ಪ್ರಥಮೋ ದೈವ್ಯೋ ಭಿಷಕ್

ಹಿಂದಿನ ನಾಲ್ಕು ಮಂತ್ರಗಳಲ್ಲಿ ಇಷ್ಟಪ್ರಾಪ್ತಿ, ಅನಿಷ್ಟಪರಿಹಾರಗಳನ್ನು ಪ್ರಾರ್ಥಿಸಿದ ಅನಂತರ ಇಲ್ಲಿ ಅವೆರಡನ್ನೂ ಒಟ್ಟಿಗೆ ಪ್ರಾರ್ಥಿಸಿದೆ.

ಶಿವೇನ ವಚಸಾ ತ್ವಾ ಗಿರಿಶಾಚ್ಛಾ ವದಾಮಸಿ |
ಯಥಾ ನಸ್ಸರ್ವಮಿಜ್ಜಗದಯಕ್ಷ್ಮಗ್ಂ ಸುಮನಾ ಅಸತ್ ||5||

    'ಎಲೈ ಗಿರಿಶನೆ, ನಿನ್ನನ್ನು ಮಂಗಳಕರವಾದ ಮಾತಿನಿಂದ ನಿರ್ಮಲವಾಗಿ ಸ್ತೋತ್ರಮಾಡುವೆವು. ಆ ಯಾವ ಸ್ತುತಿಯಿಂದ ನಮ್ಮ ಸಂಬಂಧವುಳ್ಳ ಪಶುಪುತ್ರಾದಿರೂಪವಾದ ಜಗತ್ತೆಲ್ಲವೂ ರೋಗರಹಿತವೂ ಸೌಮನಸ್ಯವುಳ್ಳದ್ದೂ ಆಗುವದೋ ಹಾಗೆ ಸ್ತುತಿಸುವೆವು.'

    ಇಲ್ಲಿ ಗಿರಿಶನೆಂದು ಭಗವಂತನನ್ನು ಸಂಭೋಧಿಸಿರುವದು ಅರ್ಥವತ್ತಾಗಿದೆ. ಗಿರಿ ಎಂದರೆ ಬೆಟ್ಟವೆಂದರ್ಥ. ಬೆಟ್ಟದಂತಿರುವ ವೇದಗಳಲ್ಲಿ ಶೇತೇ- ಇದ್ದುಕೊಂಡಿರುತ್ತಾನಾದ್ದರಿಂದ ಗಿರಿಶನು ಪರಮೇಶ್ವರನು. ಹಿಂದೆ ಭರದ್ವಾಜನೆಂಬ ಒಬ್ಬ ಬ್ರಾಹ್ಮಣನು ಇಡಿಯ ವೇದರಾಶಿಯನ್ನೆಲ್ಲ ಅಧ್ಯಯನ ಮಾಡಿ ಪೂರೈಸಬೇಕೆಂದು ಹಟತೊಟ್ಟವನಾಗಿ ಇಡಿಯ ಜೀವನವೆಲ್ಲ ವೇದಾಧ್ಯಯನಮಾಡಿ ಕೊನೆಗೆ ಮುದುಕನಾಗಿಬಿಟ್ಟನು. ಆಗ ದೇವೇಂದ್ರನು ಬಂದು ಮೂರಿ ಬಾರಿ ಮತ್ತೆಮತ್ತೆ ಒಂದುನೂರು ವರ್ಷಗಳಂತೆ ಆಯುಸ್ಸನ್ನು ಆತನಿಗೆ ಅನುಗ್ರಹಿಸಿದನು. ಹೀಗೆ ನಾಲ್ಕುನೂರು ವರ್ಷಗಳ ಅಧ್ಯಯನವು ಪೂರೈಸಿದ ಮೇಲೂ ಭರದ್ವಾಜನು ಹಟವನ್ನು ಬಿಡದಿರಲು ಇಂದ್ರನು ಅವನನ್ನು ಕರೆದುಕೊಂಡು ಹೋಗಿ ಮೂರಿ ಬೆಟ್ಟಗಳನ್ನು ತೋರಿಸಿ 'ಎಲಾ ಭರದ್ವಾಜ, ಇವೇ ವೇದಗಳು; ಈವರೆಗೆ ನೀನು ಓದಿರುವದು ಇಷ್ಟು!' ಎಂದು ಹೇಳಿ ಮೂರಿ ಬೆಟ್ಟಗಳಿಂದಲೂ ಒಂದೊಂದು ಮುಷ್ಟಿಯಷ್ಟು ಮಣ್ಣನ್ನು ತೆಗೆದು ಭರದ್ವಾಜನ ಜೋಳಿಗೆಗೆ ಹಾಕಿದನು. ಆಗ ಭರದ್ವಾಜನಿಗೆ ವೇದಗಳ ಅನಂತತೆಯು ತಿಳಿಯಿತು. ಹೀಗೆ 'ವೇದಗಳು ಅನಂತವಾಗಿವೆ' ಎಂದು ತೈತ್ತಿರೀಯಬ್ರಾಹ್ಮಣದ ವೇದಭಾಗದಲ್ಲಿ ಒಂದು ಕಥೆಯಿದೆ. ಅದರಂತೆ ಬೆಟ್ಟಗಳಂತಿರುವ ವೇದಗಳಲ್ಲಿ ಅಡಗಿರುವ ಪರಮೇಶ್ವರನೇ ಗಿರಿಶನು. ಅವನನ್ನು ನಮ್ಮ ಪರಿಶುದ್ಧವಾದ ವಾಕ್ಕುಗಳಿಂದ ಸ್ತುತಿಸಬೇಕು. ನಮ್ಮ ವಾಕ್ಕುಗಳು ಪರಿಶುದ್ಧವಾಗಬೇಕಾದರೂ ಪರಮೇಶ್ವರನ ಸಂಬಂಧವು ಬೇಕೇ ಬೇಕು. ಎಂಥ ಚರಂಡಿಯ ನೀರಾದರೂ ಗಂಗಾಪ್ರವಾಹದಲ್ಲಿ ಸೇರಿದಕೂಡಲೇ ಪವಿತ್ರವಾಗಿಬಿಡುವಂತೆ ನಮ್ಮ ಲೌಕಿಕವಾದ ವಾಕ್ಕು ಕೂಡ ಪರಮೇಶ್ವರನನ್ನು ಸ್ತುತಿಸಲಾರಂಭಿಸಿದರೆ ಪವಿತ್ರವಾಗುವದು. ಹೀಗೆ ಸ್ತೋತ್ರಮಾಡುವದರಿಂದ ಆ ಭಗವಂತನು ಸುಪ್ರೀತನಾಗಿ ನಮ್ಮ ಹಾಗೂ ನಮ್ಮ ಸುತ್ತುವಳೆಯದ ಎಲ್ಲಾ ಪ್ರಾಣಿಗಳನ್ನೂ ಜಗತ್ತನ್ನೂ ರೋಗವಿಲ್ಲದ್ದನ್ನಾಗಿಯೂ ಸುಖಕರವಾಗಿಯೂ ಮಾಡುತ್ತಾನೆ. ಅದಕ್ಕಾಗಿಯೇ ಸ್ತುತಿಯು ಅವಶ್ಯವು ಎಂದಭಿಪ್ರಾಯ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