ರುದ್ರಭಾಷ್ಯಪ್ರಕಾಶ - 6ನೇ ಅನುವಾಕ (ಸಂಪೂರ್ಣ)

ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ
ರುದ್ರಾಧ್ಯಾಯದ ಆರನೆಯ ಅನುವಾಕವನ್ನು ಈಗ ನಾವು ವಿಚಾರ ಮಾಡಬೇಕಾಗಿದೆ:

    ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮಃ ಪೂರ್ವಜಾಯ ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಭಾಯ ಚ ನಮೋ ಜಘನ್ಯಾಯ ಚ ಬುಧ್ನಿಯಾಯ ಚ ನಮಃ ಸೋಭ್ಯಾಯ ಚ ಪ್ರತಿ ಸರ್ಯಾಯ ಚ ನಮೋ ಯಾಮ್ಯಾಯ ಚ ಕ್ಷೇಮ್ಯಾಯ ಚ ನಮ ಉರ್ವರ್ಯಾಯ ಚ ಖಲ್ಯಾಯ ಚ ನಮಃ ಶ್ಲೋಕ್ಯಾಯ ಚಾವಸಾನ್ಯಾಯ ಚ ನಮೋ ವನ್ಯಾಯ ಚ ಕಕ್ಷ್ಯಾಯ ಚ ನಮಃ ಶ್ರವಾಯ ಚ ಪ್ರತಿಶ್ರವಾಯ ಚ
   
    'ಜ್ಯೇಷ್ಠನಿಗೂ ಕನಿಷ್ಠನಿಗೂ ಪೂರ್ವಜನಿಗೂ ಅಪರಜನಿಗೂ ಮಧ್ಯಮನಿಗೂ ಅಪಗಲ್ಭನಿಗೂ ಜಘನ್ಯನಿಗೂ ಬುಧ್ನಿಯನಿಗೂ ಸೋಭ್ಯನಿಗೂ ಪ್ರತಿಸರ್ಯನಿಗೂ ಯಾಮ್ಯನಿಗೂ ಕ್ಷೇಮ್ಯನಿಗೂ ನಮಸ್ಕಾರವು ಮತ್ತು ಉರ್ವರ್ಯನಿಗೂ ಖಲ್ಯನಿಗೂ ಶ್ಲೋಕ್ಯನಿಗೂ ಅವಸಾನ್ಯನಿಗೂ ವನ್ಯನಿಗೂ ಕಕ್ಷ್ಯನಿಗೂ ಶ್ರವನಿಗೂ ಪ್ರತಿಶ್ರವನಿಗೂ ನಮಸ್ಕಾರ!'

    ಮೇಲಿನ ಅನುವಾಕದಲ್ಲಿರುವ ಒಂದೆರಡು ಶಬ್ಧಗಳು ಹೊರತು ಉಳಿದ ಎಲ್ಲಾ ಶಬ್ದಗಳೂ ವೈದಿಕ (ವೇದಸಂಬಂಧ)ವಾದ್ದರಿಂದ ಭಾಷ್ಯಾಧಾರದಿಂದಲೇ ಇವುಗಳ ಅರ್ಥವನ್ನು ತಿಳಿದುಕೊಳ್ಳಬೇಕಾಗಿದೆ ಎಲ್ಲವೂ ಪರಮೇಶ್ವರನ ಸ್ತುತಿಯೆಂಬುದೇನೋ ಸರಿ ಆದರೆ ಅರ್ಥವಿಲ್ಲದ ಸ್ತುತಿಯು ಇರಲಾರದಷ್ಟೆ! ಆದ್ದರಿಂದ ಇಲ್ಲಿರುವ ಪ್ರತಿಯೊಮದು ಪದದ ಅರ್ಥವನ್ನೂ ತಿಳಿದು ಅನು ಸಂಧಾನಮಾಡುವದು ಅವಶ್ಯವಾಗಿರುತ್ತದೆ ಮತ್ತು ಕೆಲವು ಒಂದಕ್ಕೊಂದು ವಿರುದ್ಧ ಪದಗಳೂ ಇವೆ ಇವೆಲ್ಲ ಒಬ್ಬನೇ ಪರಮೇಶ್ವರನ ಸ್ತುತಿಯು ಆದೀತೆ? ಎಂದೂ ಸಂಶಯವಾಗುತ್ತದೆ. ಉದಾಹರಣೆಗೆ : ಆರಂಭದಲ್ಲೇ ಇರುವ ಜ್ಯೇಷ್ಠ ಕನಿಷ್ಠ - ಎಂಬ ವಿಶೇಷಣಗಳು ಜ್ಯೇಷ್ಠನೆಂದರೆ ಹಿರಿಯವನು ಕನಿಷ್ಠನೆಂದರೆ ಕಿರಿಯವನು ಎರಡೂ ಒಬ್ಬನೇ ಹೇಗೆ? ಎಂದು ಸಂದೇಹವುಂಟಾಗುವದು ಆದ್ದರಿಂದ ಈಗ ಎಲ್ಲಾ ವಿಶೇಷಣಗಳ ಅಭಿಪ್ರಾಯವನ್ನೂ ಬಿಡಿಸಿ ನೋಡೋಣ.

