ರುದ್ರಭಾಷ್ಯಪ್ರಕಾಶ - 1ನೇ ಅನುವಾಕ (ಸಂಪೂರ್ಣ)
ಓಂ ||
ನಮಸ್ತೇ ರುದ್ರ ಮನ್ಯವ ಉತೋ ತ ಇಷವೇ ನಮಃ |
ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ ||1||
"ಎಲೈ ರುದ್ರನೆ, ನಿನಗೆ ನಮಸ್ಕಾರವು ಮತ್ತು ನಿನ್ನ ಕೋಪಕ್ಕೆ ನಮಸ್ಕಾರ! ಮತ್ತು ನಿನ್ನ ಬಾಣಗಳಿಗೆ, ಧನಸ್ಸಿಗೆ ಹಾಗೂ ಧನುರ್ಬಾಣಗಳನ್ನು ಹಿಡಿದಿರುವ ಎರಡು ತೋಳುಗಳಿಗೆ ನಮಸ್ಕಾರ!"
ಭಕ್ತನು ಇಲ್ಲಿ ಮೊದಲು ರುದ್ರನ ಕೋಪಕ್ಕೆ ನಮಸ್ಕಾರವೆಂದಿರುತ್ತಾನೆ. ಸಕಲಕಲ್ಯಾಣಗುಣಪರಿಪೂರ್ಣನಾದ ಭಗವಂತನಲ್ಲಿ ಕೋಪವೇಕೆ ಉಂಟಾಯಿತು ? ಎಂದರೆ ಜೀವರುಗಳು ಮಾಡಿರುವ ಅಪರಾಧದಿಂದ - ಎಂದರ್ಥ. ಲೋಕರಕ್ಷಣೆಗಾಗಿ ಭಗವಂತನು ಶ್ರುತಿಸ್ಮೃತಿರೂಪವಾದ ತನ್ನ ಅಜ್ಞೆಗಳಿಂದ ಧರ್ಮವೆಂಬ ಕಟ್ಟಲೆಯನ್ನು ಎಲ್ಲಾ ಮನುಷ್ಯರುಗಳಿಗೂ ವಿಧಿಸಿರುತ್ತಾನೆ. ಈ ಕಟ್ಟುಪಾಡುಗಳು ಇಲ್ಲದೆಹೋದರೆ ಜಗತ್ತಿನ ಪರಿಪಾಲನೆಯು ಸಾಧ್ಯವಾಗಲಾರದು. ಆದರೆ ಈ ಜೀವನು ಕಾಮವಶನಾಗಿ ಭಗವಂತನನ್ನು ಮರೆತು ತಿರಸ್ಕರಿಸಿ ಸ್ವೇಚ್ಛೆಯಿಂದ ನಡೆಯುತ್ತಾ ಆತನ ಆಜ್ಞೆಗಳನ್ನು ಮೀರಿ ವರ್ತಿಸುತ್ತಿದಾನೆ. ಇಂಥವನ ವಿಷಯದಲ್ಲಿ ಭಗವಂತನ ಕೋಪವು ಸಾಧುವೇ ಆಗಿದೆ. ಎಲ್ಲಾ ಜೀವರುಗಳ ನಡುವೆ ನಾವೂ ಒಬ್ಬರಾದ್ದರಿಂದ ನಮ್ಮಲ್ಲಿಯೂ ಭಗವಂತನ ವಿಷಯಕ್ಕೆ ಅಪರಾಧಶತಗಳೇ ತುಂಬಿಕೊಂಡಿವೆ. ಆದ್ದರಿಂದ ಎಲೈ ರುದ್ರನೆ, ಪ್ರಸನ್ನನಾಗು, ಕೋಪಮಾಡಬೇಡ - ಎಂದು ಭಕ್ತನು ಪ್ರಾರ್ಥಿಸುತ್ತಿದಾನೆ. ಹಾಗೂ ನೀನು ಕೋಪದಿಂದ ನಮ್ಮ ಮೇಲೆ ಎತ್ತಿರುವ ಬಾಣ - ಧನಸ್ಸುಗಳಿಗೂ ನಮಸ್ಕಾರ ! ಅವುಗಳನ್ನು ಶಾಂತಗೊಳಿಸು - ಎಂದು ಬೇಡಲಾಗಿದೆ. ಪಾಪಿಗಳ ಕಡೆಗೆ ಸ್ವಭಾವದಿಂದಲೇ ಆತನ ಧನುರ್ಬಾಣಗಳೂ ಬಾಹುಗಳೂ ವ್ಯಾಪಾರಮಾಡುವವು. ಅದನ್ನು ಪರಿಹರಿಸಿಕೊಳ್ಳಲು ರುದ್ರನಿಗೂ ಆತನ ಧನುರ್ಬಾಣಯುತವಾದ ಹಸ್ತಗಳಿಗೂ ಇಲ್ಲಿ ವಂದನೆಯನ್ನು ಸಮರ್ಪಿಸಿದೆ - ಎಂದು ತಿಳಿಯಬೇಕು.
ತಯಾ ನೋ ರುದ್ರ ಮೃಡಯ
ಈಗ ಎರಡನೆಯ ಮಂತ್ರಾರ್ಥವನ್ನು ಪರಿಶೀಲಿಸೋಣ :
ಯಾ ತ ಇಷುಶ್ಯಿವತಮಾ ಶಿವಂ ಬಭೂವ ತೇ ಧನುಃ |
ಶಿವಾ ಶರವ್ಯಾ ಯಾ ತವ ತಯಾ ನೋ ರುದ್ರ ಮೃಡಯ ||2||
"ಎಲೈ ರುದ್ರನೆ, ಯಾವ ನಿನ್ನ ಹಿಂಸಾಕಾರಣವಾದ ಬಾಣವೂ ಧನುಸ್ಸೂ ಶಾಂತವಾದವೋ ಅವುಗಳಿಂದ ನಮ್ಮನ್ನು ಸುಖಗೊಳಿಸುವವನಾಗು"
ಇಲ್ಲಿ ಭಕ್ತನು ಭಗವಂತನನ್ನು ತನಗೆ ಸುಖವನ್ನುಂಟುಮಾಡುವಂತೆ ಪ್ರಾರ್ಥಿಸುತ್ತಿದ್ದಾನೆ. "ಮೊದಲು ಪಾಪಿಷ್ಠನಾಗಿದ್ದ ನನ್ನ ವಿಷಯದಲ್ಲಿ ಎಲೈ ಭಗವಂತನೆ, ನೀನು ಧನುರ್ಬಾಣಗಳನ್ನು ಎತ್ತಿದ್ದೆಯಷ್ಟೆ! ಅನಂತರ ನನ್ನ ಪ್ರಾರ್ಥನೆಯನ್ನು ಮನ್ನಿಸಿ ಅವುಗಳನ್ನು ಶಾಂತಗೊಳಿಸಿರುತ್ತೀಯೆ. ಹೀಗೆ ಶಿವತಮವಾಗಿ ಮಾಡಲ್ಪಟ್ಟ ನಿನ್ನ ಬಾಣಗಳೂ ಧನುಸ್ಸೂ ನನಗೆ ಧೈರ್ಯವನ್ನುಂಟುಮಾಡಿವೆ. ಆದರೂ ಮುಂದೆಯೂ ಅವು ಎಂದೂ ನನ್ನನ್ನು ಭಯಗೊಳಿಸಿದಂತೆಯೂ ಅವೇ ನನಗೆ ಅಭಯವನ್ನುಂಟುಮಾಡುವಂತೆಯೂ ಮಾರ್ಪಡಿಸಿ ನನಗೆ ಸುಖವನ್ನುಂಟುಮಾಡು" ಎಂಬಿದು ಈ ಮಂತ್ರದ ಒಟ್ಟರ್ಥ. ಭಗವಂತನಿಗೆ 'ಮೃಡ' ಎಂಬ ಹೆಸರೂ ಇದೆ. ಸುಖವನ್ನುಂಟು ಮಾಡುವದರಿಂದಲೇ ಅವನನ್ನು 'ಮೃಡಯ' - ಎಂದು ಇಲ್ಲಿ ಬೇಡಿಕೊಂಡಿದೆ. ಧನುರ್ಬಾಣಗಳ ಕಡೆಯಿಂದ ಸುಖವುಂಟಾಗುವದು ಹೇಗೆ? ಎಂದರೆ ಅವುಗಳು ಪರಮೇಶ್ವರನ ಕೈಗಳಿಂದ ಕೆಳಕ್ಕೆ ಇಳಿಸಲ್ಪಡಲಾಗಿ ಅವುಗಳನ್ನು ನೋಡಿದರೂ ಭಯವಾಗುವದಿಲ್ಲ; ಆತಂಕವೂ ಕಡಿಮೆಯಾಗುತ್ತದೆ. ಆದ್ದರಿಂದ ಹಾಗಂತ ಪ್ರಾರ್ಥಿಸಿದೆ.
ಈಗ ಮೂರನೆಯ ಮಂತ್ರವನ್ನು ನೋಡೋಣ :
ಯಾ ತೇ ರುದ್ರ ಶಿವಾ ತನೂರಘೋರಾsಪಾಪಕಾಶಿನೀ |
ತಯಾ ನಸ್ತನುವಾ ಶಂತಮಯಾ ಗಿರಿಶಂತಾಭಿಚಾಕಶೀಹಿ ||3||
'ಎಲೈ ರುದ್ರನೆ, ಯಾವ ನಿನ್ನ ಘೋರವಲ್ಲದ ಮಂಗಳಕರವಾದ ಶರೀರವು ಆತ್ಮಜ್ಞಾನವನ್ನುಂಟುಮಾಡತಕ್ಕದ್ದಾಗಿದೆಯೋ ಆ ಸುಖಕರವಾದ ಶರೀರದಿಂದ, ಎಲೈ ಗಿರಿಶಂತನೆ, ನಮ್ಮನ್ನು ಜ್ಞಾನಯುಕ್ತರಾಗುವಂತೆ ಮಾಡು.' ಈ ಮಂತ್ರದಲ್ಲಿ 'ಜ್ಞಾನವನ್ನು ಕೊಡು' ಎಂದು ಭಗವಂತನನ್ನು ಪ್ರಾರ್ಥಿಸಿದೆ. ಭಗವಂತನಿಗೆ ಘೋರಶರೀರವೆಂದೂ ಅಘೋರಶರೀರವೆಂದೂ ಎರಡು ಬಗೆಯ ಶರೀರಗಳಿರುತ್ತವೆ. ಉಪನಿಷತ್ತಿನಲ್ಲಿ 'ಅಘೋರೇಭ್ಯೋsಥ' ಎಂಬ ಮಂತ್ರದಲ್ಲಿ ಈ ಎರಡುಬಗೆಯ ಹಾಗೂ ಉಳಿದ ಎಲ್ಲಾ ರೂಪಗಳಿಗೂ ನಮಸ್ಕಾರವೆಂದು ಸ್ತುತಿಸಿದೆ. ಪ್ರಕೃತದಲ್ಲಿ ಅಘೋರಶರೀರವನ್ನು ಕುರಿತು ಪ್ರಸ್ತಾಪಿಸಿದೆ. ಇಲ್ಲಿ ಒಂದು ಶಂಕೆ : ದಯಾಮಯನಾದ ಪರಮೇಶ್ವರನಿಗೆ ಘೋರಶರೀರವಾದರೂ ಏತಕ್ಕೆ ಬೇಕು? ಎಂದು ಅನ್ನಿಸಬಹುದು. ಆದರೆ ಜಗತ್ತಿನಲ್ಲಿರುವ ದುಷ್ಟರನ್ನು ನಿಗ್ರಹಮಾಡುವದಕ್ಕೆ ಇದು ಉಪಯೋಗಕರವಾಗಿರುತ್ತದೆ. ಹೇಗೆ ಪೋಲಿಸ್, ಮಿಲಿಟರಿ - ಮುಂತಾದವುಗಳು ನಾಗರಿಕರನ್ನು ರಕ್ಷಿಸುವದಕ್ಕೂ ಶತ್ರುಗಳನ್ನೂ ಕಳ್ಳರನ್ನೂ ದಮನಗೊಳಿಸುವದಕ್ಕೂ ಉಪಯೋಗವಾಗುವವೋ ಹಾಗೆಯೇ ಭಗವಂತನ ಘೋರರೂಪವು ಪಾಪಿಗಳನ್ನೂ ದುಷ್ಟರನ್ನೂ ಸಂಹರಿಸಲು ಬೇಕಾಗುತ್ತದೆ. ಅದನ್ನು ಬಿಟ್ಟು ಶಾಂತವಾದ ರೂಪದಿಂದ ಪರಮೇಶ್ವರನು ತನಗೆ ತೋರಿಕೊಳ್ಳುವಂತೆ ಭಕ್ತನು ಇಲ್ಲಿ ಅಪೇಕ್ಷಿಸಿರುತ್ತಾನೆ. ಮತ್ತು ಆ ರೂಪವು ಎಂಥದ್ದೆಂದರೆ ಆಪಾಪಕಾಶಿನಿಯು, ಪಾಪವಿರೋಧಿಯಾದ ಬ್ರಹ್ಮಾತ್ಮಜ್ಞಾನವನ್ನು ಪ್ರಕಾಶಗೊಳಿಸತಕ್ಕದ್ದು ; ಹಾಗೂ ಶಿವವಾದದ್ದು. ಇಂಥ ನಿರತಿಶಯಸುಖರೂಪವಾದ ಶರೀರದಿಂದ ನಮ್ಮನ್ನು ಪ್ರಬೋಧಗೊಳಿಸುವವನಾಗು - ಎಂದು ಅಭಿಪ್ರಾಯ.
