ದಕ್ಷಿಣಾಮೂರ್ತಿಸ್ತೋತ್ರ - 2. ಪರಮಾತ್ಮನ ಜಗತ್ಕಾರಣತ್ವ

ಬೀಜಸ್ಯಾನ್ತರಿವಾಙ್ಕುರೋ ಜಗದಿದಂ ಪ್ರಾಙ್ನ್‌ರ್ವಿಕಲ್ಪಂ ಪುನ-
ರ್ಮಾಯಾಕಲ್ಪಿತದೇಶಕಾಲಕಲನಾವೈಚಿತ್ರ್ಯಚಿತ್ರೀಕೃತಮ್ |
ಮಾಯಾವೀವ ವಿಜೃಮ್ಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||

    ಪರಮಾತ್ಮನು ಯಾವಾಗಲೂ ಅದ್ವಿತೀಯನೂ ಅದ್ವಯನೂ ಆಗಿರುತ್ತಾನೆ. ಅವನಿಗೆ ಎರಡನೆಯದೆನಿಸಿಕೊಳ್ಳುವದಕ್ಕೆ ತಕ್ಕದ್ದು ಯಾವದೊಂದೂ ಇರುವದೇ ಇಲ್ಲ; ಅವನೊಳಗೆ ಗ್ರಾಹ್ಯಗ್ರಾಹಕರೂಪವಾದ ದ್ವಯವೂ ಇರುವದಿಲ್ಲ ಆದರೂ ಅವಿದ್ಯಾಕಲ್ಪಿತವಾದ ಮಾಯೆಯಿಂದ ಅವನು ತನಗೆರಡನೆಯದಾಗಿರುವ ವಿಶ್ವದಿಂದೊಡಗೂಡಿರುವ ಕಾಣುತ್ತಿರುತ್ತಾನೆ. ಅವಿಭಕ್ತನಾದ ತನ್ನಲ್ಲಿ ಗ್ರಾಹ್ಯ ಗ್ರಾಹಕವಿಭಾಗವಿರುವಂತೆಯೂ ತೋರುತ್ತಿರುತ್ತಾನೆ ನಿದ್ರೆಯಿಂದ ಕನಸು ಕಾಣುತ್ತಿರುವವನು ತಾನೊಬ್ಬನೇ ಇರುತ್ತಿದ್ದರೂ ತನಗಿಂತ ಬೇರೆಯಾದ ಪ್ರಪಂಚವನ್ನು ಕಾಣುತ್ತಿರುವಂತೆ ಅದ್ವಿತೀಯಪರಮಾತ್ಮಾಭಿನ್ನನಾದ ಜೀವನು ತನ್ನಲ್ಲಿಯೇ ಬಗೆಬಗೆಯಾಗಿರುವ ಈ ಪ್ರಪಂಚವನ್ನು ಕಾಣುತ್ತಿರುತ್ತಾನೆ ಗುರು ದೇವತಾನುಗ್ರಹದಿಂದ ತತ್ತ್ವಾರ್ಥವನ್ನು ಅರಿತುಕೊಂಡರೆ ಎಚ್ಚತ್ತವನಿಗೆ ಕನಸೂ ಕನಸಿನ ಪ್ರಪಂಚವೂ ಒರಸಿಹೋಗುವಂತೆ ಅದ್ವಯನಾದ ತಾನೋಬ್ಬನೇ ಇರುವೆನೆಂಬ ಅನುಭವುಂಟಾಗುತ್ತದೆ ಎಂದು ಮೊದಲನೆಯ ಶ್ಲೋಕದಲ್ಲಿ ಹೇಳಿದ್ದಾಯಿತು ಇನ್ನು ಈ ಅಭಿಪ್ರಾಯವನ್ನು ಇಲ್ಲಿಂದ ಮೊದಲಾಗಿರುವ ಶ್ಲೋಕಗಳಲ್ಲಿ ಉಪಪತ್ತಿಯಿಂದ ತೋರಿಸಿಕೊಡಲಾಗುತ್ತದೆ.

    "ಈ ಜಗತ್ತು ಮೊದಲು ಬೀಜದಲ್ಲಿ ಅಂಕುರವು ಇರುವಂತೆ ನಿರ್ವಿಕಲ್ಪವಾಗಿದ್ದು ಮತ್ತೆ ಮಾಯೆಯಿಂದ ಕಲ್ಪಿತವಾದ ದೇಶ, ಕಾಲ, ಕಲನಾ - ಇವುಗಳ ವೈಚಿತ್ರ್ಯದಿಂದ ಚಿತ್ರಿಸಲ್ಪಟ್ಟಿರುವುದಾಗಿ ಮಾಯಾವಿಯಂತೆ ಯೋಗಿಯಂತೆ ಯಾವಾತನು ಸ್ವೇಚ್ಛೆಯಿಂದ ಹೊರಹೊಮ್ಮಿಸುತ್ತಾನೋ ಆ ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮೂರ್ತಿಎ ಈ ನಮಸ್ಕಾರ!" ಎಂಬುದು ಶ್ಲೋಕದ ಅಕ್ಷರಾರ್ಥ. ಈಗ ಇಲ್ಲಿರುವ ವಿಶೇಷಣಗಳನ್ನು ಒಂದೊಂದಾಗಿ ಬಿಡಿಸಿ ತಿಳಿಯುವದಕ್ಕೆ ಯತ್ನಿಸೋಣ.

    ಜಗತ್ತು ಪರಮಾತ್ಮನಲ್ಲಿ ಹೇಗಿರುತ್ತದೆ? ಎಂದರೆ ದರ್ಪಣದಲ್ಲಿ ತೋರುವ ನಗರಿಯಂತೆ ಎಂದು ಹಿಂದೆ ಹೇಳಿರುವದು ವ್ಯಾಕೃತಜಗತ್ತಿನ ವಿಷಯ ಆದರೆ ಅದು ನಾಮರೂಪಗಳಿಂದ ವ್ಯಾಕೃತವಾಗುವ ಮುಂಚೆ ಆತ್ಮನಲ್ಲಿ ಹೇಗಿರುತ್ತದೆ? ಎಂಬ ಪ್ರಶ್ನೆಗೆ ಇಲ್ಲಿ 'ಬೀಜದಲ್ಲಿ ಅಂಕುರವಿರುವಂತೆ' ಎಂಬ ದೃಷ್ಟಾಂತವನ್ನು ಕೊಟ್ಟಿರುತ್ತದೆ ಬೀಜದಿಂದ ಮೊಳಕೆ ಮೊಳಕೆಯಿಂದ ಗಿಡ ಅಥವಾ ಮರ, ಕೊಂಬೆ, ಚಿಗುರು, ಎಲೆ, ಹೂ, ಹಣ್ಣು ಮುಂತಾಗಿ ಬಗೆಬಗೆಯಾಗಿ ಕಾರ್ಯವು ಉಂಟಾಗುವಂತೆ ಪರಮಾತ್ಮನಿಂದ ಈ ಜಗತ್ತು ಉಂಟಾಗಿರುತ್ತದೆ ಮರವು ಬೀಜದಲ್ಲಿ ಅವ್ಯಕ್ತವಾಗಿದ್ದದ್ದಲ್ಲವೆ ಮೊಳಕೆಯೇ ಮುಂತಾದ ರೂಪದಿಂದ ತೋರಿಕೊಂಡಿರುವದು? ಹಾಗೆಯೇ ಪರಮಾತ್ಮನಲ್ಲಿ ಯಾವ ವಿಕಲ್ಪವೂ ಇಲ್ಲದೆ ಇಂಥದ್ದು ಅಂಥದ್ದು ಎಂಬ ವಿಂಗಡವಿಲ್ಲದೆ ಇದ್ದದ್ದೇ ಮತ್ತೆ ವಿಕಲ್ಪವಾಗಿ ಸೃಷ್ಟಿ ಕಾಲದಲ್ಲಿ ತೋರಿಕೊಳ್ಳುತ್ತದೆ ಈ ಜಗತ್ತು ಎಂದರೆ ನಮಗೆ ಅನುಭವದಿಂದ ತಿಳಿದುಬರುವ ಆಧ್ಯಾತ್ಮಿಕಾಧಿಭೌತಿಕಾಧಿದೈವಿಕರೂಪದಿಂದ ವಿಂಗಡವಾಗಿ ತೋರುತ್ತಿರುವ ಇದು ಮೊದಲು ದ್ರವ್ಯ, ಗುಣ, ಕ್ರಿಯೆ, ಜಾತಿ, ಸಂಬಂಧ ಮುಂತಾದ ಯಾವ ವಿಕಲ್ಪವೂ ತೋರದಂತೆ ಮರವು ಬೀಜವೇ ಆಗಿದ್ದುಕೊಂಡಿದ್ದಂತೆ ಪರಮಾತ್ಮನೇ ಆಗಿರುತ್ತದೆ ಆಮೇಲೆ ಸೃಷ್ಟಿಯಾಗಲು ದೇಶ, ಕಾಲ, ಕ್ರಿಯೆ ಇವುಗಳಿಂದೊಡಗೂಡಿ ಬಗೆಬಗೆಯಾಗಿ ತೋರಿಕೊಳ್ಳುತ್ತಿರುತ್ತದೆ ಕಾರ್ಯವು ಕಾರಣಕ್ಕಿಂತ ಬೇರೆಯಾಗಿರುವದಿಲ್ಲವೆಂಬುದು ಮಣ್ಣಿನಿಂದಾಗುವ ಮಡಕೆ, ಕುಡಿಕೆ ಮುಂತಾದವುಗಳ ಪರೀಕ್ಷೆಯಿಂದಲೂ ಚಿನ್ನದಿಂದಾಗುವ ಕಡಗ, ಒಂಟಿ, ಅಸಲಿ ಮುಂತಾದ ಒಡವೆಗಳ ಪರೀಕ್ಷೆಯಿಂದಲೂ ಗೊತ್ತಾಗುತ್ತದೆ ಆದ್ದರಿಂದ ಅಡ್ವಯನಾದ ಆತ್ಮನಿಗಿಂತ ಈ ವಿಚಿತ್ರವಾದ ಜಗತ್ತು ಬೇರೆಯಲ್ಲವೆಂದಾಯಿತು.

    ಆದರೆ ಇಲ್ಲಿ ಒಂದು ಶಂಕೆ ಎದ್ದುಕೊಳ್ಳುತ್ತದೆ : ಮಣ್ಣಿನಿಂದಾದ ಮಡಕೆ, ಕುಡಿಕೆ ಮುಂತಾದವುಗಳು ಬರಿಯ ಮಣ್ಣೇ ಆಗಿರುವದಾದರೂ ಬೀಜದಿಂದ ಹುಟ್ಟಿದ ಮರವು ಬರಿಯ ಬೀಜರೂಪದಲ್ಲಿರುವದಿಲ್ಲ; ಇದಲ್ಲದೆ ಮರದ ಮತ್ತು ಮರದಿಂದ ಹುಟ್ಟಿದ ಎಲೆ, ಹೂ, ಹಣ್ಣುಗಳ ರೂಪರಸಗಂಧಾದಿಗಳು ಬೀಜದಲ್ಲಿ ಕಾಣಿಸುವದಿಲ್ಲ ಆದ್ದರಿಂದ ಇವೆಲ್ಲವೂ ಬೀಜದಲ್ಲಿಯೇ ಇದ್ದವೆಂದು ಹೇಳುವದಕ್ಕೆ ಬರುವದಿಲ್ಲ ಬೀಜಕ್ಕೆ ಹಾಕಿದ ಸಹಕಾರಿಗಳಾದ ನೀರು, ಗೊಬ್ಬರ ಮುಂತಾದವು ಗಿಡವು ಬೆಳೆಯುವದಕ್ಕೆ ಬೇಕಾಗಿರುವ ಬಿಸಿಲು ಮುಂತಾದವುಗಳೂ ಅದಕ್ಕೆ ತಮ್ಮ ತಮ್ಮ ಸಹಾಯವನ್ನು ಮಾಡುತ್ತಿರುತ್ತವೆ ಆದರೆ ಅದ್ವಿತೀಯನಾದ ಆತ್ಮನಿಂದಲೇ ಈ ಬಗೆಬಗೆಯಾಗಿ ತೋರುತ್ತಿರುವ ಜಗತ್ತು ಉಂಟಾಯಿತೆಂದು ಹೇಗೆ ನಂಬುವದು? ಪರಮಾತ್ಮನ ಜೊತೆಗೆ ಯಾವದೋ ಒಂದು ಉಪಾದಾನಕಾರಣವೂ ಇದ್ದಲ್ಲದೆ ಇದು ಉಂಟಾಗಲಾರದೆಂದು ಯುಕ್ತಿಗೆ ತೋರುತ್ತದೆ. ಪರಮೇಶ್ವರನಿಗಿಂತ ಬೇರೆಯಾದ ಪ್ರಕೃತಿ ಅಥವಾ ಪ್ರಧಾನವು ಜಗತ್ತಿಗೆ ಉಪಾದಾನವಾಗಿರುವದೆಂದು ಸಾಂಖ್ಯರು ಹೇಳುತ್ತಿರುತ್ತಾರೆ ಪರಮಾಣುಗಳೇ ಜಗತ್ತಿನ ಉಪಾದಾನವೆಂದು ವೈಶೇಷಿಕರು ಅಭಿಪ್ರಾಯಪಟ್ಟಿರುತ್ತಾರೆ ಹೀಗಿರುವಲ್ಲಿ ಜಗತ್ತು ಆತ್ಮನಿಂದಲೇ ಉಂಟಾಯಿತೆನ್ನುವದು ಸರಿಯೆ? ತನ್ನಲ್ಲಿ ಯಾವ ಅವಯವ ವಿಭಾಗವೂ ಇಲ್ಲದ ತನಗೆ ಯಾವ ಸಹಾಯಕಸಾಮಗ್ರಿಯನ್ನೂ ಬಯಸದ ಪರಮಾತ್ಮನು ಜಗತ್ತನ್ನು ಸೃಷ್ಟಿಮಾಡಿದನೆಂದು ಹೇಗೆ ಒಪ್ಪುವದು? ಇದಲ್ಲದೆ ಇಲ್ಲಿ ಜಡಪದಾರ್ಥಗಳೇ ಅಲ್ಲದೆ ಚೇತನರಾದ ಜೀವರೂ ಇರುತ್ತಾರೆ. ನಿತ್ಯಚೈತನ್ಯ ಸ್ವರೂಪನಾದ ಆ ಮಹಾದೇವನು, ತನ್ನನ್ನು ತಾನೇ ಅಚೇತನಪದಾರ್ಥಗಳಾಗಿ ಮಾರ್ಪಡಿಸಿಕೊಂಡನೆಂದೂ ಸರ್ವಜ್ಞನಾದ ಸರ್ವಶಕ್ತನಾದ ಆ ಪರಮೇಶ್ವರನು ದೇಶಕಾಲನಿಮಿತ್ತಗೆಳನ್ನು ಅನುಸರಿಸಿ ಅಲ್ಪಫಲಗಳನು ಕೊಡುವ ಅಲ್ಪಕ್ರಿಯೆಗಳನ್ನು ತನ್ನ ಅಲ್ಪಮತಿಯಿಂದ ಮಾಡಿ ಸುಖದುಃಖಗಳನ್ನನುಭವಿಸುತ್ತಿರುವ ಜೀವರುಗಳಾಗಿ ಮಾರ್ಪಡಿಸಿಕೊಂಡನೆಂದೂ ಹೇಳಬಹುದೆ? ಕನಸಿನಲ್ಲಿ ತಾನೊಬ್ಬನೇ ಇದ್ದರೂ ಬಗೆಬಗೆಯಾಗಿ ಕಾಣುವ ಜಗತ್ತನ್ನು ಕಾಣುವಂತೆಯೂ ಆ ಜಗತ್ತಿನೊಳಗೆ ತಾನು ವ್ಯವಹರಿಸಿರುವಂತೆಯೂ ಕಾಣುವದುಂಟೆಂಬ ದೃಷ್ಟಾಂತ ಬಲದಿಂದ ಸರ್ವಜ್ಞನಾದ ಸರ್ವಶಕ್ತನಾದ ಪರಮೇಶ್ವರನಿಗೆ ಇಂಥ ಅವಿದ್ಯಾನಿದ್ರೆಯು ಬಂದಿದೆಯೆಂದಾಗಲಿ ಆ ನಿದ್ರೆಯೊಳಗೆ ಜಗತ್ತಿನ ಮತ್ತು ತನ್ನ ಸಂಸಾರದ ಕನಸನ್ನು ಕಾಣುವ ಅವಸ್ಥೆಯನ್ನು ಅವನೇ ತಂದುಕೊಂಡಿರುವನೆಂದಾಗಲಿ ಹೇಳುವದು ಸರಿಯಾಗಿ ಕಾಣುವದಿಲ್ಲ ಬಗೆಬಗೆಯ ಕಾರಣಗಳಿಂದ ಅವಿದ್ಯಾಮೋಹವು ಜೀವರುಗಳಿಗೆ ಬಂದು ನಿದ್ರಾವಶದಿಂದ ಕನಸನ್ನು ಕಾಣಬಹುದು ಅವರಿಗೆ 'ನಾನು ಕನಸನ್ನು ಕಾಣುತ್ತಿದೇನೆ' ಎಂದುಕೊಡ ಆಗ್ಗೆ ತಿಳಿದಿರುವದಿಲ್ಲ. ಆ ದೃಷ್ಟಾಂತವನ್ನೆ ಇಟ್ಟುಕೊಂಡರೆ ಸೃಷ್ಟಿಗೆ ಪೂರ್ವದಲ್ಲಿ ಸರ್ವಜ್ಞನಾದ ಪರಮೇಶ್ವರನು ಈಗ್ಗೆ ಇಲ್ಲವೆಂದೇ ಹೇಳಬೇಕಾಗುವದಲ್ಲ! ಏಕೆಂದರೆ ಅವನೇ ಈ ಸಂಸಾರದ ಸುಖದುಃಖಗಳನ್ನು ಅನುಭವಿಸುವ ಜೀವರುಗಳಾಗಿರುತ್ತಾನೆಂದಲ್ಲವೆ, ನೀವು ಹೇಳುತ್ತಿರುವದು?

    ಈ ಶಂಕೆಯು ನೋಡುವದಕ್ಕೆ ಎಷ್ಟೇ ಪ್ರಬಲವಾಗಿ ಕಂಡರೂ ಅನುಭವಾನು ಸಾರಿಯಾದ ಯುಕ್ತಿಯನ್ನನುಸರಿಸಿರುವದಿಲ್ಲ. ಏಕೆಂದರೆ ಬೀಜ ದೃಷ್ಟಾಂತವನ್ನು ನಾವು ಕೊಟ್ಟಿರುವದು ನಿರ್ವಿಕಲ್ಪವಾಗಿದ್ದುಕೊಂಡಿದ್ದ ಕಾರ್ಯವು ಸವಿಕಲ್ಪವಾಗಿ ತೋರಿಕೊಳ್ಳಬಹುದು ಎಂಬಿಷ್ಟನ್ನು ವಿಶದಗೊಳಿಸುವದಕ್ಕೇ ಆಗಿರುತ್ತದೆ. ಆ ಅಂಶದಲ್ಲಿ ದೃಷ್ಟಾಂತವು ಸರಿಯೇ ಆಗಿರುತ್ತದೆ. ಅದ್ವಯನಾದ ಪರಮಾತ್ಮನೇ ಜೀವನ ಪರಮಾರ್ಥವೆಂಬುದಕ್ಕೆ ಸುಷುಪ್ತಿಯ ಅನುಭವದ ಬೆಂಬಲವಿದೆ ಸುಷುಪ್ತಿಯಲ್ಲಿ ನಮ್ಮ ಸ್ವರೂಪವು ಹೇಗೆ ಇರುತ್ತದೆ? ಅದರಲ್ಲಿ ಯಾವ ವಿಕಲ್ಪಗಳಾದರೂ ಇರುತ್ತವೆಯೆ? ಇಲ್ಲ ಆದರೂ ನಾವು ಎಚ್ಚತ್ತ ಕೂಡಲೇ ದೇಶಕಾಲಕಲನಾವೈಚಿತ್ರ್ಯದಿಂದೂಡಗೂಡಿದ ಈ ಜಗತ್ತು ಅದೇ ಆತ್ಮ ಸ್ವರೂಪದಿಂದ ಹುಟ್ಟಿದಂತೆ ಕಾಣುವದಿಲ್ಲವೆ? ಇದರಂತೆ ಪರಮೇಶ್ವರನಲ್ಲಿ ಲಯವಾದ ಈ ಜಗತ್ತು ನಿರ್ವಿಕಲ್ಪವಾಗಿದ್ದುಕೊಂಡಿದ್ದದ್ದು ಸ್ಥಿತಿಕಾಲದಲ್ಲಿ ಬಗೆಬಗೆಯಾಗಿ ತೋರುತ್ತಿರುವದೆಂದು ಶ್ರುತ್ಯನುಸಾರವಾಗಿ ಏತಕ್ಕೆ ನಾವು ನಂಬಬಾರದು? ಕನಸಿನ ದೃಷ್ಟಾಂತವು ಸರಿಯಾಗಲಿಲ್ಲವೆಂಬ ಶಂಕೆಗೆ ಪರಿಹಾರವನ್ನು ಎಂಟನೆಯ ಶ್ಲೋಕದಲ್ಲಿ ತಿಳಿಸಲಾಗುವದಾದ್ದರಿಮದ ಅದನ್ನು ಸದ್ಯಕ್ಕೆ ವಿಚಾರಿಸುವದು ಬೇಡ. ನಮ್ಮ ಆತ್ಮನು ನಿರ್ವಿಕಲ್ಪನಾದರೂ ಸವಿಕಲ್ಪವಾದ ಜಗತ್ತು ಆತನ ರೂಪಾಂತರವಾಗಿ ಮಾಯೆಯಿಂದ ತೋರುತ್ತಿದೆ ಎಂದು ನಾವು ಹೇಳಿದ ಪಕ್ಷಕ್ಕೆ ಈ ಶಂಕೆಯಿಂದ ಯಾವ ಅಡ್ಡಿಯೂ ಬರುವಂತಿಲ್ಲ. ಯಾವ ಉಪಾದಾನಕಾರಣವನ್ನೂ ಬಯಸದೆ ಪರಮಾತ್ಮನು ತಾನೇ ಜಗದ್ರೂಪವಾಗಿ ಆಗಬಹುದು ತಾನು ಮೊದಲು ಇದ್ದಂತಯೇ ಇರಬಹುದು ಎಂಬುದಕ್ಕೆ ಈ ಸುಷುಪ್ತಜಾಗದ್ರದ್ದೃಷ್ಟಾಂತವು ಸಾಕಾಗಿದೆ. 'ಗಾಢನಿದ್ರೆಯಲ್ಲಿ ಒಬ್ಬನು ಮಲಗಿದ್ದಮಾತ್ರದಿಂದ ಜಗತ್ತೇನೂ ಹಾಳಾಗುವದಿಲ್ಲವಷ್ಟೆ? ಆದ್ದರಿಂದ ಸುಷುಪ್ತಾತ್ಮನಿಂದ ಜಗತ್ತು ಉಂಟಾಗುವದೆಂಬುದು ಹಾಸ್ಯಾಸ್ಪದವಾದ ಮಾತಲ್ಲವೆ?' ಎಂಬ ಶಂಕೆಗೆ ಮುಂದೆ ಉತ್ತರವನ್ನು ಹೇಳುವೆವು.

    ಆದರೆ ಸ್ವಪ್ನಸುಷುಪ್ತಿಗಳ ದೃಷ್ಟಾಂತವನ್ನು ಸದ್ಯಕ್ಕೆ ಬದಿಗಿಟ್ಟರೂ ಮತ್ತೊಂದು ದೃಷ್ಟಾಂತವನ್ನು ಇಲ್ಲಿ ಉದಾಹರಿಸಬಹುದಾಗಿದೆ. ಮಾಯಾವಿಯೊಬ್ಬನು ತಾನೊಬ್ಬನೇ ಬಂದು ಯಾವ ಸಾಮಗ್ರಿಯನ್ನೂ ಬಯಸದೆ ತನ್ನನ್ನೇ ಅನೇಕ ಮಾಯಾವಿಗಳಾಗಿ ತೋರ್ಪಡಿಸಕೊಳ್ಳುತ್ತಾನೆ. ಅಲ್ಲಿ ಮಾಯಾಕರ್ತೃವಾದ ಮಾಯಾವಿಯೊಬ್ಬನು ಮಾಯಾಕೃತವಾದ ನೂಲೇಣಿಯನ್ನು ಹತ್ತಿ ಆಕಾಶಕ್ಕೇರುತ್ತಾನೆ. ಅಲ್ಲಿ ಯಾರೊಡನೆಯೋ ಯುದ್ಧಮಾಡಿದವನಂತೆ ಪ್ರೇಕ್ಷಕರಿಗೆ ನಂಬಿಕೆ ಯಾಗುವಂತೆ ಶಸ್ತ್ರಾಸ್ತ್ರಗಳ ಹೋರಾಟದ ಶಬ್ದವನ್ನು ಅವರ ಕಿವಿಗೆ ಬೀಳಿಸುತ್ತಾನೆ. ಬಳಿಕ ತಾನು ಶಸ್ತ್ರಾಸ್ತ್ರಗಳ ಹೋರಾಟದ ಶಬ್ದವನ್ನು ಅವರ ಕಿವಿಗೆ ಬೀಳಿಸುತ್ತಾನೆ. ಬಳಿಕ ತಾನು ಶತ್ರುಗಳ ಶಸ್ತ್ರಗಳಿಂದ ತುಂಡುಮಾಡಿಸಿಕೊಂಡಂತೆ ತೋರಿಸಿ 'ತನ್ನ ಕೈಕಾಲುಗಳನ್ನು ನೆಲದ ಮೇಲೆ ಕೆಡಹುತ್ತಾನೆ. ಆ ಶರೀರದ ಅವಯವಗಳನ್ನೂ ರಕ್ತದ ಕೋಡಿಯನ್ನೂ ಕಂಡ ಪ್ರೇಕ್ಷಕರು ಮಾಯಾವಿಯು ನಿಜವಾಗಿ ಸತ್ತನೆಂದೇ ನಂಬಿದ ಮೇಲೆ ನಿಜವಾಗಿ ನೆಲದ ಮೇಲೆಯೇ ಇದ್ದ ಪರಮಾರ್ಥಮಾಯಾವಿಯು