸೇರಿದ್ದು; ಏಕೆ ಬರಬಾರದು'? ಎಂದು ಕಂಕನು ಪ್ರತ್ಯುತ್ತರವನ್ನು ಕೊಡಲಾಗಿ ಕೋಪಗೊಂಡ ವಿದ್ಯುದ್ರೂಪನು ಕಂಕನನ್ನು ಸಂಹರಿಸಿಬಿಟ್ಟನು ಆಗ ಕಂಧರನು ಈ ವಿಷಯವನ್ನು ತಿಳಿದು ತನ್ನ ಅಣ್ಣನನ್ನು ಕೊಂದ ಯಕ್ಷನ ಮೇಲೆ ಸೇಡುತೀರಿಸಿಕೊಳ್ಳಲು ಹವಣಿಸುತ್ತಿದ್ದು ಸಮಯವನ್ನು ಕಾಯ್ದು ವಿದ್ಯುದ್ರೂಪನೊಡನೆ ಯುದ್ಧಮಾಡಿ ಅವನ್ನು ಕೊಂದು ಬಿಟ್ಟನು ಆಗ ವಿದ್ಯುದ್ರೂಪನೊಡನೆ ಇದ್ದ ಅಪ್ಸರಸ್ತ್ರೀಯು ಕಂಧರನಿಗೆ ಶರಣಾಗಳಾಗಿ ತಾನೇ ಹೆಂಡತಿಯಾಗುವದಾಗಿ ಕೇಳಿಕೊಂಡಳು. ಕಂಧರನು ಒಪ್ಪಿ ಆಕೆಯನ್ನು ಕರೆದೊಯ್ದನು. ಅವಳಾದರೋ ಹಕ್ಕಿಯ ರೂಪವನ್ನೇ ಕಂಧರನೊಡನೆ ವಿಹರಿಸುತ್ತಿದ್ದಳು ಆಕೆಯಲ್ಲಿಯೇ 'ತಾರ್ಕ್ಷಿ' ಎಂಬ ಹೆಣ್ಣುಮಗವನ್ನು ಕಂಧರನು ಪಡೆದನು ಅವಳೇ ಹಿಂದೆ ದೂರ್ವಾಸಶಾಪಗ್ರಸ್ತಳಾಗಿದ್ದವಪುವೆಂಬ ಅಪ್ಸರೆಯಾಗಿದ್ದಳು.

    ಕಾಲಕ್ರಮದಲ್ಲಿ ತಾರ್ಕ್ಷಿಯು ಮಂದಪಾಲನೆಂಬ ಪಕ್ಷಿಯ ನಾಲ್ಕು ಜನ ಮಕ್ಕಳಲ್ಲಿ ಕಡೆಯವನಾದ 'ದ್ರೋಣ'ನೆಂಬುವನನ್ನು ಮದುವೆಯಾದಳು. ಅವನಿಂದ ಗರ್ಭವನ್ನು ಧರಿಸಿದ್ದ ಆಕೆಯು ಆಗ್ಗೆ ಕುರುಕ್ಷೇತ್ರದಲ್ಲಿ ನಡೆಯುತ್ತಿದ್ದ ಕೌರವಪಾಂಡವರ ಯುದ್ಧವನ್ನು ನೋಡಲು ಹೋಗಿ ಭಗದತ್ತನ ರಥದ ಮೇಲ್ಭಾಗದಲ್ಲಿ ಸೇರಿಕೊಂಡಳು. ಭಗದತ್ತನಿಗೂ ಅರ್ಜುನನಿಗೂ ನಡೆದ ಮಹಾಯುದ್ಧದಲ್ಲಿ ಅರ್ಜುನನ ಬಾಣಗಳಿಂದ ಸೀಳಲ್ಪಟ್ಟ ರಥದಲ್ಲಿ ಅಡಗಿದ್ದ ತಾರ್ಕ್ಷಿಯ ಗರ್ಭವೂ ಸೀಳಿಹೋಗಿ ಆಕೆಯು ಮೃತಪಟ್ಟಳು ಆ ಸಮಯಕ್ಕೆ ಅವಳ ಹೊಟ್ಟೆಯಿಂದ ನಾಲ್ಕು ಮೊಟ್ಟೆಗಳು ಕೆಳಗೆ ಉದುರಿದವು ನೆಲವು ಕೆಸರಾಗಿದ್ದುದರಿಂದಲೂ ಮುಂದಿನ ಘಟನೆಗಳ ದೃಷ್ಟಿಯಿಂದಲೂ ಅವು ಒಡೆಯಲಿಲ್ಲ ಅದೇ ಸಮಯಕ್ಕೆ ಭಗದತ್ತನ ಆನೆಯ ಕೊರಳಿಗೆ ಹೂತುಕೊಂಡಿತು ಗಂಟೆಯ ಒಳಗಡೆ ಸೇರಿಹೋದ ಮೊಟ್ಟೆಗಳಿಗೆ ಯುದ್ಧರಂಗದಲ್ಲಿ ಮತ್ತೇನೂ ಅಪಾಯವೂ ಒದಗಲಿಲ್ಲ ಯುದ್ಧವೆಲ್ಲವೂ ಪೂರೈಸಿದ ಅನಂತರ ಅಲ್ಲಿಯೇ ರಣರಂಗದಲ್ಲಿ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಉಪದೇಶಮಾಡುತ್ತಿದ್ದ ಧರ್ಮವ್ಯಾಖ್ಯಾನವನ್ನು ಕೇಳುವದಕ್ಕಾಗಿ ಶಮೀಕನೆಂಬ ಋಷಿಯು ತನ್ನ ಶಿಷ್ಯನೊಡನೆ ಅಲ್ಲಿಗೆ ಬರುತ್ತಿದ್ದನು ಹಾದಿಯಲ್ಲಿ ಬಿದ್ದಿದ್ದ ಘಂಟೆಯೊಳಗಿನಿಂದ ಹಕ್ಕಿಗಳ ಚಿಲಿಪಿಲಿಶಬ್ದಗಳು ಬಂದುದನ್ನು ನೋಡಿ ಆತನು ಘಂಟೆಯನ್ನು ಮೇಲೆತ್ತಿದನು ಅಲ್ಲಿದ್ದ ನಾಲ್ಕು ಪುಟ್ಟ ಹಕ್ಕಿಗಳನ್ನು ನೋಡಿ ಋಷಿಗೆ ಆಶ್ಚರ್ಯವಾಗಿಬಿಟ್ಟಿತು ಹಣೆಯಬರಹವು ಗಟ್ಟಿಯಾಗಿದ್ದಲ್ಲಿ ಎಂಥ ಸಂದರ್ಭದಲ್ಲಿಯೂ ಪ್ರಾಣಿಯು ಸಾಯುವದಿಲ್ಲವೆಂಬ ನಿಜವನ್ನು ಕಂಡುಕೊಂಡ ಆ ಋಷಿಯು ಮೆಲ್ಲನೆ ಅವುಗಳನ್ನು ತನ್ನ ಆಶ್ರಮಕ್ಕೆ ಸಾಗಿಸಿ ಅಲ್ಲಿ ಬೆಕ್ಕು, ಗಿಡಗ ಮುಂತಾದವುಗಳಿಂದ ತೊಂದರೆಯಾಗದಂತೆ ನೋಡಿಕೊಂಡು ಆಹಾರಾದಿಗಳನ್ನು ಕೊಟ್ಟು ಬೆಳೆಯಿಸಿದನು ಆ ಹಕ್ಕಿಗಳು ದೊಡ್ಡದಾಗಿ ರೆಕ್ಕೆಗಳು ಹುಟ್ಟಿದ ಅನಂತರ ಆಕಾಶದಲ್ಲೆಲ್ಲ ಸುತ್ತಾಡಿ ಜಗತ್ತನ್ನು ಪರಿಚಯಮಾಡಿಕೊಂಡು ಮತ್ತೆ ಋಷಿಯ ಬಳಿಗೆ ಬಂದವು ಆ ವೇಳೆಗೆ ಅಲ್ಲಿಯ ಸನ್ನಿವೇಶದ ನಿಮಿತ್ತ ಅವುಗಳಿಗೆ ಜ್ಞಾನೋದಯವಾಯಿತು ಅವು ಒಟ್ಟಾಗಿ ಕೂಡಿ ಶಮೀಕ ಋಷಿಯನ್ನು ನಮಸ್ಕರಿಸಿ ಘಂಟೆಯ ಒಳಗಿನಿಂದ ಮೇಲೆತ್ತಿ ಬದುಕಿಸಿ ಸಾಕಿ ಬೆಳೆಸಿದ್ದಕ್ಕಾಗಿ ಋಷಿಗೆ ತಮ್ಮ ಕೃತಜ್ಞತೆಯನ್ನರ್ಪಿಸಿದವು ಆಗ ಋಷಿಯು ಹಕ್ಕಿಗಳನ್ನು ಕುರಿತು 'ನೀವು ಯಾರು? ಹಿಂದಿನ ಜನ್ಮದಲ್ಲಿ ಯಾರಾಗಿದ್ದಿರಿ? ಈ ಹಕ್ಕಿಯ ಜನ್ಮವು ನಿಮಗೇಕೆ ಬಂತು? ಎಂದು ಕೇಳಲಾಗಿ ಅವು ತಮ್ಮ ಕಥೆಯನ್ನು ಹೀಗೆ ಹೇಳಿಕೊಂಡವು.

