ವಿಜ್ಞಾನನೌಕಾಸ್ತುತಿ - (ಶ್ರೀಶಂಕರಾಚಾರ್ಯರವರ ಕೃತಿ)
ತಪೋಯಜ್ಞದಾನಾದಿಭಿಃ ಶುದ್ಧ ಬುದ್ಧಿ-
ರ್ವಿರಕ್ತೋ ನೃಪಾದೌ ಪದೇ ತುಚ್ಛಬುದ್ಧ್ಯಾ |
ಪರಿತ್ಯಜ್ಯ ಸರ್ವಂ ಯದಾಪ್ನೋತಿ ತತ್ತ್ವಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ ||1||
ತಪಸ್ಸು, ಯಜ್ಞ, ದಾನ- ಮುಂತಾದವುಗಳಿಂದ ಚಿತ್ತಶುದ್ಧಿಯನ್ನು ಪಡೆದು ದೊರೆತನವೇ ಮುಂತಾದ ಪದವಿಯಲ್ಲಿ ಕೂಡ ತುಚ್ಛಬುದ್ಧಿಯುಳ್ಳವರಾಗಿ ವೈರಾಗ್ಯದಿಂದ ಎಲ್ಲವನ್ನೂ ಬಿಟ್ಟು ಯಾವ ತತ್ತ್ವವನ್ನು ಪಡೆಯುವರೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.
ದಯಾಲುಂ ಗುರುಂ ಬ್ರಹ್ಮನಿಷ್ಠಂ ಪ್ರಶಾನ್ತಂ
ಸಮಾರಾಧ್ಯ ಮತ್ಯಾ ವಿಚಾರ್ಯ ಸ್ವರೂಪಮ್ |
ಯದಾಪ್ನೋತಿ ತತ್ತ್ವಂ ನಿದಿಧ್ಯಾಸ್ಯ ವಿದ್ವಾನ್
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ ||2||
ಕರುಣಾಳುವೂ ಪರಮಶಾಂತಿಯುಳ್ಳಾತನೂ ಆಗಿರುವ ಬ್ರಹ್ಮನಿಷ್ಠನಾದ ಗುರುವನ್ನು ಸೇವಿಸಿ ಮಾಡಿದ ಮನನದಿಂದ ತನ್ನ ಸ್ವರೂಪವನ್ನು ಕುರಿತು ವಿಚಾರಮಾಡಿ ನಿದಿಧ್ಯಾಸನದಿಂದ ಜ್ಞಾನಿಯಾಗಿ ಯಾವ ತತ್ತ್ವವನ್ನು ಪಡೆದುಕೊಳ್ಳುತ್ತಾನೋ ಆ ನಿತ್ಯವಾದ ಪರಬ್ರಹ್ಮನೇ ನಾನಾಗಿರುವೆನು.
ಯದಾನನ್ದರೂಪಂ ಪ್ರಕಾಶಸ್ವರೂಪಂ
ನಿರಸ್ತಪ್ರಪಞ್ಚಂ ಪರಿಚ್ಛೇದಶೂನ್ಯಮ್ |
ಅಹಂಬ್ರಹ್ಮವೃತ್ತ್ಯೈಕಗಮ್ಯಂ ತುರೀಯಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ ||3||
ಯಾವದು ಅನಂದಸ್ವರೂಪವಾಗಿಯೂ ಪ್ರಕಾಶರೂಪವಾಗಿಯೂ ಪ್ರಪಂಚರಹಿತವಾಗಿ ಯಾವ ಎಲ್ಲೆಕಟ್ಟೂ ಇಲ್ಲದೆ 'ನಾನು ಬ್ರಹ್ಮವು' ಎಂಬ ವ್ಯಕ್ತಿಯಿಂದಲೇ ಅರಿಯುವದಕ್ಕೆ ತಕ್ಕದ್ದಾಗಿರುವದೋ ಅವಸ್ಥಾತ್ರಯವನ್ನು ಮಿರಿದ ನಾಲ್ಕನೆಯದಾದ ನಿತ್ಯವಾದ ಆ ಪರಬ್ರಹ್ಮನೇ ನಾನಾಗಿರುವೆನು.