    ಜ್ಯೇಷ್ಠನೆಂದರೆ ಎಲ್ಲರಿಗಿಂತಲೂ ಹಿರಿಯನೆಂದರ್ಥ ವಯಸ್ಸು, ವಿದ್ಯೆ, ಆಶ್ರಮ - ಇವುಗಳೆಲ್ಲದರಿಂದಲೂ ಹಿರಿಯನು ಪರಮೇಶ್ವರನು ಕನಿಷ್ಠನೆಂದರೆ ಕಡಿಮೆಯವನು ಈ ಎರಡೂ ರೂಪವಾಗಿ ಮಹಾದೇವನೇ ಇದ್ದು ಕೊಂಡಿರುವನು ಎಂದರ್ಥ. ಲೋಕದಲ್ಲಿ ಯಾವನಾದರೊಬ್ಬನಿಗೆ ಒಬ್ಬನೇ ಮಗನಿದ್ದರೆ 'ನಿಮ್ಮ ಹಿರಿಯ ಮಗ ಯಾರು' ಎಂದು ಯಾರಾದರೂ ಕೇಳಿದರೆ 'ಇವನೇ' ಎಂದು ತೋರಿಸುತ್ತಾನೆ. 'ಕಿರಿಯ ಮಗ ಯಾರು' ಎಂದಾಗಲೂ ಅವನನ್ನೇ ತೋರಿಸುತ್ತಾನಲ್ಲವೆ? ಏಕೆಂದರೆ ಇರುವವನೇ ಒಬ್ಬ ಮಗನಲ್ಲವೆ? ಹಾಗೆಯೇ ಇರುವ ಒಬ್ಬನೇ ಪರಮೇಶ್ವರನೇ ಉಪಾದಿಭೇದದಿಂದ ಹಿರಿಯನಾಗಿಯೂ ಕಿರಿಯನಾಗಿಯೂ ತೋರಿಕೊಳ್ಳುತ್ತನೆ ಜ್ಞಾನದೃಷ್ಟಿಯಿಂದ ನೋಡಿದಾಗ ಎಲ್ಲರಲ್ಲೂ ಒಬ್ಬನೇ ದೇವನಿರುವನು - ಎಂದರ್ಥ ಕೆಲವು ಸಾಲಿಗ್ರಾಮಗಳು ದಪ್ಪನಾಗಿ ದೊಡ್ಡದಾಗಿರುತ್ತವೆ ಕೆಲವು ಚಿಕ್ಕದಾಗಿರುತ್ತವೆ ಆದರೂ ಎಲ್ಲವೂ ವಿಷ್ಣವೇ ಅಲ್ಲವೆ? ಹಾಗೆಯೇ ಜ್ಯೇಷ್ಠಕನಿಷ್ಠಗಳೆಂಬಿವೆರಡೂ ಪರಮೇಶ್ವರನೇ ಎಂದು ತಿಳಿಯಬೇಕು.

