ಗೋಂದಾವಲಿಯ ಸಂತ ಬ್ರಹ್ಮಚೈತನ್ಯರು

ಹಿನ್ನೆಲೆ

    ಮಹಾತ್ಮರ ಜೀವಸ್ಮರಣೆಯಿಂದ ನಮ್ಮ ಮೌಲ್ಯ, ಸಂಸ್ಕೃತಿ ರೂಪಗೊಳ್ಳುತ್ತದೆ. ಒಂದು ಜನಾಂಗ ಆಚರಿಸಿಕೊಮಡು ಬಂದಿರುವ ಮೌಲ್ಯಗಳು ಜೀವಂತವಾಗಿರುವುದಕ್ಕೆ ಆ ಜನಾಂಗದ ಶ್ರೇಷ್ಠ ವ್ಯಕ್ತಿಗಳು ಅಥವಾ ಮಹಾತ್ಮರೇ ಕಾರಣ: ಅವರನ್ನು ಆಳಿದ ರಾಜರಲ್ಲ. ಮಹಾರಾಷ್ಟ್ರದ ಗೋಂದಾವಲಿ ಎಂಬ ಊರಿನಲ್ಲಿ ಸುಮಾರು 150+ ವರ್ಷಗಳ ಹಿಂದೆ ಜನಿಸಿ ಬಾಳಿದ ಮಹಾತ್ಮರೇ ಬ್ರಹ್ಮಚೈತನ್ಯ ಇವರ ಜೀವನ ಚರಿತ್ರೆಯನ್ನು ಅರಿಯುವುದೇ ಒಂದು ಪುಣ್ಯ ಸ್ಮರಣೆ. ತಮ್ಮ ಪಾವಿತ್ರ್ಯದಿಂದ, ಪ್ರೀತಿ-ಅನುಕಂಪಗಳಿಂದ ಅಲ್ಲಿಯ ಸಾಮಾನ್ಯ ಜನರ ಹೃದಯವನ್ನು ಗೆದ್ದು ಅವರೆಲ್ಲರ 'ರಾಜ'ರಾದರು ಇವರನ್ನು 'ಗೊಂದಾವಲಿ ಮಹಾರಾಜ್' ಎಂದು ಕರೆಯುವುದು ವಾಡಿಕೆ.

    ಗೋಂದಾವಲಿ ಮಹಾರಾಷ್ಟ್ರದ ಒಂದು ಹಳ್ಳಿ ಇದು ಸತಾರಾ ಜಿಲ್ಲೆಯ ದಹಿವಾಡ ಎಂಬ ಊರಿನ ಬಳಿ ಇದೆ. ಗೋಂದಾವಲಿಯ ಬ್ರಹ್ಮಚೈತನ್ಯರು ಕುಲಕರ್ಣಿ ಮನೆತನದಲ್ಲಿ ಜನಿಸಿದರು. ಇವರು ಹುಟ್ಟಿದ್ದು 1844ರ ಫೆಬ್ರವರಿ 10ನೇ ಬುಧವಾರ ಬೆಳಗ್ಗೆ ಇವರ ತಂದೆ ತಾಯಿಗಳಾದ ರಾವ್ ಜಿ ಮತ್ತು ಗೀತಾಬಾಯಿಯವರಿಗೆ ಬಹುದಿನದ ತಪಸ್ಸು ಫಲಿಸಿತು. ತಮ್ಮ ಮಗನಿಗೆ ಗಣಪತಿ ಎಂದು ನಾಮಕರಣ ಮಾಡಿದರು. ಅಜ್ಜ ಲಿಂಗೋಪಂತ್ ಪಂಡರಾಪುರದ ವಿಠಲನ ಭಕ್ತರು ಅಲ್ಲದೆ ಗೊಂದಾವಲಿಯ ಸುಪ್ರಸಿದ್ಧ ಕುಲಕರ್ಣಿಯಾಗಿದ್ದರು ಸಾಕಷ್ಟು ಆಸ್ತಿಪಾಸ್ತಿಗಳನ್ನು ಸಂಪಾದಿಸಿದ್ದ ಲಿಂಗೋಪಂತರ ವ್ಯವಹಾರ ಚತುರಗೆ ಮಗ ರಾವ್ ಜಿಗೆ ಬರಲಿಲ್ಲ ರಾವ್ ಜಿ ಸದಾ ಅಂತರ್‌ಮುಖಿ, ಮಿತಭಾಷಿ ಮತ್ತು ರಾಮನಾಮ ಜಪಿಸುವ ರಾಮಭಕ್ತ ಹಾಗಾಗಿ ರಾವ್‌ಜಿ ಸ್ವಭಾವಕ್ಕೆ ಕುಲಕರ್ಣಿ ಕೆಲಸ ಅಷ್ಟಾಗಿ ಒಗ್ಗಲಿಲ್ಲ ತಂದೆ ಲಿಂಗೋಪಂತ್ ಈ ಬಗ್ಗೆ ಮಗನಿಗೆ ತಿಳಿಯ ಹೇಳುತ್ತಿದ್ದರು ಆದರೆ ರಾವ್‌ಜಿ ಮಾತ್ರ "ಹಣ ಸಂಪಾದನೆಯಲ್ಲೇ ಕಾಲಹರಣ ಮಾಡಲು ನನ್ನಿಂದ ಸಾಧ್ಯವಿಲ್ಲ" ಎಂದು ಬುಡುತ್ತಿದ್ದರು ಹೀಗಾಗಿ ರಾವ್‌ಜಿ ಕುಟುಂಬ ವಸ್ತುಸಂಪತ್ತಿನಲ್ಲಿ ಕಳೆಗುಂದ ತೊಡಗಿತು ಆದರೆ ವಿಪುಲವಾದ ಭಗವತ್ಸಂಪತ್ತು ಕುಟುಂಬವನ್ನು ಆವರಿಸತೊಡಗಿತು ಆದರೂ ಲಿಂಗೂಪಂತ್ ಸಂಪಾದಿಸಿದ್ದು ಮೊಮಗನ ಕಾಲದವರೆಗೂ ಸಾಕಾಗುವಷ್ಟಿತ್ತು ಹಾಗಾಗಿ ಮನೆಯವರ ದಾನಧರ್ಮ, ಆತಿಥ್ಯ, ಜೌದಾರ್ಯಗಳಿಗೆ ಯಾಔ ಕೊರೆತೆಯೂ ಆಗಲಿಲ್ಲ ಈ ಸಂಧರ್ಭದಲ್ಲಿ ಗಣಪತಿ ಜನಿಸಿದ್ದು ಅವನೊಬ್ಬ ಸಂತನಾದದ್ದು, ಅರ್ಥವತ್ತಾಗೇ ಇದೆ.
    ತಾಯಿ ಗೀತಾಬಾಯಿ ರಾಮಭಕ್ತರ ಮನೆತನದಿಂದ ಬಂದ ಸದಾಚಾರ ಸಂಪನ್ನೆ ಮಾವ ಲಿಂಗೋಪಂತರ ಅಚ್ಚುಮೆಚ್ಚಿನ ಸೊಸೆ. ಪತಿಯ ಸ್ವಭಾವವರಿತು ಸಹಕರಿಸುವ ಆಧ್ಯಾತ್ಮಿಕ ಒಲವು ಅವಳಿಗಿತ್ತು ಈಕೆ ಕಷ್ಟ ಸಹಿಷ್ಣು, ಬಡವರನ್ನು ಕಂಡರೆ ಎಲ್ಲಿಲ್ಲದ ಅನುಕಂಪ ತನ್ನ ದಣಿವನ್ನು ಲೆಕ್ಕಿಸದೆ ಮನೆಗೆ ಬಂದ ಅತಿಥಿ ಅಭ್ಯಾಗತರ ಸೇವೆ ಮಾಡುತ್ತಿದ್ದಳು ಸಹಾಯ ಕೋರಿ ಬಂದವರಿಗೆ ಎಂದೂ ಇಲ್ಲ ಎನ್ನುತ್ತಿರಲಿಲ್ಲ ಹಳ್ಳಿಯ ಬಡ ಹೆಂಗಸರು ಗೀತಾಬಾಯಿಯ ಉದಾರತೆಗೆ ಮನಸಾರೆ ಕೃತಜ್ಞತೆ ಸಲ್ಲಿಸುತ್ತಿದ್ದರು ಆಗ ಗೀತಾಬಾಯಿ ಹೇಳುತ್ತಿದ್ದಳು "ನೋಡಿ ಆ ದೇವರು ಕರುಣಾಮಯಿ, ಇವೆಲ್ಲವನ್ನೂ ಆ ರಾಮನೇ ನ್ನಗೆ ಕೊಟ್ಟಿದ್ದಾನೆ ನೀವು ವಂದಿಸಬೇಕಾದ್ದು ಅವನಿಗೆ ನನಗೆ ಬದಲಾಗಿ ರಾಮನಿಗೆ ವಂದಿಸಿಬಿಡಿ ಅದೇ ನೀವು ನನಗೆ ಮಾಡಬಹುದಾದ ಪ್ರತ್ಯಪಕಾರ.

ಬಾಲ್ಯ

    ಶೈಶವದಲ್ಲಿ ಗಣಪತಿ ಆಕರ್ಷಣೆಯ ಕೇಂದ್ರವಾಗಿದ್ದ ಮಗುವಿನ ಬಹು ಮುದ್ದಾದ ಲಕ್ಷಣಗಳು ಪ್ರಪಂಚ ವಿಮುಖನಾದ ತಂದೆ ರಾವ್‌ಜಿಯಲ್ಲೂ ಮಧುರ ಆಕರ್ಷಣೆಗಳನ್ನು ತುಂಬಿಬಿಡುತ್ತಿತ್ತು ಬಾಲಕ ಗಣಪತಿ ಅಜ್ಜ ಲಿಂಗೋಪಂತರ ಸರ್ವಸ್ವವಾಗಿಬಿಟ್ಟನು. ಒಮ್ಮೆ, ಮೊಮ್ಮಗನ ಸ್ವಭಾವವೇನೆಂದು ತಿಳಿಯಲು ಕೇಳಿದರು- "ಮಗು ನಿನಗೆ ಬೇಕಾದಷ್ಟು ದುಡ್ಡು ಕೊಡುತ್ತೇನೆ. ಅದನ್ನು ಹೇಗೆ ಖರ್ಚು ಮಾಡುತ್ತೀಯ?" ಆರು ವರ್ಷದ ಆ ಪೋರ ಉತ್ತರಿಸಿದ. "ಅಜ್ಜ ಆ ದುಡ್ಡನ್ನೆಲ್ಲಾ ನಾನು ಕುಂಟರು, ಕುರುಡರು, ಬಡವರಿಗೆಲ್ಲಾ ಹಂಚುತ್ತೇನೆ" ಅಜ್ಜನಿಗೆ ಆಶ್ಚರ್ಯವಾಯಿತು. ಮತ್ತೆ ಕೇಳಿದರು - "ಒಂದು ವೇಳೆ ನೀನು ರಾಜನಾದರೆ ಏನು ಮಾಡುತ್ತೀಯ?" ಗಣಪತಿ ಹೇಳಿದ - "ಎಲ್ಲರಿಗೂ ಹೊಟ್ಟೆ ತುಂಬ ಊಟ ಹಾಕುತ್ತೇನೆ" ಈ ಮಾತುಗಳಿಂದ ಅಜ್ಜನಿಗೆ ಬಹಳ ಸಂತೋಷವಾಯಿತು. ತನ್ನ ಮಗ ರಾವ್‌ಜಿಗೆ ಹೇಳಿದ್ದ - "ನೋಡು ಈ ಬಾಲಕ ಹಿಂದಿನ ಜನ್ಮದಲ್ಲಿ ಯೋಗಿಯಾಗಿದ್ದನೆಂದು ತೋರುತ್ತದೆ.

    ಮನೆತನದ ಸಂಪ್ರದಾಯದಂತೆ ಉಪನಯನ ಕಾರ್ಯ ನಡೆಯಿತು ಜೊತೆಗೆ ಪ್ರತಿ ವರ್ಷವೂ ಪಂಡರಾಪುರಕ್ಕೆ ಹೋಗೆ ವಿಠಲನ ದರ್ಶನ ಮಾಡುವ ಪದ್ದತಿಯಿಂದ ಬಾಲಕ ಗಣಪತಿಯ ಹೃದಯದಲ್ಲಿ ಆಳವಾದ ಭಕ್ತಿ ಭಾವ ನೆಲೆಸಿತ್ತು. ನಿಧಾನವಾಗಿ ಬಾಲಕ ಜಪದಲ್ಲಿ ಒಲವು ತೋರಲಾರಂಭಿಸಿದ. ದಿನಕಳೆದಂತೆ ಜಪವಷ್ಟೇ ಸಾಲದು ಎನಿಸಿತು ಏಕಾಂತ ಸ್ಥಳಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ಒಂದು ದಿನ ರಾತ್ರಿ ಎಲ್ಲರೂ ಮಲಗಿದ್ದಾರೆ ಹೊರಗೆಲ್ಲಾ ಗಾಢಾಂಧಕಾರ.

    ಅಕಸ್ಮಾತ್ ಎದ್ದು ನೋಡಿದರೆ ಬಾಲಕ ಗಣಪತಿ ಕಾಣಲಿಲ್ಲ ಎಲ್ಲರೂ ಗಾಬರಿಯಿಂದ ಗಣಪತಿಯನ್ನು ಹುಡುಕುತಿದ್ದಾರೆ. ಹತ್ತಿರದಲ್ಲೆಲ್ಲೂ ಗಣಪತಿ ಇಲ್ಲ ಕೊನೆಗೆ ಲಿಂಗೋಪಂತರು ತಮ್ಮ ಊರಿನ ನದಿ ತೀರದಲ್ಲಿ ಹುಡುಕಿ ನೋಡಿದರು ಒಂದು ಬಂಡೆಯ ಪಕ್ಕದಲ್ಲಿ ಧ್ಯಾನಮಗ್ನನಾಗಿ ಕುಳಿತಿದ್ದಾನೆ ಅಜ್ಜ, ಗಣಪತಿಯನ್ನು ಮನೆಗೆ ಕರೆತಂದು ಕೇಳಿದರು - "ನೀನು ಹೀಗೆ ಒಬ್ಬನೇ ಹೋಗಿ ಕುಳಿತಾಗ ಹಾವು ಚೇಳುಗಳು ಬಂದರೆ ಏನು ಮಾಡುತ್ತೀಯ?" ಬಾಲಕ ಹೇಳಿದ- "ಹಾವು ಚೇಳುಗಳ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು?" ಇದು ಬಾಲಕನ ನಿರ್ಭಯ ಸ್ವಭಾವವನ್ನು ತೋರಿಸುತ್ತದೆ. ಮುಂದೆಯೂ ಸಹ ಗಣಪತಿಗೆ ಭಯ ಎಂದರೆ ಏನೆಂದು ತಿಳೀದಿರಲಿಲ್ಲ ಆತಂಕ ಭಯಗಳು ಈ ಮಹಾತ್ಮರನ್ನು ಜೀವನದಲ್ಲಿ ಎಂದೂ ಕಾಡಲಿಲ್ಲವೆಂದೇ ತೋರುತ್ತದೆ.

    ಬಾಲಕ ಗಣಪತಿ ಧ್ಯಾನಕ್ಕಷ್ಟೇ ಹೆಸರುವಾಸಿಯಾಗಿರಲಿಲ್ಲ ಅಸಾಧಾರಣವಾದ ಚೇಷ್ಟೆಯನ್ನೂ ಮೈಗೂಡಿಸಿಕೊಂಡಿದ್ದ ಗೋಂದಾವಲಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ನಡೆಯಿತು ಆದರೆ ಆ ಶಾಲಾ ಮಾಸ್ತರರಿಗೆ ಗೊತ್ತಿದ್ದನ್ನೆಲ್ಲ ಬಾಲಕ ಗಣಪತಿ ಬಹಳ ಬೇಗ ಕರಗತ ಮಾಡಿಕೊಮಡು ಮುಂದಕ್ಕೆ ಹೇಳಿಕೊಡಿ ಎಂದು ಪೀಡಿಸತೊಡಗಿದ ಆ ಮಾಸ್ತರಿಗೆ ಹೆಚ್ಚಿನ ಜ್ಞಾನ ಇರಲಿಲ್ಲ ಹಾಗಾಗಿ ಮಕ್ಕಳೆಲ್ಲ ಗಣಪತಿಯ ನೇತೃತ್ವದಲ್ಲಿ ಶಾಲೆಬಿಟ್ಟು ಹೊಲದ ಕಡೆಗೆ ಆಟಕ್ಕೆ ಹೋಗಿಬಿಡುತ್ತಿದ್ದರು ಗಣಪತಿಯ ವಿದ್ಯಾಭ್ಯಾಸ ಅಲ್ಲಿಗೇ ನಿಂತುಹೋಯಿತು ಹುಡುಗರನ್ನೆಲ್ಲಾ ಸೇರಿಸಿಕೊಂಡು ರಾಮನಾಮ ಜಪಸುವುದು ಅಥವಾ ಏನಾದರೂ ಚೇಷ್ಟೆಯನ್ನು ತಾಳಲಾರದೆ ನೆರೆಹೊರೆಯವರು ದೂರಲಾರಂಭಿಸಿದರು ತಾಯಿ ಗೀತಾಬಾಯಿ ಮನೆಯ ದನಗಳನ್ನೆಲ್ಲಾ ಕಾಯಬೇಕೆಂದು ಗಣಪತಿಗೆ ಕೆಲಸ ಕೊಟ್ಟಳು. ಆಗಲೂ ಸಹ ಗಣಪತಿಯ ಮೇಲೆ ಅನೇಕ ದೂರುಗಳು ಬರತೊಡಗಿದವು ಏಕೆಂದರೆ ಗಣಪತಿ ದನ ಕಾಯುವುದನ್ನು ಬಿಟ್ಟು ಮಕ್ಕಳನ್ನೆಲ್ಲ ಸೇರಿಸಿಕೊಂಡು ಅವರಿಗೆ ಕಥೆ ಹೇಳುತ್ತಿದ್ದ. ದನಗಳು ಹೊಲಕ್ಕೆ ನುಗ್ಗಿ ಬೆಳೆಗಳನ್ನು ಮೇಯ್ದು ಬಿಡುತ್ತಿದ್ದವು ಈ ದೂರುಗಳಿಂದ ರೋಸಿಹೋದ ತಾಯಿ, ಗಣಪತಿಯನ್ನು ಥಳಿಸಲು ಹೋಗಿ ತಾನೇ ಬಿದ್ದುಬಿಟ್ಟಳು ಇದರಿಂದ ಗಣಪತಿಯ ಮನಸ್ಸು ಕದಡಿತು ಅಮ್ಮನನ್ನು ತಾನೇ ಎತ್ತಿ ಕೂರಿಸಿ ಸಮಾಧಾನ ಹೇಳಿದ ನಂತರ ತಾನು ಇನ್ನು ಮುಂದೆ ದೂರುಗಳು ಬರದಂತೆ ನಡೆದುಕೊಳ್ಳುವುದಾಗಿ ತಾಯಿಗೆ ವಾಗ್ವಾನ ಮಾಡಿದ ಈ ಘಟನೆಯ ನಂತರ ಗಣಪತಿಯಲ್ಲಿ ಆಮೂಲಾಗ್ರ ಪರಿವರ್ತನೆ ಆಯಿತು ಸದಾಕಾಲ ಧ್ಯಾನ ಜಪಗಳಲ್ಲಿ ಕಾಲ ಕಳೆಯತೊಡಗಿದ ಕಣ್ಣು ಮುಚ್ಚಿ ಕುಳಿತನೆಂದರೆ ತಾಯಿಯೇ ಅವನನ್ನು ಆಹಾರ ಪಾನೀಯಗಳಿಗಾಗಿ ಎಬ್ಬಿಸಬೇಕಾಗಿತ್ತು ಬಾಹ್ಯಜ್ಞಾನಶೂನ್ಯವಾಗಿ ಗಂಟೆಗಟ್ಟಲೆ ಕುಳಿತು ಬಿಡುತ್ತಿದ್ದ.

