ದಕ್ಷಿಣಾಮೂರ್ತಿಸ್ತೋತ್ರ - 3. ಚೇತನಾಚೇತನಾತ್ಮಕಜಗತ್ತು ಪರಮಾತ್ಮನೇ

ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಗಂ ಭಾಸತೇ
ಸಾಕ್ಷಾತ್ತತ್ತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್ |
ಯತ್ಸಾಕ್ಷಾತ್ಕರಣಾದ್ಭವೇನ್ನ ಪುನರಾವೃತ್ತಿರ್ಭವಾವ್ಭೋನಿಧೌ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||

    ಬೀಜದೊಳಗೆ ಅವ್ಯಕ್ತವಾಗಿರುವ ಅಂಕುರಾದಿಗಳಂತೆ ಜಗತ್ತು ಪರಮಾತ್ಮನಲ್ಲಿಯೇ ವಿಕಲ್ಪಗಳಿಲ್ಲದೆ ಇದ್ದುಕೊಂಡಿದ್ದು ಮಾಯಾಕಲ್ಪಿತವಾದ ದೇಶಕಾಲಾದಿಗಳಿಂದ ಬಗೆಬಗೆಯಾಗಿ ಅವನನ್ನೇ ಆಶ್ರಯಿಸಿಕೊಂಡು ಕಾಣಿಸುತ್ತಿರುವದಾದ್ದರಿಂದ, ಪರಮಾತ್ಮನಿಗಿಂತ ಬೇರೆಯಾಗಿ ಅದು ಇರುವದೇ ಇಲ್ಲ ನಿಜವಾಗಿ ನಾಮರೂಪಾದಿವಿಕಲ್ಪಗಳಿಂದೊಡಗೂಡಿ ಜಗತ್ತು ತೋರುತ್ತಿರುವಾಗಲೂ ಅದು ಪರಮಾತ್ಮರೂಪದಿಂದಲೇ ಇರುತ್ತಿರುವದು ಪರಮಾತ್ಮನತ್ತ ಚಿತ್ತದೃಷ್ಟಿಯನ್ನು ಹೊರಳಿಸಲಾರದ ಅವಿವೇಕಿಗಳಿಗೆ ಮಾತ್ರವೇ ಮಾಯಾವಿಲಾಸವಾದ ಈ ಜಗಚ್ಚಿತ್ರವು ಕಾಣುತ್ತಿದ್ದರೂ ಒಳಹೊಕ್ಕು ನೋಡಬಲ್ಲವರಿಗೆ ಬೇರೆಬೇರೆಯ ಆಕಾರಗಳಿಂದೊಡಗೂಡಿದ ಚಿತ್ರದೃಶ್ಯಗಳೆಲ್ಲವೂ ಆಧಾರವಾದ ಬಟ್ಟೆ ಅಥವಾ ಗೋಡೆಗಿಂತ ವ್ಯತಿರಿಕ್ತವಾಗಿಲ್ಲದಂತೆ - ಇದೆಲ್ಲವೂ ನಿಜವಾಗಿ ಪರಮಾತ್ಮನೇ ಆಗಿರುತ್ತದೆ ಎಂದು ತಿಳಿಸಿದ್ದಾಯಿತು.

    ಈ ವಿಷಯದಲ್ಲಿ ಒಂದು ಶಂಕೆ ಏಳಬಹುದು : ಪರಮಾತ್ಮನು 'ಸತ್ಯಂ ಜ್ಞಾನಮನನ್ತಂ ಬ್ರಹ್ಮ' (ತೈ 2-1) ಎಂಬ ಶ್ರುತಿಯ ಪ್ರಾಮಾಣ್ಯದಿಂದ ಪರಮಾರ್ಥವಾಗಿ ಸತ್ಯರೂಪನಾಗಿರುತ್ತಾನೆ; ಅವನ ಇರವಿಗೆ ಎಂದಿಗೂ ಹೋಕವಿಲ್ಲ ಜಗತ್ತಿಗೆ ಅಂಥ ಸತ್ಯತ್ವವಿಲ್ಲ ಏಕೆಂದರೆ ಇದರಲ್ಲಿ ಅನಿತ್ಯವಾದ ವಸ್ತುಗಳಿವೆ; ಹಗ್ಗದ ಹಾವು, ಕಪ್ಪೆಯಚಿಪ್ಪಿನ ಬೆಳ್ಳಿ - ಇಂಥ ಹುಸಿತೋರಿಕೆಗಳಿವೆ. ಇದಲ್ಲದೆ ಅವನು ಚೈತನ್ಯಸ್ವರೂಪನಾಗಿರುತ್ತಾನೆ; 'ನ ಹಿ ದ್ರಷ್ಟುರ್ದೃಷ್ಟೇರ್ವಿಪರಿಲೋಪೋ ವಿದ್ಯತೇ' (ಬೃ 4-3-23) ಎಂಬ ಶ್ರುತಿಯ ಪ್ರಮಾಣದಿಂದ ಅವನ ಚೈತನ್ಯವು ಎಂದಿಗೂ ಮಾರ್ಪಡುವದಿಲ್ಲವೆಂದು ತಿಳಿಯಬೇಕಾಗಿದೆ. ಜಗತ್ತು ಈ ಲಕ್ಷಣಕ್ಕೆ ವಿಪರೀತವಾಗಿ ಅಶುದ್ಧವಾದ ಅಚೇತನಪದಾರ್ಥಗಳಿಂದೊಡಗೂಡಿದೆ. ಕಲ್ಲು, ಮಣ್ಣು, ನೀರು, ಗಾಳಿ - ಮುಂತಾದ ಅಚೇತನವಸ್ತುಗಳು ನಿತ್ಯಚೈತನ್ಯಸ್ವರೂಪನಾದ ಪರಮಾತ್ಮನೇ ಎನ್ನಬಹುದೆ? ಇದರಲ್ಲಿ ಚೇತನರಾದ ಮನಷ್ಯರೂ ಮೃಗಪಕ್ಷಿ ಕೀಟಾದಿಗಳೂ ಕಾಣುತ್ತಿರುವದು ನಿಜ; ಆದರೆ ಅವರು ಅಚೇತನವಾದ ದೇಹಾದಿಗಳುಳ್ಳವರು, ಪರಿಚ್ಛಿನ್ನವಾದ ಅನಿತ್ಯಜ್ಞಾನವುಳ್ಳವರು, ಅಲ್ಪಶಕ್ತಿಯುಳ್ಳವರು ಹೀಗೆ ಜ್ಞಾನತಾರತಮ್ಯವೂ ಶಕ್ತಿತಾರತಮ್ಯವೂ ಇರುವ ಈ ದೇಹಿಗಳನ್ನು ಪರಮಾತ್ಮನೇ ಎನ್ನಬಹುದೆ? ಲೋಕದಲ್ಲಿ ಮಣ್ಣಿಗೂ ಅದರ ಕಾರ್ಯವಾದ ಮಡಕೆಕುಡಿಕೆಗಳಿಗೂ ಕಾರ್ಯಕಾರಣಭಾವವು ಕಂಡುಬರುತ್ತಿರುವಲ್ಲಿ ಮಣ್ಣಿನ ಕಾರ್ಯಗಳಲ್ಲೆಲ್ಲ ಮಣ್ಣೇ ಅನುಸರಿಸಿಕೊಂಡು ಬಂದಿರುತ್ತದೆ ಹೀಗೆಯೇ ಚಿನ್ನದ ಕಾರ್ಯಗಳಲ್ಲಿ ಚಿನ್ನವೇ ಅನುಸರಿಸಿಕೊಂಡು ಬರುತ್ತದೆಯೇ ಹೊರತು