ರುದ್ರಭಾಷ್ಯಪ್ರಕಾಶ - 3ನೇ ಅನುವಾಕ (ಸಂಪೂರ್ಣ)

ನಮಃ ಸಹಮಾನಾಯ

ಈಗ ಮೂರನೆಯ ಅನುವಾಕವನ್ನು ವಿಚಾರಮಾಡಬೇಕಾಗಿದೆ :

ನಮಃ ಸಹಮಾನಾಯ ನಿವ್ಯಾಧಿನ ಆವ್ಯಾಧಿನೀನಾಂ ಪತಯೇ ನಮೋ
ನಮಃ ಕಕುಭಾಯ ನಿಷಂಗಿಣೇ ಸ್ತೇನಾನಾಂ ಪತಯೇ ನಮೋ ನಮೋ
ನಿಷಂಗಿಣ ಇಷುಧಿಮತೇ ತಸ್ಕರಾಣಾಂ ಪತಯೇ ನಮೋ ನಮೋ ವಂಚತೇ
ಪರಿವಂಚತೇ ಸ್ತಾಯೂನಾಂ ಪತಯೇ ನಮೋ ನಮೋ ನಿಚೇರವೇ
ಪರಿಚರಾಯಾರಣ್ಯಾನಾಂ ಪತಯೇ ನಮಃ ||

    'ಸಹಮಾನನೂ ನಿವ್ಯಾಧಿಯೂ ಆವ್ಯಾಧಿನಿಗಳ ಪತಿಯೂ ಕಕುಭನೂ ನಿಷಂಗಿಯೂ, ಕಳ್ಳರ ಒಡೆಯನೂ, ನಿಷಂಗಿಯೂ, ಇಷುಧಿಮಂತನೂ ತಸ್ಕರಪತಿಯೂ ಆಗಿರುವ, ವಂಚನೆಪರಿವಂಚನೆಗಳನ್ನು ಮಾಡುವ ಸ್ತಾಯುಗಳ ಪತಿಯೂ ಆದ, ನಿಚೇರುವೂ ಪರಿಚರನೂ ಅರಣ್ಯಕರ ಪತಿಯೂ ಆದವನಿಗೆ ನಮಸ್ಕಾರ!'

    ಈ ಮಂತ್ರಗಳಲ್ಲಿ ರಾಜಸತಾಮಸಪ್ರಕೃತಿಯ ಜನರೆಲ್ಲರಲ್ಲಿಯೂ ಅಂತರ್ಯಾಮಿಯಾಗಿದ್ದುಕೊಂಡಿರುವವನು ರುದ್ರನೇ - ಎಂದು ತಿಳಿಸಲಾಗಿದೆ. ರುದ್ರನು ಸರ್ವಾತ್ಮಕನೆಂದಮೇಲೆ ಯಾವದೊಂದು ಶರೀರವನ್ನಾಗಲಿ ಉಪಾಧಿಯನ್ನಾಗಲಿ ಬಿಡದೆ ಎಲ್ಲದರಲ್ಲಿಯೂ ವ್ಯಾಪಿಸಿಕೊಂಡಿರಬೇಕಷ್ಟೆ! ಆದ್ದರಿಂದ ಇಲ್ಲಿ ಸ್ತುತಿಮಾಡಿರುವ ಬಗೆಯನ್ನು ಸರಿಯಾದ ರೀತಿಯಿಂದ ಸಮನ್ವಯ ಮಾಡಿಕೊಳ್ಳಬೇಕು. 'ಭಗವಂತನು ಸರ್ವೇಶ್ವರನು' - ಎಂಬ ಶಬ್ದಕ್ಕೆ ಸಂಕೋಚವಿಲ್ಲದೆ ಎಲ್ಲಾ ಜೀವರುಗಳಿಗೂ ಒಡೆಯನು - ಎಂಬ ಅಭಿಪ್ರಾಯವನ್ನು ನೆನಪಿಟ್ಟುಕೊಂಡು ಅರ್ಥಮಾಡಿಕೊಳ್ಳಬೇಕು.

    ಈಗ ಮೊದಲನೆಯ ವಿಶೇಷಣವನ್ನು ವಿಚಾರಮಾಡೋಣ ಸಹಮಾನನೆಂದರೆ ಶತ್ರುಗಳನ್ನು ಹಿಮ್ಮೆಟ್ಟಿಸುವವನು - ಎಂದು ಒಂದರ್ಥ ಭಗವಂತನ ವಿಷಯದಲ್ಲಿ ಭಕ್ತರುಗಳು ಮಾಡಬಹುದಾದ ಅಪರಾಧಗಳನ್ನು ಕ್ಷಮಿಸುವವನು ಎಂದು ಮತ್ತೊಂದು ಅರ್ಥ. ಆದರೆ ಇದೇ ಭಗವಂತನೇ ನಿವ್ಯಾಧಿಯು ಎಂದರೆ ಚೆನ್ನಾಗಿ ಹೊಡೆಯುವವನು; ಮತ್ತು ಸುತ್ತಲೂ ಹೊಡೆಯುವ ಆವ್ಯಾಧಿನಿಗಳ ಪತಿಯು. ಹೀಗೆ ಬಾಣಗಳಿಂದ ಎಲ್ಲೆಲ್ಲೂ ಹೊಡೆಯುವ ಮತ್ತು ಚೆನ್ನಾಗಿ ಏಟುಬೀಳುವಂತೆ ಮಾಡುವ ಬಿಲ್ಲುಗಾರನಾದ್ದರಿಂದ ಭಗವಂತನ ವಿಷಯಕ್ಕೆ ಎಲ್ಲರೂ ಹೆದರಬೇಕಾಯಿತು ಏಕೆಂದರೆ ಎಲ್ಲಾ ಪ್ರಾಣಿಗಳೂ ಒಂದಲ್ಲ ಒಂದು ರೀತಿಯಿಂದ ಪಾಪವನ್ನು ಮಾಡುತ್ತಾ ಭಗವದಪರಾಧಿಗಳೇ ಆಗಿರುತ್ತಾರೆ ಆದ್ದರೀಂದಲೇ ಸಹಮಾನನೆಂದು ತಿಳಿಸಿದೆ. ಜನರ ಎಷ್ಟೋ ಅಪರಾಧಗಳನ್ನು ಭಗವಂತನು ಸಹಿಸಿಕೊಂಡೇಬಿಡುತ್ತಾನೆ ಆದ್ದರಿಂದಲೇ ಇಷ್ಟರಮಟ್ಟಿಗಾದರೂ ಪ್ರಪಂಚವು ಬದುಕಿರಲು ಸಾಧ್ಯವಾಗಿದೆ. ಎಲ್ಲಾ ತಪ್ಪಿಗೂ ಎಲ್ಲರಿಗೂ ದೇವರು ಶಿಕ್ಷೆಯನ್ನೇ ಕೊಟ್ಟುಬಿಟ್ಟಿದ್ದರೆ ಯಾರು ಈವರೆಗೆ ಬದುಕಿರಲು ಸಾದ್ಯವಾಗುತ್ತಿರಲಿಲ್ಲ - ಎಂದು ಭಾವ.

    ಇನ್ನು ಕಕುಭನಿಗೆ ನಮಸ್ಕಾರ, ಎಂದರೆ ದಿಕ್ಕುಗಳಿಗೆ ಹಾಗೂ ಅವುಗಳ ಒಡೆಯರಾದ ಇಂದ್ರಾದಿಗಳ ರೂಪದಲ್ಲಿರುವ ದೇವನಿಗೆ ನಮಸ್ಕಾರ ಮತ್ತು ಖಡ್ಗವನ್ನು ಧರಿಸಿರುವ ನಿಷಂಗನಿಗೆ ನಮಸ್ಕಾರ ಮುಂದಿನ ವಾಕ್ಯದಲ್ಲಿರುವ ನಿಷಂಗವೆಂಬ ಶಬ್ದಕ್ಕೆ ಧನುಸ್ಸಿನಲ್ಲಿ ಹೂಡಲು ಕೈಯಲ್ಲಿ ಹಿಡಿದಿರುವ ಬಾಣವೆಂದು ಹೆಸರು ಬೆನ್ನಿಗೆ ಕಟ್ಟಿಕೊಂಡಿರುವ ಬಾಣದ ಚೀಲಕ್ಕೆ ಈಷುಧಿಯೆಂದೂ ಹೆಸರು ಇವೆರಡರಿಂದಲೂ ಕೂಡಿರುವ ದೇವನಿಗೆ ನಮಸ್ಕಾರ ಎಂದು ಸ್ತೋತ್ರಮಾಡಿದೆ.