    ಪೂರ್ವಜನೆಂದರೆ ಮೊದಲು ಹುಟ್ಟಿದವನು ಅಪರಜನೆಂದರೆ ಅನಂತರ ಹುಟ್ಟಿದವನು ಸಾಮಾನ್ಯವಾಗಿ ಕಾರಣವು ಮೊದಲು ಕಾರ್ಯವು ಅನಂತರವೂ ತೋರಿಕೊಳ್ಳುತ್ತದೆ. ಉದಾಹರಣೆಗೆ ಹಾಲು ಮೊದಲು ಇದ್ದುಕೊಂಡಿರುವದು ಅದೇ ಅನಂತರ ಮೊಸರಾಗುವದು ಹೀಗೆ ಕಾಲದಲ್ಲಿ ಪರಿಣಾಮವಾಗುವ ಕಾರ್ಯಕಾರಣಗಳೆಂಬ ರೂಪದಿಂದ ಜಗತ್ತಿನಲ್ಲಿ ಕಂಡುಬರುತ್ತಿರುವ ಎಲ್ಲಾ ವಸ್ತುಗಳೂ ಪರಮೇಶ್ವರನೇ ಎಂದರ್ಥ ತಂದೆ ಮಕ್ಕಳನ್ನೂ ಈ ಸಂಧರ್ಭದಲ್ಲಿ ಉದಾಹರಿಸಬಹದು ಜಗತ್ಇಗೆಲ್ಲ ತಂದೆಯಾಗಿರುವ ಸೃಷ್ಟಿಗಿಂತಲೂ ಮೊದಲೇ ಇರುವ ಪರಮೇಶ್ವರನು ಪೂರ್ವಜನು ಅನಂತರ ಸೃಷ್ಟಿಕಾಲದಲ್ಲಿ ಜೀವಾತ್ಮರೂಪದಿಂದ ನಾನಾಶರೀರಗಳಲ್ಲಿ ತೋರಿಕೊಳ್ಳುವ ಅಪರಜನೂ ಅವನೇ ಎಂದರ್ಥ ಹಾಗೆಯೇ ಜೀವನದಲ್ಲಿ ಪ್ರತಿಯೊಬ್ಬನೂ ಬಾಲ್ಯ, ಯೌವನ, ವಾರ್ಧಕ್ಯಗಳನ್ನು ಅನುಭವಿಸಬೇಕಾಗಿದೆಯಷ್ಟೆ! ಯೌವನವೇ ಮಧ್ಯಮ ವಯಸ್ಸು; ಅಂಥ ವಯಸ್ಸಿನವನನ್ನು ಮಧ್ಯಮನೆಂದು ಕರೆದಿದೆ ಅಪಗಲ್ಭನೆಂದರೆ ಬಾಲಕನು ಇಂದ್ರಿಯಗಳು ಇನ್ನೂ ಬಲಿತುಕೊಳ್ಳದವನು - ಎಂದಭಿಪ್ರಾಯ ಇವರೆಲ್ಲರೂ ಪರಮೇಶ್ವರನ ಸ್ವರೂಪರೇ ಆಗಿರುತ್ತಾರೆ ಜಘನ್ಯನೆಂದರೆ ಹಿಂಭಾಗದಲ್ಲಿ (ಕೊನೆಯಲ್ಲಿ) ಹುಟ್ಟುವವನು ಬುಧ್ನ್ಯನೆಂದರೆ ಬುಡದಲ್ಲಿ ಹುಟ್ಟುವವನು ಕೆಲವು ಪೈರುಗಳು ಗೆಣಸು, ಕಡಲೆಕಾಯಿ, ಏಲಕ್ಕಿ - ಮುಂತಾದವುಗಳು ಗಿಡದ ಬುಡದಲ್ಲೇ ಹುಟ್ಟುವವು ಮಾವಿನ ಹಣ್ಣು ಸೀಬೆಹಣ್ಣು, ತೆಂಗಿನಕಾಯಿ ಇವು ತುದಿಯಲ್ಲಿ ಹುಟ್ಟುವವು ಆದರೆ ಎಲ್ಲವೂ ಪರಮೇಶ್ವರನ ಸ್ವರೂಪವೇ ಎಂದರ್ಥ.
    ಸೋಭ್ಯನೆಂದರೆ ಸೋಭದಲ್ಲಿ ಹುಟ್ಟುವವನು ಸೋಭವೆಂದರೆ ಉಭ-ಪಾಪಪುಣ್ಯಗಳೆರಡರಿಂದಲೂ ಸ-ಕೂಡಿದ್ದು; ಮನುಷ್ಯಲೋಕವೆಂದರ್ಥ ಈ ಮನುಷ್ಯಲೋಕದಲ್ಲಿ ಹುಟ್ಟಿರುವ ಎಲ್ಲಾ ವಸ್ತುಗಳ ಎಂದರೆ ಚೇತನಾಚೇತನಗಳ ರೂಪದಲ್ಲಿರುವವನು ಸೋಭ್ಯನು - ಎಂದರ್ಥ ಪ್ರತಿಸರ್ಯನೆಂದರೆ ಪ್ರತಿರತಿ - ಗಚ್ಛತಿ (ಓಡಾಡುತ್ತದೆ) ಎಂಬರ್ಥದಲ್ಲಿ ಎಲ್ಲಾ ಜಂಗಮಪ್ರಾಣಿಗಳನ್ನೂ ತೆಗೆದುಕೊಳ್ಳಬೇಕು ಆಯಾ ಪ್ರಾಣಿಗಳ ರೂಪದಲ್ಲಿರುವವನು ಎಂದರ್ಥ ಪರಮೇಶ್ವರನ ಶರೀರಗಳನ್ನು ಸ್ಥಾವರ - ಜಂಗಮಗಳೆಂದು ವಿಂಗಡಿಸುತ್ತಾರೆ ಅವುಗಳಲ್ಲಿ ಜಂಗಮಗಳು ಶ್ರೇಷ್ಠವೆಂದು ಬಲ್ಲವರ ಅಭಿಪ್ರಾಯ ವೀರಶೈವರಲ್ಲಿ ಪೂಜ್ಯರಾದವರನ್ನು ಜಂಗಮರು, ಚರಮೂರ್ತಿಗಳು ಎಂದು ಕರೆಯುತ್ತಾರೆ ಪರಮೇಶ್ವರನೇ ಆ ರೂಪದಲ್ಲಿ ತೋರಿಕೊಂಡಿದ್ದಾನೆ ಎಂಬುದು ಅಭಿಪ್ರಾಯ ಹೀಗೆ ಪ್ರತಿಸರ್ಯನೆಂದರೆ ಎಲ್ಲಾ ಜಂಗಮಪ್ರಾಣಿಗಳ ರೂಪದಲ್ಲಿರುವವನು ಎಂದು ತಾತ್ಪರ್ಯ ಯಾಮ್ಯನೆಂದರೆ ಯಮಲೋಕದಲ್ಲಿರುವವನು ಕ್ಷೇಮ್ಯನೆಂದರೆ ಸ್ವರ್ಗಲೋಕದಲ್ಲಿರುವವನು ಯಮನಾಗಿ ಪ್ರಜೆಗಳನ್ನು ಶಿಕ್ಷಿಸುವವನೂ ದೇವೇಂದ್ರನಾಗಿ ತ್ರೈಲೋಕ್ಯವನ್ನೆಲ್ಲ ಆಳುತ್ತಿರುವವನೂ ಪರಮೇಶ್ವರನೇ - ಎಂದರ್ಥ.
   
    ಉರ್ವರ್ಯನೆಂದರೆ ಭೂಮಿಯಲ್ಲಿರುವವನು ಉರ್ವರಾ ಎಂದರೆ ಸಕಲವಿಧವಾದ ಸಸ್ಯಸಮೃದ್ಧಿಯಿಂದ ಕೂಡಿದ ಭೂಮಿಯು ವ್ಯವಸಾಯದ ಭೂಮಿಯು ಪೈರಿನಿಂದ ಕಂಗೊಳಿಸುತ್ತಿರುವಾಗ ನೋಡಿದರೆ ಎಷ್ಟು ಆನಂದವಾಗುತ್ತದೆ? ಮಲೆನಾಡುಪ್ರದೇಶಗಳಲ್ಲಿ ಇಂಥ ಧಾನ್ಯಸಂಯುಕ್ತವಾದ ಭೂಮಿಯನ್ನು ಪೂಜಿಸಿ 'ಧಾನ್ಯಶಂಕರನ ಹಬ್ಬ'ವೆಂಬ ಒಂದು ಉತ್ಸವವನ್ನೂ ಆಚರಿಸುತ್ತಾರೆ ನಿಜವಾಗಿ ನೋಡಿದರೆ ಪೈರುಗಳು ಭಗವಂತನ ವಿಭೂತಿಗಳಾಗಿದ್ದು ಮನುಷ್ಯನನ್ನೂ ಪ್ರಾಣಿಗಳನ್ನೂ ಪೋಷಿಸುವದಾಗಿದೆ ಇಂಥ ಪೈರುಪಚ್ಚೆಗಳನ್ನು ಕಂಡಾಗಲ್ಲೆಲ್ಲ ಉರ್ವರ್ಯನಾದ ಭಗವಂತನ ನೆನಪುಮಾಡಿಕೊಳ್ಳಬೇಕು ಖಲ್ಯನೆಂದರೆ ಕಣದಲ್ಲಿವಾಸಿಸುವವನು ಎಂದರ್ಥ ಧ್ಯಾನ್ಯಗಳನ್ನು ಒಕ್ಕಣೆಮಾಡುವ ಜಾಗವನ್ನು ಖಲವೆಂದು ಕರೆಯುವರು ಅಲ್ಲಿರುವವನೂ ಪರಮೇಶ್ವರನೇ ಎಂದಭಿಪ್ರಾಯ ಶ್ಲೋಕ್ಯನೆಂದರೆ ಶ್ಲೋಕಗಳಿಂದ ಪ್ರತಿಪಾದ್ಯನು ವೇದಮಂತ್ರಗಳನ್ನು ಶ್ಲೋಕಗಳೆಂದೂ ಕರೆಯುತ್ತಾರೆ. 'ತದಷ್ಯೇಷ ಶ್ಲೋಕೋ ಭವತಿ' ಎಂಬ ವಾಕ್ಯವು ಉಪನಿಷತ್ತಿನಲ್ಲಿ ಕಂಡುಬರುತ್ತದೆ ಇಂಥ ಶ್ಲೋಕಗಳಿಂದ ತಿಳಿಸಲ್ಪಡುವವನು ಪರಮೇಶ್ವರನೇ ಎಂದರ್ಥ ಅವಸಾನ್ಯನೆಂದರೆ ವೇದಾಂತಪ್ರತಿಪಾದ್ಯನೆಂದೇ ಅರ್ಥ ಅವಸಾನ ಎಂದರೆ ಕೊನೆ ವೇದದ ಕೊನೆಯ ಭಾಗಗಳನ್ನು ವೇದಾಂತಗಳೆಂದು ಕರೆಯುವರು ಆ ವೇದಾಂತಗಳಲ್ಲಿ ಪ್ರತಿಪಾದ್ಯನಾಗಿರುವವನು ಪರಮೇಶ್ವರನೇ ಎಂದು ಅರ್ಥ.

