ಶ್ರೀ ಮಾರ್ಕಂಡೇಯಪುರಾಣೇ ದೇವೀಮಹಾತ್ಮ್ಯೇ ಪ್ರಥಮೋಧ್ಯಾಯಃ


||ಶ್ರೀಃ||
||ಓಂ ನಮಶ್ಚಂಡಿಕಾಯೈ||
ದೇವೀಮಹಾತ್ಮ್ಯಮ್
(ಮಾರ್ಕಂಡೇಯಪುರಾಣಾಂತರ್ಗತಮ್)
(ದುರ್ಗಾಸಪ್ತಶತೀ)
ಮಂಗಳಶ್ಲೋಕಗಳು
ಓಂ ||
ನಮೋ ನಮೋ ದೇವ್ಯೈ ಮಹಾದೇವ್ಯೈ ಶಿವಾಯೈ ಸತತಂ ನಮಃ |
ನಮಃ ಪ್ರಕೃತೈ ಭದ್ರಾಯೈ ನಿಯತಾಃ ಪ್ರಣತಾಃ ಸ್ಮ ತಾಮ್ ||
ಸರ್ವಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ ||

ಒಂದನೆಯ ಅಧ್ಯಾಯ

ಧ್ಯಾನಮ್ ||
ಖಡ್ಗಂ ಚಕ್ರಗದೇಷುಚಾಪಪರಿಘಾನ್ ಶೂಲಂ ಭುಶುಂಡೀಂ ಶಿರಃ
ಶಂಖಂ ಸಂದಧತೀಂ ಕರೈಸ್ತ್ರಿನಯನಾಂ ಸರ್ವಾಂಗಭೂಷಾವೃತಾಮ್ |
ನೀಲಾಶ್ಮದ್ಯುತಿಮಾಸ್ಯಪಾದದಶಕಾಂ ಸೇವೇ ಮಹಾಕಾಲಿಕಾಂ
ಯಾಮಸ್ತೌತ್ ಸ್ವಪಿತೇ ಹರೌ ಕಮಲಜೋ ಹಂತುಂ ಮಧುಂ ಕೈಟಭಮ್ ||

    ಯಾವ ದೇವಿಯು ತನ್ನ ಕೈಗಳಿಂದ ಖಡ್ಗ, ಚಕ್ರ, ಗದೆ, ಬಿಲ್ಲು, ಬಾಣ, ಪರಿಘ, ಶೂಲ, ಭುಶುಂಡಿ, ಕಪಾಲ, ಶಂಖ-ಗಳನ್ನು ಧರಿಸಿರುವಳೋ ಸರ್ವಾಂಗಗಳಲ್ಲಿಯೂ ಒಡವೆಗಳನ್ನು ತೊಟ್ಟವಳಾಗಿಯೂ ಮೂರುಕಣ್ಣುಗಳು ಉಳ್ಳವಳಾಗಿಯೂ ನೀಲಮಣಿಯಂತೆ ದೇಹಕಾಂತಿಯುಳ್ಳವಳಾಗಿ ಹತ್ತು ತಲೆ, ಹತ್ತು ಕಾಲುಗಳಿಂದ ವಿರಾಜಮಾನಳಾಗಿರುವಳೋ, ಯಾವ ದೇವಿಯನ್ನು ಚತುರ್ಮುಖಬ್ರಹ್ಮನು-ವಿಷ್ಣುವು ಮಲಗಿರಲಾಗಿ ಮಧುಕೈಟಭರೆಂಬ ರಾಕ್ಷಸರನ್ನು ಕೊಲ್ಲುವಂತೆ (ಪ್ರೇರಿಸಲು)- ಸ್ತೋತ್ರಮಾಡಿದನೋ ಆ ಮಹಾಕಾಳಿಯನ್ನು ನಾನು ಭಜಿಸುತ್ತೇನೆ.

ಓಂ ಐಂ ಮಾರ್ಕಂಡೇಯ ಉವಾಚ -

ಸಾವರ್ಣಿಃ ಸೂರ್ಯತನಯೋ ಯೋ ಮನಃ ಕಥ್ಯತೇಷ್ಟಮಃ |
ನಿಶಾಮಯ ತದುತ್ಪತ್ತಿಂ ವಿಸ್ತರಾದ್ ಗದತೋ ಮಮ ||1||
    ಮಾರ್ಕಂಡೇಯನಿಂತೆದನು : ಸೂರ್ಯಪುತ್ರನಾದ ಸಾವರ್ಣಿಯೆಂಬ ಎಂಟನೆಯ ಮನುವು ಯಾವನಿರುವನೋ ಅವನು ಹುಟ್ಟಿದ್ದನ್ನು ಈಗ ವಿಸ್ತಾರವಾಗಿ ಹೇಳುವೆನು ನಾನು (ಹೇಳಿದ್ದನ್ನು) ಕೇಳುವವನಾಗು.

ಮಹಾಮಾಯಾನುಭಾವೇನ ಯಥಾ ಮನ್ವಂತರಾಧಿಪಃ |
ಸ ಬಭೂವ ಮಹಾಭಾಗಃ ಸಾವರ್ಣಿಸ್ತನಯೋ ರವೇಃ ||2||
    ಮಹಾಮಾಯೆಯಾದ (ದೇವಿಯ) ಅನುಗ್ರಹದಿಂದ ಆ ಮಹಾಭಾಗನು ಸೂರ್ಯಪುತ್ರನಾದ ಸಾವರ್ಣಿಯೆನಿಸಿ ಮನ್ವಂತರಾಧಿಪತಿಯಾಗಿ ಹೇಗೆ ಆದನೋ ( ಆ ವೃತ್ತಾಂತವನ್ನು ಕೇಳು).

ಸ್ವಾರೋಚಿಷೇನ್ತರೇ ಪೂರ್ವಂ ಚೈತ್ರವಂಶಸಮುದ್ಭವಃ |
ಸುರಥೋ ನಾಮ ರಾಜಾಭೂತ್ ಸಮಸ್ತೇ ಕ್ಷಿತಮಂಡಲೇ ||3||
ತಸ್ಯ ಪಾಲಯತಃ ಸಮ್ಯಕ್ ಪ್ರಜಾಃ ಪುತ್ರಾನಿವೌರಸಾನ್ |
ಬಭೂವುಃ ಶತ್ರವೋ ಭೂಪಾಃ ಕೋಲಾವಿಧ್ಸಂಸಿನಸ್ತದಾ ||4||
    ಹಿಂದೆ ಸ್ವಾರೋಚಿಷಮನ್ವಂತರದಲ್ಲಿ ಚೈತ್ರವೆಂಬ ವಂಶದಲ್ಲಿ ಹುಟ್ಟಿದವನಾದ ಸುರಥನೆಂಬ ರಾಜನು ಇಡಿಯ ಭೂಮಂಡಲಕ್ಕೆ ಒಡೆಯನಾಗಿದ್ದನು. ಅವನು ಪ್ರಜೆಗಳನ್ನು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆ ಚೆನ್ನಾಗಿ ಕಾಪಾಡುತ್ತಿರಲಾಗಿ ಕೋಲಾವಿಧ್ವಂಸಕರೆಂಬ ಕೆಲವು ರಾಜರುಗಳು ಶತ್ರುಗಳಾದರು.

ತಸ್ಯ ತೈರಭವದ್ ಯುದ್ಧಮತಿಪ್ರಬಲದಂಡಿನಃ |
ನ್ಯೂನೈರಪಿ ಸ ತೈರ್ಯುದ್ಧೇ ಕೋಲಾವಿಧ್ವಂಸಿಭಿರ್ಜಿತಃ ||5||
ತತಃ ಸ್ವಪುರಮಾಯಾತೋ ನಿಜದೇಶಾಧಿಪೋಭವತ್ |
ಆಕ್ರಾಂತಃ ಸ ಮಹಾಭಾಗಸ್ತೈಸ್ತದಾ ಪ್ರಬಲಾರಿಭಿಃ ||6||
ಅಮಾತ್ಯೈರ್ಬಲಿಭಿಃ ದುಷ್ಟೈದುರ್ಬಲಸ್ಯ ದುರಾತ್ಮಭಿಃ |
ಕೋಶೋ ಬಲಂ ಚಾಪಹೃತಂ ತತ್ರಾಪಿ ಸ್ವಪುರೇ ತತಃ ||7||
    ಅತಿ ಹೆಚ್ಚಿನ ಸೈನ್ಯವುಳ್ಳ ಅವನು ಆ ಶತ್ರುಗಳೊಡನೆ ಯುದ್ಧ ಮಾಡಿದನು (ಶತ್ರುಗಳು) ಅಲ್ಪಸಂಖ್ಯೆಯವರಿದ್ದರೂ ಆ ಕೋಲಾವಿಧ್ವಂಸಿಗಳಿಗೆ ಈತನು ಸೋತುಹೋದನು ಅನಂತರ ತನ್ನ ಊರಿಗೆ ಹಿಂದಿರುಗಿ (ಸಾರ್ವಭೌಮಪದವಿಯು ನಷ್ಟವಾದರೂ) ಕೇವಲ ತನ್ನ ದೇಶಕ್ಕೆ ರಾಜನಾದನು ಆದರೂ ಅಲ್ಲಿಯೂ ಆ ಮಹಾಭಾಗನು ಬಲಿಷ್ಠರೂ ದುಷ್ಟರೂ ದುರಾತ್ಮರೂ ಆದ ಮಂತ್ರಿಗಳಿಂದ ಅವರಿಸಲ್ಪಟ್ಟನು ಆ ಶತ್ರುಗಳಿಂದ ಅವನ ಭಂಡಾರ, ಬಲ(ಅಧಿಕಾರಗಳೆಲ್ಲವೂ) ಅಪಹರಿಸಲ್ಪಟ್ಟವು ಹೀಗೆ ತನ್ನ ಊರಿನಲ್ಲಿಯೂ ಆತನಿಗೆ ಉಳಿಗಾಲವಿಲ್ಲವಾಯಿತು.

ತತೋ ಮೃಗಯಾವ್ಯಾಜೇನ ಹೃತಸ್ವಾಮ್ಯಃ ಸ ಭೂಪತಿಃ |
ಏಕಾಕೀ ಹಯಮಾರುಹ್ಯ ಜಗಾಮ ಗಹನಂ ವನಮ್ ||8||
    ಅನಂತರ ಎಲ್ಲಾ ಐಶ್ವರ್ಯವೂ ನಾಶವಾಗಲಾಗಿ ಆ ರಾಜನು ಬೇಟೆಯಾಡುವ ನೆಪದಿಂದ ಒಬ್ಬನೇ ಕುದುರೆಯನ್ನೇರಿ ದಟ್ಟವಾದ ಕಾಡನ್ನು ಹೊಕ್ಕನು.

ಸ ತತ್ರಾಶ್ರಮಮದ್ರಾಕ್ಷೀತ್ ದ್ವಿಜವರ್ಯಸ್ಯ ಮೇಧಸಃ |
ಪ್ರಶಾಂತಶ್ವಾಪದಾಕೀರ್ಣಂ ಮುನಿಶಿಷ್ಯೋಪಶೋಭಿತಮ್ ||9||
ತಸ್ಥೌ ಕಂಚಿತ್ ಸ ಕಾಲಂ ಚ ಮುನಿನಾ ತೇನ ಸತ್ಕೃತಃ |
ಇತಶ್ಚೇತಶ್ಚ ವಿಚರನ್ ತಸ್ಮಿನ್ ಮುನಿವರಾಶ್ರಮೇ ||10||
    ಅವನು ಅಲ್ಲಿ ಒಬ್ಬ ಬ್ರಾಹ್ಮಣಶ್ರೇಷ್ಠನೂ ಮೇಧಾವಿಯೂ ಆದ ಋಷಿಯ ಆಶ್ರಮವನ್ನು ಕಂಡನು ಅದು ಆ ಮುನಿಯ ಶಿಷ್ಯರುಗಳಿಂದ ಶೋಭಿಸುತ್ತಿತ್ತು ಯಾವದೇ ಮೃಗಗಳ ಕಾಟವಿರಲಿಲ್ಲ ಅಲ್ಲಿ ಆ ಮುನಿಯಿಂದ ಸತ್ಕಾರವನ್ನು ಹೊಂದಿದ (ರಾಜನು) ಆ ಆಶ್ರಮದಲ್ಲಿಯೇ ಅತ್ತಿತ್ತ ಸಂಚರಿಸುತ್ತಾ ಕೆಲವು ಕಾಲವನ್ನು ಕಳೆದನು.

ಸೋಚಿಂತಯತ್ತದಾ ತತ್ರ ಮಮತ್ವಾಕೃಷ್ಟಚೇತನಃ |
ಮತ್ಪೂರ್ವೈಃ ಪಾಲಿತಂ ಪೂರ್ವ ಮಯಾ ಹೀನಂ ಪುರಂ ಹಿ ತತ್ ||11||
ಮದ್ಬೃತ್ಯೈಃ ತೈರಸದ್‌ವೃತ್ತೈಃ ಧರ್ಮತಃ ಪಾಲ್ಯತೇ ನ ವಾ |
ನ ಜಾನೇ ಸ ಪ್ರಧಾನೋ ಮೇ ಶೂರಹಸ್ತೀ ಸದಾಮದಃ
ಮಮ ವೈರಿವಶಂ ಯಾತಃ ಕಾನ್ ಭೋಗಾನುಪಲಪ್ಸ್ಯತೇ ||12||
    ಆಗ ಆತನು (ನಾನು) ನನ್ನದೆಂಬ (ಮಾಯೆಗೆ) ವಶವಾದ ಮನಸ್ಸುಳ್ಳವನಾಗಿ ಹೀಗೆ ಚಿಂತಿಸುತ್ತಿದ್ದನು: 'ನನ್ನ ಪೂರ್ವಜರಿಂದ ಆಳಲ್ಪಟ್ಟಿದ್ದ ಆ ಪಟ್ಟಣವು ಈಗ ನಾನಿಲ್ಲದ್ದಾಗಿದೆ. ದುರಾಚಾರಿಗಳಾದ ನನ್ನ ಸೇವಕರು ಅದನ್ನು ಧರ್ಮದಿಂದ ಆಳುತ್ತಾರೊ ಹೇಗೊ? ಯಾವಾಗಲೂ ಮದಸಂಪನ್ನವಾಗಿದ್ದ ಮುಕ್ಯವಾದ ಬಲವಾದ ಆ ನನ್ನ ಆನೆಯು ನನ್ನ ಶತ್ರುವಿಗೆ ವಶವಾದ ಮೇಲೆ ಏನು ಸುಖವನ್ನು ಹೊಂದೀತೋ ಕಾಣೆನು.

ಯೇ ಮಮಾನುಗತಾ ನಿತ್ಯಂ ಪ್ರಸಾದಧನಬೋಜನೈಃ |
ಅನುವೃತ್ತಿಂ ಧ್ರುವಂ ತೇದ್ಯ ಕುರ್ವಂತ್ಯನ್ಯಮಹೀಭೃತಾಮ್ ||13||
ಅಸಮ್ಯಗ್‌ವ್ಯಯಶೀಲೈಸ್ತೈಃ ಕುರ್ವದ್ಭಿಃ ಸತತಂ ವ್ಯಯಮ್ |
ಸಂಚಿತಃ ಸೋತಿದುಃಖೇನ ಕ್ಷಯಂ ಕೋಶೋ ಗಮಿಷ್ಯತಿ
ಏತಚ್ಛಾನ್ಯಚ್ಛ ಸತತಂ ಚಿಂತಯಾಮಾಸ ಪಾರ್ಥಿವಃ ||14||
    ಯಾರು ಪ್ರತಿದಿನವೂ ನನ್ನೊಡನೆ ಊಟಮಾಡುತ್ತಾ ಸೇವೆ ಮಾಡಿಕೊಂಡಿದ್ದರೋ ಅವರುಗಳು ಬೇರೆಯ ರಾಜರನ್ನು ನಿಶ್ಚಯವಾಗಿಯೂ ಅನುಸರಿಸುವರೊ? ಹೇಗೊ? ಸರಿಯಾಗಿ ವೆಚ್ಚಮಾಲು ಬಾರದ ಆ ಜನರಿಂದ ಬಹಳ ಕಷ್ಟಪಟ್ಟು ನಾನು ಕೂಡಿಸಿಟ್ಟದ್ದ ಭಂಡಾರವು ಅವರುಗಳ ಸದಾಕಾಲದ ಖರ್ಚಿನಿಂದ ಖಾಲಿಯಾಗಿಬಿಡಬಹುದೇನೊ? ಹೀಗೆಲ್ಲ ಇನ್ನೂ ಬೇರೆಬೇರೆಯ ಏನೇನೋ ವಿಚಾರಗಳನ್ನು ಕುರಿತು ಆ ರಾಜನು ಆಲೋಚಿಸುತ್ತಿದ್ದನು.

ತತ್ರ ವಿಪ್ರಾಶ್ರಮಾಭ್ಯಾಶೇ ವೈಶ್ಯಮೇಕಂ ದದರ್ಶ ಸಃ |
ಸ ಪೃಷ್ಟಸ್ತೇನ ಕಸ್ತ್ವಂ ಭೋ ಹೇತುಶ್ಚಾಗಮನೇತ್ರ ಕಃ ||15||
ಸಂಶೋಕ ಇವ ಕಸ್ಮಾತ್ ತ್ವಂ ದುರ್ಮನಾ ಇವ ಲಕ್ಷ್ಯಸೇ |
ಇತ್ಯಾಕರ್ಣ್ಯ ವಚಸ್ತಸ್ಯ ಭೂಪತೇಃ ಪ್ರಣಯೋದಿತಮ್
ಪ್ರತ್ಯುವಾಚ ಸ ತಂ ವೈಶ್ಯಃ ಪ್ರಶ್ರಯಾವನತೋ ನೃಪಮ್ ||16||
    ಅಲ್ಲಿ ಆ(ರಾಜನು) ಋಷಿಯ ಆಶ್ರಮದ ಸಮೀಪದಲ್ಲಿಯೇ ಒಬ್ಬ ವೈಶ್ಯನನ್ನು ಕಂಡನು ಅವನನ್ನು ಕುರಿತು 'ನೀನು ಯಾರು? ಇಲ್ಲಿಗೇಕೆ ಬಂದಿದ್ದೀಯೆ? ಏತಕ್ಕಾಗಿ ನೀನು ಶೋಕವುಳ್ಳವನಂತೆಯೂ ಬೇಜಾರುಪಟ್ಟು ಕೊಂಡಿರುವಂತೆಯೂ ಕಂಡುಬರುತ್ತಿರುವೆ?' ಎಂದನು ರಾಜನು ಹೀಗೆ ಪ್ರೀತಿ ಪೂರ್ವಕವಾಗಿ ಕೇಳಲಾಗಿ ಆ ವೈಶ್ಯನು ವಿನಯಪೂರ್ವಕವಾಗಿ ಅವನನ್ನು ಕುರಿತು ಹೀಗೆಂದನು.