    "ಪೂಜ್ಯನೆ, ವಿಪುಲಸ್ವಾನ್ - ಎಂಬ ಹೆಸರಿನ ಋಷಿಯೊಬ್ಬನಿದ್ದನು ಅವನಿಗೆ ಸುಕೃಷ, ತುಂಬುರು ಎಂಬ ಇಬ್ಬರು ಮಕ್ಕಳಿದ್ದರು ಸುಕೃಷನ ಮಕ್ಕಳೇ ನಾವು ನಾಲ್ವರು ನಮ್ಮ ಪಿತಾಮಹನು ಮಹಾತಪಸ್ವಿಯು ಅವನ ಶುಶ್ರೂಷೆ ಹಾಗೂ ಸೇವೆಗಳಲ್ಲಿಯೇ ನಿರತರಾದ ನಾವು ಹಿರಿಯರಲ್ಲಿ ಬಹಳ ಭಕ್ತಿಯುಳ್ಳವರಾಗಿದ್ದೇವೆ. ಒಮ್ಮೆ ದೇವೇಂದ್ರನು ನಮ್ಮ ಅಜ್ಜನ ತಪಸ್ಸು, ಔದಾರ್ಯಾದಿಗಳನ್ನು ಪರೀಕ್ಷಿಸಲು ಪಕ್ಷಿರೂಪವನ್ನು ಧರಿಸಿಬಂದು, 'ಋಷಿಶ್ರೇಷ್ಠನೆ, ನಾನು ತುಂಬ ಹಸಿದಿದ್ದೇನೆ, ಏನಾದರೂ ಆಹಾರವನ್ನು ಕರುಣಿಸು' ಎಂದು ಬೇಡಿದನು ಆಗಲಿ ಎಂದು ಮಾತುಕೊಟ್ಟ ನಮ್ಮಜ್ಜನು 'ನಿನಗೆ ಏನು ಆಹಾರವು ಬೇಕು?' ಎನ್ನಲಾಗಿ 'ಮನುಷ್ಯರ ಮಾಂಸವು ಬೇಕು' ಎಂದು ಪಕ್ಷಿರೂಪದ ಇಂದ್ರನು ಕೇಳಿದನು ಆಗ ಋಷಿಯು 'ಹೀಗೆ ಋಷ್ಯಾಶ್ರಮದಲ್ಲಿ ಕೇಳುವದು ಸರಿಯಲ್ಲ; ಆದರೂ ನಾನು ಮಾತುಕೊಟ್ಟುಬಿಟ್ಟಿರುವೆನಾದ್ದರಿಂದ ನಿನಗೆ ಆಹಾರವನ್ನು ಒದಗಿಸುವೆನು' ಎಂದು ಹೇಳಿ ನಮ್ಮಲ್ಲಿ ಒಬ್ಬೊಬ್ಬರನ್ನು ಕರೆದು ಪಕ್ಷಿಗೆ ಆಹಾರವಾಗುವಂತೆ ಕೇಳಿದನು ನಾವು ಯಾರೂ ಶರೀರತ್ಯಾಗಮಾಡಲು ಒಪ್ಪಲಿಲ್ಲ ಕಡೆಗೆ ಋಷಿಗೆ ಕೋಪವುಂಟಾಗಿ ನೀವುಗಳೆಲ್ಲರೂ ತಿರ್ಯಗ್ಜನ್ಮವನ್ನು ಪಡೆಯಿರಿ ಎಂದು ಶಪಿಸಿಬಿಟ್ಟನು ಅನಂತರ ಪಕ್ಷಿಯನ್ನು ಕುರಿತು 'ನನ್ನನ್ನೇ ಆಹಾರವಾಗಿ ಸ್ವೀಕರಿಸಿಬಿಡು' ಎಂದನು ಆಗ ಪಕ್ಷಿಯು ಬದುಕಿರುವವರನ್ನು ನಾವು ಮುಟ್ಟುವದಿಲ್ಲ ಯೋಗಾಭ್ಯಾಸದಿಂದ ನೀನು ದೇಹತ್ಯಾಗಮಾಡಿಬಿಡು; ಅನಂತರ ಸ್ವೀಕರಿಸುವೆನು' ಎಂದಿತು ಅದರಂತೆಯೇ ಋಷಿಯು ದೇಹತ್ಯಾಗಕ್ಕೆ ಸಿದ್ಧನಾದನು ಆಗ ದೇವೇಂದ್ರನು ಪ್ರತ್ಯಕ್ಷನಾಗಿ ಋಷಿಗೆ ವರಪ್ರದಾನಮಾಡಿ ಹೊರಟುಹೋದನು ಅನಂತರ ನಾವುಗಳು ಋಷಿಯನ್ನು ಕುರಿತು ದೇಹವು ಪ್ರತಿಯೊಬ್ಬನಿಗೂ ಪ್ರಿಯವಾದ್ದರಿಂದ ಅದನ್ನು ಬಿಡಲು ಇಷ್ಟವಾಗಲಿಲ್ಲವೆಂದೂ ತಮ್ಮ ತಪ್ಪನ್ನು ಮನ್ನಿಸಿ ಶಾಪವನ್ನು ಹಿಂತೆಗಿದುಕೊಳ್ಳಬೇಕೆಂದೂ ಕೇಳಿಕೊಂಡೆವು ಆದರೆ ಆತನು ತನ್ನ ಮಾತು ಎಂದೂ ಸುಳ್ಳಾಗುವದಿಲ್ಲವೆಂದೂ ಮೊಮ್ಮಕ್ಕಳ ವಿಷಯದಲ್ಲಿಯೂ ಕೋಪವುಂಟಾಗಿ ಶಾಪವು ಹೊರಬರಬೇಕಾದರೆ ಇದು ದೈವಪ್ರೇರಣೆಯೇ ಸರಿ ಎಂದೂ ತಿಳಿಸಿ 'ನೀವುಗಳು ತಿರ್ಯಗ್‌ಜನ್ಮಗಳನ್ನು ಪಡೆದರೂ ಜಾತಿಸ್ಮರರಾಗಿ ಹುಟ್ಟಿ ಜ್ಞಾನದಿಂದ ಪರಮ ಸಿದ್ಧಿಯನ್ನು ಹೊಂದುವಿರಿ; ಚಿಂತಿಸಬೇಡಿರಿ' - ಎಂದು ಅನುಗ್ರಹಿಸಿದನು ಹೀಗೆ ನಾವು ಬ್ರಾಹ್ಮಣಶ್ರೇಷ್ಠರಾಗಿದ್ದು ಈಗ ಹಕ್ಕಿಗಳಾಗಿದ್ದೇವೆ ಎಂದು ತಿಳಿಸಿದವು ಆಗ ಶಮೀಕೃಷಿಯು ಆಶ್ಚರ್ಯಕೊಂಡು ಅವುಗಳನ್ನು ಹರಸಿದನು ಅನಂತರ ಋಷಿಯ ಅಪ್ಪಣೆಯನ್ನು ಪಡೆದು ಆ ನಾಲ್ಕು ಪಕ್ಷಿಗಳೂ ವಿಂಧ್ಯಾರಣ್ಯದಲ್ಲಿ ನೆಲಸಿದವು ಹೀಗೆ ದ್ರೋಣನೆಂಬ ಹಕ್ಕಿಯ ಪುತ್ರರಾದ ನಾಲ್ವರು ಜ್ಞಾನಸಂಪನ್ನರು ಈಗಲೂ ವಿಂಧ್ಯಾಟವಿಯಲ್ಲಿದ್ದಾರೆ ಅವರನ್ನು ಬಳಿಸಾರಿ ನಿನ್ನ ಸಂದೇಹಗಳನ್ನು ಪರಿಹರಿಸಿಕೊ ಎಂದು ಮಾರ್ಕಂಡೇಯರು ಜೈಮಿನಿಗೆ ತಿಳಿಸಿದರು.

