ಅರ್ಧನಾರೀಶ್ವರತತ್ತ್ವ

ಅರ್ಧನಾರೀಶ್ವರಂ ವಂದೇ ಜಗತ್ಕಾರಣಮಚ್ಯುತಮ್ |
ನಿರ್ವಿಕಾರಂ ಸದಾನಂದಂ ಮಾಯಾಜಗದಧಿಷ್ಠಿತಮ್ ||

    ಶ್ರೀ ವೇದವ್ಯಾಸರು ರಚಿಸಿರುವ ಬ್ರಹ್ಮಸೂತ್ರಗಳಲ್ಲಿ "ಅಥಾತೋ ಬ್ರಹ್ಮ ಜಿಜ್ಞಾಸಾ" ಎಂಬಿದು ಮೊದಲನೆಯ ಸೂತ್ರವು. ಇಲ್ಲಿ ಬಾಷ್ಯಕಾರರು ಜಿಜ್ಞಾಸ್ಯವಾದ ಬ್ರಹ್ಮವು ನಿತ್ಯಶುದ್ಧಬುದ್ಧಮುಕ್ತಸ್ವಭಾವವೂ ಸರ್ವಜ್ಞವೂ ಸರ್ವಶಕ್ತಿಸಮನ್ವಿತವೂ ಆಗಿರುವದೆಂದೂ ಅದನ್ನೇ ವಿಚಾರಮಾಡಬೇಕೆಂದೂ ಹೇಳಿದ್ದಾರೆ. ಹೀಗೆ ಜಿಜ್ಞಾಸ್ಯವೆಂದು ಹೇಳಿರುವ ಬ್ರಹ್ಮದ ಲಕ್ಷಣವೇನು? ಎಂಬ ಪ್ರಶ್ನೆಗೆ ಉತ್ತರವಾಗಿ "ಜನ್ಮಾದ್ಯಸ್ಯ ಯತಃ" ಎಂಬ ಎರಡನೆಯ ಸೂತ್ರವು ಬಂದಿರುತ್ತದೆ. ಇಲ್ಲಿಯೂ ಭಾಷ್ಯಕಾರರು ನಾಮರೂಪಗಳಿಂದ ವಿಂಗಡವಾಗಿರುವ, ಅನೇಕ ಕರ್ತೃಭೋಕ್ತೃಗಳಿಂದ ತುಂಬಿರುವ ಗೊತ್ತುಮಾಡಲ್ಪಟ್ಟ ಖಚಿತವಾದ ದೇಶಕಾಲಗಳಲ್ಲಿ ಮಾಡಿದ ಕರ್ಮಗಳಿಗೆ ಖಚಿತವಾಗಿ ಫಲವನ್ನು ಕೊಡುವ ವ್ಯವಸ್ಥೆಯುಳ್ಳ ಹಾಗೂ ಎಂಥ ಜಾಣನಿಗೂ ಯೋಚಿಸಲಸಾಧ್ಯವಾದ ರೀತಿಯಲ್ಲಿ ಜೋಡಿಸಲ್ಪಟ್ಟಿರುವ ರಚನಾ ಕೌಶಲ್ಯವುಳ್ಳ ಈ ಪ್ರಪಂಚದ ಹುಟ್ಟು ಇರುವಿಕೆ-ವಿನಾಶಗಳು ಯಾವ ಸರ್ವಜ್ಞವೂ ಸರ್ವಶಕ್ತವೂ ಆಗಿರುವ ಕಾರಣವಸ್ತುವಿನಿಂದಲೇ ಆಗಿರುವವೋ ಅದೇ ಬ್ರಹ್ಮವು ಎಂದು