ಮಹಾಶಿವರಾತ್ರಿಯ ತತ್ತ್ವ

    ಪ್ರತಿವರ್ಷವೂ ಮಾಘ ಬಹುಳ ಚತುರ್ದಶಿಯಂದು ಪ್ರಾಪ್ತವಾಗುವ ಮಹಾಶಿವರಾತ್ರಿಯ ಅನುಷ್ಠಾನವು ವಿಶ್ವಾದ್ಯಂತ ಅನೇಕ ಭಕ್ತರಿಂದ ಆಚರಿಸಲ್ಪಡುತ್ತದೆ. ಶಿವನ ಆರಾಧನೆಗೆ ಮುಖ್ಯವಾದ ದಿನವೇ ಶಿವರಾತ್ರಿಯು. ಇದು ಹಿಂದೂಪಂಚಾಂಗದ ಪ್ರಕಾರ ಪ್ರತಿ ಮಾಸದ ಕೃಷ್ಣಪಕ್ಷದ ಚತುರ್ದಶಿಯ ದಿನ ಪ್ರಾಪ್ತವಾಗುತ್ತದೆ. ಇದನ್ನು 'ಮಾಸಶಿವರಾತ್ರಿ'ಯೆಂದು ಕರೆಯುತ್ತಾರೆ, ಆದ್ದರಿಂದಲೇ ಮಾಘಮಾಸದಲ್ಲಿ ಬರುವ ಶಿವರಾತ್ರಿಗೆ 'ಮಹಾಶಿವರಾತ್ರಿ' ಎಂಬ ವಿಶೇಷವಾದ ಹೆಸರಿದೆ.
    ರಾತ್ರಿಯು ಯಾವಾಗಲೂ ಜೀವರಿಗೆ ಭಯಂಕರವಾದುದು. ಎಲ್ಲಾ ಪದಾರ್ಥಗಳೂ ಕಗ್ಗತ್ತಲೆಯಲ್ಲಿ ಮುಳುಗಿರುವಾಗ ಏನೊಂದೂ ಕೆಲಸವು ಸಧ್ಯವಾಗುವದಿಲ್ಲ ಹಾಗೂ ಪ್ರಾಣಿಗಳಿಗೆಲ್ಲ ನಿದ್ರೆಯ ಸಮಯವೂ ರಾತ್ರಿಯೇ ಆಗಿದೆ ಕೆಲವೇ ಭೂತ ಪ್ರೇತಪಿಶಾಚಾದಿ ಸತ್ತ್ವಗಳಿಗೂ ಗೂಬೆ ಮುಂತಾದವುಗಳಿಗೂ ರಾತ್ರಿಯ ಚಟುವಟಿಕೆಯ ಕಾಲವಾಗಿರಬಹುದು, ಆದರೆ ಸಾಮಾನ್ಯವಾಗಿ ಎಲ್ಲರಿಗೂ ರಾತ್ರಿಯು ಅಮಂಗಳಕರವು ಹೀಗಿರುವಲ್ಲಿ 'ಶಿವರಾತ್ರಿ' ಎಂದು ರಾತ್ರಿಯನ್ನು ಮಂಗಳಕರವೆಂತ ಕರೆಯಲು ಕಾರಣವೇನು? ಆ ರಾತ್ರಿಗೆ ಮಂಗಳತ್ವವು ಉಂಟಾಗುವದಕ್ಕೆ ನಿಮಿತ್ತವೇನಾದರೂ ಇರಬಹುದೆ? ಎಂದು ಯಾರಾದರೂ ಕೇಳಬಹುದಾಗಿದೆ. ಇದಕ್ಕೆ ಉತ್ತರವನ್ನು ಒಂದು ಗೀತಾಶ್ಲೋಕದಿಂದ ಕಂಡುಹಿಡಿಯಲು ಯತ್ನಿಸೋಣ. ಹೇಗೆಂದರೆ: 'ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮಿ' ಎಂಬ ಪದ್ಯವು ಗೀತಾಪಾಠಕರಿಗೆಲ್ಲ ಪರಿಚಿತವೇ ಆಗಿದೆ. ಎಲ್ಲಾ ಪ್ರಾಣಿಗಳಿಗೂ ಕತ್ತಲೆಯಾಗಿರುವಲ್ಲಿ ಸಂಯಮಿಯು ಎಚ್ಚತ್ತಿರುವನು - ಎಂಬ ಅಭಿಪ್ರಾಯವು ಇಲ್ಲಿದೆ. ಇದರ ಪ್ರಕಾರ ಆತ್ಮವಸ್ತುವು ಎಲ್ಲಾ ಪ್ರಾಣಿಗಳಿಗೂ ಕತ್ತಲೆಯಂತೆ ತಿಳಿಯದೆ ಇದೆ. ತಮ್ಮೊಳಗೆ ಇದ್ದು ಕೊಂಡಿರುವ ಈ ಪ್ರಕಾಶಮಯವಾದ ಜ್ಯೋತಿಯನ್ನು ಸಂಸಾರಿಗಳಾದ ಪ್ರಾಣಿಗಳು ಅರಿಯದೆ ನಿದ್ರೆಮಾಡುತ್ತಿವೆ - ಎಂದರೆ ಎಂಥ ಅನರ್ಥವಾಯಿತು? 'ದೀಪದ ಬುಡದಲ್ಲಿಯೇ ಕತ್ತಲೆ' ಎಂದಂತೆ ಆತ್ಮ(ತಾನು) ವಸ್ತುವಿನ ವಿಷಯದಲ್ಲಿಯೇ ಅಜ್ಞಾನಿಗಳಾಗಿರುವ ನಮಗೆ ಅದು ರಾತ್ರಿಯಂತಿರುತ್ತದೆ. ಇಂಥ ಆತ್ಮತತ್ತ್ವದ ವಿಷಯದಲ್ಲಿ ಜ್ಞಾನಿಯು ಎಚ್ಚರವಾಗಿರುತ್ತಾನೆ - ಎಂದರೆ ಅದನ್ನು ಸಂಪೂರ್ಣವಾಗಿ ತಿಳಿದು ಆ ಪರಂಜ್ಯೋತಿಯಲ್ಲಿಯೇ ನೆಲೆನಿಂತಿರುತ್ತಾನೆ - ಎಂದು ಗೀತಾವಾಕ್ಯದ ಅರ್ಥ. ಇದಕ್ಕೆ ಅನುಸಾರವಾಗಿ ರಾತ್ರಿ ಎಂಬುದು ಶಿವವಾಗಿದೆ - ಎಂದು ಹೇಳುವಾಗ ಶಿವರಾತ್ರಿಯು ಆತ್ಮಜ್ಞಾನದ ಪರ್ಯಾಯಶಬ್ದವಾಗಲಿದೆ, ಆದ್ದರಿಂದ 'ಶಿವರಾತ್ರಿ' ಎಂದರೂ 'ಬ್ರಹ್ಮಜ್ಞಾನ'ವೆಂದರೂ ಒಂದೇ ಅರ್ಥ. ಇದು ಜ್ಞಾನಿಗಳಿಗೇ ಮಿಸಲು ಎಂದು ಬೇರೆ ಹೇಳಬೇಕಾಗಿಲ್ಲ.