ಯದಜ್ಞಾನತೋ ಭಾತಿ ವಿಶ್ವಂ ಸಮಸ್ತಂ
ವಿನಷ್ಟಂ ಚ ಸದ್ಯೋ ಯದಾತ್ಮಪ್ರಬೋಧೇ |
ಮನೋವಾಗತೀತಂ ವಿಶುದ್ಧಂ ವಿಮುಕ್ತಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ ||4||
ಯಾವದರ ಮರವೆಯಿಂದ ಪ್ರಪಂಚವೆಲ್ಲವೂ ತೋರುತ್ತಿರುವದೋ, ಯಾವದರ ಸ್ವರೂಪದ ಅರಿವು ಉಂಟಾದಕೂಡಲೆ ಅದು ಮರೆಯಾಗುವದೋ ಮನಸ್ಸಿಗೂ ವಾಕ್ಕಿಗೂ ಆಚೆಯಿರುವ ನಿತ್ಯಶುದ್ಧವಾಗಿಯೂ ನಿತ್ಯಮುಕ್ತವಾಗಿಯೂ ಇರುವ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.
ನಿಷೇಧೇ ಕೃತೇ ನೇತಿ ನೇತೀತಿ ವಾಕ್ಯೈಃ
ಸಮಾಧಿಸ್ಥಿತಾನಾಂ ಯದಾಭಾತಿ ಪೂರ್ಣಮ್
ಅವಸ್ಥಾತ್ರಯಾತೀತಮೇಕಂ ತುರೀಯಂ
ಪರಂ ಬ್ರಹ್ಮನಿತ್ಯಂ ತದೇವಾಹಮಸ್ಮಿ ||5||
'ಇದಲ್ಲ', 'ಇದಲ್ಲ' - ಎಂಬ ವೇದಾಂತವಾಕ್ಯಗಳು ಅಲ್ಲಗಳೆಯಲಾಗಿ ಸಮಾಧಿಯಲ್ಲಿರುವವರಿಗೆ ಯಾವ ಪೂರ್ಣವಸ್ತುವು ತೋರುವದೋ, ಅವಸ್ಥಾತ್ರಯವನ್ನೂ ಮಿರಿ ನಾಲ್ಕನೆಯದೆನಿಸಿರುವ ಆ ಅದ್ವಿತೀಯವಾದ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.
ಯದಾನನ್ದಲೇಶೈಸ್ತದಾನನ್ದಿ ವಿಶ್ವಂ
ಯದಾಭಾನಸತ್ತ್ವೇ ತದಾ ಭಾತಿ ಸರ್ವಮ್ |
ಯದಾಲೋಚನಾರೂಪಮನ್ಯತ್ಸಮಸ್ತಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ ||6||
ಯಾವದರ ಆನಂದದ ಕಣಗಳಿಂದ ಈ ಪ್ರಪಂಚವೆಲ್ಲವೂ ಸುಖಿಯೆನಿಸುವದೋ, ಯಾವದರ ಬೆಳಕಿನಿಂದಲೇ ಇದೆಲ್ಲವೂ ಬೆಳಗುವದೋ, ಮಿಕ್ಕದ್ದೆಲ್ಲವೂ ಯಾವದರ ಸಂಕಲ್ಪರೂಪವಾಗಿರುವದೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.
ಅನನ್ತಂ ವಿಭುಂ ಸರ್ವಯೋನಿಂ ನಿರೀಹಂ
ಶಿವಂ ಸಙ್ಗಹೀನಂ ಯದೋಂಕಾರಗಮ್ಯಮ್ |
ನಿರಾಕಾರಮತ್ಯುಜ್ಜ್ವಲಂ ಮೃತ್ಯಹೀನಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ ||7||
ಅಂತವಿಲ್ಲದೆ, ವ್ಯಾಪಕವಾಗಿ, ಎಲ್ಲಕ್ಕೂ ಕಾರಣವಾಗಿ, ಯಾವ ಕ್ರಿಯೆಯೂ ಇಲ್ಲದೆ, ಮಂಗಳಕರವಾಗಿ, ನಿಸ್ಸಂಗವಾಗಿ, ಓಂಕಾರಕ್ಕೆ ಲಕ್ಷ್ಯನಾಗಿ ಯಾವ ಆಕಾರವೂ ಇಲ್ಲದೆ ಅತ್ಯಂತ ಪ್ರಕಾಶವಾಗಿರುವ ಮರಣರಹಿತವಾಗಿರುವ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.