ಜಗತ್ಕಾರಣತ್ವವನ್ನು ಬ್ರಹ್ಮಲಕ್ಷಣವೆಂದು ಪ್ರತಿಪಾದಿಸಿದ್ದಾರೆ ಮತ್ತು ಅಲ್ಲಿಯೇ ಕಡೆಯಲ್ಲಿ "ಹೀಗೆಯೇ ಯತೋ ವಾ ಎಂಬೀ ಜಾತಿಯ ಜಗತ್ಕಾರಣ ವಸ್ತುಪ್ರತಿಪಾದಕವಾದಂಥ ವಾಕ್ಯಗಳೆಲ್ಲವನ್ನೂ ಇಲ್ಲಿ ಉದಾಹರಣೆಯಾಗಿ ತೆಗೆದುಕೊಳ್ಳತಕ್ಕದ್ದು" ಎಂದೂ ತಿಳಿಸಿರುತ್ತಾರೆ ಈ ಕಾರಣದಿಂದಲೂ ನಿತ್ಯಶುದ್ಧ ಬುದ್ಧ ಮುಕ್ತ ಬ್ರಹ್ಮವೇ ಜಗತ್ಕಾರಣವೆಂದು ಪ್ರತಿಪಾದಿಸಿದಂತಾಗಿದೆ. ಮುಂಡಕೋಪನಿಷತ್ತಿನ ಪ್ರಥಮಮುಂಡಕದಲ್ಲಿಯೂ 'ಅಗ್ರಾಹ್ಯವೂ ಅಗೋತ್ರವೂ ಅವರ್ಣವೂ....' ಎಂದಾರಂಭಿಸಿ 'ಅವ್ಯಯವಾದ ಪರಬ್ರಹ್ಮವೇ ಭೂತಯೋನಿಯು' ಎಂದು ತಿಳಿಸಲಾಗಿದೆ. ಹೀಗೆ ನಿಷ್ಕ್ರಿಯವೂ ನಿರವಯವವೂ ಸರ್ವಗತವೂ ಸರ್ವಜ್ಞ-ಸರ್ವಶಕ್ತವೂ ಆಗಿರುವ ಬ್ರಹ್ಮವು ಗಡಿಗೆ, ಬಳೆ ಮುಂತಾದವುಗಳಿಗೆ ಮಣ್ಣು, ಚಿನ್ನ ಮುಂತಾದವುಗಳಂತೆ ಜಗತ್ತಿಗೆ ಉಪಾದಾನಕಾರಣವಾಗಿರುತ್ತದೆ ಎಂದು ಎರಡನೆಯ ಅಧ್ಯಾಯದ ಮೊದಲನೆಯ ಪಾದದ ಭಾಷ್ಯದಲ್ಲಿ ತಿಳಿಸಲಾಗಿದೆ.

    ಇದೇ ಬ್ರಹ್ಮಸೂತ್ರಗಳ ಒಂದನೆಯ ಅಧ್ಯಾಯದ ನಾಲ್ಕನೆಯ ಪಾದದ 23ನೆಯ ಸೂತ್ರವಾದ "ಪ್ರಕೃತಿಶ್ಚ ಪ್ರತಿಜ್ಞಾದೃಷ್ಟಾಂತಾನುಪರೋಧಾತ್" ಎಂಬ ಸೂತ್ರದಲ್ಲಿ ಬ್ರಹ್ಮವು ಜಗತ್ತಿಗೆ ನಿಮಿತ್ತಕಾರಣವೊ, ಉಪಾದಾನಕಾರಣವೊ, ಎಂದು ಸಂದೇಹಿಸಿ ನಿಮಿತ್ತಕಾರಣವಾಗಿರಬೇಕು ಎಂಬುದಕ್ಕೆ ನಿಷ್ಕಲ, ನಿಷ್ಕ್ರಿಯವಾಗಿರುವಿಕೆಯನ್ನು ಹೇತುವಾಗಿ ಕೊಟ್ಟಿರುತ್ತದೆ ಮತ್ತು ಲೋಕದಲ್ಲಿಯೂ ಸಾವಯವವಾಗಿಯೂ ವಿಕಾರಿಯಾಗಿಯೂ ಇರುವ ಮಣ್ಣೇ ಮುಂತಾದ ಪದಾರ್ಥಗಳು ಮಡಿಕೆ ಮುಂತಾದ ರೀತಿಯ ಕಾರ್ಯಗಳಾಗಿ ಪರಿಣಾಮವಾಗುವದು ಕಂಡುಬಂದಿದೆ. ನಿರವಯವವೂ ಚೇತನವೂ ಶುದ್ಧವೂ ಆದ ಬ್ರಹ್ಮವು ಹೇಗೆ ಪರಿಣಾಮವಾದೀತು? ಪರಿಣಾಮವಾಗದೆ ಉಪಾದಾನಕಾರಣವಾಗುವದಾದರೂ ಹೇಗೆ ಸಾಧ್ಯ? ಆದ್ದರಿಂದ ನಿಮಿತ್ತಕಾರಣವೇ ಎನ್ನಬೇಕು ಮತ್ತು 'ಅವನು ನೋಡಿದನು' ಮುಂತಾದ ಶ್ರುತಿಯಂತೆ ನೋಟದೊಡನೆ ಕರ್ತೃತ್ವನ್ನು ಹೇಳಿರುವದು ನಿಮಿತ್ತ ಕಾರಣವಾಗಿದೆ ಎಂಬಿದೇ ಯುಕ್ತವು ಎಂದು ಪೂರ್ವಪಕ್ಷವನ್ನು ಮಾಡಿ ಹಾಗಿಲ್ಲ; ಪ್ರತಿಜ್ಞೆ, ದೃಷ್ಟಾಂತಗಳು ಹೊಂದಬೇಕಾದರೆ ಬ್ರಹ್ಮವು ಉಪಾದಾನಕಾರಣವೇ ಆಗಿರಬೇಕು ಇಲ್ಲದಿದ್ದರೆ ಅವು ಹೊಂದಲಾರವು ಎಂದೂ ಮತ್ತು ಬೇರೊಬ್ಬ ಅಧಿಷ್ಠಾತೃವಿಲ್ಲವಾದ್ದರಿಂದ ಬ್ರಹ್ಮವೇ ನಿಮಿತ್ತಕಾರಣವೂ ಆಗಿದೆ ಎಂಬುದಾಗಿಯೂ ಉಪಾದಾನ, ನಿಮಿತ್ತ ಎಂಬ ಎರಡು ವಿಧವಾದ ಕಾರಣತ್ವವನ್ನೂ ಬ್ರಹ್ಮಕ್ಕೇ ಸಮನ್ವಯಮಾಡಿ ತಿಳಿಸಲಾಗಿದೆ ಈ ಕಾರಣತ್ವವಿಚಾರವು ಹಾಗಿರಲಿ; ಈಗ ಬ್ರಹ್ಮದಿಂದ ಹುಟ್ಟಿರುವ ಪ್ರಪಂಚದ ಸ್ವರೂಪವನ್ನು ವಿಚಾರಮಾಡೋಣ.

