ನಮಸ್ತೇ ರುದ್ರ 4

ಈಗ ನಾಲ್ಕನೆಯ ಮಂತ್ರವನ್ನು ವಿಚಾರಮಾಡೋಣ :

ಯಾಮಿಷುಂ ಗಿರಿಶಂತ ಹಸ್ತೇ ಬಿಭರ್ಷ್ಯಸ್ತವೇ |
ಶಿವಾಂ ಗಿರಿಶ್ರ ತಾಂ ಕುರು ಮಾ ಹಿಗ್ಂಸೀಃ ಪುರುಷಂ ಜಗತ್ ||4||

    'ಎಲೈ ಗಿರಿಶಂತನೆ, ಪಾಪಿಗಳ ಕಡೆಗೆ ಎಸೆಯುವದಕ್ಕಾಗಿ ಯಾವ ಬಾಣವನ್ನು ನೀನು ಕೈಯಲ್ಲಿ ಧರಿಸಿರುವೆಯೋ ಅದನ್ನು ಶಿವವಾಗಿ ಮಾಡು. ಜಗತ್ತನ್ನೂ ನಮ್ಮ ಪುತ್ರಪೌತ್ರಾದಿಕುಟುಂಬವರ್ಗವನ್ನೂ ಗೋಧನಗೃಹಾದಿಗಳನ್ನೂ ಹಿಂಸಿಸಬೇಡ.'

