ಗೋದಾಸ್ತುತಿಃ (ಸಂಗ್ರಹ) - 8

ಭೋಕ್ತುಂ ತವ ಪ್ರಿಯತಮಂ ಭವತೀವ ಗೋದೇ
ಭಕ್ತಿಂ ನಿಜಾಂ ಪ್ರಣಯ ಭಾವನಯಾ ಗೃಣಂತಃ |
ಉಚ್ಚಾವಚೈಃ ವಿರಹಸಂಗಮಚೈರುದಂತೈಃ
ಶೃಂಗಾರಯಂತಿ ಹೃದಯಂ ಗುವಸ್ತ್ವದೀಯಾಃ ||8||

ಗೋದೇ = ಎಲೈ ಗೋದಾದೇವಿಯೇ,
ತವ = ನಿನ್ನ,
ಪ್ರಿಯತಮಂ = ಆಪ್ತಪ್ರಿಯನಾದ ಶ್ರಿಯಃಪತಿಯನ್ನು
ಭವತೀ ಇವ = ನಿನ್ನಂತೆಯೇ
ಭೋಕ್ತುಂ = ಅನುಭವಿಸಬೇಕೆಂದು
ಗುರವಃ = ಆಳ್ವಾರಾಚಾರ್ಯರುಗಳು,
ನಿಜಾಂ = ತಮ್ಮ
ಭಕ್ತಿಂ = ಭಕ್ತಿಯನ್ನು
ಪ್ರಣಯಭಾವನಯಾ = ಪ್ರೇಮ ಭಾವನೆಯಿಂದ
ಗೃಣಂತಃ = ತೋಡಿಕೊಳ್ಳಬೇಕೆಂಬ ಆಸೆಯಿಂದ ಕೂಡಿದವರಾಗಿ
ಹೃದಯಂ = ತಮ್ಮ ಮನಸ್ಸನ್ನು
ತ್ವದೀಯಾಃ = ನಿನ್ನ
ಉಚ್ಚಾ ವಚೈಃ = ಉನ್ನತವಾದ ಸ್ಥಿತಿಯಲ್ಲಿರುವ
ವಿರಹಸಂಗಮಜೈಃ = ಪ್ರಿಯನ ವಿರಹದಿಂದುತ್ಪನ್ನವಾದ
ಉದಂತೈಃ = ಭಾವನೆಗಳಿಂದ
ಶೃಂಗಾರಯಂತಿ = ಅಲಂಕರಿಸಿಕೊಳ್ಳುತ್ತಾರೆ (ಪ್ರಿಯಪ್ರೇಯಸಿಯರ ಪ್ರೇಮಭಾವನೆಯಿಂದುದಯಿಸುವ ಶೃಂಗಾರರಸಕ್ಕೆ ಪಾತ್ರರನ್ನಾಗಿಸಿಕೊಳ್ಳುತ್ತಾರೆ).

    'ಪೂ ಸಂಜ್ಞೇ ತು ಪುರೇ ತಸ್ಮಿನ್ ಶಯನಾತ್ ಪುರುಷೋ ಹರೀಃ' - 'ಪೂ' ಎಂಬ ಹೆಸರಿನಿಂದ ಕೂಡಿದ ಎಲ್ಲ ವ್ಯಷ್ಟಿ ಶರೀರದಲ್ಲಿಯೂ ಅಂದರೆ, ಎಲ್ಲ ಚೇತನಾ ಚೇತನಗಳಲ್ಲಿಯೂ ಯಾರು ವಾಸಿಸುತ್ತಿರುತ್ತಾನೆಯೋ ಅವನು 'ಪುರುಷ', ಮತ್ತು 'ಸಃ ಯತ್ ಪೂವಃ ಆಸ್ಮಾತ್ ಸರ್ವಸ್ಮಾತ್, ಸರ್ವಾನ್ ಪಾಪ್ಮನಃ ಔಷತ್ ತಸ್ಮಾತ್ ಪುರುಷಃ' ಎಂಬ ವ್ಯುತ್ಪತ್ತಿಯಿಂದ ಎಲ್ಲ ಚೇತನಾಚೇತನಗಳಿಗಿಂತಲೂ ಪೂರ್ವದಲ್ಲಿಯೂ ಇದ್ದು, ಎಲ್ಲರ ಪಾಪವನ್ನೂ ದಹಿಸುವ ಶಕ್ತಿಯನ್ನು ಹೊಂದಿ ಮೋಕ್ಷಪ್ರದಾನ ಮಾಡುವ ಸಾಮರ್ಥ್ಯವಿರುವವನು 'ಪುರುಷ' ಶಬ್ದವಾಚ್ಯನಾಗುತ್ತಾನೆ. [ಸರ್ವ ಪೂರ್ವವರ್ತಿತ್ವ ಸರ್ವಪಾಪ್ಮಪ್ರದಾಹಕತ್ವರೂಪಕಾರಣತ್ವ ಮೋಕ್ಷಪ್ರದತ್ವ ಶಕ್ತಿತಯಾ ಚ ಪುರುಷತ್ವಮ್‌ತಸ್ಯ ಶ್ರೀಯಃಪತೇಃ ಏವ]

