ನಮಸ್ತೇ ರುದ್ರ 3

ಯಾ ತೇ ರುದ್ರ ಶಿವಾ ತನೂರಘೋರಾsಪಾಪಕಾಶಿನೀ |
ತಯಾ ನಸ್ತನುವಾ ಶಂತಮಯಾ ಗಿರಿಶಂತಾಭಿಚಾಕಶೀಹಿ ||3||

'ಎಲೈ ರುದ್ರನೆ, ಯಾವ ನಿನ್ನ ಘೋರವಲ್ಲದ ಮಂಗಳಕರವಾದ ಶರೀರವು ಆತ್ಮಜ್ಞಾನವನ್ನುಂಟುಮಾಡತಕ್ಕದ್ದಾಗಿದೆಯೋ ಆ ಸುಖಕರವಾದ ಶರೀರದಿಂದ, ಎಲೈ ಗಿರಿಶಂತನೆ, ನಮ್ಮನ್ನು ಜ್ಞಾನಯುಕ್ತರಾಗುವಂತೆ ಮಾಡು.'

     ಈ ಮಂತ್ರದಲ್ಲಿ 'ಜ್ಞಾನವನ್ನು ಕೊಡು' ಎಂದು ಭಗವಂತನನ್ನು ಪ್ರಾರ್ಥಿಸಿದೆ. ಭಗವಂತನಿಗೆ ಘೋರಶರೀರವೆಂದೂ ಅಘೋರಶರೀರವೆಂದೂ ಎರಡು ಬಗೆಯ ಶರೀರಗಳಿರುತ್ತವೆ. ಉಪನಿಷತ್ತಿನಲ್ಲಿ 'ಅಘೋರೇಭ್ಯೋsಥ' ಎಂಬ ಮಂತ್ರದಲ್ಲಿ ಈ ಎರಡುಬಗೆಯ ಹಾಗೂ ಉಳಿದ ಎಲ್ಲಾ ರೂಪಗಳಿಗೂ ನಮಸ್ಕಾರವೆಂದು ಸ್ತುತಿಸಿದೆ. ಪ್ರಕೃತದಲ್ಲಿ ಅಘೋರಶರೀರವನ್ನು ಕುರಿತು ಪ್ರಸ್ತಾಪಿಸಿದೆ. ಇಲ್ಲಿ ಒಂದು ಶಂಕೆ : ದಯಾಮಯನಾದ ಪರಮೇಶ್ವರನಿಗೆ ಘೋರಶರೀರವಾದರೂ ಏತಕ್ಕೆ ಬೇಕು? ಎಂದು ಅನ್ನಿಸಬಹುದು. ಆದರೆ ಜಗತ್ತಿನಲ್ಲಿರುವ ದುಷ್ಟರನ್ನು ನಿಗ್ರಹಮಾಡುವದಕ್ಕೆ ಇದು ಉಪಯೋಗಕರವಾಗಿರುತ್ತದೆ. ಹೇಗೆ ಪೋಲಿಸ್, ಮಿಲಿಟರಿ - ಮುಂತಾದವುಗಳು ನಾಗರಿಕರನ್ನು ರಕ್ಷಿಸುವದಕ್ಕೂ ಶತ್ರುಗಳನ್ನೂ ಕಳ್ಳರನ್ನೂ ದಮನಗೊಳಿಸುವದಕ್ಕೂ ಉಪಯೋಗವಾಗುವವೋ ಹಾಗೆಯೇ ಭಗವಂತನ ಘೋರರೂಪವು ಪಾಪಿಗಳನ್ನೂ ದುಷ್ಟರನ್ನೂ ಸಂಹರಿಸಲು ಬೇಕಾಗುತ್ತದೆ. ಅದನ್ನು ಬಿಟ್ಟು ಶಾಂತವಾದ ರೂಪದಿಂದ ಪರಮೇಶ್ವರನು ತನಗೆ ತೋರಿಕೊಳ್ಳುವಂತೆ ಭಕ್ತನು ಇಲ್ಲಿ ಅಪೇಕ್ಷಿಸಿರುತ್ತಾನೆ. ಮತ್ತು ಆ ರೂಪವು ಎಂಥದ್ದೆಂದರೆ ಆಪಾಪಕಾಶಿನಿಯು, ಪಾಪವಿರೋಧಿಯಾದ ಬ್ರಹ್ಮಾತ್ಮಜ್ಞಾನವನ್ನು ಪ್ರಕಾಶಗೊಳಿಸತಕ್ಕದ್ದು ; ಹಾಗೂ ಶಿವವಾದದ್ದು. ಇಂಥ ನಿರತಿಶಯಸುಖರೂಪವಾದ ಶರೀರದಿಂದ ನಮ್ಮನ್ನು ಪ್ರಬೋಧಗೊಳಿಸುವವನಾಗು - ಎಂದು ಅಭಿಪ್ರಾಯ.
     ಇಲ್ಲಿ 'ಗಿರಿಶಂತ' ಎಂದು ಒಂದನೆಯ ಬಾರಿಗೆ ಭಗವಂತನನ್ನು ಸಂಬೋಧಿಸಿದೆ. ಗಿರಿ ಎಂದರೆ (ಗಿರೌ ಎಂಬರ್ಥದಲ್ಲಿ ವೈದಿಕಪ್ರಯೋಗ) ಮಾತಿನಲ್ಲಿ ಇದ್ದುಕೊಂಡು ಲೋಕಗಳಿಗೆ ಶಂ - ಎಂದರೆ ಸುಖವನ್ನು ತ - ತನೋತಿ, ಉಂಟುಮಾಡುತ್ತಾನೆ. ಆದ್ದರಿಂದ ಗಿರಿಶಂತನು ಪರಮೇಶ್ವರನು. ಹೇಗೆಂದರೆ : ವೇದಾಂತಶಾಸ್ತ್ರದಲ್ಲಿ ಶ್ರವಣಮನನನಿದಿಧ್ಯಾಸನಾದಿಗಳು ಜ್ಞಾನಕ್ಕೆ ಸಾಕ್ಷಾತ್ ಸಾಧನಗಳೆಂದು ಹೇಳುವರು. ಸಾಮಾನ್ಯಸಾಧಕರಿಗೆ ಅವು ಯಾವವೂ ದೊರಕದಿದ್ದರೂ ಪರಮೇಶ್ವರನ ಸ್ತುತಿರೂಪವಾದ ವಾಕ್ಕಿನಲ್ಲಿ ಎಂದರೆ ಪಂಚಾಕ್ಷರೀಮಂತ್ರದಲ್ಲಿ ಸಾಕ್ಷಾತ್ ಮಹಾದೇವನೇ ಇದ್ದುಕೊಂಡಿರುವನಾದ್ದರಿಂದ ಕೇವಲ ಮಂತ್ರವನ್ನು ಜಪಮಾಡಿದರೂ ಗಿರಿಶಂತನಾದ ಆತನ ಅನುಗ್ರಹದಿಂದ ಜ್ಞಾನಪ್ರಾಪ್ತಿಯಾಗುವದು - ಎಂಬುದನ್ನು ಇಲ್ಲಿ ತಿಳಿಸಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