ಸ ದೃಷ್ಟೋ ಮೃಡಯಾತಿ ನಃ

    ಈಗ ಏಳನೆಯ ಮಂತ್ರವನ್ನು ವಿಚಾರಮಾಡಬೇಕಾಗಿದೆ. ಈ ಮಂತ್ರದಲ್ಲಿ ಸಕಲಕರ್ಮಸಾಕ್ಷಿಯಾದ ಆದಿತ್ಯಾತ್ಮಕನಾದ ರುದ್ರನನ್ನು ಪ್ರಾರ್ಥಿಸಿದೆ. ಹೇಗೆಂದರೆ :

ಅಸೌ ಯಸ್ತಾಮ್ರೋ ಅರುಣ ಉತ ಬಭ್ರಸ್ಸುಮಂಗಲಃ |
ಯೇ ಚೇಮಾಗ್ಂ ರುದ್ರಾ ಅಭಿತೋ ದಿಕ್ಷು ಶ್ರಿತಾಸ್ಸಹಸ್ರಶೋವೈಷಾಗ್ಂ ಹೇಡ ಈಮಹೇ ||7||

    'ಹಿಂದೆ ಸ್ತುತಿಸಲ್ಪಟ್ಟ ಆ ರುದ್ರನೇ ಈಗ ಎದುರಿಗೆ ಕಂಡುಬರುತ್ತಿರುವ ಕೆಂಪುವರ್ಣದ ನಸುಗೆಂಪಿನ ವರ್ಣದ ಹಾಗೂ ಹಳದಿಯ ಬಣ್ಣದವನಾಗಿ ತೋರುತ್ತಿರುವ ಬಭ್ರವೆಂಬ ಮಂಗಲಕರನಾದ ಆದಿತ್ಯನಾಗಿರುತ್ತಾನೆ. ಈ ಭೂಮಿಯನ್ನು ಎಲ್ಲೆಲ್ಲೂ ಸುತ್ತುವರೆದಿರುವ ಸಹಸ್ರಾರುಸಂಖ್ಯೆಯ ಯಾವ ರುದ್ರರಿರುವರೋ ಅಂಥವರೆಲ್ಲರೂ ಒಂದಾಗಿ ಸೇರಿರುವ ಈ ಆದಿತ್ಯನೆಂಬ ರುದ್ರನನ್ನು ನಾವು ವಿಹಿತಾಕರಣನಿಷಿದ್ಧಸೇವೆಗಳೆಂಬ ಅಪಚಾರಗಳಿಂದ ಉಂಟಾದ ಕೋಪದಿಂದ ಸಮಾಧಾನಗೊಳಿಸಿ ಸ್ತುತಿನಮಸ್ಕಾರಗಳಿಂದ ಭಜಿಸುವೆವು.'