ಇಲ್ಲಿ 'ಗಿರಿಶಂತ' ಎಂದು ಒಂದನೆಯ ಬಾರಿಗೆ ಭಗವಂತನನ್ನು ಸಂಬೋಧಿಸಿದೆ. ಗಿರಿ ಎಂದರೆ (ಗಿರೌ ಎಂಬರ್ಥದಲ್ಲಿ ವೈದಿಕಪ್ರಯೋಗ) ಮಾತಿನಲ್ಲಿ ಇದ್ದುಕೊಂಡು ಲೋಕಗಳಿಗೆ ಶಂ - ಎಂದರೆ ಸುಖವನ್ನು ತ - ತನೋತಿ, ಉಂಟುಮಾಡುತ್ತಾನೆ. ಆದ್ದರಿಂದ ಗಿರಿಶಂತನು ಪರಮೇಶ್ವರನು. ಹೇಗೆಂದರೆ : ವೇದಾಂತಶಾಸ್ತ್ರದಲ್ಲಿ ಶ್ರವಣಮನನನಿದಿಧ್ಯಾಸನಾದಿಗಳು ಜ್ಞಾನಕ್ಕೆ ಸಾಕ್ಷಾತ್ ಸಾಧನಗಳೆಂದು ಹೇಳುವರು. ಸಾಮಾನ್ಯಸಾಧಕರಿಗೆ ಅವು ಯಾವವೂ ದೊರಕದಿದ್ದರೂ ಪರಮೇಶ್ವರನ ಸ್ತುತಿರೂಪವಾದ ವಾಕ್ಕಿನಲ್ಲಿ ಎಂದರೆ ಪಂಚಾಕ್ಷರೀಮಂತ್ರದಲ್ಲಿ ಸಾಕ್ಷಾತ್ ಮಹಾದೇವನೇ ಇದ್ದುಕೊಂಡಿರುವನಾದ್ದರಿಂದ ಕೇವಲ ಮಂತ್ರವನ್ನು ಜಪಮಾಡಿದರೂ ಗಿರಿಶಂತನಾದ ಆತನ ಅನುಗ್ರಹದಿಂದ ಜ್ಞಾನಪ್ರಾಪ್ತಿಯಾಗುವದು - ಎಂಬುದನ್ನು ಇಲ್ಲಿ ತಿಳಿಸಿದೆ.
ಈಗ ನಾಲ್ಕನೆಯ ಮಂತ್ರವನ್ನು ವಿಚಾರಮಾಡೋಣ :
ಯಾಮಿಷುಂ ಗಿರಿಶಂತ ಹಸ್ತೇ ಬಿಭರ್ಷ್ಯಸ್ತವೇ |
ಶಿವಾಂ ಗಿರಿಶ್ರ ತಾಂ ಕುರು ಮಾ ಹಿಗ್ಂಸೀಃ ಪುರುಷಂ ಜಗತ್ ||4||
'ಎಲೈ ಗಿರಿಶಂತನೆ, ಪಾಪಿಗಳ ಕಡೆಗೆ ಎಸೆಯುವದಕ್ಕಾಗಿ ಯಾವ ಬಾಣವನ್ನು ನೀನು ಕೈಯಲ್ಲಿ ಧರಿಸಿರುವೆಯೋ ಅದನ್ನು ಶಿವವಾಗಿ ಮಾಡು. ಜಗತ್ತನ್ನೂ ನಮ್ಮ ಪುತ್ರಪೌತ್ರಾದಿಕುಟುಂಬವರ್ಗವನ್ನೂ ಗೋಧನಗೃಹಾದಿಗಳನ್ನೂ ಹಿಂಸಿಸಬೇಡ.' ಈ ಮಂತ್ರದಲ್ಲಿ ಭಕ್ತನು ಅನಿಷ್ಟವನ್ನು ಪರಿಹರಮಾಡುವಂತೆ ಪರಮೇಶ್ವರನನ್ನು ಪ್ರಾರ್ಥಿಸಿರುತ್ತಾನೆ. ಇಲ್ಲಿ ಗಿರಿಶಂತನೆಂದರೆ ಕೈಲಾಸವೆಂಬ ಪರ್ವತದಲ್ಲಿದ್ದುಕೊಂಡು ಲೋಕಕ್ಕೆಲ್ಲ ಸುಖವನ್ನುಂಟುಮಾಡುವವನು - ಎಂದರ್ಥ. ಕೆಟ್ಟಕರ್ಮಗಳನ್ನು ಮಾಡಿದವನಿಗೂ ಪರಮೇಶ್‌ವರನು ಒಳ್ಳೆಯದನ್ನು ಹೇಗೆ ಮಾಡಿಯಾನು ? ಎಂದು ಶಂಕಿಸಬಾರದು. ಆತನನ್ನು ಮೊರೆಹೋಗುವವರೆಗೆ ಮಾತ್ರವೇ ನಮ್ಮ ದುಷ್ಕರ್ಮಗಳು ನರಕಾದಿಫಲದಾಯಕಗಳಾಗಿರುವವು. ಆದರೆ ಆತನ ಕಡೆಗೆ ನಾವು ತಿರುಗಿ ಶರಣಾಗತರಾದರೆ ಸಾಕು - ಇನ್ನು ನರಕಾದಿಗಳ ಹೆದರಿಕೆಯಿರಲಾರದು. ಆದ್ದರಿಂದ ಇಲ್ಲಿ ಭಕ್ತನು "ಎಲೈ ಪರಮೇಶ್ವರನೆ, ಈ ಮೊದಲು ಪಾಪಿಯಾದ ನನ್ನ ಮೇಲೆ ಎಸೆಯಲು ಯಾವ ಬಾಣವನ್ನು ನೀನು ಧರಿಸಿದ್ದೆಯೋ ಅದು ಅವಶ್ಯವಿಲ್ಲ. ಏಕೆಂದರೆ ಈಗ ನಾನು ನಿನಗೆ ಭಕ್ತನಾಗಿರುತ್ತೇನೆ. ಆದ್ದರಿಂದ ಎಲೈ ಗಿರಿತ್ರ, ಅದನ್ನು ಶಿವವಾಗಿ ಮಾಡು" - ಎಂದು ಕೇಳಿಕೊಂಡಿರುತ್ತಾನೆ. ಇಲ್ಲಿ ಗಿರಿತ್ರನೆಂದರೆ ಹಿಂದೆ ತಿಳಿಸಿದಂತೆಯೇ ವಾಕ್ಕಿನಲ್ಲಿದ್ದುಕೊಂಡು, ತ್ರಾಯತೇ - ಕಾಪಾಡುತ್ತಾನೆ - ಎಂದಭಿಪ್ರಾಯ.
ಇಲ್ಲಿ ಭಕ್ತನು ಇನ್ನೊಂದು ಹೆಚ್ಚಿನ ಪ್ರಾರ್ಥನೆಯನ್ನೂ ಭಗವಂತನಿಗೆ ಸಲ್ಲಿಸುತ್ತಿದಾನೆ. ಏನೆಂದರೆ : ತನ್ನನ್ನು ಮಾತ್ರವೇ ಅಲ್ಲದೆ ತನ್ನ ಪುತ್ರಪೌತ್ರಬಂಧು ಮಿತ್ರಾದಿವರ್ಗದವರನ್ನೂ ಗವಾದಿಸಂಪತ್ತನ್ನೂ ಹಿಂಸೆಮಾಡದೆ ಕಾಪಾಡ ಬೇಕೆಂದು ಕೇಳಿಕೊಂಡಿರುತ್ತಾನೆ. ಇದೂ ಅವಶ್ಯಕವೆಂದು ಹೇಳಬಹುದು. ಏಕೆಂದರೆ ನಾವು ಸುಖವಾಗಿರಬೇಕಾದರೆ ನಮ್ಮವರೂ, ನಮ್ಮ ಸಂಪತ್ತೂ, ಸುತ್ತವಳೆಯವೂ ಎಲ್ಲವೂ ಸುಖವಾಗಿರಬೇಕಾದದ್ದು ಅಗತ್ಯ. ನಮ್ಮ ಗುಂಪಿನಲ್ಲಯೇ ಯಾರುಯಾರು ಪರಮೇಶ್ವರನಿಗೆ ಏನೇನು ಅಪರಾಧಗಳನ್ನೂ ಮಾಡುತ್ತಿರುವರೋ ತಿಳಿಯುವದಿಲ್ಲ. ಹಾಗೆ ಅಪರಾಧಮಾಡಿದವರೆಲ್ಲರೂ ಪರಮೇಶ್ವರನಿಗೆ ತಮ್ಮ ತಪ್ಪನ್ನು ಕ್ಷಮಿಸುವಂತೆ ಬೇಡಿಕೊಳ್ಳುತ್ತಾರೆಂದೂ ನಂಬಲಾಗುವದಿಲ್ಲ. ಆದ್ದರಿಂದ ಎಲ್ಲರ ಪರವಾಗಿ ನಾವೇ ಈಶ್ವರನಲ್ಲಿ ಬೇಡಿ ಕೊಳ್ಳುವದೇ ಒಳ್ಳೆಯದಲ್ಲವೆ ? ದೇವತಾರ್ಚನೆಯ ಕೊನೆಯಲ್ಲಿ "ನನ್ನಿಂದಲಾಗಲಿ, ನನ್ನ ಸಹೋದರರುಗಳಿಂದಲಾಗಲಿ, ನನ್ನ ಬಂಧುಗಳಿಂದಲಾಗಲಿ ಮಾಡಲ್ಪಟ್ಟಿರಬಹುದಾದ ನೂರು ಅಪರಾಧಗಳನ್ನಾದರೂ ಎಲೈ ಪುರುಷೋತ್ತಮನೆ, ಕ್ಷಮಿಸಿ" ಎಂಬರ್ಥದ ಶ್ಲೋಕವೊಂದನ್ನು ವೈಖಾನಸರು ಪಠಿಸುತ್ತಾರೆ. ಹಾಗೆಯೇ ಇಲ್ಲಿಯೂ 'ಮಾ ಹಿಗ್ಂಸೀಃ ಪುರುಷಂ ಜಗತ್' ಎಂಬುದಾಗು ಎಲ್ಲರ ಪರವಾಗಿಯೂ ಭಗವಂತನಿಗೆ ಪ್ರಾರ್ಥನೆಯು ಸಲ್ಲಿಸಲ್ಪಟ್ಟಿದೆ. ವಾಚಕರೆ, ಇಂಥ ವೈದಿಕಪ್ರಾರ್ಥನೆಗಳು ಹೇಗೆ ಜಗತ್ಕಲ್ಯಾಣಕಾರಕವಾಗಿವೆಯೆಂಬುದನ್ನು ಇದರಿಂದ ತಿಳಿಯಿರಿ.
ಪ್ರಥಮೋ ದೈವ್ಯೋ ಭಿಷಕ್ಹಿಂದಿನ ನಾಲ್ಕು ಮಂತ್ರಗಳಲ್ಲಿ ಇಷ್ಟಪ್ರಾಪ್ತಿ, ಅನಿಷ್ಟಪರಿಹಾರಗಳನ್ನು ಪ್ರಾರ್ಥಿಸಿದ ಅನಂತರ ಇಲ್ಲಿ ಅವೆರಡನ್ನೂ ಒಟ್ಟಿಗೆ ಪ್ರಾರ್ಥಿಸಿದೆ.