ವೈಶ್ಯ ಉವಾಚ -
ಸಮಾಧಿರ್ನಾಮ ವೈಶ್ಯೋಹಮುತ್ಪನ್ನೋ ಧನಿನಾಂ ಕುಲೇ |
ಪುತ್ರದಾರೈರ್ನಿರಸ್ತಶ್ಚ ಧನಲೋಭಾದಸಾಧುಭಿಃ
ವಿಹೀನಶ್ಚಧನೈರ್ದಾರೈಃ ಪುತ್ರೈರಾದಾಯ ಮೇ ಧನಮ್ ||17||
    ವೈಶ್ಯನಿಂತೆಂದನು: ಧನಿಕರ ವಂಶದಲ್ಲಿ ಹುಟ್ಟಿರುವ 'ಸಮಾಧಿ' ಎಂಬ ಹೆಸರಿನ ವೈಶ್ಯನು ನಾನು ದುಷ್ಟರೂ ಹಣದ ಆಸೆಯುಳ್ಳವರೂ ಆದ ಮಕ್ಕಳ ಹೆಂಡತಿಯರಿಂದ ನಾನು ಹೊರಹಾಕಲ್ಪಟ್ಟೆನು ಮಕ್ಕಳುಗಳು ನನ್ನ ಹಣವನ್ನೆಲ್ಲ ತೆಗೆದುಕೊಂಡು ಧನದಾರಾದಿಗಳಿಂದ ನಾನು ಹೀನನಾಗುವಂತೆ ಮಾಡಿಬಿಟ್ಟರು.

ವನಮಭ್ಯಾಗತೋ ದುಃಖೀ ನಿರಸ್ತಶ್ಚಾಪ್ತಬಂಧುಭಿಃ |
ಸೋಹಂ ನ ವೇದ್ಮಿಪುತ್ರಾಣಾಂ ಕುಶಲಾಕುಶಲಾತ್ಮಿಕಮ್ ||18||
ಪ್ರವೃತ್ತಿಂ ಸ್ವಜನಾನಾಂ ಚ ದಾರಾಣಾಂ ಚಾತ್ರ ಸಂಸ್ಥಿತಃ |
ಕಿಂ ನು ತೇಷಾಂ ಗೃಹೇ ಕ್ಷೇಮಮಕ್ಷೇಮಂ ಕಿಂ ನು ಸಾಂಪ್ರತಮ್ |
ಕಥಂ ತೇ ಕಿಂ ನು ಸದ್ವೃತ್ತಾ ದುರ್ವೃತ್ತಾಃ ಕಿಂ ನು ಮೇ ಸುತಾಃ ||19||
    ಕಾಡಿಗೆ ಬಂದವನಾಗಿ ದುಃಖಿಯಾಗಿ ಆಪ್ತಬಂಧುಗಳಿಂದ ದೂರನಾಗಿ ಈಗ ಮಕ್ಕಳುಗಳ ಕ್ಷೇಮಾಕ್ಷೇಮಗಳ ಹಾಗೂ ಸ್ವಜನರ ಮತ್ತು ಪತ್ನಿಯ ಬದುಕು-ಜೀವನಗಳ ಬಗ್ಗೆ ತಿಳಿಯದೆ ಇದ್ದೇನೆ ಈಗ ಅವರುಗಳೆಲ್ಲ ಚೆನ್ನಾಗಿರುವರೊ ಕಷ್ಟಕ್ಕೆ ಸಿಕ್ಕಿರುವರೊ ಹೇಗಿದ್ದಾರು? ನನ್ನ ಮಕ್ಕಳು ಈಚೆಗೆ ಒಳ್ಳೆಯವರಾಗಿದ್ದಾರೊ ಕೆಟ್ಟವರಾಗಿಯೇ ಇರುವರೊ (ಎಂದು ಚಿಂತೆಯಾಗಿದೆ).

ರಾಜೋವಾಚ _
ಯೈರ್ನಿರಸ್ತೋ ಭವಾನ್ ಲುಬ್ಧೈಃ ಪುತ್ರದಾರಾದಿಭಿರ್ಧನೈಃ |
ತೇಷು ಕಿಂ ಭವತಃ ಸ್ನೇಹಮನುಬಧ್ನಾತಿ ಮಾನಸಮ್ ||20||
    ರಾಜನಿಂತೆಂದನು: ಜಿಪುಣರಾದ ಹೆಂಡಿರುಮಕ್ಕಳುಗಳಿಂದ ನೀನು ತಿರಸ್ಕರಿಸಲ್ಪಟ್ಟವನಾಗಿರುವೆಯಾದರೂ ಅವರಲ್ಲಿ ನಿನ್ನ ಮನಸ್ಸು ಏತಕ್ಕಾಗಿ ಆಸಕ್ತಿಯನ್ನು ಹೊಂದಿರುವದೆಂಬುದನ್ನು (ತಿಳಿಸುವೆಯಾ?)

ವೈಶ್ಯ ಉವಾಚ -
ಏವಮೇತದ್ಯಥಾ ಪ್ರಾಹ ಭವಾನಸ್ಮದ್ಗತಂ ವಚಃ |
ಕಿಂ ಕರೋಮಿ ನ ಬಧ್ನಾತಿ ಮಮ ನಿಷ್ಠುರತಾಂ ಮನಃ ||21||
ಯೈಃ ಸಂತ್ಯಜ್ಯ ಪಿತೃಸ್ನೇಹಂ ಧನುಲಬ್ಧೈರ್ನಿರಾಕೃತಃ |
ಪತಿಸ್ವಜನಹಾರ್ದಂ ಚ ಹಾರ್ದಿ ತೇಷ್ವೇವ ಮೇ ಮನಃ ||22||
    ವೈಶ್ಯನಿಂತೆಂದನು: ಆಹಾ, ನೀನಾದರೊ, ನನ್ನ ಮನಸ್ಸಿನಲ್ಲಿದ್ದುದನ್ನೇ ಹೇಳುತ್ತಿರುವೆ ಇದು ಹೀಗೆಯೇ ಸರಿ ನನ್ನ ಮನಸ್ಸು (ಪುತ್ರಾದಿಗಳ ವಿಷಯದಲ್ಲಿ) ನಿಷ್ಠುರತ್ವವನ್ನು ಹೊಂದುತ್ತಿಲ್ಲ ಏನು ಮಾಡಲಿ? ಹಣದ ಆಶೆಯಿಂದ ತಂದೆಯಮೇಲಿನ ಪ್ರೀತಿಯನ್ನು ಬಿಟ್ಟು ಹಾಗೂ ಗಂಡನೆಂಬ ಮತ್ತು ತನ್ನವನೆಂಬ ಪ್ರೀತಿಯನ್ನೂ ಬಿಟ್ಟ ಯಾವ (ಬಂಧುಗಳಿಂದ) ನಿರಾಕರಿಸಲ್ಪಟ್ಟಿರುವೆನೋ ಅಂಥವರಲ್ಲಿಯೇ ನನ್ನ ಮನಸ್ಸು (ಅಂಟಿಕೊಂಡು) ಕೂತಿದೆ.

ಕಿಮೇತನ್ನಾಭಿಜಾನಾಮಿ ಜಾನನ್ನಪಿ ಮಹಾಮತೇ |
ಯತ್ಪ್ರೇಮಪ್ರವಣಂ ಚಿತ್ತಂ ವಿಗುಣೇಷ್ವಪಿ ಬಂಧುಷು ||23||
ತೇಷಾಂ ಕೃತೇ ಮೇ ನಿಃಶ್ವಾಸೋ ದೌರ್ಮನಸ್ಯಂ ಚ ಜಾಯತೇ |
ಕರೋಮಿ ಕಿಂ ಯನ್ನ ಮನಸ್ತೇಷ್ವಪ್ರೀತಿಷು ನಿಷ್ಠುರಮ್ ||24||
    ಎಲೈ ಮಹಾಬುದ್ಧಿಶಾಲಿಯೆ, ನನಗೆ ಗೊತ್ತಾಗುತ್ತಿದ್ದರೂ ಪ್ರೀತಿಯಿಂದ ಜೋಲುಬಿದ್ದ ಮನಸ್ಸು ದುರ್ಗುಣಿಗಳಾದ ಬಂಧುಗಳ ವಿಷಯದಲ್ಲಿಯೂ ಆಸಕ್ತವಾಗಿರುವುದೇಕೆಂಬುದನ್ನರಿಯೆನು ಅವರುಗಳಿಗೋಸ್ಕರವಾಗಿ ನನಗೆ ಮನಸ್ಸಿನಲ್ಲಿ ದುಗುಡವೂ ನಿಟ್ಟುಸಿರುಬಿಡುವಂಥ ಸ್ಥಿತಿಯೂ ಉಂಟಾಗುತ್ತಿದೆ ಪ್ರೀತಿಯಿಲ್ಲದವರ ವಿಷಯಕ್ಕೆ ನನ್ನ ಮನಸ್ಸನ್ನು ಹಿಂದಿರುಗಿಸಿ ಗಟ್ಟಿಮಾಡಿಕೊಳ್ಳಲು ಏನುಮಾಡಲಿ?

ಮಾರ್ಕಂಡೇಯ ಉವಾಚ -
ತತಸ್ತೌ ಸಹಿತೌ ವಿಪ್ರ ತಂ ಮುನಿಂ ಸಮುಪಸ್ಥಿತೌ |
ಸಮಾಧಿರ್ನಾಮ ವೈಶ್ಯೋಸೌ ಸ ಚ ಪಾರ್ಥಿವಸತ್ತಮಃ ||25||
ಕೃತ್ವಾತು ತೌ ಯಥಾನ್ಯಾಯ್ಯಂ ಯಥಾರ್ಹಂ ತೇನ ಸಂವಿದಮ್ |
ಉಪವಿಷ್ಟೌ ಕಥಾಃ ಕಾಶ್ಚಿತ್ ಚಕ್ರತುರ್ವೈಶ್ಯಪಾರ್ಥಿವೌ ||26||
    ಮಾರ್ಕಂಡೇಯನಿಂತೆಂದನು: ಅನಂತರ ಎಲೈ ವಿಪ್ರನೆ (ಕ್ರೌಷ್ಟಕಿಯೆ) ಕೇಳು; ಅವರಿಬ್ಬರೂ-ಎಂದರೆ ಆ ರಾಜಶ್ರೇಷ್ಠನೂ ಸಮಾಧಿಯೆಂಬ ವೈಶ್ಯನೂ ಆ ಮುನಿಯನ್ನು ಬಳಿಸಾರಿ ಭೇಟಿಮಾಡಿದರು ಗೌರವಕ್ಕೆ ಅನುಗುಣವಾಗಿ ಯೋಗ್ಯರೀತಿಯಿಂದ ಆತನೊಡನೆ ಮಾತನಾಡಿದರು ಹಾಗೆಯೇ ಸ್ವಲ್ಪಕಾಲ ಕುಳಿತು ಕೆಲವು ವೃತ್ತಾಂತಗಳನ್ನು ಆ ರಾಜನೂ ವೈಶ್ಯನೂ ಮಾತನಾಡಿಕೊಂಡರು.