ಮದುವೆ
    ಪ್ರಪಂಚ ವಿಮುಖರಾದ ತಮ್ಮ ಮಕ್ಕಳನ್ನು ದಾರಿಗೆ ತರಲು ಅನಾದಿ ಕಾಲದಿಂದಲೂ ಜನ ಬಳಸುವ ತಂತ್ರವೆಂದರೆ 'ಮದುವೆ'. ಮದುವೆ ಮಾಡಿಬಿಟ್ಟರೆ ಸ್ವಚ್ಛಂದವಾಗಿ ಕ್ರಾಂತಿಕಾರಿಗಳಂತೆ ವರ್ತಿಸುವ ತಮ್ಮ ಮಕ್ಕಳು ಎತ್ತಿನ ಹಾಗೆ ಸಂಸಾರದ ಭಾರ ಎಳೆಯುತ್ತಾ ವಿಧೇಯರಾಗಿರುತ್ತಾರೆ ಎಂಬುದು ಅನುಭವ ಸಿದ್ಧಾಂತ. ಅಜ್ಜ ಲಿಂಗೊಪಂತರೂ ಸಹ ಮೊಮ್ಮಗನಿಗೆ ಹಿಡಿದಿರುವ ಜಪತಪಾದಿ ರೋಗಗಳನ್ನು ಹೋಗಲಾಡಿಸಲು ಮದುವೆ ಮಾಡವ ನಿರ್ಧಾರ ಮಾಡಿದರು. ಬಾಲ್ಯ ವಿವಾಹ ಪದ್ಧತಿಯ ಆಕಾಲದಲ್ಲಿ ಸರಸ್ವತಿ ಎಂಬ ಬಾಲಕಿಯೊಡನೆ ವಿವಾಹ ನಡೆಯಿತು.


ಗುರುವನ್ನರಸಿ
    ಮದುವೆಯಿಂದ ಗಣಪತಿಯ ಸ್ವಭಾವದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಮದುವೆಯಾದ ನಾಲ್ಕು ತಿಂಗಳೊಳಗೆ ಗಣಪತಿಯ ಅಜ್ಜ ಅಜ್ಜಿ ಇಬ್ಬರೂ ದೈವಾಧೀನರಾದರು. ಆದರೆ ಗಣಪತಿ ಮಾತ್ರ ಮತ್ತೂ ಅಂತರ್ಮುಖಿಯಾಗುತ್ತಾ ಧ್ಯಾನ ಜಪಗಳಲ್ಲೇ ದಿನದ ಬಹುಭಾಗವನ್ನು ಕಳೆಯುತ್ತಿದ್ದ ತಾಯಿಗೆ ಇದರಿಂದ ನಿರಾಸೆಯಾಯಿತು ಮದುವೆಯಿಂದ ಗಣಪತಿಗೆ ಜವಾಬ್ದಾರಿಯಾಗಲಿ ಅಥವಾ ಸಂಸಾರಾಸಕ್ತಿಯಾಗಲಿ ಮೂಡಲಿಲ್ಲ ಆಗಾಗ ತಾಯಿ ಮಗನಿಗೆ ಎಚ್ಚರಿಕೆ ನೀಡುತ್ತಿದ್ದಳು ಸಂಸಾರಿಯಾದವನ ಜವಾಬ್ದಾರಿಗಳನ್ನು ನೆನಪಿಕೊಡುತ್ತಿದ್ದಳು ಆದರೆ ಗಣಪತಿ ಇದಾವುದನ್ನೂ ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ ಹೇಳುತ್ತಿದ್ದ - "ಅಮ್ಮಾ ನನಗೆ ಈ ಪ್ರಾಪಂಚಿಕ ವಿಷಯಗಳ ಬಗ್ಗೆ ಯಾವ ದ್ವೇಷವೂ ಇಲ್ಲ ಆದರೆ ಇವಾವುವೂ ನನಗೆ ದಿವ್ಯ ಆನಂದವನ್ನು ನೀಡಲಾರವು ಎಂಬುದು ತಿಳಿದುಹೋಗಿದೆ ಈ ಆಸೆಗಳ ಬಂಧನಕ್ಕೆ ಒಳಗಾಗಿ ಬದುಕಲು ನನಗೆ ಇಷ್ಟವಿಲ್ಲ ಈ ದಾಸ್ಯ ನನಗೆ ಬೇಕಿಲ್ಲ" ಇಂತಹ ದಿಟ್ಟ ಉತ್ತರದ ಎದರು ತಾಯಿ ನಿರುತ್ತರಳಾಗುತ್ತಿದ್ದಳು ಗಣಪತಿ ಎಲ್ಲರೊಡನೆ ಬೆರೆಯುತ್ತಿದ್ದನಾದರೂ ಅವನು ಯಾರಿಗೂ ಅಂಟಿಕೊಳ್ಳದಂತೆ ಕಮಲಪತ್ರದ ಮೇಲಣ ನೀರ ಹನಿಯಂತೆ ತಾನೇ ತಾನಾಗಿ ಇದ್ದುಬಿಡುತ್ತಿದ್ದ ದಿನಕಳೆದಂತೆ ಮನಸ್ಸಿನಾಳದ ವ್ಯಾಕುಲತೆ ಹೆಚ್ಚಾಗತೊಡಗಿತು ಜೀವನದ ಸಾರ್ಥಕತೆಯನ್ನು ಗುರುವಿನ ಮೂಲಕ ಪಡೆಯಲೇಬೇಕೆಂಬ ಅಂತರಿಕ್ಷ ಹಂಬಲ ಅವನ ನಿರ್ಧಾರವನ್ನು ದೃಢಪಡಿಸಿತು ಕಡೆಗೆ ಒಂದು ದಿನ ಏಕಾಕಿಯಾಗಿ ಗುರುವನ್ನರಸಿ ಮನೆ ಬಿಟ್ಟು ಹೊರಟ ಹೀಗೆ ಪ್ರಯಾಣ ಮಾಡುತ್ತಾ ಹೋಗುವಾಗ ತನಗೆ ಸಿಕ್ಕ ಎಲ್ಲಾ ಆಧ್ಯಾತ್ಮ ವ್ಯಕ್ತಿಗಳನ್ನೂ ಸ್ಪಂಧಿಸಿ ಮಾತನಾಡಿಸಿ ಮುಂದೆ ಸಾಗುತ್ತಿದ್ದ ಹೀಗೆ ಸಿಕ್ಕ ಅನೇಕರ ಆಧ್ಯಾತ್ಮಿಕ ಪ್ರಗತಿ ಎಷ್ಟಿದೆ ಎಂದು ಅವರೊಡನೆ ಕೆಲವು ನಿಮಿಷ ಕಳೆಯುವುದರಲ್ಲೇ ಗಣಪತಿಗೆ ತಿಳಿದುಬಿಡುತ್ತಿತ್ತು ಈ ಬಗೆಯ ಶಕ್ತಿ ತಮಗೆ ಬಹಳ ಚಿಕ್ಕ ವಯಸ್ಸಿನಿಂದಲೇ ಇದ್ದಿತೆಂದು ಮುಂದೆ ಬ್ರಹ್ಮಚೈತನ್ಯರು ಹೇಳುತ್ತಿದ್ದುದುಂಟು ಹೀಗೆ ಗುರುವನ್ನರಸಿ ಪ್ರಯಾಣ ಮಾಡುತ್ತಿದ್ದಾಗ ಕೃಷ್ಣಾ ನದಿ ದಂಡೆಯ ಮೇಲಿದ್ದ ಹರಿಪುರ ಎಂಬ ಊರಿಗೆ ಬಂದರು. ಇಲ್ಲಿ ರಾಧಾಬಾಯಿ ಎಂಬ ಸಂತಳು ವಾಸವಾಗಿದ್ದಳು ಕನ್ನಡಿಗಳಾದ ಈಕೆ ಅನ್ನದಾನಕ್ಕೆ ಹೆಸರುವಾಸಿಯಾಗಿದ್ದಳು ರಾಮಭಕ್ತಳಾದ ಈಕೆ ಭಕ್ತಿಭಾವದಿಂದ ರಾಮನಾಮ ಸಂಕೀರ್ತನೆ ಮಾಡಿದಾಗ ರಾಮನ ಪ್ರತಿಮೆಗೆ ಜೀವತುಂಬಿ ಬರುತ್ತಿತ್ತೆಂದೂ ಪ್ರತಿಮೆಯ ಮುಖದಲ್ಲಿ ಭಾವಾಂತರವಾಗುತ್ತಿದ್ದುದನ್ನು ಜನ ಕಾಣುತ್ತಿದ್ದರೆಂದೂ ಪ್ರತೀತಿ ಇತ್ತು ರಾಧಾಬಾಯಿಗೆ ಗಣಪತಿಯ ಆಳ ತಿಳಿದುಹೋಯಿತು ತಾನಿನ್ನೂ ಸಾಧಕಾವಸ್ಥೆಯಲ್ಲೇ ಇರುವೆನೆಂದೂ ಮತ್ತೂ ಹೆಚ್ಚಿನ ಆಧ್ಯಾತ್ಮಿಕ ಸಿದ್ಧಿಗೆ ಮೀರಜ್‌ನಲ್ಲಿರುವ 'ಅನ್ನಬುವ' ಎಂಬ ಸಂತನ ಬಳಿಗೆ ಹೋಗುವಂತೆ ತಿಳಿಸಿದಳು. ಗಣಪತಿ ಮೀರಜ್ ಕಡೆ ಪ್ರಯಾಣ ಬೆಳಸಿ 'ಅನ್ನಬುವ' ಅವರನ್ನು ಕಂಡು ಅನ್ನಬುವ ಹುಡುಗನನ್ನು ಆಶೀರ್ವದಿಸಿ 'ಶ್ರೀ ದೇವಮಾಲ್ ಮತಾದಾರ್' ಎಂಬ ಸಂತನ ಬಳಿ ಕಳುಹಿಸಿದರು. ಈತ 'ಸತಾನಾ' ಎಂಬ ಊರಿನಲಿದ್ದರು. ಈತ ಗಣಪತಿಯನ್ನು ಎರಡು ವಾರಗಳವರೆಗೆ ತನ್ನ ಬಳಿಯಲ್ಲಿ ಇಟ್ಟುಕೊಂಡಿದ್ದ ನಂತರ ಅಕಲ್‌ಕೋಟ್ ಅವಧೂತರ ಬಳಿ ಕಳುಹಿಸಿದರು ಅಕಲ್ ಕೋಟ್‌ನ ಈ ಸ್ವಾಮಿಯು ದೊಡ್ಡ ಪವಾಡ ಪುರುಷರಾಗಿದ್ದರು. ಗಣಪತಿಯನ್ನು ನಗುಮುಖದಿಂದ ಬರಮಾಡಿಕೊಮಡು ಹೇಳಿದರು. "ನನ್ನ ಆಶೀರ್ವಾದ ನಿನ್ನ ಮೇಲೆ ಸದಾ ಇದೆ. ಆದರೆ ನಾನು ನಿನ್ನ ಗುರುವಲ್ಲ." ಹೀಗೆ ಹೇಳಿ ಮಾಣಿಕ್ ಪ್ರಭು ಎಂಬ ಗುರುವಿನ ಬಳಿ ಕಳುಹಿಸಿದರು ಅನಂತರ ಗಣಪತಿ ಮೌಂಟ್ ಅಬುಗೆ ಪ್ರಯಾಣ ಬೆಳೆಸಿ ಅಲ್ಲಿ ದೊಡ್ಡ ಯೋಗಿಯ ಬಳಿ ಎರಡು ತಿಂಗಳು ಕಳೆದನು ಹಲವು ಬಗೆಯ ಯೋಗಾಭ್ಯಾಸಗಳನ್ನು ಈ ಯೋಗಿಯಿಂದ ಕಲಿತು ಕಾಶಿಗೆ ಪ್ರಯಾಣ ಮಾಡಿದನು ಕಾಶಿಯಲ್ಲಿ ತೈಲಿಂಗ ಸ್ವಾಮಿಯ ದರ್ಶನವಾಯಿತು ತೈಲಿಂಗಸ್ವಾಮಿಗಳಿಗೆ ಗಣಪತಿಯ ಮೇಲೆ ಪ್ರೀತಿ ಉಕ್ಕಿತು ತನಗೆ ತಿಳಿದಿರುವ ತಂತ್ರವಿದ್ಯೆಯನ್ನು ಹೇಳಿಕೊಡುವುದಾಗಿ ತಿಳಿಸಿದರು ಗಣಪತಿ ಕೇಳಿದ ನಿಮ್ಮ ತಂತ್ರವಿದ್ಯೆ ಕಲಿಯಲು ಎಷ್ಟು ಸಮಯ ಬೇಕಾಗುವುದು? ತೈಲಿಂಗಸ್ವಾಮಿ ಹೇಳಿದರು - 'ಕೇವಲ ಹನ್ನೆರಡು ವರ್ಷ'. ಗಣಪತಿಗೆ ಅಷ್ಟು ಸಮಯ ವ್ಯರ್ಥ ಎನಿಸಿತು ಹೇಳಿದ - 'ನನ್ನ ಬಳಿ ಅಷ್ಟು ಸಮಯವಿಲ್ಲ, ಮೂರು ದಿನದಲ್ಲಿ ಹೇಳಿಕೊಡುವುದಾದರೆ ಹೇಳಿಕೊಡಿ' ಹುಡುಗನ ದಿಟ್ಟ ಮಾತುಗಳಿಂದ ಆಶ್ಚರ್ಯಗೊಮಡು ತೈಲಿಂಗಸ್ವಾಮಿ ಸ್ವಾಮಿ ಹೇಳಿದರು 'ನಾನು ನಿನ್ನ ಗುರು ಅಲ್ಲ' ಅಲ್ಲಿಂದ ಮುಂದಕ್ಕೆ ಪ್ರಯಾಣ ಬೆಳೆಸಿದ ಗಣಪತಿ ಕಲ್ಕತ್ತಾಗೆ ಬಂದು ರಾಮಕೃಷ್ಣ ಪರಮಹಂಸರ ದರ್ಶನ ಪಡೆದ ಪರಮಹಂಸರು ಹೇಳಿದರು - "ನಿನ್ನ ಅಹಂ ಅನ್ನು ನೀನೇ ಸಂಹರಿಸಿಬಿಡು" ನಂತರ ಗಣಪತಿ ಹೈದರಾಬಾದಿಗೆ ಪ್ರಯಾಣ ಬೆಳಸಿ ಗೋದಾವರಿ ನದಿತೀರದಲ್ಲಿ ಕುಳಿತನು ಇದ್ದಕ್ಕಿದ್ದಂತೆ ಒಬ್ಬ ಸನ್ಯಾಸಿ ಎದುರಿಗೆ ಬಂದು ಹೇಲಿದ - "ಮಗು, ನೀನು ಎಳಗಾಂವ್‌ಗೆ ಹೋಗು, ಅಲ್ಲಿ ತುಕಾರಾಂ ಚೈತನ್ಯರು ನಿನಗೆ ದೀಕ್ಷೆ ನೀಡುತ್ತಾರೆ" ತಕ್ಷಣ ಗಣಪತಿ ಎಳಗಾಂವ್ ಕಡೆಗೆ ಪ್ರಯಾಣ ಬೆಳೆಸಿದ.

ಗಣಪತಿಯ ಗುರು
    ಎಳಗಾಂವ್ ಎಂಬುದು ನಾಂದೇಡ್ ಸಮೀಪವಿರುವ ಮರಾಠಾವಾಡಾದ ಒಂದು ಹಳ್ಳಿ ಈ ಹಳ್ಳಿಯಲ್ಲಿ ಕಾಶಿನಾಥ ಎಂಬ ಒಬ್ಬ ಬ್ರಾಹ್ಮಣ ಇದ್ದ ಸದಾಚಾರ ಸಂಪನ್ನನಾದ ಈತನಿಗೆ ಮಕ್ಕಳಿಲ್ಲದ ಕಾರಣ ಹನ್ನೆರಡು ವರ್ಷ ಸಂತಾನ ಅಪೇಕ್ಷೆಯಿಂದ ಭಗವಾನದ ದತ್ತಾತ್ರೇಯನನ್ನು ಆರಾಧಿಸಿದ ಅದರ ಫಲವೇ ತುಕರಾಂ ಚೈತನ್ಯನ ಜನನ ತುಕಾರಾಂ ಚೈತನ್ಯರು ಅದ್ಭುತ ಸಂತರಾಗಿದ್ದರು ಪಂಡರಾಪುರದ ವಿಠಲನ ಭಕ್ತ ಕೂಡಾ. ಬಾಲ್ಯದಿಂದಲೇ ಅದ್ಭುತವಾದ ಆಧ್ಯಾತ್ಮಿಕ ಒಲವಿದ್ದ ತುಕರಾಂ ಆಳವಾದ ಸಾಧನೆ ಮಾಡಿದರು. ಹಳ್ಳಿಯ ಮುಗ್ಧ ಜನರನ್ನು ಕಂಡರೆ ತುಕಾರಾಮರಿಗೆ ಎಲ್ಲಿಲ್ಲದ ಆದರೆ ಮಾತೃ ಹೃದಯದ ತುಕಾರಾಮರನ್ನು ಜನರು 'ತಾಯಿ ತುಕಾರಾಂ' ಎಂದು ಕರೆಯುತ್ತಿದ್ದರು ಹಳ್ಳಿಯ ಜನರಿಗೆಲ್ಲಾ ಭಗವತ್ ಭಕ್ತಿಯ ರಸದೌತಣ ಮಾಡಿಸುತ್ತಿದ್ದರು. ತುಕಾರಾಂ ಹೇಳುತ್ತಿದ್ದರು - "ಮನುಷ್ಯ ದೇವರಿಗಾಗಿ ಹಂಬಲಿಸುವಂತೆ ದೇವರು ಕುಡಾ ಮನುಷ್ಯನಿಗಾಗಿ ಹಂಬಲಿಸುತ್ತಾನೆ, ಇದು ನಿಶ್ಚಯ ಅನುಮಾನ ಪಡಬೇಡಿ, ಅವನನ್ನು ಪ್ರೀತಿಸಿ ಅವನು ನಿಮ್ಮಿಂದ ಬಯಸುವುದು ಕೇವಲ ನಿಮ್ಮ ಅಹಂನ್ನು ಅದನ್ನು ಅವನಿಗೆ ಒಪ್ಪಿಸಿಬಿಡಿ ಹೀಗೆ ತುಕಾರಾಂ ಹಳ್ಳಿಯ ಜನರಿಗೆ ಆಧ್ಯಾತ್ಮ ಬೋಧಿಸುತ್ತಿದ್ದರು.