    ಇನ್ನು ಸ್ತೇನರ ಪತಿಯಾದವನಿಗೆ, ತಸ್ಕರರ ಪತಿಯಾದವನಿಗೆ, ವಂಚನೆ, ಪರಿವಂಚನೆಗಳನ್ನು ಮಾಡುವ ಸ್ತಾಯುಗಳ ಪತಿಯಾದವನಿಗೆ ನಮಸ್ಕಾರ ಎಂಬಿದರ ಅರ್ಥವನ್ನು ವಿಚಾರಮಾಡೋಣ ಮತ್ತೊಬ್ಬರಿಗೆ ಕಾಣದಂತೆ ಗುಪ್ತವಾಗಿ ಕಳ್ಳತನವನ್ನು ಮಾಡುವವರಿಗೆ ಸ್ತೇನನೆಂದು ಹೆಸರು ಎಲ್ಲರಿಗೂ ಕಾಣುವಂತೆಯೇ ದರೋಡೆಮಾಡುವವರಿಗೆ ತಸ್ಕರರೆಂದು ಹೆಸರು ನಮ್ಮವರಂತೆಯೇ ನಟಿಸುತ್ತಾ ಬೇರೆಯವರಿಗೆ ಗೊತ್ತಾಗದಂತೆ (ವೇಷವನ್ನು ಮರೆಯಿಸಿ ಕೊಂಡು) ಇದ್ದುಕೊಂಡು ಸಮಯವನ್ನು ಕಾದು ಹಣವನ್ನು ಅಪಹರಿಸುವವರು ಸ್ತಾಯುಗಳು ಸ್ತಾಯುಗಳಲ್ಲಿ ಯಜಮಾನನಿಗೆ ಆಪ್ತನಾಗಿದ್ದುಕೊಂಡು ಅವನ ವ್ಯಾಪಾರವ್ಯವಹಾರಗಳಲ್ಲಿ ಕೈಹಾಕಿ ಎಲ್ಲಿಯೋ ಒಂದು ಕಡೆ ಆತನಿಗೆ ತಿಳಿಯದಂತೆ ದುಡ್ಡುಹೊಡೆಯುವವನು ವಂಚನನು ಎಲ್ಲಾ ವ್ಯವಹಾರದಲ್ಲಿಯೂ ಬಚ್ಚಿಟ್ಟುಕೊಂಡು ಮೋಸಮಾಡುವವನು ಪರಿವಂಚನನು ಇಂಥ ವಂಚನಪರಿವಂಚನಚತುರರಾದ ಸ್ತಾಯುಗಳ ಗುಂಪಿಗೆ ಪತಿಯಾದ ಪರಮೇಶ್ವರನಿಗೆ ನಮಸ್ಕಾರ ಎಂದು ಅಕ್ಷರಾರ್ಥವಾಗುವದು.

    ಆದರೆ ಇಂಥವರನ್ನೆಲ್ಲ ಮಹಾದೇವನ ವಿಭೂತಿಗಳೆಂದು ಸ್ತೋತ್ರಮಾಡಬಹುದೆ? ಅಥವಾ ಈ ಕುತ್ಸಿತವಿಶೇಷಣಗಳಿಂದ ಸರ್ವಪೂಜ್ಯನಾದ ಭಗವಂತನನ್ನು ಹೊಗಳಬಹುದೆ? ಎಂದು ಎಲ್ಲರಿಗೂ ಸಂಶಯವು ಉಂಟಾಗಬಹುದಾಗಿದೆ ಆದರೆ ಭಗವಂತನು ಒಳ್ಳೆಯವರಿಗೆ ಒಳ್ಳೆಯವನು, ಕೆಟ್ಟವರಿಗೆ ಕೆಟ್ಟವನೂ ಆಗಿಯೇ ವ್ಯವಹಾರದಲ್ಲಿ ತಾನೂ ಲೀಲೆಯನ್ನು ತೋರಿಸುವವನಲ್ಲವೆ? ರುಕ್ಮಿಣೀಕಲ್ಯಾಣದಲ್ಲಿ ಆಕೆಯ ಪ್ರಾರ್ಥನೆಯಂತೆ ಸಮಯಕ್ಕೆ ಸರಿಯಾಗಿ ಬಂದು ಅವಳನ್ನು ಹಾರಿಸಿಕೊಂಡು ಹೋಗಲಿಲ್ಲವೆ? ವಾಲಿಯನ್ನು ಸಂಹಾರಮಾಡುವಾಗ ಗುಪ್ತವಾಗಿ ನಿಂತು ಬಾಣವನ್ನು ಹೊಡೆಯಲಿಲ್ಲವೆ? ಬಲಿರಾಜನಿಗೆ ವಾಮನವೇಷದಿಂದ ತೋರಿಕೊಂಡು ಅವನ ಸರ್ವಸ್ವವನ್ನು ಅಪಹಾರ ಮಾಡಲಿಲ್ಲವೆ? ಜರಾಸಂಧ, ಜಯದ್ರಥ, ಕರ್ಣಾದಿಗಳ ವಧೆಯಲ್ಲಿ ಸಾಕಷ್ಟು ವಂಚನೆಮಾಡಲಿಲ್ಲವೆ? ಇತ್ಯಾದಿ. ಹೀಗೆ ದುಷ್ಟರಿಗೆ ದುಷ್ಟನಾಗಿಯೇ ತೋರಿ ಕೊಂಡು ಶಿಕ್ಷಿಸುವ ಭಗವಂತನು ಯಾವ ವಂಚಕರಿಗೂ ಕಡಿಮೆಯವನಲ್ಲ ಅವನನ್ನು ದ್ವೇಷಮಾಡುವವರಿಗೆ ಹಾಗೆಯೇ, ವಂಚಕರ ಹಾಗೂ ತಸ್ಕರನ ರೂಪದಿಂದ ಬಂದು ತಕ್ಕಶಾಸ್ತಿಯನ್ನು ಮಾಡುತ್ತಾನೆಂಬುದೇ ಇಲ್ಲಿ ಅಭಿಪ್ರಾಯವು ಅಥವಾ 'ಯಸ್ಯಾನುಗ್ರಹಮಿಚ್ಛಾಮಿ' ಎಂಬ ನ್ಯಾಯದಂತೆ ಪುರಂದರದಾಸರಿಗೆ ಬ್ರಾಹ್ಮಣರೂಪದಿಂದ ಬಂದು ಬುದ್ಧಿಕಲಿಸಿದಂತೆ ಮತ್ತು ಗೋಪಿಯರನ್ನು ತನ್ನ ಲೀಲೆಯಿಂದ ಆಟವಾಡಿಸಿದಂತೆ ಜಗತ್ತನ್ನೆಲ್ಲ ವಂಚನಾದಿರೂಪಲೀಲೆಯಿಂದ ವ್ಯಾಪಿಸಿರುತ್ತಾನೆ - ಎಂದೂ ಅರ್ಥಮಾಡಬಹುದು; ಅಥವಾ ಭಕ್ತರ ಪಾಪಗಳನ್ನು ಕದ್ದು ದರೋಡೆಮಾಡಿ ಅವರನ್ನು ಶುದ್ಧಿಗೊಳಿಸಿ ಉಪಕಾರ ಮಾಡುತ್ತಾನೆಂದೂ ಗೌಣಾರ್ಥವನ್ನು ಕಲ್ಪಿಸಬಹುದು ಯಾರುಯಾರು ಹೇಗೆ ಹೇಗೆ ಅವನನ್ನು ಬಳಿಸಾರುವರೋ ಹಾಗೆಹಾಗೆ ಅನುಗ್ರಹಿಸುತ್ತಾನೆ - ಎಂಬ ಅಭಿಪ್ರಾಯವು ಇಲ್ಲಿ ಅಡಗಿರುತ್ತದೆ.