    ಇನ್ನು ವನ್ಯನೆಂದರೆ ವನ-ಕಾಡಿನಲ್ಲಿ ಇದ್ದುಕೊಂಡಿರುವವನಾದ್ದರಿಂದ ವನ್ಯನು ಕಾಡಿನಲ್ಲಿ ಗಿಡಮರಗಳು, ಪಶುಪಕ್ಷಿಗಳು, ಋಷಿಗಳು, ದೇವತೆಗಳು - ಎಲ್ಲರೂ ಇರುತ್ತಾರೆ ಇವರೆಲ್ಲರನ್ನೂ ಪರಮೇಶ್ವರನ ಸ್ವರೂಪರೆಂದೇ ತಿಳಿಯ ಬೇಕು ಕಕ್ಷಗಳಲ್ಲಿರುವವನು ಕಕ್ಷ್ಯನು ಕಕ್ಷವೆಂದರೆ ಮರದ ಪೊಟರೆಗಳು ಅವುಗಳಲ್ಲಿಯೂ ಹಕ್ಕಿ, ಹಾವು, ಹಲ್ಲಿ ಮುಂತಾದ ಕೆಲವು ಪ್ರಾಣಿಗಳು ವಾಸವಾಗಿರುವವು ಅವೆಲ್ಲವೂ ಪರಮೇಶ್ವರನೇ ಎಂದರ್ಥ ಶ್ರವವೆಂದರೆ ಕೇಳಬರತಕ್ಕದ್ದು ಧ್ವನಿ ಎಂದರ್ಥ ಪ್ರತಿಶ್ರವವೆಂದರೆ ಪ್ರತಿಧ್ವನಿ ಎಂದರ್ಥ ಧ್ವನಿಗಳು ನಾನಾಪ್ರಕಾರವಾಗಿರುವು ಅವುಗಳ ವೈಚಿತ್ರವು ಎಂಥವರಿಗಾದರೂ ಆಶ್ಚರ್ಯವನ್ನುಂಟುಮಾಡುವದು ಉದಾಹರಣೆಗೆ ಒಂದೊಂದು ಪ್ರಾಣಿಯ ಧ್ವನಿ ಒಂದೊಂದು ರೂಪದಲ್ಲಿದ್ದು ಸಂಗೀತದ ಸಪ್ತಸ್ವರಗಳಾಗಿವೆ ಷಡ್ಜವೆಂಬುದು ನವಿಲಿನ ಧ್ವನಿ ಋಷಭವೆಂಬುದು ಗೋವುಗಳದ್ದು ಆಡು, ಕುರಿ-ಮುಂತಾದವುಗಳ ಧ್ವನಿಯೇ ಗಾಂಧಾರ; ಕ್ರೌಂಚ ಪಕ್ಷಿಯ ಧ್ವನಿ ಮಧ್ಯಮ ಕೋಗಿಲೆಯ ಧ್ವನಿ ಪಂಚಮ ಕುದುರೆಯ ಧ್ವನಿ ದೈವತ; ಆನೆಯ ಧ್ವನಿ ನಿಷಾದ ಎಂದು ಅಮರಕೋಶದಲ್ಲಿದೆ ಇವುಗಳನ್ನು ಕೇಳಿದಾಗ ಪರಮೇಶ್ವರನ್ನೇ ನೆನೆಸಿಕೊಳ್ಳಬೇಕು ಇನ್ನು ಪ್ರತಿಧ್ವನಿಗಳಂತೂ ಅವವುಗಳನ್ನೇ ಅನುಕರಿಸುತ್ತದೆ ಇಂಥ ವಿಚಿತ್ರವಾದ ಶಬ್ಧಪ್ರಪಂಚರೂಪದಿಂದ ತೋರಿಕೊಂಡಿರುವ ಪರಮೇಶ್ವರನ ಮಹಿಮೆಯು ಅಪಾರವಾದುದು ಎಂದು ಅಭಿಪ್ರಾಯ.