    ತುಕರಾಂ ಚೈತನ್ಯರಿಗೆ ಅದ್ಭುತವಾದ ಆಧ್ಯಾತ್ಮಿಕ ಶಕ್ತಿ ಇತ್ತೆಂದು ಪ್ರತೀತಿ ಆದರೆ ಯಾರಾದರೂ ಅವರ ಶಕ್ತಿಯನ್ನು ಪರೀಕ್ಷಿಸಲು ಪವಾಡಗಳನ್ನು ತೋರಿಸಲು ಕೇಳಿಕೊಂಡರೆ ವ್ಯಗ್ರವಾದ ಹುಚ್ಚನಂತೆ ವರ್ತಿಸುತ್ತಿದ್ದರು ಆದರೆ ಭಗವತ್ ಪ್ರೀತಿಯನ್ನರಸಿ ಬಂದವರಿಗೆ ಕರುಣಾ ಹೃದಯಿಯಾಗಿ ಭಕ್ತಿರಸವನ್ನು ಉಣಬಡಿಸುತ್ತಿದ್ದರು.

    ಗಣಪತಿ ತುಕಾರಾಮರ ಕಡೆಗೆ ಪ್ರಯಾಣ ಬೆಳೆಸಿದಾಗ ಇತ್ತ ತುಕಾರಾಮರಿಗೆ ಶಿಷ್ಯನ ಆಗಮನ ತಿಳಿದುಹೋಗುತ್ತದೆ. ಅವರು ಹಳ್ಳಿಗರಿಗೆ ಹೇಳುತ್ತಿದ್ದರು- "ಆಹಾ, ಒಬ್ಬ ದರೋಡೆಕೋರ ನನ್ನನ್ನು ಹುಡುಕಿಕೊಂಡು ಬರುತ್ತಿದ್ದಾನೆ, ನನ್ನಲ್ಲಿರುವುದನ್ನೆಲ್ಲಾ ಕೊಳ್ಳೆ ಹೊಡೆದುಕೊಂಡು ಹೋಗುತ್ತಾನೆ' ಹಳ್ಳಿಗರಿಗೆಲ್ಲ ಗೊತ್ತು ತುಕಾರಾಮರಲ್ಲಿ ಬಿಡಿಗಾಸು ಇಲ್ಲ ಎಂದು. ಆದರೂ ಅವರಿಗೆ ತುಕಾರಾಮನ ಈ ಮಾತು ಆಶ್ಚರ್ಯ ಉಂಟುಮಾಡುತ್ತಿರಲಿಲ್ಲ ತುಕಾರಾಮರು ಆಡುತ್ತಿದ್ದ ಈ ಬಗೆಯ ಆಧ್ಯಾತ್ಮಿಕ ಪರಿಭಾಷೆ ಹಳ್ಳಿಗರಿಗೆ ಪರಿಚಯವಿತ್ತು ಗಣಪತಿ ಪ್ರಯಾಣ ಮುಗಿಸಿ ಬೆಳಗಿನ ವೇಳೆಗೆ ತುಕಾರಾಮರ ಕುಟೀರವನ್ನು ತಲುಪಿದ ಆದರೆ ಆ ವೇಳೆಗಾಗಲೇ ತುಕಾರಾಂ ಹೊರಗೆ ಹೋಗಿದ್ದರು.

    ಗಣಪತಿ ನದಿಯಲ್ಲಿ ಮಿಂದು ಗುರುವಿನ ಮನೆ ಬಾಗಿಲಲ್ಲಿ ಧ್ಯಾನಮಗ್ನನಾಗಿ ಕುಳಿತುಬಿಟ್ಟನು ಸಂಜೆ ಸಮೀಪಿಸತೊಡಗಿತು. ತುಕಾರಾಮರ ಸುಳಿವೇ ಇಲ್ಲ ಕಡೆಗೆ ಹಳ್ಳಿಯ ಮಕ್ಕಳೆಲ್ಲ ತುಕಾರಾಂ ಬಂದರೆಂದು ಕೂಗಾಡುತ್ತಾ ಅವರ ಸುತ್ತಾ ನೆರೆದರು ತಮ್ಮನ್ನು ಕಾಣಲು ಯುವಕನೊಬ್ಬ ಬಂದು ಕಾಯುತ್ತಿರುವ ವಿಷಯ ಅವರಿಗೆ ತಿಳಿಯತು ಆಗ ಅವರು "ಎಲ್ಲಿ ಆ ಹುಡುಗ? ಎಲ್ಲಿ ಆ ದೊಡ್ಡ ಕಳ್ಳ?" ಎನ್ನತೊಡಗಿದರು ಗುರು ತುಕಾರಾಂರನ್ನು ಕಂಡಕುಡಲೇ ಗಣಪತಿಯ ಹೃದಯದಲ್ಲಿ ಅನಿರ್ವಚನೀಯ ಬೃಹತ್ ಭಾವದ ಅಲೆಗಳು ಸಂಚರಿಸಿದವು ದೇಹ ಸ್ತಬ್ಧವಾಗಿ ಕೈ ಮುಗಿಯುತ್ತಾ 'ಓ ಗುರುದೇವ' ಎನ್ನಲು ಮಾತ್ರ ಸಾಧ್ಯವಾಯಿತು. "ಆಹಾ! ಬಂದೆಯಾ, ಬಾ 'ನಿನ್ನ'ನ್ನು ಕೊಲೆ ಮಾಡಿಬಿಡುತ್ತೇನೆ" ಎಂದು ತುಕಾರಾಂರು ಆರ್ಭಟಿಸಿದರು "ನಿಮಗೆ ಸಮರ್ಪಿಸಿಕೊಂಡಿದ್ದೇನೆ" ಎಂದನು ಗಣಪತಿ ಗುರು ತುಕಾರಾಂರಿಗೂ ತಮ್ಮ ಭಾವನೆಗಳನ್ನು ತಡೆಯಲಾಗಲಿಲ್ಲ ತಮ್ಮ ಕಣ್ಣೀರ ಧಾರೆಯ ನಡುವೆ ತಮ್ಮ ಶಿಷ್ಯನನ್ನು ಬರಸೆಳೆದು ಅಪ್ಪಿಕೊಂಡರು ಹೀಗೆ ಗುರುಶಿಷ್ಯರ ಮಿಲನವಾಯಿತು ಗಣಪತಿಯ ಹುಡುಕಾಟ ಸಫಲವಾಯಿತು.

    ಗುರು ತುಕಾರಾಮರು ಶಿಷ್ಯನ್ನು ಬಹಳವಾಗಿ ಪ್ರೀತಿಸುತ್ತಿದ್ದರು ಆದರೂ ವಿಚಿತ್ರವೆಂದರೆ ಶಿಷ್ಯನ್ನು ನಾನಾ ಬಗೆಯ ಕಠಿಣ ಪರೀಕ್ಷೆಗಳಿಗೆ ಒಳಪಡಿಸುತ್ತಿದ್ದರು ಮಾತೃ ಹೃದಯದ ತುಕಾರಾಮರು ಶಿಷ್ಯನನ್ನು ಏಕಾಏಕಿ ಪಾಳು ಬಾವಿಗೆ ಹಾರಲು ಹೇಳುತ್ತಿದ್ದರು ಗಣಪತಿಯಂತಹ ಅದ್ಭುತ ಶಿಷ್ಯನಿಗೆ ಮಾತ್ರ ಈ ಬಗೆಯ ಆಜ್ಞೆಗಳನ್ನು ಪಾಲಿಸಲು ಸಾಧ್ಯವಾಗುತ್ತಿತ್ತು. ಕೆಲಮೊಮ್ಮೆ ಒಬ್ಬ ಮನುಷ್ಯ ಹೊರಲಾರದಷ್ಟು ಕಬ್ಬಿನ ಹೊರೆಯನ್ನು ಹೊರಲು ಹೇಳುತ್ತಿದ್ದರು ಶಿಷ್ಯ ವಿನಮ್ರನಾಗಿ ಗುರುವಾಕ್ಯವನ್ನು ಪಾಲಿಸುತ್ತಿದ್ದ. ಗುರು-ಶಿಷ್ಯರ ನಡುವೆ ಅದ್ಭುತ ಪ್ರೇಮ ಸಂಬಂಧ ಕೂಡಿಬಂದಾಗ ವಸ್ತುನಿಷ್ಠ ಸತ್ಯಾಸತ್ಯತೆಗಳು ಗೌಣವಾಗುತ್ತವೆ. ಈ ಸಂಬಂಧದ ಪ್ರೇಮವನ್ನು ಅವರು ಪರಸ್ಪರ ಕಾಪಾಡಿಕೊಳ್ಳುತ್ತಾರೆ. ಈ ನಿಷ್ಠೆಯ ಮುಂದೆ ದೇಹದ ಅಳಿವು - ಉಳಿವೂ ಸಹ ಅಪ್ರಸ್ತುತವಾದೀತು. ಕೃಷ್ಣಾರ್ಜುನರ ನಡುವೆಯೂ ಈ ಬಗೆಯ ಸಂಬಂಧದ ಬಗ್ಗೆ ಉಲ್ಲೇಖಗಳಿವೆ. ಒಮ್ಮೆ ಕೃಷ್ಣ, ಪಾರಿವಾಳಗಳ ಗುಂಪೊಂದನ್ನು ಅರ್ಜುನನಿಗೆ ತೋರಿಸಿ ಹೇಳುತ್ತಾನೆ - 'ಅರ್ಜುನ, ಅಲ್ಲಿ ನೋಡು ಹಂಸಗಳ ಗುಂಪು ಹೇಗೆ ಹಾರುತ್ತಿದೆ? ಅರ್ಜುನ ಹೇಳಿದ ಹೌದು ಹಂಸಗಳ ಗುಂಪು ಚೆನ್ನಾಗಿದೆ' ಅರ್ಜುನನಿಗೆ ಹಂಸ ಪಾರಿವಾಳಗಳ ನಡುವೆ ವ್ಯತ್ಯಾಸ ಗೊತ್ತಿರಲಿಲ್ಲವೆಂದು ಭಾವಿಸುವಂತಿಲ್ಲ ಇಲ್ಲಿ ಗುರುವಿಗೆ ತೋರುವ ವಿಧೇಯತೆಯ ನಿಷ್ಠೆಯಲ್ಲಿ ವಸ್ತುನಿಷ್ಠ ಸತ್ಯ ಅಪ್ರಸ್ತುತ ವಸ್ತು ನಿಷ್ಠೆ ಚರ್ಚೆ ಮನಸ್ಸಿನಲ್ಲಿ ಅಂಕುರವಾಯಿತು ಎಂದರೆ ಶಿಷ್ಯ ತನ್ನ ಪ್ರತ್ಯೇಕತೆಯನ್ನು ಕಾಯ್ದಿಟ್ಟುಕೊಳ್ಳಬೇಕೆಂದು ಅರ್ಥ ಆದರೆ ಅರ್ಜುನ ಕೃಷ್ಣನಲ್ಲಿ ಸೇರಿಹೋಗಿದ್ದ ಸಂಪೂರ್ಣ ಸಮರ್ಪಣ ಭಾವದಿಂದ ಅವನ ಅಹಂ ನಾಶವಾಗಿತ್ತು ಹಾಗಾಗಿ ವಸ್ತುನಿಷ್ಠ ಸತ್ಯದ ನಿಷ್ಕರ್ಷೆಗೆ ಅವನು ಕೃಷ್ಣನಿಂದ ಪ್ರತ್ಯೇಕವಾಗಿ ಉಳಿದಿರಲಿಲ್ಲ ಈ ಸಂಬಂಧದ ದೃಢತೆಗಾಗಿ ಗುರು ಶಿಷ್ಯನನ್ನು ನಾನಾ ಬಗೆಯ ಅಸಂಬದ್ಧ ಪರೀಕ್ಷೆಗಳಿಗೆ ಒಳಪಡಿಸುತ್ತಾರೆ. ತುಕಾರಾಮರು ಶಿಷ್ಯನನ್ನು ಸಂಧಿಸಿದ ಕೂಡಲೆ ಹೇಳಿದರು "ನಿನ್ನನ್ನು ಸಂಹರಿಸುತ್ತೇನೆ" ಗುರುವಿನ ವಿಚಿತ್ರ ಪರೀಕ್ಷೆಗಳು ಈ ಸಂಹಾರ ಕಾರ್ಯದ ಮುಂದುವರಿದ ಭಾಗವಲ್ಲದೆ ಮತ್ತೇನು? ಹಾಗಾಗಿ ಶಿಷ್ಯನ ಮೇಲಣ ಅಪಾರ ಪ್ರೇಮದಿಂದ ಅವನು ತಮ್ಮಿಂದ ಪ್ರತ್ಯೇಕವಾಗಿ ಉಳಿಯದಂತೆ ತಮ್ಮಲ್ಲೇ ಐಕ್ಯಮಾಡಿಕೊಳ್ಳಲು ಎಲ್ಲ ಬಗೆಯ ವಿಧಾನಗಳನ್ನು ಅನುಸರಿಸುತ್ತಾರೆ ರಾಮಕೃಷ್ಣರು ಹೇಳುತ್ತಿದ್ದ ಉತ್ತಮ ಗುರುವಿಗೆ ಹಾಗೆ ಪರಮಹಂಸರು ಹೇಳುತ್ತಿದ್ದರು "ಸಾಧಾರಣ ವೈದ್ಯ ಸಲಹೆ ನೀಡುತ್ತಾನೆ, ಮಧ್ಯಮ ವೈದ್ಯ ಒತ್ತಾಯ ಮಾಡಿ ಹೇಳುತ್ತಾನೆ; ಉತ್ತಮ ವೈದ್ಯ ರೋಗಿಯ ಎದೆಯ ಮೇಲೆ ಕುಳಿತು ಅವನ ಮೂಗು ಹಿಡಿದು ಔಷಧವನ್ನು ಗಂಟಲೊಳಗೆ ಹಾಕಿಬಿಡುತ್ತಾನೆ." ಹೀಗೆಯೇ ಉತ್ತಮ ಗುರು ಕೂಡಾ ಅವನು ನಾಗರಹಾವಿನಂತೆ; ಶಿಷ್ಯನನ್ನು ಪರಿಗ್ರಹಿಸಿದ್ದೇ ತಡ, ಶಿಷ್ಯನ ಅಹಂ ಸರ್ವನಾಶವಾಗಿ ಬಿಡುತ್ತದೆ ಆದರೆ ಸಾಧಾರಣ ಗುರು ಕೇರೆ ಹಾವಿನ ಹಾಗೆ ಅದು ಕಪ್ಪೆಯನ್ನು ಹಿಡಿದರೂ ಕಪ್ಪೆ ಬಹಳ ಕಾಲ ಸಾಯುವುದೇ ಇಲ್ಲ. ತುಕಾರಾಂರು ಗಣಪತಿಯ ಅಹಂನ್ನು ಸಂಪೂರ್ಣವಾಗಿ ಹರಣ ಮಾಡಿಬಿಟ್ಟರು ಇಂತಹ ಸಮರ್ಪಣೆ ಭಕ್ತ ಹೃದವಿರುವ ಶಿಷ್ಯನಿಗೆ ಮಾತ್ರ ಸಾಧ್ಯ. ವಿಚಾರಪ್ರಧಾನ ವ್ಯಕ್ತಿತ್ವದ ಶಿಷ್ಯನಿಗೆ ಈ ಬಗೆಯ ಸಮರ್ಪಣಾ ಭಾವ ಕಷ್ಟಸಾಧ್ಯವಾದೀತು. ಆದರೆ ಗಣಪತಿಯಂತಹ ಕೆಲವು ಅದ್ಭುತವಾದ ಅಪರೂಪದ ಶಿಷ್ಯರು ತಮ್ಮಜ್ಞಾನ, ಭಕ್ತಿಗಳೆರಡನ್ನೂ ಸಮನ್ವಯಗೊಳಿಸುತ್ತಾರೆ. ಹಾಗೆಯೇ ಪರಿಸ್ಥಿತಿಗನುಗುಣವಾಗಿ ತಮ್ಮ ಜ್ಞಾನ ಭಕ್ತಿಗಳನ್ನು ಅನ್ವಯಿಸುತ್ತಾರೆ.

    ಗಣಪತಿಯ ಅನನ್ಯವಾದ ಗುರುಭಕ್ತಿಯನ್ನು ಕಂಡು ಎಳಗಾಂವ್‌ನ ಹಳ್ಳಿಯ ಜನರು ಆಶ್ಚರ್ಯಪಡುತ್ತಿದ್ದರು ಗುರುಗಳಿಗೆ ಅಡಿಗೆ ಮಾಡಿ ಬಡಿಸುವುದು, ಕುಟೀರವನ್ನು ಓರಣವಾಗಿ ಇಡುವುದು, ಗುರುಗಳ ಕಾಲೊತ್ತುವುದು ಅವರ ಗುಡಗುಡಿ ಸಿದ್ಧ ಮಾಡುವುದು ಹೀಗೆ ಅನೇಕ ಬಗೆಯ ಸೇವೆ ಮಾಡುತ್ತಿದ್ದ ತಪ್ಪಿಯೂ ಸಹ ಗುರುವಿನ ಹಾಸಿಗೆಗೆ ತನ್ನ ಕಾಲು ತಾಗಿಸುತ್ತಿರಲಿಲ್ಲ ಕೆಲವೊಮ್ಮೆ ತುಕಾರಾಮರು ಹೊರಗೆ ಹೋದಾಗ ಗಣಪತಿ ಊಟ ಮಾಡದೆ ಗುರುವಿನ ಆಗಮನವನ್ನು ಕಾಯುತ್ತಿದ್ದನು ಹೀಗೆ ಗುರುವಿನ ಪರೀಕ್ಷೆ-ಪ್ರೀತಿ ಎರಡನ್ನೂ ಭಕ್ತಿ ಭಾವದಿಂದ ಸ್ವೀಕರಿಸಿ, ಗುರುವಿನ ಹೃದಯವನ್ನು ಗೆದ್ದನು ಒಂಬತ್ತು ತಿಂಗಳು ಕಳೆಯಿತು ಗುರುವಿಗೆ ಮಂತ್ರ ದೀಕ್ಷೆ ಕೊಡಬೇಕೆಂದು ಮನಸ್ಸಾಯಿತು ಒಂದು ರಾಮನವಮಿಯ ದಿನ ತುಕಾರಾಮರು ಗಣಪತಿಯನ್ನು ನದಿ ತೀರಕ್ಕೆ ಕರೆದೊಯ್ದರು ಇಬ್ಬರೂ ಸ್ನಾನ ಮಾಡಿ ಒಂದು ಆಲದ ಮರದ ಕೆಳಗೆ ಕುಳಿತರು. ನಂತರ ಹೇಳಿದರು - "ಮಗು, ನೀನು ಇಲ್ಲಿಗೆ ಬಂದು ಒಂಭತ್ತು ತಿಂಗಳಾಯಿತು. ನಿನಗೆ ಅನೇಕ ಕಷ್ಟಕರ ಪರೀಕ್ಷೆಗಳನ್ನು ನೀಡೆದ್ದೇನೆ ನೀನು ಅದೆಲ್ಲದರಲ್ಲಿಯೂ ಉತ್ತೀರ್ಣನಾಗಿದ್ದೀಯೆ. ಈಗ ನಿನ್ನ ಮನಸ್ಸು ದಿವ್ಯಾನುಭೂತಿ ಪಡೆಯಲು ಯೋಗ್ಯವಾಗಿದೆ" ಹೀಗೆ ಹೇಳುತ್ತಿದ್ದಂತೆಯೇ ಗಣಪತಿಯ ಮನಸ್ಸು ದಿವ್ಯಸ್ತರಕ್ಕೆ ಏರಿತು ನಂತರ ತುಕಾರಾಮರು ಶಿಷ್ಯನ ಕಿವಿಯಲ್ಲಿ ರಾಮಮಂತ್ರವನ್ನ್ಉ ಉಚ್ಚರಿಸಿದರು. "ಶ್ರೀರಾಂ ಜಯರಾಂ ಜೈ ಜೈರಾಂ" ನಂತರ ತಮ್ಮ ಬಲಗೈಯನ್ನು ಶಿಷ್ಯನ ತಲೆಯ ಮೇಲೆ ಇರಿಸಿದರು ಶಿಷ್ಯನ ಮನಸ್ಸು ಆವರ್ಣನೀಯ ಆನಂದದಿಂದ ತುಂಬಿಕೊಂಡು ವ್ಯೋಮಾತೀತ ವಿಸ್ತಾರದಲ್ಲಿ ಕರಗಿ ಸಮಾದಿ ಪಡೆಯಿತು ಎಚ್ಚರಗೊಂಡಾಗ ಶಿಷ್ಯನ ಮನಸ್ಸು ದಿವ್ಯಾನಂದದ ಜೊತೆ ಪ್ರೀತಿ ಕರುಣೆಗಳು ಚಿಲುಮೆ ಉಕ್ಕಿ ಹರಿಯುತ್ತಾ ಈ ಪ್ರಪಂಚದ ವಾಸ್ತವತೆಯನ್ನು ಪ್ರವೇಶಿಸಿತು ಅಂದಿನಿಂದ ಜೀವನದ ಕೊನೆಯವರೆಗೂ ಈ ಬತ್ತದ ಪ್ರೇಮವನ್ನು ನೊಂದು ಬೆಂದ ಜೀವಿಗಳಿಗೆ ಯಥೇಚ್ಛವಾಗಿ ಹಂಚಲು ಸಾಧ್ಯವಾಯಿತು ಮಂತ್ರದೀಕ್ಷೆಯ ನಂತರ ತುಕಾರಾಮರು ಗಣಪತಿಗೆ 'ಬ್ರಹ್ಮಚೈತನ್ಯ' ಎಂದು ಹೆಸರು ಕೊಟ್ಟರು ಅಲ್ಲದೆ ಇತರರಿಗೆ ದೀಕ್ಷೆಕೊಡುವ ಅಧಿಕಾರವನ್ನೂ ಕೊಟ್ಟರು. ಹೀಗೆ ಗಣಪತಿ ತನ್ನ ತಪಸ್ಸಿನಿಂದ ಹಾಗೂ ಗುರುಕರುಣೆಯಿಂದ ಬ್ರಹ್ಮಚೈತನ್ಯರಾದರು.