ಯದಾನನ್ದಸಿನ್ಧೌ ನಿಮಗ್ನಃ ಪುಮಾನ್ ಸ್ಯಾ-
ದವಿದ್ಯಾವಿಲಾಸಃ ಸಮಸ್ತಃ ಪ್ರಪಞ್ಚಃ |
ಯದಾ ನ ಸ್ಫುರತ್ಯದ್ಭುತಂ ಯನ್ನಿಮಿತ್ತಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ ||8||
ಯಾವನ ಆನಂದದ ಸಾಗರದಲ್ಲಿ ಮುಳುಗಿದಾತನೇ ಪುರುಷನೆನಿಸುವನೋ ಅವಿದ್ಯೆಯ ಕಾರ್ಯವಾದ ಸಮಸ್ತ ಪ್ರಪಂಚವೂ ಯಾವ ಮುಳುಗುವಿಕೆಯಿಂದ ಅತ್ಯಾಶ್ಚರ್ಯಕರವಾಗಿ ಕಾಣದೆ ಹೋಗುವದೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.
ಸ್ವರೂಪಾನುಸನ್ಧಾನರೂಪಾಂ ಸ್ತುತಿಂ ಯಃ
ಪಠೇದಾದರಾದ್ಭಕ್ತಿಭಾವೋ ಮನುಷ್ಯಃ |
ಶೃಣೋತೀಹ ವಾ ನಿತ್ಯಮುದ್ಯುಕ್ತಚಿತ್ತೋ
ಭವೇದ್ವಿಷ್ಣುರತ್ರೈವ ವೇದಪ್ರಮಾಣಾತ್ ||9||
ಸ್ವರೂಪವನ್ನು ಮನಸ್ಸಿಗೆ ತಂದುಕೊಳ್ಳುವ ರೂಪದಲ್ಲಿರುವ ಈ ಸ್ತೋತ್ರವನ್ನು ಯಾವ ಮನುಷ್ಯನು ಭಕ್ತಿಭಾವದಿಂದ ಪಠಿಸುತ್ತಾನೋ, ಅಥವಾ ನಿತ್ಯವೂ ಅದರಲ್ಲಿಯೇ ಮನಸ್ಸಿಟ್ಟು ಕೇಳುವನೋ ಅವನು ಇಲ್ಲಿಯೇ ವಿಷ್ಣುವಾಗುವನು ಇದಕ್ಕೆ ವೇದವೇ ಪ್ರಮಾಣವು.
ವಿಜ್ಞಾನನಾವಂ ಪರಿಗೃಹ್ಯ ಕಶ್ಚಿತ್
ತರೇದ್ಯದಜ್ಞಾನಮಯಂ ಭವಾಬ್ಧಿಮ್ |
ಜ್ಞಾನಾಸಿನಾ ಯೋ ಹಿ ವಿಚ್ಛಿದ್ಯ ತೃಷ್ಣಾಂ
ವಿಷ್ಣೋಃ ಪದಂ ಯಾತಿ ಸ ಏವ ಧನ್ಯಃ ||10||
ಯಾವನೇ ಆಗಲಿ, ವಿಜ್ಞಾನವೆಂಬ ದೋಣಿಯನ್ನು ಸ್ವೀಕರಿಸಿ ಅಜ್ಞಾನಮಯವಾದ ಸಂಸಾರಸಾಗರವನ್ನು ದಾಟಿದರೆ, ಜ್ಞಾನವೆಂಬ ಕತ್ತಿಯಿಂದ ಆಶೆಯನ್ನು ಕತ್ತರಿಸಿ ವಿಷ್ಣುವಿನ ಪದವನ್ನು ಸೇರಿದರೆ ಅವನೇ ಧನ್ಯನು.
Comments
Post a Comment