ಸಾಲಿಗ್ರಾಮ

ಮನುಷ್ಯ ಮೊದಲಿಗೆ ಪ್ರಕೃತಿಯಲ್ಲಿ ಸಿದ್ದರೂಪದಲ್ಲಿ ದೊರೆತ ವಸ್ತು ವಿಷಯಗಳನ್ನೇ ದೇವರೆಂದು ತಿಳಿದು ಆರಾಧಿಸತೊಡಗಿದನೆಂಬುದನ್ನು ಎಲ್ಲ ಜನಾಂಗಗಳ ಚರಿತ್ರೆಯಲ್ಲಿಯೂ ಕಾಣಬಹುದು, ಸೂರ್ಯ, ಚಂದ್ರ, ನದಿ, ಬೆಟ್ಟ, ಮರ, ಹುಲ್ಲು ಎಲ್ಲವನ್ನೂ ಹಲವು ಹನ್ನೊಂದು ಕಾರಣಗಳಿಗಾಗಿ ಪೂಜಿಸುತ್ತ ಬಂದ ಮನುಷ್ಯ, ತಾನು ಈ ದೈವಿಕ ವಸ್ತು ವ್ಯಕ್ತ ವಿಷಯಗಳಲ್ಲಿ ವಿಶ್ವಾಸದಿಂದ, ಪ್ರೀತಿಯಿಂದ, ಭಕ್ತಿಯಿಂದ ಮಿಗಿಲಾಗಿ ಭಯದಿಂದ, ನಡೆದುಕೊಳ್ಳುತ್ತ ಬಂದಂತೆ, ದೇವರ ಹೊಸ ಹೊಸ ರೂಪಗಳನ್ನು ಹುಡುಕುತ್ತ ಸ್ವಾಮಿಯ ಅನ್ವೇಷಣೆ ನಡೆದಂತೆಲ್ಲಾ ಸ್ವಾಮಿಯ ಸ್ವರೂಪವು ಸ್ಪಷ್ಟವಾಗುತ್ತ ನಡೆಯಿತು.
    ನದಿಯನ್ನು, ನೀರನ್ನು ಪೂಜಿಸುತ್ತಿರುವಂತೆಯೇ ನೀರಿನೊಳಗೆ ಇರುವ ಶಿಲೆಯಲ್ಲಿಯೂ ದೇವರನ್ನು ಕಾಣುವ ಒಂದು ಪ್ರಯತ್ನ ಸಾಲಿಗ್ರಾಮ ಪೂಜೆಯಲ್ಲಿ ಸಾಕ್ಷಾತ್ಕಾರವಾಗಿದೆಯೆಂಬುದನ್ನು ತಿಳಿಯುವುದರಲ್ಲಿ ತೊಂದರೆಯೇನಿಲ್ಲ. ಸಾಲಿಗ್ರಾಮದಲ್ಲಿ ದೈವವನ್ನು ಕಾಣುವ ಪ್ರಯತ್ನ ಮನುಷ್ಯನ ಆದಿ ಪ್ರಯತ್ನಗಳಲ್ಲಿ ಒಂದು ಎಂಬುದನ್ನು ಅದರೊಂದಿಗೇ ಹೆಣೆದುಕೊಂಡು ಬಂದಿರುವ ತುಳಸಿಯ ಕಥೆಯಿಂದ ತಿಳಿಯಬಹುದು. ಇಂದಿನ ಮನುಷ್ಯನ ಬುದ್ಧಿಗೆ ನಿಲುಕದ - ದೇವರ ಸುಗುಣಗಳ ಸಾಲಿಗೆ ಅಪವಾದವೆನ್ನಬಹುದಾದ ಕಥೆ ತುಳಸಿಯ ಕಥೆ ಅಂದಿಗೆ ಅದು ಸಹಜವು, ಸೂಕ್ತವೂ ಆಗಿದ್ದಿರಬೇಕು. ಅದನ್ನು ಪುರಾಣ ಸಮುಚ್ಛಯದಲ್ಲಿ ಉಳಿಸಿಕೊಂಡು ಬಂದಿರುವುದರಿಂದ ಬೆಳವಣಿಗೆಯ ಹಂತಗಳಲ್ಲಿ ಒಂದನ್ನು ಗುರುತಿಸಿದಂತೆ ಆಗುತ್ತದೆಯಷ್ಟೆ.
    ಭಾರತೀಯರ ಮನೆಯಂಗಳದಲ್ಲಿ ಪವಿತ್ರವಾದ ತುಳಸಿಯನ್ನು ಬೆಳೆಸಿ ಪೂಜಿಸುವ 'ತರು ಪೂಜೆ' ಪದ್ದತಿಯಿದ್ದರೆ, ಹಲವು ಸಂಪ್ರದಾಯ ನಿಷ್ಠರ ಮನೆಗಳಲ್ಲಿ ಸಾಲಿಗ್ರಾಮ ಸಂಪುಟವನ್ನು ಇಟ್ಟುಕೊಂಡು ಅದರ ನಿತ್ಯಪೂಜೆ ನಡೆಯುವುದನ್ನು ಕಾಣಬಹುದು ಪಡೆದ ಕವಚವನ್ನು ವಿಷ್ಣುವು ತನ್ನ ಮಾಯೆಯಿಂದ ಕಸಿದುಕೊಂಡನು. ಜೊತೆಗೇ ಅವನಿಗೆ ವಜ್ರಕವಚವಾಗಿದ್ದ ತುಳಸಿಯ ಪಾತಿವ್ರತ್ಯವನ್ನು ಹಾಳು ಮಾಡಿದ ಶಖಚೂಡನ ವೇಷದಲ್ಲಿ ಬಂದವನು ತನ್ನ ಪುರುಷನಲ್ಲವೆಂದು ತಿಳಿದ ತುಳಸಿ ವಿಷ್ಣುವನ್ನು ಕಲ್ಲಾಗಲು ಶಪಿಸಿದಳು. ತನ್ನ ಪಾವಿತ್ರ್ಯ ನಾಶವಾದದ್ದರಿಂದ ಗಂಡಕೀನದಿಯಲ್ಲಿ ಆತ್ಮಾರ್ಪಣ ಮಾಡಿದಳು. ಅವಳು ಗಂಡಕೀನದಿಯ ನೀರಾಗಿ ಹರಿದಳು ಶಾಪಗ್ರಸ್ತನಾದ ವಿಷ್ಣು ಗಂಡಕೀನದಿಯಲ್ಲಿ ಶಿಲಾರೂಪವಾಗಿ ನಿಂತ.
    ನಿಸರ್ಗವು ಅನೇಕ ಚಮತ್ಕಾರಗಳನ್ನು ನಮಗೆ ನೀಡಿದೆ. ಇವುಗಳಲ್ಲಿ ಉನ್ನತವಾದ ಪರ್ವತಗಳಿವೆ, ಆಳವಾದ ಸಮುದ್ರಗಳಿವೆ, ಹರಿಯುವ ನೀರಿದೆ, ಬೀಸುವ ಗಾಳಿಯಿದೆ, ಹಾಗೆಯೇ ಸಾಲಿಗ್ರಾಮ ಶಿಲೆಗಳಿವೆ. ಗಂಡಕೀ ನದಿ ಭಾರತದ ಉತ್ತರದಲ್ಲಿನ ನೇಪಾಳದಲ್ಲಿ ಹರಿಯುವ ನದಿ. ಇಲ್ಲಿನ ನೀರಿನ ಕಲ್ಲುಗಳನ್ನು ಸಾಲಿಗ್ರಾಮಗಳೆನ್ನುವರು. ಸಾಲಿಗ್ರಾಮಗಳ ಉತ್ಪತ್ತಸ್ಥಾನವಾದ ಈ ನದಿಯೇ ಸಾಲಿಗ್ರಾಮದ ತವರು ಎಂದು ಹೇಳಬಹುದು. ಇಲ್ಲಿ ನದಿಯ ದಂಡೆಯಲ್ಲಿ ಒಂದು ರೀತಿಯ ಕೀಟ ಕೊರೆಯುವುದರಿಂದ ಶಿಲೆಗಳಲ್ಲಿ ರೇಖಾಚಿತ್ರಗಳುಂಟಾಗಿ ಅವುಗಳಲ್ಲಿ ಹತ್ತು ಹಲವು ದೈವದ ಕೀಟ ಕೊರೆಯುವುದರಿಂದ ಶಿಲೆಗಳಲ್ಲಿ ರೇಖಾಚಿತ್ರಗಳುಂಟಾಗಿ ಅವುಗಳಲ್ಲಿ ಹತ್ತು ಹಲವು ದೈವದ ರೂಪಗಳನ್ನು ಕಂಡುಕೊಂಡು ಗೌರವಾದರಗಳಿಂದ ಅವುಗಳನ್ನು ಹುಡುಕಿ ತಮಗೆ ಬೇಕಾದ ಮೂರ್ತಿಯ ಸಾಲಿಗ್ರಾಮಗಳನ್ನು ಜೋಪಾನವಾಗಿ ಮನೆಗೆ ತಂದು ಸಂಪುಟದಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಸುಮಾರು ರೀತಿಯ ಚಕ್ರಗಳಿಂದಾದ ಸಾಲಿಗ್ರಾಮಗಳನ್ನು ಗುರುತಿಸಲಾಗಿದೆಯಾದರೂ ಎಲ್ಲವನ್ನೂ ವಿಷ್ಣುವಿನ ವಿವಿಧ ಹೆಸರುಗಳಲ್ಲಿಯೇ ಗುರುತಿಸಲಾಗಿದೆಯೆಂದು ಗಮನಿಸಬೇಕು.