    ಈಗ 'ಮಹಾಶಿವರಾತ್ರಿ' ಹೇಗಾಗುತ್ತದೆ - ಎಂಬುದನ್ನು ಅಲೋಚಿಸೋಣ, ವರ್ಷಕ್ಕೊಮ್ಮೆ 'ಮಹಾಶಿವರಾತ್ರಿ'ಯು ಬರುವಂತೆ ಪ್ರತಿಯೊಬ್ಬ ಮಾನವನ ಜೀವನದಲ್ಲಿಯೂ ಒಮ್ಮೆ ಮಹಾಶಿವರಾತ್ರಿಯು ಬರಬಹುದಾಗಿದೆ. ಹೇಗೆಂದರೆ: ಯಾವನು ತನ್ನ ಸ್ವರೂಪವನ್ನು ಅರಿತುಕೊಳ್ಳುವದಕ್ಕಾಗಿ ಪ್ರಾಪಂಚಿಕವಿಷಯಗಳಿಂದ ನಿವೃತ್ತನಾಗಿ ಶಮಾದಿಸಾಧನಗಳಿಂದ ಕೂಡಿ ಸದ್ಗುರುವನ್ನು ಬಳಿಸಾರಿ ಶ್ರವಣಾದಿಗಳಿಂದ ಆತ್ಮತತ್ತ್ವವನ್ನು ತಿಳಿದುಕೊಂಡು ಮುಂದೆ ಮನನನಿದಿಧ್ಯಾಸನಗಳಿಂದ ಆ ತತ್ತ್ವವನ್ನು ತನ್ನಲ್ಲಿಯೇ ಕಂಡುಕೊಂಡು ಯಾವಾಗ ನೆಲೆನಿಲ್ಲುವನೋ ಆ ದಿನವೇ ಎಂದರೆ ಜ್ಞಾನಪ್ರಾಪ್ತಿಯಾದ ಕಾಲವೇ ಅವನಿಗೆ 'ಮಹಾಶಿವರಾತ್ರಿ'ಯಾಗುವದು. ಬುದ್ಧನಿಗೆ ಜ್ಞಾನೋದಯವಾದದ್ದು ವೃಷಭತೀರ್ಥಂಕರರಿಗೆ ಜ್ಞಾನಕಲ್ಯಾಣವಾದದ್ದು ಎಂದು ಮುಂತಾಗಿ ಆಯಾ ಮತದವರು ಹೇಳುವಂತೆ ಸನಾತನಧರ್ಮಾವಲಂಬಿಗಳಾದ ನಾವು ನಮ್ಮ ನಮ್ಮ 'ಮಹಾಶಿವರಾತ್ರಿ'ಯ ದಿನವನ್ನು ಸಾಧಿಸಿಕೊಳ್ಳಬೇಕಾಗಿದೆ. ಅಲ್ಲಿಯವರೆಗೂ ನಾವು ಎಷ್ಟು ಶಿವರಾತ್ರಿವ್ರತಗಳು, ಉಪವಾಸ, ಜಾಗರಣ-ಗಳನ್ನು ಮಾಡಿದರೂ ಅವು ಕೇವಲ ಸಾಂಕೇತಿಕವೇ ಆಗುವವು. ಮುಖ್ಯಾರ್ಥದಲ್ಲಿ 'ಮಹಾಶಿವರಾತ್ರಿ'ಯಾಗಬೇಕಾದರೆ ನಾವು ಅನುಭವ ಪರ್ಯಂತವಾದ ಆತ್ಮಜ್ಞಾನದಲ್ಲಿಯೇ ನೆಲೆನಿಂತು ಸ್ಥಿತಪ್ರಜ್ಞರೇ ಆಗಬೇಕು ಅದೂ ಕೂಡ ನಾವು ಬದುಕಿರುವಾಗಲೇ ಆಗಬೇಕು.
    ಶಿವರಾತ್ರಿಯು 'ವ್ರತ'ವು ಹೇಗಾಗುತ್ತದೆ? 