    ಅನಂತರ ಜೈಮಿನಿಗಳು ಈ ಪಕ್ಷಿಗಳನ್ನು ಹುಡುಕಿಕೊಂಡು ವಿಂಧ್ಯಾರಣ್ಯಕ್ಕೆ ಹೋಗಲಾಗಿ ಅವು ಒಟ್ಟಾಗಿ ಸೇರಿ ವೇದಾಧ್ಯಯನಮಾಡುತ್ತಿದ್ದವು ಸ್ವಚ್ಛವಾದ ಉಚ್ಚಾರಗಳಿಂದ ಮನುಷ್ಯವಾಕ್ಕಿನಲ್ಲಿ ವೇದಪಠನಮಾಡುತ್ತಿದ್ದ ಅವುಗಳ ಬಳಿಗೆ ಹೋಗಿ 'ಪೂಜ್ಯರೆ, ನಿಮಗೆ ಸ್ವಾಗತ' ಎಂದು ವಂದಿಸಿದನು. ವ್ಯಾಸ ಶಿಷ್ಯನಾದ ಜೈಮಿನಿಯನ್ನು ಕಂಡು ಅವು ಬಹಳ ಸಂತೋಷಪಟ್ಟು ಸತ್ಕರಿಸಿ 'ನಮ್ಮ ಜನ್ಮವು ಸಾರ್ಥಕವಾಯಿತು ತಾವು ಬಂದ ಉದ್ದೇಶವೇನು?' ಎನ್ನಲು ಜೈಮಿನಿಯು ತಾನು ಬಂದ ಸಮಾಚಾರವನ್ನೆಲ್ಲ ತಿಳಿಸಿದನು. ಆಗ ಪಕ್ಷಿಗಳು 'ಬಹಳ ಸಂತೋಷ, ನಮಗೆ ವಿಷಯಗಳು ತಿಳಿದಿದ್ದು ಕೇಳುವವರೂ ಇರುವಲ್ಲಿ ಸಂದೇಹವಿಲ್ಲದೆ ಹೇಳುವೆವು' ಎಂದು ಆಶ್ವಾಸನೆಯನ್ನು ನೀಡಿ ಪುರಾಣಕಥೆಯನ್ನಾರಂಭಿಸಿ ಜೈಮಿನಿಗಳಿಗೆ ಹೇಳಿದವು ಇದು ಮಾರ್ಕಂಡೇಯಪುರಾಣದ ಪೀಠಿಕೆಯಾಗಿದೆ.

    ಪುರಾಣಗಳಲ್ಲಿ ಅನುಸರಿಸಿರುವ ವಿಷಯ ಪ್ರತಿಪಾದನೆಯಂತೆಯೇ ಇಲ್ಲಿಯೂ ಸೃಷ್ಟ್ಯಾದಿವಿಚಾರ, ಮನ್ವಂತರಗಳ ವಿಚಾರ, ವಂಶಾನುಚರಿತಗಳು ವಿವರಿಸಲ್ಪಟ್ಟಿವೆ ನಲವತ್ತೊಂದು ಅಧ್ಯಾಯಗಳ ಪೂರ ಕಥೆಯನ್ನು ಕೇಳಿದ ಜೈಮಿನಿಯು ಹದಿನಾಲ್ಕು ಮನ್ವಂತರಗಳ ಕಥೆಯನ್ನು ಹೇಳಬೇಕೆಂದಾಗ ಪಕ್ಷಿಗಳು 'ಆಹಾ! ಈ ಪ್ರಶ್ನೆಯು ಬಹಳ ಗಹನವಾಗಿದೆ ಆದರೂ ನವು ಕ್ರೌಷ್ಟುಕಿ-ಮಾರ್ಕಂಡೇಯರ ಸಂವಾದವನ್ನು ಕೇಳಿರುವದರಿಂದ ವಿಷಯಗಳನ್ನು ತಿಳಿದಿದ್ದೇವೆ ಅವುಗಳನ್ನೇ ನಿನಗೆ ವಿವರಿಸುತ್ತೇವೆ' ಎಂದು ಆರಂಭಿಸಿ ಕ್ರೌಷ್ಟುಕಿ ಮಾರ್ಕಡೇಯ ಸಂವಾದವನ್ನೇ ಅನುವಾದಮಾಡಿ ಜೈಮಿನಿಗಳಿಗೆ ಉಪದೇಶಿಸಿರುತ್ತವೆ ಹೀಗೆ ಮಾರ್ಕಂಡೇಯಪುರಾಣಾಂತರ್ಗತ ದೇವೀಮಹಾತ್ಮ್ಯವು ಗುರುಶಿಷ್ಯಪರಂಪರೆಯಿಂದ ಉಪದಿಷ್ಟವಾಗಿ ಬಂದಿದೆ.