ಮಣ್ಣು ಅನುಸರಿಸಿಕೊಂಡು ಬಂದಿರುವದಿಲ್ಲ. ಸಚ್ಚಿದ್ರೂಪನಾದ ಪರಮಾತ್ಮನೇ ಜಗತ್ತಿಗೆ ಕಾರಣನಾಗಿದ್ದರೆ ಜಗತ್ತಿನಲ್ಲಿ ಅಸತ್ಪದಾರ್ಥಗಳೂ ಅಚೇತನಪದಾರ್ಥಗಳೂ ತೋರುತ್ತಿರುವದೇಕೆ? ಚೇತನರಾದ ಜೀವರುಗಳೂ ಪರಮಾತ್ಮನೇ ಆಗಿರುತ್ತಿದ್ದರೆ ಅವರಲ್ಲಿ ಸರ್ವಜ್ಞತ್ವವೂ ಸರ್ವಶಕ್ತಿತ್ವವೂ ತೋರುತ್ತಿಲ್ಲವೇಕೆ? ಈ ಪ್ರಶ್ನೆಗೆ ಅದ್ವೈತಸಿದ್ಧಾಂತದಲ್ಲಿ ಉತ್ತರವಿಲ್ಲವಾದ್ದರಿಂದ ಅದು ಪ್ರಾಮಾಣಿಕವಲ್ಲ. ಪರಮಾತ್ಮನು ಬೇರೆ ಜಗತ್ತಿಗೆ ಉಪಾದಾನಕಾರಣವಾದ ವಸ್ತು ಬೇರೆ ಎಂದು ಹೇಳುವದೇ ಯುಕ್ತ. ಈ ಉಪಾದಾನವು ಪ್ರಧಾನವೆಂದು ಸಾಂಖ್ಯರೂ, ಪರಮಾಣುಗಳೆಂದು ವೈಶೇಷಿಕರೂ ಹೇಳುತ್ತಿದ್ದರು. ಈಗಿನ ಭೌತಿಕಶಾಸ್ತ್ರದಲ್ಲಿಯೂ ಪರಮಾಣುಗಳಿಂದಲೇ ಜಗತ್ತು ಉಂಟಾಗಿದೆ ಎಂದು ಪ್ರತಿಪಾದಿತವಾಗಿರುತ್ತದೆ; ಈ ಶಾಸ್ತ್ರದಲ್ಲಿ ನಿರೀಕ್ಷಣಪರೀಕ್ಷಣಸಂವಾದೀಕರಣಗಳೆಂಬ ಉಪಾಯಗಳಿಂದ ಸಿದ್ಧಾಂತವನ್ನು ಮಾಡಿರುವದರಿಂದ ಅದನ್ನು ಒಪ್ಪಲೇಬೇಕಾಗಿದೆ. ಸತ್ಯಜ್ಞಾನಾನಂತ ರೂಪನಾದ ಪರಮಾತ್ಮನು ಶಾಸ್ತ್ರಮಾತ್ರಗಮ್ಯನಾಗಿರುವದರಿಂದ ಅವನೇ ಇಲ್ಲವೆಂದು ಬೇಕಾದರೂ ಹೇಳಬಹುದು. ಯುಕ್ತ್ಯನುಭವಸಂಮತವಾಗಿರುವ ಈ ಪರಮಾಣುವಾದವನ್ನು ಕೈಬಿಡುವದಕ್ಕೆ ಕಾರಣವೇನೂ ತೋರುತ್ತಿಲ್ಲವಲ್ಲ!

    ಈ ಶಂಕೆಯನ್ನು ಪರಿಹರಿಸುವದಕ್ಕೆಂದೇ ಈ ಶ್ಲೋಕವು ಬಂದಿರುತ್ತದೆ. "ಯಾವಾತನ ಸದ್ರುಪವಾದ ಬೆಳಕೇ ಅಸತ್ಕಲ್ಪವಾದ ಅರ್ಥದಲ್ಲಿ ಸೇರಿಕೊಂಡು ತೋರುತ್ತಿರುವದೋ, ಯಾವಾತನು ತನ್ನನ್ನಾಶ್ರಯಿಸಿದವರಿಗೆ 'ತತ್ತ್ವಮಸಿ' ಎಂಬ ವೇದವಾಕ್ಯದಿಂದ ನೇರಾಗಿ ಬೋಧಿಸುತ್ತಿರುವನೋ, ಯಾವಾತನನ್ನು ಸಾಕ್ಷಾತ್ಕರಿಸಿ ಕೊಳ್ಳುವದರಿಂದ ಮತ್ತೆ ಸಂಸಾರಸಾಗರಕ್ಕೆ ಮರಳುವದಾಗದೆ ಇರುವದೋ ಆ ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮೂರ್ತಿಗೆ ಈ ನಮಸ್ಕಾರವು" ಎಂಬುದು ಇದರ ಅಕ್ಷರಾರ್ಥವು. ಈಗ ಇದರಲ್ಲಿರುವ ವಿಶೇಷಣಗಳ ಅಭಿಪ್ರಾಯವನ್ನು ಬಿಚ್ಚಿ ನೋಡೋಣ.

    ಮೇಲೆ ಕೊಟ್ಟಿರುವ ಆಕ್ಷೇಪಗ್ರಂಥದಲ್ಲಿ ಮುಖ್ಯವಾಗಿ ಒಂದು ಯುಕ್ತಿಯನ್ನು ಆಶ್ರಯಿಸಿದೆ. ಯಾವದು ಕಾರ್ಯವೋ ಅದರಲ್ಲಿ ಕಾರಣಧರ್ಮವು ಅಡಗಿರಬೇಕು ಎಂಬುದೇ ಆ ಯುಕ್ತಿ ಆದರೆ ಇದು ಲೋಕಾನುಭವಕ್ಕೆ ಹೊಂದುಗೆಯಾಗಿಲ್ಲ ಮಣ್ಣು, ಚಿನ್ನ - ಮುಂತಾದವುಗಳ ಕಾರ್ಯದಲ್ಲಿ ಮಣ್ಣು, ಚಿನ್ನ - ಇವು ಅನುಗತವಾಗಿರುವದು ಕಾಣುತ್ತದೆ ಎಂಬುದು ನಿಜ. ಆದರೆ ಕಾರಣದಿಂದ ಹುಟ್ಟುವ ಕಾರ್ಯಗಳೆಲ್ಲ ಕಾರಣದಂತೆಯೇ ಇರಬೇಕೆಂಬ ನಿಯಮವೇನು ಇಲ್ಲ. ಮನುಷ್ಯನ ಶರೀರದಿಂದ ಹುಟ್ಟುವ ಕೂದಲು ಮೈಯಂತೆ ಇರುವದಿಲ್ಲ. ಬೀಜದಿಂದ ಹುಟ್ಟುವ ಮೊಳಕೆ, ಮರದಬುಡ, ಎಲೆ, ಹೂ, ಹಣ್ಣು- ಇವಕ್ಕೂ ಕಾರಣವಾದ ಬೀಜಕ್ಕೂ ಯಾವ ಹೋಲಿಕೆಯೂ ಇರುವದಿಲ್ಲ. ಈಗಿನ ಭೌತಿಕಶಾಸ್ತ್ರದಂತೆ ಆಮ್ಲಜನಕ, ಜಲಜನಕ - ಈ ಎರಡರಿಂದ ನೀರು ಉಂಟಾಗಿದೆ ಎಂದು ಗೊತ್ತಾಗಿದೆ; ಆದರೆ ಆ ಅನಿಲಗಳಿಗೂ ನೀರಿಗೂ ಯಾವ ಸಾಧರ್ಮ್ಯವೂ ಇರುವಂತಿಲ್ಲ ಆದ್ದರಿಂದ ಕಾರಣದ ಧರ್ಮಳೇ ಕಾರ್ಯದಲ್ಲಿರ ಬೇಕೆಂದು ನಿರ್ಬಂಧಿಸುವದಕ್ಕೆ ಆಗುವದಿಲ್ಲ.