ರಾಜೋವಾಚ -

ಭಗವನ್ ತ್ವಾಮಹಂ ಪ್ರಷ್ಟುಮಿಚ್ಛಾಮ್ಯೇಕಂ ವದಸ್ವ ತತ್ |
ದುಃಖಾಯ ಯನ್ಮೇ ಮನಸಃ ಸ್ವಚಿತ್ತಾಯತ್ತತಾಂ ವಿನಾ ||27||
ಮಮತ್ವಂ ಗತರಾಜ್ಯಸ್ಯ ರಾಜ್ಯಾಂಗೇಷ್ವಖಿಲೇಷ್ವಪಿ |
ಜಾನತೋಪಿ ಯಥಾಜ್ಞಸ್ಯ ಕಿಮೇತನ್ಮುನಿಸತ್ತಮ ||28||
    ಅನಂತರ ರಾಜನು (ಮುನಿಯನ್ನು ಕುರಿತು) ಇಂತೆಂದನು: 'ಪೂಜ್ಯರೆ, ಒಂದು ವಿಚಾರವಾಗಿ ನಿಮ್ಮನ್ನು ಕೇಳಲಿಚ್ಛಿಸುತ್ತೇನೆ. ಅದನ್ನು ಹೇಳಬೇಕು. ಏನೆಂದರೆ: ನನ್ನ ಮನಸ್ಸಿನ ದುಃಖಕ್ಕೆ ಕಾರಣವಾದ - ಆದರೆ ನನ್ನ ಮನಸ್ಸಿಗೆ ಅಧೀನವಿಲ್ಲದ್ದಾಗಿರುವಂಥ (ವಿಚಾರವು ಅದಾಗಿದೆ). ರಾಜ್ಯವನ್ನು ಹಾಗೂ ರಾಜ್ಯದ ಎಲ್ಲಾ ಅಧಿಕಾರವನ್ನೂ ಕಳೆದುಕೊಂಡಮೇಲೂ-ಅದು ಗೊತ್ತಿದ್ದರೂ ದಡ್ಡನಿಗೆ ಹೇಗೋ ಹಾಗೆ-ಹಿಂದಿನಂತೆಯೇ ನನ್ನದು-ಎಂಬ(ಮೋಹ)ವುಂಟಾಗುತ್ತಿದೆ ಮುನಿಶ್ರೇಷ್ಠನೆ, ಇದೇನಿದ್ದೀತು?

ಅಯಂ ಚ ನಿಕೃತಃ ಪುತ್ರೈರ್ದಾರೈರ್ಭೃತ್ಯೈಸ್ತಥೋಝ್ಜಿತಃ |
ಸ್ವಜನೇನ ಚ ಸಂತ್ಯಕ್ತಃ ತೇಷು ಹಾರ್ದೀ ತಥಾಪ್ಯತಿ ||29||
ಏವಮೇಷ ತಥಾಹಂ ಚ ದ್ವಾವಪ್ಯತ್ಯಂತದುಃಖಿತೌ |
ದೃಷ್ಟದೋಷೇಪಿ ವಿಷಯೇ ಮಮತ್ವಾಕೃಷ್ಟಮಾನಸೌ ||30||
ತತ್ಕಿಮೇತನ್ಮಹಾಭಾಗ ಯನ್ಮೋಹೋ ಜ್ಞಾನಿನೋರಪಿ |
ಮಮಾಸ್ಯ ಚ ಭವತ್ಯೇಷಾ ವಿವೇಕಾಂಧಸ್ಯ ಮೂಢತಾ ||31||
    ಇವನೂ ಕೂಡ ಮಕ್ಕಳು, ಹೆಂಡತಿ, ಸೇವಕರುಗಳಿಂದ ಬಿಡಲ್ಪಟ್ಟು ಹಾಗೂ ಸ್ವಜನರಿಂದಲೂ ದೂರನಾಗಿದ್ದರೂ ಹೃದಯದಲ್ಲಿ ಅವರುಗಳ ವಿಷಯಕ್ಕೆ ಅತಿಯಾದ ಆಸಕ್ತಿಯುಳ್ಳವನಾಗಿರುವನು. ನಾನೂ ಹಾಗೆಯೇ ಆಗಿರುವೆನು ಹೀಗೆ ನಾವಿಬ್ಬರೂ ಹೆಚ್ಚಿನ ದುಃಖಿಗಳಾಗಿರುವೆವು ದೋಷಗಳು ಕಂಡುಬಂದಿರುವ ವಿಷಯಗಳಲ್ಲಿಯೂ ವಿವೇಕಿಗಳಾಗಿದ್ದರೂ ನಮಗೆ ನನ್ನದೆಂಬ ಭಾವನೆಯು (ಬಿಡದಾಗಿದ್ದು) ಎಳೆಯುತ್ತಿದೆ ಪೂಜ್ಯರೆ, ಇದೇಕೆ? ಈ ಮೋಹವು ವಿವೇಕವಿಲ್ಲದ ನನಗೂ ಇವನಿಗೂ ಏತಕ್ಕೆ ಉಂಟಾಗಿದೆ?

ಋಷಿರುವಾಚ-

ಜ್ಞಾನಮಸ್ತಿ ಸಮಸ್ತಸ್ಯ ಜಂತೋರ್ವಿಷಯಗೋಚರೇ |
ವಿಷಯಶ್ಚ ಮಹಾಭಾಗ ಯಾತಿ ಚೈವಂ ಪೃಥಕ್ ಪೃಥಕ್ ||32||
ದಿವಾಂಧಾಃ ಪ್ರಾಣಿನಃ ಕೇಚಿತ್ ರಾತ್ರಾವಂಧಾಸ್ತಥಾಪರೇ |
ಕೇಚಿದ್ಧಿವಾ ತಥಾ ರಾತ್ರೌ ಪ್ರಾಣಿನಸ್ತುಲ್ಯದೃಷ್ಟಯಃ ||33||
    ಋಷಿಯಿಂತೆಂದನು: ಎಲ್ಲಾ ಪ್ರಾಣಿಗಳಿಗೂ ಇಂದ್ರಿಯ ಗೋಚರವಾದ (ಅನಾತ್ಮ) ವಸ್ತುವಿನ್ಲಲ್ಲಿ ಜ್ಞಾನವಿರುವದು ನಿಜ. ಎಲೈ ಮಹಾರಾಜನೆ, ಆಯಾ ಪ್ರಾಣಿಗಳಿಗೆ ತಕ್ಕಂತೆ (ಅಭಿಲಷಿತ) ವಿಷಯಗಳೂ ಬಿಡಿಬಿಡಿಯಾಗಿರುವವು ಹೇಗೆಂದರೆ: ಕೆಲವು ಪ್ರಾಣಿ (ಗೂಗೆ-ಮುಂತಾದವು)ಗಳಿಗೆ ಹಗಲುವೇಳೆಯಲ್ಲಿ ಕಣ್ಣು ಕಾಣಿಸುವುದಿಲ್ಲ ಇನ್ನು ಕೆಲವು (ಮನುಷ್ಯ-ಮುಂತಾದವು) ರಾತ್ರೆಯಲ್ಲಿ ಕುರುಡಾಗಿರುವವು ಮತ್ತೆ ಕೆಲವು ಹಗಲು-ರಾತ್ರೆಗಳೆರಡರಲ್ಲಿಯೂ (ಬೆಕ್ಕು ಮುಂತಾದವು) ಸಮಾನವಾದ ದೃಷ್ಟಿಯುಳ್ಳವಾಗಿರುವವು.

ಜ್ಞಾನಿನೋ ಮನುಜಾಃ ಸತ್ಯಂ ಕಿಂ ತು ತೇ ನ ಹಿ ಕೇವಲಮ್ |
ಯತೋ ಹಿ ಜ್ಞಾನಿನಃ ಸರ್ವೇ ಪಶುಪಕ್ಷಿಮೃಗಾದಯಃ ||34||
ಜ್ಞಾನಂ ಚ ತನ್ಮನುಷ್ಯಾಣಾಂ ಯತ್ತೇಷಾಂ ಮೃಗಪಕ್ಷಿಣಾಮ್ |
ಮನುಷ್ಯಾಣಾಂ ಚ ಯತ್ತೇಷಾಂ ತುಲ್ಯಮನ್ಯತ್ತಥೋಭಯೋಃ ||35||
    ಮನುಷ್ಯರು ಜ್ಞಾನವುಳ್ಳವರೆಂಬುದು ಸರಿಯೆ ಆದರೆ ಅವರು ಮಾತ್ರವೇ ಅಲ್ಲ; ಪಶುಪಕ್ಷಿಮೃಗಗಳೇ ಮುಂತಾದವೆಲ್ಲವೂ ಜ್ಞಾನಿಗಳೇ ಜ್ಞಾನವೆಂಬುದೇನಿದೆಯೋ ಅದು ಮನುಷ್ಯರಂತೆ ಪಶುಪಕ್ಷಿಗಳಲ್ಲಿಯೂ, ಹಾಗೆಯೇ(ಪಶುಪಕ್ಷಿಗಳಂತೆಯೇ) ಮನುಷ್ಯರಲ್ಲಿಯೂ ಸಮಾನವಾಗಿರುವದು.

ಜ್ಞಾನೇಪಿ ಸತಿ ಪಶ್ಯೈತಾನ್ ಪತಂಗಾನ್ ಶಾವಚಂಚುಷು |
ಕಣಮೋಕ್ಷಾದೃತಾನ್ ಮೋಹಾತ್ ಪೀಡ್ಯಮಾನಾನಪಿ ಕ್ಷುಧಾ ||36||
ಮಾನುಷಾ ಮನುಜವ್ಯಾಘ್ರ ಸಾಭಿಲಾಷಾಃ ಸುತಾನ್ ಪ್ರತಿ |
ಲೋಭಾತ್ ಪ್ರತ್ಯುಪಕಾರಾಯ ನನ್ವೇತಾನ್ ಕಿಂ ನ ಪಶ್ಯಸಿ ||37||
    ತಿಳಿವಳಿಕೆಯಿದ್ದರೂ ಮೋಹದಿಂದ (ತಾನು) ಹಸಿವಿನಿಂದ ಪೀಡಿಸಲ್ಪಡುತ್ತಿದ್ದರೂ ಹಕ್ಕಿಗಳು ತಮ್ಮ ಮರಿಗಳ ಕೊಕ್ಕುಗಳಿಗೆ ಕಾಳುಗಳನ್ನು ಉಣಿಸುವದರಲ್ಲಿ ಆಸಕ್ತವಾಗಿರುವವದನ್ನು ನೋಡು ಎಲೈ ಪುರುಷಶ್ರೇಷ್ಠನೆ ಹಾಗೆಯೇ ಪ್ರತ್ಯುಪಕಾರದ ಅಭಿಲಾಷೆಯಿಂದ ಕೂಡಿ ಮಕ್ಕಳ ವಿಷಯದಲ್ಲಿ ಮೋಹದಿಂದ ನಡೆದುಕೊಳ್ಳುವಂಥ ಮನುಷ್ಯರನ್ನೂ ನೀನೇಕೆ ತಿಳಿಯುವದಿಲ್ಲ?

ತಥಾಪಿ ಮಮತಾವರ್ತೇ ಮೋಹಗರ್ತೇ ನಿಪಾತಿತಾಃ |
ಮಹಾಮಾಯಾಪ್ರಭಾವೇಣ ಸಂಸಾರಸ್ಥಿತಿಕಾರಿಣಾ ||38||
ತನ್ನಾತ್ರ ವಿಸ್ಮಯಃ ಕಾರ್ಯೋ ಯೋಗನಿದ್ರಾ ಜಗತ್ಪತೇಃ |
ಮಹಾಮಾಯಾ ಹರೇಶ್ಚೈಷಾ ತಯಾ ಸಂವೋಹ್ಯತೇ ಜಗತ್ ||39||
    ಹೀಗಿದ್ದರೂ ಸಂಸಾರದ ಇರುವಿಕೆಗೆ ಕಾರಣವಾದ ಮಹಾಮಾಯೆಯ ಪ್ರಭಾವದಿಂದ ನನ್ನದೆಂಬ ಸುಳಿಯಲ್ಲಿ (ಸಿಕ್ಕಿ) ಮೋಹವೆಂಬ ಗುಂಡಿಯಲ್ಲಿ (ಜನರು) ಕೆಡವಲ್ಪಟ್ಟಿರುವರು ಆದ್ದರಿಂದ ಈ ವಿಷಯದಲ್ಲಿ ಆಶ್ಚರ್ಯಪಡಬೇಕಾದದ್ದಿಲ್ಲ ಜಗದೊಡಯನಾದ ಹರಿಯ (ಶಕ್ತಿಯಾದ) ಯೋಗನಿದ್ರೆಯೇ ಈ ಮಾಹಾ ಮಾಯೆಯು ಈಕೆಯಿಂದಲೇ ಜಗತ್ತೆಲ್ಲವೂ ಮೋಹಕ್ಕೆ ಒಳಗಾಗಿರುವದು.

ಜ್ಞಾನಿನಾಮಪಿ ಚೇತಾಂಸಿ ದೇವೀ ಭಗವತೀ ಹಿ ಸಾ |
ಬಲಾದಾಕೃಷ್ಯ ಮೋಹಾಯ ಮಹಾಮಾಯಾ ಪ್ರಯಚ್ಛತಿ ||40||
ತಯಾ ವಿಸೃಜ್ಯತೇ ವಿಶ್ವಂ ಜಗದೇತಚ್ಚರಾಚರಮ್ |
ಸೈಷಾ ಪ್ರಸನ್ನಾ ವರದಾ ನೃಣಾಂ ಭವತಿ ಮುಕ್ತಯೇ ||41||
ಸಾ ವಿದ್ಯಾ ಪರಮಾ ಮುಕ್ತೇಃ ಹೇತುಭೂತಾ ಸನಾತನೀ |
ಸಂಸಾರಬಂಧಹೇತುಶ್ಚ ಸೈವ ಸರ್ವೇಶ್ವರೇಶ್ವರೀ ||42||
    ಪೂಜ್ಯಳಾದ ಮಹಾಮಯೆಯೆನಿಸಿದ ಆ ದೇವಿಯು ಜ್ಞಾನಿಗಳ ಮನಸ್ಸನ್ನು ಕೂಡ ಬಲಾತ್ಕಾರವಾಗಿ ಸೆಳೆದು ಮೋಹಕ್ಕೆ ವಶವಾಗಿಸಿ ಬಿಡುವಳು ಈ ಸ್ಥಾವರಜಂಗಮರೂಪವಾದ ಇಡಿಯ ಜಗತ್ತೆಲ್ಲವೂ ಆಕೆಯಿಂದಲೇ ಹೊರಬರುವದು ಈ ದೇವಿಯು ಮನುಷ್ಯರಿಗೆ ಒಲಿದವಳಾದರೆ ಮುಕ್ತಿಗೆ(ದ್ವಾರ)ಳಾಗುವಳು ಹೇಗೆಂದರೆ ಸನಾತನವಾದ ವಿದ್ಯಾರೂಪಳಾದ ಆಕೆಯು ಪರಮ (ವಿದ್ಯೆಯೆನಿಸಿದ್ದು) (ಅಜ್ಞಾನಕೃತವಾದ ಬಂಧದಿಂದ) ಬಿಡುಗಡೆಯನ್ನು ಮಾಡಿಸುವವಳಾಗಿ ಮೋಕ್ಷಹೇತುವೆನಿಸಿರುವಳು ಹಾಗೆಯೇ ಆ ಸರ್ವೇಶ್ವರೇಶ್ವರಿಯೇ ಬಂಧಕಾರಣಳೂ ಆಗಿರುವಳು.

ರಾಜೋವಾಚ -

ಭಗವನ್ ಕಾ ಹಿ ಸಾ ದೇವೀ ಮಹಾಮಾಯೇತಿ ಯಾಂ ಭವಾನ್ |
ಬ್ರವೀತಿ ಕಥಮುತ್ಪನ್ನಾ ಸಾ ಕರ್ಮಸ್ಯಾಶ್ಚ ಕಿಂ ದ್ವಿಜ ||43||
ಯತ್ಪ್ರಭಾವಾ ಚ ಸಾ ದೇವೀ ಯತ್ಸ್ವರೂಪಾ ಯದುದ್ಬವಾ |
ತತ್ಸರ್ವಂ ಶ್ರೋತುಮಿಚ್ಛಾಮಿ ತ್ವತ್ತೋ ಬ್ರಹ್ಮವಿದಾಂ ವರ ||44||
    ರಾಜನಿಂತೆಂದನು: ಪೂಜ್ಯನಾದ ದ್ವಿಜನೆ, ಯಾವಾಕೆಯನ್ನು ಮಹಾಮಾಯೆಯೆಂದು ನೀನು ಹೇಳುತ್ತಿರುವೆಯೋ ಆಕೆಯು ಯಾರು? ಅವಳು ಹುಟ್ಟಿರುವದು ಹೇಗೆ? ಆಕೆಯ ಕರ್ಮವಾದರೂ ಏನು? ಆ ದೇವಿಯ ಮಹಿಮೆಯು ಏನು? ಅವಳ ಸ್ವರೂಪವೇನು? ಏತರಿಂದ ಹುಟ್ಟಿದಳು? ಎಲೈ ಬ್ರಹ್ಮವಿದರಲ್ಲಿ ಶ್ರೇಷ್ಠನೆ, ನಿನ್ನಿಂದ ಈ ಎಲ್ಲಾ ವಿಚಾರಗಳನ್ನೂ ಕೇಳಲಿಚ್ಛಿಸುವೆನು.

ಋಷಿರುವಾಚ -

ನಿತ್ಯೈವ ಸಾ ಜಗನ್ಮೂರ್ತಿ ತಯಾ ಸರ್ವಮಿದಂ ತತಮ್ |
ತಥಾಪಿ ತತ್ಸಮುತ್ಪತ್ತಿರ್ಬಹುಧಾ ಶ್ರೂಯತಾಂ ಮಮ ||45||
ದೇವಾನಾಂ ಕಾರ್ಯಸಿದ್ಧ್ಯರ್ಥಮಾವಿರ್ಭವತಿ ಸಾ ಯದಾ |
ಉತ್ಪನ್ನೇತಿ ತದಾ ಲೋಕೇ ಸಾ ನಿತ್ಯಾಪ್ಯಭಿಧೀಯತೇ ||46||
    ಋಷಿಯಿಂತೆಂದನು: ಜಗದ್ರೂಪಳಾಗಿಯೂ (ಎಲ್ಲ ಜಗತ್ತನ್ನೂ) ವ್ಯಾಪಿಸಿಕೊಂಡವಳಾಗಿಯೂ ಇರುವ ಆಕೆಯು ನಿತ್ಯಳೇ ಹೀಗೆದ್ದರೂ ಅವಳ ಹುಟ್ಟು ಬಹಳ ರೀತಿಯಿಂದ ಪ್ರಸಿದ್ಧವಾಗಿದೆ ನಾನು ಈಗ ಹೇಳುವದನ್ನು ಕೇಳು ಆಕೆಯು ದೇವತೆಗಳ ಕಾರ್ಯಸಿದ್ಧಿಗಾಗಿ ಯಾವಾಗ ಹೊರತೋರಿಕೊಳ್ಳುವಳೋ ಆಗ(ಜನರು) ಅವಳು ನಿತ್ಯಳೇ ಆಗಿದ್ದರೂ - ಹುಟ್ಟಿದವಳೆಂದು ವ್ಯವಹರಿಸುವರು.

