ದಕ್ಷಿಣಾಮೂರ್ತಿಸ್ತೋತ್ರ - 4. - ಪರಮಾತ್ಮನು ಸ್ವಯಂಪ್ರಕಾಶನು
ನಾನಾಚ್ಛಿದ್ರಘಟೋದರಸ್ಥಿತಮಹಾದೀಪಪ್ರಬಾಭಾಸ್ವರಂ
ಜ್ಞಾನಂ ಯಸ್ಯ ತು ಚಕ್ಷುರಾದಿಕರಣದ್ವಾರಾ ಬಹಿಃ ಸ್ಪನ್ದತೇ |
ಜಾನಾಮೀತಿ ತಮೇವ ಭಾನ್ತಮನುಭಾತ್ಯೇತತ್ಸಮಸ್ತಂ ಜಗತ್
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||
"ಬಗೆಬಗೆಯ ರಂಧ್ರಗಳಿಂದ ಗಡಿಗೆಯೊಳಗಿರುವ ದೊಡ್ಡ ದೀಪದ ಬೆಳಕಿನಂತೆ ಹೊಳೆಯುವ ಯಾವನ ಜ್ಞಾನವೇ ಚಕ್ಷುರಾದೀಂದ್ರಿಯಗಳ ಮೂಲಕ ಹೊರಕ್ಕೆ ಹೊರಡುಬರುತ್ತಿರುವದೋ, 'ಅರಿಯುತ್ತಿದ್ದೇನೆ' ಎಂದು ಹೊಳೆಯುವ ಯಾವ ಆತನನ್ನೇ ಅನುಸರಿಸಿ ಈ ಜಗತ್ತೆಲ್ಲವೂ ತೋರಿಕೊಳ್ಳುತ್ತಿರುವದೋ, ಆ ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮೂರ್ತಿಗೆ ನಮಸ್ಕಾರ' ಎಂಬುದು ಶ್ಲೋಕದ ಅಕ್ಷರಾರ್ಥ.
ಪರಮಾತ್ಮನ ಪ್ರಕಾಶವೇ ವಸ್ತುಗಳ ತೋರಿಕೆ; ಆ ಪರಮಾತ್ಮನು ನಾನು ಎಂದು ಸಾಕ್ಷಾತ್ತಾಗಿ ಅನುಭವಕ್ಕೆ ತಂದುಕೊಂಡರೆ ಮತ್ತೆ ಈ ಸಂಸಾರಸಾಗರದಲ್ಲಿ ನಾವು ಬೀಳುವ ಅಂಜಿಕೆಯಿಲ್ಲ ಇದನ್ನು ಹಿಂದಿನ ಶ್ಲೋಕದಲ್ಲಿ ಹೇಳಲಾಗಿದೆ.
ಆ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಉಪಾಯವೇನು? ಆ ಪರಮಾತ್ಮನು ನಾನು ಎಂಬ ನೇರಾದ ಅನುಭವವನ್ನು ಮಾಡಿಕೊಂಡು ಸಂಸಾರಸಾಗರದ ಪಾರವನ್ನು ಕಾಣುವ ಬಗೆ ಎಂತು? ಎಂಬ ಪ್ರಶ್ನೆಯು ಸಹಜವಾಗಿ ಎದ್ದುಕೊಳ್ಳುತ್ತದೆಯಷ್ಟೆ? ಅದಕ್ಕೆ ಈಗ ಉತ್ತರವನ್ನು ತಿಳಿಸಲಾಗುವದು.
ಪರಮಾತ್ಮನ ಬೆಳಕೇ ವಸ್ತುಗಳ ತೋರಿಕೆಯ ಬೆಳಕು ಎಂಬುದರ ಅರ್ಥವೇನು? ಇದನ್ನು ನಾವು ವಿಮರ್ಶೆಮಾಡತಕ್ಕದ್ದು ಅವಶ್ಯ ಏಕೆಂದರೆ ವಸ್ತುಗಳು ತೋರುವಾಗಲೆಲ್ಲ ನಾವು ಪರಮಾತ್ಮನ ಬೆಳಕನ್ನೇ ನೋಡುತ್ತಿರುವೆವು ಎಂದು ಹೇಳುವದರಿಂದ ಆ ಬೆಳಕಿನ ಮೂಲವು ಯಾವದು? ಎಂಬುದನ್ನು ಕಂಡುಹಿಡಿದರೆ ನಮಗೆ ಪರಮಾತ್ಮನ ಸಾಕ್ಷಾತ್ಕಾರವು ಸುಲಭವಾಗಿ ಆಗಿಬಿಟ್ಟೀತು ಜನರೆಲ್ಲರೂ ಸೂರ್ಯನ ಬೆಳಕಿನಲ್ಲಿಯೇ ವ್ಯವಹರಿಸುತ್ತಿದ್ದರೂ ಅತ್ತಕಡೆಗೆ ಮನಸ್ಸಿನ ಅವಧಾನವನ್ನು ಸೆಳೆದುಕೊಂಡು ಹೊರತು ತಮಗೆ ಸೂರ್ಯನ ಬೆಳಕು ಕಂಡಲ್ಲದೆ ಯಾವ ವಸ್ತುವೂ ಕಾಣಿಸುವದಿಲ್ಲವೆಂಬುದು ಸ್ಫುಟವಾಗುವದಿಲ್ಲ ಇಲ್ಲೊಂದು ಮರವಿದೆ, ಅಲ್ಲೊಂದು ಪ್ರಾಣಿಯಿದೆ; ಆ ಕಡೆ ಬೆಟ್ಟವಿದೆ, ಈ ಕಡೆ ನದಿಯಿದೆ; ನನ್ನ ಮುಂದೆ ಅನೇಕ ಜನರು ಕಾಣಿಸಿಕೊಳ್ಳುತ್ತಾರೆ ಎಂದು ಮುಂತಾಗಿ ನಾವು ವ್ಯವಹಾರಮಾಡುವಾಗ ನಾವು ನೋಡುತ್ತಿರುವ ಮರ, ಪ್ರಾಣಿ, ಬೆಟ್ಟ, ನದಿ, ಜನರು- ಎಲ್ಲರೂ ಸೂರ್ಯನ ಬೆಳಕಿನಲ್ಲಿಯೇ ನಮಗೆ ಕಾಣಿಸಿ ಕೊಳ್ಳುತ್ತಿರುತ್ತಾರೆ, ಆದರೂ ಸಾಮಾನ್ಯವಾಗಿ ನಾವು ಈಗ ಬೆಳಕನ್ನು ಕಾಣುತ್ತಿದೇವೆ ಎಂದೇನೂ ನಮಗೆ ಅರಿವಾಗುವದಿಲ್ಲ. ಇದೇಕೆ? ಮರ, ಪ್ರಾಣಿ, ಬೆಟ್ಟ, ನದಿ ಮುಂತಾದ ವಸ್ತುಗಳ ವಿಚಾರದಲ್ಲಿಯೇ ನಮ್ಮ ಮನಸ್ಸು ಮುಳುಗಿರುತ್ತದೆ ಹೊರಗಿನ ವಿಷಯಗಳಲ್ಲಿ ಕೆಲವು ನಮಗೆ ಬೇಕು, ಕೆಲವು ಬೇಡ; ಇನ್ನು ಕೆಲವು ವಿಷಯಗಳಲ್ಲಿ ನಮಗೆ ಅನಾದರ ಆದ್ದರಿಂದ ನಾವು ಬೇಕಾದ ವಸ್ತುಗಳನ್ನು ಸಂಪಾದಿಸಿಕೊಂಡು ಅನುಭವಿಸುವದಕ್ಕೂ ಬೇಡದ ವಸ್ತುಗಳನ್ನು ತೊಲಗಿಸಿಕೊಂಡು ಅವುಗಳಿಂದಾಗಬಹುದಾದ ದುಃಖವನ್ನು ನೀಗಿಕೊಳ್ಳುವದಕ್ಕೂ ನಿರಂತರವಾಗಿ ಹವಣಿಸುತ್ತಿರುತ್ತೇವೆ. ಬೇಕೆಂಬುದು ವ್ಯವಹಾರಮಾತ್ರಕ್ಕೆ ಅತ್ಯವಶ್ಯವಾಗಿ ಎಲ್ಲರಿಗೂ ಬೇಕಾಗಿರುವುದರಿಂದಲೂ ಅದು ನನಗೊಬ್ಬನಿಗೇ ಬೇಕು ಮತ್ತೊಬ್ಬನಿಗೆ ಅದು ಇರಬಾರದು - ಎಂಬ ಇಚ್ಛೆಯನ್ನು ಮಾಡುವದು ಸಾಧ್ಯವೂ ಇಲ್ಲದೆ ಹಾಗೆ ಮಾಡುವ ಸಂಭವವೂ ಇಲ್ಲದೆ ಇರುವದರಿಂದಲೂ ನಾವು ಆ ಬೆಳಕು ಎಲ್ಲೆಲ್ಲಿಯೂ ಹರಡಿಕೊಂಡಿದ್ದರೂ ಅದು ಇಲ್ಲವೇ ಇಲ್ಲವೊ ಎಂಬಂತೆ ಅದರ ವಿಚಾರಕ್ಕೆ ಮನಸ್ಸು ಹಾಕದೆ ಇರುವೆವು ಅಲ್ಲವೆ? ಹೀಗೆಯೇ ಬೆಳಕೂ ಮತ್ತು ಬೆಳಕಿನ ವಸ್ತುಗಳೂ ನಮಗೆ 'ತೋರುವದು' ಎಂಬುದು ಪರಮಾತ್ಮನ ಬೆಳಕಿನ ನೆರವಿನಿಂದಲೇ ಆಗಿದ್ದರೂ ನಾವು ಸಾಮಾನ್ಯವಾಗಿ ಅದರ ಇರುವಿಕೆಯನ್ನು ಕಡೆಗಣಿಸಿಯೇ ವ್ಯವಹರಿಸುತ್ತಿರುವೆವು.