    ಇನ್ನು ಆಕ್ಷೇಪಕನು ಹೀಗೆಂದು ಕೇಳಬಹುದು : ಅತ್ಯಂತವಾಗಿ ಒಂದಕ್ಕೊಂದು ವಿಲಕ್ಷಣವಾಗಿರುವ ಎರಡು ವಸ್ತುಗಳಿಗೆ ಕಾರ್ಯಕಾರಣಭಾವವಿದೆ ಎಂದು ಯಾವ ಯುಕ್ತಿಯ ಬಲದಿಂದ ನಿರ್ಣಯಿಸಬೇಕು? ಮನುಷ್ಯನಿಂದ ಕೂದಲು, ಉಗುರು ಮುಂತಾದವುಗಳೂ, ಬೀಜದಿಂದ ಮೊಳಗೆ ಮುಂತಾದವುಗಳೂ ಅನಿಲಗಳಿಂದ ನೀರೂ ಹುಟ್ಟುವದು ಪ್ರತ್ಯಕ್ಷಾದಿಪ್ರಮಾಣಗಳಿಂದ ಕಂಡುಬರುವದರಿಂದ ಅಲ್ಲಿ ಕಾರ್ಯಕಾರಣಭಾವವನ್ನು ಒಪ್ಪೋಣ ಆದರೆ ಅತ್ಯಂತವಾಗಿ ವಿಲಕ್ಷಣವಾಗಿರುವ ಆತ್ಮನಿಗೂ ಪ್ರಪಂಚಕ್ಕೂ ಯಾವ ಪ್ರಮಾಣದಿಂದ ಕಾರ್ಯಕಾರಣಭಾವವನ್ನು ಒಪ್ಪಬಹುದು? ಇಲ್ಲಿಯೂ 'ಸಚ್ಚ ತ್ಯಚ್ಚಾಭವತ್; ..... ವಿಜ್ಞಾನಂ ಚಾವಿಜ್ಞಾನಂ ಚ' (ತೈ2-7) ಪರಮಾತ್ಮನು ಪ್ರತ್ಯಕ್ಷವೂ ಪರೋಕ್ಷವೂ ಆಗಿರುವ ಪಂಚಭೂತಗಳಾದನು.... ಚೇತನವೂ ಅಚೇತನವೂ ಆದನು ಎಂಬ ಶ್ರುತಿಯಿದೆಯಲ್ಲ! ಎಂದು ವೇದಾಂತಿಗಳು ಕೇಳಬಹುದು. ಆದರೆ ಶ್ರುತಿಯೆಂಬುದು ವಾಙ್ಮಾತ್ರವು ಶಬ್ಧವು ಇದ್ದದ್ದನ್ನು ತಿಳಿಸಬಹುದೇ ಹೊರತು ಇಲ್ಲದ್ದನ್ನು ಅಥವಾ ಪ್ರಮಾಣವಿರುದ್ಧವಾದದ್ದನ್ನು ಉಂಟುಮಾಡಲಾರದು. ಆತ್ಮನು ಪ್ರತ್ಯಕ್ಷಾದಿಪ್ರಮಾಣಗಳಿಗೆ ಗೋಚರನಲ್ಲ ಪ್ರಪಂಚವು ಅನುಭವಗೋಚರವಾಗಿದೆ ಇವೆರಕ್ಕೂ ಕಾರ್ಯಕಾರಣವನ್ನಾಗಲಿ ಸಾಧರ್ಮ್ಯವನ್ನಾಗಲಿ ಅನುಭವಕ್ಕೆ ವಿರುದ್ಧವಾಗಿ ಯಾವ ಶ್ರುತಿಯು ತಾನೆ ಹೇಗೆ ತಿಳಿಸಿಕೊಟ್ಟೀತು?
    ಈ ಆಕ್ಷೇಪಕ್ಕೆ ಪರಿಹಾರವೇನೆಂದರೆ, ಆತ್ಮನು ಯಾವ ಪ್ರಮಾಣಕ್ಕೂ ಗೋಚರನಲ್ಲವೆಂಬ ಕಾರಣದಿಂದ ಮೊಲದ ಕೊಂಬು, ಬಂಜೆಯ ಮಗ ಮುಂತಾದವುಗಳಂತೆ ಅವನು ಇಲ್ಲವೇ ಇಲ್ಲ-ಎನ್ನುವದಕ್ಕೆ ಬರುವದಿಲ್ಲ ಪ್ರಮಾಣಗಳಿಗೆ ಗೋಚರವಾಗುವ ಪದಾರ್ಥಗಳೂ ಪ್ರಮಾಣವೂ ಪ್ರಮಾತೃವೂ ಯಾವ ಚೈತನ್ಯರೂಪವಾದ ಅನುಭವಕ್ಕೆ ಗೋಚರವಾಗಿ ಇವೆಯೆನಿಸಿಕೊಳ್ಳುವವೋ ಆ ಅನುಭವಸ್ವರೂಪನಾದ ಆತ್ಮನನ್ನು ಇಲ್ಲವೆನ್ನುವದಕ್ಕೆ ಯಾರಿಗೆ ಎದೆ ಬಂದೀತು? ಪ್ರಮಾಣಗಳಾಗಲಿ ಪ್ರಮೇಯಗಳಾಗಲಿ ಯಾವ ಚೈತನ್ಯಕ್ಕೆ ಗೋಚರವಾಗದೆ ಇವೆಯೆನಿಸಿಕೊಳ್ಳಲಾರವೋ ಆ ಆತ್ಮನ ಚೈತನ್ಯವು ಸದ್ರೂಪವಾಗಿಯೇ ಇರಬೇಕಷ್ಟೆ? ಆತ್ಮತತ್ತ್ವವು ಅರಿವಿನ ಸ್ವರೂಪವು ಅದು ಇಲ್ಲ ಎಂಬ ವ್ಯಾಹತೋಕ್ತಿಯನ್ನು ಯಾರುತಾನೆ ಒಪ್ಪಿಯಾರು? ಹೀಗೆ ಆತ್ಮನು ಯಾವ ಪ್ರಮಾಣದಿಂದಲೂ ಸಿದ್ಧನಾಗದಿದ್ದರೂ ಅವನ ಚೈತನ್ಯರೂಪವಾದ ಸ್ಫುರಣವು ಬೆಳಕು ಸ್ವಯಂಸಿದ್ಧವಾಗಿರುತ್ತದೆ; ಆ ಸ್ವತಃಸಿದ್ಧವಾದ ಸಚ್ಛಿದ್ರೂಪದ ಬಲದಿಂದಲೇ ನಮಗೆ ಎಲ್ಲವೂ ತೋರುತ್ತಿದೆ - ಎಂಬುದಕ್ಕೆ ಈ ಅನುಭವವೊಂದೇ ಸಾಕಾಗಿದೆ.