    ಸಾಲಿಗ್ರಾಮಗಳಲ್ಲಿ ಎರಡು ವಿಧ. ಒಂದು ಸಣ್ಣ ಸಣ್ಣ ರೂಪದಲ್ಲಿ ಪೂಜೆಗೆ ದೊರೆಯುವುದು, ಮತ್ತೊಂದು ಭಾರೀ ಭಾರೀ ಗಾತ್ರದಲ್ಲಿದ್ದು ಪೂಜೆಗೆ ಒದಗುವುದು ಇಂತಹ ದೊಡ್ಡ ದೊಡ್ಡ ಶಿಲೆಗಳನ್ನು ತಂದು ದೇವತಾ ಮೂರ್ತಿಗಳನ್ನು ಕಡೆಯಲಾಗುತ್ತದೆ. ಇದರಲ್ಲಿ ಹರಿಯು ಸರ್ವದಾಸನ್ನಿಹಿತನಾಗಿರುತ್ತಾನೆ.

ಸಾಲಗ್ರಾಮ ಶಿಲಾ ಯತ್ರ ತತ್ರ ಸನ್ನಿಹಿತೋ ಹರಿಃ |
ತತ್ರೈವ ಲಕ್ಷ್ಮೀರ್ವಸತಿ ಸರ್ವತೀರ್ಥ ಸಮನ್ವಿತಾ ||

    ಎಲ್ಲಿ ಸಾಲಿಗ್ರಾಮ ಶಿಲೆಯಿರುವುದೋ ಅಲ್ಲಿ ಹರಿಯು ಸನ್ನಿಹಿತನಾಗಿರುತ್ತಾನೆ. ಅಲ್ಲಿಯೇ ಲಕ್ಷ್ಮಿಯು ಸರ್ವತೀರ್ಥ ಸಮನ್ವಿತಳಾಗಿ ವಾಸ ಮಾಡುತ್ತಾಳೆ. ಇಂತಹ ಸಾಲಿಗ್ರಾಮದ ಪೂಜೆ ಮಾಡಿ ದಿನವೂ ತೀರ್ಥವನ್ನು ಸ್ವೀಕರಿಸುವ ಆಚಾರ ನಮ್ಮಗಳಲ್ಲಿದೆ.