ನಮೋ ಬಿಲ್ಮಿನೇ ಚ
ರುದ್ರಾಧ್ಯಾಯದ ಆರನೆಯ ಅನುವಾಕದ ಕೊನೆಯ ಭಾಗವನ್ನು ಈಗ ನಾವು ವಿಚಾರಮಾಡಬೇಕಾಗಿದೆ :

ನಮ ಆಶುಷೇಣಾಯ ಚಾಶುರಥಾಯ ಚ ನಮಃ ಶೂರಾಯ ಚಾವಭಿಂದತೇ ಚ ನಮೋ ವರ್ಮಿಣೇ ಚ ವರೂಥಿನೇ ಚ ನಮೋ ಬಿಲ್ಮಿನೇ ಚ ಕವಚಿನೇ ಚ ನಮಃ ಶ್ರುತಾಯ ಚ ಶ್ರುತಸೇನಾಯ ಚ ||
    'ಆಸುಷೇಣನಿಗೂ ಆಶುರಥನಿಗೂ, ಶೂರನಿಗೂ ಅವಭಿಂದನಿಗೂ, ವರ್ಮಿಗೂ ವರೂಥಿಗೂ, ಬಿಲ್ಮಿಗೂ ಕವಚಿಗೂ ಶ್ರುತನಿಗೂ, ಶ್ರುತಸೇನನಿಗೂ ನಮಸ್ಕಾರ!'

    ಅಶುಷೇಣನೆಂದರೆ ಆಶು - ಶೀಘ್ರವಾಗಿ, ಸೇನ - ಸೇನೆಯನ್ನು ಒಯ್ಯುವವನು ಜಾಗ್ರತೆಯಾಗಿ ಚಲಿಸುವಂಥ ಸೈನ್ಯವುಳ್ಳವನು ಎಂದಭಿಪ್ರಾಯ ಪರಮೇಶ್ವರನ ಸೈನ್ಯವು ಯಾವಾಗಲೂ ತುಂಬ ಚುರುಕಾಗಿರುತ್ತದೆ ಆತನ ದೃಷ್ಟಿಪಾತಮಾತ್ರದಿಂದ ಅದು ತನ್ನ ಕಾರ್ಯವನ್ನು ನೆರವೇರಿಸಿಬಿಡುವದು ದಕ್ಷಯಜ್ಞಕಾಲದಲ್ಲಿ ಕಾರ್ಯಚರಣೆಯನ್ನು ನಡೆಯಿಸಿದ ಭಗವಂತನ ಸೇನೆಯು ಅಪರಾಧಿಗಳೆಲ್ಲರನ್ನು ಶಿಕ್ಷಿಸಿತು - ಎಂಬ ಕಥೆಯನ್ನು ಕೇಳಿದ್ದೀರಷ್ಟೆ! ಸೈನ್ಯಕ್ಕೆ ಯಾವಾಗಲೂ ಶೀಘ್ರಚಲನೆಯೇ ಸ್ವಭಾವವಾಗಿರಬೇಕು ಹಾಗಾದರೇ ಜಯವನ್ನು ಪಡೆಯಲು ಸಾಧ್ಯವಾದೀತು ಇಂಥ ಆಶುಷೇಣನು ಜಯವನ್ನು ಪಡೆಯಲು ಸಾಧ್ಯವಾದೀತು ಇಂಥ ಆಶುಷೇಣನು ಜಯವನ್ನು ಪಡೆಯಲು ಸಾಧ್ಯವಾದೀತು ಇಂಥ ಆಶುಷೇಣನು ಪರಮೇಶ್ವರನು; ಮತ್ತು ಆಶುರಥನೂ ಆಗಿದ್ದಾನೆ ತನ್ನ ರಥವನ್ನು ಅತ್ಯಂತ ಚುರುಕಾಗಿ ಬೇಕಾದಲ್ಲಿಗೆ ನಡೆಯಿಸಬಲ್ಲ ಸಾಮರ್ಥ್ಯವುಳ್ಳವನು ಮಹಾದೇವನು ಹಾಗೂ ಶೂರನೂ ಆಗಿರುತ್ತಾನೆ ಶೌರ್ಯವೆಂಬುದು ಯುದ್ಧಕ್ಕೆ ಅಗತ್ಯವಾದ ಗುಣವು ರಾಕ್ಷಸರೊಡನೆ ಕಾದಾಡುವಾಗ ಶೌರ್ಯದ ಪ್ರದರ್ಶನವು ಪರಮೇಶ್ವರನಲ್ಲಿ ಕಂಡುಬರುತ್ತದೆ. ಅಂಥ ಸಂದರ್ಭದಲ್ಲಿ ಆತನು ಅವಭಿಂದನಾಗಿಯೂ ವರ್ತಿಸುತ್ತಾನೆ. ಅವಭಿಂದನು ಎಂದರೆ ಬ್ರಹ್ಮದ್ವೇಷಿಗಳಾದ ರಾಕ್ಷಸರುಗಳ ತಲೆಗಳನ್ನು ಸೀಳುವವನು ಎಂದರ್ಥ ಇಂಥ ಸಂದರ್ಭಗಳಲ್ಲಿ ಮಹಾದೇವನು ಸ್ವಲ್ಪವೂ ಹಿಂತೆಗೆಯುವದಿಲ್ಲ ಸಂಹಾರಮೂರ್ತಿಯಾದ ಆತನು ಧರ್ಮದ್ವೇಷಿಗಳ ವಿಚಾರದಲ್ಲಿ ಎಂದೆಂದಿಗೂ ದಯೆತೋರುವದಿಲ್ಲ ಆದ್ದರಿಂದ ನಾವು ಧರ್ಮದ್ವೇಷಿಗಳಾದರೆ ಆತನ ಕೋಪಕ್ಕೆ ಪಾತ್ರರಾಗಿ ಹಾಳಾಗುವದು ನಿಶ್ಚಿತ - ಎಂದೂ ತಿಳಿಸಿದಂತಾಯಿತು.