    ಈಗ ಜಗತ್ತಿನಲ್ಲಿ ತೋರುವ ಕಲ್ಲು, ಮಣ್ಣು, ಕಟ್ಟಿಗೆ - ಮುಂತಾದ ಅಚೇತನಪದಾರ್ಥಗಳು ಆತ್ಮನಿಗಿಂತ ವಿಲಕ್ಷಣವಾಗಿವೆಯಾದ್ದರಿಂದ ಅವಕ್ಕೆ ಸಾಂಖ್ಯಾದಿಗಳು ಹೇಳುವಂತೆ ಅಚೇತನವಾದ ಕಾರಣವೊಂದಿರಬೇಕು; ಈಗಿನ ಬಾಹ್ಯವಿಜ್ಞಾನಶಾಸ್ತ್ರವು ತೋರಿಸಿಕೊಡುತ್ತಿರುವ ರೀತಿಯಿಂದ ಪರಮಾಣುಗಳನ್ನಾದರೂ ಈ ಕಾರಣವೆಂದು ಒಪ್ಪಬೇಕು - ಎಂಬ ಅಭಿಪ್ರಾಯದಲ್ಲಿರುವ ಹುರುಳ ಎಷ್ಟರಮಟ್ಟಿನದೆಂಬುದನ್ನು ಪರೀಕ್ಷಿಸೋಣ. ಜಗತ್ತಿನಲ್ಲಿ ಅಚೇತನವೆಂದು ಕಾಣುವ ವಸ್ತುಗಳಾಗಲಿ ಅವಕ್ಕೆ ಕಾರಣವೆಂದು ಶಾಸ್ತ್ರಾಂತರದಲ್ಲಿ ಗೊತ್ತುಪಡಿಸಿರುವ ಕಾರಣವಾಗಲಿ ಆತ್ಮಚೈತನ್ಯದ ಹಂಗಿಲ್ಲದೆ ಎಂದಾದರೂ ಅನುಭವಕ್ಕೆ ಬಂದದ್ದುಂಟೆ? ಪ್ರಮಾಣಕ್ಕೆ ಗೋಚರವಾಗಿರುವದೆಂಬ ಕಾರಣದಿಂದ ಇದೆ ಎಂದು ನಾವು ಕಲ್ಪಿಸುವ ಯಾವದೊಂದು ವಸ್ತುವೇ ಆಗಲಿ ಅದು ಪ್ರತ್ಯಕ್ಷವಾಗಿದ್ದರೂ ಪರೋಕ್ಷವಾಗಿದ್ದರೂ ಚೈತನ್ಯದ ಬೆಳಕಿನಲ್ಲಿಯೇ ತಿಳಿಯ ಬರಬೇಕಾಗಿದೆ ಹಗಲುಹೊತ್ತು ಕಣ್ಣಿಗೆ ಬೀಳುವ ಪದಾರ್ಥಗಳೆಲ್ಲ ಸೂರ್ಯನ ಬೆಳಕಿಗೆ ಗೋಚರವಾಗಿಯೇ ತೋರಬೇಕಾಗಿರುವದರಿಂದ ಸೂರ್ಯನ ಬೆಳಕನ್ನು ಮೊದಲು ನೋಡಿಯೇ ಅದರ ಮೂಲಕವಾಗಿಯೇ ಆ ಬಾಹ್ಯಪದಾರ್ಥಗಳನ್ನು ನಾವು ಕಾಣಬೇಕಾಗಿರುತ್ತದೆಯಲ್ಲವೆ? ಪದಾರ್ಥವು 'ಇದೆ, ತೋರುತ್ತದೆ' ಎಂಬ ಭಾವವು ನಮಗೆ ಎಲ್ಲಿಂದ ಬರುತ್ತದೆ? ಅದು ಆತ್ಮನ ಸದ್ರೂಪವಾದ ಸ್ಫುರಣದಿಂದಲೇ ಪ್ರಮಾಣಗಳು ಯಾವದಾದರೊಂದು ಪ್ರಮೇಯವು ಇದೆ ಎನ್ನುವದಕ್ಕೆ ಮೊದಲೇ ಅವು ತಾವು ಇದೇವೆಂಬುದನ್ನು ನಮಗೆ ಮನಗಾಣಿಸಿ ಕೊಡಬೇಕಷ್ಟೆ? ಆ ಪ್ರಮಾಣಗಳ ಸತ್ತೆಯಾದರೂ ಎಲ್ಲಿಂದ ಬರುತ್ತದೆ? ಅದೂ ಪರಮಾತ್ಮನ ಚಿದ್ರೂಪವಾದ ಸತ್ತೆಯು ಅವುಗಳಲ್ಲಿ ಹೊಳೆದು ತೋರಿರುವದರಿಂದಲೇ ಆದ್ದರಿಂದ ಪ್ರಮಾಣಗಳಾಗಲಿ ಪ್ರಮೇಯಗಳಾಗಲಿ ನಮಗೆ ತೋರುವದೆಂಬುದು ಸದ್ರೂಪನಾದ ಆತ್ಮನ ಸ್ಫುರಣದ ದ್ವಾರದಿಂದಲೇ ಪರಮಾತ್ಮನ ಸದ್ರೂಪವಾದ ಸ್ಫುರಣವನ್ನೇ ನಾವು ಪ್ರಮಾಣರೂಪದಿಂದಲೂ ಪ್ರಮೇಯರೂಪದಿಂದಲೂ ಕಾಣುತ್ತಿರುವೆವು ಕನ್ನಡಿಯಲ್ಲಿ ತೋರುವ ಪ್ರತಿಬಿಂಬವು ಸಾರದೃಷ್ಟಿಯಿಂದ ನೋಡಿದಾಗ ಅದರ ಮೂಲವಾದ ಹೊರಗಿನ ವಸ್ತುಗಳ ಹೊಳಪು ಮಾತ್ರವೇ ಆಗಿರುವಂತೆ ಪ್ರಮಾಣಪ್ರಮೇಯಗಳು ಸಾರದೃಷ್ಟಿಯಿಂದ ನೋಡಿದಾಗ ಅವುಳ ಮೂಲವಾದ ಆತ್ಮನ ಸಚ್ಚಿದ್ರೂಪವೇ ಆ ರೂಪದಿಂದ ಬೇರ್ಪಡಿಸಿದರೆ ಆ ವಸ್ತುಗಳು ಆಸತ್ಕಲ್ಪವೇ ಎಂದರೆ ಬರಿಯ ತೋರಿಕೆಯೇ ಆ ರೂಪದ ವಸ್ತು ಯಾವದೂ ಇರುವದೇ ಇಲ್ಲ ಎಂದಾಯಿತು.

    ಈವರೆಗಿನ ವಿಚಾರಧಾರೆಯು ಎಲ್ಲಿಗೆ ಬಂದು ನಿಂತಂತಾಯಿತೆಂದರೆ ಜಗತ್ತೆಂಬುದು ತೋರಿಕೆಯ ರೂಪದಿಂದ ಅಸತ್ತೇ; ಅದರ ಸಾರವು ಪರಮಾತ್ಮನೇ ಹೀಗೆಂಬುದು 'ಆಸ್ತಿ', 'ಸ್ಫುರತಿ' ಇದೆ ತೋರುತ್ತದೆ ಎಂಬ ವ್ಯಾವಹಾರಿಕಾನು ಭವದಿಂದ ನಿರ್ಣಯವಾಗುತ್ತದೆ. ಆತ್ಮದೃಷ್ಟಿಯಿಂದ ನೋಡಿದಾಗ ಜಗತ್ತೇ ಇಲ್ಲ; ಇದೆಲ್ಲವೂ ಆತ್ಮನೇ, ಬ್ರಹ್ಮವೇ, 'ಆತ್ಮೈವೇದಂ ಸರ್ವಮ್' (ಛಾಂ 7-25-2) 'ಬ್ರಹ್ಮೈವೇದಂ ವಿಶ್ವಮ್' (ಮುಂ 2-2-11) ಎಂಬ ಶ್ರುತಿವಚನವು ಬರಿಯ ಅರ್ಥಹೀನವಾಕ್ಯವಲ್ಲ; ಅದು ವಸ್ತುಸ್ಥಿತಿಯನ್ನು ಬೋಧಿಸುವ ವಾಕ್ಯ.