ಇದನ್ನು ಈಗ ಸ್ವಲ್ಪ ಲಕ್ಷ್ಯವಿಟ್ಟು ನೋಡಿ ಆಲೋಚಿಸೋಣ ನಮ್ಮ ಹೊರಗೆ ಇರುವ ಯಾವ ವಸ್ತುವಿನ ಜ್ಞಾನವಾದರೂ ನಮಗೆ ಇಂದ್ರಿಯಗಳ ಮೂಲಕವೇ ಆಗಬೇಕು. ಅಲ್ಲವೆ? ಹೊರಗೆ ಬೆಳಕು ಇದೆ, ಆ ಬೆಳಕಿನ ನೆರವಿನಿಂದಲೇ ಮನೆಯಲ್ಲಿರುವ ವಸ್ತುಗಳನ್ನೂ ಹೊರಗೆ ಕಾಣುತ್ತಿರುವ ವಸ್ತುಗಳನ್ನೂ ನಾನು ಕಾಣುತ್ತಿರುವೆನು - ಎಂಬುದನ್ನು ನಾವು ಅನುಭವಕ್ಕೆ ತಂದುಕೊಳ್ಳುತ್ತಿರುವದು ಹೇಗೆ? ಕಣ್ಣಿಲ್ಲದವರಿಗೆ ಬೆಳಕಾಗಲಿ, ಬೆಳಕಿನಲ್ಲಿ ತೋರುವ ವಸ್ತುಗಳಾಗಲಿ ಕಾಣುವದಿಲ್ಲ ಅವರು ಈ ವಸ್ತು ದೊಡ್ಡದು, ಅದು ಚಿಕ್ಕದು; ಇದು ಹತ್ತಿರವಿದೆ, ಅದು ದೂರವಿದೆ- ಎಂದು ಮುಂತಾಗಿ ವ್ಯವಹಿಸುವದಿಲ್ಲ ಯಾವ ವಸ್ತುವಿನ ಅರಿವಾಗಲಿ ಅವರಿಗೆ ಸ್ಪರ್ಶೆಂದ್ರಿಯದಿಂದಲೇ ಆಗಬೇಕಾಗಿರುತ್ತದೆ. ಆದರೆ ಯಾರಿಗೆ ಯಾವದಾದರೂ ರೋಗದ ನಿಮಿತ್ತದಿಂದ ಸ್ಪರ್ಶೆಂದ್ರಿಯದ ಸಹಾಯವು ದೂರವಾಗಿರುವದೋ ಅವರಿಗೆ ಕುರುಡರಂತೆ ವಸ್ತುಗಳನ್ನು ಮುಟ್ಟಿ ಅರಿತುಕೊಳ್ಳುವ ಭಾಗ್ಯವು ಇರುವದಿಲ್ಲ. ಇದರಂತೆ ಮಿಕ್ಕ ಇಂದ್ರಿಯಗಳೂ ಯಾರಿಗೆ ನೆರವಾಗಿರುವವೋ ಅವರಿಗೇ ಅಯಾ ಶಬ್ದ, ರಸ, ಗಂಧ ಎಂಬ ವಿಷಯಗಳ ಅರಿವು ಆಗುತ್ತಿರುವದು ಈ ಇಂದ್ರಿಯಗಳು ಕೆಲಸಮಾಡದೆ ಇರುವಾಗ ಉದಾಹರಣೆಗೆ ಕನಸಿನಲ್ಲಿ ಅಥವಾ ತನಿನಿದ್ರೆಯಲ್ಲಿ ನಮಗೆ ಯಾರಿಗೂ ಎಚ್ಚರದಲ್ಲಿ ಈಗ ಆಗುತ್ತಿರುವ ಬಾಹ್ಯವಸ್ತುಗಳ ಜ್ಞಾನವು ಆಗಲಾರದು. ಆದ್ದರಿಂದ ವಸ್ತು ಇದೆ ಅದು ತೋರುತ್ತಿದೆ ಎಂದರೆ ನಮ್ಮ ಇಂದ್ರಿಯಗಳ ಮೂಲಕವಾಗಿ ಅವುಗಳ ಅರಿವು ನಮಗೆ ಆಗುತ್ತದೆ ಎಂದೇ ಅರ್ಥ ಆ ಅರಿವಿನ ಬೆಳಕಿನಿಂದಲೇ ವಸ್ತುಗಳಿವೆಯೆಂದೂ ತೋರುತ್ತವೆ ಎಂದೂ ನಾವು ವ್ಯವಹರಿಸುತ್ತಿರುವೆವು. ಭೌತಿಕವಿಜ್ಞಾನ ಶಾಸ್ತ್ರವು ಕಂಡುಹಿಡಿದಿರುವ ತತ್ತ್ವಗಳೆಲ್ಲ ಈ ಇಂದ್ರಿಯಗಳ ಸಹಾಯದಿಂದಲೇ ಇಂದ್ರಿಯಗಳೆಲ್ಲವೂ ಯಾವನಿಗೆ ಸುಸ್ಥಿತವಾಗಿರುವವೋ ಅವನಿಗೆ ಮಾತ್ರವೇ ಭೌತಿಕವಿಜ್ಞಾನಶಾಸ್ತ್ರದ ಸೂಕ್ಷ್ಮದರ್ಶಕಯಂತ್ರ, ದೂರದರ್ಶಕಯಂತ್ರ, ಧ್ವನಿವಾಹಕಯಂತ್ರ, ರೈಲು, ಹಡಗು, ಜಹಜು, ವಾಯು, ವಿಮಾನ, ಸ್ಫುಟನಿಕೆ ಮುಂತಾದವುಗಳ ಅರಿವು ಆಗುವದು; ಹಾಗಿಲ್ಲದವನಿಗೆ ಇಲ್ಲ.