    ಇನ್ನು ನಿಚೇರುವೆಂದರೆ ಕಾಡಿನಲ್ಲಿ ಸಂಚರಿಸುತ್ತಾ ಕಳ್ಳತನಮಾಡುವವನು. ಪರಿಚರನೆಂದರೆ ಹತ್ತಿರವೇ ಸೇವೆಮಾಡಿಕೊಂಡಿದ್ದು ಧನವನ್ನು ಅಪಹರಿಸುವವನು. ಅರಣ್ಯನೆಂದರೆ ಕಾಡಿನಲ್ಲಿರಬಹುದಾದ ದರೋಡೆಯವನು ಹೀಗೆ ಇಂಥವರಿಗೆಲ್ಲ ಪತಿಯು ಪರಮೇಶ್ವರನು - ಎಂದರ್ಥ ಇಲ್ಲಿಯೂ ಹಿಂದಿನಂತೆಯೇ ಲೀಲಾಮೇಷಧಾರಿಯಾದ ಕಿರಾತರೂಪದಿಂದ ಹಾಗೂ ವ್ಯಾಧನರೂಪದಿಂದ ಸಂಚರಿಸುವ ಪರಮೇಶ್ವರನಿಗೆ ನಮಸ್ಕಾರವೆಂದರ್ಥ.

    ವೇದವು ಭಗವಂತನ ಮಹಿಮೆಯನ್ನು ಹೇಳಹೊರಟಿರುವದರಿಂದ ಅದಕ್ಕೆ ಎಲ್ಲರೂ ಒಂದೇ ರೀತಿಯಲ್ಲಿ ವಿಷಯರಾಗಿರುತ್ತಾರೆ. ಲೋಕದಲ್ಲಿ ಕಣ್ಣಿಗೆ ಗೋಚರವಾಗುವ ಯಾವದೇ ರೂಪವಾಗಲಿ, ಅದೆಲ್ಲವೂ ಪರಮೇಶ್ವರನ ರೂಪವೇ - ಎಂಬುದೇ ಇಲ್ಲಿ ಮುಖ್ಯತಾತ್ಪರ್ಯ ಬ್ರಾಹ್ಮಣರು ಈ ವೇದವನ್ನು ಅಧ್ಯಯನಮಾಡುತ್ತಾ ರುದ್ರನ ಪುಜೆಯನ್ನು ಮಾಡುವಲ್ಲಿ ಅವರ ಭಾವನೆಗಳು ಹೇಗಿದ್ದಿರಬಹುದೆಂಬುದನ್ನು ಈಗ ತಿಳಯಬಹುದಾಗಿದೆ ಈಗ ನಾವು ಹೆಸರಿಸುವ ಹರಿಜನರು, ಗಿರಿಜನರು, ಕಳ್ಳಕಾಕರು, ಢಕಾಯಿತರು ಮುಂತಾದವರೆಲ್ಲರೂ ಮೂಲರೂಪದಿಂದ ಭಗವತ್ ಸ್ವರೂಪರೇ; 'ಬ್ರಹ್ಮ ದಾಶಾಃ ಬ್ರಹ್ಮ ದಾಸಾಃ ಬ್ರಹ್ಮೈವೇಮೇ ಕಿತವಾಃ' (ಬೆಸ್ತರು ಬ್ರಹ್ಮವು ಜೀತದಾಳುಗಳು ಬ್ರಹ್ಮರು. ಧೂರ್ತರೂ ಬ್ರಹ್ಮರೇ) ಎಂದು ಇನ್ನೊಂದು ಶ್ರುತಿಯೂ ಹೇಳುತ್ತಿದೆ. ನಿಜವಾಗಿ ಅವರುಗಳ ಆತ್ಮನು ಶಿವನೇ ಎಂಬ ನಿಶ್ಚಯಬುದ್ಧಿಯುಳ್ಳವನೇ ಬ್ರಾಹ್ಮಣನು ಎಂದರ್ಥವಾಯಿತಲ್ಲವೆ? ಸಮಬುದ್ಧಿಯುಳ್ಳವನೇ ಪಂಡಿತನಲ್ಲವೆ? ಇಂಥ ಆಧ್ಯಾತ್ಮಜ್ಞಾನವು ಎಂದಿಗಾದರೂ ಮತಧರ್ಮವೆನಿಸೀತೆ? ಒಂದು ವೇಳೆ ಮತವೆಂದರೂ ಅದು ವಿಶ್ವಕ್ಕೆಲ್ಲ ಏಕರೂಪವಾಗಿರುವ ಸತ್ಯಮತವಲ್ಲವೆ? ಅದರ ಧರ್ಮವು ವಿಶ್ವವ್ಯಾಪಕ ಧರ್ಮವಲ್ಲವೆ? ಹೀಗೆ ಸನಾತನಧರ್ಮವು ತಾನೊಂದೇ ಬಗೆಬಗೆಯಾಗಿ ತೋರಿಕೊಂಡು ಇಡಿಯ ಪ್ರಪಂಚವನ್ನೆಲ್ಲ ತನ್ನೊಳಗೇ ಅಡಕಮಾಡಿಕೊಂಡಿದೆ ಎಂಬುದು ಈ ವಿವರಣೆಯಿಂದ ಸಿದ್ಧವಾಯಿತು.

ನಮಃ ಸೃಕಾವಿಭ್ಯಃ ರುದ್ರಾಧ್ಯಾಯದ ಮೂರನೆಯ ಅನುವಾಕದ ಉಳಿದ ಮಂತ್ರಭಾಗವನ್ನು ಈಗ ವಿಚಾರಮಾಡೋಣ :

ನಮಃ ಸೃಕಾವಿಭ್ಯೋ ಜಿಘಾಂಗ್‌ಸದ್ಭ್ಯೋ ಮುಷ್ಣತಾಂ ಪತಯೇ
ನಮೋ ನಮೋಸಿಮಧ್ಭ್ಯೋ ನಕ್ತಂಚರದ್ಭ್ಯಃ ಪ್ರಕೃನ್ತಾನಾಂ ಪತಯೇ
ನಮೋ ನಮ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮಃ ||

    'ಸೃಕಾವಿಗಳೂ ಜಿಘಾಂಸರೂ, ಕದಿಯುವವರ ಪತಿಯೂ ಖಡ್ಗಧಾರಿಗಳೂ ರಾತ್ರೆಯಲ್ಲಿ ಸಂಚರಿಸುವವರೂ ಪ್ರಕೃಂತರ ಪತಿಯೂ, ಉಷ್ಣೀಷಿಯೂ ಬೆಟ್ಟಗಳಲ್ಲಿ ತಿರುಗುವವನೂ ಕುಲುಂಚರ ಪತಿಯೂ, ಆದವನಿಗೆ ನಮಸ್ಕಾರ!'
    ಪರಮೇಶ್ವರನು ಸರ್ವಾತ್ಮಕನೆಂಬುದನ್ನು ಮತ್ತೊಮ್ಮೆ ತಿಳಿಸುವದಕ್ಕಾಗಿ ಯಾವಯಾವ ದುಷ್ಟವಾದ ಉಪಾಧಿಗಳಲ್ಲಿ ನಮಗೆ ಭಗವದ್ಭಾವನೆಯು ಉಂಟಾಗುವದು ಕಷ್ಟವೋ ಅಂಥವುಗಳನ್ನೇ ಮತ್ತೊಮ್ಮೆ ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಪರಮೇಶ್ವರನ ದೃಷ್ಟಿಯಿಂದ ದುಷ್ಟರ ಶಿಷ್ಟರು ಎಂಬ ಭೇದವಿಲ್ಲ ವ್ಯವಹಾರದಲ್ಲಿ ಮಾತ್ರ ಹಾಗೆ ಇದೆ. ಆದ್ದರಿಂದ ಈಗ ನಾವು ವ್ಯವಹಾರಪ್ರಪಂಚದಿಂದ ಮೇಲೇರಿ ಈ ವರ್ಣನೆಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಭಗವಂತನ ಸೃಷ್ಟಿಯಲ್ಲಿ ಎಲ್ಲಕ್ಕೂ ಸ್ಥಾನವಿದೆ ಎಲ್ಲವೂ ಆತನ ಲೀಲೆಗೆ ಸಾಧನವಾಗಿಯೇ ಇವೆ. ಈ ವೈಚಿತ್ರ್ಯಗಳಿಲ್ಲದಿದ್ದರೆ ಆತನ ಮಹಿಮೆಯಾದರೂ ನಮಗೆ ಹೇಗೆ ತಿಳಿಯಬೇಕು? ಆದ್ದರಿಂದ ತೀರ ಕೀಳೆಂದೂ ಕೆಟ್ಟದ್ದೆಂದೂ ನಾವು ಭಾವಿಸಿರುವಂಥವು ಕೂಡ ಪರಮೇಶ್ವರನ ಸ್ವರೂಪದಲ್ಲೇ ಅಡಕವಾಗಿದೆ ಎಂಬುದು ಇಲ್ಲಿ ತಾತ್ಪರ್ಯ.