    ಇನ್ನು ಅಲ್ಪಪ್ರಜ್ಞರೂ, ಅಲ್ಪಶಕ್ತಿಯುಳ್ಳವರೂ ಆಗಿರುವ ಜೀವರು ಪರಮಾತ್ಮನೇ ಎಂಬುದು ಹೇಗೆ ಸಮಂಜಸವಾದೀತು? ಎಂಬ ಪೂರ್ವಪಕ್ಷಕ್ಕೆ ಪರಿಹಾರವನ್ನು ಕಂಡುಕೊಳ್ಳುವದು ಸುಲಭವಾಗುತ್ತದೆ. ಏಕೆಂದರೆ ಜೀವನೆಂದರೆ ಯಾವ ಪದಾರ್ಥವದು? ಎಂದು ವಿಮರ್ಶೆಮಾಡಿನೋಡಿದರೆ, ದ್ರಷ್ಟೃ (ಕಣ್ಣಿನಿಂದ ನೋಡುವವ), ಶ್ರೋತೃ (ಕಿವಿಯಿಂದ ಕೇಳುವವ), ಘ್ರಾತೃ (ಮೂಗಿನಿಂದ ಮೂಸುವವ), ರಸಯಿತೃ (ನಾಲಗೆಯಿಂದ ಸವಿನೋಡುವವ), ಸ್ಪ್ರಷ್ಟೃ (ತ್ವಗಿಂದ್ರಿಯದಿಂದ ಮುಟ್ಟುವವ), ಮನ್ತೃ (ಮನಸ್ಸಿನಿಂದ ಮನನ ಮಾಡುವವ), ಬೋದ್ಧೃ (ಬುದ್ಧಿಯಿಂದ ಅರಿಯುವವ) ಎಂಬುದಲ್ಲವೆ, ಜೀವನ ಸ್ವರೂಪ? 'ಜೀವ ಪ್ರಾಣಧಾರಣೇ' ಎಂಬ ಧಾತುವಿನಿಂದ ಬಂದಿರುವ ಜೀವ ಶಬ್ಧಕ್ಕೆ ಕರಣಗಳಿಂದ ವ್ಯಾಪಾರಮಾಡುವವನು ಎಂದೇ ಅರ್ಥ. ಆದರೆ ಈ ಕರಣಳೂ ಅವುಗಳ ವಿಷಯಗಳೂ ಮೇಲೆ ಹೇಳಿರುವಂತೆ ತಾವುತಾವು ಅಸತ್ಕಲ್ಪವಾಗಿರುತ್ತವೆ; ಈ ಜ್ಞಾನೇಂದ್ರಿಯಗಳನ್ನು ಉಪಾಧಿಗಳಾಗಿ ಬಳಸಿಕೊಳ್ಳುವದರಿಂದಲೇ ಚೇತನರಾದ ಜೀವರು ಅಲ್ಪಜ್ಞರು (ಇಷ್ಟಿಷ್ಟೆಂದು ಅಳತೆಗೆ ಬರುವ ಅರಿವುಳ್ಳವರು) ಎನ್ನಿಸಿಕೊಂಡಿರುತ್ತಾರೆ. ಹೀಗೆಯೇ ವಾಕ್ಪಾಣಿ ಪಾದಪಾಯೂಪಸ್ಥಗಳೆಂಬ ಕರ್ಮೇಂದ್ರಿಯಳನ್ನು ಉಪಾಧಿಯಾಗಿ ಬಳಸಿಕೊಳ್ಳುವದರಿಂದಲೇ ಅವರು ಅಲ್ಪಶಕ್ತಿಯುಳ್ಳವರೆನಿಸಿರುತ್ತಾರೆ ಆದರೆ ಈ ಉಪಾಧಿಗಳು ಅವರಿಗೆ ಶಾಶ್ವತವಾಗಿರುವದಿಲ್ಲ ಸುಷುಪ್ತ್ಯಾದ್ಯವಸ್ಥೆಗಳಲ್ಲಿ ಅವು ಇರುವದಿಲ್ಲ ಅವು ತೋರುತ್ತಿರುವಾಗಲೂ ಅವನ್ನು ಸರ್ವಸಾಕ್ಷಿಯಾದ ಪರಮಾತ್ಮನು ತನ್ನ ಚೈತನ್ಯದಿಂದ ವಿಷಯಿಕರಿಸಿಕೊಂಡು ಬೆಳಗುತ್ತಲೇ ಇರುತ್ತಾನೆ. ಆ ಪರಮಾರ್ಥ ರೂಪದಿಂದ ಯಾವನೊಬ್ಬನಿಗೂ ಯಾವ ಪರಿಚ್ಛೇದವೂ ಇರುವದೇ ಇಲ್ಲ ಜೀವರಿಗೆ ಪರಿಚ್ಛೇದಕವಾಗಿ ತೋರುವ ಶರೀರ ಇಂದ್ರಿಯ, ಮನಸ್ಸು - ಮುಂತಾದ ಉಪಾಧಿಗಳನ್ನು ಕೂಡ ಆ ಚೈತನ್ಯವು ವ್ಯಾಪಿಸಿಕೊಂಡೇ ಇರುತ್ತಿರುವದರಿಂದ ಮಂಜುಗಡ್ಡೆಯಲ್ಲೆಲ್ಲ ಎಡೆಬಿಡದೆ ತುಂಬಿಕೊಂಡಿರುವ ಏಕರಸವಾದ ನೀರಿನಂತೆ ಚೈತನ್ಯವು ಅದ್ವಿತೀಯವಿಜ್ಞಾನಘನವೇ ಆಗಿರುತ್ತದೆ.

    ಆದ್ದರಿಂದ ಸಾಧಕನು ತನ್ನ ಸ್ವರೂಪವು ಮಾತ್ರವೇ ಅಲ್ಲ ತನ್ನೆದುರಿಗೆ ಉಪದೇಶಮಾಡಲು ಕುಳಿತಿರುವ ಗುರುಮೂರ್ತಿಯೂ ಆ ಸಚ್ಚಿದಾನಂದಘನನಾದ ಶ್ರೀದಕ್ಷಿಣಾಮೂರ್ತಿಯೇ ಎಂದು ಸಕಲಮಾಯಿಕೋಪಾಧಿಗಳನ್ನೂ ವಿವೇಕದಿಂದ ಕರಗಿಸಿಕೊಂಡು ಏಕಾಕಾರವಾಗಿ ಅನುಭವಕ್ಕೆ ತಂದುಕೊಳ್ಳಬೇಕು. 'ತತ್ತ್ವಮಸಿ' ಎಂಬ ವಾಕ್ಯವು ಛಾಂದೋಗ್ಯದಲ್ಲಿ ಒಂಬತ್ತು ಸಲ ಬಂದಿರುತ್ತದೆ. ಶ್ವೇತಕೇತು ಎಂಬ ಮಗನಿಗೆ ತಂದೆಯಾದ ಆರುಣಿ ಉದ್ದಾಲಕನು ಯಾವದೊಂದನ್ನು ಅರಿತರೆ ಎಲ್ಲವನ್ನೂ ಅರಿತುಕೊಂಡಂತೆ ಆಗುವದೋ ಅದನ್ನು ತಿಳಿಸುವೆನೆಂದು ಹೊರಟು ಸದ್ರೂಪವಾದ ಬ್ರಹ್ಮದಿಂದಲೇ ಎಲ್ಲ ಪ್ರಾಣಿಗಳೂ ಬಂದು ಆ ಸದ್ಬ್ರಹ್ಮದಲ್ಲಿಯೇ ಇದ್ದುಕೊಂಡಿದ್ದು ಕೊನೆಯಲ್ಲಿ ಅದರಲ್ಲಿಯೇ ಲಯವಾಗುತ್ತಿರುವದರಿಂದ ಉತ್ಪತ್ತಿಸ್ಥಿತಿಲಯಕಾಲಗಳಲ್ಲಿ ಎಂದಿಗೂ ಆ ಸದ್ಬ್ರಹ್ಮದ ಸ್ವರೂಪವನ್ನು ಬಿಟ್ಟಗಲದೆ ಇರುವವೆಂದು ಬೋಧಿಸಿರುತ್ತಾನೆ. 'ಐತದಾತ್ಮ್ಯಮಿದಂ ಸರ್ವಂ ತತ್ಸತ್ಯಂ ಆತ್ಮಾತತ್ತ್ವಮಸಿ ಶ್ವೇತಕೇತೋ' ಎಲೈ ಶ್ವೇತಕೇತುವೆ, ಈ ಜಗತ್ತೆಲ್ಲಕ್ಕೂ ಈ ಸದ್ಬ್ರಹ್ಮವೇ ತಿರುಳು; ಅದೇ ಸತ್ಯವಾದದ್ದು ಮಿಕ್ಕದ್ದೆಲ್ಲವೂ ಬರಿಯ ತೋರಿಕೆ ಅದೇ ಎಲ್ಲರ ಆತ್ಮವು ಅದಕ್ಕಿಂತ ಬೇರೆಯಾಗಿ ಸಂಸಾರಿಯಾದ ಆತ್ಮನು ಇರುವದೇ ಇಲ್ಲ ಅದೇ ನೀನು ಎಂದು ಬಗೆಬಗೆಯ ಯುಕ್ತಿಗಳಿಂದ ತಿಳಿಸಿಕೊಟ್ಟಿರುತ್ತಾನೆ. ಈ ಶ್ರುತಿಯ ಸಾರವನ್ನೇ ಈ ಸ್ತೋತ್ರದಲ್ಲಿಯೂ ಹೇಳಿರುವದರಿಂದ ಇದು ಸರ್ವ
