ಅಹಂ ತೇಭ್ಯೋಕರಂ ನಮಃ - 3

ಅವತತ್ಯ ಧನುಸ್ತ್ವಗ್ಂ ಸಹಸ್ರಾಕ್ಷ ಶತೇಷುಧೇ |
ನಿಶೀರ್ಯ ಶಲ್ಯಾನಾಂ ಮುಖಾ ಶಿವೋ ನಃ ಸುಮನಾ ಭವ ||11||

    'ಎಲೈ ಸಹಸ್ರಾಕ್ಷನೆ, ನೂರಾರು ಬತ್ತಳಿಕೆಗಳುಳ್ಳವನೆ, ನೀನು ಧನುಸ್ಸನ್ನು ಕೆಳಗಿಳಿಸಿ ಬಾಣಗಳ ಮುಖಗಳನ್ನು ಹಿಂತಿರುಗಿಸಿ ಬತ್ತಳಿಕೆಗೆ ಸೇರಿಸುವನಾಗಿ ನಮ್ಮಗಳ ವಿಷಯಕ್ಕೆ ಸಮನಸ್ಕನಾಗು.'


    ಈ ಮಂತ್ರದಲ್ಲಿಯೂ ಬಾಣಗಳನ್ನು ಹಿಂತಿರುಗಿಸಿ ಮುಚ್ಚಿಡಬೇಕೆಂದು ಪ್ರಾರ್ಥಿಸಲಾಗಿದೆ. ಸಹಸ್ರಾಕ್ಷ, ಶತೇಷುಧೇ ಎಂಬ ವಿಶೇಷಣಗಳು ಭಗವಂತನು ಸಾಮಾನ್ಯರಾದ ಧನುರ್ಧಾರಿಗಳಂತೆ ಅಲ್ಲ - ಎಂದು ತಿಳಿಸುತ್ತವೆ. ಹೇಗೆಂದರೆ ಯಾವನಾದರೊಬ್ಬ ಬಿಲ್ಲುಗಾರನು ತನ್ನ ದೃಷ್ಟಿಗೆ ಯಾವ ಬೇಟೆಯೂ ಬೀಳದೆಹೋದಾಗ ಅಥವಾ ತನ್ನ ಬತ್ತಳಿಕೆಯಲ್ಲಿದ್ದ ಬಾಣಗಳು ಮುಗಿದುಹೋದಾಗ ತಾನಾಗಿಯೇ ಹಿಂತಿರುಗುತ್ತಾನೆ. ಆದರೆ ಭಗವಂತನ ವಿಷಯದಲ್ಲಿ ನಾವು ಹಾಗೆ ಭಾವಿಸುವಂತಿಲ್ಲ ಆತನು ಅಕ್ಷಯವಾದ ಬತ್ತಳಿಕೆಗಳುಳ್ಳವನು ಸರ್ವತ್ರ ದೃಷ್ಟಿಯುಳ್ಳವನು ತಾನಾಗಿಯೇ ಎಂದಿಗೂ ಹಿಂತಿರುಗುವ ಸಂಭವವಿಲ್ಲ ಆದ್ದರಿಂದ ಭಕ್ತನು ಬೇಡಿಕೊಂಡಲ್ಲಿ ಮಾತ್ರ ಅತನು ಪ್ರಸನ್ನನಾಗುವನು ಹೀಗೆ ಪ್ರಾರ್ಥನೆಯಿಂದ ಶಾಂತನಾದ ಆ ಮಹಾದೇವನನ್ನು ಮತ್ತೊಮ್ಮೆ ಭಕ್ತ್ಯತಿಶಯದಿಂದ 'ಎಲೈ ಶಿವನೆ, ನಮ್ಮಗಳ ವಿಷಯಕ್ಕೆ ಸಮನಸ್ಕನಾಗು' - ಎಂದು ಬೇಡಿಕೊಳ್ಳಲಾಗಿದೆ ಮತ್ತು ಮೇಲುಮೇಲಕ್ಕೆ ಸೌಮ್ಯಾಕಾರನಾಗಿದ್ದರೂ ಒಳಗೆ ಕುಪಿತನಾಗಿರಬಹುದಾದ್ದರಿಂದ 'ಸುಮನಾ ಭವ' ಎಂದು ಕೇಳಿಕೊಳ್ಳಲಾಗಿದೆ. ಶರಣಾಗತನಾದ ಈ ದೀನನನ್ನು ಅನುಗ್ರಹಿಸು; ದಯಾಪೂರ್ಣವಾದ ಹೃದಯದಿಂದ ನನ್ನನ್ನು ನೋಡು ಎಂದಭಿಪ್ರಾಯ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