    ಸೃಕವೆಂದರೆ ಯಂತ್ರವು ಯಂತ್ರದ (ಬಲ)ದಿಂದ ತನ್ನನ್ನು ರಕ್ಷಿಸಿಕೊಳ್ಳುವವನು ಸೃಕಾವಿಯು ಇಂಥವರ ಗುಂಪಿಗೆ ನಮಸ್ಕಾರ ಮಿಲಿಟರಿ ಯೋಧರನ್ನು ಕಂಡಾಗ ಈ ಮಂತ್ರವನ್ನು ನೆನೆಸಿಕೊಳ್ಳಬಹುದು ಜಿಘಾಂಸರೆಂದರೆ ಕೊಲ್ಲುವವರು ಶತ್ರುಗಳನ್ನು ದುಷ್ಟಪ್ರಾಣಿಗಳನ್ನೂ ಕೊಂದು ಜನರಿಗೆ ಅನುಕೂಲಮಾಡಿಕೊಡುವಂಥ ರಕ್ಷಾಪುರುಷರ ರೂಪದಲ್ಲಿಯೂ ಪರಮೇಶ್ವರನೇ ಇರುತ್ತಾನೆ ಕದಿಯುವವನು ಕೂಡ ತನಗೆ ಅಡ್ಡ ಬಂದವರನ್ನು ಕೊಲ್ಲಲ್ಲು ಪ್ರಯತ್ನಮಾಡುತ್ತಾನೆ ಆದ್ದರಿಂದ ಕದಿಯುವವರ ಗುಂಪಿಗೆ ಪತಿ (ಮುಷ್ಣತಾಂ ಪತಿ)ಯಾದವನಲ್ಲಿಯೂ ಪರಮೇಶ್ವರನೇ ಇದ್ದುಕೊಂಡಿರುವನು. ಆಧ್ಯಾತ್ಮವಾಗಿ ನಮ್ಮ ಪಾಪಗಳನ್ನು ಕದ್ದು ಕಾಮಾದಿಶತ್ರುಗಳನ್ನು ಕೊಂದು ನಮ್ಮನ್ನು ಕಾಪಾಡುವವನು ಪರಮೇಶ್ವರನು ಎಂಬ ಅರ್ಥವು ಇಲ್ಲಿ ವಿವಕ್ಷಿತವಾಗಿದೆ. ಹಾಗೆಯೇ ಅಸಿಮಂತನೆಂದರೆ ಖಡ್ಗವನ್ನು ಧರಿಸಿರುವವನು ಎಂದರ್ಥ ಕತ್ತಿಗಳನ್ನು ಹಿಡಿದು ಸಾಲಾಗಿ ಯುದ್ಧಸನ್ನದ್ಧರಾಗಿರುವವರನ್ನು ಪರಮೇಶ್ವರನೆಂದೇ ಭಾವಿಸಬಹುದು ಮತ್ತು ರಾತ್ರಿಯಲ್ಲಿ ಸಂಚರಿಸುವವರು ನಕ್ತಂಚರರು ಅಂಥ ನಕ್ತಂಚರರ ರೂಪದಲ್ಲಿರುವವನಿಗೆ ನಮಸ್ಕಾರ! ಈ ಸಂದರ್ಭದಲ್ಲಿ ರಾತ್ರೆಯೆಲ್ಲ ಗಸ್ತುತಿರುಗುವಂಥ ಘೂರ್ಕರನ್ನೂ ಪೋಲೀಸಿನವರನ್ನೂ ಭಗವತ್ಸ್ವರೂಪರೆಂದು ನೆನೆಯಬಹುದು ನಾಯಿ ಮುಂತಾದ ಪ್ರಾಣಿಗಳೂ ಆಗಬಹುದು ಪ್ರಕೃಂತರೆಂದರೆ ಕೊಲೆಮಾಡಿಯೇ ಧನವನ್ನು ಅಪಹರಿಸುವಂಥ ದರೋಡೆಗಾರರು ಕೇಲವು ರಾಜ್ಯಗಳಲ್ಲಿ ಕ್ರಾಂತಿಗಳಾಗುವದನ್ನು ಕೇಳಿದ್ದೇವಷ್ಟೆ ಇಂಥ ಕ್ರಾಂತಿಕಾರರುಗಳ ರೂಪದಿಂದ ಹೊರತೋರಿಕೊಳ್ಳುವವನೂ ಪರಮೇಶ್ವರನೇ ಎಂದಭಿಪ್ರಾಯ.

    ಉಷ್ಣೀಷಿಯೆಂದರೆ ಪೇಟವನ್ನು ಕಟ್ಟಿರುವವನು ಎಂದರ್ಥ ಉಷ್ಣೀಷವನ್ನು ಗೃಹಸ್ಥನು ಯಾವಾಗಲೂ ಧರಿಸಿರಬೇಕೆಂದು ವೇದದಲ್ಲಿ ತಿಳಿಸಿದೆ ಬೋಳು ತಲೆಯಲ್ಲಿರಬಾರದು ಎಂದೂ ಹೇಳಿದೆ ವಿವಾಹದಲ್ಲಿ ಕಡ್ಡಾಯವಾಗಿ ಸ್ವಲ್ಪ ಕಾಲವಾದರೂ ಪೇಟವನ್ನು ವರನಿಗೆ ಕಟ್ಟಿರುತ್ತಾರೆ ಇದು ಈಗಲೂ ಜಾರಿಯಲ್ಲಿದೆ ಹಿಂದೆಲ್ಲ ರಾಜಮಹಾರಾಜರುಗಳು ದರ್ಬಾರ್‌ಸಭಾಸದರು, ಅಧಿಕಾರಿಗಳು, ಲಾಯರುಗಳು ಎಲ್ಲರೂ ಪೇಟವನ್ನು ಧರಿಸುತ್ತಿದ್ದರು ಅದೊಂದು ಗೌರವಸೂಚಕವಾಗಿತ್ತು ಆದರೆ ಈಗ ಕಾಲಗತಿಯಿಂದ ಅದು ಮರೆಯಾಗುತ್ತದೆ ಆದರೂ ಅಲ್ಲಲ್ಲಿ ಪೇಟಧಾರಿಗಳು ಈಗಲೂ ಅಪರೂಪವಾಗಿ ತೋರಿಕೊಳ್ಳುತ್ತಾರೆ ಪರಮೇಶ್ವರನಿಗೆ ಪೇಟವು ಯಾವದೆಂದು ನೀವು ಕೇಳಬಹುದು ಅವನ ಜಟಾಜೂಟವನ್ನೇ ಇಲ್ಲಿ ಉಷ್ಣೀಷವೆಂದು ಭಾವಿಸಬಹುದು ಮತ್ತು ಉಷ್ಣೀಷಧಾರಿಗಳನ್ನು ಕಂಡಾಗ ಪರಮೇಶ್ವರನ ಭಾವನೆಯನ್ನು ಮಾಡಿದಲ್ಲಿ ನಿಜವಾಗಿಯೂ ಅದೊಂದು ಆಧ್ಯಾತ್ಮಸಾಧನವಾಗಲಿದೆ; ಇರಲಿ, ಗಿರಿಚರನೆಂದರೆ ಬೆಟ್ಟಗಳಲ್ಲಿ ತಿರುಗಾಡುವವನು. ಕುಲುಂಚರೆಂದರೆ (ಕು-ಭೂಮಿಯನ್ನು ಲುಂಚ-ಅಪಹರಿಸು)ಮನೆ, ಜಮಿನು ಮುಂಚಾದವನ್ನು ಕಸಿದುಕೊಳ್ಳುವವರು ಎಂದರ್ಥ ಈಗ ಎಷ್ಟೋ ಜಮಿನುದಾರರ ಭೂಮಿಯೆಲ್ಲ ಬೇರೆಯವರಿಂದ ವಶಗೊಳಿಸಿಕೊಳ್ಳಲ್ಪಟ್ಟಿದೆಯಲ್ಲವೆ? ಇದೊಂದು ಪರಮೇಶ್ವರನ ಲೀಲೆಯೆಂದೇ ಭಾವಿಸಬೇಕು ಇದು ಕೆಲವರಿಗೆ ದುಃಖಕರವಾಗಿ ಕಂಡರೂ ಮತ್ತೆ ಕೆಲವರಿಗೆ ಅನುಕೂಲವಗಿಯೇ ಇರುತ್ತದೆ ಹೀಗೆಲ್ಲ ಆಟವಾಡಿಸುವವನು ಪರಮೇಶ್ವರನಲ್ಲದೆ ಮತ್ತೆ ಯಾರು ಆದಾರು? ಆದ್ದರಿಂದ ಎಲ್ಲಾ ರೂಪದಿಂದಲೂ ಪರಮೇಶ್ವರನನ್ನೇ ಕಾಣುವವನೇ ನಿಜವಾದ ಶಿವಭಕ್ತನೆಂದು ತಿಳಿಯಬೇಕು.