ವೇದಾಂತಾರ್ಥಸಾರಸಂಗ್ರಹರೂಪವಾಗಿರುತ್ತವೆ. ಹಿಂದೆ ಯಾವಾಗಲೋ ಉದ್ದಾಲಕನು ಮಗನಿಗೆ ಹೇಳಿದ ವಾಕ್ಯವಿದೆಂದೂ ಇದು ನಮಗೆ ಅನುಭವಕ್ಕೆ ಬರಲಾರದೆಂದೂ ಶಂಕಿಸಬಾರದು. ಶ್ರೀದಕ್ಷಿಣಾಮೂರ್ತಿಯು ಋಷಿಗಳಿಗೆ ಉಪದೇಶಿಸಿದ ಅಭಿಪ್ರಾಯವೂ ಇದೇ ನೇರಾಗಿ ಆ ದಕ್ಷಿಣಾಮೂರ್ತಿಯೇ ಈಗ ನನಗೂ ಭೋಧಿಸುತ್ತಿದ್ದಾನೆ ಎಂಬುದನ್ನು ಬರಿಯ ಭಾವನೆಯಿಂದಲೇ ಅಲ್ಲ ಈ ಸ್ತೋತ್ರದ ಅರ್ಥವನ್ನು ಅನುಸಂಧಾನಮಾಡಿ ಅನುಭವದಿಂದಲೂ ತಿಳಿದುಕೊಳ್ಳ ಬಹುದಾಗಿದೆ. "ದೇವತೆಗಳೊಳಗೆ ಯಾವಯಾವನು ನಾನೇ ಆ ಬ್ರಹ್ಮವು ಎಂದು ಅರಿತುಕೊಂಡನೋ ಅವನೇ ಈ ವಿಶ್ವವೆಲ್ಲವೂ ತನೇ ಆದನು ಋಷಿಗಳೊಳಗೆ ಯಾವಯಾವನು ಹಾಗೆಂದು ಅರಿತುಕೊಂಡನೋ ಮನುಷ್ಯರೊಳಗೆ ಯಾವ ಯಾವನು ಅರಿತುಕೊಂಡನೋ ಅವನವನಿಗೇ ಈ ಫಲವು ಬಂದಿತು ಈಗಲೂ ಯಾವಯಾವನು ನಾನೇ ಆ ಬ್ರಹ್ಮವೆಂದು ಅರಿತುಕೊಳ್ಳುವನೋ ಅವನವನು ಈ ಸರ್ವಾತ್ಮಭಾವವನ್ನು ಹೊಂದುತ್ತಾನೆ" ಎಂದು ಬೃಹದಾರಣ್ಯಕ (ಬೃ1-4-10) ಶ್ರುತಿಯು ಹೇಳುತ್ತಿದೆ.

    'ಸಾಕ್ಷಾತ್ತತ್ತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್' ಎಂಬ ವಾಕ್ಯದಲ್ಲಿ ಸಾಕ್ಷತ್ (ನೇರಾಗಿ) ಎಂಬ ಮಾತನ್ನು 'ಯಃ ಸಾಕ್ಷಾದ್ಬೋಧಯತಿ', ನೇರಾಗಿ ಆತನೇ ಬೋಧಿಸುತ್ತಾನೆ ಎಂದೂ ಅನ್ವಯಮಾಡಿ ಕೊಳ್ಳಬಹುದು. ಆಗ ವಾಕ್ಯದ ಅಭಿಪ್ರಾಯವು ಹೇಗಾಗುವದೆಂಬುದನ್ನು ಈವರೆಗೆ ತಿಳಿಸಿಕೊಟ್ಟದ್ದಾಗಿದೆ. 'ಸಾಕ್ಷಾದ್ವೇದವಚಸಾ' ನೇರಾಗಿ ವೇದವಾಕ್ಕಿನಿಂದಲೇ ಎಂದೂ ಅದನ್ನು ಅನ್ವಯಿಸಿಕೊಳ್ಳಬಹುದು. ಆಗ ಶ್ರೀಗುರುವು ಹೇಳಿಕೊಡುವ ವಾಕ್ಯವು ಪ್ರಾಕೃತಭಾಷೆಯ ರೂಪದಲ್ಲಿರಲಿ ಸಂಸ್ಕೃತಭಾಷೆಯ ರೂಪದಲ್ಲಿರಲಿ ಅದು ವೇದವಾಕ್ಯವೇ ಎಂದು ನಂಬಬೇಕು ಎಂಬ ಅಭಿಪ್ರಾಯವು ಹೊರಡುತ್ತದೆ ಸೂರ್ಯನು ಹೇಗೆ ರೂಪವನ್ನು ಸಾಕ್ಷತ್ತಾಗಿ ಬೆಳಗುತ್ತಾನೋ, ಕಣ್ಣು ಮುಂತಾದದ್ದು ಸೂರ್ಯನ ಬೆಳಕಿನ ಮೂಲಕವಾಗಿ ಹೇಗೆ ತೋರಿಸುತ್ತದೆಯೋ ಹಾಗೆ ಸದ್ಗುರುವಾದವನು ಬೋಧಿಸುವದು ವೇದವಾಕ್ಯವೇ ಆದ್ದರಿಂದ ಅದು ಸ್ವತಃ ಪ್ರಮಾಣವಾಗಿರುತ್ತದೆ : ಅದು ಮತ್ತೊಬ್ಬರು ಹೇಳಿದ್ದ ಮಾತನ್ನು 'ಹೇಳೆಂದ ಕೇಳೆಂದ' ಎಂದು ತಿಳಿಸುವ ವಾಕ್ಯವಲ್ಲ. 'ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ' ಅದನ್ನು ದೀರ್ಘದಂಡನಮಸ್ಕಾರದಿಂದಲೂ ಸಮಯವರಿತು ಪ್ರಶ್ನೆ ಮಾಡುವದರಿಂದಲೂ ಶುಶ್ರೂಷೆಯಿಂದಲೂ ಅರಿತುಕೊ 'ಉಪದೇಕ್ಷ್ಯನ್ತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ' ತತ್ತ್ವವನ್ನು ಅನುಭವದಿಂದ ಕಂಡುಕೊಂಡಿರುವ  ಜ್ಞಾನಿಗಳು ಜ್ಞಾನವನ್ನು ನಿನಗೆ ಹತ್ತಿರವಾಗಿಯೇ ಅರಿವಾಗುವಂತೆ ತೋರಿಸಿ ಕೊಡುತ್ತಾರೆ (ಗೀ. 