    ತಂತ್ರಶಾಸ್ತ್ರಜ್ಞರು ಈ ಪುರಾಣಭಾಗವನ್ನು ದೇವೀಪ್ರಸಾದಸಿದ್ಧಿಗೆ ದ್ವಾರವಾಗಿ ಮಾಡಿಕೊಂಡು ಒಂದಾನೊಂದು ವಿಶಿಷ್ಟರೀತಿಯಿಂದ ಇದರ ಪಾರಾಯಣ, ಪುರಶ್ಚರಣ-ಹೋಮಗಳನ್ನು ಏರ್ಪಾಡುಮಾಡಿರುತ್ತಾರೆ ಇದನ್ನೇ ಚಂಡೀ ಪಾರಾಯಣ, ಚಂಡೀಹೋಮಗಳೆಂದು ಕರೆಯುತ್ತಾರೆ ಈ ಕ್ರಮವು ಈಗಲೂ ವಿಶೇಷವಾಗಿ ಪ್ರಚಾರದಲ್ಲಿರುತ್ತದೆ ಅದ್ವೈತಸಂಪ್ರದಾಯದ ಮಠಗಳಲ್ಲಿಯೂ ಕೆಲವು ಶಕ್ತಿದೇವಾಲಯಗಳಲ್ಲಿಯೂ ಹಾಗೂ ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಮಹಾಜನರುಗಳು ಈ ಚಂಡೀಯಾಗಗಳನ್ನು ನಡೆಸುತ್ತಾರೆ ಹತ್ತು ಪಾರಾಯಣಗಳಿಗೆ ಒಂದುಬಾರಿ ಹೋಮವನ್ನು ಮಾಡುವ ಕ್ರಮದಂತೆ ಇದನ್ನು ಬೆಳೆಯಿಸಿ ಶತಚಂಡೀ, ಸಹಸ್ರಚಂಡೀ ಯಾಗಗಳನ್ನೂ ಅಲ್ಲಲ್ಲಿ ನಡೆಯಿಸುತ್ತಾರೆ ಈ ದುರ್ಗಾಸಪ್ತಶತೀ ಪಾರಾಯಣಕ್ಕಾಗಿಯೇ ಮೂಲಮಂತ್ರವನ್ನು ಸಾಂಗೋಪಾಂಗವಾಗಿ ಪರಂಪರೆಯಿಂದ ಉಪದೇಶವನ್ನು ಹೊಂದಿದ ದೀಕ್ಷಾಬದ್ಧರಾದ ಋತ್ವಿಜರಿರುತ್ತಾರೆ ಅಂಥವರಿಂದಲೇ ಪಾರಾಯಣಾದಿಗಳನ್ನು ನಡೆಯಿಸಬೇಕೆಂಬ ನಿಯಮವಿದೆ ದೇವಿಯ ಆರಾಧನೆಗಾಗಿಯೇ ಮೀಸಲಾದ ಕೆಲವು ತಾಂತ್ರಿಕ ಪೂಜಾವಿಧಾನಗಳಿವೆ ಇವುಗಳಲ್ಲಿ ಮುಖ್ಯವಾದದ್ದು ಶ್ರೀಚಕ್ರಾರ್ಚನೆಯು ಶ್ರೀಚಕ್ರದಲ್ಲಿಯೂ ಮೇರುಪ್ರಸ್ಥ ಭೂಪ್ರಸ್ಥಗಳೆಂಬ ವಿಭಾಗವುಂಟು ಶ್ರೀ ಶಂಕರಾಚಾರ್ಯರ ಕೃತಿಯೆಂದು ಪ್ರಸಿದ್ಧವಾಗಿರುವ 'ಸೌಂದರ್ಯಲಹರೀ' ಎಂಬ ಸ್ತೋತ್ರದಲ್ಲಿ ಕೆಲವು ದೇವೀ ಆರಾಧನಾಕ್ರಮಗಳ ವಿವರವಿದೆ ಹೆಚ್ಚಿನ ವಿಚಾರಗಳನ್ನು ತಂತ್ರಗ್ರಂಥಗಳಿಂದಲೂ ತಂತ್ರಶಾಸ್ತ್ರಜ್ಞರಿಂದಲೂ ಅರಿತುಕೊಳ್ಳಬೇಕು.