'ವ್ರತ' ಎಂದರೆ ನಿಯಮಪರಿಪಾಲನೆ - ಎಂದರ್ಥ. ಸತ್ಯವ್ರತ, ಪತಿವ್ರತೆ - ಮುಂತಾದ ಶಬ್ದಗಳಲ್ಲಿ ವ್ರತಶಬ್ದವು ಅಡಕವಾಗಿರುವದನ್ನು ಗಮನಿಸಿರಿ. ಅದರಂತೆ ಅತ್ಮವ್ರತ ನಿಷ್ಠರಾಗಲು ಸಜ್ಜಾಗುವದೇ ಶಿವರಾತ್ರಿವ್ರತವು ಆತ್ಮನೆಂಬ ವಸ್ತುವು ಪ್ರತ್ಯಕ್ ಎಂದರೆ ಎಲ್ಲಕ್ಕಿಂತ ತೀರ ಒಳಗೆ ಇದ್ದುಕೊಂಡಿದೆಯಾದ್ದರಿಂದ ಅದನ್ನು ಮುಟ್ಟಲು ಮಾಡಬೇಕಾದ ವಿಶೇಷಪ್ರಯತ್ನಗಳಿಗೆ 'ವ್ರತ'ವೆಂದು ಹೆಸರು. ಸಾಂಕೇತಿಕವಾಗಿ ಶಿವರಾತ್ರಿಯ ದಿನ ಉಪವಾಸ, ಜಾಗರಣಾದಿ - ಕೆಲವು ನಿಯಮಗಳನ್ನು ಶಾಸ್ತ್ರದಲ್ಲಿ ಗೊತ್ತುಪಡಿಸಿದ್ದಾರೆ. ಹೇಗೆಂದರೆ:ಒಂದು ದಿನದಮಟ್ಟಿಗೆ ನಮ್ಮ ಶರೀರೇಂದ್ರಿಯಗಳ ವ್ಯವಹಾರಗಳಲ್ಲಿ ಅತ್ಯಗತ್ಯವಾದದ್ದು ಹೊರತು ಉಳಿದವುಗಳಿಗೆ 'ರಜಾ'ಕೊಡಬೇಕೆಂಬರ್ಥವು ತಾನೇ ಸಿದ್ಧವಾಗುವದು. ಆ ದಿನ ಚತುರ್ದಶೀ ತಿಥಿಯು ಇರುವದರಿಂದ ಐದು ಕಮೇಂದ್ರಿಯಗಳು ಐದು ಜ್ಞಾನೇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ - ಎಂಬ ನಮ್ಮ ಹದಿನಾಲ್ಕು ವಿಧವಾದ ಉಪಾಧಿವರ್ಗಕ್ಕೆ ವ್ಯವಹಾರದಿಂದ ವಿಶ್ರಾಂತಿಯನ್ನು ಕೊಡಿಸುವದು ಮುಖ್ಯಕರ್ತವ್ಯವಾಗಿದೆ. ಹಾಗಾದರೆ ಉಸಿರಾಡದೆ, ಶರೀರವನ್ನಳ್ಳಾಡಿಸದೆ ಬದುಕಿರುವದು ಹೇಗೆ? ಎಂದು ಕೇಳಬಹುದು. ಅದಕ್ಕೆ ಸಮಾಧಾನವೇನೆಂದರೆ: ಬಹುರ್ಮುಖವಾಗಿರುವ ಈ ಸಂಘಾತವನ್ನು ಆತ್ಮನಕಡೆಗೆ ತಿರುಗಿಸುವದು ಮಾತ್ರ ಇಲ್ಲಿ ಪ್ರಕೃತವು ಅಷ್ಟೇ ಹೊರತು ಎಲ್ಲಾ ಶರೀರವ್ಯಾಪಾರಗಳನ್ನೂ 'ಬಂದ್' ಮಾಡುವ ಅವಶ್ಯಕತೆಯಿರುವದಿಲ್ಲ. ಇದೇ ವ್ರತವು.
    ಈಗ ಉಪವಾಸವೆಂದರೇನು? ಕೆಲವರು ಅನ್ನವನ್ನು ತಿನ್ನದೆ ಬೇರೇನಾದರೂ ಆಹಾರವನ್ನು ತೆಗೆದುಕೊಳ್ಳುವದೇ ಉಪವಾಸವೆಂದು ಭಾವಿಸುತ್ತಾರೆ. ಸಂಪೂರ್ಣ ನಿರಾಹಾರವು ಸಾದ್ಯವಾಗುವದಿಲ್ಲವೆಂತ ಅವರ ಭಾವನೆ ಆದರೆ ಶಾಸ್ತ್ರವು ಅವನವನ ದೈಹಿಕಸ್ಥಿತಿಗನುಗುಣವಾಗಿ, ಭಗವಚ್ಚಿಂತನೆಗೆ ಅಡ್ಡಿಯಾಗದಂತೆ ಲಘುವಾದ ಆಹಾರಸೇವೆನೆಯನ್ನು ಮಿತವಾಗಿ ಒಮ್ಮೆ ಮಾತ್ರ ಸ್ವೀಕರಿಸಲು ಅವಕಾಶವನ್ನು ನೀಡಿದೆಯಾದ್ದರಿಂದ, ಫಲಾಹಾರಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡದೆ, ಉಪ-ಭಗವಂತನ ಸಮೀಪದಲ್ಲಿ ವಾಸ ಇದ್ದುಕೊಂಡಿರುವ ರೂಪವಾದ ಉಪವಾಸವನ್ನು ಆಚರಿಸಬೇಕು. ಇದಕ್ಕಾಗಿ ಕೈಗಳಿಂದ ಪೂಜೆ, ಬಾಯಿಂದ ಸ್ತೋತ್ರಪಾಠಗಳೂ, ಭಜನೆ, ಶರೀರದಂಡ ಪ್ರದಕ್ಷಿಣಾಧಿಗಳು, ಮನಸ್ಸಿನಿಂದ ಮಂತ್ರಾವೃತ್ತಿ - ಮುಂತಾದ ಸಾಧನಗಳನ್ನು ಬಳಸಬಹುದಾಗಿದೆ. ಶಿವನಿಗೆ ಪ್ರಿಯವಾದ ಪದಾರ್ಥಗಳ ಸಮರ್ಪಣೆ, ಮನಸ್ಸಿನ ಒಲವಿಗೆ ತಕ್ಕಂತೆ ಆಯಾ ಉಪಾಯಗಳನ್ನು ಕೈಗೊಂಡು ಶಿವರಾತ್ರಿಯನ್ನು ಸಂಪೂರ್ಣವಾಗಿ 'ವ್ರತ'ವಾಗಿ ಮಾರ್ಪಡಿಸಿಕೊಳ್ಳಬಹುದಾಗಿದೆ.
    ಹೀಗೆಯೇ "ಜಾಗರಣ"ದ ಅರ್ಥವನ್ನು ತಿಳಿಯಬೇಕು. ಈ ಸಾದನವು 'ಸ್ವಲ್ಪ' ಕಷ್ಟಸಾಧ್ಯವಾದದು. ಸಾಮಾನ್ಯವಾದ ಅರ್ಥದಲ್ಲಿ ನಿದ್ರೆಮಾಡದೆ ಎಚ್ಚರವಾಗಿರುವದು ಎಂಬಿದು ಅರ್ಥವಾದರೂ ಆಧ್ಯಾತ್ಮಿಕಜಾಗರಣವು "ಜಾಗರ್ತಿ ಸಂಯಮಿ' ಎಂದು ಭಗವಂತನು ತಿಳಿಸಿರುವ ಅರ್ಥದಲ್ಲೇ ಸಮನ್ವಿತವಾಗಿರುವದು. ಹೇಗೆಂದರೆ ಎಷ್ಟೇ ಶಾಸ್ತ್ರಗಳನ್ನು ಓದಲಿ, ವಿದ್ಯಾವಂತನಾಗಿರಲಿ ಅವನು ಆತ್ಮವಿದ್ಯೆಯೊಂದನ್ನು ಕಲಿಯದೆ ಇದ್ದರೆ ನಿದ್ರೆ ಮಾಡಿದ್ದಂತೆಯೇ ಎಂದು ಭಾವಿಸಲಾಗಿದೆ. 