ನಮ ಇಷುವಧ್ಭ್ಯೋ ಧನ್ವಾವಿಭ್ಯಶ್ಛ ವೋ ನಮೋ ನಮ
ಆತನ್ವಾನೇಭ್ಯಃ ಪ್ರತಿದಧಾನೇಭ್ಯಶ್ಚ ವೋ ನಮೋ ನಮ ಆಯಚ್ಛದ್ಭ್ಯೋ
ವಿಸೃಜದ್ಭ್ಯಶ್ಚ ವೋ ನಮೋ ನಮೋಸ್ಯದ್ಭ್ಯೋ ವಿಧ್ಯದ್ಭ್ಯಶ್ಚ ವೋ
ನಮೋ ನಮ ಅಸೀನೇಭ್ಯಃ ಶಯಾನೇಭ್ಯಶ್ಚ ವೋ ನಮಃ ||

    'ಇಷುಮಂತರೂ, ಧನ್ವಾವಿಗಳೂ, ಆತನ್ವಾನರೂ, ಪ್ರತಿದಧಾನರೂ, ಆಯಚ್ಛನ್ತರೂ, ವಿಸೃಜಂತರೂ, ಬಾಣಗಳನ್ನು ಎಸೆಯುವವರೂ, ಹೊಡೆಯುವವರೂ, ಕುಳಿತಿರುವವರೂ, ಮಲಗಿರುವವರೂ ( ಆದ ಎಲ್ಲಾ ಪರಮೇಶ್ವರನ ರೂಫಗಳಿಗೂ) ನಮಸ್ಕಾರ!'

    ಈಗ ಒಂದೊಂದು ವಸ್ತುವಿನ ಹಾಗೂ ಅದನ್ನು ಹೊಂದಿರುವವರ ರೂಪದಲ್ಲಿರುವ ಭಗವಂತನನ್ನು ಸ್ತುತಿಸಲಾಗುತ್ತದೆ. ಇಷುಮಂತರೆಂದರೆ ಬಾಣಗಳನ್ನು ಹಿಡಿದಿರುವವರು; ಧನುಸ್ಸನ್ನು ಕೈಯಲ್ಲಿ ಹಿಡಿದಿರುವವರು ಧನ್ವಾವಿಗಳು ಲೋಕರ್ಷಣೆಗಾಗಿ ಧುನುರ್ಭಾಣಗಳನ್ನು ಹಿಡಿದಿರುವಂಥ, ಶ್ರೀರಾಮನಂತೆ ಧರ್ಮಿಷ್ಠರಾದ ಕ್ಷತ್ರಿಯರನ್ನು ಪರಮೇಶ್ವರನೆಂದೇ ತಿಳಿಯಬೇಕು ಇಂಥವರಿಗೆ ನಮಸ್ಕಾರ ಇಲ್ಲಿಂದ ಮುಂದೆ ಆಗಾಗ್ಗೆ 'ವೋ ನಮಃ' ಎಂದು ಹೇಳಿರುವದರ ಅಭಿಪ್ರಾಯವೇನೆಂದರೆ : 'ನೀವುಗಳು ಪ್ರತ್ಯಕ್ಷವಾಗಿ ಕಂಡುಬರುತ್ತಿದ್ದೀರಿ ; ಇಂಥ ನಿಮಗೆ ನಮಸ್ಕಾರ!' ಎಂದು ಭಕ್ತಿಯ ಪರವಶತೆಯಿಂದ ಹೇಳುವಿಕೆ - ಎಂದು ತಿಳಿಯಬೇಕು ಧನುಸ್ಸಿನಲ್ಲಿ ಹಗ್ಗವನ್ನು ಏರಿಸುವವರು ಆತನ್ವಾನರು ಬಾಣಗಳನ್ನು ಅದರಲ್ಲಿ ಜೋಡಿಸುವವರು ಪ್ರತಿದಧಾನರು ಧನುಸ್ಸಿನ ಹಗ್ಗವನ್ನು ಎಳೆಯುವವರು ಆಯಚ್ಛನ್ತರು ಬಾಣಗಳನ್ನು ಬಿಡುವವರು ವಿಸೃಜಂತರು ಇಂಥವರೆಲ್ಲ ರುದ್ರರೂಫರೇ ಎಂದು ಸ್ತುತಿಸಲಾಗಿದೆ ಯುದ್ಧರಂಗದಲ್ಲಿ ನೋಡುವಾಗ ಈ ಬಗೆಯ ಎಲ್ಲಾ ವ್ಯಕ್ತಿಗಳೂ ಕಂಡುಬರುತ್ತಾರೆ ಅವರೊಳಗೆಲ್ಲ ರುದ್ರನೇ ಇದ್ದುಕೊಂಡಿರುವನು ಎಂಬುದು ಅಭಿಪ್ರಾಯ ಧರ್ಮ ರಕ್ಷಣೆಗಾಗಿಯೇ ಪ್ರಾಣವನ್ನೂ ಲೆಕ್ಕಿಸದೆ ಕಾದಾಡುವಂಥ ವೀರರು ರುದ್ರನ ಅಂಶವಿಲ್ಲದೆ ಎಂದಿಗೂ ತಮ್ಮ ಕಾರ್ಯಗಳನ್ನು ನೆರವೇರಿಸಲಾರರು ಆದ್ದರಿಂದ ಅವರುಗಳ ರೂಪದಲ್ಲಿರುವ ರುದ್ರನನ್ನು ಇಲ್ಲಿ ಹೊಗಳಿರುವದು ಸಮಂಜಸವಾಗಿದೆ ಬಾಣಗಳನ್ನು ಗುರಿಗೆ ತಗಲುವಂತೆ ಎಸೆಯುವವರು ಅಸ್ಯಂತರು ಗುರಿಯನ್ನು ಸಮಿಪಿಸಿ ಅದರೊಳಕ್ಕೆ ಪ್ರವೇಶಮಾಡುವಂತೆ ಹೊಡೆಯುವವರು ವಿಧ್ಯಂತರು ಇಂಥವರಿಗೂ ಇಲ್ಲಿ ವಂದನೆಗಳನ್ನು ಅರ್ಪಿಸಲಾಗಿದೆ.