    ದೀಕ್ಷಾವಿಧಿಯ ನಂತರ ಗುರು ಶಿಷ್ಯನಿಗೆ ಹೇಳಿದರು - "ಮಗು, ಕಾಲ ಕೆಡುತ್ತಿದೆ, ಮನುಷ್ಯ ಇಂದ್ರಿಯ ಸುಖಗಳ ಕಡೆ ಓಡುತ್ತಿದ್ದಾನೆ. ಈ ಪ್ರಪಂಚದಲ್ಲಿ ನೊಂದು ಬೆಂದ ಅನೇಕರು ಶಾಂತಿಯನ್ನರಸಿ ನಿನ್ನ ಬಳಿ ಬರುತ್ತಾರೆ ಅವರಿಗೆ ನೀನು ರಾಮನಾಮ ಕೊಡು. ಅವರಿಗೂ ಶಾಂತಿ ಲಭಿಸಲಿ ಭಗವನ್ನಾಮ ಸಂಕೀರ್ತನೆ ಎಲ್ಲೆಡೆಯೂ ನಡೆಯಲಿ" ಮತ್ತೆ ಹೇಳಿದರು - "ಈಗ ನೀನು ತೀರ್ಥಯಾತ್ರೆಗೆ ಹೋಗು, ನಂತರ ತಂದೆ-ತಾಯಿಯರನ್ನು ಕಾಣು"

    ಗುರುವಿನ ಅಣತಿಯಂತೆ ಬ್ರಹ್ಮಚೈತನ್ಯರು ತೀರ್ಥಯಾತ್ರೆಗೆ ಹೊರಟರು ಮೊದಲು ಉತ್ತರದ ಉಜ್ಜಯಿನಿಗೆ ಹೋಗಿ ಅಲ್ಲಿ ಎರಡು ತಿಂಗಳು ತಪಸ್ಸಿನಲ್ಲಿ ಮುಳುಗಿದರು ನಂತರ ಹಿಮಾಲಯಕ್ಕೆ ಹೋಗೆ ಅಲ್ಲಿಂದ ಅಯೋಧ್ಯೆಗೆ ಹಿಂದಿರುಗಿದರು ಅಯೋಧ್ಯೆಯಲ್ಲಿ ಅವರಿಗೆ ಒಬ್ಬ ಭಕ್ತ ಸಿಕ್ಕಿದ ಅವನು ಬ್ರಹ್ಮಚೈತನ್ಯರನ್ನು ಕಲ್ಕತ್ತಾಕ್ಕೆ ಕರೆದುಕೊಂಡು ಹೋದ ಕೆಲವು ದಿನಗಳ ನಂತರ ಬ್ರಹ್ಮಚೈತನ್ಯರು ನಾಸಿಕ್ ಮುಖಾಂತರ ಗೊಂದಾವಲಿಗೆ ಹಿಂದಿರುಗಿದರು ಈ ವೇಳೆಗಾಗಲೇ ಅವರಿಗೆ ಗಡ್ಡಬೆಳೆದಿದ್ದು ಬೈರಾಗಿಯ ಹಾಗೆ ಕಾಣುತ್ತಿದ್ದರು ಗೋಂದಾವಲಿಯ ಹನುಮಂತ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದರು ಬೈರಾಗಿಯೊಬ್ಬ ಬಂದಿರುವ ಸುದ್ಧಿ ಊರಲ್ಲೆಲ್ಲಾ ಹರಡಿ ತಾಯಿ ಗೀತಾಬಾಯಿಯೂ ಕೂಡಾ ಬೈರಾಗಿಯ ದರ್ಶನಕ್ಕೆ ಬಂದಳು ಆದರೆ ದೊಡ್ಡ ಗಡ್ಡ ಖಾವಿ ವಸ್ತ್ರ ಇವುಗಳಿಂದಾಗಿ ಬೈರಾಗಿಯೇ ತನ್ನ ಮಗ ಗಣಪತಿ ಎಂದು ಗುರುತಿಸಲಿಲ್ಲ ಬೈರಾಗಿಯನ್ನು ಕೇಳಿದಳು - ಬೈರಾಗಿ, ನನ್ನ ಮಗ ಕೆಲವು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾನೆ. ಅವನು ಎಲ್ಲಿದ್ದಾನೆ ಎಂದು ನಿನಗೆ ಗೊತ್ತೆ? ಬ್ರಹ್ಮಚೈತನ್ಯರು ನಸುನಕ್ಕು ಹೇಳಿದರು - "ತಾಯಿ, ನಿನ್ನ ಮಗ ಹೇಗಿದ್ದಾನೆ? ಬಣ್ಣಿಸಬಲ್ಲೆಯಾ?" ತಾಯಿ ಹೇಳಿದಳು - "ಅಯ್ಯಾ ನನ್ನ ಮಗ ಬಹಳ ಸುಂದರವಾಗಿದ್ದಾನೆ. ಯಾವಾಗಲೂ ರಾಮನಾಮ ಜಪಿಸುತ್ತಿರುತ್ತಾನೆ" ಬ್ರಹ್ಮಚೈತನ್ಯರು ನಗುತ್ತಾ ಉತ್ತರಿಸಿದರು "ತಾಯಿ ನಿನ್ನ ಮಗ ನನಗೆ ಗೊತ್ತು, ಅವನು ಖಂಡಿತಾ ಹಿಂದಿರುಗುತ್ತಾನೆ" ಈ ಆಶ್ವಾಸನೆಯಿಂದ ಸಂತಸಗೊಂಡ ತಾಯಿ ಮನೆಗೆ ಹೋದಳೂ ಅನಂತರ ಬ್ರಹ್ಮಚೈತನ್ಯರು ತಮ್ಮ ಹೆಂಡತಿಯ ಮನೆಗೆ ಭಿಕ್ಷೆಗೆ ಹೋದರು ಅಲ್ಲಿಯೂ ಸಹ ಅವರ ಅತ್ತೆಯವರು ತಮ್ಮ ಅಳಿಯ ಎಲ್ಲಿರ ಬಹುದೆಂದು ಕೇಳಿದರು ಆಗ ಹೆಂಡತಿ ಸರಸ್ವತಿ ಹದಿನಾರು ವರ್ಷದ ಹುಡುಗಿ ನಿಮ್ಮ ಅಳಿಯ ಖಂಡಿತಾ ಹಿಂದಿರುಗುತ್ತಾನೆ ಕೊರಗಬೇಡಿ ಎಂದು ಸಮಾಧಾನ ಹೇಳಿ ಬ್ರಹ್ಮಚೈತನ್ಯರು ತಮ್ಮ ತಂಗಿಯ ಮನೆಗೆ ಹೋದರು ತಂಗಿ ಇವರನ್ನು ಗುರುತ ಹಿಡಿದುಬಿಟ್ಟಳು ಆದರೆ ಆಕೆ ಅಣ್ಣನ್ನು ಹಿಡಿದು ನಿಲ್ಲಿಸುವ ಮುನ್ನವೇ ಅವರು ಊರು ಬಿಟ್ಟು ಕಾಡು ಸೇರಿಬಿಟ್ಟು ಮತ್ತೆ ಪ್ರಯಾಣ ಮುಂದುವರೆಸಿ ದಕ್ಷಿಣ ಭಾರತದ ಶ್ರೀರಂಗಂ ಮಧುರೈ ರಾಮೇಶ್ವರಂ ಮುಂತಾದ ಪುಣ್ಯಕ್ಷೇತ್ರಗಳನ್ನೆಲ್ಲಾ ಸಂದರ್ಶಸಿದರು ಅನಂತರ ಪುನಃ ಎಳಗಾಂವ್‌ಗೆ ಹಿಂದಿರುಗಿ ತಮ್ಮ ಗುರುವಿನ ದರ್ಶನ ಪಡೆದರು. ಗುರುವಿನೊಡನೆ ಕೆಲವು ದಿನ ಇದ್ದು ಪುನಃ ಎರಡನೇ ಬಾರಿಗೆ ಗೋಂದಾವಲ್ಲಿಗೆ ಹಿಂದಿರುಗಿದರು.

    ಗಣಪತಿಯಾಗಿ ಹೊರಟ ಬಾಲಕ, ಗುರುವಿನ ಅನುಗ್ರಹ ಪಡೆದು ಬ್ರಹ್ಮಚೈತನ್ಯರಾಗಿ ಗೋಂದಾವಲಿಗೆ ಹಿಂದಿರುಗಿದ್ದು 1866ರ ಮಾರ್ಚ್ ತಿಂಗಳಲ್ಲಿ ಒಂಭತ್ತು ವರ್ಷಗಳ ಪರಿವ್ರಾಜಕ-ಸಾಧಕ ಜೀವನ ಅವರನ್ನು ಆಮೂಲಾಗ್ರವಾಗಿ ಬದಲಿಸಿತು ಗೋಂದಾವಲಿಗೆ ಬಂದು ಮೊದಲಿಗೆ ಹನುಮಂತನ ಗುಡಿಯಲ್ಲಿ ಉಳಿದುಕೊಂಡರು ಮರುದಿನ ತಮ್ಮ ಮನೆಗೆ ಭಿಕ್ಷೆಗೆ ಹೋಗಿ 'ಜಯ ಜಯ ರಘವೀರ ಸಮರ್ಥ' ಎಂದು ಕೂಗಿದರು. ಅವರ ತಾಯಿ ಗೀತಾಬಾಯಿ ಹೊರಬಂದು ಭಿಕ್ಷೆ ನೀಡಿದಳು ಪುನಃ ತನ್ನ ಕಳೆದುಹೋದ ಮಗನ ಬಗ್ಗೆ ಕೇಳಿದಳು ಬ್ರಹ್ಮಚೈತನ್ಯರು ನಗುತ್ತಾ ನಿಮ್ಮ ಮಗ ಖಂಡಿತಾ ನಿಮಗೆ ಸಿಗುತ್ತಾನೆ ಎಂದು ಹೇಳಿ ಹನುಮಂತನ ಗುಡಿಗೆ ಹಿಂದಿರುಗಿದರು ಮರುದಿನ ಪುನಃ ತಮ್ಮ ಮನೆಗೆ ಭಿಕ್ಷಕ್ಕೆ ಹೋಗಿ ಒಳಗೆ ಕಲ್ಲಿನ ಪಾತ್ರೆಯಲ್ಲಿರುವ ಮೊಸರನ್ನು ಕೊಡಬೇಕೆಂದು ಕೇಳಿದರು ತಾಯಿ ಮೊಸರು ಕೊಡಲು ಬಂದಾಗ ತಾಯಿಯನ್ನೇ ದಿಟ್ಟಿಸಿ ನಗತೊಡಗಿದರು ತಾಯಿಗೆ ತಕ್ಷಣ ಅರಿವಾಯಿತು ಅವರು 'ಅಯ್ಯೊ, ಗಣಪತಿ ಒಂಭತ್ತು ವರ್ಷಗಳ ಕಾಲ ಎಲ್ಲಿ ಹೋಗಿದ್ದೆ?' ಎಂದು ಅಳುತ್ತಾ ಮಗನ್ನು ಬಾಚಿ ತಬ್ಬಿಕೊಂಡರು ಹೀಗೆ ಗಣಪತಿ ಬ್ರಹ್ಮಚೈತನ್ಯರಾಗಿ ಹಿಂದಿರುಗಿದ ಸುದ್ಧಿ ಊರಿನಲ್ಲೆಲ್ಲಾ ಹರಡಿತು ಆಗ ಬ್ರಹ್ಮಚೈತನ್ಯರಿಗೆ ಕೇವಲ ಇಪ್ಪತ್ತೆರಡು ವರ್ಷ ಯುವಕ ಸಾಧುವಿನ ದರ್ಶನ ಆಶೀರ್ವಾದ ಪಡೆಯಲು ಊರಿಗೆ ಊರೇ ಬಂದು ಸೇರಿತು ಪ್ರತಿ ದಿನ ರಾತ್ರಿ ತಂದೆ-ತಾಯಿ, ಸ್ನೇಹಿತರು ಎಲ್ಲರೂ ಕುಳಿತು ಬ್ರಹ್ಮಚೈತನ್ಯರ ತಿರುಗಾಟದ ಸಾಹಸಮಯ ಕಥೆಯನ್ನು ಎವೆಯಿಕ್ಕದೆ ಕೇಳುತ್ತಿದ್ದರು.

ಮರಳಿ ಗೃಹಸ್ಥರಾಗಿ
    ಬ್ರಹ್ಮಚೈತನ್ಯರ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿತ್ತು ಅವರ ಕೆಲವು ಸಂಬಂಧಿಗಳು ಬ್ರಹ್ಮಚೈತನ್ಯರ ಸನ್ಯಾಸ ಕ್ಷಣಿಕವೆಂದು, ಕಾವಿ ಗಡ್ಡಗಳನ್ನು ತೆಗೆದುಹಾಕಿದರೆ ಇವರೂ ಎಲ್ಲರಂತೆ ಸಂಸಾರಿಯಾಗಿರುತ್ತಾರೆಂದು ಭಾವಿಸಿದರು ಈ ಗುಂಪಿನ ಜನರೆಲ್ಲಾ ಒಟ್ಟಾಗಿ ಬ್ರಹ್ಮಚೈತನ್ಯರನ್ನು ಗೃಹಸ್ಥಾಶ್ರಮಕ್ಕೆ ಮರಳಬೇಕೆಂದು ಒತ್ತಾಯಿಸುತ್ತಿದ್ದರು ಇದಕ್ಕೆ ಬ್ರಹ್ಮಚೈತನ್ಯರು ಯಾವ ಪ್ರತಿರೋಧವನ್ನೂ ತೋರದೆ ಸುಲಭವಾಗಿ ಒಪ್ಪಿಕೊಂಡು ತಮ್ಮ ಬೈರಾಗಿ ವೇಷವನ್ನು ತ್ಯಜಿಸಿ ಸಾಧಾರಣ ಗೃಹಸ್ಥರಂತೆ ಇರತೊಡಗಿದರು. ಈ ಬದಲಾವಣೆ ತಾಯಿ ಗೀತಾಬಾಯಿಗೆ ಸಮಾಧಾನ ತಂದಿತು ಆಕೆ ಸೊಸೆ ಸರಸ್ವತಿಯನ್ನು ಕರೆತರುವಂತೆ ಮಗನನ್ನು ಕೇಳಿಕೊಂಡಳು ಇದಕ್ಕೂ ಕೂಡಾ ಬ್ರಹ್ಮಚೈತನ್ಯರು ಯಾವ ಪ್ರತಿರೋಧವನ್ನಾಗಲಿ, ಭಯ, ಆತಂಕಗಳನ್ನಾಗಲಿ ತೋರದೆ, ತಾವೇ ಋದ್ದಾಗಿ ಹೋಗಿ ತಮ್ಮ ಪತ್ನಿ ಸರಸ್ವತಿಯನ್ನು ಕರೆತಂದರು.
    ಸರಸ್ವತಿಗೆ ಕಳೆದುಹೋಗಿದ್ದ ತನ್ನ ಗಂಡ ಮರಳಿ ದೊರೆತದ್ದು ಅತ್ಯಂತ ಸಂತೋಷ ತಂದಿತು ಆದರೆ ತನ್ನ ಗಂಡನ ರೀತಿ-ನೀತಿಗಳೇ ಬೇರೆ ಇರುವುದು ಅವಳಿಗೆ ನಿಧಾನವಾಗಿ ತಿಳಿಯತೊಡಗಿತು ಸದಾ ರಾಮನಾಮ ಜಪಿಸುವ ಊರ್ಧ್ವ ಮನಸ್ಸುಳ್ಳ ಬ್ರಹ್ಮಚೈತನ್ಯರ ವ್ಯಕ್ತಿತ್ವ ಸರಸ್ವತಿಯ ಮನದಲ್ಲಿ ಗೌರವ, ಆದರಗಳನ್ನು ಮೂಡಿಸಿತು ಬ್ರಹ್ಮಚೈತನ್ಯರು ತಮ್ಮ ಹೆಂಡತಿಯೊಡನೆ ಅತ್ಯಂತ ಆತ್ಮೀಯವಾಗಿ, ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು ಜೊತೆಗೆ ಆಕೆಗೆ ಪ್ರಾಪಂಚಿಕ-ಆಧ್ಯಾತ್ಮಿಕ ತಿಳಿವಳಿಕೆ ಕೊಡುತ್ತಿದ್ದರು ತಾಯಿ ಗೀತಾಬಾಯಿ ಸೊಸೆಯನ್ನು ಆಗಾಗ ಕೇಳುತ್ತಿದ್ದುದುಂಟು 'ಸರಸ್ವತಿ, ನಿನ್ನ ಸಂಸಾರ ಜೀವನ ಹೇಗೆ ಸಾಗುತ್ತಿದೆ?' ಪ್ರಾಪಂಚಿಕತೆಯ ಲವಲೇಶವೂ ಇಲ್ಲದ ಅವಳ ಸಂಸಾರದ ಬಗ್ಗೆ ಆಕೆ ಏನು ತಾನೆ ಹೇಳಲು ಸಾಧ್ಯ? ಅವಳು ಹೇಳುತ್ತಿದ್ದಳು - 'ಅತ್ತೆ ನಾನು ಅದೃಷ್ಟವಂತಳೆ ಸರಿ : ನನ್ನ ಗಂಡ ದೇವಲೋಕದಿಂದ ರಜೆಯ ಮೇಲೆ ಭೂಮಿಗೆ ಬಂದ ದೇವತೆ'