    ಯಾವದು ಪ್ರತ್ಯಕ್ಷಾದಿಪ್ರಮಾಣಗಳಿಂದ ಸಿದ್ಧವಾಗಿದೆಯೋ ಅದು ಇದೆ ಯಾವದು ಪ್ರಮಾಣಸಿದ್ಧವಲ್ಲವೋ ಅದು ಇಲ್ಲ-ಎಂದು ಎಲ್ಲರೂ ಒಪ್ಪಿರುತ್ತಾರೆ ಭೂತಭೌತಿಕಪ್ರಪಂಚವು ಪ್ರತ್ಯಕ್ಷಾದಿಪ್ರಮಾಣಸಿದ್ಧವು ಸ್ವರ್ಗನರಕಾದಿಲೋಕಗಳು ಶಬ್ದಪ್ರಮಾಣಸಿದ್ಧವಾಗಿವೆ ಆದ್ದರಿಂದ ಪ್ರಮಾಣಸಿದ್ಧವಾದ ವಸ್ತುವು ಪ್ರಪಂಚಕ್ಕೆ ಉಪಾದಾನಕಾರಣವೆನ್ನುವದಾದರೆ ಅದು ಸಾವಯವಿದ್ರವ್ಯವೂ ಅಚೇತನವೂ ಆಗಿರಬೇಕು. ಅಲ್ಲದೆ ಚೇತನವೂ ನಿರಯವಿಯೂ ಆಗಿರುವದು ಉಪಾದಾನಕಾರಣವಾಗಲಾರದು ಎಂದು ಪ್ರಾಪ್ತವಾದರೆ ಈ ಉತ್ತರವನ್ನು ಹೇಳಬೇಕಾಗುತ್ತದೆ ಏನೆಂದರೆ ದೇಹೇಂದ್ರಿಯಾದಿಗಳಲ್ಲಿ ನಾನು, ನನ್ನದು ಎಂಬ ಬುದ್ಧಿಯುಂಟಾಗದೆ ಪ್ರಮಾಣವ್ಯವಹಾರವು ಸಾಗುವಂತಿಲ್ಲ ಏಕೆಂದರೆ ಪ್ರಮಾತೃವು ನಾನು ಎಂದುಕೊಳ್ಳದೆ ಪ್ರಮಾಣ ವೃತ್ಇಯಿರುವದಿಲ್ಲ ಇಂದ್ರಿಯಗಳಿಲ್ಲದೆ ಪ್ರಮಾತೃತ್ವವಿಲ್ಲ ಹೀಗಾಗಿ ನಿಜವೇನೆಂದರೆ; ಭೌತಿಕವಾದ ಇಂದ್ರಿಯಗಳನ್ನೂ ಅಭೌತಿಕವೂ ಚೇತನನೂ ಆದ ಆತ್ಮನನ್ನೂ ಕಲೆಬೆರಕೆಮಾಡಿಕೊಂಡು 'ನಾನು ನೋಡುತ್ತೇನೆ, ಕೇಳುತ್ತೇನೆ, ಅಲೋಚಿಸುತ್ತೇನೆ' ಮುಂತಾಗಿ ನಾವು ಹೇಳುತ್ತೇವೆ. ಈ ಆತ್ಮಾನಾತ್ಮಗಳ ಏಕತ್ವವಾದರೋ ಭ್ರಾಂತಿಯೇ ಹೊರತು ನಿಜವಲ್ಲ ಏಕೆಂದರೆ ನಿತ್ಯಾನಿತ್ಯ ವಸ್ತುಗಳು ಚೇತನಾಚೇತನಗಳೂ ಆಗಿರುವ ಆತ್ಮಾನಾತ್ಮರುಗಳಿಗೆ ಹೇಗೆ ತಾನೆ ಏಕತ್ವವು ಸತ್ಯವಾಗಿ ಸಿದ್ಧವಾದೀತು? ಭ್ರಾಂತನಾದ ಪುರುಷನು ಮಾತ್ರವೇ 'ನಾನು ನೋಡುತ್ತೇನೆ' ಮುಂತಾಗಿ ಹೇಳಬಲ್ಲನು ಆದ್ದರಿಂದ ಭ್ರಾಂತನಾದವನಿಗೆ ಕಂಡುಬರುವ ಪ್ರಮಾಣಗೋಚರವಾದ ಪ್ರಪಂಚವು ಸತ್ಯವಾಗಿರುವದು ಎಂದಿಗೂ ಸಾಧ್ಯವಿಲ್ಲ.

    ದೇಹೇಂದ್ರಿಯಾದಿಗಳಲ್ಲಿ ನಾನು ನನ್ನದೆಂಬ ಭಾವನೆಯಿಲ್ಲದ ಆತ್ಮನಲ್ಲೇ ನೆಲೆನಿಂತಿರುವ ಸ್ಥಿತಿಪ್ರಜ್ಞನಿಗೆ ಪ್ರಪಂಚವು ಕಾಣುವದೇ ಇಲ್ಲ ಎಲ್ಲಾ ಪ್ರಪಂಚವೂ ಅವನಿಗೆ ಆತ್ಮನಾಗಿಯೇ ತೋರುತ್ತಿರುವದು ಆದ್ದರಿಂದಲೇ ಪೂಜ್ಯರಾದ ಭಾಷ್ಯಕಾರರು ಗೀತಾಭಾಷ್ಯ 13-26ರಲ್ಲಿ "ಕ್ಷೇತ್ರವನ್ನು ಮಾಯಾನಿರ್ಮಿತವಾದ ಆನೆ, ಕನಸಿನಲ್ಲಿ ಕಂಡ ಪದಾರ್ಥ, ಗಂಧರ್ವನಗರಗಳಂತೆ ಇಲ್ಲದ ವಸ್ತುವೇ ಇದ್ದಂತೆ ತೋರಿಕೊಳ್ಳುವದು ಎಂದು ಬಲ್ಲವನು ತಿಳಿದಿರುತ್ತಾನೆ. ಅವನಿಗೆ ತಪ್ಪು ತಿಳಿವಳಿಕೆಯ ಹೊರಟುಹೋಗಿರುತ್ತದೆ" ಎಂದಿರುತ್ತಾರೆ. ಇನ್ನು ಉಪನಿಷತ್ತುಗಳಲ್ಲಿಯೂ 1) ನಾನಾ ಎಂಬುದು ಸ್ವಲ್ಪವೂ ಇಲ್ಲ 2) ಇನ್ನು ಬ್ರಹ್ಮದ ಉಪದೇಶವು ಇದಲ್ಲ ಇದಲ್ಲ 3) ಇವನಿಗಿಂತ ಬೇರೆಯ ದ್ರಷ್ಟೈವಿಲ್ಲ ಎಂದು ತಿಳಿಸಿರುತ್ತದೆ ಭಾಷ್ಯದಲ್ಲಿಯೂ (1) ಆತ್ಮನಿಗಿಂತ ಬೇರೆಯಾದದ್ದು ಇರುವಂತೆ ತೋರಿಸುವದೇ ಅವಿದ್ಯೆಯು (2) ಅವಿದ್ಯೆಯಿಂದ ಕಲ್ಪಿತವಾದ ವ್ಯಕ್ತಾವ್ಯಕ್ತಾತ್ಮಕವಾದ ನಾಮರೂಪಗಳಿಂದ (ಬ್ರಹ್ಮವೂ ಪರಿಣಾಮಾದಿಸರ್ವವ್ಯವಹಾರಗಳಿಗೂ ಆಶ್ರಯವಾಗಿದೆ) (3) ಪ್ರಪಂಚಕ್ಕೆ ಬೀಜವಾದ ನಾಮರೂಪಗಳು ಅವಿದ್ಯಾಕಲ್ಪಿತವಾಗಿವೆ ಎಂದೂ ತಿಳಿಸಿದೆ ಈ ಎಲ್ಲಾ ಕಾರಣಗಳಿಂದ ಪ್ರಪಂಚವು ಅವಿದ್ಯೆಯಿಂದ ಇದ್ದಂತೆ ತೋರುತ್ತದೆ ಎಂದೇ ಸ್ಪಷ್ಟಗೊಳಿಸಿದಂತಾಗಿದೆ.