ಶಿವೇನ ವಚಸಾ ತ್ವಾ ಗಿರಿಶಾಚ್ಛಾ ವದಾಮಸಿ |
ಯಥಾ ನಸ್ಸರ್ವಮಿಜ್ಜಗದಯಕ್ಷ್ಮಗ್ಂ ಸುಮನಾ ಅಸತ್ ||5||
'ಎಲೈ ಗಿರಿಶನೆ, ನಿನ್ನನ್ನು ಮಂಗಳಕರವಾದ ಮಾತಿನಿಂದ ನಿರ್ಮಲವಾಗಿ ಸ್ತೋತ್ರಮಾಡುವೆವು. ಆ ಯಾವ ಸ್ತುತಿಯಿಂದ ನಮ್ಮ ಸಂಬಂಧವುಳ್ಳ ಪಶುಪುತ್ರಾದಿರೂಪವಾದ ಜಗತ್ತೆಲ್ಲವೂ ರೋಗರಹಿತವೂ ಸೌಮನಸ್ಯವುಳ್ಳದ್ದೂ ಆಗುವದೋ ಹಾಗೆ ಸ್ತುತಿಸುವೆವು.' ಇಲ್ಲಿ ಗಿರಿಶನೆಂದು ಭಗವಂತನನ್ನು ಸಂಭೋಧಿಸಿರುವದು ಅರ್ಥವತ್ತಾಗಿದೆ. ಗಿರಿ ಎಂದರೆ ಬೆಟ್ಟವೆಂದರ್ಥ. ಬೆಟ್ಟದಂತಿರುವ ವೇದಗಳಲ್ಲಿ ಶೇತೇ- ಇದ್ದುಕೊಂಡಿರುತ್ತಾನಾದ್ದರಿಂದ ಗಿರಿಶನು ಪರಮೇಶ್ವರನು. ಹಿಂದೆ ಭರದ್ವಾಜನೆಂಬ ಒಬ್ಬ ಬ್ರಾಹ್ಮಣನು ಇಡಿಯ ವೇದರಾಶಿಯನ್ನೆಲ್ಲ ಅಧ್ಯಯನ ಮಾಡಿ ಪೂರೈಸಬೇಕೆಂದು ಹಟತೊಟ್ಟವನಾಗಿ ಇಡಿಯ ಜೀವನವೆಲ್ಲ ವೇದಾಧ್ಯಯನಮಾಡಿ ಕೊನೆಗೆ ಮುದುಕನಾಗಿಬಿಟ್ಟನು. ಆಗ ದೇವೇಂದ್ರನು ಬಂದು ಮೂರಿ ಬಾರಿ ಮತ್ತೆಮತ್ತೆ ಒಂದುನೂರು ವರ್ಷಗಳಂತೆ ಆಯುಸ್ಸನ್ನು ಆತನಿಗೆ ಅನುಗ್ರಹಿಸಿದನು. ಹೀಗೆ ನಾಲ್ಕುನೂರು ವರ್ಷಗಳ ಅಧ್ಯಯನವು ಪೂರೈಸಿದ ಮೇಲೂ ಭರದ್ವಾಜನು ಹಟವನ್ನು ಬಿಡದಿರಲು ಇಂದ್ರನು ಅವನನ್ನು ಕರೆದುಕೊಂಡು ಹೋಗಿ ಮೂರಿ ಬೆಟ್ಟಗಳನ್ನು ತೋರಿಸಿ 'ಎಲಾ ಭರದ್ವಾಜ, ಇವೇ ವೇದಗಳು; ಈವರೆಗೆ ನೀನು ಓದಿರುವದು ಇಷ್ಟು!' ಎಂದು ಹೇಳಿ ಮೂರಿ ಬೆಟ್ಟಗಳಿಂದಲೂ ಒಂದೊಂದು ಮುಷ್ಟಿಯಷ್ಟು ಮಣ್ಣನ್ನು ತೆಗೆದು ಭರದ್ವಾಜನ ಜೋಳಿಗೆಗೆ ಹಾಕಿದನು. ಆಗ ಭರದ್ವಾಜನಿಗೆ ವೇದಗಳ ಅನಂತತೆಯು ತಿಳಿಯಿತು. ಹೀಗೆ 'ವೇದಗಳು ಅನಂತವಾಗಿವೆ' ಎಂದು ತೈತ್ತಿರೀಯಬ್ರಾಹ್ಮಣದ ವೇದಭಾಗದಲ್ಲಿ ಒಂದು ಕಥೆಯಿದೆ. ಅದರಂತೆ ಬೆಟ್ಟಗಳಂತಿರುವ ವೇದಗಳಲ್ಲಿ ಅಡಗಿರುವ ಪರಮೇಶ್ವರನೇ ಗಿರಿಶನು. ಅವನನ್ನು ನಮ್ಮ ಪರಿಶುದ್ಧವಾದ ವಾಕ್ಕುಗಳಿಂದ ಸ್ತುತಿಸಬೇಕು. ನಮ್ಮ ವಾಕ್ಕುಗಳು ಪರಿಶುದ್ಧವಾಗಬೇಕಾದರೂ ಪರಮೇಶ್ವರನ ಸಂಬಂಧವು ಬೇಕೇ ಬೇಕು. ಎಂಥ ಚರಂಡಿಯ ನೀರಾದರೂ ಗಂಗಾಪ್ರವಾಹದಲ್ಲಿ ಸೇರಿದಕೂಡಲೇ ಪವಿತ್ರವಾಗಿಬಿಡುವಂತೆ ನಮ್ಮ ಲೌಕಿಕವಾದ ವಾಕ್ಕು ಕೂಡ ಪರಮೇಶ್ವರನನ್ನು ಸ್ತುತಿಸಲಾರಂಭಿಸಿದರೆ ಪವಿತ್ರವಾಗುವದು. ಹೀಗೆ ಸ್ತೋತ್ರಮಾಡುವದರಿಂದ ಆ ಭಗವಂತನು ಸುಪ್ರೀತನಾಗಿ ನಮ್ಮ ಹಾಗೂ ನಮ್ಮ ಸುತ್ತುವಳೆಯದ ಎಲ್ಲಾ ಪ್ರಾಣಿಗಳನ್ನೂ ಜಗತ್ತನ್ನೂ ರೋಗವಿಲ್ಲದ್ದನ್ನಾಗಿಯೂ ಸುಖಕರವಾಗಿಯೂ ಮಾಡುತ್ತಾನೆ. ಅದಕ್ಕಾಗಿಯೇ ಸ್ತುತಿಯು ಅವಶ್ಯವು ಎಂದಭಿಪ್ರಾಯ.
ಅಧ್ಯವೋಚದಧಿವಕ್ತಾ ಪ್ರಥಮೋ ದೈವ್ಯೋ ಭಿಷಕ್ |
ಅಹೀಗ್ಂಶ್ಚ ಸರ್ವಾನ್ ಜಂಭಯನ್ ಸರ್ವಾಶ್ಚ ಯಾತುಧಾನ್ಯಃ ||6||
'ಅಧಿವಕ್ತನೂ ಪ್ರಧಾನನೂ ದೇವತೆಗಳಲ್ಲಿರುವವನೂ, ಭವರೋಗವೈದ್ಯನೂ ಆದ ಪರಮೇಶ್ವರನು ಎಲ್ಲಾ ವಿಷಪ್ರಾಣಿಗಳು, ರಾಕ್ಷಸರೇ ಮುಂತಾದವರನ್ನೂ ನಾಶಮಾಡಿ ನನ್ನ ವಿಷಯದಲ್ಲಿ ಪಕ್ಷಪಾತವಚನವನ್ನು ಹೇಳುವವನಾಗಲಿ!'
ಈ ಮಂತ್ರದಲ್ಲಿ ಭಕ್ತನು ತನ್ನನ್ನು ಪರಮೇಶ್ವರನ ಕಡೆಯವನೆಂದು ವಹಿಸಿಕೊಳ್ಳಬೇಕೆಂದು ದೇವನಲ್ಲಿ ಬೇಡುತ್ತಿದ್ದಾನೆ. ಅಧಿವಚನವೆಂದರೆ ಪಕ್ಷವನ್ನು ವಹಿಸಿಮಾತನಾಡುವದು. ಒಂದು ವೇಳೆ ಹಿಂದಿನ ನಮ್ಮ ಪ್ರಾರ್ಥನೆಗಳಿಂದ ಪರಮೇಶ್ವರನು ಸಂತುಷ್ಟನಾಗಿ ನಮ್ಮನ್ನು ಶಿಕ್ಷಿಸದೆ ಬಿಟ್ಟರೂ ಅವನ ಕಡೆಯವರಾದ ಯಮ, ಚಿತ್ರಗುಪ್ತರೇ ಮುಂತಾದ ಸಾಕ್ಷಿದೇವತೆಗಳು ನಮ್ಮನ್ನು ಬಿಟ್ಟರೆ? ಅವರು ಶಿಕ್ಷಿಸುವದಿಲ್ಲವೆ? ಎಂಬ ಶಂಕೆ ಬರಲಾಗಿ 'ಹಾಗಿಲ್ಲ, ನಾವು ಪರಮೇಶ್ವರನ ಕಡೆಯವರೆಂದು ತಿಳಿದರೆ ಅವರು ಏನೂ ಮಾಡಲಾರರು' ಎಂಬ ಅಭಿಪ್ರಾಯದಿಂದ ಭಗವಂತನನ್ನು ಕುರಿತು 'ದೇವ, ನೀನು ನನ್ನನ್ನು ನಿನ್ನ ಕಡೆಯವನನ್ನಾಗಿ ಮಾಡಿಕೊ; ಆ ರೀತಿಯಾಗಿ ನಿನ್ನ ಅಧೀನರಾದ ದೇವತೆಗಳಿಗೆ ತಿಳಿಸು' - ಎಂದು ಭಕ್ತನು ಬೇಡಿಕೊಳ್ಳುತ್ತಿದ್ದಾನೆ. ಭಕ್ತನ ಪರವಾಗಿ ವಹಿಸಿಕೊಂಡು ಮಾತನಾಡುವದೇ ಅಧಿವಚನವು. ಅದಕ್ಕಾಗಿ ಪರಮೇಶ್ವರನಿಗೆ ಇಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗಿದೆ. ಭಗವಂತನು ಅಧಿವಕ್ತನು - ಎಂದರೆ ಭಕ್ತರನ್ನು ಕುರಿತು ಅಧಿವಚನವನ್ನು ಆಡುವವನು ಮತ್ತು ಪ್ರಥಮನು ಎಂದರೆ ಪ್ರಧಾನನು ದೇವತೆಗಳಲ್ಲಿ ಶ್ರೇಷ್ಠನು - ಎಂದಭಿಪ್ರಾಯ ದೈವ್ಯನು ಎಂದರೆ ದೇವತೆಗಳಲ್ಲೆಲ್ಲ ಒಳಹೊಕ್ಕು ಅಂತರ್ಯಾಮಿಯಾಗಿರುವವನು. ಭಿಷಕ್ ಎಂದರೆ ವೈದ್ಯನು ಸಂಸಾರವೆಂಬ ರೋಗಕ್ಕೆ ಮದ್ದನ್ನು ನೀಡುವ ವೈದ್ಯನಾಥನು ಕಾಮಾದಿಮನೋರೋಗಗಳು, ದುಃಖಾದಿಗಳು, ದಾರಿದ್ರ್ಯ - ಎಲ್ಲಕ್ಕೂ ಚಿಕಿತ್ಸಕನಾಗಿರುವವನು. ಇಂಥ ಪರಮೇಶ್ವರನನ್ನು ಅಧಿವಚನವನ್ನು ಆಡಬೇಕೆಂತ ಇಲ್ಲಿ ಕೇಳಿಕೊಳ್ಳಲಾಗಿದೆ.