ಅದೃಶ್ಯವನ್ನೆಲ್ಲ ಕಣ್ಣುಮುಂದೆ ತೋರದಂತೆ ಕರಗಿಸಿ ತಾನೊಬ್ಬನೇ ಜನರ ಮುಂದೆ ಬಂದು ನಿಲ್ಲುತ್ತಾನೆ. ಈ ದೃಷ್ಟಾಂತದಲ್ಲಿ ಮಾಯಾವಿಯು ಅನೇಕವಾದದ್ದು ಅವನು ನೂಲೇಣಿಯ ಮೇಲೆ ಏರಿದ್ದು, ಯುದ್ಧಮಾಡಿದ್ದು ಶಸ್ತ್ರಹತನಾಗಿ ತುಂಡುತುಂಡಾಗಿ ಕೆಳಕ್ಕೆ ಬಿದ್ದದ್ದು ಇವೆಲ್ಲವೂ ಅಷ್ಟುಜನ ಪ್ರೇಕ್ಷಕರಿಗೂ ಪ್ರತ್ಯಕ್ಷಗೋಚರವಾದಂತೆ ಆ ಕಾಲಕ್ಕೆ ಕಂಡರೂ ನಿಜವಾಗಿ ಪರಮಾರ್ಥ ಮಾಯಾವಿಯು ತಾನು ಇದ್ದಂತೆಯೇ ಇರುವನಲ್ಲವೆ? ಇದರಂತೆಯೇ 'ಮಾಯಾಂ ತು ಪ್ರಕೃತಿಂ ವಿದ್ಯಾನ್ಮಾಯಿನಂ ತು ಮಹೇಶ್ವರಮ್' (ಶ್ವೇ. 4-10) ಎಂಬ ಶ್ರುತಿಯ ಪ್ರಮಾಣದಿಂದ ವಿಶ್ವಕ್ಕೆ ಉಪಾದಾನಕಾರಣವೆಂದು ನಾವು ಕಲ್ಪಿಸಬಹುದಾದ ನಾಮರೂಪಬೀಜವು ಮಾಯಾಮಾತ್ರವಾಗಿರುತ್ತದೆ; ಅದು ಪರಮೇಶ್ವರನ ವಶದಲ್ಲಿದ್ದುಕೊಂಡೇ ಅವಿದ್ಯಾಬದ್ಧಜ್ಞಾನಚಕ್ಷುಗಳಾದ ಜೀವರುಗಳಿಗೆ ತೋರುತ್ತಿರುವದರಿಂದ ಪರಮೇಶ್ವರನನ್ನು 'ಮಾಯಾವಿ' ಎಂದೂ ಕರೆಯ ಬಹುದು. ಆ ಸರ್ವಸ್ವತಂತ್ರನಾದ ಪರಮೇಶ್ವರನು ತಾನು ಇರುವಂತೆಯೇ ಇದ್ದುಕೊಂಡು ಈ ದೇಶಕಾಲಕಲನಾಯುಕ್ತವಾದ ವಿಚಿತ್ರಪ್ರಪಂಚವನ್ನು ಮಾಯೆಯಿಂದ ನಿರ್ಮಿಸಿರುವನೆಂದೂ ಆ ಮಾಯಾನಿರ್ಮಿತವಾದ ವಿಶ್ವದೊಳಗಿರುವ ಜೀವರುಗಳಿಎ ತಾವು ಪರಮೇಶ್ವರಾಭಿನ್ನರೆಂಬ ಅರಿವು ಇಲ್ಲದ್ದರಿಂದ ಸಂಸಾರದ ಸುಖ ದುಃಖಗಳನ್ನು ಅನುಭವಿಸುತ್ತಿರುವೆವೆಂಬ ಭಾವನೆಯುಂಟಾದಮಾತ್ರದಿಂದ ಈ ಚೇತನಾಚೇತನಾತ್ಮಕವಾದ ಜಗತ್ತಿಗೆಲ್ಲ ಆತ್ಮನಾಗಿರುವ ಈ ಮಹೇಶ್ವರನಿಗೆ ಯಾವ ಕಲಂಕವಾದರೂ ಏತಕ್ಕೆ ಹೇಗೆ ತಟ್ಟೀತು? ಇದನ್ನು ನಾವುಯೋಚಿಸಬೇಕು. ದೃಷ್ಟಾಂತದ ಮಾಯಾವಿಯು ತನಗಿಂತ ಬೇರೆಯಾಗಿ ಪ್ರೇಕ್ಷಕರಿಗೆ ಸಂತೋಷವನ್ನುಂಟುಮಾಡುವದಕ್ಕಾಗಿ ಮಾಯೆಯನ್ನು ಹರಡಿ ತೋರಿಸುತ್ತಾನೆ; ಆದರೆ ಪರಮೇಶ್ವರನು ಅದ್ವಿತೀಯನಾಗಿರುವದರಿಂದ ಯಾರಿಗಾಗಿ ಈ ಮಾಯೆಯನ್ನು ತೋರಿಸುತ್ತಿದಾನೆ? ಎಂಬ ಅಕ್ಷೇಪವು ಸರಿಯಲ್ಲ. ಏಕೆಂದರೆ ಪರಮೇಶ್ವರನೊಬ್ಬನೇ ತನ್ನ ನಿತ್ಯಶುದ್ಧಬುದ್ಧಮುಕ್ತಸ್ವಭಾವದಿಂದ ಇರುತ್ತಾನೆ; ಮಾಯಾವಿಯೊಬ್ಬನಲ್ಲಿಯೇ ಮಾಯೆಯಿಂದ ಬಗೆಬಗೆಯ ದೃಶ್ಯಗಳು ಕಲ್ಪಿತವಾಗಿರುವಂತೆ ಈ ವಿವಿಧದೃಶ್ಯಗಳ ಜಗತ್ತು ಆ ಪರಮಾತ್ಮನಲ್ಲಿ ಅವಿದ್ಯೆಯಿಂದ ಕಲ್ಪಿತವಾಗಿರುತ್ತವೆ ಈ ಅವಿದ್ಯಾಕಲ್ಪಿತವಾಗಿರುವ ದೃಶ್ಯಗಳು ರಜ್ಜುಸರ್ಪಾದಿಗಳು ಹಗ್ಗವೇ ಮುಂತಾದವುಗಳಿಗೆ ತಮ್ಮ ಧರ್ಮವನ್ನು ಸೋಂಕಿಸದೆ ಇರುವಂತೆ ಪರಮಾತ್ಮನಿಗೆ ಯಾವ ಕಲಂಕವನ್ನೂ ತಂದೊಡ್ಡುವದಿಲ್ಲ ಎಂಬುದಿಷ್ಟನ್ನೇ ಈ ದೃಷ್ಟಾಂತದಿಂದ ತಿಳಿಯಬೇಕಾಗುತ್ತದೆ ವಿವಕ್ಷಿತಾಂಶವು ಹೊಂದುವದರಿಂದ ದೃಷ್ಟಾಂತದ ಮೇಲೆ ಹೆಚ್ಚಿನ ಆಕ್ಷೇಪವನ್ನು ಹೇರುವದಕ್ಕೆ ಬರುವದಿಲ್ಲ.