ಕ್ಷಾಮ
    1876ರ ಸಮಯದಲ್ಲಿ ಒಂದು ವ್ಯಾಪಕ ಕ್ಷಾಮ ಇಡೀ ದೇಶವನ್ನು ಹಸಿವಿನ ಹಾಹಾಕಾರದಲ್ಲಿ ಮುಳುಗಿಸಿತು. ಸಾವಿರಾರು ಜನ ಹಸಿವಿನಿಂದ ಸಾಯುತ್ತಿದ್ದ ಸಂದರ್ಭದಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡು ಜನರಿಗೆ ಆಹಾರ ದೊರಕಿಸಲು ಪ್ರಯತ್ನಿಸುತ್ತಿತ್ತು ಆದರೆ ಈ ಯೋಜನೆ ಎಲ್ಲೋ ಕೆಲವರಿಗೆ ಮತ್ರ ತಲುಪಿ ಬಹುಪಾಲು ಜನಗಳ ಸಂಕಷ್ಟ ಪರಿಹಾರವಾಗಲೇ ಇಲ್ಲ. ಜನರ ಕಷ್ಟವನ್ನು ನೋಡಿ ಬ್ರಹ್ಮಚೈತನ್ಯರು ಹಸಿದವರೆಲ್ಲರಿಗೂ ಕೆಲಸವನ್ನು ಕೊಟ್ಟು ಪ್ರತಿಯಾಗಿ ಆಹಾರ ಒದಗಿಸುವ ಏರ್ಪಾಟು ಮಾಡಿದರು. ವಂಶಪಾರಂಪರ್ಯವಾಗಿ ಬಂದ ಅವರ ವಿಶಾಲವಾದ ಜಮೀನಿನಲ್ಲಿ ಹಿಂದೆಲ್ಲಾ ಒಳ್ಳೆಯ ಬೆಳೆ ಬಂದಿದ್ದು ಅವರ ಕಣಜ ತುಂಬಿತ್ತು ಹಾಗಾಗಿ 150 ಎತ್ತಿನ ಗಾಡಿಗಳ ಮುಖಾಂತರ ಮಣ್ಣು ಸಾಗಿಸುವ ಕೆಲಸ ನೀಡಿ, ಪ್ರತಿ ದಿನ 1500 ಜನಕ್ಕೆ ಆಹಾರ ದೊರಕುವಂತೆ ಮಾಡಿದರು ಹಳ್ಳಿಯ ಜನರೆಲ್ಲಾ ಸೇರಿ ರೊಟ್ಟಿ, ತೊವ್ವೆಗಳನ್ನು ಮಾಡಿ, ಕೆಲಸ ಮಾಡುತ್ತಿದ್ದವರಿಗೆ ಹಂಚುತ್ತಿದ್ದರು ಈ ಬೃಹತ್ ಕಾರ್ಯದಲ್ಲಿ ಬ್ರಹ್ಮಚೈತನ್ಯರ ಪತ್ನಿ ಸರಸ್ವತಿ ಜೊತೆಗೂಡಿ ವ್ಯವಸ್ಥೆ ಮಾಡುತ್ತಿದ್ದಳು ಈ ಸಂದರ್ಭದಲ್ಲಿ 'ಔಂಧ್' ಎಂಬ ಊರಿನ ರಾಜ ಗೋಂದಾವಲಿ ಮಾರ್ಗವಾಗಿ ಹಾದು ಹೋಗುತ್ತಿದ್ದ ಸಾವಿರಾರು ಜನಕ್ಕೆ ಊಟ ಒದಗಿಸಬೇಕಾದರೆ ಇದು ಯಾವುದೋ ರಾಜನ ಕೆಲಸವಿರಬೇಕೆಂದು ಭಾವಿಸಿದ. ವಿಚಾರಿಸಿದಾಗ ಜನ ಹೇಳಿದರು 'ಸ್ವಾಮಿ ಈ ಕೆಲಸ ಮಾಡಿಸುತ್ತಿರುವವರು ಕೇವಲ ರಾಜರಲ್ಲ ಅವರು ನಮ್ಮ ಮಹಾರಾಜರು.' ಹೀಗೆ ಜನ ಬ್ರಹ್ಮಚೈತನ್ಯರನ್ನು 'ಗೋಂದಾವಲಿ ಮಹಾರಾಜ್' ಎಂದು ಕರೆಯಲಾರಂಭಿಸಿದರು.
    ಗೋಂದಾವಲಿ ಮಹಾರಾಜರು ತಮ್ಮ ಮನೆಯಲ್ಲಿ ಅನವರತ ರಾಮನಾಮ ಸಂಕೀರ್ತನೆ ನಡೆಸುವುದರ ಜೊತೆಗೆ ಹಳ್ಳಿಯ ಜನರಿಗೆ ಆಧ್ಯಾತ್ಮವನ್ನು ಬೋಧಿಸುತ್ತಿದ್ದರು ಅವರು ಹೇಳುತ್ತಿದ್ದರು - 'ನೆಮ್ಮದಿಯನ್ನು ಪ್ರಾಪಂಚಿಕ ವಿಷಯಗಳಲ್ಲಿ ಹುಡುಕಬೇಡಿ; ಪ್ರಾಪಂಚಿಕ ವಿಷಯಗಳಿಂದ ಪಡೆದುಕೊಂಡ ನೆಮ್ಮದಿ ಕ್ಷಣಿಕವಾದದ್ದು ದೇವರನ್ನು ಒಲಿಪಡೆದ ನೆಮ್ಮದಿ ಶಾಶ್ವತವಾದದ್ದು" ಪ್ರತಿದಿನ ಹಳ್ಳಿಯ ಜನ ಮಹಾರಾಜರ ಮನೆಯ ಮಂದೆ ಸೇರುತ್ತಿದ್ದರು ಇದಕ್ಕಾಗಿ ಒಂದು ವಿಶೇಷವಾದ ಪಡೆಸಾಲೆಯನ್ನೇ ನಿರ್ಮಿಸಲಾಯಿತು.

ರಾಮಮಂದಿರ
    ಬ್ರಹ್ಮಚೈತನ್ಯರ ಬೋಧನೆಯಿಂದ ಪ್ರಭಾವಿತರಾದ ಅನೇಕ ಹಳ್ಳಿಗರು ಇವರ ಭಕ್ತರಾದರು. ಮಹಾರಾಜರ ಮನಸ್ಸಿನ ಅದ್ಭುತ ಸಮಸ್ಥಿತಿಯ ಬಗ್ಗೆ ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು ಒಮ್ಮೆ ಒಬ್ಬ ಭಕ್ತ ಪ್ರಶ್ನಿಸಿದ "ಮಹಾರಾಜ್, ನೀವು ಎಂತಹ ಸಂದರ್ಭದಲ್ಲೂ ಮನಸ್ಸಿನ ಸಮಸ್ಥಿತಿಯನ್ನು ಕಳೆದುಕೊಳ್ಳದೆ ಶಾಂತರಾಗಿರುತ್ತೀರಲ್ಲ ಅದು ಹೇಗೆ?" ಈ ಪ್ರಶ್ನೆಯಿಂದ ಸಂತುಷ್ಟರಾದ ಮಹಾರಾಜರು ಉತ್ತರಿಸಿದರು - "ನೀನು ಬಹಳ ಒಳ್ಳೆಯ ಪ್ರಶ್ನೆಯನ್ನೇ ಕೇಳಿದೆ. ನನ್ನ ಬಳಿ ಒಂದು ಮಂತ್ರವಿದೆ ಅದರ ಸಹಾಯದಿಂದ ನಾನು ಸದಾ ಸಮಚಿತ್ತನಾಗಿರಲು ಸಾಧ್ಯ ಆ ಮಂತ್ರ ಯಾವುದು ಗೊತ್ತೆ? ನಾನು ಯಾವಾಗಲೂ ಹೇಳುತ್ತೇನೆ - "ಓ ದೇವರೆ?! ನಿನ್ನ ಇಚ್ಛೆಯಂತೆಯೇ ಎಲ್ಲವೂ ಸಾಗಲಿ, ನನ್ನ ಇಚ್ಚೆಯಂತೆ ಅಲ್ಲ' - ಈ ಮಂತ್ರ ನನ್ನ ಸಮಚಿತ್ತಕ್ಕೆ ಕಾರಣ" ಮತ್ತೊಬ್ಬ ಭಕ್ತ ಕೇಳಿದ - "ನೀವು ಹೇಳುತ್ತಿರುವುದರಲ್ಲಿ ನಮಗೆ ವಿಶ್ವಾಸವಿದೆ ಆದರೆ ನಾವು ದೇವರಲ್ಲಿ ವಿಶ್ವಾಸ ಪಡೆಯುವುದು ಹೇಗೆ?" ಮಹಾರಾಜರು ಹೇಳಿದರು - 'ದೇವರು ಎಂಬುದು ನೀನು ಯಾವ ರೂಪ - ಆಯಾಮಗಳನ್ನು ಕೊಡುತ್ತೀಯೊ ಅದು; ಅಷ್ಟೇ ಅಲ್ಲ, ಅದಕ್ಕಿಂತಲೂ ವಿಶಾಲವಾಗಿರುವಂತಹದ್ದು ಆದ್ದರಿಂದ ಅವನ ನಾಮದಿಂದ ಅವನ್ನು ತಲುಪುವುದು ಸುಲಭ ಹೀಗೆ ಮಾತುಕತೆ ಮುಂದುವರೆಯಿತು. ರಾಮನಾಮ ಜಪಿಸಲು ಅನುಕೂಲವಾಗುವಂತೆ ಒಮದು ರಾಮ ಮಂದಿರವನ್ನು ನಿರ್ಮಿಸಬೇಕೆಂದು ಭಕ್ತರೆಲ್ಲರೂ ನಿರ್ಧರಿಸಿ ಮಹಾರಾಜರನ್ನು ಕೇಳಿಕೊಂಡರು ನಂತರ ಬ್ರಹ್ಮಚೈತನ್ಯರ ಮನಗೆ ಅಂಟಿಕೊಂಡಂತೆ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಯಿತು ಜನ ಉದಾರವಾಗಿ ಸಹಾಯ ಮಾಡಿದರು ಗೋಂದಾವಲಿಯ ಹಳ್ಳಿಗರು ತಮ್ಮ ಶ್ರಮದಾನ ಮಾಡಿದರು ಹೀಗೆ ರಾಮಮಂದಿರ ಪೂರ್ಣಗೊಳ್ಳುವ ಹಂತಕ್ಕೆ ಬಂದಿತು ಭಕ್ತರು ಮಹಾರಾಜರನ್ನು ಆಗಾಗ ಕೇಳುತ್ತಿದ್ದರು. "ಮಂದಿರದಲ್ಲಿ ಪ್ರತಿಷ್ಠಾಪಿಸಲು ರಾಮನ ವಿಗ್ರಹಗಳೆಲ್ಲಿವೆ?" ಅದಕ್ಕೆ ಮಹಾರಜರ ನಿರಾತಂಕ ಉತ್ತರ ಹೀಗಿತ್ತು ಈ ಮಂದಿರ ಯಾರದ್ದೋ ಆ ದೇವರೇ ಅವರೆ ವ್ಯವಸ್ಥೆ ಮಾಡುತ್ತಾರೆ ಅದರ ಬಗ್ಗೆ ನಾವೇಕೆ ಚಿಂತಿಸಬೇಕು?" ಇದೇ ವೇಳೆಗೆ ದೂರದ ಊರಿನಲ್ಲಿ ಒಬ್ಬ ಶ್ರೀಮಂತ ರಾಮಮಂದಿರ ಸ್ಥಾಪಿಸಬೇಕೆಂದು ರಾಮ, ಲಕ್ಷ್ಮಣ ಮತ್ತು ಸೀತೆಯರ ಸುಂದರ ಮೂರ್ತಿಗಳನ್ನು ಮಾಡಿಸಿದ್ದ ಏನೋ ಕಾರಣಕ್ಕೆ ಅವನ ಮನೆಗೆ ಬೆಂಕಿ ಬಿದ್ದು ರಾಮಮಂದಿರ ನಿರ್ಮಾಣ ಕಾರ್ಯವನ್ನು ಸದ್ಯಕ್ಕೆ ಕೈ ಬಿಟ್ಟಿದ್ದ ಹೀಗಿರುವಾಗ ಒಂದು ದಿನ ಕನಸಿನಲ್ಲಿ ರಾಮನೇ ಕಾಣಿಸಿಕೊಂಡು ಶ್ರೀಮಂತನಿಗೆ ಹೇಳಿದನಂತೆ - "ಗೋಂದಾವಲಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ. ನೀನು ಈ ಮೂರ್ತಿಗಳನ್ನು ಅಲ್ಲಿಗೆ ಕೊಡು" ಹೀಗೆ ಆ ಶ್ರೀಮಂತ ಮೂರ್ತಿಗಳನ್ನು ತಂದು ಗೋಂದಾವಲಿ ಮಹಾರಾಜರಿಗೆ ಒಪ್ಪಿಸಿದ ಸಮಯಕ್ಕೆ ಸರಿಯಾಗಿ ಗೋಂದಾವಲಿ ರಾಮಮಂದಿರಕ್ಕೆ ಮೂರ್ತಿಗಳು ಬಂದವು ಅವುಗಳ ಪ್ರತಿಷ್ಠಾಪನೆಯೂ ಕೂಡಾ ವಿಜೃಂಭಣೆಯಿಂದ ನಡೆಯಿತು.

ತಾಯಿಯ ಕಾಶಿಯಾತ್ರೆ
    ಮಹಾರಾಜರಿಗೆ ತಮ್ಮ ತಾಯಿಯ ಬಗ್ಗೆ ವಿಶೇಷವಾದ ಒಲವು. ಅವರು ತಮ್ಮ ತಾಯಿಯ ಯೋಗಕ್ಷೇಮವನ್ನು ತಾವೇ ನೋಡಿಕೊಳ್ಳುತ್ತಿದ್ದರು. ತಾಯಿಗೆ ವಯಸ್ಸಾಗಿದ್ದರಿಂದ ತಾಯಿಯ ಬಯಕೆಗಳನ್ನೆಲ್ಲಾ ತಾವು ಪೂರೈಸಬೇಕೆಂದು ಬಯಸಿ ತಾಯಿಯನ್ನು ಕೇಳಿದರು - "ಅಮ್ಮಾ ನಿನಗೇನಾದರೂ ಆಸೆಗಳಿದ್ದರೆ ಹೇಳು, ಅವುಗಳನ್ನು ಪೂರೈಸುತ್ತೇನೆ" ಇಳಿವಯಸ್ಸಿನಲ್ಲಿದ್ದ ತಾಯಿ ಗೀತಾಬಾಯಿಗೆ ಮತ್ತೇನೊ ಆಸೆಗಳಿರಲಿಲ್ಲ ಮಗ ಸಂತನೆಂದು ಹೆಸರು ಪಡೆದು ಅನೇಕರ ಗೌರವಕ್ಕೆ ಪಾತ್ರನಾದದ್ದು ತಾಯಿಗೆ ತೃಪ್ತಿ ತಂದುಕೊಟ್ಟಿತ್ತು ಆಕೆ ಹೇಳಿದಳು - "ಗಣಪತಿ, ನನಗೆ ಇನ್ನೇನೊ ಆಸೆ ಇಲ್ಲ, ಆದರೆ 'ಕಾಶಿ'ಗೆ ಹೋಗಬೇಕೆಂಬ ಒಂದು ಆಸೆ ಮಾತ್ರ ಉಳಿದುಕೊಂಡಿದೆ" ತಾಯಿಯ ಆಸೆಯನ್ನು ಪೂರೈಸಲು ಮಹಾರಜರು ಏರ್ಪಾಡು ಮಾಡಿದರು ಕೊರೆಗಾಂವ್ ಎಂಬ ಊರಿನಿಂದ ರೈಲು ಇದ್ದದ್ದರಿಂದ ಆ ಊರಿಗೆ ಎತ್ತಿನ ಗಾಯಿಲ್ಲಿ ಹೋಗಿ, ನಂತರ ರೈಲು ಹಿಡಿದು ಕಾಶಿಗೆ ಹೋಗುವ ಏರ್ಪಾಟು ನಡೆಯಿತು. ಹೊರಡುವ ದಿನ ಹಳ್ಳಿಗರೆಲ್ಲಾ ಮಹಾರಾಜರನ್ನು ಅವರ ತಾಯಿಯನ್ನು ಬೀಳ್ಕೊಡಲು ರಾಮಮಂದಿರದ ಎದುರು ನೆರೆದರು ತಾಯಿ ಹಳ್ಳಿಗರಿಗೆ ಹೇಳಿದಳು. "ನೋಡಿ ನಾನು ಕಾಶಿಯಾತ್ರೆ ಮುಗಿಸಿಕೊಂಡು ಹಿಂದಿರುತ್ತೇನೆ. ಅಲ್ಲಿಯವರೆಗೆ ನೀವೆಲ್ಲರೂ ನಮ್ಮ ಮನೆಯನ್ನು ಚೆನ್ನಾಗಿ ನೋಡಿಕೊಳ್ಳಿ" ಆಗ ಮಹಾರಜರು ಹೇಳಿದರು - "ಅಮ್ಮಾ ನಾವು ಬಹಳ ದೂರ ಪ್ರಯಾಣ ಬೆಳೆಸುತ್ತಿದ್ದೇವೆ ನೀನು ಈಗಾಗಲೇ ದುರ್ಬಲಳಾಗಿದ್ದೀಯೆ ನಿನಗೆ ಕಾಶಿಯಿಂದ ಹಿಂದಿರುಗಲು ಸಾಧ್ಯವಾಗಬಹುದು ಅಥವಾ ಸಾಧ್ಯವಾಗದೇ ಹೋಗಬಹುದು ಆದ್ದರಿಂದ ಈ ಮನೆಯ ಸಂಬಂಧವಾಗಿ ಏಕೆ ತಲೆ ಕೆಡಿಸಿಕೊಳ್ಳುತ್ತೀಯ: ಇಂತಹ ಸಂದರ್ಭದಲ್ಲಿ ನಿರ್ಲಿಪ್ತವಾಗಿರಬೇಕು ಆದ್ದರಿಂದ ಈ ಮನೆಯನ್ನೂ, ಅದರೊಳಗಿರುವ ಎಲ್ಲ ವಸ್ತುಗಳನ್ನೂ ದಾನ ಮಾಡಿಬಿಡೋಣ" ಹೀಗೆ ಹೇಳಿ ತಮ್ಮ ಕುಲಪುರೋಹಿತರನ್ನು ಕರೆದು ಸೂಕ್ತವಾದ ಮಂತ್ರವೊಂದನ್ನು ಅವರಿಂದ ಹೇಳಿಸಿ, ಅಲ್ಲೇ ನರೆದಿದ್ದ ಹಳ್ಳಿಗರಿಗೆ ತಮ್ಮ ಮನೆಯ ಸಮಸ್ತ ವಸ್ತುಗಳನ್ನೂ ಧಾರೆ ಎರೆದು ಕೊಟ್ಟುಬಿಟ್ಟರು ಕೇವಲ 15 ನಿಮಿಷಗಳಲ್ಲೇ ತಾಯಿ ಗೀತಾಬಾಯಿಯ ಎದುರಿಗೆ ಹಳ್ಳಿಗರು ಮಹಾರಾಜರ ಮನೆಯ ಎಲ್ಲ ವಸ್ತುಗಳನ್ನೂ ತೆಗೆದುಕೊಮಡು ಹೊರಟಹೋದರು ಮನೆ ಖಾಲಿಯಾಯಿತು ಸ್ತಂಭೀಭೂತಳಾಗಿ ತಾಯಿ ಈ ಹಠಾತ್ ಬದಲಾವಣೆಯನ್ನು ವೀಕ್ಷಿಸಿದಳು ಮಹಾರಾಜರು ಹೇಳಿದರು. "ಅಮ್ಮಾ, ಈಗ ನಾವು ನಿಜವಾಗಿಯೂ ಯಾತ್ರೆಗೆ ಹೊರಟಂತಾಯಿತು, ನಮಗೆ ಈಗ ಯಾವ ಬಂಧನವೂ ಇಲ್ಲ" ತಾಯಿ ಹೇಳಿದಳು - "ಗಣಪತಿ, ನಿನಗೆ ವಯಸ್ಸಾಗಿದೆ, ಈಗಲಾದರೂ ಬುದ್ಧಿವಂತನಾಗಿದ್ದೀಯ ಎಂದು ಭಾವಿಸಿದ್ದೆ. ಆದರೆ ಹಾಗೇನೂ ಆಗಿಲ್ಲ ಎನ್ನುವುದು ನನಗೆ ಪ್ರತ್ಯಕ್ಷವಾಗಿ ಕಾಣುತ್ತಿದೆ ನೀನು ಅದೇ ಹಳ್ಳಿಯ ಬೈರಾಗಿ. ನಿನ್ನ ರೀತಿ ನೀತಿಗಳು ಹೀಗೇ ಎಂದು ಹೇಳಲಾಗುವುದಿಲ್ಲ"