4-38)- ಎಂದು ಭಗವಂತನು ಹೇಳಿರುವಂತೆ ಅನುಭವದ ಆಧಾರದಿಂದಲೇ ಅವರು ಹೇಳಿಕೊಡುತ್ತಿರುವದರಿಂದ ಆ ವಾಕ್ಯವು ವೇದವಾಕ್ಯವೇ ಆಗಿರುತ್ತದೆ ಆದ್ದರಿಂದಲೇ 'ಯಜ್ಜ್ಞಾತ್ವಾ ನ ಪುನರ್ಮೋಹಮೇವಂ ಯಾಸ್ಯಸಿ ಪಾಣ್ಡವ'- ಅವರು ಉಪದೇಶಿಸಿದ್ದನ್ನು ಅರಿತುಕೊಂಡರೆ ಮತ್ತೆ ಹೀಗೆ ಮೋಹವನ್ನೈದುವದಿಲ್ಲ (ಗೀ. 4-35) ಎಂದು ಭಗವಂತನು ಅಪ್ಪಣೆಕೊಡಿಸಿರುತ್ತಾನೆ. 'ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ' ಆದ್ದರಿಂದ ಸರ್ವಭೂತಗಳೂ ನಿನ್ನ ಆತ್ಮನನ್ನೇ ಆಶ್ರಯಿಸಿಕೊಂಡಿರುವವೆಂಬುದನ್ನು ಕಂಡು ಕೊಳ್ಳುವದರಿಂದ, ಆ ನಿನ್ನ ಆತ್ಮನು ಭಗವಂತನಾದ ನಾನೇ ಎಂದೂ ಅರಿತು ಕೊಳ್ಳುವೆ- ಎಂದೂ ಅಪ್ಪಣೆಕೊಡಿಸಿರುತ್ತಾನೆ. ಇದು 'ಸಾಕ್ಷಾತ್' ಎಂಬು ಶಬ್ದಕ್ಕೆ ಮಾಡಿಕೊಳ್ಳಬೇಕಾದ ಎರಡನೆಯ ಅನ್ವಯದಿಂದ ದೊರಕುವ ಅಭಿಪ್ರಾಯವು ಇನ್ನು ಯ ಆಶ್ರಿತಾನ್ 'ಸಾಕ್ಷಾದ್ ಬೋಧಯತಿ' ತನ್ನ ಆಶ್ರಿತರಾದ ಶಿಷ್ಯರಿಗೆ ನೇರಾಗಿ ಬೋಧವನ್ನುಂಟುಮಾಡುತ್ತಾನೆ- ಎಂದೂ ಈ ಪದಕ್ಕೆ ಅನ್ವಯವನ್ನು ಮಾಡಿಕೊಳ್ಳಬಹುದು. ಇದರ ಅಭಿಪ್ರಾಯವೇನೆಂದರೆ, ಶ್ರೀಗುರುಮೂರ್ತಿಯ ರೂಪದಲ್ಲಿರುವ ಶ್ರೀದಕ್ಷಿಣಾಮೂರ್ತಿಯ ಉಪದೇಶಿಸಿದನೆಂದರೆ, 'ಹೀಗೆಂದು ಗುರುಗಳು ಹೇಳುತ್ತಾರೆ' ಎಂದು ಪರೋಕ್ಷವಾಗಗಿ ಅರ್ಥವಾಗುವದಿಲ್ಲ; ಇದು ಹೀಗೆಯೇ ಇದೆ- ಎಂದು ನೇರಾದ ಅನುಭವವು ಉಂಟಾಗಿಯೇ ಬಿಡುತ್ತದೆ. ಇದನ್ನೇ ಭಗವಂತನು 'ದ್ರಕ್ಷ್ಯಸಿ' ಕಂಡುಕೊಳ್ಳುವೆ- ಎಂಬ ಅನುಭವ ಪರ್ಯವ ಸಾನತ್ವವನ್ನು ಸೂಚಿಸುವ ಮಾತಿನಿಂದ ತಿಳಿಸಿರುತ್ತಾನೆ. ಆಗಮವನ್ನು ಬಲ್ಲ ಸದ್ಗುರುವು ಉಪದೇಶಿಸಿದಮೇಲೂ ಅನುಭವವಾಗಲಿಲ್ಲ ಎಂಬ ಮಾತು 'ದೀಪವನ್ನು ಹತ್ತಿಸಿದರೂ ಬೆಳಕಾಗಲಿಲ್ಲ, ಕತ್ತಲೆ ಹೋಗಲಿಲ್ಲ' ಎಂಬ ಮಾತಿನಂತೆ ಸಾಹಸದ ಮಾತಾಗುವದು. ಆಗಮವೆಂದರೆ ವೇದಾರ್ಥವನ್ನು ಬೋಧಿಸುವ ಸತ್ಸಂಪ್ರದಾಯಕ್ರಮವು. 'ತತ್ತ್ವಮಸಿ' ಎಂಬಲ್ಲಿ ತ್ವಮ್ ಎಂಬ ಶಬ್ದವು ದೇಹೇಂದ್ರಿಯಾದಿಗಳ ಉಪಾಧಿಯಿಂದ ಕರ್ತೃವೂ ಭೋಕ್ತೃವೂ ಆಗಿರುವ ಸಂಸಾರಿ ನಾನೆಂದು ತಿಳಿದುಕೊಂಡಿರುವ ಶ್ವೇತಕೇತುವನ್ನು - ಶ್ರೋತೃವಾಗಿರುವ ಶಿಷ್ಯನನ್ನು- ತಿಳಿಸುತ್ತದೆ. ತತ್ ಎಂಬ ಪದಾರ್ಥವು ಜಗತ್ಕಾರಣವಾಗಿರುವ ಸದ್ಬ್ರಹ್ಮವನ್ನು ತಿಳಿಸುತ್ತದೆ- ಎಂಬುದು ತಟ್ಟನೆ ಹೊಳೆಯುವ ಅರ್ಥವು. ಆದರೆ ತತ್ತ್ವಮಸಿ ಎಂಬ ವಾಕ್ಯವು ಶ್ರೋತೃವಾದ ನೀನೇ ಪರಮಾತ್ಮನು ಎಂದು ಹೇಳುವದರಿಂದ ಕೇಳುವ ಶಿಷ್ಯನಿಗೆ ಸ್ವಾಭಾವಿಕವಾಗಿ ತೋರುತ್ತಿರುವ ದೇಹ ಪ್ರಾಣೇಂದ್ರಿಯಮನಆದಿ
ಮಿಢ್ಯೋಪಾಧಿಗಳನ್ನು ತೊಲಗಿಸಿ ನಿನ್ನ ಸ್ವರೂಪವು ಚೈತನ್ಯಮಾತ್ರವೇ ಎಂದು ತಿಳಿಸುವದು. 'ತತ್' ಜಗತ್ತಿಗೆ ಕಾರಣವು ಎಂದು ಹೇಳಿದ ಬ್ರಹ್ಮವು ಸಚ್ಚಿದ್ರೂಪವಾಇರುವದೆಂದೂ ಜನ್ಮಮರಣಾದಿಸರ್ವಸಂಸಾರಧರ್ಮರಹಿತವಾಗಿರುವದೆಂದೂ ಅದೇ ಮಿಢ್ಯೋಪಾಧಿಗಳಿಂದ ಜೀವನಾಗಿ ಈ ಶರೀರದಲ್ಲಿ ಹೊಕ್ಕಿರುವಂತೆ ತೋರುತ್ತಿರುವದೆಂದೂ ಪರಮಾತ್ಮಸ್ವರೂಪವನ್ನು ಅತದ್ಧರ್ಮನಿವೃತ್ತಿಯ ಕ್ರಮದಿಂದ-ಅದರದ್ದಲ್ಲದ ಧರ್ಮವನ್ನೆಲ್ಲ ಬಾಧಿಸಿ ತಿಳಿಸುವ ರೀತಿಯಿಂದ - ಅನುಭವಿಸಿಯಾದ ಗುರುವು ಬೋಧಿಸುವದೇ ಆಗಮವು ಅಂಥ ಗುರುಬೋಧೆಯಿಂದ ಆಸ್ತಿಕನಾಗಿಯೂ ಶ್ರವಣಗ್ರಹಣಮನನಗಳಲ್ಲಿ ಚತುರನಾಗಿಯೂ ಇರುವ ಶಿಷ್ಯನು ತತ್ತ್ವವನ್ನು ಅನುಭವದನ್ನು ಕಂಡುಕೊಳ್ಳುವದಿಲ್ಲವೆಂದು ಹೇಗೆತಾನೆ ಹೇಳಲಾದೀತು?