    ಈ ಮಂತ್ರದಲ್ಲಿ ಪರಮೇಶ್ವರನ ಅಷ್ಟಮೂರ್ತಿಗಳಲ್ಲಿ ಪ್ರಸಿದ್ಧವಾದ ಪ್ರತ್ಯಕ್ಷಮೂರ್ತಿಯಾದ ಆದಿತ್ಯನನ್ನು ಸ್ತುತಿಸಲಾಗಿದೆ. ಆದಿತ್ಯನು ತ್ರಿಮೂರ್ತ್ಯಾತ್ಮಕನೆಂದು ಪುರಾಣಗಳಲ್ಲಿ ಹೊಗಳಿದೆ. ಶಿವಪುರಾಣದಲ್ಲಿ ಆದಿತ್ಯನನ್ನು ರುದ್ರನ ಶರೀರವೆಂದೇ ವರ್ಣಿಸಿದೆ. ಅಂತೂ ಆದಿತ್ಯನೆಂಬುವನು ಪ್ರತ್ಯಕ್ಷರುದ್ರನು - ಎಂದಾಯಿತು. ಸೂರ್ಯನು ಉದಯಿಸುವಾಗ ಕೆಂಪಾಗಿರುವನು. ಅನಂತರ ಹೊಂಬಣ್ಣನಾಗಿರುವನು. ಅಸ್ತಮಿಸುವಾಗ ಪಿಂಗಳ (ನಸುಗೆಂಪಿನ) ವರ್ಣನಾಗುವನು. ಬಭ್ರುವೆಂದರೂ ಪಿಂಗಳನೆಂದೇ ಅರ್ಥ. ಈ ಆದಿತ್ಯನು ಸುಮಂಗಳನು ಏಕೆಂದರೆ ಸೂರ್ಯನು ಉದಯಿಸದಿದ್ದರೆ ಪ್ರಪಂಚವೆಲ್ಲ ಕತ್ತಲೆಯಲ್ಲೇ ಮುಳುಗಿ ಅಮಂಗಳವಾಗಿ ಅದೀತು ಆದ್ದರಿಂದ ಸುಮಂಗಳಸ್ವರೂಪನಾದ ಆದಿತ್ಯನು ತನ್ನ ಪ್ರಕಾಶದಿಂದ ಎಲ್ಲವನ್ನೂ ಬೆಳಗುತ್ತಾ ಎಲ್ಲಕ್ಕೂ ಸಾಕ್ಷಿಯಾಗಿರುವನು. ಪ್ರಾಣಿಗಳು ಮಾಡುತ್ತಿರುವ ಎಲ್ಲಾ ಕರ್ಮಗಳನ್ನೂ ನೋಡುತ್ತಿರುವನು. ಯಾರು ಯಾವ ಕರ್ಮವನ್ನೇ ಮಾಡಲಿ ಅದು ಒಳ್ಳೆಯದಾಗಿರಲಿ ಕೆಟ್ಟದಾಗಿರಲಿ ಹಗಲಿನಲ್ಲಿ ಮಾಡಿದಾಗ ಸೂರ್ಯನಿಗೆ ಗೊತ್ತಾಗಿಯೇ ತೀರುವದು ರಾತ್ರೆಯಲ್ಲಿಯೂ ಸೂರ್ಯನು ಮರೆಯಾಗಿದ್ದರೂ ಅವನ ಶಾಖವಿದ್ದೇ ಇರುವದರಿಂದ ಆಗಲೂ ಅವನು ಕರ್ಮಗಳಿಗೆ ಸಾಕ್ಷಿಯಾಗಿಯೇ ಇರುವನು. ಹೀಗೆ ಸರ್ವಕಾಲದಲ್ಲಿಯೂ ಸರ್ವದೇಶದಲ್ಲಿಯೂ ಇದ್ದುಕೊಂಡಿರುವ ಸೂರ್ಯನ ಜೊತೆಗೆ ನಮ್ಮ ಕರ್ಮಗಳನ್ನು ನೋಡಲು ಈ ಭೂಮಿಯಲ್ಲಿ ಅದೃಶ್ಯರಾದ ರುದ್ರರೆಂಬ ದೇವತೆಗಳೂ ಇದ್ದುಕೊಂಡಿರುವರು. ಇವರು ಸಾವಿರಾರು ಸಂಖ್ಯೆಯಲ್ಲಿದ್ದು ಪೂಜ್ಯನಾದ ಆದಿತ್ಯನೊಡನೆಯೇ ಒಂದಾಗಿರುವರು ಹೀಗಿರುವಾಗ ಮಾನವನು ಇವರೆಲ್ಲರಿಗೂ ಕಾಣದಂತೆ ಪಾಪವನ್ನು ಮಾಡಿ ತಪ್ಪಿಸಿಕೊಳ್ಳುವೆನೆಂಬುದು ಅಸಾಧ್ಯವಾದ ಮಾತೇ ಸರಿ ಅಂತೂ ಮನುಷ್ಯನ ಪಾಪಕರ್ಮಗಳಿಂದ ಈ ದೇವತೆಗಳಿಗೆ ಕೋಪವು ಉಂಟಾಗುವದು ಸಹಜವಾಗಿದೆ ಆದ್ದರಿಂದ ಪ್ರತಿದಿನವೂ ನಾವು ಸ್ತೋತ್ರ, ನಮಸ್ಕಾರ, ಪೂಜಾದಿಗಳಿಂದ ಆದಿತ್ಯನೇ ಮುಂತಾದ ಎಲ್ಲಾ ರುದ್ರದೇವತೆಗಳನ್ನೂ ಸಂತೋಷಗೊಳಿಸುತ್ತಿರಬೇಕು ಮತ್ತು ಆಯಾ ದಿನದಂದು ಮಾಡಿದ ಪಾಪಗಳನ್ನು ಪೂಜಾದ್ಯನುಷ್ಠಾನುರೂಪವಾದ ಪುಣ್ಯಕರ್ಮಗಳಿಂದ ಕಳೆದುಕೊಂಡು ರುದ್ರನ ಪ್ರಸಾದಕ್ಕೆ ಪಾತ್ರರಾಗಬೇಕು ಎಂದು ಇಲ್ಲಿ ತಿಳಿಸಿದೆ.

    ಈ ರೀತಿಯಾಗಿ ರುದ್ರನನ್ನು ಸಮಾಧಾನಮಾಡಿದ ಅನಂತರ ಮುಂದಿನ ಮಂತ್ರದಲ್ಲಿ ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥನೆ ಮಾಡೋಣ..........

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