    ಆದರೆ ಇದೇ ದುರ್ಗಾಸಪ್ತಶತಿಯನ್ನು ವೈದಿಕಪೌರಾಣಿಕಮಾರ್ಗಗಳೆರಡಕ್ಕೂ ಹೊಂದಿಸಿಕೊಂಡು ಪಾರಾಯಣಹೋಮಾದಿಗಳನ್ನು ನಡೆಸುವದೂ ಈಗ ರೂಢಿಯಲ್ಲಿದೆ. ಅದರಂತೆ ವೈದಿಕವಾದ
1. ದುರ್ಗಾಸೂಕ್ತ
2. ಶ್ರೀಸೂಕ್ತ
3. ಸರಸ್ವತೀ ಸೂಕ್ತ
4. ರಾತ್ರಿ ಸೂಕ್ತ
5. ಅಂಭ್ರಣೀಸೂಕ್ತಗಳನ್ನು ಪಠಿಸುವದು, ಶ್ರೀಸೂಕ್ತ ವಿಧಾನದಿಂದ ದುರ್ಗಾದೇವಿಯನ್ನೂ ಪಾರಾಯಣಗ್ರಂಥವನ್ನೂ ಪೂಜಿಸುವದು, ಮೂಲಮಂತ್ರವನ್ನು ಜಪಮಾಡಿಕೊಳ್ಳುವದು, ಪೂರ್ವೋತ್ತರಾಂಗ ನ್ಯಾಸಗಳೊಡನೆ ಸಪ್ತಶತಿಯನ್ನು ಪಾರಾಯಣಮಾಡುವದು, ದುರ್ಗಾಸ್ತೋತ್ರಗಳನ್ನು ಹೇಳಿಕೊಳ್ಳುವದು, ಶ್ರೀಲಲಿತಾಸಹಸ್ರನಾಮ, ತ್ರಿಶತಿಗಳಿಂದ ದೇವಿಗೆ ಕುಂಕುಮಾರ್ಚನೆಮಾಡುವದು, ವೈದಿಕಸ್ಮಾರ್ತಪ್ರಯೋಗಕ್ರಮದಿಂದ ಅಗ್ನಿಯಲ್ಲಿ ಸಪ್ತಶತೀ ಮಂತ್ರಗಳನ್ನು ವಿಭಾಗಾನುಗುಣವಾಗಿ ಪಠಿಸಿ ಪಾಯಸ-ಚರುಗಳಿಂದ ಹೋಮಮಾಡುವದು, ಕುಮಾರೀಪೂಜೆ, ಸುವಾಸಿನೀಪೂಜೆಗಳನ್ನು ನೆರವೇರಿಸಿ ಯಾಗವನ್ನು ಪೂರೈಸುವದು ಹೀಗೂ ದೇವೀಭಕ್ತರುಗಳಲ್ಲಿ ಅನುಷ್ಠಾನಕ್ರಮವು ನಡೆದುಬಂದಿದೆ ಮುಖ್ಯವಾಗಿ ಸಪ್ತಶತಿಯು ಪೌರಾಣಿಕವಾದ್ದರಿಂದ ವೈದಿಕ ತಾಂತ್ರಿಕವಿಧಾನಗಳಲ್ಲಿ ಯಾವದಾದರೊಂದರ ಚೌಕಟ್ಟಿನಲ್ಲಿಯಾದರೂ ದೇವಿಯನ್ನು ತೃಪ್ತಿಗೊಳಿಸಬಹುದಾಗಿದೆ ವೈದಿಕದೀಕ್ಷಾವಿಧಾನವು ಸಾತ್ತ್ವಿಕವಾಗಿದ್ದು ದಕ್ಷಿಣಾಚಾರವೆಂದು ಕರೆಯಲ್ಪಡುತ್ತದೆ ಈ ವಿಧಾನವು ಯಾವಾಗಳು ಆಪಾಯರಹಿತವಾಗಿರುತ್ತದೆ ಸಿದ್ಧಿಯು