    ಈ ಮಂತ್ರದಲ್ಲಿ ಭಕ್ತನು ಅನಿಷ್ಟವನ್ನು ಪರಿಹರಮಾಡುವಂತೆ ಪರಮೇಶ್ವರನನ್ನು ಪ್ರಾರ್ಥಿಸಿರುತ್ತಾನೆ. ಇಲ್ಲಿ ಗಿರಿಶಂತನೆಂದರೆ ಕೈಲಾಸವೆಂಬ ಪರ್ವತದಲ್ಲಿದ್ದುಕೊಂಡು ಲೋಕಕ್ಕೆಲ್ಲ ಸುಖವನ್ನುಂಟುಮಾಡುವವನು - ಎಂದರ್ಥ. ಕೆಟ್ಟಕರ್ಮಗಳನ್ನು ಮಾಡಿದವನಿಗೂ ಪರಮೇಶ್‌ವರನು ಒಳ್ಳೆಯದನ್ನು ಹೇಗೆ ಮಾಡಿಯಾನು ? ಎಂದು ಶಂಕಿಸಬಾರದು. ಆತನನ್ನು ಮೊರೆಹೋಗುವವರೆಗೆ ಮಾತ್ರವೇ ನಮ್ಮ ದುಷ್ಕರ್ಮಗಳು ನರಕಾದಿಫಲದಾಯಕಗಳಾಗಿರುವವು. ಆದರೆ ಆತನ ಕಡೆಗೆ ನಾವು ತಿರುಗಿ ಶರಣಾಗತರಾದರೆ ಸಾಕು - ಇನ್ನು ನರಕಾದಿಗಳ ಹೆದರಿಕೆಯಿರಲಾರದು. ಆದ್ದರಿಂದ ಇಲ್ಲಿ ಭಕ್ತನು "ಎಲೈ ಪರಮೇಶ್ವರನೆ, ಈ ಮೊದಲು ಪಾಪಿಯಾದ ನನ್ನ ಮೇಲೆ ಎಸೆಯಲು ಯಾವ ಬಾಣವನ್ನು ನೀನು ಧರಿಸಿದ್ದೆಯೋ ಅದು ಅವಶ್ಯವಿಲ್ಲ. ಏಕೆಂದರೆ ಈಗ ನಾನು ನಿನಗೆ ಭಕ್ತನಾಗಿರುತ್ತೇನೆ. ಆದ್ದರಿಂದ ಎಲೈ ಗಿರಿತ್ರ, ಅದನ್ನು ಶಿವವಾಗಿ ಮಾಡು" - ಎಂದು ಕೇಳಿಕೊಂಡಿರುತ್ತಾನೆ. ಇಲ್ಲಿ ಗಿರಿತ್ರನೆಂದರೆ ಹಿಂದೆ ತಿಳಿಸಿದಂತೆಯೇ ವಾಕ್ಕಿನಲ್ಲಿದ್ದುಕೊಂಡು, ತ್ರಾಯತೇ - ಕಾಪಾಡುತ್ತಾನೆ - ಎಂದಭಿಪ್ರಾಯ.
    ಇಲ್ಲಿ ಭಕ್ತನು ಇನ್ನೊಂದು ಹೆಚ್ಚಿನ ಪ್ರಾರ್ಥನೆಯನ್ನೂ ಭಗವಂತನಿಗೆ ಸಲ್ಲಿಸುತ್ತಿದಾನೆ. ಏನೆಂದರೆ : ತನ್ನನ್ನು ಮಾತ್ರವೇ ಅಲ್ಲದೆ ತನ್ನ ಪುತ್ರಪೌತ್ರಬಂಧು ಮಿತ್ರಾದಿವರ್ಗದವರನ್ನೂ ಗವಾದಿಸಂಪತ್ತನ್ನೂ ಹಿಂಸೆಮಾಡದೆ ಕಾಪಾಡ ಬೇಕೆಂದು ಕೇಳಿಕೊಂಡಿರುತ್ತಾನೆ. ಇದೂ ಅವಶ್ಯಕವೆಂದು ಹೇಳಬಹುದು. ಏಕೆಂದರೆ ನಾವು ಸುಖವಾಗಿರಬೇಕಾದರೆ ನಮ್ಮವರೂ, ನಮ್ಮ ಸಂಪತ್ತೂ, ಸುತ್ತವಳೆಯವೂ ಎಲ್ಲವೂ ಸುಖವಾಗಿರಬೇಕಾದದ್ದು ಅಗತ್ಯ. ನಮ್ಮ ಗುಂಪಿನಲ್ಲಯೇ ಯಾರುಯಾರು ಪರಮೇಶ್ವರನಿಗೆ ಏನೇನು ಅಪರಾಧಗಳನ್ನೂ ಮಾಡುತ್ತಿರುವರೋ ತಿಳಿಯುವದಿಲ್ಲ. ಹಾಗೆ ಅಪರಾಧಮಾಡಿದವರೆಲ್ಲರೂ ಪರಮೇಶ್ವರನಿಗೆ ತಮ್ಮ ತಪ್ಪನ್ನು ಕ್ಷಮಿಸುವಂತೆ ಬೇಡಿಕೊಳ್ಳುತ್ತಾರೆಂದೂ ನಂಬಲಾಗುವದಿಲ್ಲ. ಆದ್ದರಿಂದ ಎಲ್ಲರ ಪರವಾಗಿ ನಾವೇ ಈಶ್ವರನಲ್ಲಿ ಬೇಡಿ ಕೊಳ್ಳುವದೇ ಒಳ್ಳೆಯದಲ್ಲವೆ ? ದೇವತಾರ್ಚನೆಯ ಕೊನೆಯಲ್ಲಿ "ನನ್ನಿಂದಲಾಗಲಿ, ನನ್ನ ಸಹೋದರರುಗಳಿಂದಲಾಗಲಿ, ನನ್ನ ಬಂಧುಗಳಿಂದಲಾಗಲಿ ಮಾಡಲ್ಪಟ್ಟಿರಬಹುದಾದ ನೂರು ಅಪರಾಧಗಳನ್ನಾದರೂ ಎಲೈ ಪುರುಷೋತ್ತಮನೆ, ಕ್ಷಮಿಸಿ" ಎಂಬರ್ಥದ ಶ್ಲೋಕವೊಂದನ್ನು ವೈಖಾನಸರು ಪಠಿಸುತ್ತಾರೆ. ಹಾಗೆಯೇ ಇಲ್ಲಿಯೂ 'ಮಾ ಹಿಗ್ಂಸೀಃ ಪುರುಷಂ ಜಗತ್' ಎಂಬುದಾಗು ಎಲ್ಲರ ಪರವಾಗಿಯೂ ಭಗವಂತನಿಗೆ ಪ್ರಾರ್ಥನೆಯು ಸಲ್ಲಿಸಲ್ಪಟ್ಟಿದೆ. ವಾಚಕರೆ, ಇಂಥ ವೈದಿಕಪ್ರಾರ್ಥನೆಗಳು ಹೇಗೆ ಜಗತ್ಕಲ್ಯಾಣಕಾರಕವಾಗಿವೆಯೆಂಬುದನ್ನು ಇದರಿಂದ ತಿಳಿಯಿರಿ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