    ಇನ್ನು ಕುಳಿತಿರುವವರು ಆಸೀನರು ಪರಮಾತ್ಮನು ಕುಳಿತಿರುವವರ ರೂಪದಲ್ಲಿಯೂ ಇರುತ್ತಾನೆ. ಶಯಾನರೆಂದರೆ ಮಲಗಿರುವವರು ಅವರಲ್ಲಿಯೂ ಶಂಭುವೇ ಇದ್ದಾನೆ ಒಂದು ಮಗು ಬೆಳೆಯುತ್ತಿರುವಾಗ ಮಲಗಿ ಕೊಂಡದ್ದು ಮಗುಚಿಕೊಂಡರೆ ತಾಯಿಗೆ ಎಷ್ಟೋ ಸಂತೋಷ ಹಾಗೆಯೇ ಕುಳಿತರೆ ನಿಂತರೆ, ಹೆಜ್ಜೆಯಿಟ್ಟರೆ ಇನ್ನೂ ಆನಂದವಾಗುತ್ತದೆಯಲ್ಲವೆ? ಇದೆಲ್ಲ ಯಾರ ಶಕ್ತಿಯಿಂದ? ಪರಮೇಶ್ವರನೇ ಮಗುವಾಗಿ ಮಲಗಿ, ಕುಳಿತು, ನಿಂತು ನಮ್ಮನ್ನು ಸಂತೋಷಪಡಿಸುತ್ತಾನಲ್ಲವೆ? ಇನ್ನು ಕಠೋಪನಿಷತ್ತಿನಲ್ಲಿ 'ಅಸೀನೋ ದೂರಂ ವ್ರಜತಿ, ಶಯಾನೋ ಯಾತಿ ಸರ್ವತಃ' ಎಂದು ಭಗವತ್ ಸ್ವರೂಪವನ್ನು ಹೊಗಳಿದೆ ಭಗವಂತನು ತಾನು ವಿಕಾರವಾಗದೆಯೇ ಎಲ್ಲಾ ಕರ್ಮಗಳನ್ನೂ ಮಾಡಬಲ್ಲಂಥ ಸರ್ವಸಮರ್ಥನು ಎಂದರ್ಥ ಹೀಗೆ ರುದ್ರನು ನಮ್ಮ ಸುತ್ತಲೂ ಕುಳಿತು, ಮಲಗಿ, ಓಡಾಡುತ್ತಾ ನಮ್ಮಡನೆಯೇ ಇದ್ದರೂ ನಾವು ಅವನನ್ನು ಅರಿಯೆವು ಎಂದರೆ ನಮ್ಮದು ಎಂಥ ದಡ್ಡತನ! ಆದ್ದರಿಂದ ರುದ್ರನು ಸರ್ವಾತ್ಮಕನೆಂದೇ ತಿಳಿಯಬೇಕು.

ನಮಃ ಸಭಾಭ್ಯಃ ಸಭಾಪತಿಭ್ಯಃ
ಈಗ ಮೂರನೆಯ ಅನುವಾಕದ ಕೊನೆಯ ಭಾಗವನ್ನು ವಿಚಾರ ಮಾಡಬೇಕಾಗಿದೆ :

ನಮಃ ಸ್ವಪದ್ಭ್ಯೋ ಜಾಗ್ರದ್ಭ್ಯಶ್ಚ ವೋ ನಮೋ ನಮ-
ಸ್ತಿಷ್ಠದ್ಭ್ಯೋಧಾವದ್ಭ್ಯಶ್ಚ ವೋ ನಮೋ ನಮಃ ಸಭಾಭ್ಯಃ ಸಭಾಪತಿಭ್ಯಶ್ಚ
ವೋ ನಮೋ ನಮೋ ಅಶ್ವಭ್ಯೋಶ್ವಪತಿಭ್ಯಶ್ಚವೋ ನಮಃ ||

    'ಮಲಗಿರುವವರಿಗೂ ಎಚ್ಚತ್ತಿರುವವರಿಗೂ ನಿಂತಿರುವವರಿಗೂ ಓಡುತ್ತಿರುವವರಿಗೂ ಸಭೆಗಳಿಗೂ ಸಭಾಪತಿಗಳಿಗೂ ಕುದುರೆಗಳಿಗೂ ಕುದುರೆಗಳ ಒಡೆಯರಿಗೂ ನಮಸ್ಕಾರವು.'
    ರುದ್ರಭಾಷ್ಯಕಾರರು ಈ ಮಂತ್ರಗಳು ಸ್ಪಷ್ಟಾರ್ಥವುಳ್ಳವುಗಳಾಗಿವೆಯಾಗಿ ನಾವು ವ್ಯಾಖ್ಯಾನಮಾಡಿಲ್ಲ ಎಂದು ತಿಳಿಸಿದ್ದಾರೆ ಆದರೂ ಈ ವರ್ಣನೆಯಲ್ಲಿ ಅಡಕವಾಗಿರುವ ವಿಶೇಷಗಳ ಅರ್ಥವನ್ನು ಚಿಂತಿಸುವದರಿಂದ ಲಾಭವುಂಟು. ಪರಮೇಶ್ವರನಿಗೆ ನಿಜವಾಗಿ ಎಚ್ಚರನಿದ್ರೆಗಳೆಂಬುದಿಲ್ಲ. ಆತನು ನಿದ್ರಿಸುವ ಸಂಭವವೇ ಇಲ್ಲ ಹೀಗಿದ್ದರೂ ಉಪಾಧಿವಿಶಿಷ್ಟನಾಗಿ ತೋರಿಕೊಳ್ಳುವಾಗ ನಿದ್ರೆಮಾಡುವವನಲ್ಲಿಯೂ ಎಚ್ಚತ್ತಿರುವವನಲ್ಲಿಯೂ ತಾನೇ ಇದ್ದುಕೊಂಡು ಎಲ್ಲರಿಗೂ ಆತ್ಮನಾಗಿರುತ್ತಾನೆ. ಇಲ್ಲಿ ಸ್ವಪತೀತಿ ಸ್ವಪನ್ ಎಂದು ವ್ಯುತ್ಪತ್ತಿಯನ್ನು ಮಾಡಿದಲ್ಲಿ ನಿದ್ರೆಮಾಡುತ್ತಾ ಕನಸುಕಾಣುವವನು ಎಂದೂ ಅರ್ಥಮಾಡಿಕೊಳ್ಳಬಹುದು ಆತನು ಅವಸ್ಥಾತ್ರಯಗಳಿಗೂ ಸಾಕ್ಷಿಯಾಗಿದ್ದು ಕೊಂಡಿರುವನಾದರೂ ಆಯಾ ಅವಸ್ಥೆಗಳಿಗೆ ಕಟ್ಟುಬಿದ್ದಿರುವ ಜೀವರುಗಳ ರೂಪದಲ್ಲಿಯೂ ತಾನೇ ಮಾಯೆಯಿಂದ ತೋರಿಕೊಳ್ಳುತ್ತಾ ಇರುವನೆಂದು ತಿಳಿಯಬೇಕು ಏಕಕಾಲಕ್ಕೆ ಒಬ್ಬ ಮನುಷ್ಯನು ಕನಸನ್ನೂ ಕಾಣುತ್ತಾ ಎಚ್ಚರವಾಗಿಯೂ ಇದ್ದುಕೊಂಡಿರುವದು ಅಸಂಭವ ಆದರೆ ಪರಮೇಶ್ವರನು ಒಂದು ಜೀವರೂಫದಿಂದ ಸ್ವಪ್ನವನ್ನು ಕಾಣುತ್ತಿದ್ದು ಮತ್ತೊಂದು ಜೀವರೂಪದಿಂದ ಎಚ್ಚತ್ತಿರಬಹುದು ಇದು ಅವನ ಮಹಿಮೆ ಅಂತೂ ಕನಸುಕಾಣುತ್ತಾ ನಿದ್ರಿಸುತ್ತಿರುವವರನ್ನೂ ಎಚ್ಚತ್ತಿರುವವರನ್ನೂ ನಾವು ರುದ್ರರೂಪರೆಂದೇ ಭಾವಿಸಬಹುದಾಗಿದೆ.