ಸ್ವಲ್ಪ ತಡವಾಗಬಹುದಾದರೂ ವ್ಯವಹಾರಕ್ಕೆ ಹೊಂದಿಕೊಂಡಿರುವುದರಿಂದ ಸರ್ವರಿಗೂ ಅನುಕರಣೀಯವಾಗಿರುತ್ತದೆ ದೇವಿಯ ಉಪಾಸನೆಯನ್ನು ಕಾಮ್ಯವಾಗಿ ಅನುಷ್ಠಿಸುವಾಗಲೂ ಶ್ರೀಶಂಕರಭಗವತ್ಪಾದರ ವೇದಾಂತೋಪದೇಶಗಳಿಗೆ ವಿರೋಧವಾಗದಂತೆ ಇರಬೇಕಾದರೆ ದಕ್ಷಿಣಾಚಾರಮಾರ್ಗವೇ ತಕ್ಕದ್ದಾಗಿರುತ್ತದೆ ಒಂದು ವೇಳೆ ಫಲಾಪೇಕ್ಷೆಯಿಲ್ಲದೆ ಅನುಷ್ಠಾನಮಾಡುವದಾದರೂ ಈ ದಕ್ಷಿಣಾಚಾರಮಾರ್ಗವು ಚಿತ್ತಶುದ್ದಿಯನ್ನೂ ಜ್ಞಾನಕ್ಕೆ ತಕ್ಕ ಯೋಗ್ಯತೆಯನ್ನೂ ಅನುಗ್ರಹಿಸುತ್ತದೆ ಆಗ ದೇವಿಯೇ ಉಮೆಯಾಗಿ ಇಂದ್ರನಿಗೆ ಉಪದೇಶಿಸಿದಂತೆ ನಮಗೂ ಬ್ರಹ್ಮವಿದ್ಯೆಯನ್ನು ಕರುಣಿಸಿ ಮುಕ್ತಿಯನ್ನು ನೀಡುತ್ತಾಳೆ ಅಂತೂ ದೇವಿಯ ಆರಾಧನೆಯು ಭೋಗಮೋಕ್ಷಗಳೆಂಬ ಎರಡು ಪುರುಷಾರ್ಥಗಳನ್ನೂ ನೀಡುವದಾಗಿರುತ್ತದೆ.

    ಹೀಗೆ ದೇವಿಯ ಮಹಾತ್ಮ್ಯವು ಅನಂತವಾಗಿದೆ ಸದ್ಯಕ್ಕೆ ನಾವು ಹೆಚ್ಚಿನ ಮಂತ್ರ-ತಂತ್ರ-ಯಂತ್ರಗಳ ವಿಶೇಷ ವಿಜ್ಙಾನವನ್ನು ಹುಡುಕಿಕೊಂಡು ಹೋಗುವದುಕ್ಕಿಂತಲೂ ಕೇವಲ ಭಕ್ತಿಮಾರ್ಗದಿಂದ ದೇವಿಯ ಆರಾಧನೆಯನ್ನು ನಮಗೆ ಸಾಧ್ಯವಾಗಬಹುದಾದ ಕ್ರಮದಿಂದ ಕೈಗೊಂಡು ಆಕೆಯ ಪ್ರಸಾದಕ್ಕೆ ಪಾತ್ರರಾಗಲು ಯತ್ನಿಸಬೇಕು ಅದಕ್ಕೆ ಮುಂಚೆ ಆ ದೇವಿಯು ಯಾರು? ಆಕೆಯ ಅವತಾರಗಳು ಯಾವವು? ಅವಳ ಶಕ್ತಿಗಳೇನು? ಮಹಿಮೆಯೇನು? ಎಂಬುದನ್ನು ತಿಳಿಯಲು ಈ ದೇವೀಮಹಾತ್ವ್ಯವನ್ನು ಓದಿ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