ಅಸ್ಮಾನ್ ವೃಣಕ್ತು ವಿಶ್ವತಃ

ಮೊದಲನೆಯ ಅನುವಾಕದಲ್ಲಿ ಉಳಿದಿರುವ ಮೂರು ಮಂತ್ರಗಳನ್ನು ಈಗ ವಿಚಾರಮಾಡೋಣ :

ಯಾ ತೇ ಹೇತಿರ್ಮಿಢುಷ್ಟಮ ಹಸ್ತೇ ಬಭೂವ ತೇ ಧನುಃ |
ತಯಾಸ್ಮಾನ್ ವಿಶ್ವತಸ್ತ್ವಮಯಕ್ಷ್ಮಯಾ ಪರಿಬ್ಭುಜ ||13||

    'ಎಲೈ ಮಿಢುಷ್ಟಮನೆ, ಯಾವ ನಿನ್ನ (ಕತ್ತಿಯೇ ಮುಂತಾದ) ಆಯುಧಳು ಇವೆಯೋ ಮತ್ತು ಕೈಯಲ್ಲಿರುವ ಧನುಸ್ಸುಂಟೋ ಅಯಕ್ಷ್ಮವಾದ ಅದರಿಂದ ನೀನು ನಮ್ಮನ್ನು ಎಲ್ಲಾ ಪಾಪಗಳಿಂದಲೂ ಕಾಪಾಡುವವನಾಗು.'


    ಈ ಮಂತ್ರದಲ್ಲಿ ಭಗವಂತನನ್ನು ಮತ್ತೊಮ್ಮೆ ಮಿಢುಷ್ಟಮನೆಂದು ಸಂಬೋಧಿಸಿದೆ. ಹಿಂದಿನ ಮೂರು ಮಂತ್ರಗಳಲ್ಲಿ ಆಯುಧಗಳನ್ನು ಹಿಂತೆಗೆದುಕೊಳ್ಳುವಂತೆ ಪ್ರಾರ್ಥಿಸಲಾಗಿತ್ತು ಆದರೆ ರುದ್ರನು ಆಯುಧಗಳನ್ನು ಹಿಂತೆಗೆದುಕೊಂಡು ಸುಮ್ಮನೆ ಕುಳಿತುಬಿಟ್ಟರೆ ಆಪತ್ತಿನಿಂದ ನಮ್ಮನ್ನು ಕಾಪಾಡುವವರಾರು? ಅದಕ್ಕಾಗಿ ಇಲ್ಲಿ ತನ್ನನ್ನು ಅದೇ ಆಯುಧಗಳ ನೆರವಿನಿಂದ ಕಾಪಾಡಬೇಕೆಂದೂ ಭಕ್ತನು ಕೇಳಿಕೊಳ್ಳುತ್ತಿದ್ದಾನೆ. ಭಕ್ತರ ಎಲ್ಲಾ ಇಷ್ಟಾರ್ಥಗಳನ್ನೂ ಅನುಗ್ರಹಿಸಿ ಅನಿಷ್ಟಗಳನ್ನು ಪರಿಹರಿಸಿ ರಕ್ಷಿಸುವವನೇ ಮಿಢುಷ್ಟಮನು. ಆ ಭಗವಂತನನ್ನು ಕುರಿತು 'ಎಲೈ ಮಿಢುಷ್ಟಮನೆ, ನಿನ್ನಲ್ಲಿರುವ ಖಡ್ಗವೇ ಮುಂತಾದ ಆಯುಧಗಳು ಮತ್ತು ಕೈಯಲ್ಲೇ ಧರಿಸಿರುವ ಬಿಲ್ಲು, ಇವುಗಳ ವಿಷಯಕ್ಕೆ ಶಾಂತಿಯನ್ನು ನಾನು ಬಯಸಿದ್ದು ನನ್ನನ್ನು ಕ್ಷಮಿಸುವದಕ್ಕಾಗಿಯೂ ಮತ್ತು ಶತ್ರುಗಳಿಂದ ನನ್ನನ್ನು ಕಾಪಾಡುವದಕ್ಕಾಗಿಯೂ ಆಗಿದೆ; ಎಂದರೆ ನೀನು ಆಯುಧಗಳನ್ನು ಸನ್ನದ್ಧವಾಗಿಯೇ ಇರಿಸಿ ಎಲ್ಲಾ ದಿಕ್ಕುಗಳಿಂದಲೂ ನನಗೆ ಒದಗಬಹುದಾದ ಆಪತ್ತುಗಳಿಂದ ನನ್ನನ್ನು ಕಾಪಾಡು; ಮತ್ತು ಶತ್ರುಗಳೆಂಬವರು ನನ್ನ ಮನಸ್ಸೆಂಬ ಕಾಡಿನಲ್ಲಿಯೇ ಹೊಕ್ಕುಬಿಟ್ಟಿರುತ್ತಾರೆ ಅವರಿಂದ ನನ್ನನ್ನು ಬಿಡಿಸಿ ಪರಿಪಾಲನೆಮಾಡು - ಎಂದು ಅಭಿಪ್ರಾಯ ಶಿವಾನಂದಲಹರೀ - ಎಂಬ ಸ್ತೋತ್ರದಲ್ಲಿ ಒಬ್ಬ ಭಕ್ತನು ಮಾಡಿರುವ ಪ್ರಾರ್ಥನೆಯೊಂದನ್ನು ಇಲ್ಲಿ ಅನುಸಂಧಾನಮಾಡಿಕೊಳ್ಳಬಹುದು. ಅಲ್ಲಿ 'ಎಲೈ ಗಿರಿಶನೆ, ನೀನು ನನ್ನನ್ನು ಬಿಟ್ಟಗಲಬೇಡ ನನ್ನಲ್ಲಿಯೇ ವಾಸಮಾಡಿಕೊಂಡಿರು ನೀನು ಆದಿಕಿರಾತನೆಂದು ಪ್ರಸಿದ್ಧನಲ್ಲವೆ? ನಿನಗೆ ಬೇಕಾದಷ್ಟು ಬೇಟೆಯು ಈ ನನ್ನ ಮನಸ್ಸೆಂಬ ಕಗ್ಗಾಡಿನಲ್ಲಿಯೇ ದೊರೆಯಲಿದೆ ಮದ, ಮೋಹ, ಮಾತ್ಸರ್ಯಗಳೆಂಬ ಭಾರಿಭಾರಿಯ ಕ್ರೂರಮೃಗಗಳು ಇಲ್ಲಿ ಸೇರಿಕೊಂಡಿವೆ. ಇದರಿಂದ ನಾನು ಬಹಳ ಭಯಗೊಂಡಿರುವೆನು. ಅವುಗಳೆಲ್ಲವನ್ನೂ ನೀನು ಬೇಟೆಯಾಡಿಕೊಂಡು ಆನಂದವನ್ನು ಹೊಂದುವವನಾಗು' - ಎಂದು ವರ್ಣಿಸಿದೆ. ಅದರಂತೆ ಭಕ್ತನು ಇಲ್ಲಿ ಭಗವಂತನನ್ನು ಆಯುಧಗಳ ನೆರವಿನಿಂದ ಪರಿಪಾಲನೆಮಾಡು - ಎಂದು ಪ್ರಾರ್ಥಿಸಿರುತ್ತಾನೆ. 

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