ಯೋಗನಿದ್ರಾಂ ಯದಾ ವಿಷ್ಣುರ್ಜಗತ್ಯೇಕಾರ್ಣವೀಕೃತೇ |
ಆಸ್ತೀರ್ಯ ಶೇಷಮಭಜತ್ ಕಲ್ಪಾಂತೇ ಭಗವಾನ್ ಪ್ರಭುಃ ||47||
ತದಾ ದ್ವಾವಸುರೌ ಘೋರೌ ವಿಖ್ಯಾತೌ ಮಧುಕೈಟಭೌ |
ವಿಷ್ಣುಕರ್ಣಮಲೋದ್ಬೂತೌ ಹಂತುಂ ಬ್ರಹ್ಮಾಣಮುದ್ಯತೌ ||48||
    ಕಲ್ಪದ ಕೊನೆಯಲ್ಲಿ ಪ್ರಪಂಚವೆಲ್ಲವೂ ನೀರಿನಲ್ಲಿ ಒಂದಾಗಿ (ಪ್ರಲಯಹೊಂದಿರಲಾಗಿ) ಯಾವಾಗ ಪ್ರಭುವಾದ ಭಗವಾನ್ ವಿಷ್ಣುವು ಆದಿಶೇಷನ ಹಾಸಿಗೆಯಮೇಲೆ ಮಲಗಿದನೋ ಆಗ ಆ ವಿಷ್ಣುವಿನ ಕಿವಿಗಳ ಕೊಳೆಯಿಂದ ಹುಟ್ಟಿದ ಭಯಂಕರರಾದ, ಮಧುಕೈಟಭರೆಂದು ವಿಖ್ಯಾತರಾದ ಇಬ್ಬರು ರಾಕ್ಷಸರು ಬ್ರಹ್ಮನನ್ನು ಕೊಲ್ಲಲು ಉದ್ಯುಕ್ತರಾದರು.

ನ ನಾಭಿಕಮಲೇ ವಿಷ್ಣೋಃ ಸ್ಥಿತೋ ಬ್ರಹ್ಮಾಪ್ರಜಾಪತಿಃ |
ದೃಷ್ಟ್ವಾತಾವಸುರೌ ಚೋಗ್ರೌ ಪ್ರಸುಪ್ತಂ ಚ ಜನಾರ್ದನಮ್ ||49||
ತುಷ್ಟಾವ ಯೋಗನಿದ್ರಾಂ ತಾಮೇಕಾಗ್ರಹೃದಯಸ್ಥಿತಃ |
ವಿಬೋಧನಾರ್ಥಾಯ ಹರೇರ್ಹರಿನೇತ್ರ ಕೃತಾಲಯಮ್ ||50||
ವಿಶ್ವೇಶ್ವರೀಂ ಜಗದ್ಧಾತ್ರೀಂ ಸ್ಥಿತಿಸಂಹಾರಕಾರಿಣೀಮ್ |
ನಿದ್ರಾಂ ಭಗವತೀಂ ವಿಷ್ಣೋರತುಲಾಂ ತೇಜಸಃ ಪ್ರಭುಃ ||51||
    ವಿಷ್ಣುವಿನ ನಾಭಿಕಮಲದಲ್ಲಿದ್ದ ಪ್ರಜಾಪತಿಯಾದ ಆ ಬ್ರಹ್ಮನು ಭಯಂಕರರಾದ ಆ ಇಬ್ಬರು ರಾಕ್ಷಸರನ್ನು ಕಂಡು (ಹೆದರಿ) ಮಲಗಿದ್ದ ಮಹಾವಿಷ್ಣುವನ್ನು ನೋಡಿ(ಏನೂ ತೋಚದೆ) ಹರಿಯನ್ನು ಎಬ್ಬಿಸುವ ಸಲುವಾಗಿ ಆತನ ಕಣ್ಣುಗಳನ್ನೇ ವಾಸಸ್ಥಾನವಾಗಿ ಹೊಂದಿದ್ದ ಹಾಗೂ ವಿಶ್ವಕ್ಕೆಲ್ಲ ಒಡೆಯಳೂ ಜಗತ್ತಿಗೆ ತಾಯಿಯೂ ಸ್ಥಿತಿಸಂಹಾರಗಳನ್ನು ಕೈಗೊಳ್ಳುವವಳೂ ಆದ ವಿಷ್ಣುವಿನ ನಿರತಿಶಯ ತೇಜೋ ರೂಪಳಾದ ಭಗವತಿಯಾದ ಯೋಗನಿದ್ರಾದೇವಿಯನ್ನು ಏಕಾಗ್ರವಾದ ಮನಸ್ಸಿನಿಂದ ಕೂಡಿದವನಾಗಿ ಸ್ತೋತ್ರಮಾಡಿದನು.

ಬ್ರಹ್ಮೋವಾಚ -
ತ್ವಂ ಸ್ವಾಹಾ ತ್ವಂ ಸ್ವಧಾ ತ್ವಂ ಹಿ ವಷಟ್‌ಕಾರಃ ಸ್ವರಾತ್ಮಿಕಾ |
ಸುಧಾ ತ್ವಮಕ್ಷರೇ ನಿತ್ಯೇ ತ್ರಿಧಾ ಮಾತ್ರಾತ್ಮಿಕಾ ಸ್ಥಿತಾ ||52||
ಅರ್ಧಮಾತ್ರಾಸ್ಥಿತಾ ನಿತ್ಯಾ ಯಾನುಚ್ಚಾರ್ಯಾ ವಿಶೇಷತಃ |
ತ್ವಮೇವ ಸಂಧ್ಯಾ ಸಾವಿತ್ರೀ ತ್ವಂ ದೇವೀ ಜನನೀ ಪರಾ ||53||
    ಬ್ರಹ್ಮನಿಂತೆಂದನು - 'ನೀನೇ ಸ್ವಾಹಾ (ದೇವಿಯು) ಸ್ವಧೇಯೂ ನೀನೇ ಸ್ವರತತ್ತ್ವಳಾದ ವಷಟ್‌ಕಾರಳೂ ಅಮೃತಳೂ ನೀನೇ ಎಲೈ ಅಕ್ಷರಲೂ ನಿತ್ಯಳೂ ಆದ ದೇವಿಯೆ (ಓಂಕಾರದ) ಮೂರುಮಾತ್ರಾ ರೂಪಳೂ ಅರ್ಧಮಾತ್ರೆಯೂ ನೀನೇ ಆಗಿರುವೆ. ವಿಶೇಷವಾಗಿ (ಯಾವ ಸ್ವರವು) ಉಚ್ಚಾರ ಮಾಡಲಾರದಷ್ಟು ಸೂಕ್ಷ್ಮವಾಗಿರುವದೋ ಅದು ನೀನೇ ಸಂಧ್ಯೆಯೆಂದೂ ಸಾವಿತ್ರಿಯೆಂದೂ ಪರಮ ಮಾತೆಯೆಂದೂ ನೀನು (ಸ್ತುತಿಸಲ್ಪಡುವೆ)

ತ್ವಯೈತದ್ಧಾರ್ಯತೇ ವಿಶ್ವಂ ತ್ವಯೈತತ್ ಸೃಜ್ಯತೇ ಜಗತ್ |
ತ್ವಯೈತತ್ ಪಾಲ್ಯತೇ ದೇವಿ ತ್ವಮತ್ಯ್ಸನ್ತೇ ಚ ಸರ್ವದಾ ||54||
ವಿಸೃಷ್ಟೌಸೃಷ್ಟಿರೂಪಾ ತ್ವಂ ಸ್ಥಿತಿರೂಪಾ ಚ ಪಾಲನೇ |
ತಥಾ ಸಂಹೃತಿರೂಪಾಂತೇ ಜಗತೋಸ್ಯ ಜಗನ್ಮಯೇ ||55||
    ಈ ಪ್ರಪಂಚವು ನಿನ್ನಿಂದಲೇ ಸೃಷ್ಟಿಸಲ್ಪಟ್ಟು ನಿನ್ನಿಂದ ಧರಿಸಲ್ಪಟ್ಟಿದೆ ಹಾಗೆಯೇ ನಿನ್ನಿಂದ ಕಾಪಾಡಲ್ಪಟ್ಟಿದೆ ಕಡೆಗೆ ನೀನೇ ಇದನ್ನು ಉಪಸಂಹಾರ ಮಾಡಿಕೊಳ್ಳುವೆಯಾಗಿ ಯಾವಾಗಲೂ ಇದು (ನೀನೇ ಆಗಿದೆ) ಸೃಷ್ಟಿಕಾಲದಲ್ಲಿ ನೀನು ವಿವಿಧವಾಗಿ ಹುಟ್ಟುವವಳಾಗಿಯೂ ಸ್ಥಿತಿಕಾಲದಲ್ಲಿ ನಾನಾರೂಪದಿಂದ ನೀನೇ ಕಾಪಾಡುವವಳಾಗಿಯೂ ಮತ್ತು ಎಲೌ ಜಗನ್ಮಯಳಾದ ಮಾತೆಯ ಈ ಜಗತ್ತಿನ ಸಂಹಾರಕಾಲದಲ್ಲಿ ನೀನೇ ವಿನಾಶಕಾರಣಳಾಗಿಯೂ ತೋರಿಕೊಳ್ಳುತ್ತಿರುವೆ.

