ರುದ್ರಭಾಷ್ಯಪ್ರಕಾಶ - 3ನೇ ಅನುವಾಕ (ಸಂಪೂರ್ಣ)
ನಮಃ ಸಹಮಾನಾಯ ಈಗ ಮೂರನೆಯ ಅನುವಾಕವನ್ನು ವಿಚಾರಮಾಡಬೇಕಾಗಿದೆ : ನಮಃ ಸಹಮಾನಾಯ ನಿವ್ಯಾಧಿನ ಆವ್ಯಾಧಿನೀನಾಂ ಪತಯೇ ನಮೋ ನಮಃ ಕಕುಭಾಯ ನಿಷಂಗಿಣೇ ಸ್ತೇನಾನಾಂ ಪತಯೇ ನಮೋ ನಮೋ ನಿಷಂಗಿಣ ಇಷುಧಿಮತೇ ತಸ್ಕರಾಣಾಂ ಪತಯೇ ನಮೋ ನಮೋ ವಂಚತೇ ಪರಿವಂಚತೇ ಸ್ತಾಯೂನಾಂ ಪತಯೇ ನಮೋ ನಮೋ ನಿಚೇರವೇ ಪರಿಚರಾಯಾರಣ್ಯಾನಾಂ ಪತಯೇ ನಮಃ || 'ಸಹಮಾನನೂ ನಿವ್ಯಾಧಿಯೂ ಆವ್ಯಾಧಿನಿಗಳ ಪತಿಯೂ ಕಕುಭನೂ ನಿಷಂಗಿಯೂ, ಕಳ್ಳರ ಒಡೆಯನೂ, ನಿಷಂಗಿಯೂ, ಇಷುಧಿಮಂತನೂ ತಸ್ಕರಪತಿಯೂ ಆಗಿರುವ, ವಂಚನೆಪರಿವಂಚನೆಗಳನ್ನು ಮಾಡುವ ಸ್ತಾಯುಗಳ ಪತಿಯೂ ಆದ, ನಿಚೇರುವೂ ಪರಿಚರನೂ ಅರಣ್ಯಕರ ಪತಿಯೂ ಆದವನಿಗೆ ನಮಸ್ಕಾರ!' ಈ ಮಂತ್ರಗಳಲ್ಲಿ ರಾಜಸತಾಮಸಪ್ರಕೃತಿಯ ಜನರೆಲ್ಲರಲ್ಲಿಯೂ ಅಂತರ್ಯಾಮಿಯಾಗಿದ್ದುಕೊಂಡಿರುವವನು ರುದ್ರನೇ - ಎಂದು ತಿಳಿಸಲಾಗಿದೆ. ರುದ್ರನು ಸರ್ವಾತ್ಮಕನೆಂದಮೇಲೆ ಯಾವದೊಂದು ಶರೀರವನ್ನಾಗಲಿ ಉಪಾಧಿಯನ್ನಾಗಲಿ ಬಿಡದೆ ಎಲ್ಲದರಲ್ಲಿಯೂ ವ್ಯಾಪಿಸಿಕೊಂಡಿರಬೇಕಷ್ಟೆ! ಆದ್ದರಿಂದ ಇಲ್ಲಿ ಸ್ತುತಿಮಾಡಿರುವ ಬಗೆಯನ್ನು ಸರಿಯಾದ ರೀತಿಯಿಂದ ಸಮನ್ವಯ ಮಾಡಿಕೊಳ್ಳಬೇಕು. 'ಭಗವಂತನು ಸರ್ವೇಶ್ವರನು' - ಎಂಬ ಶಬ್ದಕ್ಕೆ ಸಂಕೋಚವಿಲ್ಲದೆ ಎಲ್ಲಾ ಜೀವರುಗಳಿಗೂ ಒಡೆಯನು - ಎಂಬ ಅಭಿಪ್ರಾಯವನ್ನು ನೆನಪಿಟ್ಟುಕೊಂಡು ಅರ್ಥಮಾಡಿಕೊಳ್ಳಬೇಕು. ಈಗ ಮೊದಲನೆಯ ವಿಶೇಷಣವನ್ನು ವಿಚಾರಮಾಡೋಣ ಸಹಮಾನನೆಂದರೆ ಶತ್ರುಗಳನ್ನು ಹಿಮ್ಮೆಟ್ಟಿಸುವವನ...