ಭಗವಾನ್ ಎಂದರೇನು?

    'ಭಗವಾನ್' ಎನ್ನುವ ಪದವನ್ನು ನಮ್ಮ ವ್ಯವಹಾರದಲ್ಲಿ ನಿತ್ಯವೂ ಹೇರಳವಾಗಿ ಬಳಸುತ್ತೇವೆ. ಪರಮಾತ್ಮನನ್ನು 'ಹೇ ಭಗವಾನ್' ಎಂದು ಸಂಬೋಧಿಸುತ್ತೇವೆ. ಇದೇ ಶಬ್ದವನ್ನು ಕೆಲವು ಜ್ಞಾನಿಗಳ ನಾಮಧೇಯಗಳ ಹಿಂದೆ ಗೌರವಪೂರ್ವಕವಾಗಿ ಉಪಯೋಗಿಸುತ್ತೇವೆ ಉದಾ ಭಗವಾನ್ ಶಂಕರಾಚಾರ್ಯರು, ಭಗವಾನ್ ರಮಣಮಹರ್ಷಿಗಳು ಇತ್ಯಾದಿ.

    ಧನವುಳ್ಳವನು ಧನವಾನ್, ವಿದ್ಯಾವಂತನು ವಿದ್ಯಾವಾನ್, ಗುಣವುಳ್ಳವನು ಗುಣವಾನ್ ಮುಂತಾದ ಶಬ್ದಗಳ ಉತ್ಪತ್ತಿಯಂತೆಯೇ ಭಗವುಳ್ಳವನು ಭಗವಾನ್ ಎನ್ನಬಹುದು, ಹಾಗಾದರೆ ಭಗವಾನ್ ಎಂಬ ಶಬ್ದದ ಅರ್ಥವನ್ನು ತಿಳಿಯಲು ವಿಷ್ಣುಪುರಾಣದಲ್ಲಿ (6-5-78,79) ಎರಡು ಶ್ಲೋಕಗಳಿವೆ.

1. ಉತ್ಪತ್ತಿಂಚ ವಿನಾಶಂಚ ಭೂತಾನಾಮಾಗತಿಂ ಗತಿಂ |
    ವೇತ್ತಿ ವಿದ್ಯಾಮವಿದ್ಯಾಂಚ ಸ ವಾಚ್ಯೋ ಭಗವಾನಿತಿ ||
ಪ್ರಾಣಿಗಳ ಉತ್ಪತ್ತಿಯನ್ನೂ ಪ್ರಲಯವನ್ನೂ ಆಗು-ಹೋಗುಗಳನ್ನೂ ವಿದ್ಯೆಯನ್ನು ಅವಿದ್ಯೆಯನ್ನೂ ಅರಿತಿರುವಾತನನ್ನು ಭಗವಂತನೆನ್ನಬೇಕು.

2. ಐಶ್ವರ್ಯಸ್ಯ ಸಮಗ್ರಸ್ಯ ಧರ್ಮಸ್ಯ ಯಶಸಃ ಶ್ರಿಯಃ |
    ಜ್ಞಾನವೈರಾಗ್ಯಯೋಶ್ಚೈವ ಷಣ್ಣಾಂ ಭಗ ಇತೀರಣಾ ||
ಸಮಗ್ರವಾದ ಐಶ್ವರ್ಯ (ಬೇಕಾದಂತೆ ಆಳುವ ಸಾಮರ್ಥ್ಯ, ಸ್ವಾತಂತ್ರ್ಯ), ಧರ್ಮ, ಯಶಸ್ಸು, ಸಂಪತ್ತು ಜ್ಞಾನ ಮತ್ತು ವೈರಾಗ್ಯ ಈ ಆರು ಗುಣಗಳನ್ನು 'ಭಗ'ವೆಂದು ಹೇಳಲಾಗುತ್ತದೆ. ಇವು ಯಾವಾಗಲೂ ಭಗವಂತನ ಸ್ವರೂಪವೇ ಆಗಿದೆ ಆದುದರಿಂದ ಮೇಲೆ ಹೇಳಿದ ಎಲ್ಲಾ ಗುಣಗಳುಳ್ಳವನನ್ನು 'ಭಗವಂತ' ಎಂದು ಸಂಭೋಧಿಸುವುದು ನ್ಯಾಯವಾಗಿದೆ.