    ಇನ್ನೊಂದು ದೃಷ್ಟಾಂತವನ್ನು ಈ ಶ್ಲೋಕದಲ್ಲಿ ಕೊಟ್ಟಿರುತ್ತದೆ ಕನಸು, ಮನೋರಾಜ್ಯ, ಮಾಯೆ - ಮುಂತಾದ ದೃಷ್ಟಾಂತಗಳಿಂದ ಒಂದೇ ಒಂದಾದ ವಸ್ತುವಿನಲ್ಲಿ ಬಗೆಬಗೆಯ ದೃಶ್ಯಗಳು ಕಲ್ಪತವಾಗಿ ತೋರಬಹುದೆಂಬುದು ಮನದಟ್ಟಾಗುವಂತಿದೆಯಾದರೂ ಸಾಮಾನ್ಯಜನರಿಗೆ ಅಲ್ಲಿ ತೋರುವ ದೃಶ್ಯಗಳ ವೈಚಿತ್ರ್ಯವು ಬಹುಕಾಲದವರೆಗೆ ನಿಲ್ಲದೆ ಇರುವದಿಲ್ಲವಾದ್ದರಿಂದಲೂ ಕೆಲವರಿಗೆ ಮಾತ್ರವೇ ತೋರುತ್ತಿದ್ದು ಮಿಕ್ಕವರಿಗೆ ತೋರದೆ ಇರುವದರಿಂದಲೂ ಅವು ಬರಿಯ ತೋರಿಕೆ ; ಅನೇಕ ಕರ್ತೃಭೋಕ್ತೃಗಳಿಗೆ ಸುಖದುಃಖಗಳನ್ನುಂಟುಮಾಡುತ್ತಿರುವ ಈ ಜಗತ್ತಿನ ದೃಶ್ಯಗಳಿಗೆ ಅವನ್ನು ಹೋಲಿಸುವದಕ್ಕೆ ಬರುವದಿಲ್ಲ - ಎಂದು ಯಾರಾದರೂ ಶಂಕಿಸಬಹುದಾಗಿದೆ. ಆದ್ದರಿಂದ ಯೋಗಿಯ ದೃಷ್ಟಾಂತವನ್ನು ಇಲ್ಲಿ ಉದಾಹರಿಸಿದೆ. ವಿಶ್ವಾಮಿತ್ರ, ಸೌಭರಿ- ಮುಂತಾದವರು ಮನೆ, ಪ್ರಾಣಿಗಳು, ಚಂದ್ರನಕ್ಷತ್ರಾದಿಗಳು, ಇಂದ್ರಾದಿದಿಕ್ಪಾಲಕರು - ಮುಂತಾದ ದೃಶ್ಯಗಳನ್ನು ಇಚ್ಛಾಮಾತ್ರದಿಂದ ಸೃಷ್ಟಿಸಿದ ಕಥೆಗಳು ಪುರಾಣದಲ್ಲಿರುತ್ತವೆ. ಅಲ್ಲಿ ಗೃಹಾದಿಗಳ ನಿರ್ಮಾಣಕ್ಕೆ ಬೇಕಾದ ಮಣ್ಣು ಮುಂತಾದವುಗಳನ್ನಾಗಲಿ ಜೀವರುಗಳ ಉತ್ಪತ್ತಿಗೆ ಬೇಕಾದ ಶುಕ್ಲಶೋಣಿತಾದಿಗಳನ್ನಾಗಲಿ ಬಯಸದೇ ಆ ಯೋಗಿಗಳು ಸಂಕಲ್ಪ ಮಾತ್ರದಿಂದ ಸೃಷ್ಟಿಸಿದರೆಂದು ಹೇಳಲಾಗಿದೆ. ಕುಂಬಾರನು ಮಣ್ಣು, ತಿಗುರಿ, ಕೋಲು, ದೇಶ, ಕಾಲ ಮುಂತಾದ ಸಾಮಗ್ರಿಗಳನ್ನುಪಯೋಗಿಸಿ ಗಡಿಗೆ ಮುಂತಾದವನ್ನು ಮಾಡುವಂತೆ ಅವರು ಬೇರೆಯ ಸಹಾಯಕಸಾಮಾಗ್ರಿಗಳಿಂದೇನೂ ಆ ಸೃಷ್ಟಿಯನ್ನು ಮಾಡಲಿಲ್ಲ. ಹೀಗಿರುವಲ್ಲಿ ಮಹಾಯೋಗೇಶ್ವರನಾದ ಎಲ್ಲಾ ಯೋಗಿಗಳಿಗೂ ಅವರವರ ತಪಃಸಿದ್ಧಿಯನ್ನು ಅನುಗ್ರಹಿಸಬಲ್ಲ ಪರಮೇಶ್ವರನು ಯಾವದೊಂದು ಬಾಹ್ಯಸಾಧನವನ್ನೂ ಬಯಸದೇ ಈ ಜಗದ್ರೂಪನಾಗಿ ತೋರಬಹುದೆಂಬುದಕ್ಕೆ ಅಡ್ಡಿಯೇನಿದೆ?

    ಇನ್ನೊಂದು ಮಾತು : ಯಾವ ಪ್ರಮೇಯವೇ ಆಗಲಿ, ಚೈತನ್ಯಕ್ಕೆ ವಿಷಯವಾಗಿಯೇ ತೋರಿಕೊಳ್ಳಬೇಕು. ಚೈತನ್ಯದ ಆಧಾರವಿಲ್ಲದೆ ಯಾವದೊಮದೂ ಎಂದಿಊ ಕಾಣಿಸಲಾರದು ಎಂಬ ವಿಷಯಕ್ಕೆ ಯಾವ ವಾದಿಗಳಿಗೂ ಭಿನ್ನಾಭಿಪ್ರಾಯವಿರುವದಿಲ್ಲ ಆದ್ದರಿಂದ ಜ್ಞೇಯವಾದದ್ದೆಲ್ಲವೂ ಚೈತನ್ಯದ ಇರುವಿನಿಂದಲೇ ಇದೆ ಎನ್ನಿಸಿಕೊಳ್ಳತ್ತದೆ ಎಂದಾಯಿತು; ಚೈತನ್ಯವನ್ನು ಆಶ್ರಯಿಸಿಕೊಂಡೇ ಅದು ಜೀವಿಸಿಕೊಂಡಿರುತ್ತದೆ. ಪ್ರಕೃತದಲ್ಲಿ ದೇಶ, ಕಾಲ, ಕ್ರಿಯಾಕಾರಕಫಲ ಇವುಗಳ ವೈಚಿತ್ರ್ಯದಿಂದ ದೇಶಕ್ರಮದಿಂದ ದೂರ, ಹತ್ತಿರ, ಅಲ್ಲಿ ಇಲ್ಲಿ ಎಂದೂ ಕಾಲಕ್ರಮದಿಂದ ಈಗ, ಆಗ, ಇನ್ನು ಮುಂದೆ ಎಂದೂ ಈ ಕಾರಕಗಳು ಹೀಗೆಹೀಗೆ ಸೇರಿದರೆ ಇಂಥಿಂಥ ದೇಶದಲ್ಲಿ ಇಂಥಿಂಥ ಫಲವನ್ನು ಕೊಡವವು ಎಂದೂ ತೋರುವ ಜಗತ್ತು ಚೈತನ್ಯವನ್ನು ಆಶ್ರಯಿಸಿಕೊಂಡೇ ತೋರುವದರಿಂದ ಈ ಜಗತ್ತು ಹೇಗೆ ಯಾವಾ ಏತರಿಂದ ಉಂಟಾಯಿತು? ಎಂಬ ಪ್ರಶ್ನೆಯೇ ಏಳುವ ಹಾಗಿಲ್ಲ ಅದು ಬಟ್ಟೆ ಮೇಲೆ ಅಥವಾ ಗೋಡೆಯ ಮೇಲೆ ಬರೆವ ಚಿತ್ರದಂತೆ ಚಿದ್ರೂಪನಾದ ಪರಮಾತ್ಮನನ್ನು ಅವಲಂಬಿಸಿಯೇ ತೋರಿಕೊಳ್ಳುತ್ತಿರುವದು ಅಥವಾ ಪರಮಾತ್ಮನ ಮೇಲೆ ತೋರಿಕೊಳ್ಳುತ್ತಿರುವದೆಂದು ಹೇಳಲೇಕೆ? ಪರಮಾತ್ಮನಿಊ ದೇಶಕಾಲಕಲನಾತ್ಮಕವಾದ ತೋರಿಕೆಗೂ ಮತ್ತೆ ಯಾವ ಬೇರೆಯ ದೇಶಕಾಲಾದ್ಯಾತ್ಮಕಸಂಬಂಧವೂ ಇಲ್ಲದ್ದರಿಂದ ಪರಮಾತ್ಮನೇ ಹಾಗೆ ಅಜ್ಞರಿಗಗೆ ತೋರುತ್ತಿರುವನು; ಯಾರು ಪರಮಾತ್ಮನಲ್ಲಿ ನೆಟ್ಟದೃಷ್ಟಿಯವರಾಗಿರದೆ ಹೊರಕ್ಕೆ ನೋಡವ ಸ್ವಭಾವದ ದೃಷ್ಟಿಯನ್ನವಲಂಬಿಸುವರೋ ಅವರಿಗೆ ಪರಮಾತ್ಮನೇ, ವಿಚಿತ್ರತರವಾದ ಜಗತ್ತಾಗಿ ತೋರುತ್ತಿರುವನು ಎಂಬುದೇ ಯುಕ್ತ. ಚಿತ್ರದಲ್ಲಿ ತಗ್ಗು-ತಿಟ್ಟು, ದೂರ-ಹತ್ತಿರ, ದಪ್ಪ-ತೆಳು, ಮನುಷ್ಯ, ಮೃಗ, ಪಕ್ಷಿ, ಕ್ರಿಮಿ, ಕೀಟ, ಮರ, ಗಿಡ, ಬಳ್ಳಿ, ಗುಡ್ಡ, ಬೆಟ್ಟ, ನದಿ, ಸಮುದ್ರ - ಎಂಬಿವೇ ಮುಂತಾದ ವೈಚಿತ್ರ್ಯವು ತೋರುವಂತೆ ಚಿತ್ರಗಾರನು ಬಣ್ಣದಿಂದಲೂ ಗೆರೆಗಳಿಂದಲೂ ತೋರಿಸಿದ್ದರೂ ಅದಕ್ಕೆ ಆಧಾರವಾಗಿರುವ ಬಟ್ಟೆಯಲ್ಲಿ ಅಥವಾ ಗೋಡೆಯಲ್ಲಿ ಈ ವೈಚಿತ್ರ್ಯವು ಒಂದಿಷ್ಟೂ ಇಲ್ಲದಿರುವಂತೆ ಈ ಜಗತ್ತಿನ ವೈಚಿತ್ರದ ಚಿತ್ರವು ಎಷ್ಟು ನಿಜವಾಗಿ ಸ್ವತಂತ್ರವಾಗಿರುವಂತೆ ಕಾಣಲಿ ಇದೆಲ್ಲ ಮಾಯಾಕಲ್ಪಿತವಾದದ್ದೇ ಹೊರತು ನಿಜವಾಗಿ ಪರಮಾತ್ಮನ ಸ್ವರೂಪಕ್ಕೆ ಸೇರಿರುವದಿಲ್ಲ ಈ ವಿಚಿತ್ರವಾದ ಜಗತ್ತಿಗೂ ನಮಗೂ ಆತ್ಮನಾಗಿರುವ ಪರಮಾತ್ಮನು ಏಕರೂಪನಾಗಿಯೇ ಇರುವನು ಆತನು ಇಷ್ಟೆಲ್ಲ ರೂಪದಿಂದ ತೋರಿಕೊಳ್ಳುವ ಸ್ವಾತಂತ್ರ್ಯವುಳ್ಳವನಾಗಿರುತ್ತಾನೆ ಮಾಯಾವಿಯು ಮಾಯಾದೃಶ್ಯಗಳನ್ನೂ ಯೋಗಿಯು ತನ್ನ ಯೋಗಸಿದ್ಧಿಯಿಂದಾದ ದೃಶ್ಯಗಳನ್ನೂ ಸಂಕಲ್ಪಮಾತ್ರದಿಂದ ಹೊರಹೊಮ್ಮಿಸುವಂತೆ, ಈ ಮಹಾಮಾಯಾವಿಯೂ ಮಹಾ ಯೋಗೀಶ್ವರನೂ ಆದ ಪರಮಾತ್ಮನು ತಾನು ಇದ್ದಂತೆಯೇ ಇದ್ದು ಅಪ್ರತಿಹತವಾದ ತನ್ನ ಇಚ್ಛಾಮಾತ್ರದಿಂದಲೇ ವಿಶ್ವರೂಪನಾಗಿ ತೋರುತ್ತಿರುವನು ಎಂಬುದು ಅನುಭವಸಿದ್ಧವಾಗಿದೆ.

    ಪರಮಾತ್ಮನ ಜ್ಞಾನ, ಇಚ್ಛೆ, ಕ್ರಿಯೆ- ಇವುಗಳ ಸ್ವರೂಪವೇನು? ಎಂಬುದನ್ನು ಇಲ್ಲಿ ವಿಚಾರಮಾಡುವದು ಒಳ್ಳೆಯದು ಏಕೆಂದರೆ ಈ ಜ್ಞಾನಾದಿಗಳು ಪರಮೇಶ್ವರನ ಸ್ವರೂಪಕ್ಕಿಂತ ಭಿನ್ನವೋ, ಅಭಿನ್ನವೋ? ಭಿನ್ನವಾದರೆ ಅವನ ಸ್ವರೂಪದಲ್ಲಿ ಜ್ಞಾನಾದಿಗಳಿಲ್ಲವೆಂದಾಗಗುವದು; ಆಗ ಅವನನ್ನು ಅಚೇತನನೆಂದೇ ಎಣಿಸಬೇಕಾಗುವದು. ಈ ಜ್ಞಾನೇಚ್ಛಾಕ್ರಿಯೆಗಳಿಗೂ ಅವನಿಗೂ ಬೇರೊಂದು ಸಂಬಂಧವನ್ನು ಕಲ್ಪಿಸಬೇಕಾಗುವದು. ಇದು ಯಾವದೂ ಯುಕ್ತವಲ್ಲ ಶಖ್ಯವೂ ಅಲ್ಲ ಏಕೆಂದರೆ ಜೀವರುಗಳಾದರೆ ಅಂತಃಕರಣಾದಿಳ ಸಂಬಂಧವುಳ್ಳವರಾದ್ದರಿಂದ ಅಂತಃಕರಣದಲ್ಲಿ ಜ್ಞಾನಶಬ್ದವಾಚ್ಯವಾದ ವೃತ್ತಿಗಳುಂಟಾಗಲಾಗಿ ಆ ಮೂಲಕವಾಗಿ ಕೆಲಸಮಾಡುವ ಇಂದ್ರಿಯಗಳಿಂದಲೂ ಶರೀರದಿಂದಲೂ ಕ್ರಿಯೆಯನ್ನು