ಇನ್ನು ಹೊರಗಿನ ಭಯಗಳಿಂದಲೂ ನಮ್ಮನ್ನು ಕಾಪಾಡಬೇಕೆಂತ ಪ್ರಾರ್ಥಿಸಲಾಗಿದೆ. ಹೇಗೆಂದರೆ : ಹಾವು, ಚೇಳು ಮುಂತಾದ ವಿಷಜಂತುಗಳು, ಭೂತಪ್ರೇತಪಿಶಾಚರಾಕ್ಷಸಾದಿಗಳು ಇವೆಲ್ಲವೂ ನಮಗೆ ಆಗಾಗ್ಗೆ ಭಯವನ್ನೂ ದುಃಖವನ್ನೂ ಉಂಟುಮಾಡುತ್ತಿರುವವು. ಇಂಥ ವಿಷಭಯಬಾಧಾದಿಗಳನ್ನೂ ಪರಿಹರಿಸಿ ಕಾಪಾಡಬೇಕೆಂತ ಭಕ್ತನು ಪರಮೇಶ್ವರನಲ್ಲಿ ಬೇಡಿಕೊಂಡಿರುತ್ತಾನೆ. 'ಶಿವಕವಚ'ದಲ್ಲಿ ಬರುವ 'ದುಃಸ್ವಪ್ನದುಶ್ಯಕುನ.........' ಎಂಬ ಶ್ಲೋಕವನ್ನು ಇಲ್ಲಿ ಅನುಸಂಧಾನಮಾಡಿಕೊಳ್ಳಬೇಕು. ನನಗೆ ಒದಗುವ ಕೆಟ್ಟಕನಸುಗಳು, ಶಕುನಗಳು, ದುರ್ಗತಿ, ಮನೋರೋಗ, ದುರ್ಭಿಕ್ಷ, ದುರ್ವ್ಯಸನಾದಿಗಳು, ಆಧ್ಯಾತ್ಮಿಕಾದಿತಾಪಗಳು, ವಿಷಭೀತಿ, ವ್ಯಾಧಿ - ಮುಂತಾದವುಗಳನ್ನು ಜಗದೊಡೆಯನಾದ ಭಗವಂತನು ನಾಶಮಾಡಲಿ ! ಎಂದು ಅಲ್ಲಿ ಬೇಡಿದೆ. ಅದನ್ನೇ ಇಲ್ಲಿಯೂ ನೆನಪುಮಾಡಿಕೊಳ್ಳಬೇಕು.
ಸ ದೃಷ್ಟೋ ಮೃಡಯಾತಿ ನಃ ಈಗ ಏಳನೆಯ ಮಂತ್ರವನ್ನು ವಿಚಾರಮಾಡಬೇಕಾಗಿದೆ. ಈ ಮಂತ್ರದಲ್ಲಿ ಸಕಲಕರ್ಮಸಾಕ್ಷಿಯಾದ ಆದಿತ್ಯಾತ್ಮಕನಾದ ರುದ್ರನನ್ನು ಪ್ರಾರ್ಥಿಸಿದೆ. ಹೇಗೆಂದರೆ :
ಅಸೌ ಯಸ್ತಾಮ್ರೋ ಅರುಣ ಉತ ಬಭ್ರಸ್ಸುಮಂಗಲಃ |
ಯೇ ಚೇಮಾಗ್ಂ ರುದ್ರಾ ಅಭಿತೋ ದಿಕ್ಷು ಶ್ರಿತಾಸ್ಸಹಸ್ರಶೋವೈಷಾಗ್ಂ ಹೇಡ ಈಮಹೇ ||7||
'ಹಿಂದೆ ಸ್ತುತಿಸಲ್ಪಟ್ಟ ಆ ರುದ್ರನೇ ಈಗ ಎದುರಿಗೆ ಕಂಡುಬರುತ್ತಿರುವ ಕೆಂಪುವರ್ಣದ ನಸುಗೆಂಪಿನ ವರ್ಣದ ಹಾಗೂ ಹಳದಿಯ ಬಣ್ಣದವನಾಗಿ ತೋರುತ್ತಿರುವ ಬಭ್ರವೆಂಬ ಮಂಗಲಕರನಾದ ಆದಿತ್ಯನಾಗಿರುತ್ತಾನೆ. ಈ ಭೂಮಿಯನ್ನು ಎಲ್ಲೆಲ್ಲೂ ಸುತ್ತುವರೆದಿರುವ ಸಹಸ್ರಾರುಸಂಖ್ಯೆಯ ಯಾವ ರುದ್ರರಿರುವರೋ ಅಂಥವರೆಲ್ಲರೂ ಒಂದಾಗಿ ಸೇರಿರುವ ಈ ಆದಿತ್ಯನೆಂಬ ರುದ್ರನನ್ನು ನಾವು ವಿಹಿತಾಕರಣನಿಷಿದ್ಧಸೇವೆಗಳೆಂಬ ಅಪಚಾರಗಳಿಂದ ಉಂಟಾದ ಕೋಪದಿಂದ ಸಮಾಧಾನಗೊಳಿಸಿ ಸ್ತುತಿನಮಸ್ಕಾರಗಳಿಂದ ಭಜಿಸುವೆವು.' ಈ ಮಂತ್ರದಲ್ಲಿ ಪರಮೇಶ್ವರನ ಅಷ್ಟಮೂರ್ತಿಗಳಲ್ಲಿ ಪ್ರಸಿದ್ಧವಾದ ಪ್ರತ್ಯಕ್ಷಮೂರ್ತಿಯಾದ ಆದಿತ್ಯನನ್ನು ಸ್ತುತಿಸಲಾಗಿದೆ. ಆದಿತ್ಯನು ತ್ರಿಮೂರ್ತ್ಯಾತ್ಮಕನೆಂದು ಪುರಾಣಗಳಲ್ಲಿ ಹೊಗಳಿದೆ. ಶಿವಪುರಾಣದಲ್ಲಿ ಆದಿತ್ಯನನ್ನು ರುದ್ರನ ಶರೀರವೆಂದೇ ವರ್ಣಿಸಿದೆ. ಅಂತೂ ಆದಿತ್ಯನೆಂಬುವನು ಪ್ರತ್ಯಕ್ಷರುದ್ರನು - ಎಂದಾಯಿತು. ಸೂರ್ಯನು ಉದಯಿಸುವಾಗ ಕೆಂಪಾಗಿರುವನು. ಅನಂತರ ಹೊಂಬಣ್ಣನಾಗಿರುವನು. ಅಸ್ತಮಿಸುವಾಗ ಪಿಂಗಳ (ನಸುಗೆಂಪಿನ) ವರ್ಣನಾಗುವನು. ಬಭ್ರುವೆಂದರೂ ಪಿಂಗಳನೆಂದೇ ಅರ್ಥ. ಈ ಆದಿತ್ಯನು ಸುಮಂಗಳನು ಏಕೆಂದರೆ ಸೂರ್ಯನು ಉದಯಿಸದಿದ್ದರೆ ಪ್ರಪಂಚವೆಲ್ಲ ಕತ್ತಲೆಯಲ್ಲೇ ಮುಳುಗಿ ಅಮಂಗಳವಾಗಿ ಅದೀತು ಆದ್ದರಿಂದ ಸುಮಂಗಳಸ್ವರೂಪನಾದ ಆದಿತ್ಯನು ತನ್ನ ಪ್ರಕಾಶದಿಂದ ಎಲ್ಲವನ್ನೂ ಬೆಳಗುತ್ತಾ ಎಲ್ಲಕ್ಕೂ ಸಾಕ್ಷಿಯಾಗಿರುವನು. ಪ್ರಾಣಿಗಳು ಮಾಡುತ್ತಿರುವ ಎಲ್ಲಾ ಕರ್ಮಗಳನ್ನೂ ನೋಡುತ್ತಿರುವನು. ಯಾರು ಯಾವ ಕರ್ಮವನ್ನೇ ಮಾಡಲಿ ಅದು ಒಳ್ಳೆಯದಾಗಿರಲಿ ಕೆಟ್ಟದಾಗಿರಲಿ ಹಗಲಿನಲ್ಲಿ ಮಾಡಿದಾಗ ಸೂರ್ಯನಿಗೆ ಗೊತ್ತಾಗಿಯೇ ತೀರುವದು ರಾತ್ರೆಯಲ್ಲಿಯೂ ಸೂರ್ಯನು ಮರೆಯಾಗಿದ್ದರೂ ಅವನ ಶಾಖವಿದ್ದೇ ಇರುವದರಿಂದ ಆಗಲೂ ಅವನು ಕರ್ಮಗಳಿಗೆ ಸಾಕ್ಷಿಯಾಗಿಯೇ ಇರುವನು. ಹೀಗೆ ಸರ್ವಕಾಲದಲ್ಲಿಯೂ ಸರ್ವದೇಶದಲ್ಲಿಯೂ ಇದ್ದುಕೊಂಡಿರುವ ಸೂರ್ಯನ ಜೊತೆಗೆ ನಮ್ಮ ಕರ್ಮಗಳನ್ನು ನೋಡಲು ಈ ಭೂಮಿಯಲ್ಲಿ ಅದೃಶ್ಯರಾದ ರುದ್ರರೆಂಬ ದೇವತೆಗಳೂ ಇದ್ದುಕೊಂಡಿರುವರು. ಇವರು ಸಾವಿರಾರು ಸಂಖ್ಯೆಯಲ್ಲಿದ್ದು ಪೂಜ್ಯನಾದ ಆದಿತ್ಯನೊಡನೆಯೇ ಒಂದಾಗಿರುವರು ಹೀಗಿರುವಾಗ ಮಾನವನು ಇವರೆಲ್ಲರಿಗೂ ಕಾಣದಂತೆ ಪಾಪವನ್ನು ಮಾಡಿ ತಪ್ಪಿಸಿಕೊಳ್ಳುವೆನೆಂಬುದು ಅಸಾಧ್ಯವಾದ ಮಾತೇ ಸರಿ ಅಂತೂ ಮನುಷ್ಯನ ಪಾಪಕರ್ಮಗಳಿಂದ ಈ ದೇವತೆಗಳಿಗೆ ಕೋಪವು ಉಂಟಾಗುವದು ಸಹಜವಾಗಿದೆ ಆದ್ದರಿಂದ ಪ್ರತಿದಿನವೂ ನಾವು ಸ್ತೋತ್ರ, ನಮಸ್ಕಾರ, ಪೂಜಾದಿಗಳಿಂದ ಆದಿತ್ಯನೇ ಮುಂತಾದ ಎಲ್ಲಾ ರುದ್ರದೇವತೆಗಳನ್ನೂ ಸಂತೋಷಗೊಳಿಸುತ್ತಿರಬೇಕು ಮತ್ತು ಆಯಾ ದಿನದಂದು ಮಾಡಿದ ಪಾಪಗಳನ್ನು ಪೂಜಾದ್ಯನುಷ್ಠಾನುರೂಪವಾದ ಪುಣ್ಯಕರ್ಮಗಳಿಂದ ಕಳೆದುಕೊಂಡು ರುದ್ರನ ಪ್ರಸಾದಕ್ಕೆ ಪಾತ್ರರಾಗಬೇಕು ಎಂದು ಇಲ್ಲಿ ತಿಳಿಸಿದೆ.
ಈ ರೀತಿಯಾಗಿ ರುದ್ರನನ್ನು ಸಮಾಧಾನಮಾಡಿದ ಅನಂತರ ಮುಂದಿನ ಮಂತ್ರದಲ್ಲಿ ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥನೆಮಾಡಿದೆ. ಹೇಗೆಂದರೆ :
ಅಸೌ ಯೋವಸರ್ಪತಿ ನೀಲಗ್ರೀವೋ ವಿಲೋಹಿತಃ |
ಉತೈನಂ ಗೋಪಾ ಅದೃಶನ್ನದೃಶನ್ ಉದಹಾರ್ಯಃ |
ಉತೈನಂ ವಿಶ್ವಾಭೂತಾನಿ ಸ ದೃಷ್ಟೋ ಮೃಡಯಾತಿ ನಃ ||8||
'ಯಾವ ನೀಲಗ್ರೀವನೂ ವಿಶೇಷವಾಗಿ ಕೆಂಪಾಗಿರುವವನೂ ಆದ ಈ ಸಂಚರಿಸುವ ಆದಿತ್ಯ(ರೂಪನಾದ ರುದ್ರನೆಂಬುವ)ನಿದಾನಲ್ಲ, ಇವನನ್ನು ದನಕಯುವವರೂ ನೀರುತರುವವರೂ ನೊಡಿರುತ್ತಾರೆ. ಮತ್ತು ಗೋವು, ಎಮ್ಮೆ ಮುಂತಾಗಿ ಎಲ್ಲಾ ಪ್ರಾಣಿಗಳೂ ಕಂಡಿರುವವು. ಹೀಗೆ ಎಲ್ಲರಿಗೂ ಕಂಡುಬಂದಿರುವ ಆತನೇ ಧ್ಯಾನಮಾಡಿದವರನ್ನು ಸುಖಗೊಳಿಸುವವನಾಗಿರುವನು.'