    ಭಗಂತನು ವರ್ಮಿಯೂ ವರೂಥಿಯೂ ಆಗಿರುವನು. ವರ್ಮವೆಂದರೆ ಯುದ್ಧಕಾಲದಲ್ಲಿ ರಕ್ಷಣೆಗಾಗಿ ತೊಡುವ ಕಂಚುಕವು; ಕವಚವು. ಹಿಂದಿನ ಕಾಲಕ್ಕೆ ರಾಜರುಗಳು ಯುದ್ಧದಲ್ಲಿ ಗಾಯವಾಗದಿರುವಂತೆ ತೆಳುವಾದ ಉಕ್ಕಿನ ಕವಚಗಳನ್ನು ತೊಡುತ್ತಿದ್ದರು. ಕವಚಧಾರಿಯಾದವನೇ ವರ್ಮಿಯು ಎಂದರ್ಥ ಪರಮೇಶ್ವರನ ಕವಚಕ್ಕೆ ಶಿವಕವಚವೆಂಬ ಪ್ರಸಿದ್ಧವಾದ ಹೆಸರೂ ಇದೆ. ಅದನ್ನು ನಾವು ಸಂಪಾದಿಸಿಕೊಂಡಲ್ಲಿ ಮೃತ್ಯಭಯವೇ ಇರಲಾರದು. ಇರಲಿ ಇನ್ನು ವರೂಥವೆಂದರೆ ಸಾರಥಿಯು ಗುಪ್ತವಾಗಿ ಕುಳಿತುಕೊಳ್ಳುವ ಜಾಗವು ಅಲ್ಲಿದ್ದುಕೊಂಡು ರಥವನ್ನು ಸುರಕ್ಷಿತವಾಗಿ ಸಾಗಿಸುವವನೂ ಪರಮೇಶ್ವರನೇ ಎಂದರ್ಥ. ಅಧ್ಯಾತ್ಮವಾಗಿ ನೋಡಿದರೆ ಶರೀರವೆಂಬ ರಥದಲ್ಲಿ ಹೃದಯವೆಂಬ ವರೂಥದಲ್ಲಿ ವಾಸಿಯಾಗಿರುವ ಭಗವಂತನು ಶರೀರವೆಂಬ ರಥದಲ್ಲಿ ಹೃದಯವೆಂಬ ವರೂಥದಲ್ಲಿ ವಾಸಿಯಾಗಿರುವ ಭಗವಂತನು ನಮ್ಮ ಜೀವನರಥವನ್ನು ನಡೆಯಿಸುತ್ತಲೇ ಇರುವನು ಇಂಥ ವರೂಥಿಯಾದ ಮಹಾ ದೇವನಿಗೆ ನಮಸ್ಕಾರವನ್ನು ಶ್ರುತಿಯು ಅರ್ಪಿಸುತ್ತಿದೆ ಬಿಲ್ಮಿಯೆಂದರೆ ಬಿಲದಂತಿರುವ ಶಿರಸ್ತ್ರಾಣ (ತಲೆಯ ಕವಚ)ವನ್ನು ಧರಿಸಿರುವವನು ಈಗಿನ ಕಾಲಕ್ಕೆ 'ಹೆಲ್ಮೆಟ್' ಎಂಬ ಶಿರಸ್ತ್ರಾಣವು ಬಳಕೆಗೆ ಬಂದಿದೆಯಷ್ಟೆ! ದ್ವಿಚಕ್ರ ವಾಹನಚಾಲಕರು ಅದನ್ನು ಕಡ್ಡಾಯವಾಗಿ ಧರಿಸಲೇಬೇಕೆಂಬ ಕಾನೂನು ಇದೆಯೆಂದು ಕೇಳಿದ್ದೇನೆ ಪರಮೇಶ್ವರನೂ ಹೀಗೆಯೇ ಶಿರಸ್ತ್ರಾಣವನ್ನು ಧರಿಸಿ ಬಿಲ್ಮಿಯೆನಿಸಿರುವನು ಆದ್ದರಿಂದ ಹೆಲ್ಮೆಟ್‌ಧಾರಿಗಳನ್ನು ಕಂಡಾಗಲೆಲ್ಲ ನಾವು ಶಿವನ ಈ ಸ್ವರೂಪವನ್ನು ಅನುಸಂಧಾನಮಾಡಬಹುದಾಗಿದೆ. ವೇದದಲ್ಲಿರುವ ಈ ವಿಶೇಷಣವು ಈಗಿನ ಕಾಲಕ್ಕೂ ಅನ್ವಯಿಸುವಂತಿದೆ - ಎಂಬುದನ್ನು ಗಮನಿಸಿರಿ ಹಾಗೆಯೇ ಪರಮೇಶ್ವರನು ಕವಚಿಯು ಅಂಗಿ ಕೋಟುಗಳುಳ್ಳವನು ಅಂತೂ ನಾವು ಈಗಿನ ಕಾಲದಲ್ಲಿಯೂ ಬಹುಬೇಗ ಪರಮೇಶ್ವರನನ್ನು ನೆನೆಯಿಸಿಕೊಳ್ಳಲು ಈ ಬಿಲ್ಮಿ - ಕವಚಗಳು ಸಹಾಯಕರಾಗುತ್ತಾರೆಂದಾಯಿತು ನಾನಾ ರೂಪಧರನಾದ ಆ ಮಹಾಮಹಿಮನ ವೇಷ ಭೂಷಣಗಳನ್ನು ಏನೆಂದುತಾನೆ ವರ್ಣಿಸಲಾದೀತು? ಸುಪ್ರಸಿದ್ಧನಾಗಿರುವದುರಿಂದ ಶ್ರುತನೆಂದೂ ಪ್ರಖ್ಯಾತವಾದ ಸೈನ್ಯವುಳ್ಳವನಾದ್ದರಿಮದ ಶ್ರುತಸೇನನೆಂದೂ ಆತನು ಮತ್ತೊಮ್ಮೆ ಸ್ತುತಿಸಲ್ಪಟ್ಟಿರುವನು.

