ಅಸ್ಮಾನ್ ವೃಣಕ್ತು ವಿಶ್ವತಃ - 2

ನಮಸ್ತೇ ಅಸ್ತ್ವಾಯುಧಾಯಾನಾತತಾಯ ಧೃಷ್ಣವೇ |
ಉಭಾಭ್ಯಾಮುತ ತೇ ನಮೋ ಬಾಹುಭ್ಯಾಂ ತವ ಧನ್ವನೇ ||14||

    '(ಎಲೈ ಭಗವಂತನೆ), ನಿನ್ನ ಆಯುಧಗಳಿಗೆ ನಮಸ್ಕಾರ! ಅವು ಹೊಡೆಯಲು ಎತ್ತಲ್ಪಡದೆ ಇರುವವೂ, ಆದರೆ, ಹೊಡೆಯುವ ಸಾಮರ್ಥ್ಯವುಳ್ಳವೂ ಆಗಿದೆಯಷ್ಟೆ! ಮತ್ತು ನಿನ್ನ ಎರಡು ಬಾಹುಗಳಿಗೂ ನಿನ್ನ ಧನುಸ್ಸಿಗೂ ನಮಸ್ಕಾರ!'


    ಹೀಗೆ ಪ್ರಾರ್ಥನೆಮಾಡಿದಮೇಲೂ ಮತ್ತೆ ನಮಸ್ಕಾರಮಾಡಲು ಉಪಕ್ರಮಿಸಿದ ಭಕ್ತನ ಉದ್ಗಾರವಿದು: 'ಎಲೈ ಭಗವಂತನೆ, ನಿನ್ನ ಆಯುಧಗಳಿಗೆ ನಮಸ್ಕಾರ! ತೋಳುಗಳಿಗೂ ನಮಸ್ಕಾರ' - ಎಂದು ಹೆಚ್ಚಿನ ಭಯದಿಂದ ಕೂಡಿದವನಾಗಿ ಹೇಳುತ್ತಿದಾನೆ. 'ಬಾಹುಭ್ಯಾಮ್' ಎಂಬ ದ್ವಿವಚನವೇ ಎರಡು ತೋಳುಗಳೆಂದು ತಿಳಿಸುತ್ತದೆಯಾದರೂ 'ಉಭಾಭ್ಯಾಮ್' ಎಂದು ಮತ್ತೆ ವಿಶೇಷಣವಾಗಿ ಹೇಳಿರುವದು ಹೆದರಿಕೆಯ ನಿಮಿತ್ತದಿಂದಲೇ ಎಂದು ಅರ್ಥ ಮಾಡಬೇಕು. ಏಕೆಂದರೆ ಬಾಣವನ್ನು ಹೊಡೆಯಲು ಎತ್ತಿರುವ ತೋಳುಗಳನ್ನು ಕಂಡಾಗ ಎಂಥವನಿಗಾದರೂ ಭಯವುಂಟಾಗಿ ಮಾತುಗಳು ವ್ಯತ್ಯಾಸವಾಗಿ ಬಿಡುವವು. ಎಷ್ಟೇ ಸಿದ್ಧಮಾಡಿಕೊಂಡಾಗಲೂ ದೊಡ್ಡವರ ಸನ್ನಿಧಿಯಲ್ಲಿ ಮಾತನಾಡುವಾಗ ತಬ್ಬಿಬ್ಬಾಗುವದು. ಹಾಗೆ ಇಲ್ಲಿಯೂ ತಿಳಿಯಬೇಕು. ಇದರಿಂದ ಭಗವಂತನು ಎದುರಿಗೇ ಇದ್ದಾನೆಂತಲೂ ತಾನು ಅವನನ್ನು ನೋಡುತ್ತಾ ಸ್ತೋತ್ರಮಾಡುತ್ತಿರುವೆನೆಂತಲೂ ಭಕ್ತನು ಭಾವಿಸಿದ್ದಾನೆ - ಎಂದು ತಿಳಿಯ ಬರುತ್ತದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