ಮಹಾವಿದ್ಯಾ ಮಹಾಮಾಯಾ ಮಹಾಮೇಧಾ ಮಹಾಸ್ಮೃತಿಃ |
ಮಹಾಮೋಹಾ ಚ ಭವತೀ ಮಹಾದೇವೀ ಮಹಾಸುರೀ ||56||
ಪ್ರಕೃತಿಸ್ತ್ವಂ ಚ ಸರ್ವಸ್ಯ ಗುಣತ್ರಯವಿಭಾವಿನೀ |
ಕಾಲರಾತ್ರಿರ್ಮಹಾರಾತಿರ್ಮೋಹರಾತ್ರಿಶ್ಚದಾರುಣಾ ||57||
ತ್ವಂ ಶ್ರೀಸ್ತ್ವಮೀಶ್ವರೀ ತ್ವಂ ಹ್ರೀಸ್ತ್ವಂ ಬುದ್ಧಿರ್ಬೋಧಲಕ್ಷಣಾ |
ಲಜ್ಜಾಪುಷ್ಟಿಸ್ತಥಾ ತುಷ್ಟಿಸ್ವಂ ಶಾಂತಿಃ ಕ್ಷಾಂತಿರೇವ ಚ ||58||
    ನೀನು ಮಹಾವಿದ್ಯಾಸ್ವರೂಪಿಣಿಯ ಹಾಗೆಯೇ ಮೇಧಾ ಸ್ಮೃತಿಗಳ ಪರಮಸ್ವರೂಪಳೂ ಹೌದು (ಅಜ್ಞರಿಗೆ) ಮಾಯೆ, ಮೋಹ, ಅಸುರಭಾವಗಳ ಪರಮಾವಧಿಯಾಗಿರುವೆ ಮೂರುಗುಣಗಳಿಂದ ಹರಡಿಕೊಂಡಿರುವ ನೀನು ಎಲ್ಲರಿಗೂ ಪ್ರಕೃತಿಯು ಭಯಂಕರವಾದ ಕಾಳರಾತ್ರಿ ಮಹಾರಾತ್ರಿ ಮೋಹರಾತ್ರಿಗಳ ಸ್ವರೂಪಳೂ ನೀನೇ ಲಕ್ಷ್ಮಿ, ಈಶ್ವರೀ, ಲಜ್ಜಾ, ತಿಳಿವಳಿಕೆಯರೂಪದ ಬುದ್ಧಿ ಸಂಕೋಚ, ಪುಷ್ಟಿ, ತುಷ್ಟಿ, ಶಾಂತಿ, ಕ್ಷಾಂತಿ ಇವುಗಳೆಲ್ಲೂ ನಿನ್ನ ರೂಪಗಳೇ

ಖಡ್ಗಿನೀ ಶೂಲಿನೀ ಗೋರಾ ಗದಿನೀ ಚಕ್ರಿಣೀ ತಥಾ |
ಶಂಖಿನೀ ಚಾಪಿನೀ ಬಾಣಭುಶುಂಡೀ ಪರಿಘಾಯುಧಾ ||59||
ಸೌಮ್ಯಾ ಸೌಮ್ಯತರಾಶೇಷಸೌಮ್ಯೇಭ್ಯಸ್ತ್ವತಿಸುಂದರೀ |
ಪರಾಪರಾಣಾಂ ಪರಮಾ ತ್ವಮೇವ ಪರಮೇಶ್ವರೀ ||60||
ಯಚ್ಚಕಿಂಚಿದ್ ಕ್ವಚಿದ್ವಸ್ತು ಸದಸದ್ವಾಖಿಲಾತ್ಮಿಕೇ |
ತಸ್ಯ ಸರ್ವಸ್ಯ ಯಾ ಶಕ್ತಿಃ ಸಾ ತ್ವಂ ಕಿಂ ಸ್ತೂಯಸೇ ಮಯಾ ||61||
    ಕತ್ತಿ, ಶೂಲ, ಗದೆ, ಚಕ್ರ, ಶಂಖ, ಬಾಣ, ಬಿಲ್ಲು, ಭುಶುಂಡಿ, ಪರಿಘ - ಈ ಎಲ್ಲ ಆಯುಧಗಳನ್ನೂ ನೀನು ಧರಿಸಿರುವವಳಾಗಿರುವೆ ಆದ್ದರಿಂದ ಭಯಂಕರಳಾಗಿ ಕಾಣುವೆ (ಆದರೆ) ಆ ನೀನೇ ಸೌಮ್ಯಳೂ ಅತಿಸೌಮ್ಯಳೂ ಒಳ್ಳೆಯ ವಸ್ತುಗಳಲ್ಲೆಲ್ಲ ಹೆಚ್ಚಿನವಳೂ ಅತಿ ಸುಂದರಿಯೂ ಆಗಿರುವೆ ಪರಮೇಶ್ವರಿಯಾದ ನೀನೇ ಮೇಲುಕೀಳುಗಳೆಂದು ಕಂಡುಬರುವ ವಸ್ತುಗಳಲ್ಲಿ ಅತಿ ಹೆಚ್ಚಿನ ಮೇಲ್ಮೆಯುಳ್ಳವಳಾಗಿರುವೆ ಹೀಗೆ ಏನೇನಿದೆಯೋ ಯಾವಯಾವ ಪದಾರ್ಥಗಳು ಇವೆಯೋ ಸತ್ ಅಥವಾ ಅಸತ್ ಎಂಬ (ಬುದ್ಧಿಯಿಂದ) ವ್ಯವಹರಿಸಲ್ಪಡುವವೋ ಆ ಎಲ್ಲಾ ಪದಾರ್ಥಗಳಲ್ಲಿಯೂ ಅಡಗಿರುವ ಯಾವ ಶಕ್ತಿಯಿದೆಯೋ ಆ ಶಕ್ತಿದೇವಿಯಾದ ನೀನ್ನನ್ನು ನಾನು ಸ್ತೋತ್ರ ಮಾಡುವದೇನು ಹೆಚ್ಚುಗಾರಿಕೆಯಾಗಿದ್ದೀತು ?

ಯಯಾ ತ್ವಯಾ ಜಗತ್ಪ್ರಷ್ಟಾ ಜಗತ್ ಪಾತ್ಯತ್ತಿ ಯೋ ಜಗತ್ |
ಸೋಪಿ ನಿದ್ರಾವಶಂ ನೀತಃ ಕಸ್ತ್ವಾಂ ಸ್ತೋತುಮಿಹೇಶ್ವರಃ ||62||
ವಿಷ್ಣುಃ ಶರೀರಗ್ರಹಣಮಹಮೀಶಾನ ಏವ ಚ |
ಕಾರಿತಾಸ್ತೇ ಯತೋತಸ್ತ್ವಾಂ ಕಃ ಸ್ತೋತುಂ ಶಕ್ತಿಮಾನ್ ಭವೇತ್ ||63||
    ಯಾವ ನಿನ್ನಿಂದ ಜಗತ್ಸೃಷ್ಟಿಕರ್ತನೂ ಪಾಲಕನೂ ಸಂಹಾರಕನೂ ಎನಿಸಿರುವ (ವಿಷ್ಣುವು) ಕೂಡ ನಿದ್ರೆಗೆ ವಶವಾಗಿ ಮಲಗಿಬಿಟ್ಟಿರುವಾಗ ಉಳಿದ ಯಾವನು ತಾನೆ ನಿನ್ನನ್ನು ಸ್ತೋತ್ರಮಾಡಲು ಸಮರ್ಥನಾದಾನು? (ಬ್ರಹ್ಮನಾದ) ನಾನು, ವಿಷ್ಣು, ಈಶ್ವರ - ಈ ಮೂವರೂ ಶರೀರವನ್ನು ಧರಿಸುವಂತೆ ಯಾವ ನಿನ್ನಿಂದ ಮಾಡಲ್ಪಟ್ಟಿರುವೆವೋ ಅಂಥ ನಿನ್ನನ್ನು ಹೊಗಳಲು ಯಾವನು ತಾನೆ ಶಕ್ತಿವಂತನೆನಿಸಿಯಾನು?

ಸಾ ತ್ವಮಿತ್ಥಂ ಪ್ರಭಾವೈಃ ಸ್ವೈರುದಾರೈರ್ದೇವಿ ಸಂಸ್ತುತಾ |
ಮೋಹಯೈತೌ ದುರಾಧರ್ಷೌ ಅಸುರೌ ಮಧುಕೈಟಭೌ ||64||
ಪ್ರಭೋಧಂ ಚ ಜಗತ್ ಸ್ವಾಮೀ ನೀಯತಾಮುಚ್ಯುತೋ ಲಘು |
ಬೋಧಶ್ಚಕ್ರಿಯತಾಮಸ್ಯ ಹಂತುಮೇತೌ ಮಹಾಸುರೌ ||65||
    ಹೇ ದೇವಿ, ಆ ನೀನು ನಿನ್ನ ಸ್ವರೂಪವಾದ ಪ್ರಭಾವ(ಗುಣ)ಗಳಿಂದ ನನ್ನಿಂದ ಸ್ತುತಿಸಲ್ಪಟ್ಟವಳಾಗಿರುವೆ. ನೀನು ಈ ಎದುರಿಸಲು ಅಸಾಧ್ಯವಾದ ಮಧುಕೈಟಭರನ್ನು ಮೋಹಗೊಳಿಸು ಜಗದೊಡೆಯನಾದ ವಿಷ್ಣುವು ಹಗುರವಾಗಿ ಎಚ್ಚರಗೊಳ್ಳಲಿ ಹಾಗೂ ಈ ಇಬ್ಬರ ಮಹಾರಾಕ್ಷಸರನ್ನು ಕೊಲ್ಲುವಂತೆ ಅವನನ್ನು ಪ್ರೇರಿಸುವವಳಾಗು.