    ಭಕ್ತಿಯನ್ನು ನವವಿಧವೆಂದು ಬಣ್ಣಿಸಲಾಗಿದೆ. ವಿಷ್ಣುವಿನ ಕಥೆಯನ್ನು ಕೇಳುವಿಕೆ, ಅವನನ್ನು ಸ್ತುತಿಸುವಿಕೆ, ಅವನನ್ನು ನೆನೆಯುವಿಕೆ, ಅವನ ಪಾದಗಳ ಸೇವೆ, ಅವನ ಅರ್ಚನೆ ಅವನಿಗೆ ನಮನ ಮಾಡುವಿಕೆ ಅವನ ಊಳಿಗ ಮಾಡುವಿಕೆ ಅವನ ಸ್ನೇಹವನ್ನು ಬಯಸುವಿಕೆ ಅವನಲ್ಲಿ ಆತ್ಮಸಮರ್ಪಣೆ ಮಾಡುವುದು. ಈ ರೀತಿಯ ಭಕ್ತಿಯ ಅಭಿವ್ಯಕ್ತಿ ಮಾರ್ಗಗಳಲ್ಲಿ ಅರ್ಚನಾ ಪದ್ದತಿಗೆ ಪ್ರಾಮುಖ್ಯ ಹೆಚ್ಚು. ಭಾರತೀಯರ ಧರ್ಮಶ್ರದ್ಧೆಯಲ್ಲಿ ಕಂಡುಬರುವ ಮಹತ್ವವನ್ನು ಪೂಜಾದಿ ಕಾರ್ಯಕ್ರಮಗಳಲ್ಲಿ ನಾವಿಂದು ಕಾಣಬಹುದಾಗಿದೆ. ಭಗವಂತನ ಪೂಜೆಯನ್ನು ಬರಿಯ ನೆಲದ ಮೇಲೆ ಮಾಡಲಾಗದು. ಅದಕ್ಕಾಗಿಯೇ ಸಾಲಿಗ್ರಾಮವನ್ನು ಆರಿಸಿಕೊಂಡಿರಬಹುದು. 'ಶಾಲಗ್ರಾಮೇ ಮಣೌ ಯಂತ್ರೇ ತಂಡುಲೇ ಪ್ರತಿಮಾದಿಷು' ಎಂಬಲ್ಲಿ ಬರಿಯ ನೆಲದ ಮೇಲೆ ಇಟ್ಟು ಪೂಜೆ ಮಾಡಬಾರದೆಂದಿದೆ.
    ಸಾಲಿಗ್ರಾಮಗಳ ರೂಪಗಾತ್ರಗಳು ಸಹ ಪರಿಶೀಲನಾರ್ಹವಾಗಿವೆ. ಸಾಮಾನ್ಯವಾಗಿ ನಿಂಬೆ ಹಣ್ಣಿನ ಗಾತ್ರದಿಂದ ಹಿಡಿದು ಬೇಲದ ಹಣ್ಣಿನ ಗಾತ್ರದವರೆಗಿನ ಸಾಲಿಗ್ರಾಮಗಳು ಮನೆ ಮಠಗಳಲ್ಲಿ ಯಥಾವತ್ ಪೂಜಾರ್ಹವಾದವು. ಇನ್ನು ದೊಡ್ಡವು ಇರಬಹುದಾದರೂ ಅವುಗಳು ಮೂಲರೂಪದಲ್ಲಿ ಅಷ್ಟೊಂದು ಶ್ರೇಷ್ಠವಲ್ಲ ಸಾಲಿಗ್ರಾಮದಲ್ಲಿ ಆದರ ಬಾಯಿ, ಮುಖ, ವದನ ಎನ್ನಿಸಿಕೊಳ್ಳುವ ಭಾಗ ಮುಖ್ಯವಾದದ್ದು, ಇದನ್ನು ಡೊಗರು ಎನ್ನಲಾಗಿದೆ ನದಿಯಿಂದ ಶಿಲೆಯನ್ನು ಕೈಗೆತ್ತಿಕೊಂಡು ಕೈಯಿಂದಲಾಗಲೀ ಸಣ್ಣ ಬಡಿಗೆಯಿಂದಲಾಗಲೀ ಬಡಿದರೆ ಪುಡಿಯು ಶಿಲಾರಜವು ಕೆಳಗುರುಳಿ ಡೊಗರು ಕಾಣಿಸಿಕೊಳ್ಳುತ್ತದೆ.
    ಸಾಲಿಗ್ರಾಮದಲ್ಲಿನ ಸುರುಳಿಗಳು ಒಂದರಿಂದ ಹನ್ನೆರಡರವರೆಗೆ ಕೋಶದಂತೆ ಇರುತ್ತದೆ ಅಥವಾ ಇವು ಉದ್ದವಾಗಿ ಕೇಸರಾಕಾರವಾಗಿಯೂ ಇರಬಹುದು ಇದರ ಮೂರ್ತಿ ಎಂದರೆ ಆಕಾರವು ವಿಶಿಷ್ಟ ಆಗಿರುತ್ತದೆ ಗಾತ್ರ (ಸ್ಥೂಲ ಅಥವಾ ಸೂಕ್ಷ್ಮ) ಪರಿಮಾಣ, ಪ್ರಮಾಣ, ಆಸನ ಮುದ್ರೆ ಮೊದಲಾದ ವಿವರಗಳೂ ಗಮನಾರ್ಹವಾದವು ಸಾಲಿಗ್ರಾಮಗಳ ಪರೀಕ್ಷೆ ಸಹ ಕಷ್ಟಕರವಾದುದೆಂದು ಹೇಳಲಾಗಿದೆ.