ಪ್ರಪಂಚದ ಅರಿವು ಹೀಗೆ ಇಂದ್ರಿಯಗಳಿಂದಲೇ ಆಗುತ್ತಿರುವದೆಂಬುದು ನಮಗೆ ಹೇಗೆ ನಿಶ್ಚಿತವಾಗುತ್ತದೆ? ಎಂದು ಕೇಳಿದರೆ 'ಮನಸ್ಸಿನಿಂದ' ಎಂದು ಎಲ್ಲರೂ ಉತ್ತರಕೊಡಬೇಕಾಗುತ್ತದೆ. ಮನಸ್ಸಿನಿಂದಲ್ಲವೆ, ನಾವು ಇಂದ್ರಿಯಗಳ ಮೂಲಕ ಎಲ್ಲವನ್ನೂ ಕಾಣುತ್ತಿರುವದು?
ಸರಿ, ಹಾಗಾದರೆ ಈ ಮನಸ್ಸಿಗಾದರೂ ಅರಿವು ಎಲ್ಲಿಂದ ಬರುತ್ತದೆ? ಎಂಬ ಪ್ರಶ್ನೆಯು ಈಗ ಎದ್ದುಕೊಳ್ಳುತ್ತದೆಯಷ್ಟೆ. ಇದಕ್ಕೆ ಉತ್ತರವೇನೆಂದರೆ, ಆತ್ಮನೇ ಮನಸ್ಸನ್ನು ನೇರಾಗಿ ಅರಿಯುತ್ತಾನೆ; ಅವನ ಚೈತನ್ಯದ ಬೆಳಕೇ ಮನಸ್ಸಿನಲ್ಲಿ ಆಗುವ ವೃತ್ತಿರೂಪವಾದ ಜ್ಞಾನವು ಹಾಗಾದರೆ ಆತ್ಮನಿಗೂ? ಅವನಿಗೆಲ್ಲಿಂದ ಈ ಅರಿವು ಬರುತ್ತದೆ? ಎಂಬ ಪ್ರಶ್ನೆಯನ್ನು ಯಾರೂ ಹಾಕುವ ಹಾಗಿಲ್ಲ. ಏಕೆಂದರೆ ಆತ್ಮನ ಸ್ವರೂಪವೇ ಚೈತನ್ಯ, ಅರಿವು, ಆ ಅರಿವಿನ ಬೆಳಕಿನಿಂದಲೇ ಮನಸ್ಸು ಬೆಳಗುತ್ತದೆ; ಆ ಬೆಳಕೇ ಇಂದ್ರಿಯಗಳಲ್ಲಿಯೂ ಸೇರಿಕೊಂಡು ಹೊರಗಿನ ವಿಷಯಗಳನ್ನು ಬೆಳಗಿ ತೋರಿಸುತ್ತಿರುತ್ತದೆ.
ಈಗ ನಮಗೆ ಹೊರಗಿನ ವಸ್ತುಗಳು ತೋರುವದೆಂದರೇನೆಂಬ ಪ್ರಶ್ನೆಗೆ ಉತ್ತರವು ದೊರಕಿದಂತೆ ಆಯಿತು ಅದೇನೆಂದರೆ : ಪರಮಾತ್ಮನೇ ನಮ್ಮ ಆತ್ಮನು, ಆತನು ಜ್ಞಾನಸ್ವರೂಪನೇ ಆಗಿರುತ್ತಾನೆ. ಅವನ ಜ್ಞಾನದಿಂದಲೇ ಮನಸ್ಸು ಅಚೇತನವಾಗಿದ್ದರೂ - ಬೆಂಕಿಯಿಂದ ಕೆಂಪಗೆ ಕಾಯ್ದು ಹೊಳೆಯುವ ಕಬ್ಬಿಣದಂತೆ ಹೊಳೆಯುವದಕ್ಕೆ ಮೊದಲಾಗುತ್ತದೆ. ಆ ಹೊಳೆಯುವ ಮನಸ್ಸೇ ಇಂದ್ರಿಯಗಳಲ್ಲಿಯೂ ತೋರಿಕೊಳ್ಲುತ್ತದೆ. ಸೂರ್ಯನ ಬೆಳಕಿನಿಂದ ಹೊಳೆಯುವ ತವರದ ತಗಡಿನಂತೆಯೂ ಗಾಜಿನ ಕನ್ನಡಿಗಳಂತೆಯೂ ಮನಸ್ಸು, ಇಂದ್ರಿಯಗಳು - ಎಲ್ಲವೂ ಚೈತನ್ಯವುಳ್ಳ ತತ್ತ್ವಗಳೆನ್ನುವಂತೆಯೇ ಹೊಳೆಯುತ್ತಿದ್ದು ಹೊರಗಿನ ವಸ್ತುಗಳನ್ನು ಆ ತಮ್ಮ ಎರವಲುತಂದ ಜ್ಞಾನದ ಬೆಳಕಿನಿಂದ ಬೆಳಗಿ ತೋರಿಸುತ್ತವೆ.