ಮಾಡಬಹುದಾಗಿದೆ. ಶರೀರವೂ ಅದರ ಮೂಲಕವಾಗಿ ಬಾಹ್ಯಕಾರಕಗಳನ್ನು ಉಪಯೋಗಿಸಿಕೊಂಡು ಮಾಡುವ ಕ್ರಿಯೆಯೂ ದೇಶಕಾಲಗಳ ಕ್ರಮದಿಂದ ಆಗಿ ಆಯಾ ಕ್ರಿಯೆಗೆ ಅನುಗುಣವಾದ ಫಲವೂ ನಿಯತವಾದ ದೇಶಕಾಲಗಳಲ್ಲಿ ಆಗಬಹುದಾಗಿದೆ. ಆದರೆ ಪರಮಾತ್ಮನು ಅದ್ವಿತೀಯನು, ದೇಶಕಾಲಗಳಿಗೂ ಸಾಕ್ಷಿಯಾಗಿರುವದರಿಂದ ಅವುಗಳ ಕಟ್ಟಿಲ್ಲದವನು; ಅಂತಃಕರಣವಿಲ್ಲದ್ದರಿಮದ ಇಚ್ಛೆಯೂ ಇಲ್ಲದವನು. ಹೀಗಿದ್ದರೂ ಶ್ರುತಿಯಲ್ಲಿ 'ಸೋಕಾಮಯತ | ಬಹು ಸ್ಯಾಂ ಪ್ರಜಾಯೇಯೇತಿ | ಸ ತಪೋತಪ್ಯತ | ಸ ತಪಸ್ತಪ್ತ್ವಾ | ಇದಂ ಸರ್ವಮಸೃಜತ | ಯದಿದಂ ಕಿಞ್ಚ || (ತೈ 2-7) 'ಅವನು ಇಚ್ಛಿಸಿದನು ; ತಪಸ್ಸುಮಾಡಿ ಇದು' ಯವಯಾವದಿದೆಯೋ ಇದನ್ನೆಲ್ಲ ಸೃಷ್ಟಿಸಿದನು ಎಂದು ಹೇಳಿದೆ. ಇಲ್ಲಿ ಭಗವಂತನ ಕಾಮ, ತಪಸ್ಸು, ಸೃಷ್ಟಿಕ್ರಿಯೆ - ಇವೆಲ್ಲದರ ಸ್ವರೂಪವು ಏನೆಂದಾಯಿತು? ದೇಶಕಾಲಾದಿಗಳನ್ನೆಲ್ಲ ಸೃಷ್ಟಿಮಾಡಿರುವ ಅಶರೀರನಾದ, ಅತೀಂದ್ರಿಯನಾದ, ಅಮನಸ್ಕನಾದ, ಆ ಪರಮಾತ್ಮನು ಕಾಮಿಸುವದೆಂದರೇನು, ತಪಸ್ಸುಮಾಡುವದೆಂದರೇನು, ಸೃಷ್ಟಿಸುವದೆಂದರೇನು? ಈ ಕಾಮಾದಿಗಳು ಜೀವರುಗಳ ಕಾಮಾದಿಗಳಂತೆ ಶರೀರಾದಿಗಳಿಂದ ಆಗದೆ ಇರುವದರಿಂದ ಪರಮಾತ್ಮನ ಸ್ವರೂಪವೇ ಆಗಿರುತ್ತವೆ; ಆತನು ಜೀವರುಗಳಂತೆ ಕಾಮಾದಿಗಳಿಗೆ ವಶನಲ್ಲ, ಅವೇ ಅವನ ವಶವಾಗಿರುತ್ತವೆ. ಸೂರ್ಯನ ಬೆಳಕೂ ಬಿಸಿಲೂ ಹೇಗೆ ಸೂರ್ಯನ ಸ್ವರೂಪಕ್ಕಿಂತ ಬೇರೆಯಲ್ಲವೋ, 'ಸೂರ್ಯನು ಭೂಮಿಯನ್ನು ಬೆಳಗುತ್ತಾನೆ, ಮರಗಿಡಗಳನ್ನು ಸುಡುತ್ತಾನೆ' ಎಂದರೆ ಇಚ್ಛಾಪೂರ್ವಕವಾದ ಕಾಲಕ್ರಮಾಪೇಕ್ಷಿಯಾದ ಕ್ರಿಯೆಯನ್ನು ಮಾಡುತ್ತಾನೆಂದು ಹೇಗೆ ಅಭಿಪ್ರಾಯವಿಲ್ಲವೋ ಹಾಗೆಯೇ ಇಲ್ಲಿಯೂ ತಿಳಿಯಬೇಕು. 'ಸ್ವೇಚ್ಛೆಯಿಂದ' ತನ್ನ ಇಚ್ಛೆಯಿಂದ ಎಂಬಲ್ಲಿ ತನಗೂ ಇಚ್ಛೆಗೂ ಸಂಬಂಧವಿರುವದಿಲ್ಲ; 'ಕಲ್ಲಿನ ಗೊಂಬೆಯ ಮೈ' ಎಂಬಂತೆ ಸ್ವರೂಪವನ್ನೇ ಹೀಗೆ ಭೇದಗರ್ಭಿತವಾಗಿ ಗೌಣವೃತ್ತಿಯಿಂದ ತಿಳಿಸಿದೆ ಎಂದು ನಿರ್ಣಯಿಸಬೇಕು. 'ಪರಮಾತ್ಮನು ಜಗತ್ತನ್ನು ಮಾಯಾಕಲ್ಪಿತವಾದ ದೇಶಕಾಲಕಲ್ಪನೆಗಳಿಂದ ವಿಚಿತ್ರವಾಗಿ ಚಿತ್ರಿಸುತ್ತಾನೆ' ಎಂಬುದು ಕಾಲಕ್ರಮವನ್ನು ಅವಲಂಬಿಸಿದ ಕ್ರಿಯೆಯನ್ನು ಹೇಳುವದಿಲ್ಲ; ಜ್ಞಾನಕ್ರಮವನ್ನನುಸರಿಸಿ ಜಿಜ್ಞಾಸುಗಳಿಗೆ ಬೋಧೆಮಾಡುವ ಪ್ರಕಾರವಿದು.

    ಇದನ್ನು ಹಿಂದಿನ ಶ್ಲೋಕದ ವಿವರಣೆಯಲ್ಲಿ ತಿಳಿಸಿರುವಂತೆ ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮೂರ್ತಿಯ ಅನುಗ್ರಹದಿಂದ ಅನುಭವಕ್ಕೆ ತಂದುಕೊಳ್ಳಬೇಕು. ಆಗ ಜಡಜಗತ್ತು, ಮಿಕ್ಕ ಜೀವರುಗಳು, ತಾನು, ಗುರು ಮೂರ್ತಿ, ದಕ್ಷಿಣಾಮೂರ್ತಿ ಎಂಬ ಬೇದಗಳನ್ನೆಲ್ಲ ಚಿನ್ಮಾತ್ರವಾಗಿ ಸಾಕ್ಷಾತ್ಕರಿಸಿ ಕೊಳ್ಳವ ಜಾಣ್ಮೆಯು ಲಭಿಸುವದು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