    ಇಲ್ಲಿ ಭಗವಾನ್ ಶಂಕರಾಚಾರ್ಯರು ತಮ್ಮ ಭಗವದ್ಗೀತಾ ಭಾಷ್ಯದಲ್ಲಿ 'ಭಗವಾನ್' ಶಬ್ದಕ್ಕೆ ಬರೆದ ಭಾಷ್ಯವನ್ನು ಗಮನಿಸುವುದು ಸೂಕ್ತವಾಗಿದೆ.

    "ಸ ಚ ಭಗವಾನ್ ಜ್ಞಾನೈಶ್ಚರ್ಯಶಕ್ತಿಬಲವೀರ್ಯತೆಜೋಭಿಃ ಸದಾ ಸಂಪನ್ನಃ ತ್ರಿಗುಣಾತ್ಮಿಕಾಂ ವೈಷ್ಣವೀಂ ಸ್ವಾಂ ಮಾಯಾಂ ಮೂಲಪ್ರಕೃತಿಂ ವಶೀಕೃತ್ಯ ಅಜೋವ್ಯಯೋ ಭೂತನಾಮೀಶ್ವರೋ ನಿತ್ಯಶುದ್ಧಮುದ್ಧಮುಕ್ತ ಸ್ವಭಾವೋಪಿ ಸನ್ ಸ್ವಮಾಯಯಾ ದೇಹವಾನಿವ ಜಾತ ಇವ ಚ ಲೋಕಾನುಗ್ರಹಂ ಕುರ್ವನ್ ಲಕ್ಷ್ಯತೇ"

    ಆ ಭಗವಂತನು ಜ್ಞಾನ, ಐಶ್ವರ್ಯ, ಶಕ್ತಿ, ಬಲ, ವೀರ್ಯ, ತೇಜಸ್ಸು ಇವುಗಳಿಂದ ಯಾವಾಗಲೂ ಕೂಡಿಕೊಂಡಿದ್ದು ತ್ರಿಗುಣಸ್ವರೂಪವಾದ (ಸತ್ತ್ವ, ರಜ, ತಮಃ) ತನ್ನ ವೈಷ್ಣವಮಾಯೆಯೆಂಬ ಮೂಲಪ್ರಕೃತಿಯನ್ನು ತನ್ನ ವಶದಲ್ಲಿಟ್ಟುಕೊಂಡು (ನಿಜವಾಗಿ ತಾನು) ಜನ್ಮರಹಿತನೂ, ನಾಶರಹಿತನೂ, ಪ್ರಾಣಿಗಳಿಗೆ ಒಡೆಯನೂ, ನಿತ್ಯಶುದ್ಧಬುದ್ಧಮುಕ್ತ ಸ್ವಭಾವದವನೂ ಆಗಿದ್ದರೂ ತನ್ನ ಮಾಯೆಯಿಂದ ದೇಹವುಳ್ಳವನಂತೆಯೂ ಹುಟ್ಟಿದವನಂತೆಯೂ ಲೋಕಾನುಗ್ರಹವನ್ನು ಮಾಡುವವನಾಗಿ ಕಂಡುಬರುತ್ತಾನೆ (ಇಲ್ಲಿ ಶ್ರೀಕೃಷ್ಣನ ಅವತಾರಕ್ಕೆ ಕಾರಣವನ್ನು ತಿಳಿಸಿರುತ್ತಾರೆ)

    ಇದು ಶ್ರೀ ಶಂಕರರ ಭಾಷ್ಯದ ಒಂದು ಉದಾಹರಣೆ ಅಷ್ಟೇ 'ಭಗವಾನ್' ಎಂಬ ಒಂದು ಪದಕ್ಕೆ ಇಷ್ಟು ವ್ಯಾಖ್ಯಾನ ಬರದಿರಬೇಕಾದರೆ ಅವರ ಗೀತಾಭಾಷ್ಯ, ದಶೋಪನಿಷತ್ತುಗಳ ಭಾಷ್ಯ ಮತ್ತು ಬ್ರಹ್ಮಸೂತ್ರದ ಭಾಷ್ಯಗಳನ್ನು ನಮ್ಮ ಜೀವಿತ ಸಮಯದಲ್ಲಿ ಓದಲಾಗದಿದ್ದರೆ ಅತೀವ ನಷ್ಟ ಎಂದು ಪ್ರತಿಯೊಬ್ಬ ಭಾರತೀಯನೂ ನೆನಪಿಡಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