ಈ ರೀತಿಯಲ್ಲಿ ವಸ್ತುಗಳನ್ನು ಇಂದ್ರಿಯಗಳು ಬೆಳಗುವದು, ಇಂದ್ರಿಯಗಳಲ್ಲಿ ಅದರಿಂದಾದ ಮಾರ್ಪಾಡಿನಿಂದ ಮನಸ್ಸಿನಲ್ಲಿ ವೃತ್ತಿಗಳೆಂಬ ಹೊಳೆಯುವ ಅಲೆಗಳು ಎದ್ದುಕೊಳ್ಳುವದು, ಕೊನೆಯಲ್ಲಿ ಎಲ್ಲವೂ ಆತ್ಮನ ಸ್ವಾಭಾವಿಕವಾದ ಚೈತನ್ಯದ ಬೆಳಕನ್ನು ತೋರಿಸಿಕೊಡುವದು ಇದೇ ವಸ್ತುಜ್ಞಾನಪ್ರಕಾರದ ತತ್ತ್ವ, ಆತ್ಮನು ತಾನೇ ಅರಿವಿನ ರೂಪವಾಗಿರುತ್ತಾನೆ! ಆದರೆ ಮನಸ್ಸೂ ಅದರ ಮೂಲಕ ಇಂದ್ರಿಯಗಳೂ ತಮ್ಮಲ್ಲಿ ಯಾವ ಚೈತನ್ಯವೂ ಇಲ್ಲದವುಗಳಾದರೂ 'ಆತ್ಮನ ಚೈತನ್ಯದಿಂದಲೇ ಚೈತನ್ಯವುಳ್ಳವಾಗಿ ತೋರುತ್ತವೆ. ವಿಷಯಗಳು ಇಂದ್ರಿಯಗಳಿಗೆ ತೋರುತ್ತವೆ ಎಂದರೆ ಅವು ಇಂದ್ರಿಯಗಳಲ್ಲಿರುವ ಆ ಚೈತನ್ಯದ ಆಭಾಸದ (ತೋರಿಕೆಯ) ನಿಮಿತ್ತದಿಂದಲೇ ಹೊರಗೆ ಇರುವಂತೆ ತೋರುತ್ತವೆ.
ಇದಕ್ಕೊಂದು ದೃಷ್ಟಾಂತವನ್ನು ಶ್ಲೋಕದಲ್ಲಿ ಕೊಟ್ಟಿರುತ್ತದೆ. ಒಂದು ಗಡಿಗೆಯೊಳಗೆ ಒಂದು ದೊಡ್ಡದೀಪವಿದೆ ಎಂದು ಇಟ್ಟುಕೊಳ್ಳೋಣ ಆಗ ಅದರೊಳಗೆ ಉರಿಯುತ್ತಿರುವ ದೀಪದ ಪ್ರಭೆಯ ಗಡಿಗೆಯನ್ನು ಮಾತ್ರ ವ್ಯಾಪಿಸಿರುತ್ತದೆ. ಆದರೆ ಅದೇ ಗಡಿಗೆಯಲ್ಲಿ ಬಗೆಬಗೆಯ ರಂಧ್ರಗಳಿದ್ದರೆ ಆ ರಂಧ್ರಗಳ ಪರಿಮಾಣಕ್ಕೆ ತಕ್ಕಂತೆ ಪ್ರಭೆಯು ಗಡಿಗೆಯಿಂದ ಹೊರಕ್ಕೂ ಹೋಗಿ ಅಲ್ಲಲ್ಲಿರುವ ವಸ್ತುಗಳನ್ನು ಬೆಳಗುತ್ತದೆಯಲ್ಲವೆ? ಇದರಂತೆ, ಶರೀರವೆಂಬ ಗಡಿಗೆಯೊಳಗೆ ಇರುವ ಆತ್ಮಚೈತನ್ಯದ ಪ್ರಭೆಯು ಬೇರೆಬೇರೆಯ ಕರಣಗಳ ಮೂಲಕವಾಗಿ ಹೊರಕ್ಕೆ ಬಂದು ಹೊರಗಿನ ವಿಷಯಗಳನ್ನು ಆಯಾ ಕರಮದ ಸ್ವಭಾವಕ್ಕೆ ಅನುಗುಣವಾಗಿ ಬೆಳಗುತ್ತಿರುತ್ತದೆ. ಅದರ ತತ್ತ್ವವನ್ನು ಅರಿಯದವರು ಇಂದ್ರಿಯಗಳೇ ತಮ್ಮ ಸ್ವಂತ ಬೆಳಕಿನಿಂದ ವಿಷಯಗಳನ್ನು ಬೆಳಗುತ್ತವೆ ಎಂದು ಭ್ರಾಂತರಾಗಬಹುದು ಆದರೆ ನಿಜವೇನು? ಅವು ಬೆಳಕು ಹೊರಕ್ಕೆ ಹೊರಡುವದಕ್ಕೆ ದ್ವಾರಮಾತ್ರಗಳು ಬೆಳಕು ಅವುಗಳಿಗೆ ಸೇರಿದ್ದಲ್ಲ ; ನಿಜವಾಗಿ ಅದೆಲ್ಲ ಆತ್ಮನ ಬೆಳಕೇ ಆಗಿರುತ್ತದೆ.
