ಅಹಂ ತೇಭ್ಯೋಕರಂ ನಮಃ

ಈಗ ಒಂಭತ್ತನೆಯ ಮಂತ್ರವನ್ನು ವಿಚಾರಮಾಡೋಣ :

ನಮೋ ಅಸ್ತುನೀಲಗ್ರೀವಾಯ ಸಹಸ್ರಾಕ್ಷಾಯ ಮೀಢುಷೇ |
ಅಥೋ ಯೇ ಅಸ್ಯ ಸತ್ವಾನೋsಹಂ ತೇಭ್ಯೋsಕರಂ ನಮಃ ||9||

    'ನೀಲಗ್ರೀವನೂ ಸಹಸ್ರಾಕ್ಷನೂ, ಭಕ್ತರ ಕಾಮಗಳನ್ನು ಮಳೆಗೆರೆಯುವವನೂ ಆದ (ರುದ್ರನಿಗೆ) ನಮಸ್ಕಾರವು. ಮತ್ತು ಇವನ ಗೃಹದಲ್ಲಿರುವ (ಸಮಿಪದಲ್ಲಿರುವ) ಯಾವ ಪ್ರಮಥಗಣಗಳಿರುವರೋ ಅವರುಗಳಿಗೆ ನಾನು ನಮಸ್ಕರಿಸುವೆನು.'

    ಈ ಮಂತ್ರದಲ್ಲಿ ಭೂಕೈಲಾಸಮೂರ್ತಿಯಾದ ನೀಲಕಂಠಮೂರ್ತಿಯನ್ನು ಸ್ತೋತ್ರಮಾಡಿದೆ. ನೀಲಗ್ರೀವನೆಂದರೆ ವಿಷಪಾನದಿಂದ ಕಪ್ಪಾದ ಕಂಠವುಳ್ಳವನು ಪರಮೇಶ್ವರನು ಸಮುದ್ರಮಂಥನಕಾಲದಲ್ಲಿ ಹುಟ್ಟಿದ 'ಹಾಲಾಹಲ'ವೆಂಬ ವಿಷವನ್ನು ಲೋಕಕಲ್ಯಾಣಕ್ಕಾಗಿ ಕುಡಿದು ತನ್ನ ಹಿರಿಮೆಯನ್ನೂ ಆದರ್ಶವನ್ನು ತೋರಿಸಿರುತ್ತಾನೆ. ವಿದ್ವಾಂಸನಾದವನು ಪ್ರಪಂಚದಲ್ಲಿ ಕಂಡುಬರುವ ಗುಣದೋಷಗಳನ್ನು ಪರಮೇಶ್ವರನಂತೆ ಸ್ವೀಕರಿಸಬೇಕು; ಎಂದರೆ ಭಗವಂತನು ಚಂದ್ರನನ್ನು ತಲೆಯಮೇಲೆ ಹೊತ್ತು ಮೆರೆಸುವಂತೆ ಮತ್ತೊಬ್ಬರ ಗುಣಗಳನ್ನು ಎತ್ತಿ ಆಡಬೇಕು. ದೋಷಗಳನ್ನೂ ಎಂದರೆ - ವಿಷವನ್ನು ಕಂಠದಲ್ಲೇ ತಡೆದಿಟ್ಟಿರುವಂತೆ - ಗೋಪ್ಯವಾಗಿಯೇ ಇಡಬೇಕು; ಹೊರಹಾಕಬಾರದು ಈ ನೀತಿಯನ್ನು ನೀಲಕಂಠಮೂರ್ತಿಯು ತಿಳಿಸುತ್ತಿದ್ದಾನೆ ಮತ್ತು ಈತನು ಸಹಸ್ರಾಕ್ಷನು, ಅಪರಿಮಿತವಾದ ಕಣ್ಣುಗಳುಳ್ಳವನು - ಎಂದರೆ ಅಪರಿಚ್ಛಿನ್ನವಾದ ದೃಷ್ಟಿಯುಳ್ಳವನು - ಎಂದಭಿಪ್ರಾಯ ಇದರಿಂದ ತಿಳಿಯಬರುವದೇನೆಂದರೆ ಭಗವಂತನು ಕೈಲಾಸದಲ್ಲೇ ವಾಸವಾಗಿದ್ದರೂ ಅವನ ದೃಷ್ಟಿಯು ಮಾತ್ರ ಎಲ್ಲೆಲ್ಲೂ ಪಸರಿಸಿರುವದರಿಂದ ನಾವು ಭೂಲೋಕದಲ್ಲಿ ಮಾಡುವ ಪೂಜಾ ನಮಸ್ಕಾರಾದಿಗಳೂ ಅವನ ದೃಷ್ಟಿಗೋಚರವೇ ಆಗುತ್ತವೆ ಎಂದಾಗುತ್ತದೆ ಮತ್ತು ಭಗವಂತನು ಮಿಢುಷನು - ಎಂದರೆ ನಮಸ್ಕಾರಮಾಡುವ ಭಕ್ತರ ಕಾಮಗಳನ್ನು ಪರಿಪೂರ್ಣಗೊಳಿಸುವವನು ಇಂಥವನಿಗೆ ನಮಸ್ಕಾರವು ಎಂದಭಿಪ್ರಾಯ.

    ಇನ್ನು ಭಗವಂತನ ಸಮಿಪದಲ್ಲಿಯೇ ಪ್ರಮಥರೆಂಬ ಗಣದೇವತೆಗಳಿದ್ದಾರಷ್ಟೆ! ಅವರಿಗೂ ವಂದನೆಗಳು ಸತ್ವಾನರು ಎಂದರೆ ಸಮೀಪಸ್ಥರು - ಎಂದರ್ಥ ಶ್ರುತಿಯಲ್ಲಿ 'ದಿವ್ಯಾ ಗಣಾ ಬಹುರೂಪಾಃ ಪುರಾಣಾಃ' ಎಂದು ಇವರುಗಳನ್ನು ಹೊಗಳಿದೆ ಮಹಾಭಾರತದಲ್ಲಿಯೂ "ಬೇಕಾದ ಕೆಲಸವನ್ನು ಮಾಡುವ ಸಾಮಾರ್ಥ್ಯವುಳ್ಳ ಸಿದ್ಧರಾದ ಮೂರುಲೋಕಗಳ ಐಶ್ವರ್ಯಕ್ಕೂ ಒಡೆಯರಾದ ಸದಾ ಸಂತೋಷದಿಂದ ಇದ್ದುಕೊಂಡಿರುವ ಹಸನ್ಮುಖರಾದ ವಾಕ್ಕುಗಳಿಗೆ ಅಧಿಪತಿಗಳಾಗಿಯೂ ಮಾತ್ಸರ್ಯವಿಲ್ಲದವರಾಗಿಯೂ ಇರುವ ಈ ಗಣದೇವತೆಗಳು ಅಣಿಮಾದ್ಯೈಶ್ವರ್ಯಗಳನ್ನು ಪಡೆದಿದ್ದರೂ ತಮ್ಮಸಿದ್ಧಿಗಳಿಂದ ಸ್ವಲ್ಪವೂ ಆಶ್ಚರ್ಯಗೊಳ್ಳದೆ ಇರುವರು ಪೂಜ್ಯನಾದ ಪರಮೇಶ್ವರನು ಇಂಥವರ ಅದ್ಭುತಕರ್ಮಗಳಿಂದ ಅಚ್ಚರಿಯನ್ನು ಹೊಂದುವನು ಮತ್ತು ಇವರುಗಳು ವಿದ್ಯೆಯಲ್ಲಿಯೂ ಬ್ರಹ್ಮಚರ್ಯೆ ತಪಸ್ಸು ದಮೆ ಇವುಗಳಲ್ಲಿಯೂ ಪೂರ್ಣಪರಿಶ್ರಮವುಳ್ಳವರಾಗಿದ್ದು ಶಿವಸಾಯುಜ್ಯವನ್ನು ಹೊಂದಿರುವ ಪುಣ್ಯಶೀಲರು" ಎಂದು ವರ್ಣಿಸಿದೆ ಇಂಥ ಗಣದೇವತೆಗಳಿಗೂ ನಾನು ನಮಸ್ಕರಿಸುವೆನು - ಎಂದಭಿಪ್ರಾಯ. ಈ ಮಂತ್ರವು ಸತ್ಪುತ್ರರನ್ನು ಕೊಡತಕ್ಕದೆಂದು ಬಲ್ಲವರು ತಿಳಿಸಿದ್ದಾರೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