ಈ ಮಂತ್ರದಲ್ಲಿ ಭಗವಾನ್ ರುದ್ರನು ಎಲ್ಲರಿಗೂ ಚಿರಪಚಿತನೆಂದು ತಿಳಿಸಿದೆ. ಹೇಗೆಂದರೆ : ಸೂರ್ಯರೂಪದಿಂದ ಲೋಕವನ್ನೆಲ್ಲ ಬೆಳಗುತ್ತಿರುವ ಈತನನ್ನು 'ನಾವು ಕಾಣೆವು' ಎಂದು ಕುರುಡರನ್ನು ಬಿಟ್ಟರೆ ಉಳಿದವರು ಯಾರೂ ಹೇಳುವಂತಿಲ್ಲ. ಇವನು ಎಷ್ಟು ಸುಲಭನೆಂದರೆ ದನಗಳನ್ನು ಕಾಯುವ ಗೋಪಾಲಕರೂ ನೀರನ್ನು ತರುವ ಹೆಂಗಸರೂ ಈತನನ್ನು ಬಲ್ಲರು - ಎಂದು ಶ್ರುತಿಯು ತಿಳಿಸುತ್ತದೆ. ಗೋಪಾಲಕರೆಂದರೆ ತೀರ ಅಜ್ಞರು ಎಂದರ್ಥ ಏನೊಂದು ವಿದ್ಯಾಬುದ್ಧಿಗಳಿಲ್ಲದೆ ದನಕರುಗಳನ್ನು ಮೇಯಿಸುತ್ತಾ ಅಲ್ಲಲ್ಲಿ ತಿರುಗುತ್ತಿರುವವರು ಯಾವ ತಿಳಿವಳಿಕೆಯಾಗಲಿ ಶಾಸ್ತ್ರಪಾಂಡಿತ್ಯವಾಗಲಿ ಇಲ್ಲದವರೆಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹಾಗೆಯೇ ಮನಗೆಲಸಮಾಡುವ, ನೀರನ್ನು ತರುವ ಪ್ರಾಕೃತಸ್ತ್ರೀಯರು ಸಹ ಅಜ್ಞರೆಂಬುದು ಪ್ರಸಿದ್ಧವು. ಆದರೆ ಇಂಥವರೂ ಕೂಡ 'ನಾವು ಸೂರ್ಯನನ್ನು ನೋಡಿಲ್ಲ' ಎನ್ನಲಾರರು; ಎಂದರೆ ರುದ್ರನು ಇಷ್ಟು ಸುಲಭವಾಗಿ ಎಲ್ಲರಿಗೂ ದೊರಕುವನು - ಎಂದಭಿಪ್ರಾಯ. ಈ ಸೂರ್ಯರೂಪದಿಂದ ಭಗವಂತನಾದರೂ ಏಕೆ ಸಂಚರಿಸುತ್ತಾನೆಂದರೆ : ಲೋಕದ ಪ್ರಯೋಜನಕ್ಕಾಗಿಯೇ ಹೊರತು ಬೇರೆಯಲ್ಲ ಜೀವರಿಗೆಲ್ಲ ಕಾಲಗಣನೆ, ಶಾಖ, ಮಳೆ, ಬೆಳಕು - ಮುಂತಾದ ಸೌಕರ್ಯಗಳನ್ನು ಒದಗಿಸಿಕೊಟ್ಟು ಎಲ್ಲರಿಗೂ ಸಮಾನವಾಗಿ ತೋರಿಕೊಂಡು ಅನುಗ್ರಹಿಸುತ್ತಿರುವವನು ಸೂರ್ಯನು ಅವನಿಗೆ ಬಡವ-ಬಲ್ಲಿದರೆಂಬ ಭೇದವಿಲ್ಲ ಅರಮನೆಯನ್ನು ಬೆಳಗುವಂತೆಯೇ ಬಡವನ ಗುಡಿಸಲನ್ನೂ ತನ್ನ ಕಿರಣಗಳಿಂದ ಅಷ್ಟೇ ಚೆನ್ನಾಗಿ ಬೆಳಗುತ್ತಾನೆ. ಸೂರ್ಯನು ಉದಯಿಸಿದನೆಂದರೆ ಸಾಕು ಎಲ್ಲರೂ ಸಂತೋಷಪಡುವರು ಇಂಥ ಜಗದಾಧಾರನಾದ ಸೂರ್ಯನ ರೂಪದಿಂದ ತೋರಿಕೊಂಡು ಎಲ್ಲರಿಗೂ ದರ್ಶನವನ್ನು ಕೊಡುತ್ತಿರುವವನು ರುದ್ರನೇ ಎಂದಭಿಪ್ರಾಯ.
ಪರಮೇಶ್ವರನು ತನ್ನ ವಿಭೂತಿಮಹಿಮಾಯುಕ್ತವಾದ ಒಂದಾನೊಂದು ಅಸಾಧಾರಣರೂಪದಿಂದಲೂ ಭಕ್ತರಿಗೆ ಕೈಲಾಸವೆಂಬ ಸ್ಥಾನದಲ್ಲಿ ದರ್ಶನವೀಯುತ್ತಿರುವನು. ಆ ರೂಪವು ಹೇಗಿರುವದೆಂದರೆ : ನೀಲಗ್ರೀವನೇ ಮುಂತಾದ ವಿಶೇಷಗಳಿಂದ ಕೂಡಿದ್ದಾಗಿದೆ. ಆತನು ಕಾಲಕೂಟವಿಷವನ್ನು ನುಂಗಿದ್ದರಿಂದ ಕಪ್ಪಾದ ಕಂಠವುಳ್ಳವನಾಗಿದ್ದಾನೆ. ಚಂದ್ರನನ್ನು ಗಂಗೆಯನ್ನೂ ಜಟೆಯಲ್ಲಿ ಧರಿಸಿದ್ದಾನೆ. ನಾಗಾಭರಣಗಳಿಂದ ಭೂಷಿತನಾಗಿದ್ದಾನೆ. ಗಜ ಚರ್ಮವನ್ನು ಹೊದ್ದಿದ್ದಾನೆ. ತ್ರಿಶೂಲ, ಡಮರು, ಪಾಶಾಂಕುಶಾದಿ ಆಯುಧಗಳನ್ನು ಧರಿಸಿದ್ದಾನೆ. ವೃಷಭವಾಹನನೂ ಪಾರ್ವತೀಪತಿಯೂ ಪ್ರಮಥಾದಿಗಣಸೇವಿತನೂ ಆಗಿದ್ದು ದೇವತೆಗಳಿಂದಲೂ ಋಷಿಮುನಿಗಳಿಂದಲೂ ಸ್ತೋತ್ರಮಾಡಲ್ಪಡುತ್ತಾ ಸರ್ವಜ್ಞನೂ, ಸರ್ವೇಶ್ವರನೂ ಆಗಿ ಮಹಾದೇವನಾಗಿ ವಿರಾಜಿಸುತ್ತಿರುವನು. ಈತನೇ ಯೋಗಿಗಳಿಗೆ ಸಚ್ಚಿದಾನಂದ ಸ್ವರೂಪನಾದ ಆತ್ಮನಾಗಿ ತೋರುತ್ತಿರುವನು ಇಂಥ ಸಗುಣರೂಪವನ್ನೂ ನಿರ್ಗುಣಸ್ವರೂಪವನ್ನೂ ತಾನೊಬ್ಬನೇ ಧರಿಸಿದ್ದಾನಾದರೂ ಇವನ ದರ್ಶನವಾಗಬೇಕಾದರೆ ಉಪಾಸಕರಿಗಾಗಲಿ ಯೋಗಿಗಳಿಗಾಗಲಿ ಸಾಧ್ಯವೇ ಹೊರತು ಸಾಮಾನ್ಯರಿಗೆ ಈ ಎರಡು ಸ್ವರೂಪಗಳೂ ದುರ್ಲಭವು. ಇದನ್ನು ಅರಿತ ಪರಮೇಶ್ವರನು ಜೀವರುಗಳ ಮೇಲಿನ ದಯೆಯಿಂದ ಯಾವ ಸಾಧನವೂ ಇಲ್ಲದ ಪ್ರಾಕೃತರಿಗೂ ತಾನು ಗೋಚರನಾಗಬೇಕೆಂದು ಬಯಸಿ ಆದಿತ್ಯರೂಪದಿಂದ ತೋರಿಕೊಂಡು ಎಲ್ಲರನ್ನೂ ಉದ್ಧರಿಸುತ್ತಿರುವನು. ಎಂಥ ಆಶ್ಚರ್ಯವಿದು? ಎಂದು ಪರಮೇಶ್ವರನ ದಯಾಮಯತ್ವವನ್ನು ಇಲ್ಲಿ ಕೊಂಡಾಡಿದೆ. ಹೀಗೆ ಕಾಣಲ್ಪಡುವ ಆ ಭಗವಂತನು ನಮ್ಮನ್ನು ಸುಖವಾಗಿ ಕಾಪಾಡಲಿ! ನಮ್ಮೆಲ್ಲರಿಗೂ ಆನಂದವನ್ನು ಕೊಡಲಿ! ಎಂದು ಇಲ್ಲಿ ಬೇಡಿಕೊಂಡಿದೆ.
ಈ ಮಂತ್ರವು ಅನಾವೃಷ್ಟಿಪರಿಹಾರಕವೆಂದು ಮಂತ್ರಶಾಸ್ತ್ರಗಳಲ್ಲಿ ಹೇಳಿದೆ. ಈ ಮಂತ್ರಕ್ಕೆ ಆದಿತ್ಯರೂಪಿಯಾದ ರುದ್ರನೇ ದೇವತೆಯು ಯಾವನೇ ಆಗಲಿ ಪ್ರಾಯಶ್ಚಿತ್ತಪೂರ್ವಕವಾಗಿ ಶುದ್ಧಿಯನ್ನು ಮಾಡಿಕೊಂಡು ಹದಿನಾರುವರ್ಷಗಳಕಾಲ ನಿರಂತವಾಗಿ ಜಪಿಸಿದರೆ ಮಂತ್ರಸಿದ್ಧಯಾಗುವದು. ಅನಾವೃಷ್ಟಿಯನ್ನೂ ಇದರಿಂದ ಪರಿಹರಿಸಬಹುದು - ಎಂದು ಶಾಸ್ತ್ರದಲ್ಲಿ ತಿಳಿಸಿದೆ. ಸಾಧಕನಾದವನು ಈ ಮಂತ್ರದಿಂದ ಸೂರ್ಯನನ್ನು ಪ್ರಾರ್ಥಿಸಿ ಆರೋಗ್ಯವೇ ಮುಂತಾದ ಇಷ್ಟಾರ್ಥಸಿದ್ಧಿಯನ್ನೂ ಪಡೆಯಬಹುದಾಗಿದೆ. ಸೂರ್ಯರೂಪದಿಂದ ಪ್ರತಿದಿನವೂ ನಮಗೆ ದಶ್ನವೀಯುತ್ತಿರುವ ರುದ್ರನನ್ನು ವೇದವು ಬಹಳವಾಗಿ ಹೊಗಳುತ್ತಿದೆಯಾದರೂ ನಮಗೆ ಮಾತ್ರ ಇನ್ನೂ ಭಕ್ತಿಯು ಬಂದಿಲ್ಲ ಇದಕ್ಕೆ ಕಾರಣ ನಮ್ಮ ಔದಾಸೀನ್ಯ ಯಾವದು ಅಪರಿಮಿತವಾಗಿದೆಯೋ ಅದರ ವಿಷಯಕ್ಕೆ ಜನರಿಗೆ ಅನಾದರವು ಹೆಚ್ಚು ; ಹಾಗಾಗಬಾರದು ಜಗಜ್ಜ್ಯೋತಿಯಾದ ಸೂರ್ಯನೆಂಬ ರುದ್ರನನ್ನು ನಾವು ನಿಷ್ಠೆಯಿಂದ ಆರಾಧಿಸಿ ಕೃತಾರ್ಥರಾಗಬೇಕು.