    ಹೀಗಿರುವದರಿಂದ ಇಲ್ಲದ ಪದಾರ್ಥಕ್ಕೆ ಉಪಾದಾನಕಾರಣವು ಮಡಕೆಗೆ ಮಣ್ಣೇ ಮುಂತಾದದ್ದರಂತೇನೂ ಬೇಕಿರುವದಿಲ್ಲ ಮತ್ತೇನೆಂದರೆ ಕಲ್ಪಿತವಸ್ತುವು ಆಧಾರವಿಲ್ಲದೆ ತೋರಲಾರದು ಎಂದು ಮಾತ್ರ ಹೇಳಬೇಕಾಗಿದೆ ಹಾಗಾದರೆ ಇಲ್ಲದ ವಸ್ತುವು ಇದ್ದಂತೆ ತೋರುತ್ತದೆ ಎಂಬುದರ ಅರ್ಥವೇನು? ಎಂದರೆ ಹೀಗಿದೆ; ಇದು ಹಗ್ಗ-ಎಂಬ ತಿಳಿವಳಿಕೆಯಿಲ್ಲದ್ದರ ನಿಮಿತ್ತವಾಗಿ ಹೇಗೆ ಅವಿವೇಕಿಗಳು ಹಾವು ಇದೆ ಎನ್ನುವರೋ ಹಾಗೆಯೇ ಬ್ರಹ್ಮವನ್ನರಿಯದವರು ಪ್ರಪಂಚವು ಇದೆ ಎನ್ನುವರು; ಅಂತೂ ಈವರೆಗೆ ತಿಳಿಸಿದ ಪ್ರಕಾರ ಇಲ್ಲದೆ ಇರುವ ಪ್ರಪಂಚವೇ ಇದ್ದಂತೆ ಕಂಡು ಬರುತ್ತಿರುವದರಿಂದ ಅವಿದ್ಯೆಯಿಂದ ಅದು ಕಲ್ಪತವಾಗಿದೆ ಎಂದೇ ಸಿದ್ದವಾಗುತ್ತದೆ.

    ಪೂರ್ಣಾನುಭವದಿಂದ ನೋಡಿದರೂ ಪ್ರಪಂಚವು ಇಲ್ಲವೆಂದೇ ಸಿದ್ಧವಾಗುತ್ತದೆ ಪೂರ್ಣಾನುಭವವೆಂದರೆ ಮನುಷ್ಯನಿಗೆ ಉಂಟಾಗುತ್ತಿರುವ ಅವಸ್ಥಾತ್ರಯಗಳನ್ನೂ ಪೂರ್ತಿಯಾಗಿ ವಿಚಾರಮಾಡಿ ತೀರ್ಮಾನಕ್ಕೆ ಬರುವದು ಹೇಗೆಂದರೆ ಈ ಎಚ್ಚರದ ಪ್ರಪಂಚವು ಕನಸಿನಲ್ಲಿ (ಎಂದರೆ ಆಗಿನ ಕಾಲಕ್ಕೆ ಎಚ್ಚರವೆಂದೇ ವ್ಯವಹರಿಸಲ್ಪಡುವ ಆ ಅವಸ್ಥೆಯಲ್ಲಿ) ಕಂಡುಬರುವದೇ ಇಲ್ಲ ಹಾಗೆಯೇ ಕನಸಿನಲ್ಲಿ ತೋರಿದ ಪ್ರಪಂಚವೂ ಎಚ್ಚರದಲ್ಲಿ ಕಂಡುಬರುವದಿಲ್ಲ ಒಂದು ವೇಳೆ ಎಚ್ಚರದ ಪ್ರಪಂಚವು ನಿಜವಾಗಿದ್ದಿದ್ದರೆ ಆಗ್ಗೆ ಎಚ್ಚರವೆಂದೇ ವ್ಯವಹರಿಸಲ್ಪಟ್ಟ ಕನಸಿನಲ್ಲೂ ಅದು ಇರಬೇಕಾಗಿತ್ತು ಆದರೆ ಹಾಗಿರುವದಿಲ್ಲ ಎಚ್ಚರದಲ್ಲಿ ಹೊಟ್ಟೆತುಂಬಿರುವವನು ಕನಸಿನಲ್ಲಿ ಹಸಿವಿನಿಂದ ಬಳಲಿರುತ್ತಾನೆ ಎಚ್ಚರದ ಸಾಹುಕಾರನು ಕನಸಿನಲ್ಲಿ ಭಿಕ್ಷೆಬೇಡುತ್ತಾನೆ ಎಚ್ಚರದಲ್ಲಿ ಮನುಷ್ಯನಾಗಿದ್ದವನು ಕನಸಿನಲ್ಲಿ ಆನೆಯಾಗಿ ಬಿಟ್ಟಿರುತ್ತಾನೆ ಆಗ್ಗೆ ಎಚ್ಚರದ ಮನುಷ್ಯದೇಹವನ್ನು ಎಲ್ಲಿ ಬಿಟ್ಟಿರುತ್ತಾನೆ? ಎಂದರೆ ಉತ್ತರವಿಲ್ಲ ಇದು ಅಸಂಭವವೂ ಆಗಿರುತ್ತದೆ. ಇನ್ನು ತದಿನಿದ್ರೆಯಲ್ಲಾದರೊ ಆತ್ಮನಿಗಿಂತ ಬೇರೆಯ ವಸ್ತುವೇ ಇರುವದಿಲ್ಲ ಹಾಗೆ ಇದ್ದದ್ದು ಯಾರ ಅನುಭವದಲ್ಲಿಯೂ ಇಲ್ಲ ಕೆಲವರೇನೋ ಪ್ರಪಂಚಕ್ಕೆ ಕಾರಣವಾದ ಬೀಜವು ಅಲ್ಲಿರುತ್ತದೆ ಎಂದು ಊಹಿಸುತ್ತಾರೆ ಆದರೆ ಅವರ ಮಾತು ಅನುಭವವಿರುದ್ಧವಾಗಿದೆ ಆದ್ದರಿಂದ ಪ್ರಪಂಚವು ನಿಜವಾಗಿರದೆ ಇದ್ದಂತೆ ತೋರುವದರಿಂದ ಇದು ತಪ್ಪುತಿಳಿವಳಿಕೆಯೇ ಎಂದು ಗೊತ್ತಾಗುತ್ತದೆ ಮಿಥ್ಯಾಜ್ಞಾನದಿಂದ ತೋರುವ ಪ್ರಪಂಚಕ್ಕೆ ಅಧಿಷ್ಠಾನವಸ್ತುವೊಂದೇ ಸರ್ವವಿಧವಾದ ಕಾರಣವೂ ಆಗಿರುತ್ತದೆ.

    ಆದ್ದರಿಂದ ನಿಜವಾಗಿ ಇಲ್ಲದೆ ಮಿಥ್ಯೆಯಾಗಿ ತೋರುತ್ತಿರುವ ಈ ಪ್ರಪಂಚಕ್ಕೆ ಆಧಾರಭೂತವಾಗಿರುವ ಆತ್ಮವಸ್ತುವೊಂದೇ ಎಲ್ಲಾ ವಿಧದಿಂದಲೂ ಕಾರಣವಾಗಿದೆ ಎಂದು ತಿಳಿಸಲು ಆತ್ಮನನ್ನೇ ಅರ್ಧನಾರೀಶ್ವರನೆಂದು ಕರೆಯಬಹುದಾಗಿದೆ. ಈಶ್ವರನೆಂದರೆ ನಿಮಿತ್ತಕಾರಣನು ನಾರೀ ಎಂದರೆ ಉಪಾದಾನಕಾರಣವು ಎರಡೂ ಕೂಡಿಸಿದರೆ ಪರಬ್ರಹ್ಮವೆಂಬ ಅರ್ಧನಾರೀಶ್ವರನೇ ಈ ಕಲ್ಪಿತಪ್ರಪಂಚಕ್ಕೆ ಉಭಯ ವಿಧಕಾರಣನೂ ಆಗಿದ್ದಾನೆಂದಾಯಿತು ವ್ಯವಹಾರದಲ್ಲಿ ಈ ಹೆಸರು ಆತ್ಮನಿಗೆ ತಕ್ಕದ್ದಾಗಿದೆ ನಿಜವೇನೆಂದರೆ ಪ್ರಪಂಚವೆಂಬುದು ಕೇವಲ ಆಧ್ಯಾಸಕ್ಲಲ್ಪಿತವಾದ್ದರಿಂದಲೂ ಕಲ್ಪಿತಪ್ರಪಂಚಕ್ಕೆ ಉಪಾದಾನಕಾರಣವು ಬೇಕಿಲ್ಲವಾದ್ದರಿಂದಲೂ ಸರ್ವಾಸ್ಪದವಾದ ನಿತ್ಯಶುದ್ಧಮುಕ್ತವಾದ ಬ್ರಹ್ಮವನ್ನೇ ವ್ಯವಹಾರಾವಸ್ಥೆಯಲ್ಲಿ ಪ್ರಪಂಚವೆಂದು ಕಲ್ಪಿತಲಾಗಿದೆ ಇಂಥ ಕಲ್ಪಿತಾವಸ್ಥೆಯಲ್ಲಿ ಬ್ರಹ್ಮವೇ ಅರ್ಧನಾರೀಶ್ವರನೆನಿಸಿದೆ ಕೆಲವು ದೂರದವರೆಗೆ ವ್ಯವಹಾರಸ್ಥಿತಿಯಲ್ಲಿ ನಾವು ಮಾಡುವ ತರ್ಕಗಳನ್ನು ಬ್ರಹ್ಮವನ್ನು ಅರಿತುಕೊಳ್ಳಲು ಉಪಾಯವಾಗಿ ಉಪಯೋಗಿಸಬಹುದು ಆದರೆ ಅಷ್ಷರಿಂದಲೇ ಪರಮಾರ್ಥವನ್ನು ಪೂರ್ಣವಾಗಿ ಅರಿಯಲಾಗುವದಿಲ್ಲ ಜಗತ್ತಿಗೆ ಉಪಾದಾನ ನಿಮಿತ್ತಕಾರಣಗಳು ಬೇಕು ಎಂಬ ತರ್ಕವು ಗ್ರಾಹ್ಯವಾದರೂ 'ಜಗತ್ತೇ ಅಧ್ಯಾಸಕಲ್ಪಿತ' ಎಂಬ ಅನುಭವವು ನಮಗೆ ನಿಶ್ಚಯವಾದಾಗ ಈ ಕಾರಣತ್ವದ ತರ್ಕವು ಕೈಬಿಟ್ಟುಹೋಗಲಿದೆ ಇದನ್ನರಿಯದೆ ಕೆಲವು ವಾದಿಗಳು ಬ್ರಹ್ಮಪ್ರತಿಪತ್ತಿಗಿಂತ ಜಗತ್ಕಾರಣತ್ವಪ್ರತಿಪಾದನೆಯನ್ನೇ ಹೆಚ್ಚಾಗಿ ತರ್ಕದಿಂದ ಚಿಂತಿಸಿದ್ದರ ಫಲವಾಗಿ ಪ್ರಕೃತಿ, ಅವಿದ್ಯೆ ಮುಂತಾಗಿ ಯಾವದೋ ಒಂದು ವಸ್ತುವನ್ನು ಬ್ರಹ್ಮಕ್ಕಿಂತ ಭಿನ್ನವಾಗಿ ಜಗತ್ಕಾರಣವಾಗಿ ಆಶ್ರಯಿಸಬೇಕಾಯಿತು ಆದರಿಂದಲೇ ಬ್ರಹ್ಮಕಾರಣವಾದವು ಕೈಬಿಟ್ಟುಹೋಯಿತು ಹಾಗಾಗದಿರಲೆಂದು ಇಲ್ಲಿ ಅರ್ಧನಾರೀಶ್ವರನೆಂದು ಬ್ರಹ್ಮವನ್ನು ಕರೆದಿದೆ. ಇದರಿಂದ ಪರಮಾರ್ಥವಾಗಿ ಸಚ್ಚಿದಾನಂದವಾದ ಅದ್ವಿತೀಯಾತ್ಮವೊಂದೇ ಯಾವಾಗಲೂ ಇದ್ದುಕೊಂಡಿದೆ ಎಂದೇ ಸಿದ್ಧವಾಯಿತು.
 

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