    ಮಹಾತ್ಮರ ರೀತಿ-ನೀತಿಗಳನ್ನು ನಮ್ಮ ಪ್ರಾಪಂಚಿಕಗಳ ಪಟ್ಟಿಯಿಂದ ಅಳೆಯುವುದಾದರೂ ಹೇಗೆ? ಅಂತೂ ಕಾಶಿ ಪ್ರಯಾಣ ಮುಂದುವರೆಯಿತು. ಮಹಾರಾಜರ ಸಂಗಡ ದೊಡ್ಡ ತಂಡವೇ ಹೊರಟಿತ್ತು ಮೊದಲು ನಾಸಿಕ್ ಮೂಲಕ ಅಲಹಾಬಾದಿಗೆ ಬಂದು ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮದಲ್ಲಿ ಮಿಂದು ಬಡವರಿಗೆ ದಾನ ಧರ್ಮಗಳನ್ನು ಮಾಡಿದರು ಮಹಾರಾಜರು ತಾಯಿಯನ್ನು ತಮ್ಮ ತೋಳಿನಿಂದಲೇ ಎತ್ತಿಕೊಂಡು ಪ್ರತಿದಿನ ಸ್ನಾನಕ್ಕೆ ಕರೆದುಕೊಮಡು ಹೋಗುತ್ತಿದ್ದರು ತಾಯಿಯನ್ನು ಬಹಳವಾಗಿ ಉಪಚರಿಸಿ ಆಕೆ ಸಂತೋಷವಾಗಿರುವಂತೆ ನೋಡಿಕೊಂಡರು ಆ ವೇಳೆಗಾಗಲೇ ಮಹಾರಾಜರ ಪ್ರಸಿದ್ದಿ ಎಲ್ಲೆಡೆಗೂ ಹರಡಿತ್ತು ಅವರು ಹೋದ ಕಡೆಗಳಲ್ಲೆಲ್ಲಾ ಅನೇಕ ಸಾಧು ಸಂತರು ಮಹಾರಾಜರನ್ನು ಕಾಣಲು ಬರುತ್ತಿದ್ದರು ಅವರೊಡನೆ ಚರ್ಚೆ ವಾಗ್ವಾದಗಳು ನಡೆಯುತ್ತಿದ್ದವು ಪ್ರಯಾಣ ಮುಂದುವರೆಸಿ ಕಾಶಿಗೆ ಬಂದರು ಕಾಶಿಯಲ್ಲಿ ಮಹಾರಾಜರ ತಾಯಿಗೆ ದಾನ ಮಾಡುವ ಮನಸ್ಸಾಯಿತು ಯಥೇಚ್ಛವಾಗಿ ಅಡಿಗೆ ಮಾಡಿಸಿ ನೂರಾರು ಜನಕ್ಕೆ ಅನ್ನ ಹಾಕುವ ಏರ್ಪಾಟು ಮಾಡಿದರು.

ಅಯೋಧ್ಯೆಗೆ ಪ್ರಯಾಣ ಮತ್ತು ತಾಯಿಯ ನಿಧನ
    ಒಂದು ತಿಂಗಳು ಕಾಶಿಯಲ್ಲಿ ಕಾಲ ಕಳೆದ ನಂತರ ಎಲ್ಲರೂ ಅಯೋಧ್ಯೆಗೆ ಬಂದರು. ಈವರೆಗೆ ಸದೃಢರಾಗಿ ಇದ್ದ ತಾಯಿ ಏಕಾಏಕಿ ನಿಶ್ಯಕ್ತರಾದಂತೆ ಕಂಡರು ಈ ನಿಶ್ಯಕ್ತತೆ ಹೆಚ್ಚಾಗುತ್ತಲೇ ಹೋಯಿತು ಏಕೋ ಏನೋ ಗೀತಾಬಾಯಿ ವೈದ್ಯಕೀಯ ಉಪಚಾರವನ್ನು ದೃಢವಾಗಿ ನಿರಾಕರಿಸಿದರು ಕೇವಲ ಹಾಲು ಮತ್ತು ರಾಮನಾಮ ಅವರ ಆಹಾರವಾಯಿತು ಮಹಾರಾಜರು ತಮ್ಮ ತಾಯಿಗೆ ವಿಶೇಷ ಶುಶ್ರೂಷೆ ನೀಡುತ್ತಾ ನೋಡಿಕೊಳ್ಳುತ್ತಿದ್ದರು ಅಯೋಧ್ಯೆಗೆ ಬಂದ ಆರನೇ ದಿನ ತಾಯಿ ಗೀತಾಬಾಯಿಗೆ ತಮ್ಮ ಕಾಲ ಸನ್ನಿಹಿತವಾಗಿದೆ ಎಮದೆನ್ನಿಸಿತು ಆದ್ದರಿಂದ ಸರಯೂ ನದಿಯಲ್ಲಿ ಪುನ್ಯಸ್ನಾನ ಮಾಡಬೇಕೆಂದು ಬಯಸಿದರು ಮಹಾರಾಜರು ತಾಯಿಯನ್ನು ಎತ್ತಿಕೊಂಡು ಹೋಗಿ ಸರಯೂ ನದಿಯಲ್ಲಿ ಸ್ನಾನ ಮಾಡಿಸಿದರು ನಂತರ ನದಿ ಘಟ್ಟದಲ್ಲಿ ಕುಳಿತು ಸಾಧು ಸನ್ಯಾಸಿಗಳಿಗೆ ತಮ್ಮ ಕೈಯಿಂದಲೇ ದಾನಕೊಡಬೇಕೆಂಬ ಬಯಕೆ ತಾಯಿಯ ಮನಸ್ಸಿನಲ್ಲಿ ಹುಟ್ಟಿತು ಮಹಾರಾಜರು ತಾಯಿಯ ಆಸನದ ಕೆಳಗೆ ಹಣ ಇಟ್ಟು ಅದನ್ನು ಬಂದವರಿಗೆಲ್ಲಾ ಕೊಡಲು ಹೇಳಿದರು ಹಿಡಿ ತುಂಬಾ ನಾಣ್ಯಗಳನ್ನು ನೂರಾರು ಜನಕ್ಕೆ ಕೊಟ್ಟರೂ ಕೂಡ ಹಣ ಮಾತ್ರ ಮುಗಿಯಲಿಲ್ಲ ಆಶ್ವರ್ಯಗೊಂಡ ತಾಯಿ ಕೇಳಿದಳು "ಗಣಪತಿ ಎಷ್ಟು ಹಣ ಇಟ್ಟಿದ್ದೀಯ?" ಮಹಾರಾಜರು ಹೇಳಿದರು - "ನೀನೇಕೆ ಯೋಚಿಸುತ್ತೀಯ? ಹಣದ ಚಿಲುಮೆಯೇ ಇದೆ ನಿನಗೆ ಸಾಧ್ಯವಾದಷ್ಟನ್ನೂ ಕೊಟ್ಟಬಿಡು" ತಾಯಿಗೆ ಮಗ ಯಾವುದೋ ಸಿದ್ಧಿಯನ್ನು ಸಂಪಾದಿಸಿಕೊಂಡಿದ್ದಾನೆ ಎನಿಸಿತು ಆಕೆ ಕೇಳಿದಳು-"ಗಣಪತಿ ನೀನು ಸಿದ್ಧಿಗಳನ್ನು ಸಂಪಾದಿಸಿರುವ ವಿಷಯವನ್ನು ನನಗೆ ಹೇಳಿಲ್ಲವಲ್ಲ?" ಮಹಾರಾಜರು ನಸುನಕ್ಕು ಸುಮ್ಮನಾದರು.

    ದಾನ ಮಾಡಿದ ನಂತರ ತಾಯಿಯನ್ನು ಮನೆಗೆ ಕರೆತರಲಾಯಿತು ಸ್ವಲ್ಪ ಪ್ರಸಾದವನ್ನು ತಿಂದು ತಾಯಿ ವಿಶ್ರಮಿಸಿದರು ಮಧ್ಯಾಹ್ನ ಮಹಾರಾಜರು ಕೇಳಿದರು - "ಅಮ್ಮಾ, ನನ್ನಿಂದ ಇನ್ನೂ ಏನಾದರೂ ನಿನಗೆ ಆಗಬೇಕಾದದ್ದು ಇದೆಯೆ?" ತಾಯಿ ಹೇಳಿದಳು "ಇಲ್ಲ ಮಗು, ಏನೂ ಇಲ್ಲ; ನಿನ್ನ ತೊಡೆಯ ಮೇಲೆ ನಾನು ನನ್ನ ಕೊನೆಯುಸಿರೆಳೆದರೆ ಸಾಕು ಮರುದಿನ ಬೆಳಿಗ್ಗೆ ತಾಯಿಯ ನಿಶ್ಯಕ್ತಿ ಜಾಸ್ತಿಯಾಗಿತ್ತು ಆಕೆ ಸ್ಥಿರಚಿತ್ತಳಾಗಿದ್ದುದು ಕಂಡುಬಂತು ಸಂತನನ್ನು ಮಗನಾಗಿ ಪಡೆದ ಆಕೆಯ ಜೀವನ ಸಾರ್ಥಕವಾಗಿತ್ತು ಆಕೆ ಮಗನ ತೋಳುಗಳ ಆಸರೆಯಲ್ಲೇ ಕೊನೆಯುಸಿರೆಳೆದಳು ಮಹಾರಾಜರು ಬೆಟ್ಟದಂತೆ ಸ್ಥಿರಚಿತ್ತರಾಗಿದ್ದರು ಮಹಾರಾಜರು ಹೇಳಿದರು - "ಓ ತಾಯಿ, ನೀನು ಇಲ್ಲವಾದೆಯಲ್ಲ"

    ದೇಹವನ್ನು ಸರಯೂ ನದಿ ತೀರಕ್ಕೆ ಒಯ್ಯಲಾಯಿತು ಅನೇಕ ಸಾಧು ಸಂತರು ಬೈರಾಗಿಗಳು ಈ ಮಹಾತಾಯಿಯ ದರ್ಶನ ಪಡೆದರು ರಾಮನಾಮ ವೇದ ಮಂತ್ರಗಳೊಡನೆ ಗಂಧದ ಮರಗಳ ಚಿತೆಯಲ್ಲಿ ದೇಹ ಅಗ್ನಿಗೆ ಅರ್ಪಿತವಾಯಿತು ಮಹಾರಾಜರ ಏಕೈಕ ಸಂಪತ್ತೆಂದರೆ ಈ ತಾಯಿಯೇ ಆಗಿದ್ದಳು ಈಗಾಗಲೇ ಜೀವನ್ಮುಕ್ತರಾಗಿದ್ದ ಅವರು ಈಗ ಎಲ್ಲ ಭೌತಿಕ ಬಂಧನಗಳಿಂದಲೂ ಮುಕ್ತರಾದರು.

ಜೀವನದ ಅದ್ಭುತ ಘಟನೆಗಳು
    ತಾಯಿಯ ನಿರ್ಯಾಣಾನಂತರ ಬ್ರಹ್ಮಚೈತನ್ಯರು ಇಂದೋರ್ ಮುಂತಾದ ಊರುಗಳಲ್ಲಿ ಸಂಚರಿಸಿ ಗೊಂದಾವಲಿಗೆ ಹಿಂದಿರುಗಿದರು ಅವರು ತಮ್ಮ ಮನೆಯಲ್ಲಿ ವಾಸ ಮಾಡಲು ಇಷ್ಟಪಡಲಿಲ್ಲ ಬದಲಾಗಿ ರಾಮ ಮಂದಿರಕ್ಕೆ ಹೊಂದಿಕೊಂಡೇ ಇದ್ದ ಒಂದು ಚಿಕ್ಕ ಕೋಣೆಯನ್ನು ತಮ್ಮ ಮಲಗುವ ಕೋಣೆಯಾಗಿ ಪರಿವರ್ತಿಸಿಕೊಂಡು ರಾಮ ಮಂದಿರದಲ್ಲೇ ವಾಸಿಸತೊಡಗಿದರು ಬ್ರಹ್ಮಚೈತನ್ಯರ ಕೃಪೆಯಿಂದ ಅನೇಕರ ಹೃದಯ ಪರಿವರ್ತನೆಯಾದ ಘಟನೆಗಳು ದಾಖಲಾಗಿವೆ ಅವುಗಳಲ್ಲಿ ಕೆಲವು ಘಟನೆಗಳ ಬಗ್ಗೆ ತಿಳಿಯೋಣ.

ಪರಿವರ್ತನೆ
    ಕರೋಡ್ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಯುವಕನೊಬ್ಬ ತಂದೆಯನ್ನು ಕಳೆದುಕೊಂಡ ತಾಯಿಯ ಮಾತನ್ನೂ ಲೆಕ್ಕಿಸದೆ ಕೆಟ್ಟ ಸ್ತೀಯರ ಸಹವಾಸದಿಂದ ದಾರಿ ತಪ್ಪುತ್ತಿದ್ದ ತಾಯಿ ಮಗನಿಗೆ ಬುದ್ಧಿ ಹೇಳಲು ಪ್ರಯತ್ನಿಸಿದಳು ಆದರೆ ಅವನು ಬಡಪೆಟ್ಟಿಗೆ ಬಗ್ಗುವ ಆಸಾಮಿಯಲ್ಲ ಒಂದು ದಿನ ತನ್ನ ಹೆತ್ತ ತಾಯಿಯನ್ನೇ ಹಿಡಿದು ಚೆನ್ನಾಗಿ ಥಳಿಸಿಬಿಟ್ಟ ದಿಕ್ಕುಕಾಣದ ತಾಯಿ ತನ್ನ ಏಕಮಾತ್ರ ಪುತ್ರನನ್ನು ಗೊಂದಾವಲಿಗೆ ಕರೆತಂದು ತನ್ನ ಸಮಸ್ಯೆಯನ್ನೆಲ್ಲಾ ಮಹಾರಾಜರಿಗೆ ವಿವರಿಸಿ ಹೇಳಿದಳು ಮಹಾರಾಜರು ಆಶೀರ್ವದಿಸಿ ಎಲ್ಲಾ ಸರಿ ಹೋಗುವುದೆಂದು ಸಮಾಧಾನ ಹೇಳಿ ಹುಡುಗನನ್ನೂ ತಾಯಿಯನ್ನೂ ತಮ್ಮ ಬಳಿ ಇಟ್ಟುಕೊಂಡರು ಹುಡುಗನಿಗೆ ಬುದ್ಧಿವಾದ ಹೇಳಿ ಮನಸ್ಸು ಡೋಲಾಯಮಾನವಾದಾಗ ನನ್ನ ಬಳಿ ಬಾ ರಾಮನಾಮ ಜಪಿಸು ಎಂದರು ಹುಡುಗನು ಕ್ರಮೇಣ ವಿಧೇಯನಾಗಿ ನಡೆದುಕೊಂಡ ಎಲ್ಲವೂ ಸರಿಯಾದಂತೆ ಕಂಡಿತು ಸ್ವಲ್ಪ ಕಾಲದ ನಂತರ ಹುಡುಗನ ತಾಯಿ ನಿಧನಳಾದಳು ಹುಡುಗ ಮಾತ್ರ ಮಹಾರಾಜರ ಆಶ್ರಯದಲ್ಲೇ ಇದ್‌ದ ಈಗ ಅವನ ಹಳೆಯ ಚಾಳಿ ಮರುಕಳಿಸಿದಂತೆ ಕಂಡಿತು ಗೊಂದಾವಲಿಯ ಹಳ್ಳಿಯಲ್ಲೇ ವೇಶ್ಯಾಸಹವಾಸದಲ್ಲಿ ತೊಡಗಿದ ಮಹಾರಾಜರಿಗೆ ಇದು ತಿಳಿಯಿತಾದರೂ ವಿಶೇಷವಾಗೇನೂ ವಿಚಾರಿಸದೆ ಸುಮ್ಮನೆ ಇದ್ದುಬಿಟ್ಟರು ಒಂದು ದಿನ ರಾತ್ರಿ ಎರಡು ಗಂಟೆಯವರೆಗೆ ರಾಮನಾಮ ಸಂಕೀರ್ತನೆ ಭಜನೆ ನಡೆಯಿತು ನಂತರ ಮಹಾರಾಜರು ಹುಡುಗನಿಗೆ ಆರತಿ ಕೊಡಲು ಹುಡುಗನನ್ನು ಹುಡುಕಿದರು ಆದರೆ ಅವನು ಈಗಾಗಲೇ ತನ್ನ ಬೇಟೆಯನ್ನರಸಿ ಹೊರಟುಹೋಗಿದ್ದ ಕೊನೆಗೆ ಮಹಾರಾಜರು ಪಂಚಿನ ಬೆಳಕು ಹಿಡಿದು ಅವನನ್ನು ಹುಡುಕಿಕೊಂಡು ಹೊರಟರು ನದಿ ತೀರದಲ್ಲಿ ಹುಡುಗ ವೇಶ್ಯಯೊಬ್ಬಳ ಜೊತೆ ಮಲಗಿ ನಿದ್ರಿಸುತ್ತಿದ್ದ ಮಹಾರಾಜರು ಅಯ್ಯೋ ಪಾಪದ ಹುಡುಗ ಎಂದು ಅನುಕಂಪ ತೋರಿ ತಾವು ಹೊದ್ದಿದ್ದ ಶಾಲನ್ನೇ ಹುಡುಗನಿಗೆ ಹೊದಿಸಿ ತಮ್ಮ ಪಾಡಿಗೆ ತಾವು ಹಿಂದಿರುಗಿದರು ಬೆಳಗಿನ ತಂಗಾಳಿಗೆ ಎಚ್ಚರಗೊಂಡಾಗ ಹುಡುಗ ನೋಡುತ್ತಾನೆ ತನ್ನ ಮೇಲೊಮದು ಶಾಲು ಹರಡಿದೆ ಅದು ಯಾರ ಶಾಲು ಎಂದು ಅವನಿಗೆ ತಕ್ಷಣ ತಿಳಿದು ಹೋಯಿತು ಅಲ್ಲದೆ ಮಾತೃಹೃದಯದ ಮಹಾರಾಜರ ಅನುಕಂಪ, ಕ್ಷಮೆಗಳು ಅವನ ಹೃದಯವನ್ನು ಕಲಕಿಬಿಟ್ಟಿತು ತನ್ನ ಬಗೆಗೆ ತಾನು ಜಿಗುಪ್ಸೆಗೊಂಡ ಮನಸ್ಸನ್ನು ದೃಢಪಡಿಸಿಕೊಮಡು ನದಿಯಲ್ಲಿ ಮಿಂದು ಮಹಾರಾಜರ ಬಳಿ ಬಂದು ಅವರ ಪಾದಗಳನ್ನು ಹಿಡಿದು ಜೋರಾಗಿ ಅಳತೊಡಗಿದ ಆಗಲೂ ಕುಡಾ ಮಹಾರಾಜರು ಅವನನ್ನು ಪ್ರೀತಿ-ವಾತ್ಸಲ್ಯಗಳಿಂದ ಬರಮಾಡಿಕೊಂಡು ಆಶೀರ್ವದಿಸಿದರು ಅವನ ಮನಸ್ಸು ಯಾವುದೋ ಹೊಸ ಅರಿವಿಗೆ ಎಚ್ಚರವಾಯಿತು ಅವನ ತೀವ್ರವ್ಯಾಕುಲತೆಯನ್ನು ಕಂಡು ಮಹಾರಾಜರು ಆತನನ್ನು ಮೌಂಟ್ ಅಬುವಿಗೆ ತಪಸ್ಸು ಮಾಡಲು ಕಳುಹಿಸಿದರು ಅಲ್ಲಿ ಅವನು ಬಹುದೊಡ್ಡ ಯೋಗಿಯಾದ.