    ಹೀಗೆಯೇ ನಿಲ್ಲುವದು, ಓಡಾಡುವದೂ ಎರಡೂ ಒಂದಕ್ಕೊಂದು ವಿರುದ್ಧಕ್ರಿಯೆಗಳು ಆದರೆ ಪರಮೇಶ್ವರನು ಸರ್ವಾತ್ಮನಾಗಿರುವದರಿಂದ ಸದಾನಿಂತೇ ಇರುವ ಎಂದರೆ ಚಲನೆಯಿಲ್ಲದಿರುವ ಸ್ಥಾವರಜೀವಿಗಳಾದ ಮರ, ಬೆಟ್ಟ, ಗುಡ್ಡ - ಮುಂತಾದ ರೂಪಗಳಿಂದಲೂ ಯಾವಾಗಲೂ ಚಲಿಸುತ್ತಿರುವ ಪ್ರಾಣಿಗಳು, ಮನುಷ್ಯ, ಪಕ್ಷಿ - ಮುಂತಾದ ಜಂಗಮಪ್ರಾಣಿಗಳ ರೂಪದಿಂದಲೂ ಇದ್ದುಕೊಂಡಿರುತ್ತಾನೆ. ಈ ಎರಡನ್ನೂ ಶಿವನೆಂದೇ ನಾವು ತಿಳಿಯಬೇಕು. ಇಲ್ಲಿ ಜಂಗಮಪ್ರಾಣಿಗಳನ್ನೇ ಗುರಿಯಾಗಿಟ್ಟುಕೊಂಡು 'ನಿಂತಿರುವ ಹಾಗೂ ಓಡುತ್ತಿರುವವರಿಗೆ ನಮಸ್ಕಾರ' ಎಂದೂ ಹೇಳಿದೆ. ಓಟದಲ್ಲಿಯೂ ಜಿಂಕೆ, ಹಕ್ಕಿ ಮುಂತಾದವು ತುಂಬ ವೇಗವಾಗಿ ಓಡುವವುಗಳಾಗಿವೆ ಇವುಗಳಲ್ಲೆಲ್ಲ ಮರಮೇಶ್ವರನೇ ತುಂಬಿತುಳುಕಾಡುತ್ತಿರುವನೆಂದು ಭಾವಿಸಬಹುದಾಗಿದೆ.

    ಸಭೆಗಳಿಗೂ ಸಭಾಪತಿಗಳಿಗೂ ನಮಸ್ಕಾರ ಎಂಬುದನ್ನು ಈಗ ವಿಚಾರಮಾಡೋಣ ಸದಸ್ಸು, ಪರಿಷತ್ತು ಎಂಬ ಶಬ್ದಗಳಿಗೂ ಸಭೆಯೆಂದೇ ಅರ್ಥ ಚತುರ್ಮುಖಬ್ರಹ್ಮನನ್ನು 'ಸದಸಸ್ಪತಿ'ಯೆಂದು ಆತನ ಸಭೆಯನ್ನು ಬ್ರಹ್ಮಸಭೆ ಎಂದೂ ವೇದದಲ್ಲಿ ಕರೆದಿದೆ ದ್ವಿಜರು ಉಪಾಕರ್ಮದಲ್ಲಿ ಸದಸಸ್ಪತಿಯೆಂದೇ ಬ್ರಹ್ಮನನ್ನು ಪೂಜಿಸುತ್ತಾರೆ ಅಂತೂ ವೈದಿಕಕಾಲದಿಂದಲೂ ಸಭೆಗಳಿಗೂ ಸಭಾಪತಿಗಳಿಗೂ ತುಂಬ ಗೌರವವು ಇದ್ದುಕೊಂಡಿದೆ ಪರಿಷತ್ ಎಂದರೆ ಶಾಸ್ತ್ರಜ್ಞರಾದ ಹತ್ತು ಜನರ ಗುಂಪು ಎಂದರ್ಥ ಧರ್ಮಾಧರ್ಮಗಳ ಹಾಗೂ ಕರ್ತವ್ಯಾಕರ್ತವ್ಯಗಳ ವಿಷಯದಲ್ಲಿ ಸಂಶಯವು ಬಂದಾಗ ಹಿಂದೆ ಪರಿಷತ್ತಿನಲ್ಲಿ ನಿರ್ಣಯವಾಗುತ್ತಿತ್ತು ಇಂಥ ಪರಿಷತ್ತಿಗೆ ಆಧ್ಯಾತ್ಮಜ್ಞಾನಿಯಾದ ಒಬ್ಬನೇ ಇದ್ದರೂ ಸಾಕು ಎಂದು ಸ್ಮೃತಿಗಳಲ್ಲಿ ಏಕಸದಸ್ಯಪರಿಷತ್ತನ್ನೂ ಅಂಗೀಕರಿಸಲಾಗಿದೆ ಈಗಲೂ ವ್ಯವಹಾರದಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳುವದಕ್ಕಾಗಿ 'ಸಮಿತಿ'ಗಳನ್ನೂ ಅದರ 'ಅಧ್ಯಕ್ಷ'ರನ್ನೂ ನೇಮಿಸುವವಾಡಿಕೆಯಿದೆ ಆದರೆ ಇದರಲ್ಲಿ ಆಯಾ ವಿಷಯಗಳಲ್ಲಿ ನುರಿತ ಜ್ಞಾನಿಗಳೂ ಆಕಾಮಹತರೂ ವಿದ್ವಾಂಸರೂ ಆದಂಥ ಬುದ್ಧಿಜೀವಿಗಳಿಗೆ ಅವಕಾಶವು ಕಡಿಮೆಯಾಗುತ್ತಿದೆ. ರಾಜಕೀಯಪ್ರಭಾವಶಾಲಿಗಳೇ ಸದಸ್ಯರಾಗುವದು, ಪಕ್ಷಪಾತದ ನಿರ್ಣಯಗಳನ್ನು ಕೈಗೊಳ್ಳುವದು - ಹೆಚ್ಚಾಗಿಬಿಟ್ಟಿದೆ ಇದರಿಂದ ಜನಸಾಮಾನ್ಯಕ್ಕೆ ಆಗುತ್ತಿರುವ ನಷ್ಟವು ಅಷ್ಟಿಷ್ಟಲ್ಲ ಜೊತೆಗೆ ದೈವಿಕವಾಗಿಯೂ ಕ್ಷಾಮಡಾಮರುಗಳು ರೋಗರುಜಿನಗಳು ಮುಂತಾದ ಅಪಘಾತಗಳು ನ್ಯಾಯವನ್ನು ಹಿಂಸೆಮಾಡಿದ್ದರ ಫಲವಾಗಿ ಉಂಟಾಗುತ್ತಿವೆ ಆದ್ದರಿಂದ ನಾವು ಭಗವಂತನ ವಿಭೂತಿರೂಪವಾಗಿರುವ 'ಸಭೆ'ಯನ್ನು ರಚಿಸುವಾಗ ಪ್ರಾಮಾಣಿಕತೆಗೂ ಜನಸೇವೆಗೂ ಧರ್ಮಪ್ರವೃತ್ತಿಗೂ ಕಾರಣರಾಗಿರುವಂಥ ಸದಸ್ಯರನ್ನೇ ಆರಿಸಿದಲ್ಲಿ ಅಂಥ ಸಭೆಯು ಈಶ್ವರನ ಸ್ವರೂಪವೇ ಆಗಿರುವದು ಅದರ ಯಜಮಾನನು ನಿಜವಾದ ಸಭಾಪತಿಯಾದ ಪರಮೇಶ್ವರನೇ ಆಗುವನು. 'ಪ್ರಜಾಪ್ರಭುತ್ವ'ವನ್ನು ಗೌರವಿಸುವವರು ಈ ವಿಷಯಗಳನ್ನು ಗಮನದಲ್ಲಿಡಬೇಕಾದದ್ದು ಅಗತ್ಯ. ಒಟ್ಟಿನಲ್ಲಿ ನಮ್ಮ ಭಾರತದೇಶದಲ್ಲಿ ಸಭೆಗಳನ್ನೂ ಸಭಾಪತಿಗಳನ್ನೂ ಭಗವಂತನೆಂದೇ ಗೌರವಿಸುವ ಸಂಪ್ರದಾಯವು ಅನಾದಿ ಕಾಲದಿಂದಲೂ ಇದ್ದುಕೊಂಡಿದೆ ಇಂಥ ಪರಮೇಶ್ವರನಿಗೆ ನಮಸ್ಕಾರ ಎಂದು ಈ ಮಂತ್ರದ ಅಭಿಪ್ರಾಯ ವಿವಾಹದಿಕರ್ಮಗಳು ನಡೆಯುವಾಗ ಈಗಲೂ 'ಸಭಾಪೂಜೆ'ಯನ್ನು ಮಾಡುವ ಪದ್ಧತಿಯಿದೆ ವಿದ್ವಾಂಸರನ್ನೂ ಕಲಾವಿದರನ್ನೂ ಗೌರವಿಸಲು ಸಭೆಗಳನ್ನು ಏರ್ಪಡಿಸುವದೂ ಸುಪ್ರಸಿದ್ಧವಾಗಿದೆ ಇಂಥ ಸಂದರ್ಭಗಳನ್ನು ಕೇವಲ ಆಡಂಬರಗಳಲ್ಲೇ ಪೂರೈಸದೆ ಅಧ್ಯಾತ್ಮಾನು ಸಂಧಾನಕ್ಕೂ ಉಪಯೋಗಿಸಿಕೊಳ್ಳಲು ಇಲ್ಲಿ ಸೂಚಿಸಿದೆ.