ಇಲ್ಲಿ ದೃಷ್ಟಾಂತದಾರ್ಷ್ಟಾಂತಿಗಳಿಗೆ ಇರುವ ಒಂದು ಹೆಚ್ಚುಕಡಿಮೆಯನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅದೇನೆಂದರೆ ದೃಷ್ಟಾಂತದಲ್ಲಿ ಗಡಿಗೆಯು ಮಣ್ಣಿನದಾಗಿರುತ್ತದೆಯಾದ್ದರಿಂದ ಅದರಲ್ಲಿ ಯಾವ ಬೆಳಕೂ ಇರುವದಿಲ್ಲ ಅದರ ರಂಧ್ರಗಳ ಮೂಲಕ ಹೊರಕ್ಕೆ ಬರುವ ಬೆಳಕು ನೇರಾಗಿ ದೀಪದ್ದೇ ಆಗಿರುತ್ತದೆ ಆದರೆ ದಾರ್ಷ್ಟಾಂತಿಕದಲ್ಲಿ ಆತ್ಮನ ಬೆಳಕು ಮನಸ್ಸನ್ನೂ ಇಂದ್ರಿಯಗಳನ್ನೂ ವ್ಯಾಪಿಸಿಕೊಂಡು ಬೆಳಗುವದಲ್ಲದೆ, ಅವುಗಳ ವೃತ್ತಿಯನ್ನು ಚಿದಾಭಾಸವಾಗಿ ಅವಕ್ಕೂ ಅರಿವು ಉಂಟು ಎಂದು ತೋರುವಂತೆ ಮಾಡಿರುತ್ತದೆ. ಕೆಲವು ದೇವಾಲಯಗಳಲ್ಲಿ ಸೂರ್ಯನ ಬಿಸಿಲನ್ನು ಮಾರುಹೊಳೆಯಿಸುವ ಕನ್ನಡಿಯಿಂದ ಗರ್ಭಗುಡಿಯೊಳಗಿನ ದೇವರ ಮೂರ್ತಿಯನ್ನು ಪೂಜಾರಿಯು ಕಾಣಿಸುವದುಂಟಷ್ಟೆ? ಅದರಂತೆ ಇಲ್ಲಿ ಅಂತಃಕರಣವೂ ಬಹಿಃಕರಣಗಳೂ ಆತ್ಮನ ಚೈತನ್ಯದ ಆಭಾಸದಿಂದ ಕುಡಿಕೊಂಡು ಆ ಬೆಳಕಿನ ಆಭಾಸದಿಂದಲೇ ಹೊರಗಿನ ವಿಷಯಗಳನ್ನು ತೊರಿಸುತ್ತಿರುತ್ತವೆ. ನಿಜವಾಗಿ ಅವಕ್ಕೆ ಯಾವ ಬೆಳಕೂ ಇರುವದೇ ಇಲ್ಲ.
ಇನ್ನೂ ಒಳಹೊಕ್ಕು ನೋಡಿದರೆ, ಆತ್ಮಚೈತನ್ಯವು ಎಲ್ಲೆಲ್ಲಿಯೂ ಎಡೆಬಿಡದೆ ವ್ಯಾಪಿಸಿಕೊಂಡೇ ಇರುತ್ತದೆ. ಮನಸ್ಸು ಇಂದ್ರಿಯಗಳು ಎಂದು ಹೊರನೋಟದಿಂದ ನಾವು ನಿರ್ಧರಿಸಿರುವ ಕರಣಗಳೂ, ಅವುಗಳ ಅರಿವಿನ ಬೆಳಕಿನಿಂದ ತೋರಿಕೊಳ್ಳುವವೆಂದು ನಾವು ಭಾವಿಸುತ್ತಿರುವ ವಿಷಯಗಳೂ ಎಲ್ಲವೂ ಆತ್ಮಚೈತನ್ಯದಿಂದ ಸಂಪೂರ್ಣವಾಗಿ ವ್ಯಾಪ್ತವಾಗಿಬಿಟ್ಟಿರುತ್ತವೆ. ಮಂಜುಗಡ್ಡೆಯಲ್ಲೆಲ್ಲ ನೀರೇ ವ್ಯಾಪಿಸಿಕೊಂಡಿರುತ್ತದೆ. ಈ ದೃಷ್ಟಿಯಿಂದ ನೋಡಿದರೆ ಆತ್ಮನು ಆದ್ವಿತೀಯಚೈತನ್ಯವೇ ಆಗಿರುತ್ತಾನೆ.