ಸ್ವಾರ್ಥಮಯ ಪ್ರಪಂಚ
    ಗೋಂದಾವಲಿ ಒಂದು ಚಿಕ್ಕ ಹಳ್ಳಿ ಅಲ್ಲಿಗೆ ಅನೇಕ ಭಕ್ತರು ದೂರದ ಊರುಗಳಿಂದ ಬರುತ್ತಿದ್ದರು ಅವರ ಬೆಲೆ ಬಾಳುವ ಒಡವೆ ಪೆಟ್ಟಿಗೆಗಳನ್ನು ಇಡಲು ಗೊಂದಾವಲಿಯಲ್ಲಿ ಪ್ರತ್ಯೇಕವಾದ ಕೋಣೆಯಾಗಲಿ ಅಥವಾ ತ್ರಿಜೋರಿಯಾಗಲಿ ಇರಲಿಲ್ಲ ಎಲ್ಲ ಸ್ತ್ರೀ ಭಕ್ತರೂ ತಮ್ಮ ಒಡವೆ ಪೆಟ್ಟಿಗೆಗಳನ್ನು ಮಹಾರಾಜರ ಬಳಿ ಕೊಡುತ್ತಿದ್ದರು ಮಹಾರಾಜರು ಅವುಗಳನ್ನು ತಮ್ಮ ಮಂಚದ ಅಡಿಯಲ್ಲಿ ಇಡುತ್ತಿದ್ದರು ಇದೇ ಅತ್ಯಂತ ಸುರಕ್ಷಿತವಾದ ಸ್ಥಳವಾಗಿತ್ತು ಹೀಗಿರುವಾಗ ಸಾಂಗ್ಲಿಯಿಂದ ಬಂದ ಭಕ್ತೆಯೊಬ್ಬಳು ತನ್ನ ಒಡವೆ ಪೆಟ್ಟಿಗೆಯನ್ನು ಮಹಾರಾಜರ ಬಳಿ ಇರಿಸಿದ್ದಳು ಮಹಾರಾಜರು ಒಂದು ಸಂಜೆ ಗಾಳಿ ಸಂಚಾರಕ್ಕೆಂದು ಹೋಗಿದ್ದರು ಹಿಂದಿರುಗುವಾಗ ಅವರಿಗೆ ಅನೀರೀಕ್ಷಿತವಾಗಿ ಆಸ್ತಮಾ ಸಮಸ್ಯೆ ಬಂದೆರಗಿತು ಅದು ಕ್ಷಣ ಕ್ಷಣಕ್ಕೂ ಎಷ್ಟು ಉಲ್ಬಣಗೊಂಡಿತೆಂದರೆ ಅವರನ್ನು ಆರಾಮ ಕುರ್ಚಿಯ ಮೇಲೆ ಕೂರಿಸಿ ಭಕ್ತರು ಹೊತ್ತುಕೊಂಡು ಬರಬೇಕಾಯಿತು ಅವರ ದೇಹ ಶೀತಲವಾಗುತ್ತಾ ಬಂತು ನೀಲಿ ಬಣ್ಣಕ್ಕೆ ತಿರುಗಿ ಉಸಿರಾಟ ನಿಂತಮತೆ ಕಂಡಿತು ಭಕ್ತಾದಿಗಳೆಲ್ಲಾ ರೋದಿಸುತ್ತಾ ರಾಮಮಂದಿರಕ್ಕೆ ಮಹಾರಾಜರನ್ನು ಹೊತ್ತು ತಂದು ತಮ್ಮ ಕೈಲಾದ ಕೊನೆಯ ಪ್ರಯತ್ನಗಳನ್ನೆಲ್ಲಾ ಮಾಡತೊಡಗಿದರು ಭಕ್ತರಲ್ಲಿ ಕೆಲವರು ಜೋರಾಗಿ ಅಳುತ್ತಿದ್ದರು ಮತ್ತೆ ಕೆಲವರು ರಾಮ ನಾಮ ಜಪಿಸುತ್ತಿದ್ದರು ಇದನ್ನೆಲ್ಲಾ ನೋಡುತ್ತಿದ್ದ ಸಾಂಗ್ಲಿಯ ಮಹಿಳೆಗೆ ತನ್ನ ದುಃಖವನ್ನು ತಡೆಯಲಾಗಲಿಲ್ಲ ಅವಳು ಜೋರಾಗಿ ರೋದಿಸತೊಡಗಿದಳು - "ಅಯ್ಯೋ ಮಹಾರಾಜರೇ ನಿಮಗೇನೋ ವಯಸ್ಸಾಗಿತ್ತು ನೀವು ಹೋಗಿಬಿಟ್ಟಿರಿ ಆದರೆ ನನ್ನ ಒಡವೆಗಳ ಪೆಟ್ಟಿಗೆಯ ಗತಿ ಏನು?" ತಕ್ಷಣ ಅಲ್ಲಿ ನೆರೆದವರೆಲ್ಲರಿಗೂ ದಂಗು ಬಡಿಯುವಂತೆ ಎದ್ದು ಕುಳಿತ ಮಹಾರಾಜರು ಹೇಳಿದರು - "ಅಮ್ಮಾ ತಾಯೆ, ನಾನಿನ್ನೂ ಈ ಇಹಲೋಕವನ್ನು ತ್ಯಜಿಸಿಲ್ಲ; ನಿನ್ನ ಒಡವೆ ಪೆಟ್ಟಿಗೆಯನ್ನು ಹೇಗಿತ್ತೋ ಹಾಗೆಯೇ ನಿನಗೆ ಹಿಂದಿರುಗಿಸುತ್ತೇನೆ. ಅನಂತರ ನಾನು ಈ ಪ್ರಪಂಚವನ್ನು ತೊರೆದರೆ ನೀನು ಅಷ್ಟಾಗಿ ಚಿಂತಿಸುವುದಿಲ್ಲ" ನಂತರ ಮಹಾರಾಜರು ಅಲ್ಲಿ ನೆರೆದಿದ್ದವರನ್ನು ಕುರಿತು ಹೇಳಿದರು - "ನೋಡಿ ಇದೇ ಪ್ರಪಂಚದ ಪರಿ ಪ್ರಪಂಚಕ್ಕೆ ಅಂಟಿಕೊಮಡ ಪ್ರತಿಯೊಬ್ಬ ಮನುಷ್ಯನೂ ಹೀಗೆ ಸ್ವಾರ್ಥಿಯಾಗಿರುತ್ತಾನೆ ಆಸೆಯಿಂದ ಬಂಧನಗಳು ಬಂಧನದಿಂದ ಸ್ವಾರ್ಥ ಹುಟ್ಟುತ್ತದೆ ಆಧ್ಯಾತ್ಮ ಜೀವನ ನಡೆಸುವವರು ಪ್ರಾಪಂಚಿಕ ವಸ್ತುಗಳಿಗೆ ಅಂಟಿಕೊಳ್ಳಬಾರದು ಭಗವನ್ನಾಮ ಜಪ ಒಂದೇ ಈ ಭವರೋಗಕ್ಕಿರುವ ಉತ್ತಮವಾದ ಔಷಧಿ ನಾಮದ ಮಹಿಮೆಯನ್ನು ನಾವು ಸಾಧು ಸಂತರಿಂದ ಕಲಿಯಬೇಕು."

ರಾಮನ ಕಣ್ಣಲ್ಲಿ ನೀರು
    1909 ದಹಿವಾಡಾ ತಾಲ್ಲೂಕಿಗೆ ಪ್ಲೇಗು ಬಂತು ಆದರೆ ಗೊಂದಾವಲಿಯ ಜನರಿಗೆ ಇದು ಹರಡಲಿಲ್ಲವಾದರೂ ಮಹಾರಾಜರಿಗೆ ಪ್ಲೇಗು ತಗುಲಿತು ಸುಡುವ ಜ್ವರ ಜೊತೆ ಗಂಟಲಿನ ಬಳಿ ಗಡ್ಡೆ ಕಾಣಿಸಿತು ಭಕ್ತಾದಿಗಳಿಗೆಲ್ಲಾ ಏನೋ ಆತಂಕ ಅವರೆಲ್ಲಾ ಅಹರ್ನಿಶೆ ರಾಮ ಮಂತ್ರ ಜಪ ಮಾಡುತ್ತಾ ರಾಮಮಂದಿರದಲ್ಲಿ ರಾಮನಾಮ ಸಂಕೀರ್ತನೆ ನಡೆಸಿದರು ಮಹಾರಾಜರಿಗೆ ತಗುಲಿದ ಪ್ಲೇಗು ಗುಣಮುಖವಾಗಲೆಂಬುದೇ ಅವರೆಲ್ಲರ ಪ್ರಾರ್ಥನೆ ಹೀಗೆ ಸಂಕೀರ್ತನೆ ನಡೆಯಿತ್ತಿರುವಾಗ ಬೆಳಗಿನ ಸುಮಾರು 11 ಗಂಟೆ ಸಮಯದಲ್ಲಿ ಅಲೌಕಿಕ ಘಟನೆಯೊಂದು ನಡೆಯಿತು ದಾಮ್ಲೆ ಎಂಬ ಭಕ್ತನೊಬ್ಬ ರಘುಪತಿ ರಾಘವ ರಾಜಾರಾಂ ಹೇಳುತ್ತಾ ರಾಮನ ಮೂರ್ತಿಯನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ರಾಮನ ಕಣ್ಣಲ್ಲಿ ನೀರು ಹನಿಹನಿಯಾಗಿ ಒಸರುವುದು ಕಂಡಿತು ದಿಗ್ಬ್ರಮೆಗೊಂಡ ದಾಮ್ಲೆ ತಕ್ಷಣ ಮಹಾರಾಜರ ಬಳಿ ಓಡಿದ ಮಹಾರಾಜರು ಸತ್ಯ ಏನೆಂದು ತಿಳಿಯಲು ಮಂದಿರದೊಳಗೆ ಬಂದರು ನೋಡುತ್ತಾರೆ ರಾಮನ ಕಣ್ಣಲ್ಲಿ ಅಶುಧಾರೆ ಮಹಾರಾಜರ ಹೃದಯ ತುಂಬಿ ಬಂತು ಅವರು ರೇಷ್ಮೆ ವಸ್ತ್ರದಿಂದ ಅದನ್ನು ಒರೆಸಿದರು ಆದರೂ ನೀರು ಒಸರುತ್ತಲೇ ಇತ್ತು ಆಗ ಮಹಾರಾಜರು ರಾಮನನ್ನು ಕುರಿತು "ಓ ನನ್ನ ಪ್ರೀತಿಯ ರಾಮ, ನನಗೆ ಖಾಯಲೆ ಬಂತೆಂದು ನೀನು ಅಳುತ್ತಿದ್ದೀಯೆ ನಾನು ಬಹಳ ಬೇಗ ಗುಣಮುಖನಾಗುತ್ತೇನೆ" ಹೀಗೆ ಹೇಳಿ ಪದೇ ಪದೇ ವಿಗ್ರಹದ ಕಣ್ಣೀರನ್ನು ಒರೆಸಿದರು ಆದರೆ ಅದು ನಿಲ್ಲಲಿಲ್ಲ ಈ ಸಮಾಚಾರ ಊರಿನ ಜನಕ್ಕೆಲ್ಲಾ ಹರಡಿತು ನೂರಾರು ಜನ ರಾಮಮಂದಿರಕ್ಕೆ ನುಗ್ಗಿದರು ಎಲ್ಲರೂ ಈ ಅಲೌಕಿಕ ಘಟನೆಯನ್ನು ಸ್ಪಷ್ಟವಾಗಿ ಕಂಡರು ಈ ಸಂದರ್ಭದಲ್ಲಿ ಮಹಾರಾಜರು ನಗುತ್ತಾ ಅಲ್ಲೇ ಇದ್ದ ಕೇಲ್ಕರ್ ಎಂಬ ಇಂಜಿನಿಯರೊಬ್ಬರನ್ನು ಕೇಳಿದರು - "ಸರ್ ನೀವೊಬ್ಬ ಎಂಜಿನಿಯರ್, ವಿಗ್ರಹದ ಹಿಂದೆ ನೀರಿನ ಸೆಲೆ ಇದೆಯೆ ಎಂದು ಪರೀಕ್ಷಿಸಿ" ಇಪ್ಪತ್ತು ನಿಮಿಷಗಳ ನಂತರ ನೀರು ಸುರಿಯುವುದು ನಿಂತುಹೋಯಿತು ನಂತರ ಮಹಾರಾಜರು ಈ ಘಟನೆ ಕುರಿತು ಜನರಿಗೆ ವಿವರಿಸಿದರು "ಇದನ್ನು ಪವಾಡ ಎಂದು ಯಾರೂ ಭಾವಿಸಬೇಕಾಗಿಲ್ಲ ಭಗವಂತನನ್ನು ಸಚ್ಚಿದಾನಂದ ಎನ್ನುತ್ತೇವಲ್ಲವೆ? ಚಿತ್ ಎಂದರೆ ಸಜೀವ ಎಂದರ್ಥ ದೇವರು ಎಲ್ಲೆಲ್ಲೂ ಇದ್ದಾನೆ ಜಡವಸ್ತುವಿನಲ್ಲೂ ಭಕ್ತ ತನ್ನ ಶ್ರದ್ಧೆಯನ್ನು ಇರಿಸಿದಾಗ ಅಲ್ಲಿಯೂ ಈ ಚಿತ್ ಪ್ರಕಟವಾಗುತ್ತದೆ ಮೂರ್ತಿ ಸಜೀವ ಮೂರ್ತಿಯಾಗುತ್ತದೆ; ಮನುಷ್ಯ ಸಹಜ ಸ್ವಭಾವಗಳನ್ನು ಪರರಕಟಿಸುತ್ತದೆ ಶ್ರದ್ಧೆ ಎಂಬುದು ಇಂತಹ ಸ್ವಭಾವಗಳನ್ನು ಪ್ರಕಟಿಸುತ್ತದೆ ಶ್ರದ್ಧೆ ಎಂಬುದು ಇಂತಹ ಅದ್ಭುತ ಸಾಕಾರಗೊಳ್ಳುವಂತೆ ಮಾಡುತ್ತದೆ ಸಾಧನೆಗೆ ಪ್ರಾರಂಭವಾಗುವುದೇ ದೇವರ ನಾಮದ ಮೇಲಿರುವ ಶ್ರದ್ಧೆಯಿಂದ ಈ ಶ್ರದ್ಧೆ ಬೃಹತ್ತಾಗಿ ಬೆಳೆದು ದೇವರು ಸರ್ವವ್ಯಾಪಿ ಎಂಬುದನ್ನು ಮನದಟ್ಟು ಮಾಡಿಕೊಡುತ್ತದೆ ಎಲ್ಲಿ ಶ್ರದ್ಧೆ ಇದೆಯೋ ಅಲ್ಲಿ ದೇವರು ಇದ್ದೇ ಇರುತ್ತಾನೆ.