ನಮೋ ದುಂದುಭ್ಯಾಯ ಚಾಹನನ್ಯಾಯ ಚ ನಮೋ ಧೃಷ್ಣವೇ ಚ
ಪ್ರಮೃಶಾಯ ಚ ನಮೋ ದೂತಾಯ ಚ ಪ್ರಹಿತಾಯ ಚ ನಮೋ
ನಿಷಂಗಿಣೇ ಚೇಷುಧಿಮತೇ ಚ ನಮಸ್ತೀಕ್ಷ್ಣೇಷವೇ ಚಾಯುಧಿನೇ ಚ
ನಮಃ ಸ್ವಾಯುಧಾಯ ಚ ಸುಧನ್ವನೇ ಚ ||

    'ದುಂದುಭ್ಯನೂ ಅಹನನ್ಯನೂ ಧೃಷ್ಣವೂ ಪ್ರಮೃಶನೂ ದೂತನೂ ಪ್ರಹಿತನೂ ನಿಷಂಗಿಯೂ ಇಷುಧಿಮಂತನೂ ತೀಕ್ಷ್ಣೇಷುವೂ ಆಯುಧಿಯೂ ಸ್ವಾಯುಧನೂ ಸುಧನ್ವನೂ ಆದ ಭಗವಂತನಿಗೆ ನಮಸ್ಕಾರ!'

    ಈಗ ಏಳನೆಯ ಅನುವಾಕವು ಪ್ರಾರಂಭವಾಗಿತ್ತಿದೆ. ಹಿಂದನಂತೆ ಇಲ್ಲಿಯೂ ಪರಮೇಶ್ವರನ ಸರ್ವಾಂತರ್ಯಾಮಿತ್ವವನ್ನೂ ಸರ್ವಾತ್ಮತ್ವವನ್ನೂ ಕುರಿತು ಸ್ತುತಿಸಲಾಗಿದೆ. ದುಂದುಭಿ - ಎಂದರೆ ನಗಾರಿಯಲ್ಲಿದ್ದುಕೊಂಡಿರುವ ನಾದ್ದರಿಂದ ದುಂದುಭ್ಯನು ನಗಾರಿಯನ್ನು ಹೊಡೆಯುವ ಕೋಲಿನಲ್ಲಿಯೂ ಆತನೇ ಇರುವದರಿಂದ ಅಹನನ್ನಯನು. ನಗಾರಿಯು ಜಯಸೂಚಕವಾಗಿಯೂ ಕೆಲವು ಸಂದರ್ಭಗಳಲ್ಲಿ ಉತ್ಸಾಹಸೂಚಕವಾಗಿಯೂ ಹಿಂದೆ ಉಪಯೋಗಿಸಲ್ಪಡುತ್ತಿತ್ತು ಈಗ ಅದರ ಉಪಯೋಗವು ಕಡಿಮೆಯಾಗಿದೆ ಆದರೂ ರಥೋತ್ಸವಾದಿಗಳಲ್ಲಿ ತೇರಿನ ಹಿಂಭಾಗದಲ್ಲಿ ನಗಾರಿಯನ್ನಿಟ್ಟು ತೇರನ್ನು ಎಳೆಯುವಾಗಲೆಲ್ಲ ಈಗಲೂ ಅದನ್ನು ಬಾರಿಸುತ್ತಾರೆ ಯಕ್ಷಗಾನದಂಥ ಕೆಲವು ಆಟಗಳಲ್ಲಿಯೂ ಇದೇ ರೀತಿಯ ವಾದ್ಯವನ್ನು ಬಳಸುತ್ತಾರೆ ಇವುಗಳೆಲ್ಲ ಪರಮೇಶ್ವರನ ಸ್ವರೂಪವೇ ಎಂದರ್ಥ ಹಾಗೆಯೇ ಭಗವಂತನು ಧೃಷ್ಣುವು ಎಂದರೆ ಯುದ್ಧದಲ್ಲಿ ಹೆದರಿ ಓಡಿಹೋಗದೆ ಇರುವವನು ಹೆಚ್ಚಿನ ಧೈರ್ಯ ಶಾಲಿಯು ಎಂದರ್ಥ ಪ್ರಮೃಶನೆಂದರೆ ಶತ್ರುಸೈನ್ಯದ ವೃತ್ತಾಂತಗಳನ್ನೆಲ್ಲ ಬಲ್ಲವನು ಎಂದರ್ಥ ಇದೂ ಸಹ ಯುದ್ಧಕಾಲದಲ್ಲಿ ಅಗತ್ಯವಾದ ವಿಷಯವು ಈ ಎಲ್ಲಾ ರೂಪದಲ್ಲಿಯೂ ಮಹಾದೇವನೇ ತೋರಿ ಕೊಳ್ಳುತ್ತಿರುವನು.