ಅಹಂ ತೇಭ್ಯೋಕರಂ ನಮಃಈಗ ಒಂಭತ್ತನೆಯ ಮಂತ್ರವನ್ನು ವಿಚಾರಮಾಡೋಣ :
ನಮೋ ಅಸ್ತುನೀಲಗ್ರೀವಾಯ ಸಹಸ್ರಾಕ್ಷಾಯ ಮೀಢುಷೇ |
ಅಥೋ ಯೇ ಅಸ್ಯ ಸತ್ವಾನೋsಹಂ ತೇಭ್ಯೋsಕರಂ ನಮಃ ||9||
'ನೀಲಗ್ರೀವನೂ ಸಹಸ್ರಾಕ್ಷನೂ, ಭಕ್ತರ ಕಾಮಗಳನ್ನು ಮಳೆಗೆರೆಯುವವನೂ ಆದ (ರುದ್ರನಿಗೆ) ನಮಸ್ಕಾರವು. ಮತ್ತು ಇವನ ಗೃಹದಲ್ಲಿರುವ (ಸಮಿಪದಲ್ಲಿರುವ) ಯಾವ ಪ್ರಮಥಗಣಗಳಿರುವರೋ ಅವರುಗಳಿಗೆ ನಾನು ನಮಸ್ಕರಿಸುವೆನು.' ಈ ಮಂತ್ರದಲ್ಲಿ ಭೂಕೈಲಾಸಮೂರ್ತಿಯಾದ ನೀಲಕಂಠಮೂರ್ತಿಯನ್ನು ಸ್ತೋತ್ರಮಾಡಿದೆ. ನೀಲಗ್ರೀವನೆಂದರೆ ವಿಷಪಾನದಿಂದ ಕಪ್ಪಾದ ಕಂಠವುಳ್ಳವನು ಪರಮೇಶ್ವರನು ಸಮುದ್ರಮಂಥನಕಾಲದಲ್ಲಿ ಹುಟ್ಟಿದ 'ಹಾಲಾಹಲ'ವೆಂಬ ವಿಷವನ್ನು ಲೋಕಕಲ್ಯಾಣಕ್ಕಾಗಿ ಕುಡಿದು ತನ್ನ ಹಿರಿಮೆಯನ್ನೂ ಆದರ್ಶವನ್ನು ತೋರಿಸಿರುತ್ತಾನೆ. ವಿದ್ವಾಂಸನಾದವನು ಪ್ರಪಂಚದಲ್ಲಿ ಕಂಡುಬರುವ ಗುಣದೋಷಗಳನ್ನು ಪರಮೇಶ್ವರನಂತೆ ಸ್ವೀಕರಿಸಬೇಕು; ಎಂದರೆ ಭಗವಂತನು ಚಂದ್ರನನ್ನು ತಲೆಯಮೇಲೆ ಹೊತ್ತು ಮೆರೆಸುವಂತೆ ಮತ್ತೊಬ್ಬರ ಗುಣಗಳನ್ನು ಎತ್ತಿ ಆಡಬೇಕು. ದೋಷಗಳನ್ನೂ ಎಂದರೆ - ವಿಷವನ್ನು ಕಂಠದಲ್ಲೇ ತಡೆದಿಟ್ಟಿರುವಂತೆ - ಗೋಪ್ಯವಾಗಿಯೇ ಇಡಬೇಕು; ಹೊರಹಾಕಬಾರದು ಈ ನೀತಿಯನ್ನು ನೀಲಕಂಠಮೂರ್ತಿಯು ತಿಳಿಸುತ್ತಿದ್ದಾನೆ ಮತ್ತು ಈತನು ಸಹಸ್ರಾಕ್ಷನು, ಅಪರಿಮಿತವಾದ ಕಣ್ಣುಗಳುಳ್ಳವನು - ಎಂದರೆ ಅಪರಿಚ್ಛಿನ್ನವಾದ ದೃಷ್ಟಿಯುಳ್ಳವನು - ಎಂದಭಿಪ್ರಾಯ ಇದರಿಂದ ತಿಳಿಯಬರುವದೇನೆಂದರೆ ಭಗವಂತನು ಕೈಲಾಸದಲ್ಲೇ ವಾಸವಾಗಿದ್ದರೂ ಅವನ ದೃಷ್ಟಿಯು ಮಾತ್ರ ಎಲ್ಲೆಲ್ಲೂ ಪಸರಿಸಿರುವದರಿಂದ ನಾವು ಭೂಲೋಕದಲ್ಲಿ ಮಾಡುವ ಪೂಜಾ ನಮಸ್ಕಾರಾದಿಗಳೂ ಅವನ ದೃಷ್ಟಿಗೋಚರವೇ ಆಗುತ್ತವೆ ಎಂದಾಗುತ್ತದೆ ಮತ್ತು ಭಗವಂತನು ಮಿಢುಷನು - ಎಂದರೆ ನಮಸ್ಕಾರಮಾಡುವ ಭಕ್ತರ ಕಾಮಗಳನ್ನು ಪರಿಪೂರ್ಣಗೊಳಿಸುವವನು ಇಂಥವನಿಗೆ ನಮಸ್ಕಾರವು ಎಂದಭಿಪ್ರಾಯ.
ಇನ್ನು ಭಗವಂತನ ಸಮಿಪದಲ್ಲಿಯೇ ಪ್ರಮಥರೆಂಬ ಗಣದೇವತೆಗಳಿದ್ದಾರಷ್ಟೆ! ಅವರಿಗೂ ವಂದನೆಗಳು ಸತ್ವಾನರು ಎಂದರೆ ಸಮೀಪಸ್ಥರು - ಎಂದರ್ಥ ಶ್ರುತಿಯಲ್ಲಿ 'ದಿವ್ಯಾ ಗಣಾ ಬಹುರೂಪಾಃ ಪುರಾಣಾಃ' ಎಂದು ಇವರುಗಳನ್ನು ಹೊಗಳಿದೆ ಮಹಾಭಾರತದಲ್ಲಿಯೂ "ಬೇಕಾದ ಕೆಲಸವನ್ನು ಮಾಡುವ ಸಾಮಾರ್ಥ್ಯವುಳ್ಳ ಸಿದ್ಧರಾದ ಮೂರುಲೋಕಗಳ ಐಶ್ವರ್ಯಕ್ಕೂ ಒಡೆಯರಾದ ಸದಾ ಸಂತೋಷದಿಂದ ಇದ್ದುಕೊಂಡಿರುವ ಹಸನ್ಮುಖರಾದ ವಾಕ್ಕುಗಳಿಗೆ ಅಧಿಪತಿಗಳಾಗಿಯೂ ಮಾತ್ಸರ್ಯವಿಲ್ಲದವರಾಗಿಯೂ ಇರುವ ಈ ಗಣದೇವತೆಗಳು ಅಣಿಮಾದ್ಯೈಶ್ವರ್ಯಗಳನ್ನು ಪಡೆದಿದ್ದರೂ ತಮ್ಮಸಿದ್ಧಿಗಳಿಂದ ಸ್ವಲ್ಪವೂ ಆಶ್ಚರ್ಯಗೊಳ್ಳದೆ ಇರುವರು ಪೂಜ್ಯನಾದ ಪರಮೇಶ್ವರನು ಇಂಥವರ ಅದ್ಭುತಕರ್ಮಗಳಿಂದ ಅಚ್ಚರಿಯನ್ನು ಹೊಂದುವನು ಮತ್ತು ಇವರುಗಳು ವಿದ್ಯೆಯಲ್ಲಿಯೂ ಬ್ರಹ್ಮಚರ್ಯೆ ತಪಸ್ಸು ದಮೆ ಇವುಗಳಲ್ಲಿಯೂ ಪೂರ್ಣಪರಿಶ್ರಮವುಳ್ಳವರಾಗಿದ್ದು ಶಿವಸಾಯುಜ್ಯವನ್ನು ಹೊಂದಿರುವ ಪುಣ್ಯಶೀಲರು" ಎಂದು ವರ್ಣಿಸಿದೆ ಇಂಥ ಗಣದೇವತೆಗಳಿಗೂ ನಾನು ನಮಸ್ಕರಿಸುವೆನು - ಎಂದಭಿಪ್ರಾಯ. ಈ ಮಂತ್ರವು ಸತ್ಪುತ್ರರನ್ನು ಕೊಡತಕ್ಕದೆಂದು ಬಲ್ಲವರು ತಿಳಿಸಿದ್ದಾರೆ.
ಪ್ರಮುಂಚ ಧನ್ವನಸ್ತ್ವಮುಭಯೋರಾರ್ತ್ನಿಯೋರ್ಜ್ಯಾಮ್ |
ಯಾಶ್ಚತೇ ಹಸ್ತ ಇಷವಃ ಪರಾ ತಾ ಭಗವೋ ವಪ ||10||
'ಎಲೈ ಭಗವಂತನೆ, ನಿನ್ನ ಬಿಲ್ಲಿನ ತುದಿಗಳನ್ನು ಅಲ್ಲಿಗೆ ಬಿಗಿದಿರುವ ಮೌರ್ವಿ(ಹಗ್ಗ)ಗಳಿಂದ ಬಿಡಿಸಿ ಶಿಥಿಲಗೊಳಿಸುವವನಾಗು ಮತ್ತು ನಿನ್ನ ಕೈಯಲ್ಲಿರುವ ಬಾಣಗಳನ್ನು ಪರಾಙ್ಮುಖವಾಗಿ ಮಾಡುವವನಾಗು.' ಇಲ್ಲಿಂದ ಮುಂದಕ್ಕೆ ಆರು ಮಂತ್ರಗಳಿಂದ ಆಯುಧಗಳನ್ನು ಉಪಸಂಹಾರಮಾಡಿಕೊಳ್ಳುವಂತೆ ಭಗವಂತನನ್ನು ಪ್ರಾರ್ಥಿಸಿದೆ. 'ಶಿವಾಂ ಗಿರಿತ್ರ...' ಎಂಬ ಮಂತ್ರದಲ್ಲಿಯೇ ಹಿಂದೆಯೇ ಈ ಪ್ರಾರ್ಥನೆಯನ್ನು ಮಾಡಿದ್ದರೂ ಹೆಚ್ಚಿನ ಭಯದಿಂದ ಕೂಡಿರುವ ಸಾಧಕನು ಮತ್ತೊಮ್ಮೆ ಕೇಳಿಕೊಂಡಿದ್ದಾನೆಂದು ಭಾವಿಸಬೇಕು. ಜ್ಞಾನಶಕ್ತಿಬಲೈಶ್ವರ್ಯಾದಿಗುಣಸಂಪನ್ನನಾದ ಭಗವಂತನು ತನ್ನ ಧನುಸ್ಸಿನ ಹಗ್ಗವನ್ನು ಸಡಿಲಗೊಳಿಸಲು ತಾನೊಬ್ಬನೇ ಸಮರ್ಥನೇ ಹೊರತು ಬೇರೆ ಯಾರಿಂದಲೂ ಅದು ಸಾಧ್ಯವಾಗಲಾರದು. ಧನುಸ್ಸನ್ನು ಸಡಿಲಗೊಳಿಸಿದರೆ ಮಾತ್ರ ರುದ್ರನು ಶಾಂತನಾದನೆಂದು ಗೊತ್ತಾಗುತ್ತದೆ ಅದಕ್ಕಾಗಿ ಇಲ್ಲಿ ಆತನನ್ನೇ ಹೀಗೆ ಪ್ರಾರ್ಥಿಸಿದೆ ಮತ್ತು ಧನುಸ್ಸನ್ನು ಶಿಥಿಲಗೊಳಿಸಿದ ಅನಂತರವೂ ಬಾಣಗಳು ಭಯವನ್ನುಂಟುಮಾಡಬಹುದಾದ್ದರಿಂದ ಅವುಗಳನ್ನು ಹಿಮ್ಮುಖವಾಗಿ (ಹಿಂದುಮುಂದಾಗಿ) ಮಾಡು ಎಂದೂ ಇಲ್ಲಿ ಕೇಳಿಕೊಳ್ಳಲಾಗಿದೆ.