ಅಜಪ ಜಪ
    ಒಂದು ದಿನ ಮಹಾರಾಜರು ತಡವಾಗಿ ನದಿ ತೀರಕ್ಕೆ ತೆರಳಿ ಸ್ನಾನ ಮಾಡುತ್ತಿದ್ದರು. ಕಾಶಿತಾಯಿ ಎಂಬ ಅವರ ಭಕ್ತೆಯೊಬ್ಬಳು ಮಹಾರಜರಿಗೆ ನಮಸ್ಕರಿಸಲು ಅವರನ್ನು ಹುಡುಕಿಕೊಂಡು ನದಿ ತೀರಕ್ಕೆ ಬಂದಳು ಅನಿರೀಕ್ಷಿತವಾಗಿ ಮಹಾರಾಜರು ಕಾಶಿತಾಯಿಗೆ ಹೇಳಿದರು "ನೀನು ನಿನ್ನ ಕಿವಿಯನ್ನು ನನ್ನ ಎದೆಯ ಮೇಲಿಟ್ಟು ಆಲಿಸು ನಿನಗೆ ಏನು ಕೇಳಿಸುತ್ತಿದೆ ಹೇಳು." ಹೀಗೆ ಕೇಳಿಸಿಕೊಂಡ ಕಾಶಿತಾಯಿ, ಆಶ್ಚರ್ಯಚಕಿತಳಾಗಿ ಹೇಳಿದಳು - "ನಿಮ್ಮ ಎದೆಯಿಮದ ಶ್ರೀರಾಂ ಜೈರಾಮ್, ಜಯ ಜಯ ರಾಂ ಮಂತ್ರ ನಿರಂತರವಾಗಿ ಮಿಡಿಯುತ್ತಿದೆ." ಆಗ ಮಹಾರಾಜರು ಹೇಳಿದರು "ನೀನೂ ಸಹ ಜಪವನ್ನು ತೀವ್ರವಾಗಿ ಮಾಡಿದ್ದೇ ಆದರೆ ಅದು ನಿನ್ನ ಚರ್ಮದ ಆಳಕ್ಕೆ ಇಳಿದು ಮನಸ್ಸಿನ ಒಳಪದರಗಳಲ್ಲಿ ಸೇರಿ ಹೋಗುವುದು ಈ ಮಂತ್ರವು ನಂತರ ನಿನ್ನ ಹೃದಯದಲ್ಲೂ ಸ್ಥಿರವಾಗಿ ನೆಲೆಸುವುದು ಈ ಸ್ಥಿತಿಯೇ ನಿಜವಾದ ಆಂತರಿಕ ವಿಶ್ರಾಂತಿ"

    ಒಮ್ಮೆ ದಹಿವಾಡದಿಂದ ಪೋಸ್ಟ್ ಮಾಸ್ಟರ್ ಒಬ್ಬರು ತಮ್ಮ ಜೊತೆಯಲ್ಲಿ ಮುನ್ಸಿಫ್‌ರೊಬ್ಬರನ್ನು ಕರೆತಂದಿದ್ದರು ಧಾರಾಕಾರದ ಮಳೆಯಿಂದಾಗಿ ಅವರು ಹಿಂದಿರುಗಲಾಗಲಿಲ್ಲ ಅಂದು ರಾತ್ರಿ ಮಹಾರಾಜರು ಒಬ್ಬರೇ ಇರುವ ಸಮಯದಲ್ಲಿ ಅವರನ್ನು ಕಂಡು ಜಪ ಮಾಡುವ ವಿಧಾನವನ್ನು ತಿಳಿಸಿಕೊಡಬೇಕೆಂದು ಕೇಳಿದರು ಮಹಾರಾಜರು ತಮ್ಮ ಕೈಯನ್ನು ಚಾಚಿ ಕಿವಿಯನ್ನು ತಮ್ಮ ಹಸ್ತದ ಮೇಲಿಟ್ಟು ಆಲಿಸಲು ಹೇಳಿದರು ನಂತರ ಕಿವಿಯನ್ನು ತಮ್ಮ ತಲೆಯ ಮೇಲೆ ಎದೆಯ ಮೇಲೆ ಮತ್ತು ಪಾದದ ಮೇಲೆ ಇಟಟು ಆಲಿಸುವಂತೆ ಹೇಳಿದರು ಅವರಿಬ್ಬರೂ ಮಹಾರಾಜರ ದೇಹದ ಎಲ್ಲಾ ಭಾಗಗಳಲ್ಲೂ ರಾಮಮಂತ್ರ ಮಿಡಿಯುತ್ತಿದ್ದುದನ್ನು ಕೇಳಿಸಿಕೊಂಡರು ಮಹಾರಾಜರು ಹೇಳಿದರು - "ಇದೇನೂ ಪವಾಡವಲ್ಲ, ನಮ್ಮ ಗ್ರಂಥಗಳಲ್ಲಿ ಇದನ್ನು ಅಜಪ-ಜಪ ಎನ್ನುತ್ತಾರೆ ಒತ್ತಾಯಕ್ಕೆ ಮಾಡುವ ಜಪ ಆಯಾಸ ಉಂಟುಮಾಡುವುದು ಆದರೆ ನಾಮದ ರುಚಿ ಕಂಡುಕೊಂಡು ಪ್ರೀತಿಯಿಮದ ಮಾಡಿದರೆ ಅದರಿಂದ ನಿರಂತರ ಜಪದ ಸಹಜ ಸ್ಥಿತಿ ಉಂಟಾಗುತ್ತದೆ ಮೊದಲ ಹಂತಗಳಲ್ಲಿ ಜಪದ ಮೇಲೆ ಆಸಕ್ತಿ ಉಂಟಾಗದಿರಬಹದು ಆದರೆ ಬಿಡದೆ ಜಪ ಮುಂದುವರೆಸಿದರೆ ಅದರಲ್ಲಿ ರುಚಿ ಹುಟ್ಟುತ್ತದೆ ಶ್ರದ್ಧಾ ಭಕ್ತಿಗಳಿಂದ ನಿಗ್ರಹದಿಂದ ಜಪದ ಮೇಲೆ ಹಿಡಿತ ಸಾದಿಸಿ ನಿನ್ನನ್ನೇ ನೀನು ಮರೆತುಬಿಡುವ ಅಮನಸ್ಕ ಸ್ಥಿತಿ ಉಂಟಾಗುತ್ತದೆ ಈ ಸ್ಥಿತಿಯಲ್ಲಿ ನೀನು ಭಗವಂತನ ಬಾಗಿಲನ್ನು ಬಲವಾಗಿ ತಟ್ಟುತ್ತೀಯ ಬಾಗಿಲು ವಿಶಾಲವಾಗಿ ತೆರೆದುಕೊಳ್ಳುತ್ತದೆ ನೀವು ನೋಡುತ್ತಿರುವಂತೆ ನಾನು ಒಂದು ಆಧ್ಯಾತ್ಮದ ಅಂಗಡಿಯನ್ನೇ ತೆರೆದಿದ್ದೇನೆ ಎಲ್ಲಾ ನಿಮಗಾಗಿ ಅವನ ಮೇಲೆ ನೀವು ಪ್ರೀತಿ ಬೆಳೆಸಿಕೊಳ್ಳಲಿ ಎಂದು."

ಪರಿನಿರ್ಯಾಣ
    1913ರಲ್ಲಿ ಮಹಾರಾಜರು ತಮ್ಮ ಅಂತಿಮ ವಿದಾಯದ ಬಗ್ಗೆ ಸೂಕ್ಷ್ಮವಾಗಿ ಮಾತನಾಡತೊಡಗಿದರು ಜುಲೈ ತಿಂಗಳು ವ್ಯಾಸ ಪೂರ್ಣಿಮೆಯೇ ಅವರ ಜೀವನದ ಕೊನೆಯ ವ್ಯಾಸ ಪೂರ್ಣಿಮೆ ಇದನ್ನು ಅದ್ದೂರಿಯಿಂದ ಆಚರಿಸಲಾಯಿತು. ಭಕ್ತಾದಿಗಳನ್ನೆಲ್ಲಾ ಕುರಿತು ಹೀಗೆಂದರು - "ಕಾಲ ಎಲ್ಲವನ್ನೂ ನುಂಗಿ ಹಾಕಿಬಿಡುತ್ತದೆ. ಎಲ್ಲಾ ಆಕಾರಗಳೂ ಕಾಲನ ಪ್ರವಾಹದಲ್ಲಿ ಉತ್ಪತ್ತಿಯಾಗಿ ಅದರಲ್ಲೇ ಲಯವಾಗುವುದು, ಯಾರೂ ಅದರ ಚಲನೆಯನ್ನು ನಿಲ್ಲಿಸಲಾರರು ಅವತಾರಗಳೂ ಕೂಡಾ ಕಾಲನ್ಲಲಿ ಲಯವಾಗಿ ಹೋಗುತ್ತವೆ. ರಾಮನಾಗಲಿ, ಕೃಷ್ಣನಾಗಲಿ ಇಂದು ನಮಗೆ ಆಕಾರದಲ್ಲಿ ಲಭ್ಯವಿಲ್ಲ ಆದರೆ ಅವರ ಪವಿತ್ರ ನಾಮವನ್ನು ಕಾಲ ಕುಡಾ ಕುಂದಿಸಲಾರದು ಸಾಧನೆಯ ತತ್ವ ಏನೆಂದರೆ ಕಾಲಕ್ಕೆ ಅತೀತವಾಗಿ ನಿಲ್ಲುವುದು ಆದ್ದರಿಂದ ನೀವು ಕಾಲದ ಕುಲುಮೆಯಿಂದ ಹೊರಗಿರಬೇಕೆಂದು ಬಯಸಿದರೆ ನಾಮದಲ್ಲಿ ಶ್ರದ್ಧೆ ಇಡಿ. ನಾನು ಈಗ ಏನೇನು ಹೇಳಿದೆನೋ ಅದೆಲ್ಲವನ್ನೂ ಬೇಕಾದರೆ ಮರೆತು ಬಿಡಿ. ಆದರೆ ಭಗವನ್ನಾಮವನ್ನು ಮಾತ್ರ ಮರೆಯಬೇಡಿ ನಿಮಗೆಲ್ಲಾ ಭಗವದಾನಂದ ದೊರೆಯಲಿ ಎಂದು ಆಶೀರ್ವದಿಸುತ್ತೇನೆ."

    ಮಹಾರಾಜರು ಜೀವನದುದ್ದಕ್ಕೂ ನಾಮಜಪವನ್ನು ಬೋಧಿಸಿದರು ಅಂತ್ಯಕಾಲದಲ್ಲಿ ಅದನ್ನೇ ಮತ್ತಷ್ಟು ಸಮರ್ಥಿಸಿ ಹೇಳಿದರು ವಯಸ್ಸಾದಂತೆ ಅವರಿಗೆ ಅಸ್ತಮಾ ಖಾಯಿಲೆ ಉಲ್ಬಣಗೊಂಡಿತು ಅವರ ಹೃದಯ ದುರ್ಬಲವಾಯಿತು ಆದರೆ ಅವರ ದೈನಂದಿನ ಚಟುವಟಿಕೆಗಳು ಮಾತ್ರ ಎಂದಿನಂತೆಯೇ ಇತ್ತು ತಮ್ಮ ಕಾಲಾನಂತರ ಮಂದಿನ 50 ವರ್ಷಗಳು ಮನುಕುಲಕ್ಕೆ ಕ್ಲೇಶಕರವಾಗಿರುತ್ತೆಂದು ಆಗಾಗ ತಮ್ಮ ಭಕ್ತಾದಿಗಳಿಗೆ ಹೇಳುತ್ತಿದ್ದುದುಂಟು 1913 ಡೆಸೆಂಬರ್ 18ರಂದು ಭಕ್ತಾದಿಗಳಿಗೆ ಪ್ರವಚನ ನೀಡಿ ವಿನೋದವಾಗಿ ಹೇಳಿದರು - "ನೋಡಿ ನಾನು ಪರಲೋಕದ ಟ್ಟಾನ್ಸ್‌ಫರ್ ಆರ್ಡರ್‌ಗೆ ಸಹಿ ಮಾಡಿದ್ದೇನೆ ಈ ಸ್ಥಳವನ್ನು ಬಿಟ್ಟು ತೆರಳಿಲಿದ್ದೇನೆ ನೀವೆಲ್ಲರೂ ನನಗೆ ಅದ್ದೂರಿಯ ಬೀಳ್ಕೊಡುಗೆ ನೀಡಬೇಕು ಆದರೆ ನಾನು ತೆರಳಿದ ಮೇಲೆ ಭಗವನ್ನಾಮವನ್ನು ಮಾತ್ರ ಮರೆಯಬೇಡಿ" ನಂತರ ಕೇತ್ಕರ್ ಎಂಬ ತಮ್ಮ ಅನುಯಾಯಿಗೆ ತಾವು ಸೋಮವಾರ ಬೆಳಿಗ್ಗೆ (22 ಡಿಸೆಂಬರ್) ಇಹಲೋಕವನ್ನು ತ್ಯಜಿಸುವುದಾಗಿ ತಿಳಿಸಿದರು ನಂತರ 20ನೇ ತಾರೀಖು ಶನಿವಾರ ತಮ್ಮ ಮಾವನಿಗೆ (ಕುರುಡು ಹೆಂಡತಿಯ ತಂದೆ) ಹೇಳಿದರು "ಬಾಪೂ, ಮೃತ್ಯು ನನ್ನನ್ನು ಸಮೀಪಿಸಿದೆ ನಾನು ಸದ್ಯದಲ್ಲೇ ತೆರಳಲಿದ್ದೇನೆ" ಪಾಪ ಆ ಮುದುಕ ಹೇಳಿದ "ನನ್ನ ಮಗಳು ಇನ್ನೂ ಚಿಕ್ಕವಳು."
    21ನೇ ತಾರೀಖು ಭಾನುವಾರ ಮಹಾರಾಜರು ತಮ್ಮ ದನದ ಕೊಟ್ಟಿಗೆಯ ಬಳಿ ಹೋಗಿ ಅಲ್ಲಿದ್ದ ಭಾವನರಾವ ಎಂಬುವರಿಗೆ ಹೇಳಿದರು - "ಭಾವನಾರಾವ್ ಈ ಸ್ಥಳವನ್ನು ಸ್ವಚ್ಛಮಾಡು ನಾಳೆಯಿಮದ ನಾನು ಇಲ್ಲೇ ಇರಲು ಬರುತ್ತೇನೆ" ಇಂದು ಮಹಾರಾಜರ ಸಮಾಧಿ ಇರುವುದು ಈ ಸ್ಥಳದಲ್ಲೇ.

    21ರ ಭಾನುವಾರ ಸಂಜೆ ಮಹಾರಜರು ಭಕ್ತಾದಿಗಳಿಗೆಲ್ಲ ದೊಡ್ಡ ಪ್ರವಚನ ನೀಡಿದರು ಕ್ಷಣಿಕ ಪ್ರಾಪಂಚಿಕತೆಯ ಬಗ್ಗೆ ತಿಳಿಯ ಹೇಳಿದರು ನಂತರ ನಾಮೋಚ್ಛಾರಣೆ ಮಾಡಲು ಹೇಳಿ ನಾಳೆ ನಿಮಗೆ ನಾಮ ಉಚ್ಚರಿಸಿ ಎಂದು ಹೇಳಲು ನಾನು ಇರುವುದಿಲ್ಲ ಇದೇ ನನ್ನ ಕಡೆಯ ಮಾತು ಎಂದು ತಿಳಿಸಿದರು ರಾತ್ರಿ 1-30ಕ್ಕೆ ಮಲಗಿ ಬೆಳಗ್ಗೆ 4-30ಕ್ಕೆ ಎದ್ದು ಸ್ನಾನ ಮಾಡಿ 5-15ರ ವೇಳೆಗೆ ಮಂದಿರ ಪ್ರವೇಶಿಸಿದರು ರಾಮನ ಮುಂದೆ ನಿಂತು - "ಓ ರಾಮ, ನಿನ್ನ ನಾಮಸ್ಮರಣೆ ಮಾಡುವ ಜೀವಿಗಳನ್ನು ರಕ್ಷಿಸು" ಎಂದು ಹೇಳಿ ಎದ್ದು ತಮ್ಮ ಕೋಣೆಯ ಕಡೆ ನಡೆದರು ಸಮೀಪದಲ್ಲೇ ಇದ್ದ ವಾಮನರಾವ್ ಮಹರಾಜರ ಕಾಲಿಗೆ ನಮಸ್ಕರಿಸಿದರು ಮಹಾರಾಜರು ವಾಮನರಾವ್ ಅವರ ತಲೆಯ ಮೇಲೆ ಕೈ ಇರಿಸಿ ಹೇಳಿದರು - "ನಾಮ ಸ್ಮರಣೆಯೇ ನನ್ನ ಜೀವನ; ಎಲ್ಲಿ ಭಗವನ್ನಾಮ ಸ್ಮರಣೆ ನಡೆಯುತ್ತದೆಯೊ, ಅಲ್ಲಿ ನಾನಿದ್ದೇನೆಂದು ಭಾವಿಸು." ಇವೇ ಮಹಾರಾಜರ ಕೊನೆಯ ಮಾತುಗಳು ನಂತರ ಅವರು ತಮ್ಮ ಹಾಸಿಗೆಯ ಮೇಲೆ ಕುಳಿತರು ಆಗ ವೇಳೆ ಬೆಳಗಿನ 5-30 ಆಗಿತ್ತು 5 ನಿಮಿಷಗಳ ಕಾಲ ಬಿರುಸಾದ ಉಸಿರಾಟ ನಡೆದಂತೆ ಕಂಡಿತು 'ಶ್ರೀರಾಮ್' ಎಂಬ ಕೊನೆಯ ಮಾತುಗಳು ಕೇಳಿಸಿತು ಮಹಾರಜರು ದೈವಾಧೀನರಾದರು.
    ಗೋಂದಾವಲಿಯ ಈ ಮಹಾತ್ಮ 1844 ರಿಂದ 1913ರ ವರೆಗೆ ಅದ್ಭುತವಾದ ಆಧ್ಯಾತ್ಮಿಕ ಜೀವನ ನಡೆಸಿದರು ಅವರು ತಮ್ಮ ಸಾಧನಾ ಜೀವನದ ಬಗ್ಗೆ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಂತೆ ಕಾಣುವುದಿಲ್ಲ ಈ ಪ್ರಪಂಚದ ಮಕ್ಕಳಾಟಿಕೆಯಿಂದ ಬಹು ಎತ್ತರದಲ್ಲೇ ನಿಂತಿದ್ದರೂ ಸಾಧಾರಣ ಜೀವನದ ನೋವು-ನಲಿವುಗಳಿಗೆ ಸಹಜವಾಗಿ ಸ್ಪಂದಿಸುತ್ತಿದ್ದರು ಅವರ ಆಧ್ಯಾತ್ಮ ಜೀವನ, ಪ್ರೀತಿಯನ್ನೊಳಗೊಂಡ ಆಧ್ಯಾತ್ಮವಾಗಿತ್ತು ಅವರ ದೇಹತ್ಯಾಗದ ಒಂದೆರಡು ದಿನಗಳಿಗೆ ಮುಂಚೆ ಕುಡಾ ಕುದುರೆ ಸವಾರಿ ಮಾಡಿದರು ಜೀನವದುದ್ದಕ್ಕೂ ತಮ್ಮ ಬಂಧು ಬಾಂಧವರನ್ನು ತಮ್ಮ ತಾಯಿ ಹೆಂಡತಿಯನ್ನು ಅತ್ಯಂತ ಪ್ರೀತಿಯಿಂದ ಆತ್ಮೀಯವಾಗಿ ಕಂಡರು ಗೋಂದಾವಲಿ ಮಹಾರಾಜರ ಜೀವನವನ್ನು ಸಮಗ್ರವಾಗಿ ತಿಳಿದವರಿಗೆ ಆಧ್ಯಾತ್ಮವೇ ಬೇರೆ ದಿನನಿತ್ಯದ ಜೀವನವೇ ಬೇರೆ ಎಂಬ ಭ್ರಮೆ ಹೊರಟುಹೋಗುತ್ತದೆ ಯಾವ ಆಧ್ಯಾತ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಹೋಗುವುದಿಲ್ಲವೋ ಅದು ಆಧ್ಯಾತ್ಮವೇ ಅಲ್ಲ ಅವರ ಉಸಿರಾಟದ ಪ್ರತಿಯೊಂದು ಏರಿಳಿತಗಳೂ ಭಗವನ್ನಾಮ ಸ್ಮರಣೆಯಲ್ಲದೆ ಬೇರೆ ಆಗಿರಲಿಲ್ಲ ಈ ಬಗೆಯ ಆಧ್ಯಾತ್ಮಿಕ ಜೀವನದೃಷ್ಟಿಯೇ ಅವರ ಜೀವನದ ಪರಮ ಸಂದೇಶ.


   

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