    ಆದುದರಿಂದ ಪುರುಷಸೂಕ್ತ ಪ್ರತಿಪಾದ್ಯನಾದ ಪರಮಪುರುಷನೊಬ್ಬನೇ ಪುರುಷಶಬ್ದವಾಚ್ಯನಾಗಿದ್ದಾನೆ. ಆದುದರಿಂದ ಇತರ ಚೇತನರೆಲ್ಲರೂ ಸ್ತ್ರೀ-ಪ್ರಾಯರು ಆದುದರಿಂದ ಆ ಪರಮಪುರುಷನನ್ನು ಸತೀಭಕ್ತಿಯಿಂದ ಅವನು ತನ್ನ ಪ್ರಿಯನೆಂದೂ ತಾನು ಅವನ ಪ್ರೇಯಸಿಯೆಂದೂ ಉಪಾಸನೆ ಮಾಡಿ ಅನುಭವಿಸುವುದು ತಥ್ಯವಾದುದಾಗಿ ಭೋಗ್ಯತಮವಾಗಿರುತ್ತದೆ. ಗೋದಾ-ದೇವಿಯೂ ತನ್ನ ಅವತಾರ ಕಾಲದಲ್ಲಿ ಈ ಪ್ರಿಯ ಪ್ರೇಯಸಿಯ ಭಾವನೆಯಿಂದಲೇ ಪರಮಾತ್ಮನನ್ನು ಅನುಭವಿಸಿದಳು ಇವಳ ಈ ಪ್ರೇಮಭಾವನೆ ಇವಳ ಶ್ರೀ ಸೂಕ್ತಿಗಳಲ್ಲಿ ಎದ್ದು ಕಾಣುತ್ತದೆ ಇದನ್ನು ಕಂಡ ನಮ್ಮ ಆಚಾರ್ಯರಾದ ನಮ್ಮಾಳ್ವಾರ್ರವರೂ ಮತ್ತು ತಿರುಮಂಗೈ ಆಳ್ವಾರವರೂ ಗೋದೆಯಂತೆಯೇ ತಾವೂ ಪರಮಾತ್ಮನನ್ನನುಭವಿಸಬೇಕೆಂದು ಅವಳ ಶ್ರೀ ಸೂಕ್ತಿಗಳಲ್ಲಿ ಆಕೆಯ ತನ್ನ ಪ್ರಿಯನ ಅಗಲಿಕೆಯಲ್ಲಿರುವಲ್ಲಿ ಉಂಟಾದ ದುಃಖವನ್ನು ಪರಮಾತ್ಮನಲ್ಲಿ ತೋಡಿಕೊಂಡಂತೆ, ತಾವೂ 'ಪರಾಂಕುಶನಾಯಿಕಾ' ಮತ್ತು 'ಪರಕಾಲ ನಾಯಿಕಾ' ರೂಪದಲ್ಲಿ ತಮ್ಮ ಭಕ್ತಿಯನ್ನು ಪ್ರೇಮ ಭಾವನೆಯಿಂದ ತೋಡಿಕೊಳ್ಳಲು ಗೋದೆಯ ವಿರಹ ವ್ಯಥೆಯಿಂದ ಹೊರಹೊಮ್ಮಿದ ಭಾವನೆಗಳಿಂದ ತಮ್ಮ ಹೃದಯವನ್ನೂ ಅಲಂಕರಿಸಿಕೊಂಡು (ಪ್ರೇಮ) ಶೃಂಗಾರಭಾವವನ್ನು ತಾಳಿದರು.

    ಗೋದೆಯು ನಾಯಿಕಾಭಾವದಿಂದ ಹಾಡುವಲ್ಲಿ, ತನ್ನ ಸ್ತ್ರೀಸಹಜವಾದ ಪ್ರೇಮವನ್ನು ಹೊರಗಡಹಿದ್ದಾಳೆ ಅದರಲ್ಲಿ ಕೃತ್ರಿಮತೆ ಇಲ್ಲ ಆಳ್ವಾರುಗಳಾದರೋ ತಾತ್ತ್ವಿಕವಾಗಿ ಸ್ತ್ರೀಪ್ರಾಯರಾದರೂ ಲೌಕಿಕವಾಗಿ ಪುರುಷನ ರೂಪದಲ್ಲಿ ಅವತರಿಸಿ ನಾಯಿಕಾಭಾವನೆಯೆಂಬ ಮುಖವಾಡದಿಂದ ತಮ್ಮ ಶ್ರೀ ಸೂಕ್ತಿಯನ್ನು ಹಾಡುವಲ್ಲಿ ಕೃತ್ರಿಮತೆ ಕಂಡುಬರುತ್ತದೆ. ಹಾಗಿದ್ದರೂ ಗೋದೆಯ ಈ ಪ್ರೇಮ ಭಾವನೆಯಿಂದಲೇ ಪರಮಾತ್ಮನನ್ನು ಅವರೂ ಒಲಿಸಿಕೊಂಡು ಅನುಭವಿಸಿದರು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