ಋಷಿರುವಾಚ -
ಏವಂ ಸ್ತುತಾ ತದಾ ದೇವೀ ತಾಮಸೀ ತತ್ರ ವೇಧಸಾ |
ವಿಷ್ಣೋಃ ಪ್ರಬೋಧನಾರ್ಥಾಯ ನಿಹನ್ತುಂ ಮಧುಕಯಟಭೌ ||66||
ನೇತ್ರಾಸ್ಯನಾಸಿಕಾಬಾಹುಹೃದಯೇಭ್ಯಸ್ತಥೋರಸಃ |
ನಿರ್ಗಮ್ಯ ದರ್ಶನೇ ತಸ್ಥೌಬ್ರಹ್ಮಣೋವ್ಯಕ್ತಜನ್ಮನಃ ||67||
    ಋಷಿಯಿಂತೆಂದನು; ಈ ರೀತಿಯಾಗಿ ಆಗ ಬ್ರಹ್ಮನಿಂದ ಸ್ತೋತ್ರಮಾಡಲ್ಪಟ್ಟ ಆ ತಾಮಸೀದೇವಿಯು ವಿಷ್ಣುವು ಮಧುಕೈಟಭರನ್ನು ಕೊಲ್ಲಲೆಂದು ಅವನನ್ನು ಎಬ್ಬಿಸುವದಕ್ಕಾಗಿ (ಆತನ) ಕಣ್ಣು, ಮುಖ, ಮೂಗು, ತೋಳು, ಎದೆ, ಹೃದಯ - ಪ್ರದೇಶಗಳಿಂದ ಹೊರಬಂದು ಅವ್ಯಕ್ತಜನ್ಮನಾದ ಬ್ರಹ್ಮನ ಎದುರಿಗೆ ನಿಂತು ದರ್ಶನಕೊಟ್ಟಳು.

ಉತ್ತಸ್ಥೌಚ ಜಗನ್ನಾಥಃ ತಯಾ ಮುಕ್ತೋ ಜನಾರ್ದನಃ |
ಏಕಾರ್ಣವೇಹಿತಯನಾತ್ ತತಃ ಸ ದದೃಶೇ ಚ ತೌ ||68||
ಮಧುಕೈಟಭೌ ದುರಾತ್ಮಾನಾವತಿವೀರ್ಯಪರಾಕ್ರಮೌ |
ಕ್ರೋಧರಕ್ತೇಕ್ಷಣಾವತ್ತುಂ ಬ್ರಹ್ಮಾಣಂ ಜನಿತೋಧ್ಯಮೌ ||69||
    ಆಕೆಯಿಂದ ಬಿಡುಗಡೆಹೊಂದಿದ ವಿಷ್ಣುವು ನೀರೇ ತುಂಬಿ ಹೋಗಿದ್ದ (ಪ್ರಲಯಾವಸ್ಥೆಯಲ್ಲಿ) ಆದಿಶೇಷನ ಹಾಸಿಗೆಯಲ್ಲಿ (ಮಲಗಿದ್ದವನು) ಮೇಲಕ್ಕೆ ಎದ್ದನು ಅನಂತರ ಅವನು ದುರಾತ್ಮರೂ ಬಹಳವಾದ ವೀರ್ಯಪರಾಕ್ರಮಗಳುಳ್ಳವರೂ ಕ್ರೋಧದಿಂದ ಕೆಂಪಾದ ಕಣ್ಣುಳ್ಳವರೂ ಬ್ರಹ್ಮನನ್ನು ತಿನ್ನಲು ಹವಣಿಸುತ್ತಿರುವವರೂ ಆದ ಮಧುಕೈಟಭರನ್ನು ನೋಡಿದನು.
ಸಮುತ್ತಾಯ ತತಸ್ತಾಭ್ಯಾಂ ಯುಯುಧೇ ಭಗವಾನ್ ಹರಿಃ |
ಪಂಚವರ್ಷಸಹಸ್ರಾಣಿ ಬಾಹುಪ್ರಹರಣೋ ವಿಭುಃ ||70||
ತಾವಪ್ಯತಿಬಲೋನ್ಮತ್ತೌ ಮಹಾಮಾಯಾವಿಮೋಹಿತೌ |
ಉಕ್ತವಂತೌ ವರೋಸ್ಮತ್ತೋ ವ್ರಿಯತಾಮಿತಿ ಕೇಶವಮ್ ||71||
    ಅನಂತರ ಭಗವಾನ್ ವಿಷ್ಣುವು ಮೇಲೆದ್ದು ಅವರಿಬ್ಬರೊಡನೆ ಐದು ಸಹಸ್ರ ವರ್ಷಗಳ ಕಾಲ ಬರಿಯ ತೋಳು ಬಲದಿಂದಲೇ ಏಟುಗಳನ್ನು ಹೊಡೆಯುತ್ತಾ ಯುದ್ಧಮಾಡಿದನು ಹೆಚ್ಚಿನ ಬಲದಿಂದ ಕೊಬ್ಬಿಹೋಗಿದ್ದ ಅವರಿಬ್ಬರೂ (ವಿಷ್ಣುವಿನ ಪರಾಕ್ರಮವನ್ನು ಮೆಚ್ಚಿಕೊಂಡವರಾಗಿ) ಮಹಾಮಾಯೆಯಿಂದ ಮೋಹಿತರಾದವರಾಗಿ ವಿಷ್ಣುವನ್ನು ಕುರಿತು 'ನಮ್ಮಿಂದ ಏನಾದರೂ ವರವನ್ನು ಕೇಳಿಕೊಳ್ಳುವವನಾಗು' ಎಂದರು.

ಶ್ರೀಭಗವಾನುವಾಚ -
ಭವೇತಾಮದ್ಯ ಮೇ ತುಷ್ಟೌ ಮಮ ವಧ್ಯಾವುಭಾವಪಿ |
ಕಿಮನ್ಯೇನ ವರೇಣಾತ್ರ ಏತಾವದ್ಧಿ ವೃತಂ ಮಮ ||72||
    ಶ್ರೀಭಗವಂತನಿಂತೆಂದನು; 'ನೀವಿಬ್ಬರೂ ಈಗ ನನ್ನ (ವಿಷಯಕ್ಕೆ) ಸಂತುಷ್ಟರಾಗಿರುವಿರಾದರೆ ಇದೋ, ನೀವು ನನ್ನಿಂದ ಸಾಯುವವರಾಗಿರಿ! ಇದೇ ನಾನು ಬೇಡುವ ವರವು ಬೇರೆ ವರದಿಂದೇನು? ನಾನು ಕೇಳಿರುವ ವರವು ಇಷ್ಟೇ'

ಋಷಿರುವಾಚ -
ವಂಚಿತಾಭ್ಯಾಮಿತಿ ತದಾ ಸರ್ವಮಾಪೋಮಯಂ ಜಗತ್ |
ವಿಲೋಕ್ಯ ತಾಭ್ಯಾಂ ಗದಿತೋ ಭಗವಾನ್ ಕಮಲೇಕ್ಷಣಃ
ಆವಾಂ ಜಹಿ ನ ಯತ್ರೋರ್ವೀ ಸಲಿಲೇನ ಪರಿಪ್ಲು ತಾ ||73||
    ಋಷಿಯಿಂತೆಂದನು : ಆಗ ಅವರಿಬ್ಬರೂ ತಾವು ಮೋಸಹೋದೆವೆಂದು (ತಿಳಿದು) ಆಗಲೂ ಜಗತ್ತೆಲ್ಲವೂ ನೀರಿನಿಂದ ತುಂಬಿರಲಾಗಿ ಅದನ್ನು ಕಂಡು ಕಮಲಾಕ್ಷನಾದ ವಿಷ್ಣುವಿಗೆ ಹೀಗೆಂದರು; 'ಆಗಲಿ, ನೀನು ನಮ್ಮಿಬ್ಬರನ್ನೂ ನೀರಿಲ್ಲದ ಭೂಮಿಯ ಮೇಲೆ ಒಟ್ಟಿಗೆ ಕೊಲ್ಲುವವನಾಗು' ಎಂದರು.

ಋಷಿರುವಾಚ -
ತಥೇತ್ಯುಕ್ತ್ವಾ ಭಗವತಾ ಶಂಖಚಕ್ರಗದಾಭೃತಾ |
ಕೃತ್ವಾ ಚಕ್ರೇಣ ವೈಚ್ಛಿನ್ನೇ ಜಘನೇ ಶಿರಸೀ ತಯೋಃ ||74||
ಏವಮೇಷಾ ಸಮುತ್ಪನ್ನಾ ಬ್ರಹ್ಮಣಾ ಸಂಸ್ತುತಾ ಸ್ವಯಮ್ |
ಪ್ರಭಾವಮಸ್ಯಾ ದೇವ್ಯಾಸ್ತು ಭೂಯಃ ಶೃಣು ವದಾಮಿ ತೇ ||75||
    ಋಷಿಯಿಂತೆಂದನು: ಶಂಖಚಕ್ರಗದಾಧಾರಿಯಾದ ಆ ಭಗವಂತನು ಹಾಗೆ ಆಗಲಿ - ಎಂದೊಪ್ಪಿ (ತಾನು ನೀರಿನ ಮೇಲೆ ಕುಳಿತು) ಅವರಿಬ್ಬರ ತಲೆಗಳನ್ನೂ (ತಲೆಕೆಳಗಾಗಿ) ತನ್ನ ತೊಡೆಯಮೇಲಿರಿಸಿಕೊಂಡು ಚಕ್ರದಿಂದ ಕತ್ತರಿಸಿಬಿಟ್ಟನು ಹೀಗೆ ಈ (ತಾಮಸೀದೇವಿಯ) ಬ್ರಹ್ಮನಿಂದ ಸ್ತೋತ್ರ ಮಾಡಲ್ಪಟ್ಟು ತಾನೇ ಆವಿರ್ಭವಿಸಿರುವಳು ಈ ದೇವಿಯ ಪ್ರಭಾವವನ್ನು ಮತ್ತೆ ನಿನಗೆ (ಮುಂದುವರೆದು) ಹೇಳುವೆನು ಕೇಳು.

ಇತಿ ಶ್ರೀ ಮಾರ್ಕಂಡೇಯಪುರಾಣೇ ದೇವೀಮಹಾತ್ಮ್ಯೇ ಪ್ರಥಮೋಧ್ಯಾಯಃ

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