ಅವತತ್ಯ ಧನುಸ್ತ್ವಗ್ಂ ಸಹಸ್ರಾಕ್ಷ ಶತೇಷುಧೇ |
ನಿಶೀರ್ಯ ಶಲ್ಯಾನಾಂ ಮುಖಾ ಶಿವೋ ನಃ ಸುಮನಾ ಭವ ||11||
'ಎಲೈ ಸಹಸ್ರಾಕ್ಷನೆ, ನೂರಾರು ಬತ್ತಳಿಕೆಗಳುಳ್ಳವನೆ, ನೀನು ಧನುಸ್ಸನ್ನು ಕೆಳಗಿಳಿಸಿ ಬಾಣಗಳ ಮುಖಗಳನ್ನು ಹಿಂತಿರುಗಿಸಿ ಬತ್ತಳಿಕೆಗೆ ಸೇರಿಸುವನಾಗಿ ನಮ್ಮಗಳ ವಿಷಯಕ್ಕೆ ಸಮನಸ್ಕನಾಗು.'
ಈ ಮಂತ್ರದಲ್ಲಿಯೂ ಬಾಣಗಳನ್ನು ಹಿಂತಿರುಗಿಸಿ ಮುಚ್ಚಿಡಬೇಕೆಂದು ಪ್ರಾರ್ಥಿಸಲಾಗಿದೆ. ಸಹಸ್ರಾಕ್ಷ, ಶತೇಷುಧೇ ಎಂಬ ವಿಶೇಷಣಗಳು ಭಗವಂತನು ಸಾಮಾನ್ಯರಾದ ಧನುರ್ಧಾರಿಗಳಂತೆ ಅಲ್ಲ - ಎಂದು ತಿಳಿಸುತ್ತವೆ. ಹೇಗೆಂದರೆ ಯಾವನಾದರೊಬ್ಬ ಬಿಲ್ಲುಗಾರನು ತನ್ನ ದೃಷ್ಟಿಗೆ ಯಾವ ಬೇಟೆಯೂ ಬೀಳದೆಹೋದಾಗ ಅಥವಾ ತನ್ನ ಬತ್ತಳಿಕೆಯಲ್ಲಿದ್ದ ಬಾಣಗಳು ಮುಗಿದುಹೋದಾಗ ತಾನಾಗಿಯೇ ಹಿಂತಿರುಗುತ್ತಾನೆ. ಆದರೆ ಭಗವಂತನ ವಿಷಯದಲ್ಲಿ ನಾವು ಹಾಗೆ ಭಾವಿಸುವಂತಿಲ್ಲ ಆತನು ಅಕ್ಷಯವಾದ ಬತ್ತಳಿಕೆಗಳುಳ್ಳವನು ಸರ್ವತ್ರ ದೃಷ್ಟಿಯುಳ್ಳವನು ತಾನಾಗಿಯೇ ಎಂದಿಗೂ ಹಿಂತಿರುಗುವ ಸಂಭವವಿಲ್ಲ ಆದ್ದರಿಂದ ಭಕ್ತನು ಬೇಡಿಕೊಂಡಲ್ಲಿ ಮಾತ್ರ ಅತನು ಪ್ರಸನ್ನನಾಗುವನು ಹೀಗೆ ಪ್ರಾರ್ಥನೆಯಿಂದ ಶಾಂತನಾದ ಆ ಮಹಾದೇವನನ್ನು ಮತ್ತೊಮ್ಮೆ ಭಕ್ತ್ಯತಿಶಯದಿಂದ 'ಎಲೈ ಶಿವನೆ, ನಮ್ಮಗಳ ವಿಷಯಕ್ಕೆ ಸಮನಸ್ಕನಾಗು' - ಎಂದು ಬೇಡಿಕೊಳ್ಳಲಾಗಿದೆ ಮತ್ತು ಮೇಲುಮೇಲಕ್ಕೆ ಸೌಮ್ಯಾಕಾರನಾಗಿದ್ದರೂ ಒಳಗೆ ಕುಪಿತನಾಗಿರಬಹುದಾದ್ದರಿಂದ 'ಸುಮನಾ ಭವ' ಎಂದು ಕೇಳಿಕೊಳ್ಳಲಾಗಿದೆ. ಶರಣಾಗತನಾದ ಈ ದೀನನನ್ನು ಅನುಗ್ರಹಿಸು; ದಯಾಪೂರ್ಣವಾದ ಹೃದಯದಿಂದ ನನ್ನನ್ನು ನೋಡು ಎಂದಭಿಪ್ರಾಯ.
ವಿಜ್ಯಂ ಧನುಃ ಕಪರ್ದಿನೋ ವಿಶಲ್ಯೋ ಬಾಣವಾಗ್ಂ ಉತ |
ಅನೇಶನ್ನಸ್ಯೇಷವ ಅಭುರಸ್ಯ ನಿಷಂಗಥಿಃ ||12||
ಕಪರ್ದಿಯಾದ (ಪರಮೇಶ್ವರನ) ಧನುಸ್ಸು ಜ್ಯಾ (ಹಗ್ಗ)ವಿಲ್ಲದ್ದಾಗಲೀ! ಬಾಣಗಳುಳ್ಳ (ಚೀಲವೂ) ವಿಶಲ್ಯ (ಬಾಣಗಳಿಲ್ಲದ್ದು)ವಾಲಿ! ಇವನ ಬಾಣಗಳು ಹೊಡೆಯುವದಕ್ಕೆ ತಕ್ಕದ್ದಲ್ಲದಂತಾಗಲಿ! ಮತ್ತು ಖಡ್ಗದ ಚೀಲವೂ ಅದನ್ನು ಧಾರಣೆಮಾಡುವಷ್ಟು ಮಾತ್ರ ಸಮರ್ಥವಾಗಲಿ!'
ಈ ಮಂತ್ರದಲ್ಲಿ ಬಾಣಗಳು ಪರಾಙ್ಮುಖವಾದರೂ ಸಾಲದು. ಅವು ಮರೆಯಾಗಿಯೇ ಬಿಡಲಿ! ಎಂದು ಪ್ರಾರ್ಥಿಸಿದೆ ಏಕೆಂದರೆ ಬಾಣಗಳು, ಧನುಸ್ಸು, ಖಡ್ಗ - ಮುಂತಾದ ಆಯುಧಗಳನ್ನು ನೋಡಿದರೇ ಹೆದರಿಕೆಯಾಗುತ್ತದೆ ಇನ್ನು ಉಪಯೋಗಿಸುವಂಥವನ ಹತ್ತಿರದಲ್ಲಿಯೇ ಅವುಗಳು ಇದ್ದರಂತೂ ಮತ್ತಷ್ಟು ಭಯವು ಹೆಚ್ಚಾಗುತ್ತದೆ ಆದ್ದರಿಂದ ಅವು ನಮಗೆ ಕಾಣದಂತೆ ಮರೆಯಾಗಿಯೇ ಇರಲಿ - ಎಂದು ಕೇಳಿಕೊಳ್ಳಲಾಗಿದೆ. ಇನ್ನು ನಿಷಂಗಥಿ ಎಂಬ ಶಬ್ದದಿಂದ ಇಲ್ಲಿ ಖಡ್ಗವನ್ನಿಡುವ ಚೀಲವನ್ನು ಪ್ರಸ್ತಾಪಿಸಲಾಗಿದೆ ಅದನ್ನು ಅಭುಃ ಈಷತ್ಪ್ರಭುಃ ಅಸ್ತು - ಎಂದು ಕೇಳಲಾಗಿದೆ ಎಂದರೆ ಆ ಚೀಲವು ಪರಮೇಶ್ವರನಿಗೆ ತನ್ನ ಆಯುಧಗಳನ್ನಿಡಲು ಉಪಯೋಗವಾಗುವಷ್ಟು ಮಾತ್ರ ಸಾಕು ಅದರಿಂದ ಖಡ್ಗವನ್ನು ಹೊರಗೆಳೆಯುವ ಪ್ರಸಂಗವು ಬಾರದಂತೆ ಕೇವಲ ಅಲಂಕಾರವಾಗಿರಲಿ! ಎಂದಭಿಪ್ರಾಯ.
ಆಯುಧಗಳನ್ನಿಟ್ಟುಕೊಂಡಮಾತ್ರದಿಂದ ಯಾವನೂ ಪರಮೇಶ್ವರನಿಗೆ ಸಮಾನನಾಗಲಾರನು ಏಕೆಂದರೆ ಯಾವಯಾವ ಆಯುಧಗಳನ್ನು ಹೇಗೆಹೇಗೆ ಎಷ್ಟರಮಟ್ಟಿಗೆ ಎಲ್ಲೆಲ್ಲಿ ಪ್ರಯೋಗಿಸಬೇಕೆಂಬುದು ಸರ್ವಜ್ಞನೂ ಸರ್ವಶಕ್ತನೂ ಆದ ಮಹಾದೇವನೊಬ್ಬನಿಗೇ ಗೊತ್ತಿರುತ್ತದೆ ಅಲ್ಲದೆ ಆಯುಧಗಳನ್ನು ಬಳಸುವ ಶಕ್ತಿಯೂ ಅವನೊಬ್ಬನಿಗೇ ಮಿಸಲಾಗಿದೆ ಇಂಥ ಶಸ್ತ್ರಧಾರಿಯು ಆತನು ಅಂತೂ ಈ ಮಂತ್ರಗಳಲ್ಲಿ ಆಯುಧಗಳ ಪ್ರಸ್ತಾಪವಿರುವದರಿಂದ ಭಗವಂತನ ಆಯುಧಗಳನ್ನು ಅವನ ಶಕ್ತಿಯ ಕುರುಹಾಗಿ ಭಾವಿಸಿ ಪೂಜಿಸಬೇಕೆಂದೂ ಏರ್ಪಡುತ್ತದೆ. ಮಹಾನವಮಿ ದಿನ ಮಾಡುವ ಆಯುಧ ಪೂಜೆಯ ರಹಸ್ಯವು ಇದೇ ಇರಬಹುದೆ?
ಅಸ್ಮಾನ್ ವೃಣಕ್ತು ವಿಶ್ವತಃ
ಮೊದಲನೆಯ ಅನುವಾಕದಲ್ಲಿ ಉಳಿದಿರುವ ಮೂರು ಮಂತ್ರಗಳನ್ನು ಈಗ ವಿಚಾರಮಾಡೋಣ :
ಯಾ ತೇ ಹೇತಿರ್ಮಿಢುಷ್ಟಮ ಹಸ್ತೇ ಬಭೂವ ತೇ ಧನುಃ |
ತಯಾಸ್ಮಾನ್ ವಿಶ್ವತಸ್ತ್ವಮಯಕ್ಷ್ಮಯಾ ಪರಿಬ್ಭುಜ ||13||
'ಎಲೈ ಮಿಢುಷ್ಟಮನೆ, ಯಾವ ನಿನ್ನ (ಕತ್ತಿಯೇ ಮುಂತಾದ) ಆಯುಧಳು ಇವೆಯೋ ಮತ್ತು ಕೈಯಲ್ಲಿರುವ ಧನುಸ್ಸುಂಟೋ ಅಯಕ್ಷ್ಮವಾದ ಅದರಿಂದ ನೀನು ನಮ್ಮನ್ನು ಎಲ್ಲಾ ಪಾಪಗಳಿಂದಲೂ ಕಾಪಾಡುವವನಾಗು.'