    ಪರಮಾತ್ಮನ ಸಾಕ್ಷಾತ್ಕರಣವೆಂದರೆ ವಾಕ್ಯಜ್ಞಾನವಾದ ಬಳಿಕ ಜ್ಞಾನಾಭ್ಯಾಸವನ್ನು ಮಾಡಿ ನೇರಾದ ಅನುಭವಗಳನ್ನು ಹೊಂದುವದು ಎಂದು ಪ್ರಸಂಖ್ಯಾನವಾದಿಗಳಾದ ವೇದಾಂತಿಗಳು ಹೇಳುತ್ತಿದ್ದರು. ಇದು ಸರಿಯಲ್ಲ ಏಕೆಂದರೆ ವಾಕ್ಯಕ್ಕೆ ಪರೋಕ್ಷವಸ್ತುವನ್ನು ಪರೋಕ್ಷವಾಗಿಯೂ ಅಪರೋಕ್ಷವಾಗಿರುವದನ್ನು ಅಪರೋಕ್ಷವಾಗಿಯೂ ತಿಳಿಯಿಸಿಕೊಡುವ ಶಕ್ತಿಯಿದೆ. 'ಆ ನಗರದಲ್ಲಿ ದಾನವೀರನಾದ ಒಬ್ಬ ಸಾಹುಕಾರನಿದ್ದಾನೆ' ಎಂಬ ವಾಕ್ಯವು ವ್ಯವಹಿತವಾದ ವಸ್ತುವನ್ನು ದೂರದಲ್ಲಿದ್ದು ಕಾಲಾನುಕಾಲಕ್ಕೆ ನೋಡಬಹುದಾದ ಸಾಹುಕಾರನನ್ನು ತಿಳಿಸುವದರಿಂದ ಈ ವಾಕ್ಯದ ಜ್ಞಾನವಾದಮೇಲೂ ಜ್ಞೇಯವಸ್ತುವನ್ನು ಸಾಕ್ಷಾತ್ಕರಿಸಿಕೊಳ್ಳುವದಕ್ಕೆ ಪ್ರಯತ್ನಿಸತಕ್ಕದ್ದಿರುತ್ತದೆ ಆದರೆ ಅಪರೋಕ್ಷವಾಗಿರುವ ವಸ್ತುವಿನ ವಿಷಯದಲ್ಲಿ ಈ ಪ್ರಯತ್ನವು ಬೇಕಿಲ್ಲ ಹತ್ತು ಜನ ಮಂಕರಲ್ಲಿ ಪ್ರತಿಯೊಬ್ಬನೂ ಮಿಕ್ಕವರನ್ನು ಎಣಿಸಿ ತನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಇದ್ದದ್ದರಿಂದ ನಮ್ಮಲ್ಲಿ ಹತ್ತನೆಯವನೊಬ್ಬನು ಇಲ್ಲವಾಗಿರುತ್ತಾನೆ ಎಂಬ ತಿಳಿವಾಗಿತ್ತಂತೆ: ಆ ಸಂದರ್ಭದಲ್ಲಿ ದಾರಿಹೋಕನು 'ನೀನೆ ಹತ್ತನೆಯವನು' ಎಂದು ಬೋಧಿಸಲು ಶ್ರೋತೃವಾದವನಿಗೆ ಹತ್ತನೆಯವನ ಸಾಕ್ಷಾತ್ಕಾರವಾಯಿತು, ಅದಕ್ಕಾಗಿ ಅವನು ಮತ್ತೆ ಪ್ರಯತ್ನಿಸಬೇಕಾದದ್ದು ಉಳಿಯಲಿಲ್ಲ ಇದರಂತೆ ಜ್ಞೇಯವಾದ ದೇಹಾದಿಗಳನ್ನೇ ತಾನೆಂದು ತಿಳಿದುಕೊಂಡು ದುಃಖಿಸುತ್ತಿರುವ ಜೀವನಿಗೆ 'ದೇಹಾದಿಗಳನ್ನೆಲ್ಲ ನೋಡುತ್ತಿರುವ ಸರ್ವಸಾಕ್ಷಿಯಾದ ಔಪನಿಷದಪುರುಷನೇ ನೀನು' ಎಂದು ಗುರುವು ಬೋಧಿಸಿದರೆ ಶಿಷ್ಯನು ಸಾಕ್ಷಾದಪರೋಕ್ಷಾದ್ಬ್ರಹ್ಮವೇ ಆಗಿರುವದರಿಂದ ತನ್ನ ಪರಮಾತ್ಮನು ತನಗಿಂತ ಬೇರೆಯಾಗಿ ಯಾವ ದೇಶಕಾಲವಸ್ತುಗಳ ವ್ಯವಧಾನವೂ ಇಲ್ಲದವನಾಗಿರುವದರಿಂದ- ಅವನಿಗೆ 'ನಾನೇ ಆ ನಿತ್ಯಶುದ್ಧಬುದ್ಧಮುಕ್ತನಾದ ಪರಮಾತ್ಮನು' ಎಂಬ ಅನುಭವವಾಗಿಬಿಡುವದು, ನಾನು ಸಂಸಾರಿ ಎಂಬ ಅಜ್ಞಾನದ ಮೋಹವು ತೊಲಗಿಬಿಡುವದು ಅದರ ಮೇಲೆ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುವದಕ್ಕೆ ಪ್ರಯತ್ನವನ್ನು ಮಾಡಬೇಕಾದದ್ದೇನೂ ಇರುವದಿಲ್ಲ.

    ಈ ಜ್ಞಾನವು ನಿಷ್ಠಲವೆಂದು ತಿಳಿಯುವಹಾಗಿಲ್ಲ ಏಕೆಂದರೆ 'ಜನ್ಮಮರಣ ಜರಾದುಃಖರಹಿತನಾದ ಪರಮಾತ್ಮನೇ ನಾನು' ಎಂಬ ಅರಿವು ಯಾವನಿಗೆ ಯಾವಾಗ ಆಗುವದೋ ಅವನಿಗೆ ಆಗಿನಿಂದಲೇ ಜನ್ಮಮರಣಾದಿಲಕ್ಷಣವಾದ ಸಂಸಾರದ ದುಃಖವು ಅಜ್ಞಾನನಿವೃತ್ತಿಮಾತ್ರದಿಂದಲೇ ತೊಲಗಿಹೋಗುತ್ತದೆ ಇನ್ನು ಮಂದೆ ಅವನು ಈ ಸಂಸಾರಸಾಗರಕ್ಕೆ ಮತ್ತೆ ಬಂದು ಬೀಳುವದಿಲ್ಲ ಅಥವಾ ಬೀಳುವದಿಲ್ಲವೆಂದೇಕೆ ಹೇಳೋಣ? 'ನಾನು ಹಿಂದೆಯೂ ಸಂಸಾರಿಯಾಗಿರಲಿಲ್ಲ, ಈಗಲೂ ಸಂಸಾರಿಯಲ್ಲ, ಮುಂದೆಯೂ ಸಂಸಾರಿಯಾಗಿರುವ ಸಂಭವವಿಲ್ಲ. ಏಕೆಂದರೆ ಸಚ್ಚಿದಾನಂದ ಸ್ವರೂಪನಾದ ಆದ್ವಿತೀಯಬ್ರಹ್ಮವೇ ನಾನು' ಎಂಬ ಪರಮಾನಂದದಾಯಕವಾದ ಪ್ರತಿಬೋಧವು ಅವನಿಗೆ ಆಗಿಬಿಟ್ಟಿರುತ್ತದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