    ಇನ್ನು ದೂತನೆಂದರೆ ಸಂದೇಶಗಳನ್ನು ಒಯ್ಯುವವನು ರಾಯಭಾರಿ ಎಂದೂ ಕರೆಯಬಹುದು ಶ್ರೀಕೃಷ್ಣಭಗವಂತನೇ ದೌತ್ಯವನ್ನು ಪಾಂಡವರ ಪರವಾಗಿ ವಹಿಸಿದನೆಂತ ಮಹಾಭಾರತದಲ್ಲಿದೆ ಹನುಮಂತನೆಂಬ ದೂತಶ್ರೇಷ್ಠನು ರಾಮಾಯಣಪ್ರಸಿದ್ಧನು ಆದ್ದರಿಮದ ದೌತ್ಯವನ್ನು ಕೀಳಾದ ಕೆಲಸವೆಂದು ಭಾವಿಸುವಂತಿಲ್ಲ ನಿಜವಾಗಿ ನೋಡಿದರೆ ಕೃಷ್ಣಭಗವಂತನಂತೆ ದೌತ್ಯವನ್ನು ನಿರ್ವಹಿಸಲು ಯಾರಿಗೆತಾನೆ ಸಾಧ್ಯ? ಎಷ್ಟೇ ಜಾಣತನದಿಂದ ಹಾಗೂ ಬುದ್ಧಿವಂತಿಕೆಯಿಂದಲೇ ಭಗವಂತನು ವರ್ತಿಸಿದನಾದರೂ ಅಸುರೀ ಸಂಪತ್ತಿನಿಂದ ಕೊಬ್ಬಿದ ದುಯೋಧನಾದಿಗಳ ಹಠಮಾರಿತನದಿಂದ ಆತನ ದೌತ್ಯವು ವ್ಯರ್ಥವಾಯಿತು; ಅಥವಾ ದುಷ್ಟರ ವಿನಾಶಕ್ಕೆ ನಾಂದಿಯಾಯಿತು ಎನ್ನಬಹುದು ಹಾಗೆಯೇ ಹನುಮಂತನ ಚಾಣಾಕ್ಷತನದ ದೌತ್ಯದಿಂಲೇ ಶ್ರೀರಾಮನಿಗೆ ದಿಗ್ವಿಜಯವೂ ರಾವಣಾದಿಗಳ ವಧೆಯೂ ಆಯಿತು ಈಗಿನ ಕಾಲಕ್ಕೂ ದೂತರನ್ನು (ರಾಯಭಾರಿಗಳನ್ನು) ಆಯಾ ದೇಶದ ಪರವಾಗಿ ವಿದೇಶಗಳಲ್ಲಿ ನೇಮಿಸುವ ಪದ್ಧತಿಯಿದೆಯಷ್ಟೆ! ಇದೊಂದು ಕಷ್ಟವಾದ ಕೆಲಸವು ತನ್ನ ದೇಶದ ಗೌರವವನ್ನೂ ಪ್ರತಿಷ್ಠೆಯನ್ನೂ ಕಾಪಾಡಿಕೊಂಡು ಇತರರಿಗೂ ಗೌರವವುಂಟಾಗುವಂತೆ ನಡೆದುಕೊಳ್ಳುವದು ಸಮಯಾನುಸಾರ ಸಹಾಯಗಳನ್ನು ಹೊಂದುವದು ಶಾಂತಿಯನ್ನು ಕುದುರಿಸುವುದು ಇವೆಲ್ಲ ರಾಯಭಾರಿಗಳ ಪಾಲಿಗೆ ಸೇರಿದ್ದು. ಇದಕ್ಕೆಲ್ಲ ಅಗತ್ಯವಾದ ಅರ್ಹತೆಯು ದೊರಕಬೇಕಾದರೆ ಪರಮೇಶ್ವರನ ಅನುಗ್ರಹವು ಬೇಕು. ಇಂಥ ಕಾರ್ಯ ದಕ್ಷರಾದ ದೂತರುಗಳ ರೂಪದಲ್ಲಿರುವವನು ಪರಮೇಶ್ವರನೇ ಎಂದರ್ಥ ಪ್ರಹಿತನೆಂದರೆ ಯಜಮಾನನಿಂದ ಪ್ರೇರಿತನಾಗಿ ಹೊರಟು ಆ ಯಜಮಾನನಿಗೆ ಹಿತವಾದಂಥ ಕಾರ್ಯಗಳನ್ನೇ ಮಾಡುವವನು ಇಂಥ ದೂತಶ್ರೇಷ್ಠರು ಈಗ ದುರ್ಲಭರೇ ಸರಿ. ನಿಷಂಗಿಯೂ ಇಷುಧಿಮಂತನೂ ಆಗಿರುವ ಪರಮೇಶ್ವರನನ್ನು ಹಿಂದೊಮ್ಮೆ ವರ್ಣಿಸಲಾಗಿದೆ ಬಾಣ, ಬತ್ತಳಿಕೆಗಳಿಂದ ಕೂಡಿರುವವನು - ಎಂಬುದನ್ನು ಜ್ಞಾಪಿಸಿಕೊಳ್ಳಿರಿ.

    ತೀಕ್ಷ್ಣೇಷುವೂ ಆಯುಧಿಯೂ ಆಗಿರುವ ಪರಮೇಶ್ವರನನ್ನು ಈಗ ಸ್ಮರಿಸೋಣ. ಹರಿತವಾದ ಬಾಣಗಳನ್ನು ಹೊಂದಿರುವವನು ತೀಕ್ಷ್ಣೇಷುವು ಒಂದೇ ಬಾಣದಿಂದ ತ್ರಿಪುರಾಸುರನನ್ನು ಸಂಹಾರಮಾಡಿದ ಭಗವಂತನ ಬಾಣಗಳ ಚುರುಕು ಎಷ್ಟೆಂಬುದನ್ನು ವರ್ಣಿಸಲು ಸಾಧ್ಯವಾಗುವದಿಲ್ಲ ಬಹಳ ಜಾತಿಯ ಆಯುಧಗಳನ್ನು ಹಿಡಿದಿರುವನಾದ್ದರಿಮದ ಆಯುಧಿಯು ಸುಂದರವೂ ಶೋಭನವೂ ಆದ ಆಯುಧಗಳುಳ್ಳವನಾದ್ದರಿಮದ ಸ್ವಾಯುಧನು ಸು-ಆಯುಧ ಎಂದು ಬಿಡಿಸಿ ಅರ್ಥಮಾಡಿಕೊಳ್ಳಬೇಕು ಹಾಗೆಯೇ ಸುಧನ್ವನೂ ಆಗಿರುವನು ವಿಷ್ಣುಸಹಸ್ರನಾಮದ 567ನೆಯ ನಾಮವೂ ಸುಧನ್ವನೆಂದಿರುವದನ್ನು ನೆನೆಸಿಕೊಳ್ಳಿರಿ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