ಈ ಮಂತ್ರದಲ್ಲಿ ಭಗವಂತನನ್ನು ಮತ್ತೊಮ್ಮೆ ಮಿಢುಷ್ಟಮನೆಂದು ಸಂಬೋಧಿಸಿದೆ. ಹಿಂದಿನ ಮೂರು ಮಂತ್ರಗಳಲ್ಲಿ ಆಯುಧಗಳನ್ನು ಹಿಂತೆಗೆದುಕೊಳ್ಳುವಂತೆ ಪ್ರಾರ್ಥಿಸಲಾಗಿತ್ತು ಆದರೆ ರುದ್ರನು ಆಯುಧಗಳನ್ನು ಹಿಂತೆಗೆದುಕೊಂಡು ಸುಮ್ಮನೆ ಕುಳಿತುಬಿಟ್ಟರೆ ಆಪತ್ತಿನಿಂದ ನಮ್ಮನ್ನು ಕಾಪಾಡುವವರಾರು? ಅದಕ್ಕಾಗಿ ಇಲ್ಲಿ ತನ್ನನ್ನು ಅದೇ ಆಯುಧಗಳ ನೆರವಿನಿಂದ ಕಾಪಾಡಬೇಕೆಂದೂ ಭಕ್ತನು ಕೇಳಿಕೊಳ್ಳುತ್ತಿದ್ದಾನೆ. ಭಕ್ತರ ಎಲ್ಲಾ ಇಷ್ಟಾರ್ಥಗಳನ್ನೂ ಅನುಗ್ರಹಿಸಿ ಅನಿಷ್ಟಗಳನ್ನು ಪರಿಹರಿಸಿ ರಕ್ಷಿಸುವವನೇ ಮಿಢುಷ್ಟಮನು. ಆ ಭಗವಂತನನ್ನು ಕುರಿತು 'ಎಲೈ ಮಿಢುಷ್ಟಮನೆ, ನಿನ್ನಲ್ಲಿರುವ ಖಡ್ಗವೇ ಮುಂತಾದ ಆಯುಧಗಳು ಮತ್ತು ಕೈಯಲ್ಲೇ ಧರಿಸಿರುವ ಬಿಲ್ಲು, ಇವುಗಳ ವಿಷಯಕ್ಕೆ ಶಾಂತಿಯನ್ನು ನಾನು ಬಯಸಿದ್ದು ನನ್ನನ್ನು ಕ್ಷಮಿಸುವದಕ್ಕಾಗಿಯೂ ಮತ್ತು ಶತ್ರುಗಳಿಂದ ನನ್ನನ್ನು ಕಾಪಾಡುವದಕ್ಕಾಗಿಯೂ ಆಗಿದೆ; ಎಂದರೆ ನೀನು ಆಯುಧಗಳನ್ನು ಸನ್ನದ್ಧವಾಗಿಯೇ ಇರಿಸಿ ಎಲ್ಲಾ ದಿಕ್ಕುಗಳಿಂದಲೂ ನನಗೆ ಒದಗಬಹುದಾದ ಆಪತ್ತುಗಳಿಂದ ನನ್ನನ್ನು ಕಾಪಾಡು; ಮತ್ತು ಶತ್ರುಗಳೆಂಬವರು ನನ್ನ ಮನಸ್ಸೆಂಬ ಕಾಡಿನಲ್ಲಿಯೇ ಹೊಕ್ಕುಬಿಟ್ಟಿರುತ್ತಾರೆ ಅವರಿಂದ ನನ್ನನ್ನು ಬಿಡಿಸಿ ಪರಿಪಾಲನೆಮಾಡು - ಎಂದು ಅಭಿಪ್ರಾಯ ಶಿವಾನಂದಲಹರೀ - ಎಂಬ ಸ್ತೋತ್ರದಲ್ಲಿ ಒಬ್ಬ ಭಕ್ತನು ಮಾಡಿರುವ ಪ್ರಾರ್ಥನೆಯೊಂದನ್ನು ಇಲ್ಲಿ ಅನುಸಂಧಾನಮಾಡಿಕೊಳ್ಳಬಹುದು. ಅಲ್ಲಿ 'ಎಲೈ ಗಿರಿಶನೆ, ನೀನು ನನ್ನನ್ನು ಬಿಟ್ಟಗಲಬೇಡ ನನ್ನಲ್ಲಿಯೇ ವಾಸಮಾಡಿಕೊಂಡಿರು ನೀನು ಆದಿಕಿರಾತನೆಂದು ಪ್ರಸಿದ್ಧನಲ್ಲವೆ? ನಿನಗೆ ಬೇಕಾದಷ್ಟು ಬೇಟೆಯು ಈ ನನ್ನ ಮನಸ್ಸೆಂಬ ಕಗ್ಗಾಡಿನಲ್ಲಿಯೇ ದೊರೆಯಲಿದೆ ಮದ, ಮೋಹ, ಮಾತ್ಸರ್ಯಗಳೆಂಬ ಭಾರಿಭಾರಿಯ ಕ್ರೂರಮೃಗಗಳು ಇಲ್ಲಿ ಸೇರಿಕೊಂಡಿವೆ. ಇದರಿಂದ ನಾನು ಬಹಳ ಭಯಗೊಂಡಿರುವೆನು. ಅವುಗಳೆಲ್ಲವನ್ನೂ ನೀನು ಬೇಟೆಯಾಡಿಕೊಂಡು ಆನಂದವನ್ನು ಹೊಂದುವವನಾಗು' - ಎಂದು ವರ್ಣಿಸಿದೆ. ಅದರಂತೆ ಭಕ್ತನು ಇಲ್ಲಿ ಭಗವಂತನನ್ನು ಆಯುಧಗಳ ನೆರವಿನಿಂದ ಪರಿಪಾಲನೆಮಾಡು - ಎಂದು ಪ್ರಾರ್ಥಿಸಿರುತ್ತಾನೆ.
ನಮಸ್ತೇ ಅಸ್ತ್ವಾಯುಧಾಯಾನಾತತಾಯ ಧೃಷ್ಣವೇ |
ಉಭಾಭ್ಯಾಮುತ ತೇ ನಮೋ ಬಾಹುಭ್ಯಾಂ ತವ ಧನ್ವನೇ ||14||
'(ಎಲೈ ಭಗವಂತನೆ), ನಿನ್ನ ಆಯುಧಗಳಿಗೆ ನಮಸ್ಕಾರ! ಅವು ಹೊಡೆಯಲು ಎತ್ತಲ್ಪಡದೆ ಇರುವವೂ, ಆದರೆ, ಹೊಡೆಯುವ ಸಾಮರ್ಥ್ಯವುಳ್ಳವೂ ಆಗಿದೆಯಷ್ಟೆ! ಮತ್ತು ನಿನ್ನ ಎರಡು ಬಾಹುಗಳಿಗೂ ನಿನ್ನ ಧನುಸ್ಸಿಗೂ ನಮಸ್ಕಾರ!'
ಹೀಗೆ ಪ್ರಾರ್ಥನೆಮಾಡಿದಮೇಲೂ ಮತ್ತೆ ನಮಸ್ಕಾರಮಾಡಲು ಉಪಕ್ರಮಿಸಿದ ಭಕ್ತನ ಉದ್ಗಾರವಿದು: 'ಎಲೈ ಭಗವಂತನೆ, ನಿನ್ನ ಆಯುಧಗಳಿಗೆ ನಮಸ್ಕಾರ! ತೋಳುಗಳಿಗೂ ನಮಸ್ಕಾರ' - ಎಂದು ಹೆಚ್ಚಿನ ಭಯದಿಂದ ಕೂಡಿದವನಾಗಿ ಹೇಳುತ್ತಿದಾನೆ. 'ಬಾಹುಭ್ಯಾಮ್' ಎಂಬ ದ್ವಿವಚನವೇ ಎರಡು ತೋಳುಗಳೆಂದು ತಿಳಿಸುತ್ತದೆಯಾದರೂ 'ಉಭಾಭ್ಯಾಮ್' ಎಂದು ಮತ್ತೆ ವಿಶೇಷಣವಾಗಿ ಹೇಳಿರುವದು ಹೆದರಿಕೆಯ ನಿಮಿತ್ತದಿಂದಲೇ ಎಂದು ಅರ್ಥ ಮಾಡಬೇಕು. ಏಕೆಂದರೆ ಬಾಣವನ್ನು ಹೊಡೆಯಲು ಎತ್ತಿರುವ ತೋಳುಗಳನ್ನು ಕಂಡಾಗ ಎಂಥವನಿಗಾದರೂ ಭಯವುಂಟಾಗಿ ಮಾತುಗಳು ವ್ಯತ್ಯಾಸವಾಗಿ ಬಿಡುವವು. ಎಷ್ಟೇ ಸಿದ್ಧಮಾಡಿಕೊಂಡಾಗಲೂ ದೊಡ್ಡವರ ಸನ್ನಿಧಿಯಲ್ಲಿ ಮಾತನಾಡುವಾಗ ತಬ್ಬಿಬ್ಬಾಗುವದು. ಹಾಗೆ ಇಲ್ಲಿಯೂ ತಿಳಿಯಬೇಕು. ಇದರಿಂದ ಭಗವಂತನು ಎದುರಿಗೇ ಇದ್ದಾನೆಂತಲೂ ತಾನು ಅವನನ್ನು ನೋಡುತ್ತಾ ಸ್ತೋತ್ರಮಾಡುತ್ತಿರುವೆನೆಂತಲೂ ಭಕ್ತನು ಭಾವಿಸಿದ್ದಾನೆ - ಎಂದು ತಿಳಿಯ ಬರುತ್ತದೆ.
ಪರಿ ತೇ ಧನ್ವನೋ ಹೇತಿರಸ್ಮಾನ್ ವೃಣಕ್ತು ವಿಶ್ವತಃ |
ಅಥೋ ಯ ಇಷುಧಿಸ್ತವಾರೇ ಆಸ್ಮನ್ನಿಧೇಹಿ ತಮ್ ||15||
'(ಎಲೈ ಭಗವಂತನೆ), ನಿನ್ನ ಧನುಸ್ಸಿನ ಸಂಬಂಧವಾದ (ಬಾಣರೂಪವಾದ ಆಯುಧವು ನಮ್ಮನ್ನು (ಎಲ್ಲಾ ತೊಂದರೆಗಳಿಂದಲೂ) ರಕ್ಷಿಸಿ ಕಾಪಾಡಲಿ! ಮತ್ತು ಇನ್ನು ಯಾವ ನಿನ್ನ ಬಾಣದ ಚೀಲವುಂಟೋ ಅದನ್ನು ನಮ್ಮ ಶತ್ರುಗಳಲ್ಲಿ ಇಡುವವನಾಗು.' ಈ ಮಂತ್ರದಲ್ಲಿಯೂ ಆಯುಧಗಳ ಪ್ರಾರ್ಥನೆಯೇ ಇದೆ. 'ನಿನ್ನ ಧನುಸ್ಸಿನಲ್ಲಿ ಏರಿಸಲ್ಪಟ್ಟ ಯಾವ ಬಾಣರೂಪವಾದ ಆಯುಧವುಂಟೋ ಅದು ನಮ್ಮನ್ನು ಪಾಪಗಳಿಂದ ರಕ್ಷಿಸಲಿ!' ಎಂದು ಭಕ್ತನು ಕೇಳಿಕೊಂಡಿದ್ದಾನೆ. ಇಲ್ಲಿ ಪಾಪಗಳಿಂದ ರಕ್ಷಿಸುವದು - ಎಂದರೆ ನಾವು ಪಾಪವನ್ನು ಮಾಡದಂತೆ ಎಚ್ಚರಿಸುವದು. ಆಯುಧಗಳನ್ನು ಕಂಡು ಹೆದರಿದವನು ಪಾಪಮಾಡಲಾರನು ಎಂದರ್ಥ ಅವೇ ಆಯುಧಗಳು ಪಾಪವನ್ನು ಸುಟ್ಟು ನಾಶಮಾಡಿಯೂ ಬಿಡವವು ಏಕೆಂದರೆ ಪಾಪಗಳನ್ನು ಉಳಿಸಿಕೊಂಡಲ್ಲಿ ಅವುಗಳಿಂದ ಎಂದಾದರೂ ತೊಂದರೆಯುಂಟೇ ಉಂಟು ಅದಕ್ಕಾಗಿ ಆಯುಧ ಚೀಲವನ್ನೇ ಪಾಪರಾಶಿಗಳ ಮೇಲೆ ಇಟ್ಟುಬಿಡು ಎಂದು ಕೇಳಲಾಗಿದೆ ಹೀಗೆ ಆಯುಧಗಳ ಸ್ಪರ್ಶ ಮತ್ತು ಸಂಯೋಗಗಳಿಂದ ಪಾಪಗಳೆಲ್ಲವೂ ಹೇಳಹೆಸರಿಲ್ಲವಾಗುವವು ಆದ್ದರಿಂದ ಇಲ್ಲಿ ಪಾಪಗಳನ್ನೇ ಶತ್ರುಗಳೆಂದು ಕರೆದಿದೆಯೆಂದು ತಿಳಿಯಬೇಕು. ಈ ಮಂತ್ರವನ್ನು ಶತ್ರುನಾಶಕ್ಕಾಗಿಯೂ ಉಪಯೋಗಿಸುತ್ತಾರೆಂದು ಮಂತ್ರಶಾಸ್ತ್ರದಲ್ಲಿ ಹೇಳಿರುತ್ತದೆ ಇಲ್ಲಿಗೆ ಒಂದನೆಯ ಅನುವಾಕವು ಮುಗಿಯಿತು.

Comments
Post a Comment