'ಅನಾದಿಮಾಯಾ ನಿದ್ರೆ' ಎಂಬ ಹೆಸರಿನಿಂದ ವೇದಾಂತಾಚಾರ್ಯರು ಕರೆದಿರುವ ಈ ಸ್ಥಿತಿಯು ಈಗಿನ ಪ್ರಾಪಂಚಿಕರಿಗೆಲ್ಲ ಅನ್ವಯಿಸುತ್ತದೆ. ಇದರಲ್ಲಿ ಬಡವ, ಬಲ್ಲಿದ, ವಿದ್ಯಾವಂತ, ದಡ್ಡ, ಉಚ್ಚ, ನೀಚಗಳೆಂಬ ಭೇದವಿಲ್ಲ ಬ್ರಹ್ಮವಿದ್ಯಾವಿಹೀನರಾದ ಎಲ್ಲ ಜೀವರೂ ಮಾಯಾನಿದ್ರಾಮೋಹಿತರೆಂದೇ ತೀರ್ಮಾನವು. ಈ ಅಭಿಪ್ರಾಯದಲ್ಲಿ ಆತ್ಮ ಜ್ಞಾನಿಯೊಬ್ಬನೇ ಎಚ್ಚರವಾಗಿರುವವನೆಂದು ನಿಶ್ಚಯಿಸಲಾಗಿದೆ. ಆದ್ದರಿಂದ ಜಾಗರಣವೆಂದರೆ ನಾವು ವರ್ಷಕ್ಕೊಮ್ಮೆ ಒಂದು ರಾತ್ರಿ ಅದೂಕೂಡ ಏನೇನೋ ಲೌಕಿಕೋಪಾಯಗಳಿಂದ ನಿದ್ದೆಗೆಟ್ಟಮಾತ್ರಕ್ಕೆ ಸಾಧಿಸಿದಂತೆ ಆಯಿತೆಂದು ಭಾವಿಸಿದರೆ ನಮ್ಮಂಥ ಮೂರ್ಖರು ಬೇರೆ ಇಲ್ಲ, ಆದ್ದರಿಂದ ಮುಖ್ಯಾರ್ಥದ ಜಾಗರಣವು ನಮಗೆ ದೊರಕಬೇಕಾದರೆ ನಮ್ಮ ಜನ್ಮ ಜನ್ಮಾಂತರಗಳ ಪ್ರಯತ್ನವೂ ಸಾಕಾಗಲಾರದು. ನಿತ್ಯ ಜಾಗರೂಕನಾದ ಮಹಾದೇವನ ಅಪಾರವಾದ ಕರುಣೆಯು ನಮ್ಮ ಮೇಲೆ ಹರಿದಾಗ ಮಾತ್ರ ನಾವು ಜಾಗರಣೆಯ ಫಲವನ್ನು ಪೂರ್ಣವಾಗಿ ಪಡೆದುಕೊಂಡೇವು.
    ಇನ್ನು ಶಿವರಾತ್ರಿಯ ಶಬ್ದದಲ್ಲಿ ಅಡಗಿರುವ 'ಶಿವ' ತತ್ತ್ವದ ಬಗ್ಗೆ ವಿಚಾರ ಮಾಡೋಣ. ಶಿವಮ್, ಭದ್ರಮ್, ಕಲ್ಯಾಣಮ್, ಮಂಗಳಮ್, ಶುಭಮ್ - ಇವೆಲ್ಲವೂ ಪರ್ಯಾಯ ಶಬ್ದಗಳು, ಪರಮೇಶ್ವರನಿಗೆ ಶಿವನೆಂಬ ಹೆಸರು ವೇದದಿಂದಲೇ ಬಂದಿರುತ್ತದೆ. 'ವಶ ಕಾಂತೌ' ಎಂಬ ಧಾತುವಿನಿಂದ ಹುಟ್ಟಿರುವ ಈ ಶಬ್ದವು ಲೋಕಕ್ಕೆಲ್ಲ ಇಷ್ಟನಾದವನೂ ಎಲ್ಲ ಪ್ರಾಣಿಗಳಿಂದಲೂ ಪೂಜಿಸಲ್ಪಡುವವನೂ ಆದವನೇ ಶಿವನು ಎಂದು ತಿಳಿಸುತ್ತದೆ. ಪೌರಾಣಿಕರ ದೃಷ್ಟಿಯಿಂದಲೂ ಶಿವನು ಸಕಲ ಭೂತಗಳಿಗೂ ಆರಾಧ್ಯನು ವಿಷ್ಣುವನ್ನಾದರೊ, ರಾಕ್ಷಸರು ಪೂಜಿಸುವದಿಲ್ಲ. ದ್ವೇಷಿಸುತ್ತಾರೆ, ಆದರೆ ದೇವ-ರಾಕ್ಷಸ ಕಿನ್ನರ ಗಂಧರ್ವಾದಿ ಮನುಷ್ಯರವರೆಗಿನ ಯಾವ ಬುದ್ಧಿಜೀವಿಗಳೂ ಶಿವನನ್ನು ದ್ವೇಷಿಸುವದಿಲ್ಲ. ಇವರೆಲ್ಲರಿಗೂ ಶಿವನೇ ಪೂಜ್ಯನು; ವರದನು, ಆಶುತೋಷ (ಬೇಗನೆ ಒಲಿಯುವವನು) ಎಂಬ ಬಿರುದನ್ನು ಹೊತ್ತಿರುವ ಶಿವನು ಮಹಾದೇವನೆಂದೂ ಶಂಕರನೆಂದೂ ವಿಶ್ವೇಶ್ವರನೆಂದೂ ಅನ್ವರ್ಥನಾಮಗಳನ್ನು ಪಡೆದಿರುತ್ತಾನೆ. ಪ್ರತಿಯೊಬ್ಬನ, ಆತ್ಮಲಿಂಗನಾದ ಶಿವನು ಎಲ್ಲರಿಗೂ ಪರಮಪ್ರಿಯನಾಗಿರುವದರಲ್ಲಿ ಆಶ್ಚರ್ಯವೇನಿದೆ? ಭೂಮಿಯೇ ಮುಂತಾದ ಪಂಚ ಮಹಾಭೂತಗಳೊಡನೆ ಅಷ್ಟಮೂರ್ತಿರೂಪದಿಂದ ಜಗತ್ತನ್ನೆಲ್ಲ ವ್ಯಾಪಿಸಿಕೊಂಡು ಯೋಗಿಗಳ ಹೃದಯದಲ್ಲಿ ನೆಲಸಿರುವವನೂ ಸರ್ವಪ್ರಾಣಿಗಳ ಅಂತರಾತ್ಮನೂ ಆದ ಶಿವನನ್ನು ಒಂದಲ್ಲ ಒಂದು ರೀತಿಯಿಂದ ಎಲ್ಲರೂ ತಿಳಿದೇ ಇದ್ದಾರೆ. ಆದರೆ ಅವನನ್ನು 'ಶಿವ'ನೆಂದೇ ಖಚಿತವಾಗಿ ನಿಶ್ಚಯಿಸಿಕೊಂಡ ದಿನವೇ ಶಿವರಾತ್ರಿಯಾಗುವದು. ಇಂಥ ಶಿವರಾತ್ರಿಯನ್ನು ಆಚರಿಸುವ ಮಹಾತ್ಮರು ಶಿವಸ್ವರೂಪರೇ ಎಂದು ಧಾರಾಳವಾಗಿ ಹೇಳಬಹುದು.
    ಅಧ್ಯಾತ್ಮದೃಷ್ಟಿಯಿಂದ ಶಿವ, ವಿಷ್ಣು ಮುಂತಾಗಿ ಎಲ್ಲಾ ನಾಮಗಳೂ ಒಬ್ಬ ಭಗವಂತನದೇ ಆಗಿವೆ. ವಿಷ್ಣು ಎಂದರೆ ಸರ್ವವ್ಯಾಪಕನೆಂದೂ ಶಿವನೆಂದರೆ ಮಂಗಳಸ್ವರೂಪನೆಂದೂ ಭಾವಿಸಿ ನೀವು ಭಗವಂತನ ಕಡೆಗೆ ಹೊರಡಲು ಸಿದ್ಧರಾಗೋಣ. ನಿಮ್ಮ ಮನೋಬುದ್ಧಿಗಳನ್ನು ಆ ಪರಮಾತ್ಮನ ಕಡೆಗೆ ತಿರುಗಿಸೋಣ, ಅದಕ್ಕಾಗಿ ನಮ್ಮ ಎಲ್ಲಾ ಸಾಧನಗಳನ್ನೂ ವಿನಿಯೋಗಿಸಿ. ಜಾತಿಮತಗಳ ಬೇದವನ್ನೆಣಿಸದೆ ನಿಮ್ಮ 'ಆತ್ಮ'ನೇ ಶಿವನೆಂದು ಸಾರುವ 'ಶಿವೋಹಂ' ಎಂಬ ಬಲ್ಲವರ ಅನುಭವದಲ್ಲಿ ಶ್ರದ್ಧೆಯಿಟ್ಟು ಸಾಧಿಸಿಕೊಳ್ಳೋಣ.   "ದ್ವೈತವೆಲ್ಲ ಅಶಿವವು; ಅದ್ವಯತೆಯೇ ಶಿವವು" ಎಂಬ ಜ್ಞಾನಿಗಳ ವಾಕ್ಯದಲ್ಲಿ ವಿಶ್ವಾಸವಿಡೋಣ..

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