    ಈಗ 'ಅಶ್ವೇಭ್ಯಃ' ಎಂಬುದನ್ನು ವಿಚಾರಮಾಡೋಣ ಅಶ್ವವೆಂದರೆ ಕುದುರೆ - ಎಂದರ್ಥ ಹಿಂದಿನ ಕಾಲದಲ್ಲಿ ರಥಗಳಿಗೆಲ್ಲ ಕುದುರೆಗಳನ್ನೇ ಕಟ್ಟುತ್ತಿದ್ದರು ಈಗಿನಂತೆ ತೈಲವಾಹನಗಳಿರಲಿಲ್ಲ ರಾಜಮಹಾರಾಜರುಗಳು ಸೈನ್ಯಗಳಲ್ಲಿ ಚತುರಂತಬಲಕ್ಕೆ ಕುದುರೆಸವಾರರನ್ನೂ ಸೇರಿಸಿದ್ದರು ಆನೆ, ಕುದುರೆಗಳನ್ನು ರಾಜ್ಯಲಕ್ಷ್ಮಿಯೆಂದು ಗೌರವಿಸಿ ನಮರಾತ್ರೆಯಲ್ಲಿ ರಾಜರುಗಳು ಪೂಜಿಸುತ್ತಿದ್ದುದು ಸರಿಯಷ್ಟೆ! ಕುದುರೆಯನ್ನು 'ಅಶ್ವಮೇಧ'ವೆಂಬ ಪವಿತ್ರವಾದ ಯಜ್ಞಕ್ಕೆ ಪಶುವಾಗಿಯೂ ಹಿಂದೆ ಉಪಯೋಗಿಸುತ್ತಿದ್ದರು. ನೂರು ಅಶ್ವಮೇಧಗಳನ್ನು ಮಾಡಿದಲ್ಲಿ 'ಇಂದ್ರಪದವಿ' ದೊರಕುವದೆಂದೂ ಪುರಾಣಗಳಲ್ಲಿದೆ ಕುದುರೆಯನ್ನುಸೂರ್ಯನ ಪ್ರತಿನಿಧಿಯೆಂದು ಉಪನಿಷತ್ತಿನಲ್ಲಿ ಕರೆದಿದೆ ಅಶ್ವಮೇಧವೆಂಬ ಯಜ್ಞವು ಕ್ಷತ್ರಿಯರು ಮಾಡತಕ್ಕದ್ದಾದರೂ ಉಳಿದವರು ಅಶ್ವಮೇಧವೆಂಬ ಉಪಾಸನೆಯನ್ನು ಮಾಡಬಹುದೆಂದೂ ಇದರಿಂದ ಬ್ರಹ್ಮಹತ್ಯಾದೋಷನಿವೃತ್ಇಯಾಗುವದೆಂದೂ ವೇದದಲ್ಲಿಯೇ ಹೇಳಿದೆ ಬೃಹದಾರಣ್ಯಕೋಪನಿಷತ್ತಿನಲ್ಲಿ ಪ್ರಾರಂಭದಲ್ಲಿಯೇ ಈ ಅಶ್ವಮೇಧೋಪಾಸನೆಯನ್ನು ವಿವರಿಸಿದೆ ಹೀಗೆ ನಾನಾರೀತಿಯಿಂದ ವೈದಿಕವಾಗಿಯೂ ಲೌಕಿಕವಾಗಿಯೂ ಪೂಜ್ಯವೂ ಉಪಯುಕ್ತವೂ ಆಗಿರುವ ಕುದುರೆಯನ್ನು ಭಗವಂತನ ವಿಭೂತಿಯೆಂದು ಗೌರವಿಸಿ ಸ್ತುತಿಸುತ್ತಿರುವದು ಸೂಕ್ತವಾಗಿದೆ. ಉಚ್ಚೈಃಶ್ರವಸ್ಸು ಎಂಬ ಕುದರೆಯು ಭಗವಂತನ ವಿಭೂತಿಯೆಂದೇ ಗೀತೆಯಲ್ಲಿ ಹೇಳಿದೆ.

    ಅಶ್ವಪತಿಗಳಿಗೆ ನಮಸ್ಕಾರ - ಎಂಬುದಕ್ಕೂ ಹೀಗೆಯೇ ತಿಳಿಯಬೇಕು ಕುದುರೆಯ ಒಡೆಯರೇ ಅಶ್ವಪತಿಗಳು ಹಿಂದೆ ಕೆಲವು ರಾಜರುಗಳಿಗೆ 'ಅಶ್ವಪತಿ' ಎಂಬ ಹೆಸರೂ ಪ್ರಸಿದ್ಧವಾಗಿತ್ತು ನಳಮಹಾರಾಜನೂ ಪಾಂಡವರಲ್ಲಿ ಒಬ್ಬನಾದ ಸಹದೇವನೂ ಅಶ್ವವಿದ್ಯಾನಿಪುಣರಾಗಿದ್ದರೆಂದು ಪುರಾಣಗಳಲ್ಲಿದೆ. ಅಶ್ವಗಳನ್ನು ನಡೆಯಿಸುವ ಜಾಣತನವು ಬಹುಮುಖ್ಯ ಇದರಲ್ಲಿ ಸಾರಥಿಯಾಗಿ ಸುಪ್ರಸಿದ್ಧನಾಗಿರುವವನು ಪಾರ್ಥಸಾರಥಿಯೆಂಬ ಶ್ರೀಕೃಷ್ಣನು ಆಧ್ಯಾತ್ಮಿಕವಾಗಿ ನೋಡಿದರೆ ಇಂದ್ರಿಯಗಳೆಂಬಿವೇ ಅಶ್ವಗಳು ಅವುಗಳನ್ನು ಹತೋಟಿಯಲ್ಲಿಡುವದು ಒಂದು ದೊಡ್ಡ ಯೋಗಸಾಧನೆಯೇ ಸರಿ. 'ಹೃಷೀಕೇಶ'ನೆಂಬ ಬಿರುದಿನ ಶ್ರೀಕೃಷ್ಣಭಗವಂತನು ಎಲ್ಲಾ ರೀತಿಯಿಂದಲೂ ನಿಜವಾದ ಅಶ್ವಪತಿಯು ಆತನ ಅನುಗ್ರಹದಿಂದ ಸಾಧಕರು ತಮ್ಮ ಗುರಿಯನ್ನು ಮುಟ್ಟಬಹುದಾಗಿದೆ. ಹೀಗೆ ಅಶ್ವಪತಿಯಾಗಿ ಲೀಲೆಯನ್ನು ತೋರಿಸುತ್ತಿರುವ ಪರಮೇಶ್ವರನನ್ನು ನಾವು ಗೌರವಿಸಲೇಬೇಕು ಲೌಕಿಕವಾಗಿಯೂ ಈಗಿನ ಕಾಲದಲ್ಲಿ ಕುದುರೆಯನ್ನು 'ಜೂಜು'ಗಳಿಗಾಗಿ ಉಪಯೋಗಿಸುತ್ತಿರುವದು ಪ್ರಸಿದ್ಧವಾಗಿದೆ ಇದರಲ್ಲಿ ಎಷ್ಟೋ ಜನರ ಅದೃಷ್ಟಪರೀಕ್ಷೆಗಳಾಗುತ್ತಿವೆ ಇಲ್ಲಿಯೂ ಅಶ್ವಗಳ ಗೆಲವು ಅಶ್ವಾರೋಹಿಗಳನ್ನೇ ಅವಲಂಬಿಸಿರುತ್ತದೆಯಲ್ಲವೆ? ಹೀಗೆ ಎಲ್ಲೆಲ್ಲಿ ನೋಡಿದರೂ ಏನೇನು ಯೋಚಿಸಿದರೂ ಎಲ್ಲವೂ ಶಿವನೇ ಆಗಿರುವದೆಂಬ ಮಂಗಳಸಂದೇಶವನ್ನೇ ರುದ್ರಾಧ್ಯಾಯವು ಸಾರುತ್ತಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