    ಸಾಲಿಗ್ರಾಮಗಳಲ್ಲಿ ಹಲವು ಬಗೆಗಳುಂಟು ವಿಷ್ಣುವಿನ ಅವತಾರ ಮೂರ್ತಿಗಳು ವ್ಯೂಹ ಮೂರ್ತಿಗಳು ಇವುಗಳನ್ನಾಧರಿಸಿದಂತೆ ವೈವಿಧ್ಯಗಳುಂಟು. 'ಹಿರಣ್ಯ ವಜ್ರಕೀಟೇನ ನಿರ್ಮಿತಂ ಚಕ್ರಮತ್ತಮಂ' ಎಂದು ಹೇಳಲಾಗುತ್ತದೆ. 'ಪೀಠ ಪದ್ಮಾದಿ ಭೇದೇನ ಚಕ್ರಂ ಬಹುವಿಧಂ ಸ್ಮೃತಂ' ಎಂದೂ ಹೇಳಲಾಗಿದೆ. ಹಾಲಿನಲ್ಲಿಯಾಗಲೀ, ಅಕ್ಕಿಯಲ್ಲಿಯಾಗಲೀ ಸಾಲಿಗ್ರಾಮವನ್ನು ಇರಿಸಿದರೆ ಅದು ಸರಿಯಾದ ಸಾಲಿಗ್ರಾಮವಾಗಿದ್ದಲ್ಲಿ ತುಸು ಸಮಯದ ನಂತರ ಅವುಗಳ ಪ್ರಮಾಣದಲ್ಲಿ ಸ್ವಲ್ಪ ಆಧಿಕ್ಯವನ್ನು ಕಾಣಬಹುದು ಎನ್ನುವರು. ಅತೀ ಸಣ್ಣದ್ದೂ ಅಲ್ಲದ ಅತಿ ಗಾತ್ರದ್ದೂ ಅಲ್ಲದ ರೂಪ ಲಕ್ಷಣೋಪೇತವಾದ ಸಾಲಿಗ್ರಾಮವನ್ನು ಪೂಜಿಸುವುದರಿಂದ ಗೃಹಸ್ಥರಿಗೆ ಸಂತಾನ, ಸಂಪತ್ತು ಸುಖಗಳು ಪ್ರಾಪ್ತಿಯಾಗುತ್ತವೆ.
    ಸಾಲಿಗ್ರಾಮದ ಬಣ್ಣಗಳೂ ಸ್ವಾರಸ್ಯಕರವಾಗಿರುತ್ತದೆ. ಸೂಕ್ಷ್ಮ ಪರೀಕ್ಷಣದಲ್ಲಿ ಅವುಗಳಲ್ಲಿ ಹಲವು ಬಣ್ಣಗಳು ಕಂಡುಬರುತ್ತದೆ ಕೆಂಪು ಮಿಶ್ರಿತ ಕಪ್ಪು, ಹಸಿರುಗಪ್ಪು, ಬಿಳಿ, ಕೆಂಪು, ಕಪ್ಪಿನ ಮೇಲೆ ನಸುಗಪ್ಪು, ಕಪ್ಪು, ಹಳದಿ ಮೊದಲಾದ ಬಣ್ಣಗಳು ಇವುಗಳಲ್ಲಿ ಪ್ರಮುಖವಾದವು. ನರಸಿಂಹ ಸಾಲಿಗ್ರಾಮವು ಕೆಂಪು ಮಿಶ್ರಿತ ಕಪ್ಪು ಬಣ್ಣದ್ದಾದರೆ, ಸಂಕರ್ಷಣ ಸಾಲಿಗ್ರಾಮವು ಕೆಂಪು ಬಣ್ಣದ್ದಾಗಿರುತ್ತದೆ, ವಾಸುದೇವ ಸಾಲಿಗ್ರಾಮ ಬಿಳಿ ಬಣ್ಣದ್ದು, ಅನಿರುದ್ದ ಸಾಲಿಗ್ರಾಮ ಕಪ್ಪು ಬಣ್ಣದ್ದು. ನಾರಾಯಣ ಸಾಲಿಗ್ರಾಮ ಹಳದಿ ಬಣ್ಣದ್ದಾಗಿರುತ್ತದೆ ಹಲವು ವರ್ಣ ಸಮ್ಮೇಳನವಾದ ಶ್ರೀಧರ ಸಾಲಿಗ್ರಾಮವೂ ಇದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