ಆದರೆ ನಾವು ಈಗಲೇ ಅಷ್ಟುದೂರ ಹೋಗಿ ವಿಚಾರಿಸದೆ ಇದ್ದರೂ ಆತ್ಮನ ಚೈತನ್ಯವೇ ಅನಾತ್ಮಗಳಲ್ಲಿ ಬೆಳಗುತ್ತಿರುವದೆಂತ ಹೇಳಬೇಕಾಗುತ್ತದೆ. ಅನಾತ್ಮಗಳು ತೋರುವದೆಂದರೆ ಆತ್ಮನ ಚೈತನ್ಯವು ಅವುಗಳನ್ನು ಬೆಳಗಿತೋರಿಸುತ್ತದೆ ಎಂದೇ ಅರ್ಥ.
ಈಗ ಆತ್ಮಚೈತನ್ಯವು ನಮಗೆ ಹೇಗೆ ತೋರುತ್ತಿರುತ್ತದೆ? 'ನಾನು ಗಡಿಗೆಯನ್ನು ಅರಿತೆನು' ಎಂದು ಭಾವಿಸುವಾಗ 'ನಾನು' ಎಂಬ ವಸ್ತು ತೋರುವದು ಹೇಗೆ? ಗಡಿಗೆಯು ತೋರುವದು ಹೇಗೆ? ನೋಡಿದೆನು, ಅರಿತೆನು ಎಂದು ಮುಂತಾಗಿ ಆಗುವ ಅನುಭವದಲ್ಲಿರುವ ಕ್ರಿಯೆ ಯಾವದು? ಫಲವು ಯಾವದು? ಇದನ್ನು ಒಂದಿಷ್ಟು ವಿಮರ್ಶಿಸುವದು ಒಳ್ಳೆಯದು.
ಆತ್ಮನು ಮನಸ್ಸು ಮೊದಲಾಗಿ ಇಂದ್ರಿಯ, ವಿಷಯ, ವೇದನೆಗಳು ಎಲ್ಲಕ್ಕೂ ಸಾಕ್ಷಿಯಾಗಿ ಎಲ್ಲವನ್ನೂ ತನ್ನ ಕೊಟಸ್ಥವಾದ ಚೈತನ್ಯದಿಂದ ಬೆಳಗುತ್ತಿರುತ್ತಾನೆ. ಇಲ್ಲಿ 'ಆತ್ಮನು ಅನಾತ್ಮವನ್ನು ಬೆಳಗುತ್ತಾನೆ', ಎಂಬುದು 'ಸೂರ್ಯನು ಭೂಮಿಯನ್ನು ಬೆಳಗುತ್ತಾನೆ' - ಎಂಬಂತೆ ಆಗಿರುವ ಔಪಚಾರಿಕ ವ್ಯವಹಾರವಾಗಿರುತ್ತದೆ. ದೃಷ್ಟಾಂತದಲ್ಲಿ ಸೂರ್ಯನೂ ಬೆಳಕೂ ಒಂದೇ; ಸೂರ್ಯನಲ್ಲಿ ಬೆಳಗುವದೆಂಬ ವ್ಯಾಪಾರವು ಯಾವದೂ ಇರುವದಿಲ್ಲ; ಹೊಲದಲ್ಲಿರುವ ಪೈರನು ರೈತನು ಕುಡುಗೋಲಿನಿಂದ ಕ್ರಮಕ್ರಮವಾಗಿ ಕೊಯ್ದ ಕೆಳಗಿಡುವಂತೆ ಸೂರ್ಯನೇನೂ ವಸ್ತುಗಳನ್ನು ಕ್ರಮಕ್ರಮವಾಗಿ ಬೆಳಗುತ್ತಲೂ ಆಮೇಲೆ ಬೆಳಗುವ ವ್ಯಾಪಾರವನ್ನು ಬಿಡುತ್ತಲೂ ಇರುವದಿಲ್ಲ. ಇದರಂತೆ ಸಾಕ್ಷಿಚೈತನ್ಯ ಸ್ವರೂಪನಾದ ಆತ್ಮನು 'ಸಾಕ್ಷ್ಯವಾಗಿರುವ ಅನಾತ್ಮನನ್ನು ಬೆಳಗುತ್ತಾನೆ' ಎಂಬಲ್ಲಿ ಆತ್ಮನು ಯಾವ ಮಾರ್ಪಾಡೂ ಇಲ್ಲದ ಅರಿವಿನ ಸ್ವರೂಪನಾಗಿರುತ್ತಾನೆ. ಸರ್ವತ್ರ ವ್ಯಾಪ್ತವಾಗಿರುವ ಅವನ ಚೈತನ್ಯವು ಸಾಕ್ಷ್ಯವೆಲ್ಲವನ್ನೂ ಯಾವ ಪ್ರಯತ್ನವೂ ಯಾವ ವ್ಯಾಪಾರವೂ ಇಲ್ಲದೆ ಒಮ್ಮೆಗೇ ತೋರಿಸಿಕೊಡುತ್ತಿರುತ್ತದೆ. ಆದ್ದರಿಂದಲೇ ಆತ್ಮನನ್ನು "ಸರ್ವಜ್ಞನು" ಎಂದು ವೇದಾಂತಿಗಳು ಕರೆಯುತ್ತಿರುವರು.
ಆದರೆ "ನಾನು" ಎಂಬ ರೂಪದಿಂದ ಜೀವನು ಅಂತಃಕರಣವೆಂಬ ಉಪಾಧಿಯಿಂದ ಒಂದಾನೊಂದು ದೇಹೇಂದ್ರಿಯಗಳ ಗುಂಪಿನೊಳಗೆ ಇದ್ದುಕೊಂಡು, ಅಂತಃಕರಣವೆಂಬ ಸಾಧನದಿಂದ ಇಂದ್ರಿಯಗಳ ಮೂಲಕವಾಗಿ ಹೊರಗಿನ ವಿಷಯಗಳನ್ನು ಬೆಳಗುತ್ತಿರುತ್ತಾನೆ. ವಿಷಯಕ್ಕೂ ಇಂದ್ರಿಯಕ್ಕೂ ಸಂಯೋಗವಾದಾಗ ಅವನಲ್ಲಿ "ಈ ವಿಷಯವನ್ನು ಕಂಡೆನು, ಕೇಳಿದೆನು" ಎಂದು ಮುಂತಾದ ಅರಿವು ಎದ್ದುಕೊಳ್ಳುತ್ತದೆ. ಆ ಅರಿವು ಚೈತನ್ಯವ್ಯಾಪ್ತವಾದ ಅಂತಃಕರಣದ ವೃತ್ತಿವಿಶೇಷವಾಗಿರುತ್ತದೆ. ಆ ವೃತ್ತಿಯಂಟಾದಾಗ "ನನಗೆ ಜ್ಞಾನವುಂಟಾಯಿತು" ಎಂದು ಜೀವನು ಬಗೆಯುತ್ತಾನೆ. ಆಗ ವೃತ್ತಿಯುಂಟಾದದ್ದಲ್ಲದೆ ವೃತ್ತಿಯ ಕೊನೆಯಲ್ಲಿ ಆತ್ಮಚೈತನ್ಯಸ್ವರೂಪದಲ್ಲಿಯೇ ಅದು ಪರ್ಯವಸಾನವಾಗುತ್ತದೆ. ಇದೇ ಫಲಜ್ಞಾನವು ಚೈತನ್ಯವು ನಿತ್ಯವಾಗಿದ್ದರೂ ಅಯಾ ವೃತ್ತಿಯ ಕೊನೆಯಲ್ಲಿ ಅನುಭವಕ್ಕೆ ಬರುವದರಿಂದ ಅಯಾ ವಿಷಯದ ಅರಿವು ಎಂಬ ರೂಪದಿಂದ ವ್ಯವಹಾರಕ್ಕೆ ವಿಷಯವಾಗುತ್ತದೆ ಅಂತೂ ವಿಷಯಜ್ಞಾನದಲ್ಲಿ ಯಾವದು ಫಲರೂಪವಾಗಿರುದೋ ಅದೇ ನಿಜವಾಗಿ ಆತ್ಮನು ಅದೇ ಸ್ವಯಂಪ್ರಕಾಶವಾಗಿರುವ ಚೈತನ್ಯವು.
ಹೀಗೆ ನಾನು ಅರಿಯುತ್ತೇನೆ ಎಂಬ ವ್ಯವಹಾರವನ್ನು ಸಂಪ್ರದಾಯಾನು ಸಾರವಾಗಿ ಬಿಡಿಸಿ ವಿಷಯಜ್ಞಾನವೆಲ್ಲವೂ ವೃತ್ತಿಜ್ಞಾನರೂಪವೆಂದೂ ಅದರ ತಿರುಳು ಸ್ವಯಂಪ್ರಕಾಶವಾಗಿರುವ ಆತ್ಮಚೈತನ್ಯವೇ ಎಂದೂ ಅದರ ಬೆಳಕನ್ನನುಸರಿಸಿಯೇ ಸೂರ್ಯಚಂದ್ರಾದಿಜಗತ್ತೆಲ್ಲವೂ ಬೆಳಗಿತೋರುತ್ತಿರುವದೆಂದೂ ತಿಳಿಸಬಲ್ಲ ಗುರುವೇ ನಮ್ಮಗಳ ಆತ್ಮನಾದ ಶ್ರೀದಕ್ಷಿಣಾಮೂರ್ತಿಯು - ಎಂದಾಯಿತು.
Comments
Post a Comment